ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಪಾತದಂಚಿಗೆ ಹೋಗಲು ಸಿದ್ಧವಿದ್ದರೆ ಜೋಗಿಯ ಈ ಕಾದಂಬರಿ ಓದಿ!

ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು!

ಹರೀಶ್ ಕೇರ

ವ್ಯಾಸರು ತಮ್ಮ ಬದುಕು ಮತ್ತು ತಳಮಳಗಳನ್ನು ಕೇಂದ್ರವಾಗಿಟ್ಟುಕೊಂಡು ಬರೆದಿದ್ದರೆ, ಹೇಗೆ ಬರೆಯುತ್ತಿದ್ದರು? ಹಸ್ತಿನಾಪುರಕ್ಕೆ ಬಂದು ತನ್ನ ಅಮ್ಮ ಯೋಜನಗಂಧಿಯ ಜತೆಗೆ “ಇನ್ನು ಭೂಮಿಯ ಯವ್ವನದ ದಿನಗಳು ಮುಗಿದವು, ಹೊರಡು” ಎನ್ನುವಾಗ ಅವರ ಭಾವ ಹೇಗಿದ್ದಿರಬಹುದು? “ಎರಡೂ ಕೈಯೆತ್ತಿ ಬೊಬ್ಬಿರಿಯುತ್ತಿದ್ದೇನೆ, ನಾನು ಹೇಳುತ್ತಿರುವುದನ್ನು ಕೇಳುವವರೇ ಇಲ್ಲ” ಎಂದು ಬರೆದುಕೊಳ್ಳುವ ವ್ಯಾಸರು ತಮ್ಮ ಅಂತರಂಗವನ್ನು ನಿಜಕ್ಕೂ ಬರೆಯಬಲ್ಲವರಾಗಿದ್ದರೆ? ಕವಿ ನಿಜಕ್ಕೂ ತನ್ನನ್ನೇ ಮಥಿಸಿಕೊಳ್ಳಲು ಹೊರಟರೆ ಏನಾಗುತ್ತದೆ?

ಜೋಗಿಯವರ ಕಾದಂಬರಿಯನ್ನು ಮುಂದಿಟ್ಟುಕೊಂಡು ಕೂತಾಗ ಇಂಥ ಪ್ರಶ್ನೆಗಳೆಲ್ಲ ಏಳುತ್ತವೆ. ಕವಿತೆಯನ್ನು ಬರೆಯುವ ಕ್ರಿಯೆಯ ಅಸಹಜತೆಯನ್ನೂ ಇಲ್ಲಿನ ಕವಿ ಬಲ್ಲ. ಆದರೆ ಅದರಿಂದ ಅವನಿಗೆ ಬಿಡುಗಡೆಯಿಲ್ಲ. ನಾವೆಲ್ಲ ಇಂಥ ಒಂದೊಂದು ಬಂಡೆಗಳನ್ನು ಹೊತ್ತು ಮತ್ಸ್ಯನಂತೆ ತಿರುಗುತ್ತಲೇ ಇರುತ್ತೇವೆ. ಕ್ರಿಯೆಯಾಗಿ, ಕವಿತೆಯಾಗಿ ಅದು ಇಣುಕುತ್ತಿರುತ್ತದೆ; ಅದು ಅರ್ಥಪೂರ್ಣವೆಂದು ಭಾವಿಸುತ್ತೇವೆ. ಆದರೆ ಅದರ ಅರ್ಥಹೀನತೆ ಇನ್ಯಾವತ್ತೋ ಗೊತ್ತಾಗಿ ನಮ್ಮನ್ನು ಅಣಕಿಸುತ್ತದೆ. ಕುರುಕ್ಷೇತ್ರವನ್ನು ಗೆದ್ದ ಧರ್ಮರಾಯನ ವಿಷಾದವೂ ಭಾರತವನ್ನು ಬರೆದ ವ್ಯಾಸರ ವಿಷಾದವೂ ಬೇರೆಯೇ ಏನು?

ಜೋಗಿ ತಮ್ಮೀ ಕಾದಂಬರಿಗೆ ಹೊಸ ಬಗೆಯ “ಉಕ್ತಿಭಂಗಿ’ಯೊಂದನ್ನು ಆಯ್ದುಕೊಂಡಿದ್ದಾರೆ. ಇದು ತೇಜಸ್ವಿ ಬಳಸಿದ ಪದ. “ಮಾಯಾಲೋಕ’ಕ್ಕೆ ಬರೆದ ಮುನ್ನುಡಿಯಲ್ಲಿ ಅವರು “ಕನ್ನಡ ಸಾಹಿತ್ಯ ಹೊಸ ಉಕ್ತಿಭಂಗಿಗಳನ್ನು ಹುಡುಕಿಕೊಳ್ಳಬೇಕಾಗಿದೆ” ಎಂದು ಬರೆದಿದ್ದರು. ಇಲ್ಲಿರುವ ಕವಿ ರೊಚ್ಚಿಗೆದ್ದಿದ್ದಾನೆ; ಬದುಕಿನ ಸಂಭವ ಅಸಂಭವಗಳು ಆತನನ್ನು ಭರ್ಚಿಯಂತೆ ಇರಿದಿವೆ. ಇದನ್ನು ಕೆಂಡದಂತೆ ಹಿಡಿದಿಡಲಾಗದ ಕವಿತೆ ಇದ್ದರೆಷ್ಟು ಬಿಟ್ಟರೆಷ್ಟು ಎಂಬ ಭಾವವಿರುವ ಆತ ಸಿನಿಕ; ಅವನ ಮಾತು ಕಟು. ತನ್ನ ಕವಿತೆಗಳ ಬಗ್ಗೆ ಆತನಿಗೆ ಗೌರವವಿಲ್ಲ. ಓದುಗರ, ವಿಮರ್ಶಕರ ಬಗೆಗೂ ಗೌರವವಿಲ್ಲ. ಆದರೆ ಆತನ ಸಿನಿಕತೆಯ ರಹಸ್ಯ ಏನು ಎಂಬುದು ಆತನ ಬದುಕಿನ ಆತ್ಯಂತಿಕ ದುರಂತವನ್ನು ಬಲ್ಲವರು ಮಾತ್ರ ಗುರುತಿಸಲು ಸಾಧ್ಯ.

‘ಎಲ್’ ಎಂಬ ಕವಿ ತನ್ನ ಕಾವ್ಯದ ಬಗ್ಗೆ ಮೊದಲು ಮಾಡಿ, ನಂತರ ತನ್ನ ಬದುಕಿನ ಕಥನವನ್ನು ಹೇಳುತ್ತ ಹೋಗುತ್ತಾನೆ. ಹಾಗೆ ಆತ ಹೇಳುವ ಕ್ರಮದಲ್ಲೇ ತನ್ನ ಬದುಕಿನ ಹಾಗೂ ಸಮಾಜದ ವಿನ್ಯಾಸದ ಬಗ್ಗೆ ಟೀಕೆ, ಸಿಟ್ಟು ವ್ಯಕ್ತಗೊಳ್ಳುತ್ತ ಹೋಗುತ್ತದೆ. ಬದುಕಿನ ದುರಂತದ ಅರಿವು ಗಾಢವಾಗಿ ತಟ್ಟುತ್ತದೆ.

ಇದನ್ನು ಓದುತ್ತಾ ನನಗೆ ಪೂರ್ಣಚಂದ್ರ  ತೇಜಸ್ವಿ ಅವರ “ಸ್ವರೂಪ’ ಕಾದಂಬರಿ ನೆನಪಾದುದು ಆಕಸ್ಮಿಕ ಇರಲಾರದು. ಅಲ್ಲೂ ನಾಯಕ ಗೆಳೆಯನನ್ನು ಎದುರಿಗೆ ಕೂರಿಸಿಕೊಂಡು ತಾನು ಹಳ್ಳಿಗೆ ಯಾಕೆ ಬಂದೆ, ನೀವೆಲ್ಲ ಹೇಗೆ ಸೋಗಲಾಡಿ ಬರಹಗಳನ್ನು ಬರೆದುಕೊಳ್ಳುತ್ತ ದಡ್ಡುಗಟ್ಟಿದ್ದೀರಿ, ನನಗೆ ಎದುರಾಗಿರುವ ಬದುಕಿನ ಬೆಚ್ಚಿಬೀಳಿಸುವ ಸತ್ಯಗಳು ಯಾವುವು ಎಂಬುದನ್ನೆಲ್ಲ ಹೇಳುತ್ತ ಹೋಗುತ್ತಾನೆ.

ಎಲ್ ಪ್ರಸಿದ್ಧ ಕವಿ ಹೌದು; ಆದರೆ ಆತ ತನ್ನೊಳಗನ್ನು ನಿಜಕ್ಕೂ ಗಾಢವಾಗಿ ಕಲಕಿ ರೂಪಿಸಿದ ಮನೆಯ ಮೌನ, ಅಮ್ಮನ ಚಿತ್ತವಿಚಲತೆ, ಆಕೆಯ ಸಾವು, ಮೋಹಿನಿಯನ್ನು ಅಪ್ಪನ ಹೇಲುಚ್ಚೆ ಕೊಠಡಿಯಲ್ಲಿ ಕೂಡಿಹಾಕುವ ತನ್ನದೇ ಕ್ರೌರ್ಯ, ಅಪ್ಪನ ಸಿಡುಕು, ಮೋಹಿನಿಯ ಜಿಗುಪ್ಸೆ, ಲೀಲಾವತಿಯ ಚುಂಬನ, ಇವನ್ನೆಲ್ಲ ಕವಿತೆಯಾಗಿಸಲಾರ ಎಂಬುದೇ ಬರೆದದ್ದಕ್ಕೂ ಬರೆಯದೆ ಉಳಿದುದಕ್ಕೂ ಇರುವ ಫರಕನ್ನು ಕಾಣಿಸುತ್ತದೆ.

ಜೋಗಿ ಕಾದಂಬರಿ ಕಥನವನ್ನು ಮೀರಿ ಹೊಳಹಿನ ದಾರಿ ಹಿಡಿಯುವುದು ಇಂಥ ಕಡೆಯಲ್ಲಿ. “ತಾಯಿ ನಿನ್ನೆ ಸತ್ತಳೋ ಮೊನ್ನೆಯೋ ಗೊತ್ತಿಲ್ಲ’ ಎನ್ನುವ, ತಾಯಿಯ ಶವದ ಪಕ್ಕ ಕುಳಿತು ಸಿಗರೇಟು ಸೇದುವ ಅಲ್ಬರ್ಟ್ ಕಾಮುವಿನ “ಸ್ಟ್ರೇಂಜರ್’ ಕಾದಂಬರಿಯ ನಾಯಕ, ಸಹಜವೆನಿಸುವ ಮನುಷ್ಯನ ವರ್ತನೆ ಆಳದಲ್ಲಿ ನರಕವಾಗುತ್ತ ಹೋಗುವುದನ್ನು ತನ್ನ ವಿಶ್ಲೇಷಣೆಯ ಮೂಲಕವೇ ಕಂಡುಕೊಳ್ಳುವ ಅದೇ ಲೇಖಕನ “ದಿ ಫಾಲ್’ ಕೃತಿಯ ನಾಯಕರೂ ಇಂಥವರೇ. ಇಲ್ಲಿನ ವಿಷಾದಭರಿತ ಎಲ್ ನಿಜಕ್ಕೂ ನಿಜವಾಗುವುದು ತನ್ನ ಬಾಲ್ಯದ ರೆಂಜೆ ಹೂಗಳನ್ನು ನೆನೆದಾಗ ಎನ್ನುವುದು ನಮ್ಮ ಬಗ್ಗೆಯೂ ಏನೋ ಹೇಳುತ್ತಿರಬಹುದಲ್ಲವೇ?

ನನ್ನ ಕಾವ್ಯಕ್ಕೆ ಓದುಗರು ಇದ್ದಾರೋ ಇಲ್ಲವೋ ಎಂಬ ಕಳವಳ ವ್ಯಾಸನ ಕಳವಳದಂತೆ; ಅದಿದ್ದರಷ್ಟೇ ಕವಿ ಬೆಚ್ಚಿ ಬೀಳಿಸುವಂತೆ ಬರೆಯಲು ಸಾಧ್ಯ. ಜೋಗಿಯವರ ಹಲವು ಬರಹಗಳಲ್ಲಿ ಓದುಗನ ಬಗ್ಗೆಯೂ, ಕವಿಯ ಸೃಜನಶೀಲತೆಯ ಬಗ್ಗೆಯೂ ಇಂಥ ಕಳವಳಗಳು ಇವೆ. ಹೀಗಾಗಿ ಇಲ್ಲಿ ಕಾದಂಬರಿಯ ಬಿಂಬಗಳು ಎಲ್ಲಿ ಮುಗಿಯುತ್ತವೆ, ಎಲ್ಲಿಂದ ಜೋಗಿ ಇಣುಕುತ್ತಾರೆ ಎಂದು ನುಡಿಯುವುದು ಕಷ್ಟ.

ತನ್ನ ಸುತ್ತಲಿನ ಸಾಮಾಜಿಕ ಅಸ್ತವ್ಯಸ್ತತೆಯ ಬಗ್ಗೆ ಕವಿ ಸಿಟ್ಟಿಗೆದ್ದ ನಾಟಕ ಮಾಡಬಹುದು; ಆದರೆ ಅದು ನಿಜವಾದ ಸಿಟ್ಟೋ ಅಲ್ಲವೋ ನಿರ್ಧರಿಸುವುದು ಸಾಧ್ಯವಿಲ್ಲ. ಆದರೆ ತನ್ನ ಬಗ್ಗೆಯೇ ಸಿಟ್ಟುಗೊಳ್ಳುವ, ತನ್ನನ್ನೇ ಮಥನ ಮಾಡಿಕೊಳ್ಳುವ ಕವಿ ತನ್ನ ಬದುಕಿನ ಜತೆಗೂ ಸಮಾಜದ ಜತೆಗೂ ಘರ್ಷಿಸಿಕೊಳ್ಳುತ್ತ, ಪ್ರಪಾತದ ಅಂಚಿಗೆ ಹೋಗಿ ಕಣಿವೆಯ ಸೌಂದರ್ಯವನ್ನೂ ರೌದ್ರವನ್ನೂ ಕಾಣುತ್ತಾನೆ.

ನೀವು ಅವನ ಜೊತೆ ಹೀಗೆ ಪ್ರಪಾತದಂಚಿಗೆ (extreme) ಹೋಗಲು ಸಿದ್ಧವಿದ್ದರೆ ಮಾತ್ರ ಈ ಕಾದಂಬರಿ ಓದಿ!

‍ಲೇಖಕರು avadhi

4 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading