
ಪ್ರಶಸ್ತಿ ವಾಪಸ್ ಈಗ ಚಳವಳಿಯ ರೂಪ ತಾಳಿದೆ. ಕೊಡಬೇಕೋ ಬೇಡವೋ ಎನ್ನುವುದು ಒಂದು ಕಡೆಯಾದರೆ ಕೊಟ್ಟವರನ್ನೇ ಅಣಕಿಸುವ ಕೆಲಸವೂ ನಡೆಯುತ್ತಿದೆ. ಈ ಮಧ್ಯೆ ಧಾರವಾಡದ ಇಬ್ಬರು ಗೆಳೆಯರ ಅಭಿಪ್ರಾಯವನ್ನು ನಿಮ್ಮ ಮುಂದಿರಿಸಿದ್ದೇವೆ .
ನೀವೂ ಭಾಗವಹಿಸಿ. ಪ್ರಶಸ್ತಿ ಚಳವಳಿ ನಿಮಗೇನನ್ನಿಸುತ್ತೆ ಚರ್ಚೆ ಮಾಡಿ. ಯಥಾಪ್ರಕಾರ ಭಾಷೆ ಪ್ರಕಟಿಸುವಂತಿರಲಿ

ಪರಿಣಾಮಕಾರಿಯಾದ ಹೋರಾಟದ ಕಲ್ಪನೆ ಇಲ್ಲ
ಅಂತಾರೆ ಅಶೋಕ್ ಶೆಟ್ಟರ್
ಪ್ರಶಸ್ತಿಗಳನ್ನು ಹಿಂದಿರುಗಿಸುವ ಒಂದು ಸನ್ನಿಯೇ ಶುರುವಾದಂತಿದೆ. ನಾನೂ ಹಿಂದಿರುಗಿಸದಿದ್ದರೆ ಹೇಗೆ? ಎಂಬ ಅಳುಕು ಇದಕ್ಕೆ ಕಾರಣವಲ್ಲ ಎಂದುಕೊಂಡರೂ ಇದು ನನಗೆ ತುಂಬ meek response ಅನ್ನಿಸುತ್ತಿದೆ. ಬಹುಶ: ನಮ್ಮ ಬರಹಗಾರರಿಗೆ ಇದಕ್ಕಿಂತ ಪರಿಣಾಮಕಾರಿಯಾದ ಹೋರಾಟದ ಕಲ್ಪನೆ ಇಲ್ಲ.
***
ಕನಿಷ್ಟ ಪ್ರಶಸ್ತಿ ಹಿಂತಿರುಗಿಸುವ ಯೋಗ್ಯತೆ ನಮಗಿಲ್ಲ
ಅಂತಾರೆ ಜಗದೀಶ ಕೊಪ್ಪ

ಏನಾಗಿದೆ? ಈ ಕನ್ನಡದ ಸಾಂಸ್ಕೃತಿಕ ಜಗತ್ತಿಗೆ? ಕನಿಷ್ಟ ಪ್ರಶಸ್ತಿ ಹಿಂತಿರುಗಿಸುವ ಯೋಗ್ಯತೆ ನಮಗಿಲ್ಲ, ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿರುವ ಹಿನ್ನಲೆಯಲ್ಲಿ ಕರ್ನಾಟಕವೂ ಸೇರಿದಂತೆ, ಇಡೀ ದೇಶದಲ್ಲಿ ಹಲವಾರು ಲೇಖಕರು, ಕಲಾವಿದರು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತಿರುವ ಈ ವೇಳೆಯಲ್ಲಿ ಮುಚ್ಚಿಕೊಂಡು ಕೂರುವ ವಿವೇಕವೂ ಇಲ್ಲವಾಗಿದೆಯಲ್ಲ!
ಪ್ರಶಸ್ತಿ ವಾಪಸ್ ಮಾಡುತ್ತಿರುವ ಬಹುತೇಕ ಲೇಖಕರು ತಮ್ಮ ಪಾದರಕ್ಷೆಯನ್ನು ಬಿಡುವ ಜಾಗದಲ್ಲಿ ನಿಲ್ಲಲು ನಮಗೆ ಯೋಗ್ಯತೆಯಿಲ್ಲ. ಆದರೂ ಅವರನ್ನು ಅಣಕಿಸಲು, ವ್ಯಂಗ್ಯವಾಡಲು ನಾವು ಮುಂದಾಗಿದ್ದೀವಿ. ಇದು ಹೇಗಿದೆಯೆಂದರೆ, ಹೇಲು ಗುಂಡಿಯ ಮೇಲೆ ಕುಳಿತು ತಿಪ್ಪೆ ಗುಂಡಿಯನ್ನು ಅಣಕಿಸಿದಂತಿದೆ. ನಮ್ಮ ಈ ರೀತಿಯ ಅಣಕ ಕೆಲವರಿಗೆ ಮನರಂಜನೆ, ಖುಷಿ ಕೊಡಬಹುದು. ಆದರೆ, ನಮಗರಿವಿಲ್ಲದಂತೆ ನಾವು ಜೋಕರ್ ಗಳಾಗಿ ಬದಲಾಗಿರುತ್ತೇವೆ.





ಸನ್ಮಾನ್ಯ ಶೆಟ್ಟರ್ ಅಂದಂತೆ ಇದು ಸಮೂಹ ಸನ್ನಿಯೋ ಎಂಬ ಭ್ರಮೆ ಇದೆ ಹಾಗಂತ ಪ್ರಶಸ್ತಿ ಹಿಂತಿರುಗಿಸಿದವರು
ನಾಟಕ ಆಡುತ್ತಿದ್ದಾರೆ ಇದೂ ಒಂದು ಗಿಮಿಕ್ಕು ಅನ್ನುವ ಜನರ ನಡುವೆ ನಾನಿರುವೆ..ಪ್ರಶಸ್ತಿಯಾಗಿ ಲಾಬಿ ನಡೆಯುವುದೇ ಇಲ್ಲ
ಅಂತ ಪ್ರಶಸ್ತಿ ಪಡೆದ ಲೇಖಕರೂ ಎದೆತಟ್ಟಿ ಹೇಳಿಲ್ಲ ಎಲ್ಲೂ..ಹಾಗಾದರೆ ಅವರ ಮುಂದಿರುವ ಸಾತ್ವಿಕದಾರಿಯೇ ಈ
ಪ್ರಶಸ್ತಿ ವಾಪಾಸ್ಸು ಕೊಡೋದು..ನಮ್ಮ ದೇಶದ ಸಂಸ್ಕ್ರತಿ ಮಂತ್ರಿ ಆಡಿದ ಮಾತು ಕೇಳಿದರೆ ಈ ಮಹನೀಯರು ಸರಿಯಾದುದನ್ನೇ
ಮಾಡಿದ್ದಾರೆ ಅನಬೇಕು…
ದೇಶಕ್ಕೆ ಮನಸ್ಸು ಅನ್ನೋದೊಂದು ಇರುತ್ತಲ್ಲ. ಆ ಮನಸ್ಸು ಪ್ರತಿರೋಧಕ ನೆಲೆಯಲ್ಲಿ ಘಾಷಿಗೊಳ್ಳಲಿ, ದೇಶದ ಆತ್ಮಗೌರವಕ್ಕೆ ಪೆಟ್ಟಾಗಿ ಪುಟಿದೇಳಲಿ ಎಂಬ ಉದ್ದೇಶದಿಂದ ” ಪ್ರಶಸ್ತಿ ವಾಪ್ಸಿ” ಚಳವಳಿ ಶುರುವಾಗಿದೆ ಎಂದು ನಾನಂದುಕೊಂಡಿದ್ದೇನೆ.
ಕೇವಲ ಮಾತಾಡಿದರೆ ಕೊಲೆಯಾಗುತ್ತಿದೆ ಅಂದರೆ ನೋಡಿಕೊಂಡು ಸುಮ್ಮನಿರಲ್ಲಿಕ್ಕಂತೂ ಆಗುವುದಿಲ್ಲ. ಇದು ಸಮೂಹಸನ್ನಿ ಅಂತೂ ಅಲ್ಲವೇ ಅಲ್ಲ. ಚಳುವಳಿಯ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಕೇಂದ್ರ ಸಾಹಿತ್ಯ ತುರ್ತು ಸಭೆ ನಡೆಸಲು ಮುಂದಾಗಿದೆ. ಹಾಸ್ಯಾಸ್ಪದ ಎಂದು ಕುಟುಕುವ ಮನಸ್ಸುಗಳಿಗೆ ಇಷ್ಟು ಸಾಕಲ್ಲ.
ಕವಿ ತನ್ನ ಅಂತರಂಗದ ಕಲ್ಪನೆ-ಸಂವೇದನೆಗಳನ್ನು ಓದುಗನಿಗೆ ದಾಟಿಸಲು ಇನ್ನಾವ ದಾರಿಯೂ ಕಾಣದೇ ಕೊನೆಯ ಪ್ರಯತ್ನವಾಗಿ ರೂಪಕ, ಸಂಕೇತಗಳನ್ನು ಬಳಸುವನು. ಆದರೆ ಒಬ್ಬ ಹೋರಾಟಗಾರನೂ ಇದೇ ಹಾದಿ ಹಿಡಿದರೆ.. ಅಂದರೆ ಸಾಂಕೇತಿಕ ಹೋರಾಟ, ಸಾಂಕೇತಿಕ ಪ್ರತಿಭಟನೆಗಳನ್ನು ರೂಪಿಸಿಕೊಳ್ಳತೊಡಗಿದರೆ ಇದರಾಚೆ ಇನ್ನಾವ ದಾರಿಯೂ ತನಗೆ ತೋಚುತ್ತಿಲ್ಲವೆಂಬ ಅಂಶವೇ ಅಂತಹ ಸಾಂಕೇತಿಕ ಪ್ರತಿಭಟನೆಯಿಂದ ವ್ಯಕ್ತವಾಗುತ್ತದೆ. ಸಾಂಕೇತಿಕ ಪ್ರತಿಭಟನೆಗಳು ಹೋರಾಟದ ಮೊದಲ ಹೆಜ್ಜೆಯಾಗಬೇಕೇ ವಿನಾ ಅದೇ ಹೋರಾಟದ ತಾರ್ಕಿಕ ಅಂತ್ಯವಾಗಕೂಡದು. ಸಾರ್ತ್ರೆ ನೋಬೆಲ್ ತಿರಸ್ಕರಿಸಿದರೂ ಅವನೊಬ್ಬ ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಎಂಬ ಹೆಗ್ಗಳಿಕೆ ಅವನ ಪಾಲಿಗೆ ಉಳಿದೇ ಇತ್ತು ಅಥವಾ ಇನ್ನೂ ಇಮ್ಮಡಿಸಿತು. ಇಂತಹ ಸಾಂಕೇತಿಕ ಪ್ರತಿಭಟನೆಯಿಂದ ಸಾಹಿತಿ ತಾನು ನೈತಿಕವಾಗಿ ಮತ್ತು ಸಾಮಾಜಿಕವಾಗಿ ದೊಡ್ಡವನಾಗಬಹುದು ನಿಜ. ಆದರೆ ತನ್ನ ವ್ಯಕ್ತಿಗತ ದೊಡ್ಡಸ್ತಿಕೆಯಿಂದ ಸಮಾಜದಲ್ಲಿ ಪರಿವರ್ತನೆ ಸಂಭವಿಸದು ಎಂಬ ಎಚ್ಚರ ಅವನಿಗಿರಬೇಕಾಗುತ್ತದೆ. ಮತ್ತು ಅಂತಹ ಪರಿವರ್ತನೆ ತರಲು ಸ್ಪಷ್ಟ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು. ಇಲ್ಲವಾದರೆ ಇವೆಲ್ಲ ಒಂದು ವ್ಯರ್ಥ ಪ್ರಹಸನವಾಗುತ್ತದೆ.
ಪ್ರಶಸ್ತಿ ಹಿಂತಿರುಗಿಸುವುದು ವಿವೇಚನಾರಹಿತ ಪ್ರತಿಕ್ರೀಯೆ ಹಾಗೂ ಮಂಗನಾಟಕ್ಕೆ ಹೋಲಿಸಬಹುದು. ಯಾವುದೋ ರಾಜಕೀಯ ಪಕ್ಷದ ಮಾತುಗಳಿಗೆ ಕಟ್ಟು ಬಿದ್ದ ಇಂತಹ ಕ್ರಮಗಳಿಂದ ಹಾನಿಯಾಗುವುದು ಹಿಂತಿರುಗಿಸಿದವರಿಗೆ ಮಾತ್ರ ಹಾಗು ಪ್ರಶಸ್ತಿ ನೀಡಿದ ಪ್ರಾಧಿಕಾರವನ್ನು ಅವಮಾನಿಸಿದಂತೆ. ಇದು ಅವರ ಪ್ರಚಾರ ಪ್ರೀಯ ರೂಪವನ್ನು ಅನಾವರಣಗೊಳಿಸುತ್ತದೆ.