ಪ್ರಿಯಾ ವಾರಿಯರ್ ಗಿಂತಲೂ ‘ಚತುರ ವಿಂಕು’

ಪ್ರಿಯಾ ವಾರಿಯರ್ ಕಣ್ಣು ಮಿಣ್ಕಿಸಿದ್ದೇ ಅಲ್ಟಿಮೇಟು ಅಂದುಕೊಂಡ್ರಾ…

ಅದಕ್ಕಿಂತ ಕೌಶಲಭರಿತ ವಿಂಕುಗಳು ದಿಲ್ಲಿ ರಾಜಕೀಯದ ಓಣಿಗಳಲ್ಲಿ 2016ರಿಂದೀಚೆಗೆ ನಡೆದಿವೆ. ಪ್ರಜಾತಂತ್ರದ ಮೂಲತಳಕಟ್ಟಾದ ಪಾರದರ್ಶಕತೆಯನ್ನೇ ಕಣ್ಣು ಮಿಟುಕಿಸಿ ಕಳೆದಿರುವ ಕೇಂದ್ರ ಸರಕಾರ ತನ್ನ ಪಕ್ಷವಾದ ಬಿಜೆಪಿಯ ಕತ್ತಿಗೆ ದಿಲ್ಲಿ ಹೈಕೋರ್ಟು ಬಿಗಿದಿದ್ದ ಹಗ್ಗವನ್ನು ಬೆಣ್ಣೆಯಿಂದ ಕೂದಲ ಎಳೆಯನ್ನು ಬೇರ್ಪಡಿಸಿದಷ್ಟೇ ನಾಜೂಕಾಗಿ ಸರಿಸಿಕೊಂಡಿದೆ ಮತ್ತು ಇದಕ್ಕೆ ಕಾಂಗ್ರೆಸ್ ಕೂಡ “ಮೂಖ ಸಹಾಯ” ನೀಡಿದೆ.

ಇಡಿಯ ಕಥೆ ಆರಂಭವಾಗುವುದು 2014ರಲ್ಲಿ, ದಿಲ್ಲಿ ಹೈಕೋರ್ಟಿನಲ್ಲಿ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿರುವಾಗ 2014 ಮಾರ್ಚ್ 29ರಂದು ದಿಲ್ಲಿ ಹೈಕೋರ್ಟಿನ ವಿಭಾಗಪೀಠವೊಂದು (ಜಸ್ಟೀಸ್ ಪ್ರದೀಪ್ ನಂದ್ರಜೋಗ್ ಮತ್ತು ಜಸ್ಟೀಸ್ ಜಯಂತ ನಾಥ್) ತೀರ್ಪು ನೀಡಿ, ವಿದೇಶಿ ದೇಣಿಗೆಗಳ (ನಿಯಂತ್ರಣ) ಕಾಯಿದೆ 1976 (FCRA) ನ್ನು ಉಲ್ಲಂಘಿಸಿ ದೇಣಿಗೆ ಸ್ವೀಕರಿಸಿದ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ಮತ್ತು ಕೇಂದ್ರ ಗ್ರಹಖಾತೆಗೆ ಸೂಚನೆ ನೀಡುತ್ತದೆ.

ಇಂಗ್ಲಂಡ್ ಮೂಲದ ಅನಿಲ್ ಅಗರ್ವಾಲ್ ಅವರಿಗೆ ಸೇರಿದ ‘ವೇದಾಂತ’ ಗುಂಪು ಮತ್ತದರ ಮರಿಕಂಪನಿಗಳಾದ ‘ಸೆಸಾ’ ಹಾಗೂ ‘ಸ್ಟರ್ಲೈಟ್’ ಗಳಿಂದ ಈ ಎರಡು ಪಕ್ಷಗಳು ಸ್ವೀಕರಿಸಿದ ದೇಣಿಗೆ ಸ್ಪಷ್ಟವಾಗಿ FCRA ಉಲ್ಲಂಘನೆ ಎಂದು ಹೇಳುತ್ತದೆ. ಚುನಾವಣಾ ಆಯೋಗ ಈ ಪಕ್ಷಗಳ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ.

ಚುನಾವಣೆ ನಡೆದು, ಬಿಜೆಪಿ ಅಧಿಕಾರಕ್ಕೇರಿ, ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾಗುತ್ತಾರೆ. ಅವರು 2016ರ ಡಿಸೆಂಬರ್ ೧೯ರಂದು ಕಾನ್ಪುರದಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ಸಿನ ಹಣಕಾಸು ಲೆಕ್ಕಾಚಾರಗಳನ್ನು “ ನ ಖಾತಾ, ನ ವಹೀ; ಜೋ ಕೇಸರೀಜೀ ಕಹೇ ವೋಹೀ ಸಹೀ” ಎಂದುಗೇಲಿ ಮಾಡುತ್ತಾರೆ ಮತ್ತು ತಮ್ಮ ಪಕ್ಷ ಕಾಂಗ್ರೆಸ್ಸಿನದೇ ಕಾಲದ ಕಾಯಿದೆಯನ್ನು ಪಾಲಿಸುತ್ತಿದೆ, ಅದರಲ್ಲಿ ಒಂದು ಕೋಮಾ ಅಥವಾ ಫುಲ್ ಸ್ಟಾಪನ್ನೂ ಬದಲಾಯಿಸಿಲ್ಲ ಆದರೂ ಕಾಂಗ್ರೆಸ್ ನಮ್ಮ ಹೆಸರು ಹಾಳುಮಾಡುತ್ತಿದೆ ಎಂದು ಘೋಷಿಸುತ್ತಾರೆ!

ವಾಸ್ತವದಲ್ಲಿ, ಮೋದಿಯವರು ಅಲ್ಲಿ ಹೇಳಿದ್ದು ಸುಳ್ಳು. ಯಾಕೆಂದರೆ, 2016 ಮೇ 5ರಂದು ಸಂಸತ್ತು ಅಂಗೀಕರಿಸಿದ ಹಣಕಾಸು ಮಸೂದೆ 2016 ರಲ್ಲಿ ಮೋದಿ ಸರ್ಕಾರ ಒಂದು ತಂತ್ರಗಾರಿಕೆಯ ತಿದ್ದುಪಡಿ ಮಾಡಿರುತ್ತದೆ. ಅದು ‘ವಿದೇಶಿ ಕಂಪನಿ’ಯ ವ್ಯಾಖ್ಯೆಯನ್ನೇ ಬದಲಾಯಿಸುವ ತಿದ್ದುಪಡಿ.  ಈ ತಿದ್ದುಪಡಿಯ ಪ್ರಕಾರ ‘ಯಾವ ಕಂಪನಿಯ 50%ಗಿಂತ ಕಡಿಮೆ ಪ್ರಮಾಣದ ಶೇರುಗಳನ್ನು ವಿದೇಶಿ ಕಂಪನಿ ಹೊಂದಿರುತ್ತದೋ ಆ ಕಂಪನಿ ವಿದೇಶಿ ಮೂಲದ ಕಂಪನಿ ಅಲ್ಲ.’

ಇದಲ್ಲದೇ FCRA ತಿದ್ದುಪಡಿ ಕಾಯಿದೆ 2010 ಜಾರಿಗೆ ಬಂದಂದಿನಿಂದಲೇ ಈ ಹೊಸ ನಿಯಮ ಪೂರ್ವಾನ್ವಯ ಎಂದೂ ತಿದ್ದುಪಡಿಯಲ್ಲಿ ಹೇಳಲಾಗುತ್ತದೆ. ಅಂದ್ರೆ, ರಾಜಕೀಯ ಪಕ್ಷಗಳಿಗೆ ಅವು 2010-16 ನಡುವಿನ ವಿದೇಶಿ ನಿಧಿ ಸ್ವೀಕಾರದ ಲೆಕ್ಕಾಚಾರಗಳು ನ್ಯಾಯಾಲಯದ ಪರಿಗಣನೆಗೆ ಬರುವುದಿಲ್ಲ.

PART XIII

AMENDMENT TO THE FOREIGN CONTRIBUTION (REGULATION) ACT, 2010

233. In the Foreign Contribution (Regulation) Act, 2010, in section 2, in sub-section (1), in clause (j), in sub-clause (vi), the following proviso shall be inserted and shall be deemed to have been inserted with effect from the 26th September, 2010, namely:—

“Provided that where the nominal value of share capital is within the limits specified for foreign investment under the Foreign Exchange Management Act, 1999, or the rules or regulations made thereunder, then, notwithstanding the nominal value of share capital of a company being more than one-half of such value at the time of making the contribution, such company shall not be a foreign source;”.  (ಮೂಲ: ಫೈನಾನ್ಸ್ ಆಕ್ಟ್ 2016)

ಈ ತಿದ್ದುಪಡಿಯನ್ನು ಕೇಂದ್ರ ಸರಕಾರ ಅಂಗೀಕರಿಸಿದ ಬೆನ್ನಿಗೇ ಒಂದು ಪವಾಡ ನಡೆಯುತ್ತದೆ. ಅದೇನೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ, ದಿಲ್ಲಿ ಹೈಕೋರ್ಟಿನ ತೀರ್ಪಿನ ವಿರುದ್ಧ ಸಲ್ಲಿಸಿದ್ದ  ಪ್ರತ್ಯೇಕ ಮೇಲ್ಮನವಿಗಳನ್ನು 2016 ನವೆಂಬರ್ 29ರಂದು ಏಕಕಾಲಕ್ಕೆ ಹಿಂದೆ ಪಡೆಯುತ್ತವೆ!

ಈ ತಿದ್ದುಪಡಿಯ ಲಾಭ ಏನೆಂದರೆ, ವೇದಾಂತ ಮತ್ತದರ ಮರಿಕಂಪನಿಗಳು ಈ ತಿದ್ದುಪಡಿಯ ಪರಿಣಾಮವಾಗಿ ‘ವಿದೇಶಿ ಕಂಪನಿ’ಗಳಾಗಿ ಉಳಿಯುವುದಿಲ್ಲ.

ಈ ನಡುವೆ, ಕಾಂಗ್ರೆಸ್-ಬಿಜೆಪಿ ಮತ್ತಿತರ ಪಕ್ಷಗಳ ವಿರುದ್ಧ ಕ್ರಮ ಆರಂಭಿಸದ ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟು ಪೀಠವು ( ಜಸ್ಟೀಸ್ ಗೀತಾ ಮಿತ್ತಲ್ ಮತ್ತು ಜಸ್ಟೀಸ್ ಹರಿಶಂಕರ್)  ಕಳೆದ ಅಕ್ಟೋಬರ್ 9, 2017ರಂದು ಚಾಟಿ ಬೀಸಿ, ಆರು ತಿಂಗಳೊಳಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು  ಎಚ್ಚರಿಕೆ ನೀಡುತ್ತದೆ. ಸರ್ಕಾರದ ಪರ ವಕೀಲರು 2018 ಮಾರ್ಚ್ 31ರ ತನಕ ಅವಕಾಶ ಕೇಳುತ್ತಾರೆ. ಅದಕ್ಕೆ ನ್ಯಾಯಾಲಯ ಒಪ್ಪುತ್ತದೆ.

ಈಗ ಮೊನ್ನೆ ಬಜೆಟ್ ಅಧಿವೇಶನದ ವೇಳೆ ಹಣಕಾಸು ಮಸೂದೆ ೨೦೧೮ನ್ನು ಮಂಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಇನ್ನೂ ಒಂದು ಹೆಜ್ಜೆ ಮುಂದುವರಿದು, ವಿದೇಶೀ ಕಂಪನಿಗಳ ಬದಲಾದ ವ್ಯಾಖ್ಯೆ ಕೇವಲ 2010ರಿಂದೀಚೆಗೆ ಅಲ್ಲ, ಬದಲಾಗಿ 1976ರಿಂದ ಈಚೆಗೆ ಪರಿಗಣಿತವಾಗಲಿದೆ ಎಂದು ಹೇಳಿದ್ದಾರೆ.

ಅಂದರೆ, ಕಾಂಗ್ರೆಸ್ಸಾಗಲೀ, ಬಿಜೆಪಿಯಾಗಲೀ 1976ರಿಂದೀಚೆಗೆ ಸ್ವೀಕರಿಸಿದ ಯಾವುದೇ ವಿದೇಶೀ ಮೂಲದ ಕಂಪನಿಯ ಚುನಾವಣಾ ದೇಣಿಗೆ ಅಕ್ರಮ ಆಗುವುದಿಲ್ಲ!

PART XIII

AMENDMENT TO THE FOREIGN CONTRIBUTION (REGULATION) ACT, 2010

“Clause 217 of the Bill seeks to amend Section 236 of the Finance Act, 2016 which relates to amendment to sub-clause (vi) of clause (j) of sub-section (1) of Section 2 of the Foreign Contribution (Regulation) Act, 2010 …. Effect from the 5th August, 1976 the date of commencement of the FCRA, 1976, which was repealed and re-enacted as the FCRA, 2010.” (ಮೂಲ: ಫೈನಾನ್ಸ್ ಆಕ್ಟ್ 2018)

* * *

ರಾಜಕೀಯ ಪಕ್ಷಗಳಿಂದ ಯಾರಿಗೂ ಈಗೀಗ ಪ್ರಾಮಾಣಿಕತೆಯ ನಿರೀಕ್ಷೆ ಇಲ್ಲವಾದರೂ, ತಾನು ‘ಪ್ರಾಮಾಣಿಕ’ ಎಂದು ಕ್ಲೇಮು ಮಾಡಿಕೊಂಡ ಪಕ್ಷವೊಂದು ಈ ಆಟದಲ್ಲಿ ತೊಡಗಿಕೊಂಡಿರುವುದು ತಮಾಷೆಯಾಗಿದೆ.

ಹಾಲೀ ಕೇಂದ್ರ ಸರಕಾರದ ರಾಜಕೀಯ ದೇಣಿಗೆಗಳ ಆಟ ಇಷ್ಟಕ್ಕೇ ಮುಗಿದಿಲ್ಲ. 2016ರಲ್ಲಿ ನೋಟುರದ್ಧತಿಯ ಬಳಿಕ, ರಾಜಕೀಯ ಪಕ್ಷಗಳ ನಗದು ದೇಣಿಗೆ ಮಿತಿಯನ್ನುಕೇಂದ್ರ ಸರಕಾರ 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿತ್ತು. ಆಗ 1999ರೂಪಾಯಿಗಳ ಹಲವು ದೇಣಿಗೆಗಳು ಹರಿದುಬರತೊಡಗಿ, ಉದ್ದೇಶ ಈಡೇರಲಿಲ್ಲ!

ಈ ಬಾರಿ ಬಜೆಟ್ಟಿನಲ್ಲಿ ಆ ಮಿತಿಯನ್ನು ತೆಗೆದುಹಾಕಿದ ಜೇಟ್ಲಿಯವರು, ಚುನಾವಣಾ ಬಾಂಡ್ ಗಳನ್ನು ಜಾರಿಗೆ ತರುವ ಮೂಲಕ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಉದ್ಯಮಿಗಳಿಗೆ ಗೌಪ್ಯತೆಯ ಕವಚ ಒದಗಿಸಿದ್ದಾರೆ.

ಪ್ರಜಾತಂತ್ರದ ತಳಪಾಯ ಆಗಿರುವ ಒಬ್ಬ ಪ್ರಜೆಯ ಮಟ್ಟಿಗೆ ಇವೆಲ್ಲವೂ ಆತನಿಗೆ ವಂಚನೆಯೇ. ಹೀಗೆ ವಂಚನೆ ಮಾಡುವಲ್ಲಿ ಪಕ್ಷಗಳ ನಡುವೆಯೂ ಭಿನ್ನಮತ ಇಲ್ಲ – ಅವರೆಲ್ಲರೂ ಒಂದೇ.

ಬಡಪಾಯಿಗಳಿಗೆ ಪ್ರಿಯಾ ವಾರಿಯರ್ ಕಣ್ಮಿಣ್ಕಿಸಿದ್ದನ್ನು ನೋಡಿ ಕುಷಿಪಟ್ಟದ್ದಷ್ಟೇ ಲಾಭ!

‍ಲೇಖಕರು avadhi

February 19, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: