ಪ್ರಶ್ನೆ ಕೇಳುವ ತವಕ
-ಉದಯಕುಮಾರ ಹಬ್ಬು
ಬಾಲ್ಯದಿಂದಲೂ ಪ್ರಶ್ನೆ ಕೇಳುವ ಅಭ್ಯಾಸ-
ವನ್ನು ಮೊದಲು ಹೆತ್ತವರು, ಆಮೇಲೆ
ನೆರೆಹೊರೆಯವರು
ಶಿಕ್ಷಕರು ಗಂಟಲೊತ್ತಿ ಉಸಿರುಗಟ್ಟಿಸಿದರು;
ಮತ್ತೆ ಪ್ರಶ್ನೆ ಕೇಳುವ ಮನಸ್ಸು ಬರಡು ಬಂಜರಾಯಿತು
ಪ್ರಶ್ನೆ ಕೇಳದೆ ಜ್ಞಾನ ಒಣಗಿತು
ಪ್ರಶ್ನೆ ಕೇಳದೆ ಅಹಂಕಾರ ಚಿಗುರಿತು
ಪ್ರಶ್ನೆ ಕೇಳದೆ ದಬ್ಬಾಳಿಕೆ ನಡೆಯಿತು
ಪ್ರಶ್ನೆ ಕೇಳದೆ ವ್ಯಕ್ತಿತ್ವ ಸತ್ತಿತು
ಪ್ರಶ್ನೆ ಕೇಳದೆ ಗುಲಾಮಗಿರಿ ಬೆಳೆಯಿತು
ಪ್ರಶ್ನೆ ಕೇಳದೆ ಸರ್ವಾಧಿಕಾರ ಹೆಡೆ ಎತ್ತಿತು
ಪ್ರಶ್ನೆ ಕೇಳಲು ಯುವಕರಿಗೆ ಪ್ರೇರಣೆ
ವಿಷವಿತ್ತರು ಸಾಕ್ರಟೀಸ್ ಗೆ ಎಷ್ಟೊಂದು ಕರುಣೆ!
ಈಗ ನಾನು ಪ್ರಶ್ನೆ ಕೇಳತೊಡಗಿದ್ದೇನೆ
ದೊರೆಯೆ! ನಮ್ಮ ಹಣವನು ಮೊಗೆಮೊಗೆದು
ಬಂಡವಳಶಾಹಿಗೆ ಕೊಡುತ್ತಿದ್ದೀರಿ
ನಮ್ಮ ಬೆವರಿನ ಹಣ. ನಮ್ಮ ರಕ್ತದ ಹಣ
ಕೇಳಬೇಡವೆ ಪ್ರಶ್ನೆ ಯಾರ ಕೇಳಿ
ಕೊಡುತ್ತಿರುವಿರಿ ನಮ್ಮ ಹಣವನು ಅವರಿಗೆ
ನಿಮಗೆ ಪ್ರಶ್ನಿಸುವವರಿಲ್ಲ
ಯಾರದೊ ದುಡ್ಡು ಯಲ್ಲಮ್ಮನ ಜಾತ್ರೆ
ಸತ್ಯವನು ಮರೆಮಾಚಿ ಸುಳ್ಳ
ಕಕ್ಕುತ್ತಿರುವಿರಿ; ಜನರಿಗೆ ಆಫೀಮು ಕುಡಿಸಿ
ಅಮಲೇರಿಸಿದ್ದೀರಿ;
ಕುಡಿದ
ಅಮಲಿನಲಿ
ನಿಂದಿಸುತ್ತಾರೆ, ಬೈಯುತ್ತಾರೆ.
ಹೊಡೆದಾಡುತ್ತಾರೆ
ಹುಚ್ಚು ಹಿಡಿದ ನಾಯಿಯ ತೆರದಿ
ನೀವು ಅದನು ನೋಡಿ
ಮೋಜು, ಮಾಡುತ್ತಿರುವಿರಿ
ದೇಶದ ಅಧಿಕಾರ ಚುಕ್ಕಾಣಿ ಹಿಡಿದರೆ
ಎಷ್ಟು ಹಣ ದೋಚಿದರೂ ಕೇಳವವರು ಯಾರು?
ವಿಷದ ಬಟ್ಟಲು ತನ್ನಿ
ಕುಡಿಯಲು ನಾನು ತಯಾರು.
ಯಾವುದನ್ನೂ ಯಾರನ್ನೂ ಪ್ರಶ್ನಿಸದೆ
ಒಪ್ಪಿಕೊಳ್ಳಬೇಡ ಎಂದ ನಮ್ಮಪ್ಪ.
ವಿಷದ ಬಟ್ಟಲು ತನ್ನಿ
ಕುಡಿಯಲು ನಾನು ತಯಾರು.






0 Comments