
ಜಿ ಎನ್ ನಾಗರಾಜ್
ಅಂಬೇಡ್ಕರ್ ರವರ ೧೨೬ ನೇ ಜನ್ಮ ದಿನಾಚರಣೆ ಮಾಡುತ್ತಿರುವ ಈ ಸಮಯದಲ್ಲಿ ಎಲ್ಲರೂ ಗುರುತಿಸುತ್ತಿರುವಂತೆ ಅಂಬೇಡ್ಕರ್ ರವರ ವಿಚಾರಗಳು ಮತ್ತು ಸಾಧನೆಗಳು ಹೆಚ್ಚು ಹೆಚ್ಚು ದಲಿತ ಮತ್ತು ಇತರ ತುಳಿತಕ್ಕೊಳಗಾದ ಸಮುದಾಯವನ್ನು ಸೆಳೆಯುತ್ತದೆ. ಹೆಚ್ಚು ಹೆಚ್ಚು ಜನರು , ಸಂಘಟನೆಗಳು, ಪಕ್ಷಗಳು ಇದನ್ನು ಗುರುತಿಸುತ್ತಿವೆ ಮತ್ತು ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಹೆಚ್ಚು ವ್ಯಾಪಕವಾಗಿ ನಡೆಯುತ್ತಿದೆ.

ಈ ಸಮಯದಲ್ಲಿ ದಲಿತ ಮತ್ತಿತರ ದಮನಿತ ಜನ ಸಮುದಾಯದ ಏಳಿಗೆಗಾಗಿ ಮತ್ತು ಅವರಿಗಿನ್ನೂ ದಕ್ಕದ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ಒಂದು ಮುಖ್ಯ ಕರ್ತವ್ಯವನ್ನು ನಾವೆಲ್ಲರೂ ಕೈಗೊಳ್ಳಬೇಕಾಗಿದೆ ಎಂದು ನನ್ನ ಭಾವನೆ.
ಪ್ರತಿ ವರ್ಷದಲ್ಲಿಯೂ ದಲಿತರ ಪರಿಸ್ಥಿತಿ ಮತ್ತು ಅಸ್ಪೃಶ್ಯತೆಯ ಆಚರಣೆಗಳು, ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಒಂದು ವಾರ್ಷಿಕ ವರದಿಯನ್ನು ದಲಿತ ಮತ್ತಿತರ ಸಾಮಾಜಿಕ ಚಳುವಳಿಯ ಜನ ಸಂಘಟನೆಗಳೇ ತಯಾರಿಸಬೇಕು. ಮತ್ತು ಬಿಡುಗಡೆ ಮಾಡಬೇಕು. ಮಾನವ ಹಕ್ಕು ವರದಿ, ಪರಿಸರ ವರದಿಗಳಂತೆ.
ಹಾಗೆಯೆ ಪ್ರತಿವರ್ಷವೂ ಒಂದು ಅಂಬೇಡ್ಕರ್ ಪ್ರಣಾಳಿಕೆಯನ್ನು ತಯಾರಿಸಬೇಕು.
ಅದರಲ್ಲಿ ಪ್ರತಿವರ್ಷವೂ ಒಂದು ಮುಖ್ಯ ಗುರಿಯನ್ನಿರಿಸಿಕೊಂಡು ಎಲ್ಲರೂ ವರ್ಷವಿಡೀ ಅದರ ಸಾಧನೆಗಾಗಿ ಶ್ರಮಿಸಬೇಕು. ಎಲ್ಲರೂ ಒಗ್ಗೂಡಿ ಬೃಹತ್ ಚಳುವಳಿಗಳನ್ನು ಹಮ್ಮಿಕೊಳ್ಳಬೇಕು. ಎಲ್ಲರೂ ಒಂದೇ ಗುರಿಯತ್ತ ತುಡಿದರೆ ಅದನ್ನು ಸಾಧಿಸುವುದೇನೂ ಬಹಳ ಕಷ್ಟವಲ್ಲ.
ಈ ವರ್ಷ ‘ರೋಹಿತ್ ವೇಮುಲ ಕಾಯಿದೆ’ ಮತ್ತು ‘ಖಾಸಗಿ ರಂಗದಲ್ಲಿ ಮೀಸಲಾತಿ’ ನಮ್ಮ ಗುರಿಯಾಗಬೇಕು. ಈ ಗುರಿಯನ್ನು ರಾಜ್ಯ ಮಟ್ಟಗಳಲ್ಲಿ, ಎರಡು ತಿಂಗಳ ಮೊದಲೇ ಚರ್ಚೆ ಆರಂಭಿಸಿ ಜನ್ಮ ದಿನಾಚರಣೆಗೆ ಮೊದಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಬೇಕು. ಇಡೀ ವರ್ಷ ಎಲ್ಲರೂ ಅದಕ್ಕಾಗಿ ಒಗ್ಗೂಡಿ ಚಳುವಳಿಗಳನ್ನು ರೂಪಿಸಬೇಕು.
೧೨೬ ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿಯಾದರೂ ಈ ಕೆಲಸ ಕೈಗೊಳ್ಳೋಣ . ಇದು ನಮ್ಮೆಲ್ಲರ ನಡುವಣ ವ್ಯತ್ಯಾಸಗಳ ನಡುವೆಯೂ ಒಂದು ಮುಖ್ಯ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ದಲಿತ ಮತ್ತು ಹಿಂದುಳಿದ ಜನ ಸಮುದಾಯಗಳ ಬದುಕಿಗೆ ಅಂಬೇಡ್ಕರ್ ರವರು ಇರಿಸಿಕೊಂಡ ಗುರಿಯ ಸಾಧನೆಯತ್ತ ಮುಖ್ಯ ಹೆಜ್ಜೆಯಾಗುತ್ತದೆ.






0 Comments