ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಅವರ ವೃತ್ತಿ ಜೀವನದ ನೆನಪುಗಳ ಸಂಕಲನ.… ಉಳಿದಾವ ನೆನಪು ಈ ಭಾನುವಾರ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಬಿಡುಗಡೆ ಆಗುತ್ತಿದೆ. ಈ ಕೃತಿಗೆ ಹಿರಿಯ ಲೇಖಕ ಡಾ.ಸರಜೂ ಕಾಟ್ಕರ್ ಬರೆದ ಮುನ್ನುಡಿ ‘ಅವಧಿ’ಯ ಓದುಗರಿಗಾಗಿ ಇಲ್ಲಿದೆ-
ಪ್ರಾಮಾಣಿಕ ಪತ್ರಕರ್ತನೊಬ್ಬನ ಅಫಿಡವಿಟ್
ಸರಜೂ ಕಾಟ್ಕರ್
**
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಇತ್ತೀಚೆಗೆ ಬೆಳಗಾವಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸುತ್ತ, ʻಬೆಳಗಾವಿಯ ಪತ್ರಕರ್ತರು ಅಪ್ರಬುದ್ಧರು, ಅವರಿಗೆ ರಾಜಕಾರಣಿಗಳಿಗೆ ಅಥವಾ ಮಂತ್ರಿಗಳಿಗೆ ಸರಿಯಾಗಿ ಮತ್ತು ಅರ್ಥಪೂರ್ಣವಾಗಿ ಪ್ರಶ್ನೆಗಳನ್ನು ಕೇಳಲು ಬರುವುದಿಲ್ಲ; ಅವರ ಎಷ್ಟೋ ಪ್ರಶ್ನೆಗಳಿಗೆ ಅರ್ಥವೇ ಇರುವುದಿಲ್ಲ. ಅದೇ ನಾನು ಉಸ್ತುವಾರಿಯಾಗಿ ಇರುವ ಉಡುಪಿ ಜಿಲ್ಲೆಯ ಪತ್ರಕರ್ತರು ಸೌಜನ್ಯತನದಿಂದ, ಪ್ರಬುದ್ಧ ಪ್ರಶ್ನೆಗಳನ್ನು ಕೇಳುತ್ತಾರೆ. ಹೇಳಿದ್ದನ್ನಷ್ಟೇ ಯಾವ ಮಸಾಲೆ ಬೆರೆಸದೇ ತಮ್ಮ ಪತ್ರಿಕೆಗಳಲ್ಲಿ ವರದಿ ಮಾಡುತ್ತಾರೆʼ ಎಂಬರ್ಥದ ಮಾತುಗಳನ್ನು ಹೇಳಿದರು.
ಆ ಕಾರ್ಯಕ್ರಮದಲ್ಲಿ ಇದ್ದವರೆಲ್ಲರೂ ಪತ್ರಕರ್ತರೇ ಆಗಿದ್ದರು. ಬೇರೆ ಬೇರೆ ಜಿಲ್ಲೆಗಳಿಂದ ಬಂದ ಪತ್ರಕರ್ತರು ಅಲ್ಲಿದ್ದರು. ಸಚಿವೆ ಆಡಿದ ಮಾತು ಬೆಳಗಾವಿ ಪತ್ರಕರ್ತರಿಗೆ ಸಾಕಷ್ಟು ಮುಜುಗರವನ್ನುಂಟು ಮಾಡಿತು. ಎರಡನೆಯ ದಿನ ಸಭೆ ಸೇರಿ ಸಚಿವೆಯ ಮಾತುಗಳನ್ನು ಸಾರಾಸಗಟಾಗಿ ನಿಷೇಧಿಸಲಾಯಿತು. ಸಚಿವೆಯ ವಿಶೇಷಾಧಿಕಾರಿಯಾಗಿದ್ದವರು ಈ ಹಿಂದೆ ʻಕನ್ನಡಪ್ರಭʼ, ʻವಿಜಯ ಕರ್ನಾಟಕʼ ಪತ್ರಿಕೆಯಲ್ಲಿ ಹಿರಿಯ ಸ್ಥಾನದಲ್ಲಿದ್ದ ಪತ್ರಕರ್ತರೇ ಆಗಿದ್ದರು. ಸಚಿವೆಯ ಮಾತುಗಳು ಬೀರಬಹುದಾದ ಪರಿಣಾಮವನ್ನು ಊಹಿಸಿದ ಅವರು ಸಚಿವೆಯಿಂದ ʻವಿಷಾದʼವನ್ನು ಹೇಳಿಸಿ ಪ್ರಕರಣಕ್ಕೆ ಅಂತ್ಯ ಹಾಡಿದರು.
ಸಚಿವೆ ವ್ಯಕ್ತಪಡಿಸಿದ ʼವಿಷಾದʼದಿಂದ ಇಪ್ಪತ್ತ್ನಾಲ್ಕು ತಾಸುಗಳ ಹಿಂದೆ ʻಅಪ್ರಬುದ್ಧರಾಗಿದ್ದʼ ಪತ್ರಕರ್ತರು ಒಮ್ಮಿಂದೊಮ್ಮೆಲೇ ʼಪ್ರಬುದ್ಧʼರಾದರು! ಮತ್ತು ಅವರಿಗೆ ರಾಜಕಾರಣಿಗಳಿಗೆ, ಸಚಿವರಿಗೆ ಯೋಗ್ಯವಾದ, ಅರ್ಥಪೂರ್ಣವಾದ ಪ್ರಶ್ನೆಗಳನ್ನು ಕೇಳುವ ಯೋಗ್ಯತೆಯೂ ಬಂತು!
ಇದಲ್ಲವೇ ಕಮಾಲ್! ಚಮತ್ಕಾರ!!

ಈ ಪ್ರಸಂಗವನ್ನು ಇಲ್ಲೇಕೆ ನಾನು ಪ್ರಸ್ತಾಪಿಸುತ್ತಿದ್ದೇನೆಂದರೆ ಇದೇ ಬೆಳಗಾವಿಯಲ್ಲಿ ನಾನು ಪತ್ರಕರ್ತನಾಗಿ 42 ವರ್ಷಗಳಷ್ಟು ದೀರ್ಘಕಾಲ ಕೆಲಸ ಮಾಡಿದ್ದೇನೆ. ಆರಂಭದಲ್ಲಿ ʻಸಂಯುಕ್ತ ಕರ್ನಾಟಕʼ ದಿನ ಪತ್ರಿಕೆಯ ಜಿಲ್ಲಾ ವರದಿಗಾರನಾಗಿ, ಅನಂತರ ʻಇಂಡಿಯನ್ ಎಕ್ಸ್‌ಪ್ರೆಸ್ʼ ಮತ್ತು ʻಕನ್ನಡಪ್ರಭʼ ಪತ್ರಿಕೆಗಳ ಜಿಲ್ಲಾ ವರದಿಗಾರ / ಮುಖ್ಯ ವರದಿಗಾರನಾಗಿ ಸಾವಿರಾರು ವರದಿ, ವಿಶೇಷ ವರದಿಗಳನ್ನು ಪತ್ರಿಕೆಗಾಗಿ ಬರೆದಿದ್ದೇನೆ. ಈ ಆತ್ಮಕಥೆಯ ನಾಯಕರಾಗಿರುವ ಪದ್ಮರಾಜ ದಂಡಾವತಿಯವರೂ ಇದೇ ಬೆಳಗಾವಿಯಲ್ಲಿ ʻಪ್ರಜಾವಾಣಿʼ ದಿನಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಒಂಬತ್ತು ವರ್ಷಗಳಷ್ಟು ದೀರ್ಘ ಕಾಲ ಕೆಲಸ ಮಾಡಿದ್ದಾರೆ. ಈ ಅವಧಿಯಲ್ಲಿ ಅವರೂ ಸಾವಿರಾರು ಘಟನೆಗಳನ್ನು ನೋಡುತ್ತ ವರದಿ ಬರೆದಿದ್ದಾರೆ.
ಈ ಹಿಂದೆ ಉಲ್ಲೇಖಿಸಿದ ಸಚಿವೆಯ ಪ್ರಸಂಗದಂಥ ಪ್ರಸಂಗಗಳು ನಡೆದಿರಲಿಲ್ಲವೆಂದಲ್ಲ; ಆ ರೀತಿಯ ಘಟನೆಗಳು ಬೆಳಗಾವಿಯಲ್ಲಿ ನಡೆದಿದ್ದುವು, ಬೆಂಗಳೂರಿನಲ್ಲಿಯೂ ನಡೆದಿದ್ದುವು. ಮುಖ್ಯಮಂತ್ರಿಗಳಾಗಿದ್ದ ಗುಂಡೂರಾವ್ ಅವರು ಪತ್ರಕರ್ತರನ್ನು ಅರಬ್ಬೀ ಸಮುದ್ರದಲ್ಲಿ ಬೀಸಿ ಮುಳುಗಿಸಬೇಕೆಂದಿದ್ದರು. ಸಂಕೇಶ್ವರದಲ್ಲಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾರ್ಯಕ್ರಮದ ವರದಿಗಾಗಿ ಹೋದಿದ್ದ ಬೆಳಗಾವಿಯ ಪತ್ರಕರ್ತರು ಕಾರ್ಯಕ್ರಮದ ನಂತರ ಊಟಕ್ಕೆ ಕುಳಿತಾಗ ಆಗ ಸಂಕೇಶ್ವರದ ಶಾಸಕರಾಗಿದ್ದ ಮಲ್ಲಾರಿಗೌಡ ಪಾಟೀಲರು ಅಲ್ಲಿ ಬಂದು ಊಟದ ತಟ್ಟೆಯ ಮೇಲಿನಿಂದ ಪತ್ರಕರ್ತರನ್ನು ಎಬ್ಬಿಸಿ ಹೊರಗೆ ಹಾಕಿಸಿದ್ದರು.
ಅಥಣಿಯ ಒಂದು ಕಾರ್ಯಕ್ರಮದಲ್ಲಿ ಆಗ ಸಚಿವರಾಗಿದ್ದ ಎ.ಬಿ. ಜಕನೂರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಚಪ್ಪಲಿ ತೋರಿಸಿ ಸ್ಟೇಜ್ ಮೇಲೆಯೇ ಹೊಡೆಯಲು ಹೋಗಿದ್ದುದನ್ನು ನಾನು ವರದಿ ಮಾಡಿದ್ದೆ. ಆ ಸಚಿವರು ಆ ರೀತಿಯ ಘಟನೆಯೇ ನಡೆದಿಲ್ಲವೆಂದು ಎರಡನೆಯ ದಿನ ಹೇಳಿಕೆ ನೀಡಿ ನನ್ನನ್ನು ಸುಳ್ಳು ಮಾಡಬೇಕೆಂದು ಪ್ರಯತ್ನಿಸಿದ್ದರು. ಚಪ್ಪಲಿಯನ್ನು ಅವರೆದುದು ಹಿಡಿದು ನಿಂತ ಕಾರ್ಯಕರ್ತನ ಫೋಟೊ ನನ್ನ ಹತ್ತಿರ ಇತ್ತು. ಎರಡನೆಯ ದಿನದ ಪತ್ರಿಕೆಯಲ್ಲಿ ಆ ಫೋಟೊ ಹಾಕಿ, ʼಬಹುಶಃ ಸಚಿವರು ಚಪ್ಪಲಿಯನ್ನು ಹೂವಿನ ಹಾರವೆಂದು ಭಾವಿಸಿರಬೇಕುʼ ಎಂದು ವ್ಯಂಗ್ಯವಾಗಿ ಸುದ್ದಿ ಪ್ರಕಟಿಸಿದ್ದೆವು. ಮುಂದೆ ಸಚಿವರು ಈ ಬಗ್ಗೆ ಏನೇನೂ ಪ್ರಸ್ತಾಪಿಸಲಿಲ್ಲ. ಅಲ್ಲಿಗೆ ಈ ಪ್ರಕರಣ ಅಂತ್ಯ ಕಂಡಿತು.
ಪತ್ರಕರ್ತನಾದವನ ಜೀವನದಲ್ಲಿ ಈ ರೀತಿಯ ಘಟನೆಗಳು ನಡೆಯುವುದು ಸಾಮಾನ್ಯ. ಅವನು ಪ್ರಾಮಾಣಿಕನಾಗಿದ್ದರೆ ತನ್ನ ವೃತ್ತಿಯ ಬಗ್ಗೆ ಘನತೆ-ಗೌರವಗಳನ್ನು ಹೊಂದಿದ್ದರೆ ಮತ್ತು ಯಾವುದೇ ಆಮಿಷ, ಲಾಲಸೆಗಳಿಗೆ ಬಲಿ ಬೀಳದಿದ್ದರೆ ಹರಿಹರ ಬ್ರಹ್ಮಾದಿಗಳೂ ಅವನನ್ನು ಅಲುಗಾಡಿಸಲು ಸಾಧ್ಯವಿಲ್ಲ. ಹೆಚ್ಚೇಕೆ ಪದ್ಮರಾಜ ದಂಡಾವತಿಯವರು ʻಪ್ರಜಾವಾಣಿʼ ವರದಿಗಾರರಾಗಿ ಬೆಳಗಾವಿಗೆ ಬಂದ ಆರಂಭದಲ್ಲಿ ಆಗ ಸವದತ್ತಿ ಮತಕ್ಷೇತ್ರದ ಮಾಜಿ ಶಾಸಕರಾಗಿದ್ದ ಜಿ.ಕೆ. ಟಕ್ಕೇದ್‌ರವರು ಪತ್ರಿಕಾ ಪರಿಷತ್ತಿನಲ್ಲಿ ತಮ್ಮ ಉಪಸ್ಥಿತಿಯನ್ನು ಅನವಶ್ಯಕವಾಗಿ ಅಲಕ್ಷಿಸಿದಾಗ ಸಿಡಿದೆದ್ದಿದ್ದನ್ನು ದಂಡಾವತಿಯವರು ಇಲ್ಲಿ ಉಲ್ಲೇಖಿಸಿದ್ದಾರೆ.
ಒಂದು ಜಿಲ್ಲೆಯಲ್ಲಿ ಒಬ್ಬ ಪತ್ರಕರ್ತ ಅಥವಾ ವರದಿಗಾರನೆಂದರೆ ಅವನೇ ಆ ಪತ್ರಿಕೆ ಎಂದರ್ಥ. ಅವನಿಗೆ ಮಹತ್ವ ಅಥವಾ ಗೌರವಗಳೇನಾದರೂ ಸಿಗುತ್ತಿದ್ದರೆ ಅದು ಆ ಪತ್ರಿಕೆಗೆ ಸಿಗುವ ಮಹತ್ವ ಅಥವಾ ಗೌರವವೆಂದೇ ಅರ್ಥ. ಯಾವ ವರದಿಗಾರನೂ ತನ್ನ ಪತ್ರಿಕೆಗೆ ಆಗುವ ಅವಮಾನವನ್ನು ಸಹಿಸಬಾರದು; ಅದು ಅವನು ತನ್ನ ಪತ್ರಿಕೆಗೆ ತೋರಿಸುವ ಕನಿಷ್ಠ ಗೌರವ. ಆದರೆ, ಇತ್ತೀಚೆಗೆ ತಾವು ಕೆಲಸ ಮಾಡುವ ಪತ್ರಿಕೆಗಳ ಬಗ್ಗೆಯೇ ಹೀನಾಯವಾಗಿ ಮಾತನಾಡುವ ಪತ್ರಕರ್ತರನ್ನು ಕಂಡು ನಾನು ʻಶಾಕ್ʼ ಆಗಿದ್ದೇನೆ. ʻಹೀಗೇಕೆ ಸಂಭವಿಸಿತು?ʼ ಎಂದು ದಿಙ್ಮೂಢನಾಗಿದ್ದೇನೆ!
ಪದ್ಮರಾಜ ದಂಡಾವತಿಯವರು ತಾವು ಆಕಸ್ಮಿವಾಗಿ ಪತ್ರಕರ್ತನಾದೆಯೆಂದು ಆರಂಭದಲ್ಲಿಯೇ ಹೇಳುತ್ತಾರೆ. ಕನ್ನಡ ಅಧ್ಯಾಪಕರಾಗಬೇಕಿದ್ದ, ಆ ಕೆಲಸಕ್ಕೆ ಎಲ್ಲ ರೀತಿಯ ಯೋಗ್ಯತೆಗಳಿದ್ದರೂ ಅದು ಸಾಧ್ಯವಾಗದ್ದರಿಂದ ತಾವು ಅನಿರೀಕ್ಷಿತವಾಗಿ ಪತ್ರಿಕಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಬೇಕಾಯಿತೆಂದು ಬರೆದಿದ್ದಾರೆ. ಆದರೆ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನನಗಿಂತ ಎರಡು ವರ್ಷ ಜೂನಿಯರ್ ಆಗಿದ್ದ ದಂಡಾವತಿಯವರು ಆಗಲೇ ಸಾಹಿತ್ಯದ ಬಗ್ಗೆ ಒಲವನ್ನು ಬೆಳೆಸಿಕೊಂಡಿದ್ದರು. ʻಶೂದ್ರʼ ಸಾಹಿತ್ಯಕ ಕಿರುಪತ್ರಿಕೆಯಲ್ಲಿ ಅನೇಕಾನೇಕ ಲೇಖನಗಳನ್ನು, ಪುಸ್ತಕ ವಿಮರ್ಶೆಗಳನ್ನು ಬರೆದು ಸಾಹಿತ್ಯ ವಲಯದಲ್ಲಿ ಗುರುತಿಸಲ್ಪಟ್ಟಿದ್ದರು. ಒಬ್ಬನಿಗೆ ಅಕ್ಷರಗಳ ಬಗ್ಗೆ ಮೋಹವಾಗಿದ್ದರೆ ಆತ ಸುಲಭವಾಗಿ ಪತ್ರಕರ್ತನಾಗಬಲ್ಲ. ಆದರೆ, ಪತ್ರಿಕಾ ಭಾಷೆಯೇ ಬೇರೆ; ಸಾಹಿತ್ಯದ ಭಾಷೆಯೇ ಬೇರೆ ಎಂಬುದನ್ನು ಆತ ಮನಗಂಡಿರಬೇಕು. ಸಾಹಿತ್ಯಕ ಹಿನ್ನೆಲೆಯು ಅವನ ಪತ್ರಿಕಾ ಕ್ಷೇತ್ರ ಪ್ರವೇಶಕ್ಕೆ ಚಿಮ್ಮು ಹಲಗೆಯಾಗಿರಬೇಕು. ಸಾಹಿತ್ಯ ನಿರ್ಮಿತಿಯಲ್ಲಿಯೂ ಅವನು ಅಕ್ಷರಗಳ ಜತೆಗೇ ಗುದ್ದಾಡಬೇಕು; ಪತ್ರಕರ್ತನಾದರೆ ಅಲ್ಲಿಯೂ ಅಕ್ಷರಗಳ ಜತೆಗೇ ಒಡನಾಡಬೇಕು. ಎರಡೂ ಕ್ಷೇತ್ರಗಳ ಪ್ರಸ್ತುತಿ ಬೇರೆ ಬೇರೆಯಾಗಿದ್ದರೂ ಅವುಗಳ ಅಂತಿಮ ಪರಿಣಾಮ ಅಕ್ಷರಗಳೇ ಆಗಿರುತ್ತವೆ.
ದಂಡಾವತಿಯವರು ಮೂಲತಃ ಮುದ್ದೇಬಿಹಾಳದವರಾದರೂ ತಂದೆ ತಾಯಿಯ ನಿಧನದ ನಂತರ ರಾಮದುರ್ಗದಲ್ಲಿದ್ದ ಅಕ್ಕನ ಆಶ್ರಯಕ್ಕೆ ಬರುತ್ತಾರೆ. ಅವರ ನಂತರದ ಕಾರ್ಯಕ್ಷೇತ್ರ ರಾಮದುರ್ಗವೇ ಆಗಿದೆ. ಅದೆಷ್ಟೋ ಜನರು ಅವರು ರಾಮದುರ್ಗದವರು ಎಂದೇ ಭಾವಿಸಿದ್ದಾರೆ. ಅಲ್ಲಿಂದ ಬೆಂಗಳೂರಿನ ʻಪ್ರಜಾವಾಣಿʼಯ ವರೆಗಿನ ಅವರ ಪ್ರಯಾಣ ಸುಲಭವಾಗಿರಲಿಲ್ಲ. ʻಪ್ರಜಾವಾಣಿʼ ಪತ್ರಿಕಾ ಬಳಗವನ್ನು ಸೇರಿದ ನಂತರ ಬೆಂಗಳೂರಿನಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿ ಅನಂತರ 1991 ರಲ್ಲಿ ಅವರು ಬೆಳಗಾವಿಗೆ ಜಿಲ್ಲಾ ವರದಿಗಾರರಾಗಿ ಬಂದರು. 1976 ರಲ್ಲಿಯೇ ನಾನು ʻಸಂಯುಕ್ತ ಕರ್ನಾಟಕʼದ ಜಿಲ್ಲಾ ವರದಿಗಾರನಾಗಿ ಬೆಳಗಾವಿಗೆ ಪದಾರ್ಪಣೆ ಮಾಡಿದ್ದೆ. ಅನಂತರ 1981 ರಲ್ಲಿ ʻಇಂಡಿಯನ್ ಎಕ್ಸ್‌ಪ್ರೆಸ್ʼ ಮತ್ತು ʻಕನ್ನಡಪ್ರಭʼ ಪತ್ರಿಕೆಗಳ ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಆಗ ಈಗಿನಂತೆ ದಂಡಿಯಾಗಿ ಪತ್ರಿಕೆಗಳು ಬರುತ್ತಿರಲಿಲ್ಲ. ಹುಬ್ಬಳ್ಳಿಯಿಂದ ಪ್ರಕಟವಾಗುವ ʻಸಂಯುಕ್ತ ಕರ್ನಾಟಕʼದ ಪ್ರಭಾವವು ಉತ್ತರ ಕರ್ನಾಟಕದಲ್ಲಿ ಗಾಢವಾಗಿ ಪಸರಿಸಿದ್ದಿತು. ಇದಕ್ಕೆ ಬೆಳಗಾವಿಯೂ ಹೊರತಾಗಿರಲಿಲ್ಲ. ಬೆಂಗಳೂರಿನಿಂದ ಪ್ರಕಟವಾಗುವ ʻಇಂಡಿಯನ್ ಎಕ್ಸ್‌ಪ್ರೆಸ್ʼ ʻಕನ್ನಡಪ್ರಭʼ ಪತ್ರಿಕೆಗಳು ಬೆಳಗಾವಿಗೆ ಮುಂಜಾನೆ 11 ಗಂಟೆಗೆ ಬರುತ್ತಿದ್ದರೆ ಹುಬ್ಬಳ್ಳಿಯಲ್ಲಿ ಪ್ರಕಟಣಾ ಕೇಂದ್ರವಿದ್ದ ʻಪ್ರಜಾವಾಣಿʼ, ʻಡೆಕ್ಕನ್ ಹೆರಾಲ್ಡ್ʼ ಪತ್ರಿಕೆಗಳು ಮುಂಜಾನೆ 8.30 – 9 ಗಂಟೆಗೆ ಬೆಳಗಾವಿ ತಲುಪುತ್ತಿದ್ದುವು. ಬೆಂಗಳೂರಿನಿಂದ ಪ್ರಕಟವಾಗುವ ʻಟೈಮ್ಸ್ ಆಫ್ ಇಂಡಿಯಾʼ, ಚೆನ್ನೈನಿಂದ ಬರುತ್ತಿದ್ದ ʻದಿ ಹಿಂದುʼ, ದಕ್ಷಿಣ ಕನ್ನಡದಿಂದ ಪ್ರಕಟವಾಗುವ ʻಉದಯವಾಣಿʼ ಪತ್ರಿಕೆಗಳು ಇಲ್ಲಿ ನಗಣ್ಯವಾಗಿದ್ದುವು.

ಆರಂಭದಲ್ಲಿ ʻಸಂಯುಕ್ತ ಕರ್ನಾಟಕʼಕ್ಕಾಗಿ ನಾನು ಸ್ಥಾಪಿಸಿಕೊಂಡಿದ್ದ ಪ್ರಭಾವವನ್ನು ಕನ್ನಡಪ್ರಭಕ್ಕಾಗಿ ನಾನೇ ಮುರಿದು ಹೊಸ ಪ್ರಭಾವವನ್ನು ನಾನೇ ಬೆಳೆಸಿಕೊಂಡಿದ್ದೆ. ಹಾಗೆ ನೋಡಿದರೆ ʻಪ್ರಜಾವಾಣಿʼ ಎದುರು ʻಕನ್ನಡಪ್ರಭʼ ಪತ್ರಿಕೆಯ ಪ್ರಭಾವ ಎರಡನೆಯ ಶ್ರೇಣಿಯದ್ದು. ಆದರೆ, ʻಪ್ರಜಾವಾಣಿʼಯ ಆ ಕಾಲದ ಬೆಳಗಾವಿಯ ವರದಿಗಾರರಾಗಿದ್ದ ಎನ್.ಜಿ. ಪಾಟೀಲರು ಆಲಸಿಗಳಲ್ಲಿಯೇ ಮಹಾ ಆಲಸಿಗಳಾಗಿದ್ದರು. ಎರಡು ದಿನಗಳಿಗೆ ಮೂರು ಪ್ಯಾರಾದ ಒಂದು ಸುದ್ದಿ ಕಳಿಸಿದರೆ ಅದೇ ಅವರ ದೊಡ್ಡ ಸಾಧನೆಯಾಗಿತ್ತು. ಮೂರು ಪ್ಯಾರಾದ ಸುದ್ದಿ ಕಳಿಸಲು ಅವರು ನಾಲ್ಕು ತಾಸು ತೆಗೆದುಕೊಳ್ಳುತ್ತಿದ್ದರು; ಐದು ಪಾಕೀಟು ಸಿಗರೇಟು ಸೇದುತ್ತಿದ್ದರು. ಕಳಿಸುವ ಪ್ರತಿ ಸುದ್ದಿಗೂ ಅವರು ಪೊಲೀಸರು ಅಥವಾ ಜಿಲ್ಲಾಧಿಕಾರಿಗಳ ಹೇಳಿಕೆ ಪಡೆಯುತ್ತಿದ್ದರು. ಇದ್ದಲಹೊಂಡದ ಹತ್ತಿರ ಸಂಭವಿಸಿದ ರೈಲು ದುರಂತದಲ್ಲಿ ಸತ್ತವರ ಬಗ್ಗೆ ಅವರು ಆಗ ಡಿಐಜಿಯಾಗಿದ್ದ ಚಂದೂಲಾಲ್ ಅವರ ಹೇಳಿಕೆಯನ್ನು ಪಡೆದುದನ್ನು ದಂಡಾವತಿಯವರು ಇಲ್ಲಿ ಪ್ರಸ್ತಾಪಿಸಿದ್ದಾರೆ.
1980 ರಲ್ಲಿ ಬೆಳಗಾವಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೂರು ದಿನಗಳ ಸಮಾರೋಪ ಸಮಾರಂಭದ ವರದಿಯನ್ನು, ʻಮೂರು ದಿನ ಕಾಲ ಇಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಶಾಂತ ರೀತಿಯಿಂದ ಮುಕ್ತಾಯಗೊಂಡಿತು ಎಂದು ಎಸ್.ಪಿ ಟಿ. ಮಡಿಯಾಳ ಅವರು ಹೇಳಿದ್ದಾರೆʼ ಎಂದು ಒಂದೇ ಒಂದು ಪ್ಯಾರಾದ ಸುದ್ದಿಯನ್ನು ಬರೆದಿದ್ದರು. ಚೋದ್ಯವೆಂದರೆ ಅದು ʻಪ್ರಜಾವಾಣಿʼಯಂಥ ಪತ್ರಿಕೆಯಲ್ಲಿ ಮುಖಪಟದಲ್ಲಿ ಪ್ರಕಟವಾಗಿದ್ದಿತು!
ಈ ಪ್ರಸಂಗವನ್ನು ಇಲ್ಲೇಕೆ ನಾನು ನೆನಪು ಮಾಡಿಕೊಳ್ಳುತ್ತಿದ್ದೇನೆಂದರೆ ಈ ರೀತಿಯ ಪ್ರತಿಸ್ಪರ್ಧಿ ನನಗಿದ್ದಾಗ ನಾನು ಸಹಜವಾಗಿ ಬೆಳಗಾವಿಯ ಪತ್ರಿಕಾರಂಗದಲ್ಲಿ ದಾದಾಗಿರಿ ಮಾಡುವುದು ಸುಲಭಸಾಧ್ಯವಾಗಿತ್ತು. ಆಗಿನ ಕಾಲದಲ್ಲಿ ನಾನು ಹೋಗುವವರೆಗೆ ಪತ್ರಿಕಾ ಪರಿಷತ್ತುಗಳೇ ಆರಂಭವಾಗುತ್ತಿರಲಿಲ್ಲ! ಇಲ್ಲಿ ʻನಾನುʼ ಎಂದರೆ ನನ್ನ ಪತ್ರಿಕೆ ಎಂದರ್ಥ. ʻಪ್ರಜಾವಾಣಿʼ ಮತ್ತು ʻಡೆಕ್ಕನ್ ಹೆರಾಲ್ಡ್ʼ ಪತ್ರಿಕೆಗಳು ಹುಬ್ಬಳ್ಳಿಯಿಂದ ಬರುತ್ತಿದ್ದರೂ ಬೆಂಗಳೂರಿನಿಂದ ಬರುತ್ತಿದ್ದ ʻಇಂಡಿಯನ್ ಎಕ್ಸ್‌ಪ್ರೆಸ್ʼ ಮತ್ತು ʻಕನ್ನಡಪ್ರಭʼ ಪತ್ರಿಕೆಗಳ ಎದುರು ಅವರು ಮಂಕಾಗಿರುವಂತೆ ಮಾಡುವಲ್ಲಿ ನಾನು ಯಶಸ್ವಿಯಾಗಿದ್ದೆ. ನಾನು ಅನ್ನುವುದಕ್ಕಿಂತ ಅವುಗಳ ಇಲ್ಲಿಯ ವರದಿಗಾರರೇ ಅದಕ್ಕೆ ಜವಾಬ್ದಾರರಾಗಿದ್ದರೆಂದು ಇಲ್ಲಿ ವಿನಮ್ರವಾಗಿ ಹೇಳಬಯಸುತ್ತೇನೆ.
ಈ ಕಡೆಯ ಈ ರೀತಿಯ ವಿಷಾದದ ಪರಿಸ್ಥಿತಿ ʻಪ್ರಜಾವಾಣಿʼಯ ಮಾಲೀಕರಿಗೆ ಗೊತ್ತಾಯಿತೇನೋ! 1991 ರಲ್ಲಿ ಪದ್ಮರಾಜ ದಂಡಾವತಿ ʻಪ್ರಜಾವಾಣಿʼಯ ವರದಿಗಾರರಾಗಿ ಬೆಳಗಾವಿಗೆ ಬಂದರು. ದಂಡಾವತಿಯವರ ಯೋಗ್ಯತೆ, ಕಾರ್ಯಕ್ಷಮತೆಯ ಅರಿವು ನನಗೆ ಮೊದಲೇ ಇದ್ದುದರಿಂದ ಅವರು ನನಗೆ ಯೋಗ್ಯ ಪ್ರತಿಸ್ಪರ್ಧಿಗಳಾಗುತ್ತಾರೆಂಬ ಸಂತೋಷವೂ ನನಗುಂಟಾಯಿತು. ವೀರನಾದವನು ತನ್ನಷ್ಟೇ ವೀರನ ಜತೆಗೆ ಕಾದಾಡಬೇಕು; ಅದು ಬಿಟ್ಟು ಶಿಖಂಡಿಯ ಜೊತೆಗೆ ಕಾದಾಡಿದರೆ ಅದು ಅವನ ವೀರತ್ವಕ್ಕೇ ಅವಮಾನ.
ದಂಡಾವತಿಯವರ ಪ್ರವೇಶದಿಂದಾಗಿ ಬೆಳಗಾವಿಯ ಪತ್ರಿಕಾ ಕ್ಷೇತ್ರದ ಇಕ್ವೇಶನ್‌ಗಳು ಬದಲಾಗಲಾರಂಭಿಸಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ನನಗೂ ಒಬ್ಬ ಯೋಗ್ಯ ಪ್ರತಿಸ್ಪರ್ಧಿ ಸಿಕ್ಕಂತಾಗಿತ್ತು. ಆಗ ನಾನು ʻಇಂಡಿಯನ್ ಎಕ್ಸ್‌ಪ್ರೆಸ್ʼ ಮತ್ತು ʻಕನ್ನಡಪ್ರಭʼಗಳಿಗಾಗಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರತ್ಯೇಕ ವರದಿಗಳನ್ನು ಬರೆಯಬೇಕಾಗಿತ್ತು. ದಂಡಾವತಿಯವರು ಕೂಡ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವರದಿ ಬರೆಯಲುತೊಡಗಿದರು. ಆಗಿನ್ನೂ ಎರಡೂ ಪತ್ರಿಕೆಗಳಿಗೆ ಒಬ್ಬರೇ ವರದಿಗಾರರು ಇರುತ್ತಿದ್ದರು. ನಾನಾಗಲೀ, ದಂಡಾವತಿಯವರಾಗಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದವರು. ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುವಾಗ ಇಂಗ್ಲಿಷ್ ನಮ್ಮ ಸನಿಹದಲ್ಲಿಯೂ ಹಾಯುತ್ತಿರಲಿಲ್ಲ. ಅಂಥದರಲ್ಲಿ ನಾವುಗಳು ನಾಡಿನ ಅತ್ಯಂತ ಪ್ರತಿಷ್ಠಿತ ಇಂಗ್ಲಿಷ್ ಪತ್ರಿಕೆಗೆ ವರದಿ, ವಿಶೇಷ ವರದಿ ಬರೆದುದರ ಹಿಂದೆ ನಾವು ಪಟ್ಟ ಅಪರಿಮಿತ ಶ್ರಮವಿದೆಯೆಂದು ಇಲ್ಲಿ ವಿನಮ್ರವಾಗಿ ಹೇಳುತ್ತಲೇ ಅದು ಸಾಧ್ಯ ಮಾಡಿಕೊಂಡೆವು ಎಂಬ ಸೊಕ್ಕು ನನಗಂತೂ ಇದೆ!
ದಂಡಾವತಿಯವರಿಗೆ ಬೆಳಗಾವಿಯ ಪರಿಸ್ಥಿತಿ ಬಲುಬೇಗ ಅರ್ಥವಾಗಿರಬೇಕು. ʻಪ್ರಜಾವಾಣಿʼಯಲ್ಲಿಯ ದಿನನಿತ್ಯ ಅನೇಕಾನೇಕ ಸುದ್ದಿಗಳು, ವಿಶೇಷ ಲೇಖನಗಳು ಪ್ರಕಟಗೊಳ್ಳಲಾರಂಭಿಸಿದುವು. ನಮ್ಮಿಬ್ಬರಲ್ಲಿ ಅತ್ಯಂತ ಆರೋಗ್ಯಪೂರ್ಣ ಸ್ಪರ್ಧೆ ಇತ್ತು. ಅವರು ಏನು ಬರೆಯುತ್ತಾರೆ ಎಂದು ನಾನೂ, ನಾನು ಏನು ಬರೆಯುತ್ತೇನೆಂದು ಅವರೂ ಸತತವಾಗಿ ಗಮನಿಸುತ್ತಿದ್ದೆವು ಅಥವಾ ಪರಸ್ಪರರ ವರದಿಗಳಿಗಾಗಿ ಕಾಯುತ್ತಿದ್ದೆವು. ಅವರು ಇಲ್ಲಿ ಇದ್ದಾಗಲೇ ನಾವು ʻಇಂಡಿಯನ್ ಎಕ್ಸ್‌ಪ್ರೆಸ್ʼ ಮತ್ತು ʻಕನ್ನಡ ಪ್ರಭʼ ಪತ್ರಿಕೆಗಳ ಬೆಳಗಾವಿ ಆವೃತ್ತಿಗಳನ್ನು ಆರಂಭಿಸಿದೆವು.
ನಾವು ಕೆಲಸ ಮಾಡುವಾಗ ಈಗ ಇದ್ದಷ್ಟು ಯಾವ ಸೌಲಭ್ಯ, ಸೌಕರ್ಯಗಳು ಇರಲಿಲ್ಲ. ಹಗಲೂ ರಾತ್ರಿ ದುಡಿಯಬೇಕಾಗಿತ್ತು. ವೈಯಕ್ತಿಕ ಅಥವಾ ಸಾಂಸಾರಿಕ ತಾಪತ್ರಯಗಳ ಕಡೆಗೆ ಲಕ್ಷ್ಯ ನೀಡಲು ಆಗುತ್ತಲೇ ಇರಲಿಲ್ಲ. ಬರೀ ಕೆಲಸ…ಕೆಲಸ… ಕೆಲಸ. ಪತ್ರಿಕೆ… ಪತ್ರಿಕೆ…ಪತ್ರಿಕೆ. ಈ ರೀತಿಯಾಗಿ ಎಲ್ಲರೂ ದುಡಿಯುತ್ತಿದ್ದರೆಂದು ನಾನು ಹೇಳುವುದಿಲ್ಲ. ಎನ್.ಜಿ. ಪಾಟೀಲರಂಥ ವರದಿಗಾರರ ಉದಾಹರಣೆಗಳು ನಮ್ಮ ಕಣ್ಣ ಎದುರಿಗೆ ಇದ್ದರೂ ನಾವೇಕೆ ಹಾಗೆ ಅವಿಶ್ರಾಂತವಾಗಿ ದುಡಿದೆವು ಎಂದು ಕೇಳಿಕೊಂಡರೆ ಅದಕ್ಕೆ ಉತ್ತರ ಸಿಗುವುದಿಲ್ಲ. ಎರಡೆರಡು ಭಾಷೆಯ ಪತ್ರಿಕೆಗಳಿಗೆ ವರದಿಗಾರರಾಗಿದ್ದರೂ ನಮಗೆ ಸಿಗುತ್ತಿದ್ದುದು ಒಂದೇ ಪತ್ರಿಕೆಯ ಸಂಬಳ. ಆದರೆ, ಅವಿರತವಾದ ಈ ದುಡಿಮೆಯಿಂದಾಗಿ ನಮ್ಮ ಆತ್ಮಸ್ಥೈರ್ಯ ಬೆಳೆಯಿತು. ಈಗಲೂ ನಾನಾಗಲೀ ಅಥವಾ ಪದ್ಮರಾಜ ದಂಡಾವತಿಯವರಾಗಲೀ ಬಲಗೈಯಿಂದ ಕನ್ನಡವನ್ನೂ ಎಡಗೈಯಿಂದ ಇಂಗ್ಲಿಷ್ ಅನ್ನೂ ಸಹಜವಾಗಿ ತಪ್ಪಿಲ್ಲದೆ ಸುಂದರವಾಗಿ ಬರೆಯಬಲ್ಲೆವು; ನಾವು ಸವ್ಯಸಾಚಿಗಳಾಗಿದ್ದೆವು ಎಂಬ ಹೆಮ್ಮೆ ನನಗಿದೆ.
ಬೆಳಗಾವಿಯಲ್ಲಿ ನಡೆದ ಕೋಮುಗಲಭೆ, ಕನ್ನಡ ಮರಾಠಿ ದಾಂಧಲೆಗಳ ಬಗ್ಗೆ ದಂಡಾವತಿಯವರು ಇಲ್ಲಿ ವಿಶದವಾಗಿ ಪ್ರಸ್ತಾಪಿಸಿದ್ದಾರೆ. ಅವರ ನೆನಪಿನ ಶಕ್ತಿ ಅಗಾಧವಾದುದು. ಅದನ್ನು ಅವರ ಬರವಣಿಗೆಯಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಘಟನೆ ನಡೆದ ದಿನಾಂಕ, ವೇಳೆ ಸಹಿತವಾಗಿ ಪ್ರಸಂಗಗಳನ್ನು ಅವರು ಇಲ್ಲಿ ನಿರೂಪಿಸಿದ್ದಾರೆ. ಬೆಳಗಾವಿಯ ಮೇಯರ್ ಖುರ್ಚಿಯ ಮೇಲೆ ಕನ್ನಡಿಗರೊಬ್ಬರು ಕುಳಿತುದಕ್ಕೆ ನಾವಿಬ್ಬರೂ ಸಾಕ್ಷಿಗಳು.
ಬೆಳಗಾವಿಯಿಂದ ಬೆಂಗಳೂರಿಗೆ ವಾಪಸು ಹೋದ ದಂಡಾವತಿಯವರ ಅದೃಷ್ಟದ ಬಾಗಿಲು ತೆರೆಯಿತೆಂದೇ ಹೇಳಬೇಕು. ಅನಂತರದ ದಿನಗಳಲ್ಲಿ ʻಪ್ರಜಾವಾಣಿʼಯ ಸಂಪಾದಕರ ಸ್ಥಾನದ ವರೆಗೆ ಅವರು ಸಹಜವಾಗಿ ನಡೆದುಕೊಂಡು ಹೋದರು.
ʻಪ್ರಜಾವಾಣಿʼಯ ಸಂಪಾದಕರ ಸ್ಥಾನ ಸಾಮಾನ್ಯ ಸ್ಥಾನವಲ್ಲ. ಸರ್ಕಾರವನ್ನು ಬೀಳಿಸುವ, ಸರ್ಕಾರಗಳನ್ನು ರಚಿಸುವ, ನಾಡಿನ ನಕಾಶೆಯನ್ನೇ ಬದಲಿಸುವ ಶಕ್ತಿ ಆ ಸ್ಥಾನಕ್ಕಿದೆ. ಸಹಜವಾಗಿಯೇ ಅದು ನಾಡಿನ ವಿವಿಧ ಕ್ಷೇತ್ರಗಳ ಶಕ್ತಿ ಕೇಂದ್ರವೂ ಹೌದು. ಆ ಖುರ್ಚಿಯ ಮೇಲೆ ಕುಳಿತ ವ್ಯಕ್ತಿ ಹಗುರವಾಗಿದ್ದರೆ ತಾನೂ ಹಾಳಾಗಿ ಹೋಗುತ್ತಾನೆ; ಪತ್ರಿಕೆಯನ್ನೂ ಹಾಳು ಮಾಡುತ್ತಾನೆ. ಜೊತೆಗೆ ನಾಡಿನ ನೆಮ್ಮದಿಯನ್ನೂ ಕೆಡಿಸುತ್ತಾನೆ. ಆ ಖುರ್ಚಿಗೆ ಆಸೆ ಆಮಿಷಗಳನ್ನು ಅಂಟಿಸಿ ಅದನ್ನು ತಮ್ಮ ಪರವಾಗಿ ತಿರುಗಿಸಿಕೊಳ್ಳಲು ಅನೇಕ ಶಕ್ತಿಗಳು ಧಡಪಡಿಸುತ್ತಿರುತ್ತವೆ. ಆದರೆ, ದಂಡಾವತಿಯವರು ಅಂತಹ ಯಾವುದೇ ಆಮಿಷಗಳಿಗೆ ಬಲಿಯಾಗದೇ ʻಸುಖರೂಪವಾಗಿʼ ಮತ್ತು ಗೌರವಯುತವಾಗಿ ಆ ಖುರ್ಚಿಯಿಂದ ನಿವೃತ್ತರಾದರು.
ನೂರಾರು ಜನರು ಕೆಲಸ ಮಾಡುವ ಒಂದು ಸಂಸ್ಥೆಯೆಂದರೆ ಅದರಲ್ಲಿ ಜಗಳ, ವಿರಸ, ಭಿನ್ನಾಭಿಪ್ರಾಯ, ಹೊಟ್ಟೆಕಿಚ್ಚು, ಸಂಚು, ಒಳಸಂಚು, ಚಾಡಿ ಮಾತು, ಗಾಸಿಪ್‌ಗಳು, ಪ್ರಶಂಸೆ ಎಲ್ಲವೂ ಇರುತ್ತವೆ. ಪತ್ರಿಕಾಲಯವೆಂದರೆ ಬುದ್ಧಿಜೀವಿಗಳ ಒಂದು ಕೂಟವಿದ್ದಂತೆ. ಸಾಮಾನ್ಯವಾಗಿ ಇಬ್ಬರು ಬುದ್ಧಿಜೀವಿಗಳು ಸೇರಿದರೆ ಅಲ್ಲಿ ಮೂರು ಬೇರೆ ಬೇರೆ ರೀತಿಯ ಅಭಿಪ್ರಾಯಗಳು ಹುಟ್ಟುತ್ತವೆ. ʻಪ್ರಜಾವಾಣಿ’ಯಲ್ಲಿ ಈ ರೀತಿಯ ಪ್ರಸಂಗಗಳು ಹುಟ್ಟಿದಾಗ ದಂಡಾವತಿಯವರು ಅವುಗಳನ್ನು ಬಲು ಸಮರ್ಥವಾಗಿ ಎದುರಿಸಿದರು. ಯಾರ ಮೇಲೂ ದ್ವೇಷದ ಭಾವನೆಯನ್ನು ಇಟ್ಟುಕೊಳ್ಳದೆಯೇ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಿದೆಯೆಂದು ಅವರು ನಮೂದಿಸಿದ್ದಾರೆ.ಇವರ ಭಾವನೆಯನ್ನು ಅರ್ಥ ಮಾಡಿಕೊಳ್ಳದೆಯೇ ದ್ವೇಷ ಸಾಧಿಸಿದವರ ಬಗ್ಗೆ ಕನಿಕರವನ್ನು ವ್ಯಕ್ತಪಡಿಸಿದ್ದಾರೆ!
ಒಟ್ಟು 26 ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ಆತ್ಮಕಥನದ ಮೊದಲನೆಯ ಅಧ್ಯಾಯದ ಲಿಮಿಟೆಡ್ ಪುಟಗಳನ್ನು ಬಿಟ್ಟರೆ ಉಳಿದ 25 ಅಧ್ಯಾಯಗಳು ಬರೀ ʻಪ್ರಜಾವಾಣಿ’ಗೆ ಸಂಬಂಧಿಸಿದ ಅಧ್ಯಾಯಗಳಾಗಿವೆ. ಒಂದರ್ಥದಲ್ಲಿ ಇದು ಪದ್ಮರಾಜ ದಂಡಾವತಿಯವರ ಆತ್ಮಕಥನವಾಗಿರದೆ ʻಪ್ರಜಾವಾಣಿʼ ಪತ್ರಿಕೆಯ ಆತ್ಮಕಥನವಾಗಿದೆ! ಇದನ್ನು ನೋಡಿದರೆ ದಂಡಾವತಿಯವರು ವೈಯಕ್ತಿಕ ಆಯುಷ್ಯವನ್ನು ಬದುಕಿದರೋ ಎಲ್ಲವೋ ಎಂಬ ಸಂಶಯ ಉಂಟಾಗುತ್ತದೆ. ತನ್ನ ವೃತ್ತಿಯನ್ನು ಮನಸ್ಸಿಗೆ ಮತ್ತು ಹೃದಯಕ್ಕೆ ಹಚ್ಚಿಕೊಂಡ ಎಲ್ಲ ವ್ಯಕ್ತಿಗಳ ಪಾಡು ಇದೇ ಆಗಿದೆ. ಆ ರೀತಿಯ ಕಮಿಟ್‌ಮೆಂಟ್ ಈಗಿನ ಪೀಳಿಗೆಯವರಲ್ಲಿ ಕಾಣುವುದು ಅಸಾಧ್ಯ. ಈಗಿನ ಪೀಳಿಗೆಯವರಿಗೆ ಆ ರೀತಿಯ ವಾತಾವರಣ ಔಟ್‌ಡೇಟೆಡ್ ಆಗಿರುವುದರಿಂದ ಆ ಬಗ್ಗೆ ಚರ್ಚಿಸುವುದೂ ತಪ್ಪೆಂದು ಅನಿಸುತ್ತದೆ.
ಆದರೆ, ಪದ್ಮರಾಜ ದಂಡಾವತಿಯವರು ಬರೀ ಪತ್ರಕರ್ತರಾಗಿರಲಿಲ್ಲ. ಅವರಲ್ಲಿ ಒಬ್ಬ ಸೃಜನಶೀಲ ಬರಹಗಾರನಿದ್ದಾನೆ; ಸಮರ್ಥ ಅನುವಾದಕನಿದ್ದಾನೆ. ಹೊಸ ಹೊಸ ಪುಸ್ತಕಗಳನ್ನು ವಿಮರ್ಶಿಸುವ ಒಬ್ಬ ಸಮೀಕ್ಷಕನಿದ್ದಾನೆ. ಸುತ್ತಲೂ ನಡೆಯುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅವುಗಳನ್ನು ಲೇಖನಗಳನ್ನಾಗಿಸುವ ಒಬ್ಬ ಲೇಖಕ ಅವಿತುಕೊಂಡಿದ್ದಾನೆ. ಸುಲಲಿತ ಶೈಲಿಯ ಲಲಿತ ಪ್ರಬಂಧಗಳನ್ನು ಬರೆಯುವ ಒಬ್ಬ ಪ್ರಬಂಧಕಾರನಿದ್ದಾನೆ. ಆದರೆ, ಅವರ ಈ ಆತ್ಮಕಥೆಯಲ್ಲಿ ಈ ಯಾವ ಅಂಶಗಳೂ ಪ್ರಸ್ತಾಪವಾಗಿಲ್ಲ. ಒಬ್ಬ ನಿಷ್ಠಾವಂತ ಪತ್ರಕರ್ತನಿಗೆ ತನ್ನ ಕೆಲಸ, ಪತ್ರಿಕೆ ಬಹಳ ಮುಖ್ಯ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಜೊತೆ ಜೊತೆಗೆ ಸಾಧಿಸಿದ ಸಾಧನೆಗಳನ್ನು ಈ ಆತ್ಮಕಥನದಲ್ಲಿ ಪ್ರಸ್ತಾಪಿಸಿದ್ದರೆ ಅದು ಪರಿಪೂರ್ಣವಾಗಿರುತ್ತಿತ್ತು ಎಂದು ನನ್ನ ಅಭಿಪ್ರಾಯವಾಗಿದೆ.

ದಂಡಾವತಿಯವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಿದ ʻಸೀತಾ ರಾಮಾಯಣ : ಸಚಿತ್ರ ಮರುಕಥನʼ ಎಂಬ ಬೃಹತ್ ಗ್ರಂಥವು ಕೇಂದ್ರ ಸಾಹಿತ್ಯ ಅಕಾದೆಮಿಯ ಅನುವಾದ ಪ್ರಶಸ್ತಿಗೆ ಭಾಜನವಾಯಿತು. ಮೂಲದಲ್ಲಿ ದೇವದತ್ತ ಪಟ್ಟನಾಯಕರು ಬರೆದ ಈ ಗ್ರಂಥ ಅತ್ಯಂತ ಕಠಿಣ ಮತ್ತು ಗಡುಸಾದ ಇಂಗ್ಲಿಷಿನಿಂದ ಕೂಡಿದ ಕೃತಿ. ಇದನ್ನು ಅನುವಾದಿಸಲು ಎಂಟೆದೆಯೇ ಬೇಕು. ದಂಡಾವತಿಯವರು ಅಸಾಧ್ಯದ ಈ ಶಿವಧನುಸ್ಸನ್ನು ಎತ್ತಿ ಅದನ್ನು ಅತ್ಯಂತ ಸುಂದರ ಸಹಜ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದರು. ಈ ಅನುವಾದದ ಹಿಂದೆ ಅವರು ಪಟ್ಟ ಶ್ರಮವನ್ನು ಒಬ್ಬ ಅನುವಾದಕನಾಗಿ ನಾನು ಊಹಿಸಬಲ್ಲೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾದೆಮಿಯ ಪ್ರಶಸ್ತಿ ಬಂದುದು ಕನ್ನಡದ ಅನುವಾದ ಕ್ಷೇತ್ರಕ್ಕೇ ಸಿಕ್ಕ ಗೌರವವಾಗಿತ್ತು. ಆದರೆ, ದಂಡಾವತಿಯವರ ಆತ್ಮಕಥನದಲ್ಲಿ ʻಪ್ರಜಾವಾಣಿʼಯ ಆತ್ಮ ಬಿಟ್ಟರೆ ಈ ರೀತಿಯ ಸಾಧನೆಗಳ ಉಲ್ಲೇಖವೇ ಬರುವುದಿಲ್ಲ. ಬಹರೇನ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಕನ್ನಡ ಲೇಖಕರ ಸಮ್ಮೇಳನದಲ್ಲಿ ನಾನೂ ಅವರು ಭಾಗವಹಿಸಿದ್ದೆವು. ಅಲ್ಲಿ ದಂಡಾವತಿಯವರು ಕನ್ನಡ ಸಾಹಿತ್ಯದ ಇತ್ತೀಚಿನ ಒಲವುಗಳು ಎಂಬ ವಿಚಾರ ಸಂಕಿರಣದ ಅಧ್ಯಕ್ಷೀಯ ಭಾಷಣ ಮಾಡಿದರು. ಅವರ ಭಾಷಣ ಒಂದು ಸಂಶೋಧನಾತ್ಮಕ ಪ್ರಬಂಧವಿದ್ದಂತೆ ಇತ್ತು. ಇಂಥ ವಿಷಯಗಳು ಇಲ್ಲಿ ಇಲ್ಲ.
ಪತ್ರಕರ್ತರಿಗೆ ವೃತ್ತಿ ಸಂಬಂಧವಾಗಿ ಅವಶ್ಯಕವಾಗಿ ಬೇಕಾಗಿರುವ ಅನೇಕ ಕೃತಿಗಳನ್ನು ದಂಡಾವತಿಯವರು ಬರೆದಿದ್ದಾರೆ. ಕನ್ನಡ ಪತ್ರಿಕೋದ್ಯಮ ಇತಿಹಾಸದಲ್ಲಿ ಇವುಗಳು ಅಪೂರ್ವವಾದ ಪುಸ್ತಕಗಳು. ಹೊಸದಾಗಿ ಪತ್ರಿಕಾವೃತ್ತಿಗೆ ಸೇರಬಯಸುವ ಯುವಕರಿಗೆ ಒಂದು ರೀತಿಯಲ್ಲಿ ಅವರ ಈ ಕೃತಿಗಳು ಬೈಬಲ್‌ಗಳಾಗಿವೆ. ನಮಗೆಲ್ಲ ಗೊತ್ತಿರುವ ಹಾಗೆ ಅವರು ಒಬ್ಬ ಸಮರ್ಥ ಅಂಕಣಕಾರನೂ ಹೌದು. ಪ್ರತಿ ಭಾನುವಾರ ಅವರು ಬರೆಯುತ್ತಿದ್ದ ʻನಾಲ್ಕನೇ ಆಯಾಮ’ ಅಂಕಣ ಕನ್ನಡದ ಅತ್ಯಂತ ಜನಪ್ರಿಯ ಅಂಕಣಗಳಲ್ಲಿ ಒಂದು ಎನಿಸಿತ್ತು. ಅವರ ಈ ಆತ್ಮಕಥನವೂ ಪತ್ರಿಕಾಕ್ಷೇತ್ರದಲ್ಲಿ ಇರುವವರೆಲ್ಲರೂ ಅವಶ್ಯವಾಗಿ ಒಂದು ಸಲ ಅವಲೋಕಿಸಲೇಬೇಕೆಂಬ ಕಂಟೆಂಟ್ ಅನ್ನು ಹೊಂದಿದೆ.
ಎಲ್ಲಿಯೂ ಸ್ವಯಂ ಸಂಭ್ರಮಿಸದೇ, ಎಲ್ಲಿಯೂ ಸ್ವಕುಚಮರ್ದನ ಮಾಡಿಕೊಂಡು ತನ್ನನ್ನು ತಾನು ಉಘೇ ಉಘೇ ಮಾಡಿಕೊಳ್ಳದೆಯೇ ಅವರ ಆತ್ಮಕಥನ ಶಾಂತವಾಗಿ ಹರಿಯುವ ನದಿಯಂತೆ ಭಾಸವಾಗುತ್ತದೆ. ಅನೇಕರು ತಾವು ಬರೆದ ಅತ್ಮಕಥೆಯಲ್ಲಿ ತಮ್ಮನ್ನು ಇಂದ್ರ, ಚಂದ್ರ, ದೇವೇಂದ್ರನೆಂದು ನಿರ್ಲಜ್ಜವಾಗಿ ತಾವು ತಾವೇ ಹೊಗಳಿಕೊಂಡಿದ್ದಾರೆ. ʻಪ್ರಜಾವಾಣಿʼಯಂತಹ ಪತ್ರಿಕೆಯ ಸಂಪಾದಕನ ಖುರ್ಚಿಯ ಮೇಲೆ ಕುಳಿತಿದ್ದ ದಂಡಾವತಿಯವರಿಗೆ ಸಂಭ್ರಮಿಸುವ, ಸೊಕ್ಕು ತೋರಿಸುವ ಅಥವಾ ಮದೋನ್ಮತ್ತರಾಗುವ ಅನೇಕ ಅವಕಾಶಗಳು ಲಭಿಸಿರಲು ಸಾಕು. ಆದರೆ, ಅಂತಹ ಪ್ರಸಂಗಗಳಿಗೆ ಸಂಪೂರ್ಣ ಕುರುಡುತನ ತೋರಿಸುವ ಪದ್ಮರಾಜ ದಂಡಾವತಿಯವರ ಈ ಕೃತಿ ಪ್ರಾಮಾಣಿಕ ಪತ್ರಕರ್ತನೊಬ್ಬನು ಸಮಾಜಕ್ಕೆ ಸಲ್ಲಿಸಿದ ಒಂದು ಅಫಿಡವಿಟ್ ಆಗಿದೆ.






0 Comments