ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.
ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.
ಚಂದ್ರಶೇಖರ ಕಂಬಾರ, ಜಿ.ಎಸ್. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.
ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್ ಪ್ರಕಟವಾಗಲಿದೆ.
22
ಚೆಚೆನ್ಯಾದಲ್ಲಿ ಗುರಿ ಸಾಧಿಸಲು ಸಾಧ್ಯವಾಗದೆ ಹಾಜಿ ಮುರಾದ್ ಟಿಫ್ಲಿಸ್‌ಗೆ ವಾಪಸು ಹೋಗಿ ಪ್ರತಿ ದಿನವೂ ವರಾನ್ತಸೋವ್‌ನ ಭೇಟಿಗೆ ಹೋಗುತ್ತಿದ್ದ. ಅವನೊಡನೆ ಮಾತನಾಡುವ ಅವಕಾಶ ದೊರೆತಾಗಲೆಲ್ಲ ಬೆಟ್ಟಗಾಡಿನ ಬಂದಿಗಳನ್ನು ವಿನಿಮಯವಾಗಿ ಕೊಟ್ಟು ನನ್ನ ಸಂಸಾರವನ್ನು ಬಿಡುಗಡೆ ಮಾಡಿಸಿ ಎಂದು ಕೋರುತ್ತಿದ್ದ. ಅದು ಆಗುವವರೆಗೆ ನಾನು ರಶಿಯನ್ನರಿಗೆ ಸೇವೆ ಸಲ್ಲಿಸಲು ಆಗುವುದಿಲ್ಲ, ಶಮೀಲ್‌ನನ್ನು ನಾಶಮಾಡಲು ಆಗುವುದಿಲ್ಲ ಅನ್ನುತ್ತಿದ್ದ. ವರಾನ್ತಸೋವ್ ಅಸ್ಪಷ್ಟವಾದ ಭರವಸೆ ನೀಡುತ್ತ, ಕೈಲಾದುನನ್ನೆಲ್ಲ ಮಾಡುವೆ ಅನ್ನುತ್ತಿದ್ದರೂ ಜನರಲ್ ಅರ್ಗುಟೆನ್ಸ್‌ಕಿ ಬರಲಿ ಟಿಫ್ಲಿಸ್‌ಗೆ, ಅವನ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇನೆ ಅನ್ನುತ್ತಿದ್ದ.
ಆಮೇಲೆ ಹಾಜಿ ಮುರಾದ್ ವರಾನ್ತಸೋವ್‌ಗೆ ಒಂದು ಬೇಡಿಕೆ ಸಲ್ಲಿಸಿದ. ಟ್ರಾನ್ಸ್ ಕಕೇಶಿಯದ ನುಖಾ ಊರಿನಲ್ಲಿ ಕೆಲವು ಕಾಲ ಇರುತ್ತೇನೆ, ಅವಕಾಶ ಮಾಡಿಕೊಡಿ, ಅಲ್ಲಿದ್ದರೆ ನನ್ನ ಸಂಸಾರದ ವಿಚಾರವಾಗಿ ಶಮೀಲ್‌ನ ಜೊತೆಯಲ್ಲಿ, ಅವನಿಗೆ ಹತ್ತಿರವಾದವರ ಜೊತೆಯಲ್ಲಿ ವ್ಯವಹಾರ ಕುದುರಿಸುವುದಕ್ಕೆ ಅನುಕೂಲವಾಗುತ್ತದೆ, ಅಲ್ಲದೆ ಅಲ್ಲಿ ಮುಸ್ಲಿಮರು ಹೆಚ್ಚಾಗಿರುವುದರಿಂದ ಮಸೀದಿಯೂ ಇದೆ, ನಾನು ನಮ್ಮ ಧರ್ಮದ ಕಟ್ಟಳೆಗೆ ತಕ್ಕ ಹಾಗೆ ದಿನವೂ ಪ್ರಾರ್ಥನೆ ಮಾಡುವುದಕ್ಕೆ ಸಹಾಯವಾಗುತ್ತದೆ ಎಂದ. ವರಾನ್ತಸೋವ್ ಪೀಟರ್ಸ್‍ಬರ್ಗಿಗೆ ಪತ್ರ ಬರೆದು ತಿಳಿಸಿದ, ನುಖಾ ಗೆ ಹೋಗಲು ಹಾಜಿ ಮುರಾದ್‍ಗೆ ಅನುಮತಿ ನೀಡಿದ.
ಈ ಪ್ರಸಂಗವು ಕಕೇಶಿಯನ್ ಯುದ್ಧದಲ್ಲಿ ನಮ್ಮ ಅದೃಷ್ಟವನ್ನು ಬದಲಿಸಿದ ಘಟನೆ ಎಂದೋ ಕುತೂಹಲ ಕೆರಳಿಸುವ ಸಂಗತಿ ಎಂದೋ ವರಾನ್ತಸೋವ್, ಪೀಟರ್ಸ್‍ಬರ್ಗಿನ ಅಧಿಕಾರಿಗಳು, ಮತ್ತಿ ಹಾಜಿ ಮುರಾದ್‍ನ ಚರಿತ್ರೆಯನ್ನು ಬಲ್ಲ ರಶಿಯನ್ನರು ಭಾವಿಸಿದರು. ಹಾಜಿ ಮುರಾದನಿಗಾದರೋ ತಾನು ಬದುಕಿನ ಬಲು ಭೀಕರ ಬಿಕ್ಕಟ್ಟಿಗೆ ಸಿಕ್ಕಿದೆ ಅನ್ನಿಸುತ್ತಿತ್ತು. ಅವನು ಬೆಟ್ಟಗಾಡಿನ ಪ್ರದೇಶವನ್ನು ಬಿಟ್ಟು ಬಂದದ್ದಕ್ಕೆ ಆತ್ಮರಕ್ಷಣೆಯ ಕಾರಣವೂ ಇತ್ತು, ಶಮೀಲ್‌ನ ಮೇಲಿನ ದ್ವೇಷದ ಕಾರಣವೂ ಇತ್ತು. ಪಲಾಯನ ಎಷ್ಟೇ ಕಷ್ಟದ್ದಾಗಿದ್ದರೂ ಗುರಿ ಸಾಧಿಸಿದೆನೆಂದು ಅವನು ಕೆಲವು ಕಾಲ ಸಂತೋಷಪಟ್ಟಿದ್ದ, ಶಮೀಲ್‌ನ ಮೇಲೆ ದಾಳಿ ಮಾಡುವ ಯೋಜನೆಯನ್ನೂ ರೂಪಿಸಿದ್ದ. ತನ್ನ ಕುಟುಂಬದವರನ್ನು ಕಾಪಾಡಿಕೊಳ್ಳುವುದು ಮಾತ್ರ ಅವನು ನಿರೀಕ್ಷಿಸಿದ್ದಕ್ಕಿಂತ ಕಷ್ಟವಾಗಿತ್ತು. ಹಾಜಿ ಮುರಾದ್‍ನ ಮನೆಯವರನ್ನೆಲ್ಲ ಶಮೀಲ್ ಸೆರೆಹಿಡಿದಿದ್ದ. ಮನೆಯ ಹೆಂಗಸರನ್ನು ಒಬ್ಬೊಬ್ಬರನ್ನೇ ಬೇರೆ ಬೇರೆ ಔಲ್‌ಗಳಿಗೆ ಕಳಿಸುತ್ತೇನೆ, ಮಗನ ಕಣ್ಣು ಕೀಳುತ್ತೇನೆ, ಇಲ್ಲವೇ ಕೊಂದೇ ಬಿಡುತ್ತೇನೆ ಎಂದು ಹೆದರಿಸುತ್ತಿದ್ದ. ದಾಗೆಸ್ತಾನ್‌ದಲ್ಲಿರುವ ತನ್ನ ಹಿಂಬಾಲಕರ ನೆರವಿನಿಂದ ಬಲಪ್ರಯೋಗ ಮಾಡಿಯೋ ಕುತಂತ್ರ ಮಾಡಿಯೋ ಮನೆಯವರನ್ನು ಬಿಡಿಸಲು ಸಾಧ್ಯವಾಗುತ್ತದೋ ಎಂದು ಪ್ರಯತ್ನಿಸುವುದಕ್ಕೆ ಹಾಜಿ ಮುರಾದ್ ಈಗ ನುಖಾಗೆ ಬಂದಿದ್ದ. ನುಖಾದಲ್ಲಿ ಕೊನೆಯದಾಗಿ ಸುದ್ದಿ ತಂದಿದ್ದ ಬೇಹುಗಾರನು, ಹಾಜಿ ಮುರಾದ್‍ಗೆ ನಿಷ್ಠೆಯಿಂದಿರುವ ಅವರ್‌ಗಳು ಅವನ ಮನೆಯ ಜನರನ್ನು ಸೆರೆಯಿಂದ ಬಿಡಿಸಿ, ಅವರನ್ನೂ ಕರೆದುಕೊಂಡು ರಶಿಯದವರೊಡನೆ ಸೇರಲು ಸಿದ್ಧರಾಗುತ್ತಿದ್ದಾರೆ; ಆದರೆ ಅಂಥವರ ಸಂಖ್ಯೆ ದೊಡ್ಡದಾಗಿಲ್ಲ; ಹಾಗಾಗಿ ಕುಟುಂಬದವರನ್ನು ಸೆರೆಯಲ್ಲಿರಿಸಿರುವ ವೆದೆನೋದಲ್ಲಿ ಇಂಥ ಕೆಲಸ ಮಾಡುವುದು ಕಷ್ಟ; ಅವರನ್ನು ವೆದೆನೋದಿಂದ ಬೇರೆ ಎಲ್ಲಿಗಾದರೂ ಸಾಗಿಸುವ ವ್ಯವಸ್ಥೆ ಮಾಡಿದರೆ ಅವರು ಹೋಗುವ ದಾರಿಯಲ್ಲಿ ಅವರನ್ನು ಖಂಡಿತ ಬಿಡಿಸಿಕೊಂಡು ಬರುತ್ತೇವೆ ಅನ್ನುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದ್ದ.
ಮನೆಯವರನ್ನು ಬಿಡಿಸುವುದಕ್ಕೆ ಮೂರು ಸಾವಿರ ರೂಬಲ್ ಕೊಡುತ್ತೇನೆ ಎಂದು ಹಾಜಿ ಮುರಾದ್ ಗೆಳೆಯರಿಗೆ ಸುದ್ದಿ ಕಳಿಸಿದ.
ನುಖಾದಲ್ಲಿ ಮಸೀದಿ ಮತ್ತು ಖಾನ್ ಅರಮನೆಗೆ ಸಮೀಪದಲ್ಲಿಯೇ ಐದು ಕೋಣೆಗಳ ಚಿಕ್ಕ ಮನೆಯೊಂದನ್ನು ಹಾಜಿ ಮುರಾದ್‍ಗೆ ಸಜ್ಜು ಮಾಡಲಾಯಿತು. ಅವನ ಹೊಣೆ ಹೊತ್ತಿದ್ದ ಅಧಿಕಾರಿಗಳು, ದುಭಾಷಿ, ಮತ್ತು ಹಾಜಿ ಮುರಾದ್‍ನ ಕಾವಲಿನವರು ಅವನ ಜೊತೆಗೆ ಅದೇ ಮನೆಯಲ್ಲಿ ಉಳಿದರು.
ಬೆಟ್ಟಗಾಡಿನಿಂದ ಬರುವ ಸುದ್ದಿಗಾಗಿ ಕಾಯುವುದರಲ್ಲಿ, ಸುದ್ದಿ ತಂದವರನ್ನು ಮಾತಾಡಿಸುವುದರಲ್ಲಿ, ಆ ಊರಿನ ನೆರೆಹೊರೆಯಲ್ಲಿ ನಡೆಯುತ್ತಿದ್ದ ದಾಳಿಗಳಲ್ಲಿ ಅವನಿಗೂ ಅವಕಾಶ ಸಿಕ್ಕಾಗ ಪಾಲ್ಗೊಳ್ಳುವುದರಲ್ಲಿ ಹಾಜಿ ಮುರಾದ್‍ನ ಬದುಕು ಸವೆಯುತ್ತಿತ್ತು.
ಏಪ್ರಿಲ್ 24ರಂದು, ಇಂಥ ಒಂದು ದಾಳಿಯಿಂದ ವಾಪಸು ಬಂದಾಗ ವರಾನ್ತಸೋವ್ ಕಳಿಸಿದ್ದ ಅಧಿಕಾರಿಯೊಬ್ಬ ಟಿಫ್ಲಿಸ್‌ನಿಂದ ಬಂದಿದ್ದಾನೆನ್ನುವ ಸುದ್ದಿ ಹಾಜಿ ಮುರಾದ್‍ಗೆ ತಿಳಿಯಿತು. ಅವನು ತಂದಿರುವ ಸುದ್ದಿ ತಿಳಿಯಲು ಕಾತರನಾಗಿದ್ದರೂ ಹಾಜಿ ಮುರಾದ್ ಮೊದಲು ತನ್ನ ಮಲಗುವ ಕೋಣೆಗೆ ಹೋಗಿ ಮಧ್ಯಾಹ್ನದ ಪ್ರಾರ್ಥನೆಗೆ ಕುಳಿತ. ಪ್ರಾರ್ಥನೆ ಮುಗಿಸಿ, ಮನೆಯ ದಿವಾನಖಾನೆಯಾಗಿಯೂ ಅತಿಥಿಗಳನ್ನು ಭೇಟಿಮಾಡುವ ಕೋಣೆಯಾಗಿಯೂ ಬಳಕೆಯಾಗುತ್ತಿದ್ದ ಕೋಣೆಗೆ ಬಂದ. ಟಿಫ್ಲಿಸ್‌ನಿಂದ ಬಂದಿದ್ದ ಅಧಿಕಾರಿ, ಕೌನ್ಸಿಲರ್ ಕಿರಿಲೋವ್. ‘ಹಾಜಿ ಮುರಾದನು ಜನರಲ್ ಅರ್ಗುಟೆನ್ಸ್‌ಕಿಯನ್ನು ಭೇಟಿ ಮಾಡಲು 12ನೆಯ ತಾರೀಕು ಟಿಫ್ಲಿಸ್‌ಗೆ ಬರಬೇಕೆಂದು ವರಾನ್ತಸೋವ್ ಹೇಳಿಕಳಿಸಿದ್ದಾನೆ’ ಅನ್ನುವ ಸುದ್ದಿ ತಲುಪಿಸಿದ.
ಹಾಜಿ ಮುರಾದ್ ಸಿಟ್ಟಿನಲ್ಲಿ ‘ಯಕ್ಷ್!’ ಅಂದ. ಕೌನ್ಸಿಲರ್ ಅವನಿಗೆ ಇಷ್ಟವಾಗಿರಲಿಲ್ಲ. ‘ದುಡ್ಡು ತಂದಿದ್ದೀಯಾ?’ ಎಂದು ಕೇಳಿದ..
‘ತಂದಿದ್ದೇನೆ,’ ಅಂದ ಕಿರಿಲೋವ್.
ಹಾಜಿ ಮುರಾದ್ ಎರಡೂ ಕೈಯ ಅಷ್ಟೂ ಬೆರಳನ್ನು ಒಮ್ಮೆ, ಮತ್ತೆ ನಾಲ್ಕು ಬೆರಳು ಇನ್ನೊಮ್ಮೆ ತೋರಿಸಿ, ‘ಎರಡು ವಾರ ಆಯಿತು, ಕೊಡು ಇಲ್ಲಿ,’ ಅಂದ.
‘ಇಗೋ, ಈಗಲೇ ಕೊಟ್ಟೆ!’ ಅನ್ನುತ್ತ ಅಧಿಕಾರಿ ತನ್ನ ಪ್ರವಾಸೀ ಚೀಲದಿಂದ ಪರ್ಸನ್ನು ಹೊರಕ್ಕೆ ತೆಗೆದ. ‘ದುಡ್ಡು ಇಟ್ಟುಕೊಂಡು ಅವನೇನು ಮಾಢುತ್ತಾನೆ?’ ಎಂದು ದುಭಾಷಿಯನ್ನು ಕೇಳಿದ. ಹಾಜಿ ಮುರಾದ್‍ಗೆ ರಶಿಯನ್ ತಿಳಿಯುವುದಿಲ್ಲ ಎಂದು ಭಾವಿಸಿದ್ದ. ಆದರೆ, ಹಾಜಿ ಮುರಾದ್‍ಗೆ ಅದು ಅರ್ಥವಾಯಿತು. ಕಿರಿಲೋವ್‌ನನ್ನು ದುರುಗುಟ್ಟಿ ನೋಡಿದ. ಪ್ರಿನ್ಸ್ ವರಾನ್ತಸೋವ್‌ಗೆ ಏನಾದರೂ ವರದಿ ಒಪ್ಪಿಸಬೇಕೆಂಬ ಕಾರಣಕ್ಕೆ ಕೌನ್ಸಿಲರು ಹಣವನ್ನು ಎಣಿಸುತ್ತಾ ಮಾತಿಗೆ ಶುರುಮಾಡಿದ. ಹಾಜಿ ಮುರಾದ್‍ಗೆ ಇಲ್ಲಿ ಹೇಗನ್ನಿಸುತ್ತದೆ, ಬೇಸರವಾಗುತ್ತದೆಯೇ ಎಂದು ದುಭಾಷಿಯ ಮೂಲಕ ಪ್ರಶ್ನೆ ಕೇಳಿದ. ನಾಗರಿಕ ಉಡುಪು ತೊಟ್ಟ, ಆಯುಧವೇನೂ ಇರದ, ಬಡಕಲು ಮೈಯ ಆಸಾಮಿಯತ್ತ ಹಾಜಿ ಮುರಾದ್ ಕಣ್ಣಂಚಿನಲ್ಲೇ ತಿರಸ್ಕಾರದ ನೋಟ ಬೀರಿ, ಏನೂ ಮಾತಾಡದೆ ಸುಮ್ಮನಿದ್ದ. ದುಭಾಷಿ ಅದೇ ಪ್ರಶ್ನೆಯನ್ನು ಮತ್ತೆ ಕೇಳಿದ.
‘ಅವನ ಜೊತೆ ಮಾತಾಡಲ್ಲ! ದುಡ್ಡು ಕೊಡುವುದಕ್ಕೆ ಹೇಳು,’ ಎಂದು ದುಭಾಷಿಗೆ ತಿಳಿಸಿದ ಹಾಜಿ ಮುರಾದ್ ದುಡ್ಡೆಣಿಸಲು ಮೇಜಿನ ಮುಂದೆ ಕುಳಿತ. ಕಿರಿಲೋವ್ ದುಡ್ಡನ್ನು ತೆಗೆದು ಹತ್ತು ಚಿನ್ನದ ನಾಣ್ಯಗಳನ್ನು ಒಂದರ ಮೇಲೆ ಇನ್ನೊಂದರಂತೆ ಏಳು ಸಾಲುಗಳಲ್ಲಿ ಜೋಡಿಸಿ (ಹಾಜಿ ಮುರಾದ್ ದಿನಕ್ಕೆ ಐದು ಚಿನ್ನದ ನಾಣ್ಯ ಪಡೆಯುತ್ತಿದ್ದ) ಅವನ್ನು ಮುಂದೆ ಸರಿಸಿದಾಗ ಹಾಜಿ ಮುರಾದ್ ಅವನ್ನೆಲ್ಲ ಅವನು ತೊಟ್ಟಿದ್ದ ಸಿರ್ಕಾಸಿಯನ್ ಕೋಟಿನ ತೋಳಿನೊಳಕ್ಕೆ ಸೇರಿಸಿಕೊಂಡ. ತೀರ ಅನಿರೀಕ್ಷಿತವಾಗಿ ಕೌನ್ಸಿಲರ್ ಕಿರಿಲೋವ್‌ನ ತಲೆಯ ಮೇಲೆ ಮೊಟಕಿ ಹೊರಟುಬಿಟ್ಟ. ಕೌನ್ಸಿಲರು ಬೆಚ್ಚಿಬಿದ್ದ. ಹಾಜಿ ಮುರಾದ್ ಹಾಗೆಲ್ಲ ಮಾಡಿದರೆ ಹುಷಾರ್, ಅದೂ ನಾನು ಕರ್ನಲ್ ಪದವಿಗೆ ಸಮಾನವಾದ ಹುದ್ದೆಯಲ್ಲಿರುವವನು ಎಂದು ಅವನಿಗೆ ಹೇಳೆಂದು ದುಭಾಷಿಗೆ ಆಜ್ಷೆ ಮಾಡಿದ. ದುಭಾಷಿ ಆ ಮಾತನ್ನು ಹೇಳಿದಾಗ ಹಾಜಿಮುರಾದ್ ‘ನಾನು ಬಲ್ಲೆ’ ಅನ್ನುವ ಹಾಗೆ ಒಂದಿಷ್ಟೆ ತಲೆದೂಗಿ ಕೋಣೆಯಿಂದಾಚೆಗೆ ಹೋಗಿಬಿಟ್ಟ.
‘ಇವನ ಜೊತೆಯಲ್ಲಿ ಇರುವುದು ಹೇಗೆ?’ ಉಸ್ತುವಾರಿ ಅಧಿಕಾರಿ ಕೇಳಿದ.
‘ನಿನಗೆ ಚೂರಿ ಹಾಕತಾನೆ, ಅಷ್ಟೇ. ಇಂಥ ದೆವ್ವದ ಜೊತೆ ಮಾತಾಡುವುದುಂಟೇ! ಕೋಪದಲ್ಲಿ ಕೊತಕೊತ ಕುದಿಯುತಿದ್ದಾನೆ.’
ಸಂಜೆ ಕತ್ತಲಿಳಿಯುತ್ತಿದ್ದ ಹಾಗೆ ಕಣ್ಣಿನವರೆಗೂ ಮುಖ ಮುಚ್ಚಿಕೊಂಡಿದ್ದ ಇಬ್ಬರು ಗೂಢಚಾರರು ಹಾಜಿ ಮುರಾದ್‌ನನ್ನು ನೋಡಲು ಬೆಟ್ಟದ ಸೀಮೆಯಿಂದ ಬಂದರು. ಉಸ್ತುವಾರಿ ಅಧಿಕಾರಿ ಅವರನ್ನು ಹಾಜಿ ಮುರಾದ್‍ನ ಕೋಣೆಗೆ ಕರೆದುಕೊಂಡು ಹೋದ. ಬಂದವರಲ್ಲಿ ಒಬ್ಬಾತ ಮಾಂಸಲವಾದ ಮೈಯವನು, ಸ್ವಲ್ಪ ಕಪ್ಪಗಿದ್ದ, ತವ್ಲಿನ್ ಬುಡಕಟ್ಟಿನವನು. ಇನ್ನೊಬ್ಬ ತೆಳ್ಳನೆ ಮೈಯ ಮುದುಕ. ಅವರು ತಂದಿದ್ದ ಸುದ್ದಿ ಹಾಜಿ ಮುರಾದ್‍ಗೆ ಖುಷಿ ತರುವಂಥದಾಗಿರಲಿಲ್ಲ. ಅವನ ಕುಟುಂಬದವರನ್ನು ಕಾಪಾಡಿ ಕರಕೊಂಡು ಬರಲು ಒಪ್ಪಿದ್ದ ಗೆಳೆಯರು ಈಗ ಶಮೀಲ್‌ನ ಭಯಕ್ಕೆ ಅಂಜಿ ನಮ್ಮ ಕೈಲಾಗುವುದಿಲ್ಲ ಅಂದಿದ್ದರು. ಹಾಜಿ ಮುರಾದ್‍ಗೆ ಯಾರೇ ಸಹಾಯ ಮಾಡಿದರೂ ಅವರನ್ನು ಭಯಂಕರವಾಗಿ ಹಿಂಸೆ ಕೊಟ್ಟು ಸಾಯಿಸುತ್ತೇನೆಂದು ಶಮೀಲ್ ಹೇಳಿದ್ದ. ಚಕ್ಕಂಬಕ್ಕಲು ಹಾಕಿ ಕೂತಿದ್ದ ಹಾಜಿ ಮುರಾದ್ ಈ ಸುದ್ದಿಯನ್ನು ಕೇಳಿ ಬೆರಳು ಹೆಣೆದುಕೊಂಡು ಪೇಟ ಸುತ್ತಿದ್ದ ತಲೆಯನ್ನು ಹಾಗೇ ಬಗ್ಗಿಸಿಕೊಂಡು ಬಹಳ ಹೊತ್ತು ಸುಮ್ಮನೆ ಕೂತುಬಿಟ್ಟ. ನಿರ್ಣಯ ಮಾಡಲೇಬೇಕೆಂಬ ದೃಢ ನಿಶ್ಚಯದಲ್ಲಿ ಕೂತಿದ್ದ. ಕೊನೆಗೂ ತಲೆ ಎತ್ತಿ ನೋಡಿ, ಸುದ್ದಿ ತಂದಿದ್ದ ಇಬ್ಬರಿಗೂ ಒಂದೊಂದು ಚಿನ್ನದ ನಾಣ್ಯ ಕೊಟ್ಟು, ‘ಹೋಗಿ!’ ಅಂದ.
‘ನಿಮ್ಮ ಸಂದೇಶ ಏನು?’
‘ದೇವರ ಇಚ್ಛೆ ಇದ್ದ ಹಾಗೆ ಆಗತ್ತೆ…ಹೋಗಿ!’
ಸುದ್ದಿ ತಂದಿದ್ದವರು ಎದ್ದು ಹೊರಟು ಹೋದರು. ಹಾಜಿ ಮುರಾದ್ ಇನ್ನೂ ಜಮಖಾನೆಯ ಮೇಲೇ ಕೂತಿದ್ದ. ಮೊಳಕಾಲ ಮೇಲೆ ಮೊಳಕೈ ಇಟ್ಟುಕೊಂಡು ಬಹಳ ಹೊತ್ತು ಯೋಚನೆ ಮಾಡುತ್ತಾ ಇದ್ದು ಬಿಟ್ಟ.
ಏನು ಮಾಡಲಿ? ಶಮೀಲ್‌ನ ಮಾತು ನಂಬಿ ಹಳ್ಳಿಗೆ ಹೊಗಲೇ? ಅವನು ನರಿ, ಖಂಡಿತ ಮೋಸ ಮಾಡತಾನೆ. ನನಗೆ ಮೋಸ ಮಾಡದಿದ್ದರೂ ಸುಳ್ಳುಗಾರನಿಗೆ ಶರಣಾಗುವುದಕ್ಕಾಗಲ್ಲ. ಅಸಾಧ್ಯ…ನಾನು ಈಗ ರಶಿಯನ್ನರ ಜೊತೆ ಇದ್ದು ಬಂದಿರುವುದರಿಂದ ಅವನು ನನ್ನ ನಂಬಲ್ಲ, ಅಂದುಕೊಂಡ ಹಾಜಿ ಮುರಾದ್. ತವ್ಲಿನ್ ಬುಡಕಟ್ಟಿನವರ ಕಥೆಯೊಂದು ಅವನ ಮನಸಿನಲ್ಲಿ ಹಾದು ಹೋಯಿತು. ಒಂದು ಹದ್ದು ಇತ್ತು, ಅದನ್ನು ಮನುಷ್ಯರು ಹಿಡಿದುಕೊಂಡು ಹೋಗಿದ್ದರು, ಕೆಲವು ಕಾಲ ಕಳೆದ ಮೇಲೆ ಅದು ಬೆಟ್ಟಗಳ ನಾಡಿಗೆ, ತನ್ನವರ ಬಳಿಗೆ ವಾಪಸು ಬಂದಿತು. ಅದರ ಕೊರಳಲ್ಲಿ ಚರ್ಮದ ಪಟ್ಟಿ ಇತ್ತು, ಆ ಪಟ್ಟಿಗೆ ಕಿರುಗಂಟೆಗಳಿದ್ದವು. ಮಿಕ್ಕ ಹದ್ದುಗಳು ಈ ಹದ್ದನ್ನು ತಮ್ಮೊಡನೆ ಸೇರಿಸಿಕೊಳ್ಳಲಿಲ್ಲ. ‘ನಿನ್ನ ಕೊರಳಿಗೆ ಬೆಳ್ಳಿಯ ಗಂಟೆ ಕಟ್ಟಿದವರ ಹತ್ತಿರಕ್ಕೇ ಹೋಗು! ನಮ್ಮ ಹತ್ತಿರ ಬೆಳ್ಳಿ ಗಂಟೆಯೂ ಇಲ್ಲ, ಚರ್ಮದ ಪಟ್ಟಿಯೂ ಇಲ್ಲ,’ ಅಂದವು ಅವು. ಹದ್ದಿಗೆ ತನ್ನ ಮನೆಯನ್ನು ಬಿಟ್ಟು ದೂರವಾಗಿರಲು ಇಷ್ಟವಿರಲಿಲ್ಲ. ಮಿಕ್ಕ ಹದ್ದುಗಳು ಅದನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆ ಹದ್ದನ್ನು ಕುಕ್ಕಿ ಕುಕ್ಕಿ ಸಾಯಿಸಿಬಿಟ್ಟವು
ನನ್ನನ್ನೂ ಕುಕ್ಕಿ ಸಾಯಿಸಿಬಿಡುತ್ತಾರೆ. ನಾನು ಇಲ್ಲೇ ಇರಲೇ, ಇದ್ದು ರಶಿಯನ್ ಚಕ್ರವರ್ತಿಗೆ ಕಕೇಶಿಯವನ್ನು ಗೆದ್ದು ಕೊಟ್ಟು ಕೀರ್ತಿ, ಪ್ರತಿಷ್ಠೆ, ಸಂಪತ್ತು ಪಡೆಯಲೇ? ಅನ್ನುವ ಯೋಚನೆ ಹಾಜಿ ಮುರಾದ್‍ಗೆ ಬಂದಿತು. ಹಾಗೇನೋ ಮಾಡಬಹುದು.ಅಂದುಕೊಂಡ. ವರಾನ್ತಸೋವ್ ಜೊತೆಯಲ್ಲಿ ನಡೆದ ಮಾತು, ಪ್ರಿನ್ಸ್ ಅವನನ್ನು ಮೆಚ್ಚಿ ನುಡಿದದ್ದು ಎಲ್ಲ ನೆನಪಿಗೆ ಬಂದವು. ಬೇಗ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ಶಮೀಲ್ ನನ್ನ ಮನೆಯವರನ್ನೆಲ್ಲ ನಾಶಮಾಡುತ್ತಾನೆ…
ಹಾಜಿ ಮುರಾದ್ ಯೋಚನೆ ಮಾಡುತ್ತಾ ಇಡೀ ರಾತ್ರಿ ಎಚ್ಚರವಾಗಿದ್ದ.
| ಮುಂದುವರೆಯುವುದು |
0 ಪ್ರತಿಕ್ರಿಯೆಗಳು