
ಜಡಿಯಪ್ಪ ಗೆದ್ಲಗಟ್ಟಿ
ಒಂದಿಡಿ ಉಪ್ಪಿಟ್ಟು ಬೊಗಸೆ ತುಂಬಾ ಪ್ರೀತಿ ಜೊತೆ ಅ ಆ ಇ ಈ
ನಮ್ಮಳ್ಳಿಯಲ್ಲಿ ನಾ ಕಲಿತ ಅಂಗನವಾಡಿಗೆ ಸ್ವಂತ ಕಟ್ಟಡವಿರಲಿಲ್ಲ, ವರ್ಷಕ್ಕೊಂದು ಬಾರಿ ಕೂರಿಸುವ ಪೀರ್ಲು ದೇವರ ಕಟ್ಟಡದಲ್ಲಿ ಅಂಗನವಾಡಿ ಇತ್ತು. ಟೀಚರ್ರು ಮತ್ತು ಆಯಾ ಆಗಿ ಕೆಲಸ ಮಾಡುತ್ತಿದ್ದ ಅಜ್ಜಿಯ ಹೆಸರು ನೆನಪಿಲ್ಲವಾದರು ಅವರ ಪ್ರೀತಿಯ ಘಟನೆಗಳು ಮತ್ತು ಮುಖಗಳು ಮನಸ್ಸಿನಲ್ಲಿ ಅಚ್ಷಳಿಯದಂತೆ ಉಳಿದಿವೆ.
ಅಡುಗೆ ಮಾಡುವಾಗ ತೇಟು ನಮ್ಮವ್ವನ ತರ ಗೊನಗಿಕೊಂಡು ಇದ್ದಿದ್ದರಲ್ಲೆ ಎಲ್ಲವನ್ನು ಮಾಡಿ ಮಕ್ಕಳಿಗೆ ಬಡಿಸಿ ಉಳಿದಿದ್ದನ್ನು ಶಾಲೆಗೆ ಬಾರದ ಮಕ್ಕಳನ್ನು ಬೀದಿಯಲ್ಲಿ ನಿಂತು ಒಂದು ಕೂಗಾಕಿ ಕರೆದು ತಿನ್ರಿ ಅಂತಿದ್ದಾ ಆ ಅಜ್ಜಿ ಕೆಲಸ ಮಾಡುತ್ತಿರಲಿಲ್ಲ ಅಂಗನವಾಡಿ ಅನ್ನೊ ಸಂಸಾರದ ಅವ್ವ ಆಗಿದ್ದಳು.
ಟೀಚರ್ರು ಹೇಳಿ ಕೊಡುತ್ತಿದ್ದ ಅ ಆ ಇ ಈ ನಡುವೆ ಉಪ್ಪಿಟ್ಟಿನ ವಾಸನೆ ಬಂದರೆ ಅಲ್ಲಿಗೆ ಬೋರ್ಗಲ್ಲ ಮೇಲೆ ಮಳೆ ಸುರಿದಂತಾಗುತ್ತಿತ್ತು ಟೀಚರ್ ಪಾಠ. ಅಂಗನವಾಡಿ ಮುಗಿದು ನಾವು ಮುಂದಿನ ಕ್ಲಾಸಿಗಾಗಿ ಸರಕಾರಿ ಶಾಲೆ ಸೇರಿದಾಗ ಸಹ ಆ ಅಜ್ಜಿ ಕರೆದು ಉಪ್ಪಿಟ್ಟು ಮತ್ತು ಕೆಲ ಸಮಯ ಸಿಹಿ ಉಂಡೆ ನೀಡುತ್ತಿದ್ದ ದಿನಗಳು ಇನ್ನೂ ನೆನಪಿದೆ






0 Comments