ಶ್ರೀದೇವಿ ಕೆರೆಮನೆ
ಆವರಿಬ್ಬರೂ ಕಾಲೇಜು ದಿನಗಳಿಂದಲೇ ಪ್ರೀತಿಸುತ್ತಿದ್ದರು. ಆಕೆಗೋ ಬೇಗ ಓದು ಮುಗಿಸಿ ಒಂದು ಕೆಲಸ ಹಿಡಿದು ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎನ್ನುವ ಆಸೆ. ಬರೀ ಪ್ರೀತಿಸಿಕೊಂಡಿದ್ದರೆ ಬದುಕು ಸಾಗದು ಎನ್ನುವ ವಾಸ್ತವದ ಅರಿವು ಆಕೆಗಿದೆ. ಆದರೆ ಆತನಿಗೆ ಆ ಕ್ಷಣಕ್ಕೆ ಪ್ರೀತಿಯೇ ಮುಖ್ಯ. ಆಕೆ ಓದಿನಲ್ಲಿ ತೊಡಗಿಕೊಂಡಷ್ಟೂ ತನ್ನ ಕಡೆಗೆ ಗಮನ ಕಡಿಮೆ ಆಗುತ್ತಿದೆ ಎನ್ನುವ ಆತಂಕ ಆತನದ್ದು. ಆತ ಓದಿನ ಕಡೆ ಗಮನ ಕೊಡದೇ ಇರೋದಕ್ಕೆ ಆಕೆಗೆ ನಿತ್ಯ ಆತಂಕ. ಈಗ ಪ್ರೀತಿ ಪ್ರೇಮ ಎಂದು ಕುಳಿತರೆ ಮುಂದೆ ಅಗಲುವ ಸಂದರ್ಭ ಬರಬಹುದು ಎನ್ನುವುದನ್ನು ಆಕೆ ಸಾವಿರ ಸಲ ಹೇಳಿದ್ದಾಳೆ. ಮುಂದೆ ಹಾಯಾಗಿ ಜೊತೆಗಿರಬೇಕು ಎಂದರೆ ಓದಿ ಕೆಲಸಕ್ಕೆ ಸೇರಬೇಕು ಎನ್ನುವ ಆಕೆಯ ವಾದ ಆತನಿಗೆ ಅರ್ಥಹೀನ. ಪ್ರೀತಿಸುವಾಗ ಜೊತೆಗಿಲ್ಲದೇ ಮುಂದೆ ಜೊತೆಗಿರೋಣ ಎನ್ನೋದರಲ್ಲಿ ಅರ್ಥ ಇಲ್ಲ ಎನ್ನುವ ಆತನ ಮಾತು ಆಕೆಗೆ ಜವಾಬ್ದಾರಿ ರಹಿತ ಮಾತುಗಳಾಗಿ ಕಾಣುತ್ತಿವೆ. ಆಕೆಯ ಜೀವನ ಪ್ರೀತಿ, ಮತ್ತು ಆತನ ಪ್ರೀತಿಯ ಜೀವನದ ನಡುವಿನ ತಿಕ್ಕಾಟದಲ್ಲಿ ನಿಜಕ್ಕೂ ಯೋಚಿಸಬೇಕಾದ ಅಂಶಗಳಿವೆ.
ಅವರಿಬ್ಬರೂ ಸ್ನಾತಕೋತ್ತರ ಪದವೀಧರರು. ಪ್ರೀತಿಸಲು ಪ್ರಾರಂಭಿಸಿ ಹತ್ತು ವರ್ಷ ಆಗಿದೆ. ಹಾಗೆಂದು ಇಬ್ಬರೂ ಓದಿನಲ್ಲಿ ಯಾವತ್ತೂ ಹಿಂದೆ ಬಿದ್ದದ್ದಿಲ್ಲ. ಆತ ಸ್ನಾತಕೋತ್ತರ ಹಂತದಲ್ಲಿ ಚಿನ್ನದ ಪದಕ ಗೆದ್ದವನು. ಆಕೆ ಆತನಿಗಿಂತ ಮೊದಲೇ ಎಂ.ಫಿಲ್ ಮುಗಿಸಿದ್ದಳು. ಈಗ ಇಬ್ಬರೂ ಪಿ.ಎಚ್ಡಿ ಮಾಡುತ್ತಿದ್ದಾರೆ. ತಮ್ಮ ಬದುಕನ್ನು ಒಂದು ನೆಲೆಗಟ್ಟಿಗೆ ತಂದು ನಿಲ್ಲಿಸಿ ಹಿರಿಯರ ಒಪ್ಪಿಗೆ ಪಡೆದಿದ್ದಾರೆ. ಪ್ರೀತಿ ಮತ್ತು ಬದುಕಿನ ವಾಸ್ತವವನ್ನು ಚೆನ್ನಾಗಿ ಅರ್ಥ ಮಾಡಿಕೊಂಡ ಅವರೀಗ ಜೀವನದಲ್ಲಿ ಸಂಭ್ರಮದ ಮುನ್ನುಡಿ ಬರೆಯುವ ಸಿದ್ಧತೆಯಲ್ಲಿದ್ದಾರೆ.
ಕಾಲೇಜು ದಿನಗಳಲ್ಲಿ ಪ್ರೀತಿ ಪ್ರೇಮ ಎಂದರೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದೇ ಪ್ರತಿಪಾದಿಸುತ್ತ ಬಂದಿದ್ದ ಆಕೆ ಕಾಲೇಜು ದಿನಗಳಿಂದಲೇ ಹೋರಾಟವನ್ನು ರೂಢಿಸಿಕೊಂಡವಳು. ಅಪ್ಪ ನೋಡಿದವನನ್ನು ಮದುವೆ ಆಗಿ ಮಕ್ಕಳೊಂದಿಗೆ ಹಾಯಾಗಿದ್ದ ಆಕೆಗೆ ಆತ ಅದು ಯಾವ ಕ್ಷಣದಲ್ಲಿ ಎದುರಾದನೋ ದೇವರೇ ಬಲ್ಲ. ಸ್ವಭಾವತಃ ಸ್ನೇಹಶೀಲೆಯಾದ ಆಕೆ ಸಹಜವಾಗಿ ಸ್ನೇಹಿತಳಾಗಿದ್ದಳು. ಅದು ಯಾವಾಗ ಆ ಸ್ನೇಹ ತನ್ನ ಗಡಿ ದಾಟಿತು ಎಂಬುದು ಆಕೆಗೂ ಅರ್ಥವಾಗಿರಲಿಲ್ಲ. ಮೊದ ಮೊದಲು ಎಲ್ಲವೂ ಮಾಮೂಲಿ ಪ್ರೇಮಿಗಳಂತೆ ಚೆನ್ನಾಗಿಯೇ ಇತ್ತು. ಆಕೆಯ ಪ್ರತಿ ನಡೆ ನುಡಿಯೂ ಆತನನ್ನು ಸೆಳೆಯುತ್ತಿತ್ತು. ಆಕೆಯ ‘ಕೇರ್’ ಇಷ್ಟವಾಗುತ್ತಿತ್ತು. ದಿನಗಳೆದಂತೆ ಆತ ಭವಿಷ್ಯದ ಕುರಿತು ಯೋಚಿಸತೊಡಗಿದ. ಇತ್ತ ಆಕೆ ಪ್ರೀತಿಯಲ್ಲಿ ಮುಳುಗೇಳುತ್ತಿದ್ದರೆ ಆತ ವಾಸ್ತವದ ಬದುಕನ್ನು ಕಟ್ಟಿಕೊಳ್ಳುವತ್ತ ಗಮನ ಹರಿಸಿದ್ದ. ಆಕೆಯ ಅತಿಯಾದ ಪ್ರೀತಿ ಆತನ ಉಸಿರುಗಟ್ಟಿಸ ತೊಡಗಿತ್ತು. ಆತ ದಿನದಿಂದ ದಿನಕ್ಕೆ ಅಸಹನೆ ತೋರತೊಡಗಿದ. ಹೋರಾಟ ಮನೋಭಾವದ ಆಕೆ ಆತನನ್ನು ಅಗಲಿರಲಾದೆ ಎಲ್ಲದಕ್ಕೂ ಹೊಂದಿಕೊಳ್ಳ ತೊಡಗಿದ್ದಳು. ಪ್ರೀತಿ ಉಳಿಸಿಕೊಳ್ಳುವ ಭರದಲ್ಲಿ ತನ್ನದಲ್ಲದ ತಪ್ಪಿಗೂ ತಲೆ ಬಾಗಿದಳು. ಆದರೆ ಆತನಿಗೆ ವಾಸ್ತವದ ಅರಿವಿತ್ತು. ಈ ಪ್ರೀತಿ ಎಂದಿಗೂ ಮುಂದುವರೆಯದ ಕೆವಲ ಮನದ ಭಾವನೆ ಎನ್ನುವ ಸ್ಪಷ್ಟತೆಯಿತ್ತು. ಪ್ರೀತಿ ಎನ್ನುವ ಭ್ರಮೆಗೂ ಬದುಕು ಎನ್ನುವ ವಾಸ್ತವಕ್ಕೂ ಇರುವ ವ್ಯತ್ಯಾಸ ಗೋಚರವಾಗತೊಡಗಿತ್ತು.
ಯಾಕೆ ಪ್ರೀತಿಸಿದೆನೋ ಈ ವಯಸ್ಸಿನಲ್ಲಿ… ಅಂದು ಕಾಲೇಜು ದಿನಗಳಲ್ಲಿ ಮಾಡದ ತಪ್ಪು ಇಂದು ಸಂಭವಿಸಿದೆ ಆತ ಹಳಹಳಿಸುತ್ತಿದ್ದ. ಆತ ಕಾಲೇಜು ಉಪನ್ಯಾಸಕ, ಮದುವೆ ಆಗಿದೆ. ಅದು ಹೇಗೆ ತನ್ನ ವಿದ್ಯಾರ್ಥಿಯೋರ್ವಳಿಗೆ ಸೋತನೋ ಗೊತ್ತಿಲ್ಲ. ಎರಡು ವರ್ಷ ಆತನ ಪ್ರೀತಿಗೆ ಸ್ಪಂದಿಸಿದ ಆ ಹುಡುಗಿ ನಿಧಾನವಾಗಿ ಹಿಂದೇಟು ಹಾಕತೊಡಗಿದಳು. ಮೊದ ಮೊದಲು ಓದಿನ ಕಡೆ ಗಮನ ಕೊಡುತ್ತಿದ್ದಾಳೆ ಅಂದು ಕೊಂಡಿದ್ದ ಆತನಿಗೆ ಆಕೆ ದೂರ ಆಗುತ್ತಿರುವುದು ಅರಿವಿಗೆ ಬಂದಾಗ ತತ್ತರಿಸಿ ಹೋಗಿದ್ದ. ಕೇಳಿದಾಗ, ಸರ್, ನಿಮ್ಮ ಮದುವೆ ಆಗಿದೆ. ಹೀಗಾಗಿ ನನ್ನನ್ನು ಮದುವೆ ಆಗಲು ಸಾಧ್ಯವಿಲ್ಲ. ನನ್ನ ಬದುಕನ್ನು ಹೀಗೇ ನಿಮ್ಮ ಪ್ರೇಯಸಿಯಾಗಿಯೇ ಕಳೆಯ ಬೇಕೇ? ಎಂದು ಹೇಳಿದವಳಿಗೆ ಉತ್ತರಿಸಲು ಆತನ ಬಳಿ ಶಬ್ಧಗಳಿರಲಿಲ್ಲ. ಆಕೆ ಬದುಕು ಎಂಬ ವಾಸ್ತವದ ಕಡೆ ಮುಖ ಮಾಡಿದ್ದಾಗಲೂ ಆತ ಪ್ರೀತಿ ಎನ್ನುವ ಭ್ರಮೆಯಲ್ಲಿಯೇ ಮುಳುಗಿ ಹೋಗಿದ್ದು ಪದೇ ಪದೇ ಆಕೆಯನ್ನು ಹಿಂಬಾಲಿಸುವ, ಸೆಳೆಯುವ ಪ್ರಯತ್ನ ಮಾಡುತ್ತಲೇ ಇದ್ದ.
ಆಕೆಗೆ ಅದೆಲ್ಲಿ ಸಿಕ್ಕನೋ ಗೊತ್ತಿಲ್ಲ. ಆತನಿಗೂ ಮದುವೆ ಆಗಿದೆ. ಅದು ಹೇಗೋ ಗೆಳೆತನವಾಗಿತ್ತು. ಮಾತುಕಥೆ ನಿಧಾನವಾಗಿ ಗೆಳೆತನದ ಸರಹದ್ದನ್ನೂ ದಾಟುತ್ತಿದೆ ಎಂಬುದು ಇಬ್ಬರಿಗೂ ಅರಿವಾಗಿತ್ತು. ಹಾಗೆಂದು ಇಬ್ಬರೂ ಒಮ್ಮೆ ಕೂಡ ಪ್ರೀತಿಯ ಬಗ್ಗೆ ಮಾತನಾಡಿರಲಿಲ್ಲ. ಪ್ರೀತಿಸುವ ಕುರಿತು ಚಕಾರ ಎತ್ತದಿದ್ದರೂ ಇಬ್ಬರ ಹೃದಯಕ್ಕೂ ಅದು ವೇದ್ಯವಾಗಿತ್ತು. ಆಕೆಗೋ ಅದು ಒಂದು ಹೊಸ ಅನುಭವ. ಆತನಿಗೋ ಬದುಕು ಮುಖ್ಯ. ಇಬ್ಬರ ನಡುವೆಯೂ ಆಗಾಗ ಸಣ್ಣ ಸಣ್ಣ ಸಿಟ್ಟು ಸೆಡವು.
ಬದುಕಿನ ಯಾವ ತಿರುವುಗಳಲ್ಲಿ ಪ್ರೀತಿ ಹುಟ್ಟುತ್ತದೆಯೋ ಬಲ್ಲವರಾರು? ಹಳೆಯ ಕಾಲದಲ್ಲಿ ಕಾಲೇಜಿನ ಹುಡುಗ ಹುಡುಗಿಯರು ಪ್ರೀತಿಯಲ್ಲಿ ಬೀಳುತ್ತಾರೆ(!) ಎನ್ನುವ ಮಾತಿತ್ತು. ಹುಡುಗಿಯರು ಕಾಲೇಜಿಗೆ ಹೋಗುವುದನ್ನು ಈಕಾರಣಕ್ಕಾಗಿಯೇ ಸಂಪ್ರದಾಯ ಬದ್ಧ ತಂದೆ ತಾಯಿಗಳು ವಿರೋಧಿಸುತ್ತಿದ್ದರು. ಕಾಲೇಜಿಗೆ ಹೋದ ಮಗಳು ಪ್ರೀತಿಸುವ ಮಾತು ಒತ್ತಟ್ಟಿಗಿರಲಿ, ಯಾರಾದರು ಹುಡುಗರು ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಬಹುದು ಎಂಬ ಅಂಜಿಕೆ ಕೂಡ ಹುಡುಗಿಯರನ್ನು ಕಾಲೇಜು ಮೆಟ್ಟಿಲು ಹತ್ತದಂತೆ ತಡೆದಿತ್ತು. ನಂತರದ ದಿನಗಳಲ್ಲಿ ಹೈಸ್ಕೂಲಿನ ಎರಡನೇ ವರ್ಷ ಅಂದರೆ ಒಂಬತ್ತನೆ ತರಗತಿಯನ್ನು ‘ಮೋಸ್ಟ ಡೇಂಜರಸ್’ ಎನ್ನಲಾಗುತ್ತಿತ್ತು. ಆ ತರಗತಿಯ ವರ್ಗ ಶಿಕ್ಷಕರಾಗಲು ಯಾರೂ ಸಿದ್ಧರಿರುತ್ತಿರಲಿಲ್ಲ. ದೊಡ್ಡದೊಂದು ಬಂಂಡೆಗಲ್ಲನ್ನು ತಲೆ ಮೇಲೆ ಇಟ್ಟುಕೊಂಡಂತೆ ಎಂಬ ಬಾವನೆ ಎಲ್ಲಾ ಶಿಕ್ಷಕರಲ್ಲಿತ್ತು. ಆದರೆ ಈಗ ಕಾಲ ಮತ್ತೆ ಬದಲಾಗಿದೆ. ಪ್ರಾಥಮಿಕ ಶಾಲೆಯ ಕೊನೆಯ ಎರಡು ವರ್ಷಗಳೇ ಮಕ್ಕಳ ಬೆಳವಣಿಗೆಯನ್ನು ಹೇಳುತ್ತದೆ. ಹಾಗೆಂದು ಪ್ರೀತಿ ಇತರ ವಯಸ್ಸಿನಲ್ಲಿ ಹುಟ್ಟಲಾರದು ಎಂದೇನೂ ಇಲ್ಲ. ಯಾವ ವಯಸ್ಸಿನಲ್ಲಿಯೂ ಹುಟ್ಟ ಬಹುದಾದದ್ದು ಅದು. ಆದರೆ ಬದುಕಿಗೂ ಮತ್ತು ಪ್ರೀತಿಗೂ ನಡುವಿನ ಸೂಕ್ಷ್ಮತೆಯನ್ನು ಅರ್ಥೈಸಿಕೊಳ್ಳಬೇಕಾದದ್ದು ಅತೀ ಮುಖ್ಯ.
ಪ್ರೀತಿ ತಪ್ಪೇನೂ ಅಲ್ಲ. ವಯೋ ಸಹಜವಾದ ಭಾವನೆ ಅಷ್ಟೇ ಅಲ್ಲ. ಪ್ರತಿ ವಯಸ್ಸಿನವರೂ ಬಯಸುವಂತಹುದ್ದು. ಪ್ರೀತಿ ಎನ್ನುವುದು ಕೇವಲ ಮನುಷ್ಯನ ಸ್ವತ್ತೂ ಅಲ್ಲ. ಪ್ರತಿ ಜೀವಿಯೂ ಪ್ರೀತಿಯನ್ನು ಬಯಸುತ್ತದೆ. ಅಂತಃಕರಣ ತುಂಬಿದ ಒಂದು ಸ್ಪರ್ಷವನ್ನು ಎದುರು ನೋಡುತ್ತದೆ. ಒಲವಿನ ಮಾತಿಗಾಗಿ ಕಾತರಿಸುತ್ತದೆ. ಮನೆಯಲ್ಲಿ ಸಾಕಿದ ಒಂದು ನಾಯಿಯನ್ನೇ ನೋಡಿ. ಅದು ಸಹಜವಾಗಿಯೇ ಮನೆಯಲ್ಲಿ ಯಾರು ತನ್ನನ್ನು ಪ್ರೀತಿಸುತ್ತಾರೋ ಅವರ ಬಳಿ ಹೋಗುತ್ತದೆ, ಚಿಕ್ಕ ಮಗುವೂ ಅಷ್ಟೇ. ತನ್ನನ್ನು ಪ್ರೀತಿಸುವವರನ್ನು ಬಹುಬೇಗ ಅರಿತುಕೊಳ್ಳುತ್ತದೆ. ಈ ಅಂತರಂಗದ ಬಯಕೆಯೇ ಮುಂದೆ ಸಹಜ ಕಾಮನೆಯನ್ನು ಎದೆಯೊಳಗೆ ತುಂಬುತ್ತದೆ.
ಆದರೆ ಆ ಪ್ರೀತಿ ಹೇಗಿರಬೇಕು ಮತ್ತು ಹೇಗೆ ಅದನ್ನು ನಿಯಂತ್ರಿಸಬೇಕು ಎನ್ನುವುದು ಅತೀ ಮುಖ್ಯ. ಓದನ್ನು ಬಿಟ್ಟು ಬರೀ ಪ್ರೀತಿ ಎಂದು ಕುಳಿತರೆ ಮುಂದಿನ ಜೀವನ ದುರ್ಬಲವಾಗಬಹುದು. ಬದುಕನ್ನು ಅಂದುಕೊಂಡಂತೆ ಸಾಗಿಸಲು ಸಾಧ್ಯವಾಗದಿರಬಹುದು. ಸಮಾಜ ಬಾಹೀರ ಎನ್ನಿಸಿಕೊಂಡ, ವಿವಾಹೇತರ ಪ್ರೀತಿಯನ್ನು ನಿಭಾಯಿಸುವ ಘಟ್ಟದಲ್ಲಿ ಕೊಲೆಗಳಾಗುವ, ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವನ್ನು ಅಲ್ಲಗಳೆಯಲಾಗದು. ಬದುಕಿನಲ್ಲಿ ಬರೀ ಪ್ರೀತಿಯ ಮೇಲೇ ಅವಲಂಭಿತವಾಗಿದ್ದರೆ ಬದುಕನ್ನು ರೂಪಿಸಿಕೊಳ್ಳುವುದು ಕಷ್ಟವಾಗಬಹುದು. ಹಾಗೆಂದು ಪ್ರೀತಿ ಯಾವ ಹಂತದಲ್ಲೂ ನಿಷಿದ್ಧವಲ್ಲ. ಬರೀ ವಾಸ್ತವದ ನೆಲೆಗಟ್ಟಿನಲ್ಲಿ ನಿಂದು ಬದುಕನ್ನು ಕಟ್ಟಿ ಕೊಳ್ಳ ಹೊರಟರೆ ಅದು ಕಲ್ಲು ಸಿಮೆಂಟಿನಿಂದ ಕೂಡಿದ ಕಟ್ಟಡವಾಗುತ್ತದೆಯೇ ಹೊರತು ಪ್ರೀತಿ ತುಂಬಿದ ಮನೆಯಾಗುವುದಿಲ್ಲ. ಜೀವನದಲ್ಲಿ ಭ್ರಮೆಯ ಪ್ರೀತಿಯ ಜೊತೆ ಜೊತೆಗೇ ಬದುಕು ಎನ್ನುವ ವಾಸ್ತವದ ಅರಿವು ಇರಲೇ ಬೇಕು.







0 Comments