ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಶಸ್ತಿಗಳನ್ನು ಹಿಂದಿರುಗಿಸದೆಯೇ ಹತ್ಯೆಯನ್ನು ಖಂಡಿಸಬಹುದು

raghavendra Joshiರಾಘವೇಂದ್ರ ಜೋಷಿ 

ಡಾ. ಕಲಬುರ್ಗಿ ಅವರ ಹತ್ಯೆಗೆ ಸಂಬಂಧಪಟ್ಟಂತೆ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸ್ಸು ಮಾಡುತ್ತಿದ್ದಾರೆ. ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಅವರು ಸ್ಪಂದಿಸುತ್ತಿರುವ ರೀತಿಯಿದು. ಸಾಹಿತ್ಯ ಅಕಾಡೆಮಿ ಸರ್ಕಾರದ ಅಧೀಕೃತ ಸಂಸ್ಥೆಯಲ್ಲದಿದ್ದರೂ ಕೂಡ ಸರಕಾರದ ಹಣದಲ್ಲಿ ನಡೆಯುವಂಥ ಸಂಸ್ಥೆಯಾಗಿರುವದರಿಂದ, ಅಕಾಡೆಮಿ ಒಂದರ್ಥದಲ್ಲಿ ಸರಕಾರದ ಮುಸುಕಿನ ಮುಖವೆಂದೇ ಭಾವಿಸಬಹುದಾಗಿದೆ.

p mahamud award cartoonತನ್ಮೂಲಕ, ಹೀಗೆ ಪ್ರಶಸ್ತಿಗಳನ್ನು ವಾಪಸ್ಸು ಮಾಡಿ, ಆ ಮೂಲಕ ಹತ್ಯೆಗೆ ಸಂಬಂಧಪಟ್ಟಂತೆ ಸರ್ಕಾರದ ಆಡಳಿತ ವೈಖರಿಯನ್ನು ವಿರೋಧಿಸುವಂಥ ಈ ವಾಪಸಾತಿ ಚಳವಳಿಯ ಬಗ್ಗೆ ಎರಡು ಮಾತಿಲ್ಲ. ಯಾಕೆಂದರೆ ಅದು ಅವರ ನಿರ್ಧಾರ. ಹಾಗಂತ ಪ್ರಶಸ್ತಿಯನ್ನು ವಾಪಸ್ಸು ಮಾಡದೇ ಇರುವವರನ್ನು ಸದರಿ ಹತ್ಯೆಗೆ ಸ್ಪಂದಿಸದಿರುವವರ ಪಟ್ಟಿಯಲ್ಲಿ ಹಾಕುವಂಥ, ಆ ಮೂಲಕ ಇವರೆಲ್ಲ ಬಲಪಂಥೀಯರು, ಮಾನವೀಯತೆ ಇಲ್ಲದವರು ಅಥವಾ ಪ್ರಶಸ್ತಿಗೆ ಅಂಟಿಕೊಂಡವರು-ಅನ್ನುವಂಥ ಭಾವನೆಗಳನ್ನೂ ಹುಟ್ಟುಹಾಕಲಾಗುತ್ತಿದೆ.  ಇದೊಂಥರ, ಮುಲಾಜಿಗೆ ಬಸಿರಾಗುವಂಥ ಸ್ಥಿತಿ!

ಪ್ರಶಸ್ತಿ ಹಿಂತಿರುಗಿಸುವದರ ಮೂಲಕ ಹೇಗೆ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸಬಹುದೋ, ಹಾಗೆಯೇ ಅಕಾಡೆಮಿಯ ಪ್ರಶಸ್ತಿಗಳನ್ನು ಹಿಂದಿರುಗಿಸದೆಯೇ ಹತ್ಯೆಯನ್ನು ಖಂಡಿಸಬಹುದು. ನ್ಯಾಯಕ್ಕಾಗಿ ಒತ್ತಾಯಿಸಬಹುದು. ವೈಯಕ್ತಿಕವಾಗಿ ನನಗೆ ಅನಿಸುವದೇನೆಂದರೆ, ಪ್ರಶಸ್ತಿ ಅನ್ನುವದು ಆಯಾ ಕೃತಿಕಾರನ ಪ್ರತಿಭೆ ಮತ್ತು ಪರಿಶ್ರಮಗಳ ಸಂಗಮಕ್ಕೆ ದೊರಕಿರುವಂಥ ಮನ್ನಣೆ. ಅಕಾಡೆಮಿ ನೀಡುವ ಇಂಥ ಮನ್ನಣೆಗಳಲ್ಲಿ ಎಷ್ಟರಮಟ್ಟಿಗೆ ಪ್ರಾಮಾಣಿಕತೆಯಿದೆ ಎನ್ನುವದು ಇನ್ನೊಂದು ಚರ್ಚಾಸ್ಪದ ವಿಷಯ. ಅದಿಲ್ಲಿ ಬೇಡ.

ಹೀಗೆ, ಸಾಹಿತಿಯೋರ್ವನ ಪ್ರತಿಭೆ ಮತ್ತು ಪರಿಶ್ರಮಕ್ಕೆ ಸಂದಾಯವಾದ ಈ ಗೌರವವನ್ನು ವಾಪಸ್ಸು ಮಾಡುವದು ಎಷ್ಟರಮಟ್ಟಿಗೆ ಸರಿ? ಇದು ಅಕಾಡೆಮಿಯ ಸಾಹಿತ್ಯಕ ಪ್ರೋತ್ಸಾಹಕ್ಕೆ ಅಗೌರವ ಸಲ್ಲಿಸಿದಂತಾಗುವದಿಲ್ಲವೇ? ಇನ್ನು, ಪ್ರಶಸ್ತಿಗಳನ್ನು ಘೋಷಿಸುವ ಕಾಲದಲ್ಲೇ ಅದನ್ನು ತಿರಸ್ಕರಿಸಿರುವ ಸಾಹಿತಿಗಳೂ ನಮ್ಮಲ್ಲಿದ್ದಾರೆ. ಆ ಮೂಲಕ, ಬರಹ ಮಾತ್ರ ನನ್ನ ಪ್ಯಾಶನ್, ಪ್ರಶಸ್ತಿಗಳು ಅಲ್ಲ ಅಂತನ್ನುವದನ್ನೂ ಸಾರಿ ಹೇಳಿದವರಿದ್ದಾರೆ.
ವಿಷಯ ಹೀಗಿರುವಾಗ, ಭೈರಪ್ಪ ಯಾಕೆ ಪ್ರಶಸ್ತಿ ವಾಪಸ್ಸು ಮಾಡಿಲ್ಲ ಅಂತೆಲ್ಲ ಪ್ರಶ್ನಿಸುವದೂ, ವಾಪಸ್ಸು ಮಾಡಿದವರ ಬಗ್ಗೆ ಹಗುರವಾಗಿ ಕಿಚಾಯಿಸುವದೂ- ಈ ಎರಡೂ ಬೆಳವಣಿಗೆಗಳು ಕೇವಲ ವ್ಯಂಗ್ಯವನ್ನೇ ಸ್ಫುರಿಸಬಲ್ಲವೇ ಹೊರತು, ಹತ್ಯೆಗೆ ಸಂಬಂಧಪಟ್ಟ ಯಾವ ಸಹಾಯವನ್ನೂ ಮಾಡಲಿಕ್ಕಿಲ್ಲ.

ಇದೆಲ್ಲದರ ನಡುವೆಯೂ ನನಗೆ ಒಂದು ಸಂಗತಿ ಅರ್ಥವಾಗುತ್ತಿಲ್ಲ. ಮುಂದೊಮ್ಮೆ, ಕಲಬುರ್ಗಿ ಹತ್ಯೆಯ ನಿಜಾಂಶ ಪತ್ತೆ ಆಗಿ, ಅಪರಾಧಿಗಳಿಗೆ ಶಿಕ್ಷೆಯೂ ಆದ ನಂತರ ಮುಂದಿನ ಕತೆ ಏನು? ಈಗಾಗಲೇ ಪ್ರಶಸ್ತಿಗಳನ್ನು ವಾಪಸ್ಸು ಮಾಡಿದವರು ಮತ್ತೇ ಅಕಾಡೆಮಿಗೆ ಹೋಗಿ ಅವನ್ನೆಲ್ಲ ವಾಪಸ್ಸು ತಗೆದುಕೊಳ್ಳುತ್ತಾರಾ? ಅಥವಾ ಇಂಥ ಘಟನೆಗಳು ನಿಲ್ಲುವವರೆಗೆ ನಾನು ಯಾವ ಪ್ರಶಸ್ತಿಯನ್ನೂ ಸ್ವೀಕರಿಸುವದಿಲ್ಲ ಅಂತ ಘೋಷಿಸುತ್ತಾರಾ?

ಸಾಹಿತ್ಯಕ ಗೌರವ ಮತ್ತು ಸಾಮಾಜಿಕ ಹಿತಾಸಕ್ತಿ ಎರಡೂ ಬೇರೇ ಬೇರೆಯಲ್ಲವೇ? ಒಂದನ್ನು ಧಿಕ್ಕರಿಸಿ ಅವಮಾನಿಸುವದರ ಮೂಲಕ ಇನ್ನೊಂದನ್ನು ಹೇಗೆ ಗೌರವಿಸಬಲ್ಲೆವು?

‍ಲೇಖಕರು admin

19 October, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading