ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕುಪ್ಪಳಿಯಲ್ಲಿ ಸಾಹಿತ್ಯ, ಸಿನಿಮಾ ಇತ್ಯಾದಿ…

ಪ್ರಿಯದರ್ಶಿನಿ ಶೆಟ್ಟರ್

ಬೆಳಗ್ಗೆ ಯೋಗ- ವ್ಯಾಯಾಮದ ನಂತರ ಕವಿಮನೆ, ಕವಿಶೈಲದತ್ತ ವಾಯುವಿಹಾರಕ್ಕೆ ಹೋಗಿ ಬಂದೆವು. ಮೊದಲ ಗೋಷ್ಠಿಯಲ್ಲಿ ಡಾ. ಎನ್. ಎಸ್. ಗುಂಡೂರ ಅವರು ಕೀರ್ತಿನಾಥ ಕುರ್ತಕೋಟಿಯವರ ‘ಗಾಳಿಗೊಡ್ಡಿದ ಸೊಡರು’ ಲೇಖನವನ್ನೋದಿದರು. ಈ ಲೇಖನದ ಕುರಿತು ಒಂದಿಷ್ಟು ಮಾತು ಕತೆಯಾದ ಮೇಲೆ ಡಾ. ಗುಂಡೂರ ಅವರು ‘ವಿಮರ್ಶೆ ಎಂದರೇನು? ವಿಮರ್ಶೆಯ ಅವಶ್ಯಕತೆ ಮತ್ತು ಕ್ರಿಯೆಯ ಸ್ವರೂಪ’ದ ಕುರಿತು ಉಪನ್ಯಾಸ ನೀಡಿದರು.

ವಿಮರ್ಶೆಯ ಪ್ರಕಾರಗಳು, ವಿವಿಧ ಬರಹಗಾರರ ವಿಮರ್ಶೆಯ ವ್ಯಾಖ್ಯಾನಗಳನ್ನು ಮೆಲುಕು ಹಾಕಿದರು. ವಿಮರ್ಶೆಯ ಕರ್ತವ್ಯ ಮತ್ತು ಪ್ರಯೋಜನಗಳೇನು? ವಿಮರ್ಶಕರಿಗೆ ಇರಬೇಕಾದ ಗುಣಗಳಾವುವು? ಅದರಲ್ಲೂ ಮುಖ್ಯವಾಗಿ ಪರಿಣಾಮಕಾರಿ ಅವಲೋಕನದ ಅವಶ್ಯಕತೆಯನ್ನು ವಿವರಿಸುವುದರೊಂದಿಗೆ ಇನ್ನೂ ಅನೇಕ ಮಾಹಿತಿಗಳನ್ನು ಕೆಲ ಪುಸ್ತಕಗಳು ಹಾಗೂ ಕೃತಿಕಾರರ ಉದಾಹರಣೆಗಳೊಂದಿಗೆ ವಿವರಿಸಿದರು.

ನಂತರದ ಗೋಷ್ಠಿಯಲ್ಲಿ ಡಾ. ಶಿವಕುಮಾರಸ್ವಾಮಿ ಚಲ್ಯ (ಕುಮಾರಚಲ್ಯ) ಅವರು‘ಪ್ರಾಚೀನ ಕನ್ನಡ ಸಾಹಿತ್ಯ: ಮೀಮಾಂಸೆಯ ಭಿನ್ನ ಸ್ವರೂಪಗಳು ವಿಮರ್ಶೆಗೆ ಒದಗಬಹುದಾದ ಪರಿಕರಗಳು’ ಎಂಬ ವಿಷಯದ ಬಗ್ಗೆ ಮಾತನಾಡುತ್ತ ‘ವಿಮರ್ಶೆ’ ಪದ ಬಳಕೆಯಿಂದ ಹಿಡಿದು, ಮೊದಲ ವಿಮರ್ಶೆ, ಶಾಸ್ತ್ರೀಯ/ ಅಭಿಜಾತ ಸಾಹಿತ್ಯ ಪರಂಪರೆ, ವಿಮರ್ಶೆಯ ಲಕ್ಷಣಗಳು, ಆಕರಗಳ ಪರಿಶೋಧನೆ, ಸಕಾರಣವಾದ ವಾಗ್ವಾದ, ಇವೆಲ್ಲದರ ಜೊತೆಗೆ ವಚನಗಳನ್ನು ಹಾಗೂ ತ್ರಿಪದಿಗಳನ್ನು ವಾಚಿಸಿದರು.

ಹೊಟ್ಟೆಯೊಳಗಿನ ಹಾಡ ಬಿಟ್ಟು ಬಿಡದಲೆ ಹಾಡಿ
ಮುಟ್ಟಿಸಬೇಕ ಕಲಿ ತರುಣವ, ಇಲದಿರಕ
ಹಾಡ ಹಿಂಗ್ಯಾವ ಬಾಯಾಗ!
ಎನ್ನುವ ತ್ರಿಪದಿ ಮತ್ತು ಅದರ ಸುತ್ತ ನಡೆದ ಚರ್ಚೆಎಲ್ಲರಿಗೂ ಬಹಳ ಇಷ್ಟವಾಯಿತು.

ಡಾ. ಗುರುಪಾದ ಮರಿಗುದ್ದಿಯವರು ‘ವಿಮರ್ಶೆಯ ವೈವಿಧ್ಯತೆ: ವಾಸ್ತವತಾವಾದ, ವ್ಯಕ್ತಿನಿಷ್ಠೆ, ರಮ್ಯ, ರಸ, ಭಾವನಾತ್ಮಕ’ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ವಿಮರ್ಶೆ ಬೆಳೆದುಬಂದ ಹಾದಿಯ ಮೇಲೆ ಬೆಳಕು ಚೆಲ್ಲಿದರು. ನವೋದಯದ ನೇತಾರ ಬಿ. ಎಂ. ಶ್ರೀ., ಎ. ಆರ್. ಕೃಷ್ಣಶಾಸ್ತ್ರೀ, ಮಾಸ್ತಿಯವರ ‘ವಿಮರ್ಶೆ’ ಲೇಖನ, ಕೆ. ಜಿ. ಕುಂದಣಗಾರ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ಸಿಂಪಿ ಲಿಂಗಣ್ಣ ಮುಂತಾದವರ ಕೊಡುಗೆಗಳನ್ನು ನೆನಪಿಸಿಕೊಂಡರು. ಇದೇ ಚರ್ಚೆಯ ಮುಂದುವರೆದ ಭಾಗವೆಂಬಂತೆ ‘ವಿಮರ್ಶೆಯ ವಿವಿಧ ಚಿಂತನೆಗಳು’ (ರೂಪನಿಷ್ಠತೆ, ಲೋಕ-ವ್ಯಕ್ತಿ, ಪರಿಸರ ಪ್ರಜ್ಞೆ, ಅಸಂಗತತೆ) ಎನ್ನುವ ವಿಷಯದ ಕುರಿತು ಡಾ. ಕೆ. ಕೇಶವಶರ್ಮ ಅವರು ಕೆಲ ಬರಹಗಾರರ ಕಥೆ, ಕಾದಂಬರಿ, ನಾಟಕಗಳನ್ನು ಉಲ್ಲೇಖಿಸುತ್ತ ಚರ್ಚಿಸಿದ್ದು ಪರಿಣಾಮಕಾರಿಯಾಗಿತ್ತು.

ಚಹಾವಿರಾಮದ ನಂತರ ಗೋಪಾಲಕೃಷ್ಣ ಅಡಿಗರ ‘ಭೂತ’ ಕವನದ ಕುರಿತು ನಮ್ಮ ನಮ್ಮ ಗುಂಪುಗಳಲ್ಲಿ ಚರ್ಚಿಸಿ ಯಥಾಪ್ರಕಾರ ಪ್ರತಿ ಗುಂಪಿನಿಂದ ಒಬ್ಬರು ತಂಡದ ಚರ್ಚೆಯನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಪ್ರೊ. ಕಲ್ಗುಡಿಯವರು ಚರ್ಚೆಯಾಗದ ಕೆಲ ಅಂಶಗಳನ್ನು ನಮ್ಮ ಮುಂದಿಟ್ಟರು. ರಾತ್ರಿ ಅಕಿರಾಕುರೊಸವಾ ನಿರ್ದೇಶನದ ಜಪಾನಿ ಸಿನಿಮಾ‘ಥ್ರೋನ್‌ಆಫ್ ಬ್ಲಡ್’ ವೀಕ್ಷಿಸಿದೆವು. ಶೇಕ್ಷಪಿಯರ್ ವಿರಚಿತ ‘ಮ್ಯಾಕ್‌ಬೆತ್’ ನಾಟಕವನ್ನು ಕೊಂಚ ಬದಲಾಯಿಸಿ ಜಪಾನದ ಪ್ರಾದೇಶಿಕತೆಗೆ ಹೊಂದುವಂತೆ ನಿರ್ಮಿಸಿದ ಚಲನಚಿತ್ರವಿದು. ಇಂಗ್ಲೀಷ್ ಸಬ್‌ಟೈಟಲ್‌ ಇಲ್ಲದೇ ಇದ್ದದ್ದು ಅರ್ಥಮಾಡಿಕೊಳ್ಳಲು ಕಷ್ಟವಾದರೂ ಸಹ ಚಿತ್ರ ನೋಡಿಸಿಕೊಂಡು ಹೋಯಿತು. ಪ್ರದರ್ಶನದ ನಂತರ ಡಾ. ಎಂ. ಉಷಾರವರು ನೀಡಿದ ವಿವರಣೆಯು ಸಿನಿಮಾ ಅರ್ಥ ಮಾಡಿಕೊಳ್ಳಲು ಸಹಾಯಕಾರಿಯಾಗಿತ್ತು ಹಾಗೂ ಮಾಹಿತಿಪೂರ್ಣವಾಗಿತ್ತು.

ರಾತ್ರಿ ನಾವೆಲ್ಲ ಅಂದಂದಿನ ಉಪನ್ಯಾಸಗಳು ಹಾಗೂ ಇಡೀ ದಿನದ ಚಟುವಟಿಕೆಗಳ ಕುರಿತ ನಮ್ಮ ಅನಿಸಿಕೆ ದಾಖಲಿಸುತ್ತಿದ್ದುದು ಶಿಬಿರದ ಚಟುವಟಿಕೆಗಳ ಒಂದು ಭಾಗವಾಗಿತ್ತು. ಹಾಗೆ ಬರೆದದ್ದನ್ನು ಮಾರನೆ ದಿನ ಅಕಾದೆಮಿಯ ಸಿಬ್ಬಂದಿ ಜಾವೇದ್‌ ಅವರಿಗೆ ಕೊಡುತ್ತಿದ್ದೆವು.

। ಇನ್ನು ನಾಳೆಗೆ ।

‍ಲೇಖಕರು Admin

November 25, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: