ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರೇಮದ ಸುಳಿಗಾಳಿಯೊಂದು..

-ಡಾ ವಸಂತಕುಮಾರ್ ಎಸ್ ಕಡ್ಲಿಮಟ್ಟಿ
ಪ್ರೇಮ ಮತ್ತು ನಿಶ್ಯೇಷ ಜಾಡ್ಯಾಪಹ

ಹಲೋ ಮಿಸ್ಟರ್
ಅಲ್ಬರ್ಟ್ ಐನ್’ಸ್ಟೀನ್
ನಿನಗೆ ಗೊತ್ತಿದ್ದದ್ದು ಕೇವಲ
ಆ ನಿನ್ನ E = mc² ಅಷ್ಟೇ.
ಆದರೆ ಈ ಬ್ರಹ್ಮಾಂಡದ
ಎಲ್ಲ ಸೂತ್ರಗಳಿಗಿಂತ ಕಠಿಣ ಶಕ್ತಿಯ ಸಂಚಲನವೊಂದಿದೆ
ಅದುವೇ ಪ್ರೇಮ.

ಅಲ್ಲಿ ಯಾವ
ಗುಣಾಕಾರ ಭಾಗಾಕಾರವೂ
ಯಾವ ವ್ಯವಕಲನ-ಸಂಕಲನಕ್ಕೂ
ಸಿದ್ಧ ಸೂತ್ರವಿಲ್ಲ
ಇಲ್ಲಿ ಪ್ರೇಮಕ್ಕಾಗಿ ಪರಿತಪಿಸುವ
ಪ್ರತೀ ಹೃದಯವೂ
ಒಂದು ಕೇಂದ್ರಬಿಂದು
ಅದಕಂಟಿದ ರಕ್ತನಾಳಗಳ ಗುಂಟ
ಹರಿವ ಆವೇಶದ ವಿರಹವೆಲ್ಲಾ
ಒಂದು ಅದ್ಭುತ ರಸಾಯನ.

ಪ್ರೀತಿ ಎಂದರೆ,
ಎರಡು ಮತ್ತು ಎರಡು ಸೇರಿ
ನಲ್ಕಾಗುವ ಮೊತ್ತವೇನೂ ಅಲ್ಲ,
ಅದು ಭಾವನೆಗಳ ಆನಂದೋನ್ಮಾದ.
ಅಲ್ಲಿ ಎರಡು ಕಣ್ಣುಗಳು ಮತ್ತೆರಡು ಕಣ್ಣುಗಳನ್ನ
ಸಂಧಿಸುವ ಜಾಗವಿದೆಯಲ್ಲ
ಅದು ನಿಶ್ಶಬ್ದದೊಳಗಿನ
ಒಂದು ಭಯಾನಕ ಸ್ಫೋಟದಂತೆ.
ಹೇಳಹೆಸರಿಲ್ಲದೇ ಬೆಳಕು ಚೆಲ್ಲುತ್ತದೆ,
ನಂತರ ಬೂದಿಯಾದರೂ
ಅದರಲ್ಲಿರುವ ಉಷ್ಣ ಮತ್ತು ನಿಷ್ಕರ್ಷ
ಹಾಗೇ ಉಳಿಯುತ್ತದೆ.

ಡೀಯರ್ ಐನ್’ಸ್ಟೀನ್
ನಿನ್ನ ಮಾತು ನಿಜವಿರಬಹುದು
ಪ್ರೇಮದಲ್ಲಿ ಬೀಳುವಾಗ
ಮನುಷ್ಯ ಮೂರ್ಖನಾಗುತ್ತಾನೆ,
ಆದರೆ ನನಗನಿಸುತ್ತಿದೆ
ಆ ಮೂರ್ಖತನವೇ
ಪ್ರಪಂಚದ ಅತ್ಯುತ್ತಮ
ಬುದ್ಧಿವಂತಿಕೆ ಎಂದು.
ಪ್ರೇಮದ ಆ ಕ್ಷಣದಲ್ಲಿ
ಮನುಷ್ಯ ತನ್ನ ತಾರ್ಕಿಕತೆಯ
ಬಂಧನದಿಂದ ಮುಕ್ತನಾಗುತ್ತಾ ಹೋಗುತ್ತಾನೆ.
ನಿಜವಾದ ಅಣುವಿನಷ್ಟೇ ಪರಿಶುದ್ಧನಾಗುತ್ತಾನೆ.
ಈ ಹಾಳಾದ
ಭಗ್ನ ಪ್ರೇಮಿಗಳಿಗೆ
ಪ್ರೀತಿಯೇ ಯಾಕೆ
ಒಂದು “ಚೀಪ್” ವಸ್ತುವಾಗಿದೆ
ಎನ್ನುವುದು ನನಗೆ ಗಣಿತದ ಲೆಕ್ಕದಷ್ಟೇ ದ್ವಂದ್ವ.

ಪ್ರೇಮವೊಂದು
ಅಣುಸ್ಫೋಟದಷ್ಟು ಪ್ರಬಲವಾದ
ಅಂತರಾಳದ ಸಂವೇದನೆ ಅಲ್ಲವೇ..?
ಹೃದಯದ ತಟದಲ್ಲಿ
ಬಿದ್ದ ಕಣಗಳೆಲ್ಲಾ
ಎಷ್ಟು ಚೆಂದ ಉರಿಯುವುದಿಲ್ಲವೇ..?

ನೋಡು,

ಬೆಳಗುತ್ತವೆ…
ಬೂದಿಯಾಗುತ್ತವೆ…
ಆ ಬೂದಿಯೂ ಒಂದು
ಅರ್ಥಪೂರ್ಣ ಶೇಷವಲ್ಲವೇ..?

ನನಗೀಗ ನ್ಯೂಟನ್ ನೆನಪಾಗುತ್ತಾನೆ.
ಅವನು ಹೇಳಿದ
ಪ್ರತೀ ಕ್ರಿಯೆಗೂ ಪ್ರತಿಕ್ರಿಯೆ ಇದೆ.
ಆದರೆ ಪ್ರೇಮದಲ್ಲಿ
ಕ್ರಿಯೆಗೂ ಪ್ರತಿಕ್ರಿಯೆಗೂ
ಒಂದೇ ಉಸಿರು ಬೇಕಾಗುತ್ತದೆ.
ಅಲ್ಲಿ ಪ್ರೇಮದ ಚಲನೆಗೆ
ಕಾರಣವೂ ಇಲ್ಲ,
ನಿಶ್ಚಲತೆಗೆ ಮಿತಿಯೂ ಇಲ್ಲ.

ನಿಶ್ಚಲ ಹೃದಯದ
ಕದ ತಟ್ಟಿದಾಗೊಮ್ಮೆ
ಅದು ಚಲನೆಗೆ ಒಡ್ಡಿಕೊಳ್ಳುತ್ತದೆ..!
ಪ್ರೇಮಕ್ಕೆ ಮನೆ ಬೇಕಂತೇನೂ ಇಲ್ಲ
ಬಾಗಿಲು-ಕಿಟಕಿಗಳ ನೆರಳು ಸಾಕು.
ಪ್ರೇಮದ ಸುಳಿಗಾಳಿಯೊಂದು
ಹಾದುಹೋದ ಸದ್ದು
ನಿಮ್ಮ ಹೃದಯವನ್ನ ಸುಟ್ಟುಬಿಡಬಹುದು.
ಆಂತರ್ಯದಲ್ಲಿ ಸದಾ ಬೀಸುವ
ಆ ಸುಳಿಗಾಳಿ
ಎಷ್ಟೋ ಬಾರಿ
ನಿಮ್ಮ ಅಸ್ತಿತ್ವವನ್ನೇ ಬದಲಾಯಿಸಿಬಿಡುತ್ತದೆ.

ಪ್ರೇಮದಲ್ಲಿ
ಈ ಶೇಷಕ್ಕೆ – ಚಲನೆಗೆ
ಅಷ್ಟು ವಿಶೇಷ ಸ್ಥಾನಮಾನವೇನೂ ಇಲ್ಲ,
ನಿನ್ನ ದೇಹ ಸುಟ್ಟು ಬೂದಿಯಾಗುವ ಮುಂಚೆ
ನಿನ್ನ ಹೃದಯವೆಷ್ಟು ಸುಟ್ಟುಕೊಂಡಿತು
ಎಂಬ ನಿಶ್ಯೇಷವಷ್ಟೇ
ನಿನ್ನ ಅಸ್ತಿತ್ವ,
ಅದೇ ನಿನ್ನ ನಿಜವಾದ ಜೀವವಿಜ್ಞಾನ.
ಬಾಳ ಸಮೀಕರಣದಲ್ಲಿ
ನಿನ್ನ ನಿಶ್ಯೇಷವನ್ನ ಸಾಬೀತುಪಡಿಸುತ್ತಲೇ ಇರಬೇಕು.

‍ಲೇಖಕರು Admin

7 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading