ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮ ಶಿಕ್ಷಿಸಿ ಹೋದವನನ್ನು , ಪದ್ಯವೂ ಶಿಕ್ಷಿಸುವುದೆಂದರೆ…

ಮದ್ದೂರು ಕಾಫಿ ಡೇ ಯಿಂದ ಕಾರ್ ನಲ್ಲಿ ಹೊರಬಿದ್ದ ‘ಮೋನಿಕಾ’ ಳನ್ನು ಅವಳ ಗೆಳತಿ ಕೇಳಿದಳು “ಯಾಕೆ ಮನೋಜ್ ನಿಂದ ದೂರವಾಗಿಬಿಟ್ಟೆ.? ಆತ ತುಂಬಾ ಒಳ್ಳೆಯವನಂತೆಯೇ ಕಾಣಿಸ್ತಿದ್ನಲ್ಲ? ”

ಮೋನಿಕ ಹೇಳಿದಳು : ‘ ಆತ ಪರ್ವತದಷ್ಟು ಪ್ರೀತಿಸುತ್ತಾನೆ ಆದರೆ ಪುಡಿಗಾಸು ಸಂಪಾದಿಸುತ್ತಾನೆ’ ..

ಇತ್ತ ಮಂಡ್ಯದ ಕಡೆ ಹೋಗುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ನಲ್ಲಿ ಕಿಟಕಿಯ ಪಕ್ಕ ಕೂತಿದ್ದ ಮನೋಜ್ ಅದೊಂದು ಪತ್ರ ಮಾತ್ರ ಅವಳಿಗೆ ಹಿಂತಿರುಗಿಸದೆ ತಂದಿದ್ದ.

ಅದರಲ್ಲಿನ ಈ ಎರಡು ಸಾಲುಗಳು ಅವನನ್ನು ಮತ್ತಷ್ಟು ಹಿಂಡಲಾರಂಭಿಸಿದವು : ‘ಪ್ರೀತಿಯಿಂದ ಪ್ರಾಣ ತಿನ್ನುವ ಈಡಿಯಟ್, ನಿನ್ನ ಕಣ್ಣ ಈಜುವ ಮೀನು ನಾನು ‘…

ಇನ್ನು ಈ ಪತ್ರಗಳು ಅವಶ್ಯವಿಲ್ಲ ಎಂದುಕೊಂಡವನೇ ಮೆಲ್ಲಗೆ ಆ ಪ್ರೇಮ ಪತ್ರವನ್ನು ಕಿಟಕಿಯಿಂದ ಹೊರಗೆಸೆದ. ಹಾಗೆಯೇ ತನ್ನ ಮನಸ್ಸಿನಿಂದ ಆ ಮೋನಿಕಾಳನ್ನೂ…?

ಅತ್ತ ಕಾಫಿ ಡೇ ಯಲ್ಲಿ ” A lot can happen over a coffee ” ಎಂಬ ಟ್ಯಾಗ್ ಲೈನ್ ಹೊತ್ತ ಬೋರ್ಡ್ ಕಳಚಿಬಿತ್ತು…!

ಶಿಥಿಲವಾದದ್ದು ಬೋರ್ಡ್ ಆದರೇನು ಬಾಂಡಿಂಗ್ (Bonding) ಆದರೇನು ಕಳಚಿ ಬಿದ್ದೇ ಬೀಳುತ್ತದೆ !

ಹೀಗೆ ಕಳಚಿಬೀಳುವ ಮುನ್ನ ಕಾಫೀ ಡೇಯಲ್ಲಿ ಏನು ನಡೆದಿತ್ತು ಎಂಬುದೂ ನಿಮಗೆ ಗೊತ್ತಿರಲಿ.

** ** ** ** ***

ಈ ಮೊದಲೇ ಇದು ತಮ್ಮಿಬ್ಬರ ಕೊನೆಯ ಭೇಟಿ ಎಂಬುದು ನಿರ್ಧಾರವಾಗಿದ್ದರೂ, ತನ್ನನ್ನು ಇನ್ನಿಲ್ಲದಂತೆ ಪ್ರೀತಿಸಿದ ಮೋನಿಕಾ ತನ್ನೊಂದಿಗೆ ಒಂದಿಷ್ಟಾದರೂ ಸಮಯ ಕಳೆಯದೇ ಹೋಗಲಾರಳು ಎಂಬ ಅಚಲ ನಂಬಿಕೆಯಿಂದಲೇ ಪ್ರತಿ ಬಾರಿಯಂತೆ ಈ ಬಾರಿಯೂ ಅವಳಿಗೆ ಕೊಡಲೆಂದು ಪತ್ರ ತಂದಿದ್ದ ಮನೋಜ್, ವಾಡಿಕೆಯಂತೆ ತಾವು ಯಾವಾಗಲೂ ಕೂರುತ್ತಿದ್ದ ಟೇಬಲ್ ಬಳಿ ಕೂತು ಅವಳಿಗಾಗಿ ಕಾಯುತ್ತಿದ್ದ. ತನ್ನ ಗೆಳತಿಯೊಂದಿಗೆ ಕಾರ್ ನಲ್ಲಿ ಬಂದಿದ್ದ ಮೋನಿಕಾ ಆಕೆಯನ್ನು ಕಾರ್ ನಲ್ಲೇ ಕೂತಿರುವಂತೆ ಸನ್ನೆ ಮಾಡಿ ಬಂದಾಗಲೇ ಇವನಿಗೆ ಅರ್ಥವಾಯಿತು ಅವಳಿಲ್ಲಿ ಕೂತು ಗಂಟೆಗಟ್ಟಲೆ ಹರಠುವುದಿಲ್ಲ ಎಂಬುದು. ಆದರೂ ಅವಳು ಬಂದು ಕೂರುವ ಮುನ್ನವೇ ಒಂದು ಪತ್ರವನ್ನು ಮತ್ತು ಇದುವರೆಗೂ ಆಕೆ ಕೊಟ್ಟಿದ್ದ ಗಿಫ್ಟ್ ಗಳನ್ನೆಲ್ಲ ತುಂಬಿಕೊಂಡು ಬಂದಿದ್ದ ಬ್ಯಾಗ್ ನ್ನೂ ಟೇಬಲ್ ಮೇಲಿಟ್ಟು ಕೂತಿದ್ದ . ಉದ್ದೇಶಪೂರ್ವಕವಾಗಿ ಆ ಪತ್ರ ಅರ್ಧಬಂರ್ಧ ಕಾಣುವಂತೆಯೇ ಇಟ್ಟಿದ್ದ .‌

ಅದರಲ್ಲಿ ಈ ಸಾಲುಗಳು ಮಾತ್ರ ಕಂಡವು ;
* * * * * *

ಮತ್ತೆಂದೂ ‘ಮೋನಿ’ಎಂದು ಕರೆಯಲಾಗದವಳಿಗೆ,

” ನನ್ನ ನಿನ್ನ ಮೊದಲ ಭೇಟಿಯಲ್ಲಿ
‎ ಶಿಶಿರಕ್ಕೆ ಸಿಕ್ಕ ಆ ಮರದ
‎ ರಂಬೆಯ ತುದಿಯಲ್ಲಿ
‎ ತಣ್ಣನೆ ಕಂಪನವೊಂದು ಉಂಟಾಗಿತ್ತಲ್ಲ ,
‎ ನನಗದನ್ನು ವಾಪಸ್ಸು ಕೊಟ್ಟು
ನೀ ಹೋಗುವುದಾದರೆ
ನಿನ್ನೆಲ್ಲ ನೆನಪುಗಳನ್ನು
ತೆಗೆದುಕೊಂಡು ಹೋಗು ”
‎ – ಕವಿ ಗುಲ್ಜಾರ್

ಇಂತಿ,
ಮನೋಜ್ .

* * * * *

“Don’t attack me again with your poetry. Poetry earns a pittance ” ಎಂದು ಅವನ ಮುಖವನ್ನೂ ನೋಡ ಬಯಸದಂತೆ ಮೋನಿಕ ಹೇಳುತ್ತಿದ್ದರೆ, ಅವಳು ತನ್ನ ಪದ್ಯಪ್ರೇಮವನ್ನು ಇಷ್ಟೊಂದು ದ್ವೇಷಿಸುವಂತೆ ಆದದ್ದು ಯಾವಾಗ ಎಂಬುದೇ ಮನೋಜ್ ಗೆ ಅರ್ಥವಾಗಲಿಲ್ಲ. ಹಾಗೆ ನೋಡಿದರೆ ಅವರಿಬ್ಬರೂ ಮೊದಲು ಭೇಟಿಯಾದದ್ದೇ ಕಾವ್ಯದ ಕಾರ್ಯಕ್ರಮವೊಂದರಲ್ಲಿ. ಸ್ವತಃ ಪದ್ಯ ಬರೆಯಲು ಬಾರದ ಮೋನಿಕಾಗೆ ಮನೋಜ್ ನ ಕಾವ್ಯವೆಂದರೆ ಅಚ್ಚುಮೆಚ್ಚು. ಮತ್ತು ಅವರಿಬ್ಬರ ಸ್ನೇಹವದು ಪ್ರೇಮವಾಗಲು ಸಿಂಗಲ್ ಪಾಯಿಂಟ್ ಮೋಟಿವ್ ಕೂಡ ಅದೇ ಆಗಿತ್ತು ‌.

ಬಿಎ ನಲ್ಲಿ ಸಾಹಿತ್ಯ ಓದಿದ ಮೋನಿಕ, ಆ ನಂತರ ಮ್ಯಾನೇಜ್ ಮೆಂಟ್ ನಲ್ಲಿ ಪೋಸ್ಟ್ ಗ್ರಾಜ್ಯುಯೇಟ್ ಆಗಿದ್ದರೂ ಕಾವ್ಯವನ್ನು ಅಷ್ಟಾಗಿ ತಿರಸ್ಕಾರ ಮಾಡಿದಂತೆ ಕಂಡಿರಲಿಲ್ಲ. ಬೆಂಗಳೂರು-ಮೈಸೂರುಗಳ ನಡುವಿನ ಪ್ರೇಮಿಗಳಿಬ್ಬರ rendezvous (ಸಂಗಮಸ್ಥಳ) ನಂತಿರುವ ಮದ್ದೂರು ಕಾಫಿ ಡೇ ನೇ ಅವರ ಖಾಯಂ ಕೂಡುತಾಣವಾಗಿತ್ತು. ಎಮ್ ಎನ್ ಸಿ ಯೊಂದರಲ್ಲಿ ಬ್ಯುಸಿನೆಸ್ ಅನಲಿಸ್ಟ್ ಆಗಿದ್ದ ಮೋನಿಕಾ ಇನ್ನೇನು ಆರಂಕಿಯ ಸಂಬಳ ತಲುಪುವುದರಲ್ಲಿದ್ದರೆ, ಮನೋಜ್ ತನ್ನ ಊರಲ್ಲಿಯೇ ಇದ್ದು ಒಂದೆರೆಡು ಸರ್ಕಾರಿ ಕಾಲೇಜುಗಳಲ್ಲಿ ಪಾರ್ಟ್ ಟೈಮ್ ಫ್ಯಾಕಲ್ಟಿಯಾಗಿ ಕೆಲಸ ಮಾಡುತ್ತಲೇ ಅಪ್ಪನಿಗೆ ವಯಸ್ಸಾದ ಕಾರಣ ಅಲ್ಪ ಪ್ರಮಾಣದಲ್ಲಿದ್ದ ಜಮೀನನ್ನೂ ತಾನೇ ನೋಡಿಕೊಳ್ಳುತ್ತಿದ್ದ. ಇದೇನು ಮೋನಿಕಾಳಿಗೆ ಗೊತ್ತಿಲ್ಲದ ವಿಷಯವಲ್ಲ. ಆದರೆ ಈಗೀಗ ಅವಳು ತುಂಬಾ ಪ್ರಾಕ್ಟಿಕಲ್ ಆಗಿ ಯೋಚಿಸತೊಡಗಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಹಿಂದಿನ ದಿನ ಕಾಲ್ ಮಾಡಿ;

” Manoj , I think we must put an end to this. ಕೇವಲ ಕಾಂಪ್ರಮೈಸ್ ಗಳಲ್ಲೇ ಕೊನೇ ತನ್ಕ ಬದ್ಕೋಕೆ ನನಗೆ ಆಗಲ್ಲ. ಪ್ರೀತಿ ಕೇವಲ ಮನಸ್ಸಲ್ಲೋ, ಕಾವ್ಯದಲ್ಲೋ, ಕಾಗದದಲ್ಲೋ ಇರುತ್ತೆ. ಆದ್ರೆ ಜೀವನ ಇನ್ನೇನನ್ನೋ ಬಯಸುತ್ತೆ. ದುರಾಸೆ ಅಲ್ಲದಿದ್ದರೂ ಲೈಫ್ ಸ್ಟೈಲ್ ಅಂತಾ ಒಂದಿರುತ್ತಲ್ವ. ಅದನ್ನೆಲ್ಲ ಯೋಚನೆ ಮಾಡಿದಾಗ ನಾವಿಬ್ಬರೂ ಬ್ರೇಕ್ ಅಪ್ ಆಗೋದೆ ಓಳ್ಳೇದು ಅನ್ಸುತ್ತೆ. ನಾಳೆ ಕೊನೇ ಬಾರಿ ಭೇಟಿಯಾಗೋಣ . ಅಲ್ಲಿ ಮತ್ತಿನ್ನೇನೋ ಸೀನ್ ಕ್ರಿಯೇಟ್ ಮಾಡ್ಬೇಡ. ನಿನ್ನ ಪತ್ರಗಳು, ಗಿಫ್ಟ್ ಗಳನ್ನ ನನ್ನ ಹತ್ರ ಇಟ್ಟುಕೊಂಡರೆ ಮತ್ತೆ ಅವು ಭಾವನಾತ್ಮಕವಾಗಿ ಹಾಂಟ್ ಮಾಡ್ತವೆ. ಹಾಗಂತ ಅವುಗಳನ್ನೆಲ್ಲ ಬಿಸಾಕೊಷ್ಟು ಕಟುಕಳು ನಾನಲ್ಲ. ನಾಳೆಯ ನಮ್ಮ ಭೇಟಿಯಲ್ಲಿ ಅವೆಲ್ಲ ನಿನಗೆ ವಾಪಾಸ್ ಕೊಡ್ತೇನೆ. ಮಿಸ್ ಮಾಡದೇ ನಾಳೆ‌ ಬಾ”

ಎಂದು ಒಂದೇ ಉಸಿರಿಗೆ ಹೇಳಿ ಉತ್ತರಕ್ಕೂ ಕಾಯದೇ ಕಾಲ್ ಕಟ್ ಮಾಡಿದ್ದಳು ಮೋನಿಕಾ.

ಈಗ, ಇಲ್ಲಿ ಅವಳ ಮುಂದೆ ಗುಲ್ಜಾರ್ ಬರೆದ ಈ ಸಾಲುಗಳ ಪತ್ರವನ್ನಿಟ್ಟು ಕೂತಿದ್ದ ಮನೋಜ್. ಆ ಕಡೆಯಿಂದ ಇವನು ಅದುವರೆಗೂ ಕೊಟ್ಟ ಪತ್ರಗಳು, ಗಿಫ್ಟ್ ಗಳನ್ನು ಒಂದೊಂದಾಗಿ ಇವನ ಕಡೆ ಟೇಬಲ್ ಮೇಲಿಂದಲೇ ತಳ್ಳುತ್ತಿದ್ದ ಮೋನಿಕಾಗೆ ಯಾವುದೋ ಒಂದು ಸಮಸ್ಯೆಯಿಂದ ಆದಷ್ಟು ಬೇಗ ಹೊರಗೆ ಬಂದರೆ ಸಾಕಪ್ಪಾ ಎನ್ನುವಂಥ ಅವಸರ. ಅವನು ಇಟ್ಟಿದ್ದ ಬ್ಯಾಗ್ ತೆಗೆದುಕೊಳ್ಳುವಾಗ ಆ ಪತ್ರವನ್ನೂ ನಿಧಾನಕ್ಕೆ ತೆಗೆದುಕೊಂಡಳಾದರೂ ಅವಳ ನಿರ್ಧಾರದಲ್ಲೇನೂ ಬದಲಾವಣೆ ಇರಲಿಲ್ಲ.

” ನಾನು ನಿನ್ನೆ ಕಾಲ್ ನಲ್ಲೇ ಹೇಳಿದ್ದೀನಿ ಮತ್ತೆ ಮತ್ತೆ ಹೇಳೋದು ಸರಿ ಇರಲ್ಲ. Be practical rather than being too poetical. ನಿನ್ನಷ್ಟು ಪ್ರೀತ್ಸೋಕೆ ಯಾರ್ಗೂ ಬರ್ದೇ ಇರ್ಬೋದು. ಆದರೆ ಮುಂದೊಂದಿನ ಈ ನಿನ್ನ ಪುಡಿಗಾಸು ನಮ್ಮನ್ನ ಬೇರೆ ಮಾಡ್ಬಿಡುತ್ತೆ. ಅದಕ್ಕಿಂತ ಈಗಲೇ ಬೇರೆ ಆಗೋದು ಒಳ್ಳೇದು.”

ಎಂದು ಅಡ್ವೈಸ್ ಮಾಡುತ್ತಿದ್ದ ಮೋನಿಕಾ ವೈಟರ್ ನ ಬಳಿ ಬಿಲ್ ಅಮೌಂಟ್ ಕೊಟ್ಟು ಎದ್ದೇ ಹೋದಳು. ಅದಾದ ಮೇಲೆಯೇ ಈ ಕಾರು ಮತ್ತು ಆ ಬಸ್ಸಿನಲ್ಲಿ ಹೀಗಾಗಿದ್ದು.

* * * * * * *

ಮದ್ದೂರು ಕಾಫಿ ಡೇ ಯಲ್ಲಿ ಒಬ್ಬನೇ ಕೂತಿದ್ದ ಆ ವ್ಯಕ್ತಿ ಯಾವುದೋ ಮರದ ರಂಬೆಗಳನ್ನೇ ಎವೆಯಿಕ್ಕದೆ ನೋಡುತ್ತಾ ಇದ್ದ‌. ಕುತೂಹಲಕ್ಕೆ ಹತ್ತಿರ ಹೋಗಿ ಹೆಸರು ಕೇಳಿದೆ. ಮನೋಜ್ ಎಂದ. ಆ ಮರದಲ್ಲಿ ಅಂಥಾದ್ದೇನಿದೆ ವಿಶೇಷ ಅಂದೆ. ಆಗ ಆತ, ಮರದ ರಂಬೆಗಳಲ್ಲಿ ಮತ್ತೆ ಉಂಟಾಗಬಹುದಾದ ‘ಆ ತಣ್ಣನೆಯ ಕಂಪನ’ ದ ಹುಡುಕಾಟದಲ್ಲಿ ತಾನಲ್ಲಿಗೆ ಮತ್ತೆ ಮತ್ತೆ ಬರುತ್ತೇನೆ ಎಂದು ಹೇಳಿದ.

ಅವನೊಡನೆ ಮಾತಾಡಲು ನನ್ನ ಬಳಿ ಏನೂ ಇರಲಿಲ್ಲ. ಆ ದಿನ ಕಳಚಿ ಬಿದ್ದ ‘A lot can happen over a coffee’ ಎಂಬ ಬೋರ್ಡು ಹೊಸದಾಗಿ ಮತ್ತೆ ತನ್ನ ಜಾಗವನ್ನು ಅಲಂಕರಿಸಿತ್ತು. ಆದರೆ ಮನೋಜ್ ಮಾತ್ರ ಆ ಮರದ ರಂಬೆಗಳಲ್ಲಿ ಉಂಟಾದ ‘ಆ ಕಂಪನ’ಕ್ಕಾಗಿ ಕಾಯುತ್ತಲೇ ಇರುವುದು ಸ್ಪಷ್ಟವಾಯಿತು.

ನನಗೆ ತಕ್ಷಣ ಕವಿ ಗುಲ್ಜಾರ್ ನೆನಪಾದರು. ಅಂಥ ಪದ್ಯ ಬರೆದ ಅವರನ್ನು ಕೋರ್ಟಿಗೆ ಎಳೆಯಬೇಕೆಂದೆನ್ನಿಸಿತು. ಪ್ರೇಮ ಶಿಕ್ಷಿಸಿ ಹೋದವನನ್ನು , ಪದ್ಯವೂ ಶಿಕ್ಷಿಸುವುದು ಅಕ್ಷಮ್ಯವಲ್ಲದೆ ಮತ್ತಿನ್ನೇನು ?

‍ಲೇಖಕರು avadhi

11 September, 2018

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. Sudha Hegde

    ಚಂದ ಇದೆ ಮತ್ತು ತುಂಬ ಸಲ ಹೀಗಾಗತ್ತೆ

  2. Jnaneshwara

    ಉತ್ತಮ ಭಾಷೆ, ಭಾವನೆಗಳು ಸುಲಲಿತವಾಗಿ ನಿಮ್ಮ ಲೇಖನಿಯಿಂದ ಮೂಡಿ ಬಂದಿದೆ, ಶಿವು

  3. Deahadri

    ನನ್ನದೇ ಅನುಭವ..ಓದುತ್ತಾ ಹೋದಂತೆ ನನಗಾಗಿದ್ದು… ಕಾರಣ ಹೇಳದೆ ಹೋದವಳು. ಹೋಗುವಾಗ ನನ್ನ ವರಮಾನ ಕೇಳಿದವಳು….ನಾವು ಕಡೆಯದಾಗಿ ಸಂದಿಸಿದ ಆ ಹೊಟೇಲ್ …ಎಲ್ಲವೂ ನೆನಪು.. ಕೊನೆಯದಾಗಿ ನನವಳಿಗೆ ಹೇಳಿದ್ದು, ಈಗಲೇ ಕಾಡುತ್ತಲೇ ಉಳಿದಿದ್ದು ಗುಲ್ಜಾರ್ ಪದ್ಯಗಳ ಸಾಲುಗಳು….!!??

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading