ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ರಣ್ ಉತ್ಸವ ಮತ್ತು ನಾವಿಬ್ಬರು’ : ಭುಜ್ ಬಾನಿನಲ್ಲಿ ಗಾಳಿಪಟ ಹುಡುಕುತ್ತಾ..

(ಇಲ್ಲಿಯವರೆಗೆ)

ಭುಜ್ ತಲುಪಿದಾಗ ಸಮಯ  ೩ ಗಂಟೆಯ ಆಸು-ಪಾಸಿನಲ್ಲಿತ್ತು. ಸುಡು-ಬಿಸಿಲಿನಲ್ಲಿ ಗುಜರಾತ್ ನ ಮೊದಲ ಭೂ-ಸ್ಪರ್ಶ ನನಗೆ. ಭುಜ್ ನಲ್ಲಿರುವುದು ಮಿಲಿಟರಿ ಏರ್ಪೋರ್ಟ್; ಚಿಕ್ಕ-ಚೊಕ್ಕ ವಿಮಾನ ನಿಲ್ದಾಣ ಅದು. ಬೆಂಗಳೂರು, ಮುಂಬೈನ ಬೃಹತ್  ವಿಮಾನ ನಿಲ್ದಾಣಗಳನ್ನು ದಾಟಿ, ಈ  ಪುಟ್ಟ  ವಿಮಾನ ನಿಲ್ದಾಣ ತಲುಪಿದಾಗ ಅದೇನೋ ಅಚಾನಕ್ಕಾಗಿ ಭದ್ರತೆಯ ಭಾವ! ವಿಮಾನ ನಿಲ್ದಾಣದಿಂದ ಆಟೋ ಹತ್ತಿ ಮೊದಲೇ ಕಾಯ್ದಿರಿಸಿದ್ದ (ಇಂಟರ್ನೆಟ್ ಜಮಾನಾಗೊಂದು ಜೈ ಹೇಳುತ್ತಾ)  ಹೋಟೆಲ್ ಕಡೆ ಹೊರಟಾಗ, ದಾರಿಯುದ್ದಕ್ಕೂ ಬಿಸಿಲು, ಜಾಲಿ ಗಿಡಗಳು, ದಷ್ಟ-ಪುಷ್ಟ ಜವಾರಿ ಆಕಳು, ಎಮ್ಮೆ, ಎತ್ತು… ಮತ್ತೆ ಬಾಲ್ಯದ ದಿನಗಳಿಗೆ ಮರಳಿ ಬಂದಂತಾಗುತ್ತಿತ್ತು.

ಭುಜ್ ಒಂದು ಚಿಕ್ಕ ಊರು, ಆಧುನಿಕತೆಯ ಸೋಗಿಲ್ಲದ ಸೀದ-ಸಾದಾ ಭಾರತೀಯ ನಗರ. ಇಂಥ ಸೀದಾ-ಸಾದಾ ನಗರ/ಹಳ್ಳಿಗಳಲ್ಲೇ, ಬಯಲು ಸೀಮೆಯ ವಾತಾವರಣದಲ್ಲೇ ಹೆಚ್ಚಾನುಹೆಚ್ಚು ಬಾಲ್ಯವನ್ನು ಕಳೆದಿರುವ ನನಗೆ ಮತ್ತೆ ಬಾಲ್ಯಕ್ಕೆ ಮರಳಿದ ಖುಶಿ. ಇಂಥ ಗುಂಗಿನ ಪ್ರಭಾವದಿಂದ, ಆಟೋ ಮುಂದೆ ಓಡಿದಂತೆ ಹಿಂದೋಡುತ್ತಿದ್ದ ಜಾಲಿ ಮರಗಳಲ್ಲೂ ಅದೇನೋ ಆಪ್ತತೆ, ಮತ್ತೆ ಎಳೆತನದ ಗಲ್ಲಿಗಳಲ್ಲಿ ಹಾದು ಹೋಗುತ್ತಿರುವಂತೆ. ಸುಡು ಬಿಸಿಲು ಮನಸ್ಸನ್ನು ಮುಟ್ಟಿ ಹೋದಂತೆ…

ಹೋಟೆಲ್ ರೂಮ್ ತಲುಪಿ, ಸ್ವಲ್ಪ freshen-up ಆಗಿ, ಸಾಧ್ಯವಾದಷ್ಟು ಭುಜ್ ನಗರವನ್ನು  ನೋಡಿಬಿಡೋಣ ಎಂದುಕೊಂಡು ಮೆಟ್ಟಿಲಿಳಿದು ಬಂದಾಗ ಸಮಯವಾಗಲೆ ೫ ರ ಗಡಿ ತಲುಪುತ್ತಿತ್ತು.  ಸಂಜೆ ೬ ಘಂಟೆಗೆ  ಸುಮಾರು ಪ್ರವಾಸಿ ಸ್ಥಳಗಳು ಮುಚ್ಚುವ ಸಮಯ. ನಾನು ಆಟೋ ಏರಿ ಹೊರಡುವಷ್ಟರಲ್ಲಿ ಸಮಯ ೫:೩೦! ಹೀಗಾಗಿ ಭುಜ್ ನಲ್ಲಿ ನಾನು ಸಂದರ್ಶಿಸಲಾಗಿದ್ದು ಕೇವಲ ಒಂದೇ ಸ್ಥಳ – ಅದು ‘ಪ್ರಾಗ್ ಮಹಲ್’. ಅದನ್ನು ನೋಡಲು ನನಗಿದ್ದ ಕಾಲಾವಕಾಶ ಕೇವಲ ೧೫ ನಿಮಿಷಗಳು!

ಹೆಚ್ಚಿನ ಸಮಯ ಇರದ ಕಾರಣ ನನಗಲ್ಲಿ ಫೋಟೋ ತೆಗೆಯುವ ಅವಕಾಶವೂ ಇರಲಿಲ್ಲ. ನಂದನ್ ಗೆ  ಕೆಲ ದಿನಗಳ ಹಿಂದೆ ಶಾಲೆಯಲ್ಲಿ ಹೇಳಿದ್ದ ಪರಿಣಾಮವಾಗಿ ಗಾಳಿಪಟ ಹಾರಿಸುವ ಗುಂಗು. ಅವನ ಲಹರಿಗೆ ಒಪ್ಪುವಂತೆ ಅಲ್ಲಲ್ಲಿ  ಹಾರುತ್ತಿದ್ದ ಗಾಳಿಪಟಗಳು. ಅವನಿಗೆ ಅರಮನೆಯೊಳಗಡೆ ಬರಲು ಸುತರಾಂ  ಇಷ್ಟ ಇರಲಿಲ್ಲ. ಹೀಗಾಗಿ ನಮ್ಮ ಅರಮನೆಯ ಸಂದರ್ಶನ ಕೇವಲ ಐದರಿಂದ ಹತ್ತು ನಿಮಿಷದಲ್ಲೇ ಮುಗಿದುಹೋಗಿತ್ತು, ಅರಮನೆಯನ್ನು  ಇಟ್ಯಾಲಿಯನ್ ಗೋಥಿಕ್  ವಾಸ್ತುಶಾಸ್ತ್ರದ ಮಾದರಿಯಲ್ಲಿ ಕಟ್ಟಲಾಗಿದೆಯಂತೆ. ನಾನು ಅರಮನೆಯಲ್ಲಿ ಕಂಡಿದ್ದು ಶತಮಾನಗಳ ಹಿಂದಿರಬಹುದಾಗಿದ್ದ ವೈಭವ (ಈಗ ಇಡಿ ಅರಮನೆ ಪಾಳು ಬಿದ್ಧ ಅನುಭೂತಿ, ಅದೆಷ್ಟೇ ಬೇಡವೆಂದರೂ ವಿದಿತವಾಗಿ ಗೊಚರಿಸುತ್ತದೆ. ಪ್ರಾಯಶಃ ೨೦೦೧ ರ ಭೂಕಂಪದ ಪರಿಣಾಮವಿರಬೇಕು. ) ಮನಸು ಮಾಡಿದರೆ  ಅರಮನೆಯನ್ನು ಇನ್ನಷ್ಟು ಚೊಕ್ಕಟವಾಗಿ, ಓರಣವಾಗಿ ಸಜ್ಜುಗೊಳಿಸಬಹುದೇನೋ.. ಅದ್ಯಾಕೋ ಆ ಕಾರ್ಯವಿನ್ನೂ ಸಂಪೂರ್ಣವಾಗಿ ನೆರವೆರಿದಂತೆ ಕಾಣಲಿಲ್ಲ.

ಅಲ್ಲಲ್ಲಿ ಹಾರಾಡುತ್ತಿದ್ದ ಪಾರಿವಾಳಗಳು, ತಿರುವಿನ, ಕಟ್ಟಿಗೆಯ ಮೆಟ್ಟಿಲುಗಳು,ಅಲ್ಲಲ್ಲಿ ಪಾಳು ಬಿದ್ದಂತೆ ತೋರುತ್ತಿದ್ದ ಗೋಡೆಗಳು, ಅರಮನೆಗಿಂತ ಹೆಚ್ಚಾಗಿ ಒಂದು haunted place ನ ಅನುಭೂತಿ ಮನಸಲ್ಲಿ ಸುಳಿದು ಹೋಗುತ್ತಿತ್ತು. ಮೇಲೇರಿ ಹೋದಾಗ  ೪೫  ಅಡಿ ಎತ್ತರದ ಟವರ್ ಕ್ಲಾಕ್ ಗಡಿಯಾರದ ಮುಳ್ಳು ೬ ಘಂಟೆಯ ಸಮೀಪದಲ್ಲೇ ಇತ್ತು. ಗಡಿಬಿಡಿಯಲ್ಲೇ ಕೆಳಗಿಳಿದು ಅರಮನೆಯ ಹೊರಬಂದಾಗ, ಮತ್ತೇನೋ ನಿರಾಳ.  ಅರಮನೆಯೊಳಗೆ ಕಾಣದ ಮನ ತಾಕಿ ಹೋಗುವ ಸೌಂದರ್ಯ, ಕಲೆ, ಕೌಶಲ್ಯ ಆಗ ನನ್ನ ಕಣ್ಣೆದುರಿಗಿತ್ತು! ಅವು ಇನ್ನೇನಲ್ಲ, ಮತ್ತಷ್ಟು ಮುರಿದು ಹೋದ ಗೋಡೆಗಳು, ಕಮಾನುಗಳು, ಬಾಗಿಲು, ಕಿಟಕಿಗಳು, ಸೂಕ್ಷ್ಮ ಕುಸುರಿ ಕೆಲಸ, ಮತ್ತು ಸಂಜೆ ಹೊತ್ತು… ಕವಿ ಸಮಯ…! ಹತ್ತು ಹಲವು ಭಾವಗಳು  ಅಪ್ಪಳಿಸಲಾರಂಭಿಸಿದ್ದ ನಿಮಿಷಗಳು… ಅರಮನೆಯಿಂದ ಹೊರಬಂದ ಪರಿಣಾಮವಾಗಿ ನಂದನ್ ಕೂಡಾ ಶಾಂತನಾಗಿದ್ದ, ಬಾನಲ್ಲಿ ಗಾಳಿಪಟ ಹುಡುಕುತ್ತ… ನಾನೇನು  ಹುಡುಕುತ್ತಿದ್ದೆ ಆ ಕ್ಷಣ? ನನಗೆ ತಿಳಿಯಲಿಲ್ಲ…

ಇತಿಹಾಸ, ಭೂತ, ಭವಿಷ್ಯ ಎಲ್ಲ ಮರೆತು ಹೋಯಿತು ಆ ಕ್ಷಣಗಳಲ್ಲಿ… ಕಣ್ಣು ಹರಿಸಿದಷ್ಟೂ ಸೂಕ್ಷ್ಮ ಕುಸುರಿ ಕೆಲಸ, ಅಂತಃಪುರ ಎಂದು ನೋಡಿದ ತಕ್ಷಣ ಹೇಳಬಹುದಾದಂಥ ಸುಂದರ ಬಾಗಿಲು, ಕಮಾನುಗಳು,  ಕಿಟಕಿಗಳು. ಮುರಿದು ಬಿದ್ದ ಗೋಡೆಗಳು, ಬಿರುಕುಗಳು,  ಬೀಗ ಜಡಿದ ಬಾಗಿಲು, ಏನುಂಟು ಏನಿಲ್ಲ ಅಲ್ಲಿ ಎನ್ನುವಂತಿತ್ತು. ಒಂದು ಮೂಲೆಯಲ್ಲಿ, ಅಕ್ಕ-ಪಕ್ಕದಲ್ಲಿ ಎರಡು ಬಾಗಿಲುಗಳು ಅರೆ ಮುರಿದ ಕಮಾನುಗಳ ಹಿಂದೆ  ಮೌನವಾಗಿ, ನಡೆದದ್ದಕ್ಕೆಲ್ಲ ಸಾಕ್ಷಿಯಾಗಿ  ನಿಂತಿದ್ದರೆ, ನನಗೆ ಸಖಿಯರಿಬ್ಬರು ಸಂಜೆ ಹೊತ್ತು ಹೊರನಿಂತು ಪಿಸು ಮಾತುಗಳನ್ನಾಡಿದಂತೆ, ಕಿಲ-ಕಿಲನೆ ನಕ್ಕಂತೆ, ಮತ್ತೆ ಏನೇನೋ  ಅನ್ನಿಸಲು ಶುರುವಿಟ್ಟಿತ್ತು. ಹಿಂದಿನಿಂದ ಎಲ್ಲಿಂದಲೋ  ತೇಲಿ ಬರುವ ಪಾರಿಜಾತದ ಗಂಧ.. ನಿಜವಲ್ಲ, ಕಲ್ಪನೆ! ಪಾರಿಜಾತ ಅರಳಿದ್ದು ಕೇವಲ ಕಲ್ಪನೆಯಲ್ಲಿ 🙂 ಮತ್ತೆ ಕ್ಯಾಮೆರ ಕಣ್ಣೊಳಗೆ ನೆನಪಿನ ಕಾರ್ಡ್ ತುಂಬಿಸಿ, ಇನ್ನೇನು ಹೊರಡುವ ಯೋಚನೆಯಲ್ಲಿದ್ದರೆ, ಸೂತ್ರ ಹರಿದ, ಪಾಳು ಗೋಡೆಯಲ್ಲಿ ಸಿಲುಕಿಕೊಂಡ ಸುಂದರ ಪತಂಗವೊಂದು  ನಕ್ಕು ನನ್ನ ಮತ್ತೆ ನಿಲ್ಲಿಸಿಬಿಟ್ಟಿತು.. ಸುತರಾಂ ನನಗೆ  ಅಲ್ಲಿಂದ ಹೊರಡುವ ಮನಸಿರಲಿಲ್ಲ… ಅಲ್ಲೇ ಹಾರಾಡುತ್ತಿದ್ದ ಪಾರಿವಾಳಗಳೊಡನೆ ಅಲ್ಲೇ ಉಳಿದುಬಿಡುವಂತೆ ಹುಚ್ಚು ಮನಸು ಕುಣಿಯುತ್ತಿತ್ತು… ೪೫ ಅಡಿ ಎತ್ತರದ ಗಡಿಯಾರದಲ್ಲಿ ಕಾಲನ ಗಂಟೆ ಮಾತ್ರ ಎಂದಿನಂತೆ ತಟಸ್ಥ, ತನ್ನ ಪಾಡಿಗೆ ತಾನು.. ಕವನಗಳ ಖಜಾನೆಯನ್ನೇ ಕಟ್ಟಬಹುದಾದಂಥ ಜಾಗದಿಂದ ಒಲ್ಲದ ಮನಸಿನಿಂದ ಭಾರವಾದ ಹೆಜ್ಜೆಗಳನ್ನು ಎತ್ತಿಡುತ್ತಾ ಸಾಗಿದೆ. ಭುಜೋಡಿ  ಗ್ರಾಮ ನನ್ನ ಕರೆಯುತ್ತಿತ್ತು…

(ಮುಂದುವರಿಯುವುದು…)

‍ಲೇಖಕರು avadhi

27 March, 2014

ನಿಮಗೆ ಇವೂ ಇಷ್ಟವಾಗಬಹುದು…

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಸನ್ನಿಧಿಯಲ್ಲಿ

ರಾಜಸ್ಥಾನವೆಂಬ ಸ್ವರ್ಗದ ತುಣುಕು : ಮತ್ತೆ ಮತ್ತೆ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಖಾಲಿ ಬೈಕ್

2 Comments

  1. ahalyaballal

    ವೀಡಿಯೋ ಕ್ಯಾಮೆರಾದ ಲೆನ್ಸ್ ಮೂಲಕ ಅರಮನೆಯನ್ನ ನೋಡಿದ ಹಾಗಾಗ್ತು, ಬಬಲ್ಸ್ 🙂

  2. ಮಂಜುಳಾ ಬಬಲಾದಿ

    Thank you Ahalya 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading