ಕೃಷ್ಣ ನಾಯಕ
ತೇಜಸ್ವಿಯವರ ಬರವಣಿಗೆಗಳೆಂದರೇ ಹಾಗೆಯೇ ಎಲ್ಲರಿಗೂ ಒಂದೊಂದು ಮಾಯಾಲೋಕವನ್ನು ತೋರಿಸುತ್ತವೆ. ಸುಖಾಸುಮ್ಮನೇ ಎಂಜಿನಿಯರಿಂಗೋ ಅಥವಾ ಮೆಡಿಕಲ್ಲೋ ಮಾಡಿ ಹಾಳಾಗಿ ಹೋಗುತ್ತಿದ್ದ ನನ್ನ ಜೀವನವನ್ನು ತೇಜಸ್ವಿಯವರ ಬರವಣಿಗೆಗಳು ಮತ್ತು ಜೀವನಶೈಲಿ ಮೂಲವಿಜ್ಞಾನದ ಕಡೆಗೆ ಆಕಷರ್ಿಸಿದವು. ಅದರಲ್ಲೂ ದ್ವೀತಿಯ ಪಿಯುಸಿಯಲ್ಲಿ ಹಾಜರಾದ ಒಟ್ಟು ಹದಿನೆಂಟು ದಿನಗಳೂ ಮತ್ತು ಟ್ರಿಗನಾಮೆಟ್ರಿಯ ತೀಟಾಗಳ ತಂಟೆಗೆ ಹೋಗದೇ ಪಾಸು ಮಾಡಿಕೊಂಡು ಬಂದ ಗಣಿತವು ಸೇರಿ ನನ್ನನ್ನು ಜೀವವಿಜ್ಞಾನದ ಕಡೆಗೆ ನಿರಾಯಾಸಯಾಗಿ ಎತ್ತಿಹಾಕಿದವು. ಗತಿ ಇಲ್ಲದೇ ಜೀವವಿಜ್ಞಾನದ ನಿರ್ಜೀವ ಸ್ಪೆಸಿಮನ್”ಗಳ ಜೊತೆ ಗುದ್ದಾಡಿ ಹೇಗೋ ಡಿಗ್ರಿ ಪಾಸುಮಾಡಿ ಸೀದಾ ಬಂದಿದ್ದು ಸಸ್ಯಶಾಸ್ತ್ರದ ಬಾಗಿಲಿಗೆ., ಹಾಗಂತ ಸಸ್ಯಶಾಸ್ತ್ರದಲ್ಲೆ ಅಮೋಘವಾದದನ್ನೋ, ಅಮೂಲ್ಯವಾದದನ್ನೋ ಸಾಧಿಸುವ ಆಸೆಯಿಂದಲ್ಲ. ಬದಲಾಗಿ ಹಿಂತಿರುಗಿ ನೋಡುವುದರೊಳಗಾಗಿ ಮಂಗಮಾಯವಾಗುವ ಪ್ರಾಣಿಗಳ ಸಹವಾಸಕ್ಕಿಂತ ನಿಂತಲ್ಲೇ ನಿಂತಿರುವ ಸಸ್ಯಗಳೇ ಲೇಸೆಂದು! ಆದರೆ ಕೆಲವೊಮ್ಮೆ ಕೆದಕಿದಷ್ಟೂ ಆಳವಾಗುವ ಸಸ್ಯಗಳ ಬೇರಿನ ಬದಲು ಒಂದೊಂದು ಜೊತೆ ಕೈ-ಕಾಲು, ಒಂದು ತಲೆ ಮತ್ತು ಒಂದೇ ಬಾಲವಿರುವ ಪ್ರಾಣಿಗಳೇ ಪಾಡೆಂದು ಅನ್ನಿಸಿದ್ದು ಉಂಟು…
ನಮ್ಮ ಸಸ್ಯವಿಜ್ಞಾನದಲ್ಲಿ ವಿಚಿತ್ರಗಳಿಗೇನೂ ಕೊರತೆ ಇಲ್ಲ. ಎಲ್ಲ ಮರ-ಗಿಡಗಳು ಮಂತ್ರದಂಡ ಹಿಡಿದ ಯಕ್ಷಿಣಿಯರಂತೆ ಕಾಣುತ್ತವೆ. ಮೊದಮೊದಲು ಎಲ್ಲವು ವಿಸ್ಮಯಗಳಂತೆ ಕಾಣಿಸುತ್ತಿದ್ದವು, ಅದರಲ್ಲೂ ನಮ್ಮ ಗೆಳೆಯ ನವೀನನಿಗಂತೂ ಮೊದಲ ಸೆಮಿಸ್ಟರ್ ನುದ್ದಕ್ಕೂ ಕಾಡಿದ ಒಂದೇಒಂದು ಚಿಂತೆ ಎಂದರೆ ಶೇಂಗಾ ಗಿಡದ ಹೂಗಳು ಗಿಡದಲ್ಲಾದರೂ ಅದರ ಬೀಜ(ಹಣ್ಣು)ಗಳು ಮಾತ್ರ ಹೇಗೆ ಬೇರನ್ನು ತಲುಪುತ್ತವೆಂಬುದು?!!!. ಮೇಲುನೋಟಕ್ಕೆ ಅವನ ಚಿಂತೆಯನ್ನು ನಾವ್ಯಾರೂ ತಲೆಗೆ ಹಾಕಿಕೊಳ್ಳದಿದ್ದರು ಸಹ ಅದೊಂದು ಮಾಯಾಪ್ರಶ್ನೆಯಂತೆ ಉಳಿದಿದ್ದಂತು ನಿಜ.

ನಾವೆಲ್ಲರೂ ಯುನಿವರ್ಸಿಟಿಯ ನಿಯಾಮಳಿಗಳನ್ನು ಚಾಚು ತಪ್ಪದೆ ಪಾಲಿಸುವವರು. ನಮ್ಮ ಶಿಕ್ಷಕರು ಇವತ್ತು ಫೀಲ್ಡ್ ಸ್ಟಡಿ ಇದೆ ಎಂದಾಗ ಮಾತ್ರ ಬಾಟನಿ ಗಾರ್ಡನ್ ಕಡೆಗೆ ಹೆಜ್ಜೆಹಾಕುತ್ತಿದ್ದೆವು. ಉಳಿದಂತೆ ಅದೊಂದು ನಮಗೆ ಆಪ್ತಮಿತ್ರ ಚಿತ್ರದ ನಾಗವಲ್ಲಿ ರೂಮಿನ ಹಾಗೇಯೇ ಒಳಹೋದರೆ ಸಮಸ್ಯೆ ಖಂಡಿತ ಎಂದುಕೊಂಡು ಸುಮ್ಮನಾಗುತಿದ್ದೆವು. ಅಂತಯೇ ಒಂದು ದಿನ ಫೀಲ್ದ್ ಸ್ಟಡಿಗೆ ಹೋದಾಗ ನಮ್ಮ ಶಿಕ್ಞಕರ ಮುಂದೆ ನವೀನನು ಅವನ ಮಾಯಾಪ್ರಶ್ನೆಯನ್ನಿಟ್ಟನು. ಆಗ ಸರ್ ಅದೊಂದು ಸೃಷ್ಟಿಯ ವೈಚಿತ್ರವೆಂದೂ, ಶೇಂಗಾ ಗಿಡದ ಹೂ ಪರಾಗಸ್ಪರ್ಶವಾದೊಡನೆ ಅದರಲ್ಲಿರುವ ಜೀವಾಣು (ದಥಿರಠಣಜ )ನ್ನು ಸೀದಾ ಬೇರಿನೆಡೆಗೆ ರವಾನಿಸುತ್ತದೆ ಮತ್ತು ಅದು ಅಲ್ಲಿಯೇ ಬೆಳೆದು ಹಣ್ಣಾಗುತ್ತದೆ ಎಂದರು.ಅಂದರೆ ಮೇಲುನೋಟಕ್ಕೆ ಹೂ ಮೇಲಾದರೂ ಹಣ್ಣಾಗುವುದೆಲ್ಲಾ ಬೇರಿನಡಿಯಲ್ಲೆ ಎಂದು ಬಿಡಿಸಿ ಹೇಳಿದರು,ಆಗ ನಾವೆಲ್ಲರೂ ದೊಡ್ಡ ನಿಧಿಯ ರಹಸ್ಯ ಬಯಲಾಯಿತೆಂಬ ಉತ್ಸಾಹದಲ್ಲಿದ್ದೆವು. ನವೀನನಂತು ಅವನ ಶತಮಾನದ ಸಮಸ್ಯಗೆ ಪರಿಹಾರ ದೊರೆತದು ಖುಷಿಯ ಸಂಗತಿಯಾಗಿದ್ದಿತು.
ಹೀಗೆಯೇ ಅದೇನು ಇದೇನು ಎಂದು ಕೇಳುವ ಉತ್ಸಾಹದಲ್ಲಿಯೇ ಮೊದಲ ಸೆಮಿಸ್ಟರ್ ಮುಗಿಸಿದ್ದು ಗೊತ್ತೆಆಗಲಿಲ್ಲ.ಮೊನ್ನ ಎರಡನೇ ಸೆಮಿಸ್ಟರ್ನ ಮೊದಲ ಇಂಟರ್ನಲ್ಗಳನ್ನು ಬರೆದು ಊರಿಗೆ ಹೋದವನಿಗೆ ಅಲ್ಲಿ ನಮ್ಮ ಮನೆಯ ಆಕಳು ಕಾಲು ಮುರಿದುಕೊಂಡಿರುವ ವಿಷಯ ನಮ್ಮವ್ವನಿಂದ ತಿಳಿಯಿತು. ಅದರ ಓಷಧೋಪಚಾರಕ್ಕೆ ಪಕ್ಕದೂರಿನಿಂದ ದನದ ಡಾಕ್ಟರ್ನನ್ನು ಕರೆತಂದಿದ್ದರಂತೆ. ಅವರ ಯಾವುದೇ ಓಷಧಿಯೂ ಉಪಯೋಗವಾಗದೇ ಆಕಳು ಅನ್ನಾಹಾರವಿಲ್ಲದೇ ಇಂದೋ-ನಾಳೆಯೋ ಎನ್ನವಂತೆ ನೆಲಹಿಡಿದಿತ್ತು. ಮರುದಿನ ಮುಂಜಾನೆ ಸ್ನಾನ ಮುಗಿಸಿ ಹೊರಬಂದವನಿಗೆ ಆಕಳಿನ ತಪಾಸಣೆ ನಡೆಸಲು ಯಾರೋ ಬಂದಿರುವುದು ನೋಡಿ ಆಕಡೆ ಹೋದೆ. ಬಂದವನು ನಾಟಿ ವೈದ್ಯನೆಂದೂ ಸುತ್ತ ಮುತ್ತೆಲ್ಲಾ ಕಡೆ ತಂಬಾ ಪ್ರಸಿದ್ಧನೆಂದು ನಮ್ಮ ಮಾವ ಹೇಳಿದ್ದು ಕೇಳಿಸಿಕೊಂಡೆನಾದರೂ ಡಾಕ್ಟರ್ನ ಕೈಯಲ್ಲೇ ಆಗದಿದ್ದುದು ಇವನ ಕೈಯಲ್ಲಿ ಏನೂ ಆಗುವುದಿಲ್ಲ ಸುಮ್ಮನೇ ಹಣ ವ್ಯರ್ಥ ಎಂದು ಹೇಳಿ ಮನೆ ಹೊಕ್ಕಿದ್ದೆ.
ಆಶ್ಚರ್ಯವೆಂಬಂತೆ ಹದಿನೈದು ದಿನಗಳು ಬಿಟ್ಟುಬಿಡದೇ ಓಷಧೋಪಚಾರ ಮಾಡಿದರೂ ಒಂದಿಂಚೂ ಕದಲದ ಆಕಳು ನಾಟಿವೈದ್ಯನ ಎರಡನೇ ವಿಸಿಟ್ಗೆ ಎದ್ದೇಳಲು ಪ್ರಯತ್ನಿಸುತ್ತಿತ್ತು. ಅವನು ಮೂರನೇ ವಿಸಿಟ್ ಕೊಟ್ಟಾಗಲಂತೂ ಆಕಳು ಕುಂಟುತ್ತಾ ಒಂದೆರಡೆಜ್ಜೆಯನ್ನು ಹಾಕಿಯೇಬಿಟ್ಟಿತು. ಮರುದಿನ ಅವನು ಬಂದಾಗ ಯಾವುದೋ ಒಣ ಎಲೆಯ ಪುಡಿಯನ್ನು ಕೊಟ್ಟು ಅದನ್ನು ಕಷಾಯ ಮಾಡಿ ಕುಡಿಸಲು ಹೇಳಿ ಮತ್ತು ಸ್ವಲ್ಪ ಬಿಸಿ ಎಣ್ಣೆಯಲ್ಲಿ ಎಂತದೋ ಪುಡಿಯನ್ನು ಸೇರಿಸಿ ಮೂಳೆ ಮುರಿದಿರುವ ಜಾಗಕ್ಕೆ ಮಸಾಜ್ಮಾಡಲು ಹೇಳಿದನು.
ಇದೇ ಸರಿಯಾದ ಸಮಯವೆಂದು ಪಕ್ಕದಲ್ಲಿದ್ದ ಅವನನ್ನು ಕರೆದು ಅವನು ಕೊಟ್ಟ ಎಲೆಯ ಪುಡಿ ಯಾವ ಗಿಡದ್ದು ಎಂದು ಕೇಳಿದ ತಕ್ಷಣ ಅವನು ನಾನೇನೋ ಅವನ ಆಸ್ತಿಯಲ್ಲಿ ಪಾಲು ಕೇಳಿದವನಂತೆ ನನ್ನ ಮುಖ ಮುಖ ನೋಡಹತ್ತಿದನು. ನಂತರ ಅವನು ಗಿಡದ ಹೆಸರು ಹೇಳಬಾರದೆಂದೂ, ಹಾಗೇನಾದರೂ ತಪ್ಪಿ ಹೆಸರನ್ನೇಳಿದರೆ ಅದರ ಶಕ್ತಿ ಹೊರಟುಹೋಗುತ್ತದೆ ಎಂದು ನನ್ನನ್ನು ಸಾಗಹಾಕಲು ಪ್ರಯತ್ನಿಸಿದನು. ಇದನ್ನೆಲ್ಲಾ ಕೇಳುತ್ತಿದ್ದ ನಮ್ಮ ಮಾವನು ನಾಟಿವೈದ್ಯನ ಜೊತೆಗೆ ಕೈ ಜೋಡಿಸಿ ಅದರ ಹೆಸರು ಹೇಳಬಾರದೆಂದು ವಾದಿಸತೊಡಗಿದರು.ಮೊದಲೇ ಹದಿನೈದು-ಇಪ್ಪತ್ತು ದಿನಗಳಿಂದ ಕೊಡಿಸಿದ್ದ ವೈಜ್ಞಾನಿಕ ಚಿಕಿತ್ಸೆಯ ಫಲವನ್ನು ಕಣ್ಣಾರೆ ಕಂಡವರ ಮುಂದೆ ಮತ್ತದೇ ರಾಗವನ್ನು ಊದುವುದು ನನಗೆ ಸಾಧ್ಯವಾಗದ ಸಂಗತಿ ಎಂದು ತಿಳಿದು ಅವರು ಏನಾದರೋ ಮಾಡಿಕೊಳ್ಳಲಿ ಎಂದು ಕೈ ಬಿಟ್ಟೆ.
ಈ ನಾಟಿ ವೈದ್ಯವು ತುಂಬಾ ಪರಿಣಾಮಕಾರಿಯಾದರೂ ಸಹ ವೈದ್ಯಮಾಡುವವರ ದೆಸೆಯಿಂದಲೇ ಇಂದು ಅವನತಿಯ ಹಾದಿ ಹಿಡಿದಿದೆ. ಇದರಲ್ಲಿ ಈ ನಾಟಿವೈದ್ಯರದೇನೂ ತಪ್ಪಿಲ್ಲ. ಬದಲಾಗುತ್ತರುವ ಜಗತ್ತಿನಲ್ಲಿ ಅವರನ್ನು ನಂಬುವರಿಲ್ಲದೇ ಮತ್ತು ಅನೇಕ ಕಡೆ ಎಡಬಿಡಂಗಿ ಜನರೂ, ಪೋಲಿಸರೂ ಬೇರೆ ಯಾರೊ ಆ ಎಮ್.ಬಿ.ಬಿ.ಎಸ್ ನ ನಕಲಿ ಡಾಕ್ಟರೇ ಇವರೆಂದು ತಿಳಿದು ಕೇಸು ಜಡಿಯುತ್ತಿರುವುದು ನಾಟಿವೈದ್ಯರಿಗೆ ನುಂಗಲಾರದ ತುತ್ತಾಗಿದೆ. ಮತ್ತೂ ಕೆಲವರು ಈ ತಮ್ಮ ಕುಲಕಸುಬನ್ನ ಹೊಟ್ಟೆಪಾಡಿಗಾಗಿ ಮಾಡುತ್ತಾ ಅದರ ಗುಟ್ಟನ್ನು ಯಾರಿಗೂ ಬಿಟ್ಟು ಕೊಡದೇ ಸಸ್ಯಲೋಕದ ಅದ್ಭುತ-ಅಚ್ಚರಿಗಳನ್ನು ತಮ್ಮ ಸಮಾಧಿಯೊಳಗೆ ಮಣ್ಣುಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ.






“ಸುಖಾಸುಮ್ಮನೇ ಎಂಜಿನಿಯರಿಂಗೋ ಅಥವಾ ಮೆಡಿಕಲ್ಲೋ ಮಾಡಿ ಹಾಳಾಗಿ ಹೋಗುತ್ತಿದ್ದ ನನ್ನ ಜೀವನವನ್ನು ತೇಜಸ್ವಿಯವರ ಬರವಣಿಗೆಗಳು ಮತ್ತು ಜೀವನಶೈಲಿ ಮೂಲವಿಜ್ಞಾನದ ಕಡೆಗೆ ಆಕಷರ್ಿಸಿದವು.”
ಯಾಕೆ ಸ್ವಾಮಿ ತಮಗೆ ದಕ್ಕದ್ದನ್ನು ತುಚ್ಚೀಕರಿಸುವ ಚಪಲ? ಇಂಜಿನಿಯರ್ / ಡಾಕ್ಟರ್ ಓದಿ ಎಸ್ಟು ಜನರ ಜೀವನ ಹಾಳಾಗಿ ಹೋಗಿದೆ?
ಹೌದು, ಮೂಲವಿಜ್ಞಾನದ ಖುಷಿಯೇ ಬೇರೆ!