ಸದಾಶಿವ್ ಸೊರಟೂರು
ಪ್ರೀತಿ ಮಲ್ಲಿಗೆ
ಅವತ್ತು ಅವರಿಬ್ಬರೂ ಒಂದು ದೇವಾಲಯಕ್ಕೆ ಹೋದರು. ಜೋಡಿ ಅರ್ಚನೆ. ದೇವರ ಬಳಿ ಇಬ್ಬರ ಮೌನ ಬೇಡಿಕೆಯೂ ಒಂದೆ. ಅವನು ಅವಳ ಹಣೆಗೆ ಕುಂಕುಮ ಇಟ್ಟ. ಗುಡಿಯ ಆಚೆ ಅವಳು ಅವನ ಹೆಗಲ ಮೇಲೆ ತಲೆಯಿಟ್ಟಳು. ಎದ್ದು ಹೋರಟಾಗ ಅವಳು ಮಲ್ಲಿಗೆಗೆ ಹಟ ಹಿಡದಳು. ಅವಳಿಗೆ ಬೇಕು ಅನಿಸಿದರೆ ಮುಗೀತು ಕೊಡಿಸಲೇ ಬೇಕು.
ಅಲೊಬ್ಬಳು ಪೋರಿ ಮಲ್ಲಿಗೆ ಮಾಲೆ ಹಿಡಿದು ನಿಂತಿದ್ದಳು. ಕೆದರಿದ ಕೂದಲಿನ, ಕಣ್ಣ ಹೊಳಪಿನ ಪೋರಿ ಹೂವು ಮಾರುತ್ತಿದ್ದಳು. ಇವನು ಮಲ್ಲಿಗೆ ಮಾರಲು ನಿಂತ ಪೋರಿಯ ಬಳಿ ಹೋಗಿ ಹೂವು ಕೊಂಡ. ಅವಳಿಗೆ ಹಣ ನೀಡಿದ. ಅಲ್ಲಿಯೇ ತನ್ನವಳ ಮುಡಿಗೆ ಹೂವು ಮುಡಿಸಿದ. ಹೂವು ಮಾರುವ ಆ ಪುಟ್ಟ ಪೋರಿ ‘ನಿಮ್ಮ ಪ್ರೀತಿ ಗೆಲ್ಲಲಿ’ ಎಂದಳು. ಇವರಿಬ್ಬರೂ ಅವಳ ಮುಂದೆಲೆ ಸವರಿ ನಕ್ಕರು. ಪೋರಿಯೂ ಮುಗ್ದವಾಗಿ ನಕ್ಕಳು.
ಹತ್ತಾರು ವರ್ಷ ಕಳೆದವು. ಆ ಜೋಡಿ ಮತ್ತು ಈ ಪುಟ್ಟ ಪೋರಿಯ ಮಧ್ಯೆ ಎಷ್ಟೊಂದು ವಸಂತಗಳು ಉರುಳಿ ಹೋದವು. ಈಗ ಮತ್ತದೆ ಸ್ಥಳ, ಅದೇ ಪೋರಿ. ಆದರೆ ಈಗವಳು ಪೋರಿಯಲ್ಲ. ಬೆಳೆದ ಹುಡುಗಿ. ಆದರೆ ಮಲ್ಲಿಗೆ ಮಾರುವ ಕೆಲಸ ಮಾತ್ರ ಅದೇ.
ಅವರು ಬಂದರು ಜೋಡಿ ಅರ್ಚನೆ, ಮತ್ತೆ ಇಬ್ಬರದೂ ಒಂದೇ ಪ್ರಾರ್ಥನೆ. ಹೊರಗೆ ಬಂದರು. ಅದೇ ಹುಡುಗಿ ಅದೇ ಮಲ್ಲಿಗೆ. ಇವಳದು ಮತ್ತೆ ಮಲ್ಲಿಗೆಗೆ ಹಟ. ಅವನು ಕೊಡಿಸಿದನು. ಆ ಹುಡುಗಿ ಮತ್ತೆ ಹೇಳಿದಳು ಈಗ ‘ನಿಮ್ಮ ದಾಂಪತ್ಯ ಗೆಲ್ಲಲ್ಲಿ’
ಇವರಿಗೆ ಯಾಕೊ ಅವಳ ಬಗ್ಗೆ ಕುತೂಹಲ ಮೂಡಿತು. ತಡೆಯಲಾರದೆ ಕೇಳಿದರು. ‘ ಎಲ್ಲರ ಬಂಧವನ್ನು ಗೆಲ್ಲಲಿ ಎಂದು ಆಶಿಸುವ ನಿನ್ನ ಬದುಕು, ನಿನ್ನ ಗಂಡ , ನಿನ್ನ ಪ್ರೀತಿ ಎಲ್ಲಾ ಹೇಗೆ?’ ಅಂತ. ‘ನನ್ನದು ಹೀಗೆ ಮುರಿದು ಹೋಯಿತು ಒಂದ್ಹಿಡಿ ಮಲ್ಲಿಗೆ ಕಾರಣಕ್ಕೆ’ ಎಂದಳು. ಅವಳ ಕಣ್ಣಲ್ಲಿ ಒಂದು ಮುರಿದು ಬಿದ್ದ ಪ್ರೀತಿ ಕಾಣುತ್ತಿತ್ತು.
**
ಪ್ರೀತಿ ಚಿರಾಯು
ರೈಲು ದಡದಡ ಓಡುತ್ತದೆ, ಅದು ಏನನ್ನೊ ಕಳೆದುಕೊಂಡವರಂತೆ ಹಲುಬುತ್ತದಾ, ಪಡೆದುಕೊಂಡವರಂತೆ ಬೀಗುತ್ತದಾ ಆ ತಾತನಿಗೆ ಮಾತ್ರ ಗೊತ್ತಿರುವ ಸತ್ಯ ಎನಿಸುತ್ತದೆ. ತಾತ ಸೋತಿದ್ದಾನೆ. ಕಾಲು ಎಳೆಯುತ್ತಾನೆ. ಆದರೆ ನೀಟಾಗಿ ಶೇವ್ ಮಾಡುತ್ತಾನೆ. ಕಂದು ಬಣ್ಣದ ಗೀರಿನ ಅಂಗಿ ತೊಡುತ್ತಾನೆ. ಯಾವುದು ಹೊಸ ಪುಳಕ ಪಡೆದವನಂತೆ ಗರಿಗರಿಯಾಗುತ್ತಾನೆ. ರೈಲು ಓಡುತ್ತದೆ. ಓಡುವ ರೈಲನ್ನು ಅದರ ಪಾಡಿಗೆ ಅದನ್ನು ಬಿಟ್ಟು ಇವನು ಅಲ್ಲೊಂದು ಬೆಂಚಿನ ಮೇಲೆ ಕೂರುತ್ತಾನೆ. ವಾರಕ್ಕೆ ಎರಡೂ ಬಾರಿ ಬರುವ ಕೊಚ್ಚಿ ಟ್ರೈನನಂತೂ ತಾತ ಮಿಸ್ ಮಾಡುವುದೇ ಇಲ್ಲ.
ಅವನ ಬಳಿ ರೈಲಿನ ಇಲ್ಲ ಆದರೆ ಪ್ಲಾಟ್ ಫಾರಂ ಟಿಕೇಟ್ ಇದೆ. ಅವನು ಯಾರನ್ನೂ ಕಳಿಸಲು ಬರುವುದಿಲ್ಲ. ಯಾರನ್ನೊ ಕಾದು ಕರೆದುಕೊಂಡು ಹೋಗಲು ಬರುವುದಿಲ್ಲ. ಸಮಾಧಾನವಾಗುವವರೆಗೂ ಕೂರುತ್ತಾನೆ. ಎದ್ದು ಹೋಗುತ್ತಾನೆ. ನಾನು ಕಾಲೇಜಿಗೆ ಹೋಗುವಾಗ ಅವರನ್ನು ನೋಡುತ್ತಿದ್ದೆ. ಈಗ ಕೆಲಸಕ್ಕೆ ಹೋಗುತ್ತಿದ್ದೇನೆ. ಈಗಲೂ ನೋಡುತ್ತಿದ್ದೇನೆ. ರೈಲು ಓಡುತ್ತದೆ. ತಾತ ಕೂತೇ ಇರುತ್ತಾರೆ.
ತಾತ ಕುತೂಹಲ ಎನಿಸಿದರು. ಏನನ್ನು ಪಡೆದುಕೊಳ್ಳಲು ಬರುತ್ತಾರೊ, ಕಳೆದುಕೊಳ್ಳಲು ಬರುತ್ತಾರೊ, ಮರೆಯಲು ಬರುತ್ತಾರೊ ಎಂಬುದು ನನಗೆ ತೀರದ ಕುತೂಹಲ. ಅದೊಂದು ಸಂಜೆ ಅವರಿಗಿಂತ ಮೊದಲು ಹೋಗಿ ಅವರು ನಿತ್ಯ ಕೂರುವ ಕಲ್ಲು ಬೆಂಚಿನ ಮೇಲೆ ಕೂತೆ. ಆಗ ತಾನೇ ದಾದರ ಕಡೆ ಹೋಗುವ ಟ್ರೈನ್ ಬೇಸರದಿಂದ ಹೊರಟು ಹೋಗಿತು..
ತಾತ ನಡೆದು ಬಂದರು, ಕಣ್ಣಲ್ಲಿ ಹೊಳಪಿತ್ತು , ಬಂದು ಕೂತರು. ನಾನು ಅವರ ಕಡೆ ನೋಡಿದೆ. ಅವರು ಯಾರ ಕಡೆಯೂ ನೋಡಲಿಲ್ಲ. ಅವರ ಕಣ್ಣಲ್ಲಿ ಹುಡುಕಾಟ ಇರಲಿಲ್ಲ. ಅದು ಶೂನ್ಯ ನೋಟವಲ್ಲ, ತೃಪ್ತಭಾವ. ನಾನು ಮಾತು ಕಳಚಿದೆ. “ತಾತ ಆಕ್ಚುವಲಿ ಅದು..” ಅಂತ ಮಾತು ಆರಂಭಿಸಿದೆ. ತಾತ ನನ್ನ ಕಡೆ ನೋಡಿದರು. ಭಾವ ತುಂಬಿದ ನೋಟ. ನಾನು ಮಾತು ಮುಂದುವರೆಸಿದೆ. “ತಾತ ಯಾಕೆ ಯಾವಾಗ್ಲೂ ಹೀಗೆ ಬಂದು ಕೂರುತ್ತೀರಿ. ಸುಮ್ಮನೆ ಪ್ಲಾಟ್ ಫಾರಂ ಟಿಕೆಟ್ ಕೊಳ್ಳುತ್ತೀರಿ. ಯಾರಿಗೆ ಕಾಯುತ್ತೀರಿ?” ಎಂದೆ. ತಾತ ಗಂಭೀರವಾದರು. ಮೌನವಾದರು. ಎಷ್ಟೊ ಹೊತ್ತಿನ ಬಳಿಕ ಮಾತು ಶುರುವಿಟ್ಟರು. “ನಾನು ನನ್ನ ಹುಡುಗಿಯನ್ನ ಮೊದಲ ಬಾರಿ ಮತ್ತು ಕೊನೆಯ ಬಾರಿ ಮೀಟ್ ಮಾಡಿದ್ದು ಇಲ್ಲಿಯೇ. ಅದರ ಮಧ್ಯೆ ಎಷ್ಟೊಂದು ವರ್ಷಗಳು ಅವಳು ನನ್ನೊಂದಿಗೆ ಇದ್ದಳು, ನಮ್ಮೊಂದಿಗೆ ಪ್ರೀತಿಯೂ ಇತ್ತು. ಅವಳು ಹೋದಳು. ಪ್ರೀತಿ ಹೋಗಲಿಲ್ಲ. ಎಂದಾದರೂ ವಾಪಸ್ ಬರಬಹುದಾ ಗೊತ್ತಿಲ್ಲ. ಅವಳು ಹಾಗೆ ಬಂದಾಗ ತಡಕಾಡಬಾರದು ಅಂತ ಬಂದು ಕೂರುತ್ತೀನಿ. ಅವಳು ಇಲ್ಲ ಅನಿಸಿಲ್ಲ. ಬದುಕಲ್ಲಿ ಒಂಟಿ ಅನಿಸಿದಾಗ ಇಲ್ಲಿ ಬಂದು ಕೂರುತ್ತೀನಿ. ಅವಳು ಇಲ್ಲೇ ಎಲ್ಲೊ ಇದಾಳೆ ಅನಿಸುತ್ತೆ. ಮಾತಾಡಿ ಎದ್ದು ಹೋಗ್ತೀನಿ” ಅಂದರು. ಅವರ ಕಣ್ಣಲ್ಲಿ ನೀರಿತ್ತಾ? ನನಗೆ ಕಾಣಿಸಲಿಲ್ಲ. ನನ್ನ ಕಣ್ಣಲ್ಲಿ ಮಬ್ಬು ಮಬ್ಬು; ಹನಿ ಹನಿ.
0 ಪ್ರತಿಕ್ರಿಯೆಗಳು