ಕನ್ನಡದ ಬಹು ಮುಖ್ಯ ಸಾಹಿತಿ . ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು.
‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.
ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.
ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.
ಕಳೆದ ವಾರದ ಸಂಚಿಕೆಗೆ ಇಲ್ಲಿ – ಕ್ಲಿಕ್ಕಿಸಿ

ಸ್ವಲ್ಪ ಹೈದರನ ಹಿನ್ನೆಲೆ ನೋಡೋಣಾ. ಆತನ ವಿಕ್ಷಿಪ್ತ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳಲು ಈ ಹಿನ್ನೆಲೆ ಪೂರಕವಾಗುತ್ತದೆ.
ಹೈದರ್ ಅಲಿ ಹುಟ್ಟಿದ್ದು 1720-21. ಸರಿಯಾದ ದಿನಾಂಕ ಗೊತ್ತಿಲ್ಲ. ಸತ್ತಿದ್ದು 7 ಡಿಸೆಂಬರ್ 1782 ರಂದು. ಆತ ನಿಜವಾಗಿ ಕಣಕ್ಕೆ ಇಳಿದಿದ್ದು ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲಿ. ಅಂದರೆ ಕೇವಲ 33 ವರ್ಷಗಳಲ್ಲಿ ಹೈದರ್ ಅಲಿ ಚರಿತ್ರೆಯ ಪುಟಗಳಲ್ಲಿ ಎಂದಿಗೂ ಕಡೆಗಣಿಸಲಾಗದಂತಹ ಸಾಧನೆ ಮಾಡಿದ.
ಆತನ ಪೂರ್ವಜರ ಬಗ್ಗೆ ಹಲವಾರು ಕಥೆಗಳಿವೆ. 1893 ರಲ್ಲಿ ಎಲ್ ಬಿ ಬ್ರೌನಿಂಗ್ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಬರೆದ ಪುಸ್ತಕದಲ್ಲಿ ಹೇಳಿದಂತೆ ಸಾಮಾನ್ಯವಾಗಿ ಭಾರತದಲ್ಲಿ ಮತ್ತು ಜಗತ್ತಿನ ಇತರ ಭಾಗಗಳಲ್ಲಿ ಉತ್ಸಾಹಿ ವ್ಯಕ್ತಿ ಕಷ್ಟಪಟ್ಟು, ತನ್ನ ಸ್ವಯಂ ಪ್ರಯತ್ನದಿಂದ ಸಿಂಹಾಸನ ಏರಿದಾಗ ಆತ ಪ್ರತಿಷ್ಠಿತ ವಂಶಾವಳಿಯಲ್ಲಿ ಹುಟ್ಟಿದ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತದೆ.
ಹಾಗಾಗಿ ಸ್ಥಳೀಯ ಚರಿತ್ರೆಕಾರರು ಹೈದರ್ ಅಲಿ ಖುರೇಷಿ ತಳಿ ಎಂದು ಹೇಳಿಕೊಂಡಿದ್ದಾರೆ. (ಖುರೇಷಿಗಳು ಮೆಕ್ಕಾದಲ್ಲಿ ಪ್ರವಾದಿ ಮುಹಮ್ಮದ್ ಜನಿಸಿದಾಗ ಇದ್ದ ಸಮುದಾಯ. ಪ್ರಾರಂಭದಲ್ಲಿ ಇವರು ವಿರೋಧಿಸಿ ತೊಂದರೆ ಕೊಟ್ಟರೂ ಕೊನೆಯಲ್ಲಿ ಆತನನ್ನು ಪ್ರವಾದಿ ಎಂದು ಒಪ್ಪಿಕೊಂಡು ಅನುಯಾಯಿಗಳಾದರು) ಅದರ ಪ್ರಕಾರ ಹೈದರನ ಪೂರ್ವಜ ಹಸನ್ ಎನ್ನುವವನು ಬಾಗ್ದಾದಿನಿಂದ ಬಂದು ಅಜ್ಮಿರಿನಲ್ಲಿ ನೆಲೆಗೊಂಡ. ಅಲ್ಲಿ ಅವನಿಗೆ ಒಬ್ಬ ಮಗ ಹುಟ್ಟಿದ, ಅವನ ಹೆಸರು ವಲಿ ಮುಹಮ್ಮದ್. ಈತ ತನ್ನ ಚಿಕ್ಕಪ್ಪನೊಂದಿಗೆ ಜಗಳವಾಡಿಕೊಂಡು ಅಜ್ಮಿರ್ ತೊರೆದು ಗುಲ್ಬರ್ಗಾಗೆ ಬಂದ. ಅವನ ಮಗ ಅಲಿ ಮುಹಮ್ಮದ್ ಕೋಲಾರಕ್ಕೆ ವಲಸೆ ಬಂದ. ಅವನ ನಾಲ್ಕು ಮಕ್ಕಳಲ್ಲಿ ಕೊನೆಯವನು ಫತೇ ಮುಹಮ್ಮದ್. ಇವನ ಎರಡನೆಯ ಮಗ ಹೈದರ್ ಅಲಿ.

ಆದರೆ ವಿಲ್ಕ್ಸ್ ಮತ್ತೊಂದು ಮೂಲವನ್ನು ಉದ್ಧರಿಸಿ ಆ ಪ್ರಕಾರ ಪಂಜಾಬಿನ ಮುಹಮ್ಮದ್ ಭೈಲೊಳ್ ತನ್ನ ಮಕ್ಕಳು ಅಲಿ ಮುಹಮ್ಮದ್ ಮತ್ತು ವಲಿ ಮುಹಮ್ಮದ್ ಅವರನ್ನು ಕರೆದುಕೊಂಡು ದಕ್ಷಿಣಕ್ಕೆ ವಲಸೆ ಬಂದು ಹೈದರಾಬಾದಿನ ಆಳಂದದಲ್ಲಿ ನೆಲೆಸಿದ. ಆತನ ಮಕ್ಕಳು ಮೈಸೂರು ಪ್ರಾಂತ್ಯದ ಸಿರಾಗೆ ಬಂದು ಅಲ್ಲಿಂದ ಕೋಲಾರಕ್ಕೆ ವಲಸೆ ಬಂದರು. ಇಲ್ಲಿ ಅಲಿ ಮುಹಮ್ಮದ್ ತೀರಿಕೊಂಡ. ಆತನ ಮಕ್ಕಳನ್ನು ವಲಿ ಮುಹಮ್ಮದ್ ಬಹಳ ಕೆಟ್ಟದಾಗಿ ನಡೆಸಿಕೊಂಡು ಅವರ ತಾಯಿಯ ಸಹಿತ ಮನೆಯಿಂದ ಹೊರಗೆ ಹಾಕಿದ.
ಹೈದರ್ ಮತ್ತು ಆತನ ಅಣ್ಣ ಶಾಬಾಜ್ ನನ್ನು ಒಂದು ನಗಾರಿಯ ಒಳಗೆ ಹಾಕಿ ಜೋರಾಗಿ ಬಡಿದು ಚಿತ್ರಹಿಂಸೆ ಕೊಟ್ಟರು. ಆಗ ಅವರ ತಾಯಿ ಶ್ರೀರಂಗಪಟ್ಟಣದಲ್ಲಿದ್ದ ಗಂಡನ ಅಣ್ಣನ ಮಗ ಹೈದರ್ ಸಾಹಿಬ್ ಬಳಿಯಲ್ಲಿ ತನ್ನ ದುಃಖವನ್ನು ತೋಡಿಕೊಂಡಾಗ ಆತ ಅವರನ್ನು ಕರೆಸಿಕೊಂಡು ಆಶ್ರಯ ನೀಡಿ ಇಬ್ಬರನ್ನೂ ತನ್ನ ಸ್ವಂತ ಮಕ್ಕಳಂತೆ ಕಾಪಾಡಿದ. ಶಾಬಾಜ್ ವಯಸ್ಸಿಗೆ ಬಂದ ತಕ್ಷಣ ಅವನಿಗೆ ಸೈನ್ಯದಲ್ಲಿ ಫೌಜುದಾರನ ಕೆಲಸ ಕೊಡಿಸಿದ.
ಹೈದರನಿಗೆ ಇಪ್ಪತ್ತೊಂದು ವರ್ಷವಾದರೂ ಓದಿಲ್ಲ ಬರಹ ಇಲ್ಲ. ಯಾವಾಗ ನೋಡಿದರೂ ಅಪಾಯಕಾರೀ ಬೇಟೆಯಾಡುವುದು, ಗೆಳೆಯರ ಜೊತೆ ಮೋಜು ಮಸ್ತಿಯಲ್ಲಿ ಸುಖವಾಗಿ ಕಾಲಕಳೆಯುವುದು ಅಭ್ಯಾಸವಾಗಿ ಬಿಟ್ಟಿತ್ತು. ಇಂತಹವರನ್ನು ನೀವು ನೋಡಿರುತ್ತೀರಿ. ಒಂದು ರೀತಿಯ ಹುಂಬತನ, ಯಾವುದಕ್ಕೂ ಬಗ್ಗದ ಹಠಮಾರಿತನ, ಉಡಾಫೆ. ತನ್ನ ಬಗ್ಗೆ ಅತಿಯಾದ ಆತ್ಮವಿಶ್ವಾಸ. ಯಾವುದಕ್ಕೂ ಹೆದರದ ಹಮ್ಮು. ಹೇಳುವವರು ಕೇಳುವವರು ಇಲ್ಲದ, ಹೊಟ್ಟೆ ಬಟ್ಟೆಗೆ ಚಿಂತೆ ಇಲ್ಲದ ಅಹಂ. ಕ್ಲಾಸಿನಲ್ಲಿ ಅತಿಯಾಗಿ ಗಲಾಟೆ ಮಾಡುವವರನ್ನೇ ಮಾನಿಟರ್ ಮಾಡಿದರೆ ಹೇಗೆ ಎಲ್ಲಾರನ್ನೂ ಶಿಸ್ತಿನಲ್ಲಿ ಇಡುತ್ತಾರೋ ಹಾಗೆ ಹೈದರನಿಗೆ ಒಂದು ಪಡೆಯ ಜವಾಬುದಾರಿ ಬರುವ ಕಾಲ ಬಂದಿತು.
ಈ ಸಮಯದಲ್ಲಿ ದಳವಾಯಿ ನಂಜರಾಜನ ಮುಂದಾಳತ್ವದಲ್ಲಿ ಮೈಸೂರು ಸೈನ್ಯ ದೇವನಹಳ್ಳಿ ಕೋಟೆಗೆ ಮುತ್ತಿಗೆ ಹಾಕಿತು. ಅದರಲ್ಲಿ ಶಾಬಾಜ್ ಭಾಗವಹಿಸಿದ. ಅವನ ಪಡೆಯ ಅಂಗವಾಗಿ ಹೈದರ್ ತಾನೂ ಹೋದ. ದೇವನಹಳ್ಳಿಯ ಮುತ್ತಿಗೆಯಲ್ಲಿ ಅಣ್ಣನ ಜೊತೆಗೆ ಪಾಲುಗೊಂಡ ಹೈದರನಿಗೆ ಆ ವಯಸ್ಸಿನ ಸೈನಿಕರಲ್ಲಿ ಕಂಡುಬರದ ಧೈರ್ಯ ಮತ್ತು ಮುನ್ನುಗ್ಗುವ ಹಠ ಮತ್ತು ಮೊದಲ ಬಾರಿಗೆ ತಾನೆಂತಹ ಛಲವಾದಿ ಎನ್ನುವುದನ್ನು ತೋರಿಸಿಕೊಳ್ಳುವ ಅವಕಾಶ ಒದಗಿ ಬಂತು.

ಯಾವತ್ತೂ ಯುದ್ಧ ಮಾಡದ, ಯಾವ ರೀತಿಯ ಕೌಶಲ್ಯವನ್ನೂ ಅಭ್ಯಾಸ ಮಾಡಿಕೊಂಡಿಲ್ಲದ ಈ ಯುವಕ ತೋರಿದ ಸಾಹಸ ಮತ್ತು ದೇವನ ಹಳ್ಳಿ ಕೋಟೆಯಿಂದ ಪಾಳೇಗಾರನನ್ನು ಓಡಿಸಿದ ರೀತಿ ದಳವಾಯಿ ನಂಜರಾಜನಲ್ಲಿ ಆಶ್ಚರ್ಯ ಉಂಟುಮಾಡಿತು. ತಕ್ಷಣವೇ ನಂಜರಾಜ ಹೈದರನನ್ನು ಐವತ್ತು ಕುದುರೆ, ಇನ್ನೂರು ಕಾಲಾಳುಗಳ ಮುಖ್ಯಸ್ಥನನ್ನಾಗಿ ಮಾಡಿದ. ಜೊತೆಗೆ ತನ್ನ ಪಡೆಯನ್ನು ವಿಸ್ತರಿಸಿಕೊಳ್ಳುವ ಅನುಮತಿಯನ್ನು ನೀಡಿದ. ಇದು ಹೈದರನ ಬದುಕಿನ ಮುಖ್ಯ ತಿರುವು. ಇದು ನಡೆದಿದ್ದು 1749ರಲ್ಲಿ.
ಎರಡನೆಯ ತಿರುವು ಸಿಕ್ಕಿದ್ದು ಮತ್ತೆ ಅದೇ ವರ್ಷ ನಾಸಿರ್ ಜಂಗನ ಯುದ್ಧದಲ್ಲಿ ಮೈಸೂರಿನ ನೆರವು ಕೋರಿದ್ದರಿಂದ ಕಳಿಸಲಾದ ಪಡೆಯಲ್ಲಿ ಹೈದರ್ ಸೇರಿದ್ದು. ವಿಚಿತ್ರ ತಿರುವುಗಳಿಂದ ಕೂಡಿದ ಆ ಯುದ್ಧದಲ್ಲಿ ನಾಸಿರ್ ಜಂಗ್ ಮೃತಪಟ್ಟ. ಅಪಾಯದ ಸೂಚನೆ ಸಿಕ್ಕ ಕೂಡಲೇ ನಾಸಿರ್ ಜಂಗನ ಸೇನಾನಿಗಳು ಆತನ ಖಜಾನೆಯನ್ನು ಆನೆ, ಒಂಟೆಗಳಲ್ಲಿ ತುಂಬಿ ಬೇರೆಡೆಗೆ ಸಾಗಿಸಲು ತೊಡಗಿದರು. ತಕ್ಷಣವೇ ಹೈದರ್, ಮೊದಲೇ ಸೂಚಿಸಿದಂತೆ, ತನ್ನ ಆಯ್ದ ನಿಷ್ಠಾವಂತ ಮುನ್ನೂರು ಬೇಡರ ಪಡೆಯ ಯುವಕರ ಜೊತೆ ಸೇರಿ, ಗುಂಪಿನ ನಡುವೆ ಬೆರೆತು, ಚಿನ್ನದ ನಾಣ್ಯಗಳ ಥೈಲಿಗಳನ್ನು ಹೊತ್ತಿದ್ದ ಎರಡು ಒಂಟೆಗಳನ್ನು ಪಕ್ಕಕ್ಕೆ ಸರಿಸಿ ತನ್ನ ವಶಕ್ಕೆ ತೆಗೆದುಕೊಂಡು ಕ್ಷಣಾರ್ಧದಲ್ಲಿ ದೇವನಹಳ್ಳಿಯ ಕಡೆಗೆ ದೌಡಾಯಿಸಿದ. ಅಲ್ಲದೇ ಆತನ ಪಡೆ, ಯುದ್ಧ ಭೂಮಿಯಿಂದ ಮುನ್ನೂರು ಕುದುರೆಗಳು ಮತ್ತು ಐನೂರು ನಾಡ ಬಂದೂಕುಗಳನ್ನು ದೋಚಿತು. ಈ ಹಣವನ್ನು ಹೈದರ್ ತನ್ನ ಪಡೆಗೆ ಸಂತೃಪ್ತ ಸಂಬಳ ನೀಡಲು ಮತ್ತು ಇನ್ನಷ್ಟು ವಿಸ್ತರಿಸಲು ಬಳಸಿಕೊಂಡ. ಹೈದರ್ ಈ ಯುದ್ಧದಲ್ಲಿ ಸಾಕಷ್ಟು ಹಣ ಮಾಡಿಕೊಂಡ ಸರಿ, ಆದರೆ ಲೂಟಿಯನ್ನು ಆತ ಮುಂದೆ ಬಳಸಿಕೊಂಡ ರೀತಿ ಮಾತ್ರ ಚಾಣಾಕ್ಷತನದ್ದು.
ಈ ಯುದ್ಧದಲ್ಲಿ ನಡೆದ ಸಂಗತಿಗಳ ಬಗ್ಗೆ ಬ್ರಿಟಿಷ್ ಮತ್ತು ಫ್ರೆಂಚ್ ಇಬ್ಬರೂ ದಾಖಲಿಸಿರುವ ಸತ್ಯವೆಂದರೆ, ಇಬ್ಬರಿಗೂ ಕೂಡಾ ನಿಜಾಮತ್ತಿನ ವಾರಸುದಾರರ ಬಗ್ಗೆ ಕಿಂಚಿತ್ತೂ ಕಾಳಜಿ ಇರಲಿಲ್ಲ. ಅವರ ಜಗಳದಲ್ಲಿ ತಮಗೆ ಏನು ಲಾಭ ಎನ್ನುವುದರ ಕಡೆಗೆ ಮಾತ್ರ ಅವರ ಲಕ್ಷ್ಯ ಇತ್ತು. ಹಾಗೆ ನೋಡಿದರೆ ‘ದೊಡ್ಡವರೇ’ ಹೀಗಾಡುವಾಗ ಹೈದರ್ ಮಾಡಿದ್ದು ಅವರಿಗಿಂತ ಬೇರೆ ಏನೂ ಆಗಿರಲಿಲ್ಲ. ಈ ಯುದ್ಧದಲ್ಲಿ ಚಾಂದ್ ಸಾಹೇಬನನ್ನು ಬೆಂಬಲಿಸಿದ್ದ ಫ್ರೆಂಚ್ ಅಧಿಕಾರಿ ಡುಪ್ಲೆಕ್ಸ್ ನನ್ನು ಫ್ರೆಂಚ್ ಸರ್ಕಾರ 1754 ರಲ್ಲಿ ಹಿಂದಕ್ಕೆ ಕರೆಸಿಕೊಂಡಾಗ ಆತ ಬರಿಗೈಯಲ್ಲಿ ಹಿಂದಿರುಗಿ ತನ್ನ ಕೊನೆಯ ದಿನಗಳನ್ನು ಅತ್ಯಂತ ಬಡತನದಲ್ಲಿ ಕಳೆದು ತೀರಿಕೊಂಡ.
ಈ ಯುದ್ಧದಲ್ಲಿ ಲೂಟಿ ಮಾಡಿದ ಪರಿಣಾಮ ಹೈದರ್ ಯುದ್ಧವನ್ನು ಒಂದು ಲಾಭಕರ ವ್ಯವಹಾರ ಮಾಡಿಕೊಂಡ. ಲೂಟಿ ಮಾಡಿದ್ದರಲ್ಲಿ ಅರ್ಧವನ್ನು ಪಡೆಗೆ ಹಂಚಿ ಇನ್ನರ್ಧವನ್ನು ತಾನಿಟ್ಟುಕೊಳ್ಳತೊಡಗಿದ. ಯುದ್ಧವಿಲ್ಲದಿದ್ದಾಗಲೂ ಈ ಪಡೆಯನ್ನು ದರೋಡೆ ಮಾಡುವ ಕೆಲಸಕ್ಕೆ ಹಚ್ಚಿದ. ಯಾರಿಂದ ಮತ್ತು ಹೇಗೆ ದೋಚುವುದು ಎನ್ನುವುದಕ್ಕೆ ಯಾವುದೇ ಇತಿಮಿತಿ ಇರಲಿಲ್ಲ.

ಶತ್ರುಗಳಿಂದ ದೋಚುವುದಕ್ಕಿಂತ ಸುಲಭವಾಗಿ ಮತ್ತು ಸಂಶಯ ಬರದಂತೆ ಕದಿಯಬಹುದಾದರೆ ಆಪ್ತ ಗೆಳೆಯರಿಂದಲೂ ಕದಿಯಲು ಯಾವ ಸಂಕೋಚವೂ ಇರಲಿಲ್ಲ. ಮಾರ್ಕ್ ವಿಲ್ಕ್ಸ್ ಪಟ್ಟಿಮಾಡಿದ ಪ್ರಕಾರ ಹೆಚ್ಚು ಬೆಲೆ ಬರುವ ಜಾನುವಾರು ಮತ್ತು ಕುರಿಗಳಿಗೆ ಮೊದಲ ಆದ್ಯತೆ. ಕುದುರೆಗಳು ಮತ್ತು ಶಸ್ತ್ರಗಳನ್ನು ದೋಚುವುದರ ಮೂಲಕ ಅಥವಾ ಹಣ ಕೊಟ್ಟು ಖರೀದಿಸುವ ಮೂಲಕ ಸಂಗ್ರಹಿಸಬಹುದಿತ್ತು. ಅದು ಬಿಟ್ಟರೆ ಗಂಡಸರು, ಹೆಂಗಸರು ಮಕ್ಕಳೆನ್ನದೇ ತಲೆಯ ರುಮಾಲಿನಿಂದ ತೊಡಗಿ ಧಾನ್ಯ, ಬಟ್ಟೆ ಆಭರಣಗಳವರೆಗೆ ಎಲ್ಲವನ್ನೂ ದೋಚಲಾಗುತ್ತಿತ್ತು.
ಹೀಗೆ ಒಂದು ಕಡೆ ತನ್ನದೇ ಸಂಪತ್ತು ಇನ್ನೊಂದು ಕಡೆ ರಾಜಮಾನ್ಯತೆ ಸಿಕ್ಕಿ ಹೈದರ್ ಬಹಳ ಬೇಗ ಒಂದೂವರೆ ಸಾವಿರ ಕುದುರೆ, ಮೂರೂ ಸಾವಿರ ಕಾಲಾಳು, ಎರಡು ಸಾವಿರ ಭಟರು ಮತ್ತು ನಾಲ್ಕು ಬಂದೂಕುಗಳನ್ನು ಪಡೆದುಕೊಂಡ. ಇದರಲ್ಲಿ ಐನೂರು ಕುದುರೆಗಳು ಹೈದರನ ಸ್ವಂತದ್ದು. ಜೊತೆಗೆ ಅಂದಿನ ಕಾಲದ ಪದ್ಧತಿಯಂತೆ ಪಡೆಯ ಮುಖ್ಯಸ್ಥ ತನ್ನ ಕೈಕೆಳಗಿನವರ ಜೊತೆ ಮಾಡಿಕೊಳ್ಳುವ ಒಪ್ಪಂದ ಸ್ವಂತದ್ದಾಗಿದ್ದು ಅದರಲ್ಲಿ ಆಡಳಿತ ತಲೆ ಇಡುತ್ತಿರಲಿಲ್ಲ. ಹಾಗಾಗಿ ಆಡಳಿತ ಕೊಡುವ ಸಂಬಳದಲ್ಲಿ ಒಂದು ಪಾಲನ್ನು ಹೈದರ್ ಹಿಡಿದುಕೊಳ್ಳುತ್ತಿದ್ದ. ಲೂಟಿಯಲ್ಲಿ ಅರ್ಧ ಭಾಗ ಇಟ್ಟುಕೊಳ್ಳಲೂ ಸಹ ಮುಖ್ಯಸ್ಥನಿಗೆ ಅಧಿಕಾರವಿತ್ತು. ಆದರೆ ಆ ಮಟ್ಟದಲ್ಲಿ ತನ್ನ ಪಡೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು, ತನಗೆ ನಿಷ್ಠೆಯಿಂದಲೂ ಇರುವಂತೆ ಮಾಡುವ ಛಾತಿ ಮತ್ತು ಕೌಶಲ್ಯ ಛತ್ರಪತಿ ಶಿವಾಜಿಗೆ ಬಿಟ್ಟರೆ ಹೈದರನಿಗೆ ಮಾತ್ರ ಇತ್ತು ಎನ್ನುತ್ತಾನೆ ವಿಲ್ಕ್ಸ್.
ನಿಜಾಮರ ಯುದ್ಧದ ನಂತರ ಹಿಂದಿರುಗುವ ಮೊದಲು ಹೈದರ್ ಪಾಂಡಿಚೇರಿಗೆ ಭೇಟಿ ನೀಡಿ ಅಲ್ಲಿ ಫ್ರೆಂಚ್ ಸೈನ್ಯದ ಶಿಸ್ತು ಮತ್ತು ಸದಾ ಯುದ್ಧ ಸನ್ನದ್ಧತೆಯನ್ನು ಬೆರಗಿನಿಂದ ನೋಡಿದ. ಇದನ್ನೇ ತನ್ನ ಸೈನಿಕರಲ್ಲೂ ಮೂಡಿಸಿ ಶಿಸ್ತಿನ ಸೈನ್ಯ ಸಿದ್ಧಪಡಿಸಿದ. ಈ ಕಾರಣಕ್ಕೇ, ಭಾರತದಲ್ಲಿ ಉಳಿದ ರಾಜರುಗಳನ್ನು ಬಹಳ ಸುಲಭವಾಗಿ ಸೋಲಿಸಿದ ಬ್ರಿಟಿಷರು, ಹೈದರ್ ಅಲಿ ಮತ್ತು ಮರಾಠರ ಸೈನ್ಯ ಇಬ್ಬರಿಂದ ಮಾತ್ರ ಹೊಡೆತ ತಿಂದಿದ್ದು.
ಇದರ ನಂತರವೇ ಹೈದರ್ ಲೆಕ್ಕಪತ್ರಕ್ಕಾಗಿ ಮುತ್ಸದ್ದಿ ಖಂಡೇರಾಯನನ್ನು ನೇಮಿಸಿಕೊಂಡ. ಸ್ವತಃ ಬರೆಯಲು ಓದಲು ಬರದಿದ್ದರೂ ಅಗಾಧ ನೆನಪಿನ ಶಕ್ತಿ ಇದ್ದ ಮತ್ತು ಲೆಕ್ಕ ಮಾಡಲು ಬಲ್ಲ ಹೈದರ್ ಖಂಡೇರಾಯರ ಜೊತೆ ಸೇರಿ ತನ್ನದೇ ಆದ ಒಂದು ವ್ಯವಸ್ಥೆಯನ್ನು ರೂಪಿಸಿದ.

1755 ರಲ್ಲಿ ಹೈದರ್ ದಿಂಡಿಗಲ್ಲಿನ ಫೌಜುದಾರನಾದ. ಐದು ಸಾವಿರ ಕಾಲಾಳು, ಎರಡು ಸಾವಿರದ ಐನೂರು ಕುದುರೆ ಆಳು, ಎರಡು ಸಾವಿರ ಭಟರು ಮತ್ತು ಆರು ಬಂದೂಕಿನ ನಾಯಕನಾಗಿದ್ದ. ಆಗೆಲ್ಲ ಯುದ್ಧದಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯಾಗಲೀ ವೈದ್ಯರಾಗಲೀ ಇರುತ್ತಿರಲಿಲ್ಲ. ಗಾಯಗೊಂಡವರ ಪಟ್ಟಿಯನ್ನು ಸಲ್ಲಿಸಿದರೆ ಅವರಿಗೆ ಝಕಂ ಪಟ್ಟಿ ಎಂದು ತಿಂಗಳಿಗೆ ಹದಿನಾಲ್ಕು ರೂಪಾಯಿ ಭತ್ಯೆ ಸಿಗುತ್ತಿತ್ತು. ಹೈದರ್ ಸಲ್ಲಿಸಿದ ಸುದೀರ್ಘ ಪಟ್ಟಿ ನೋಡಿ ನಂಜರಾಜ ಒಬ್ಬ ವಿಶೇಷಾಧಿಕಾರಿಯನ್ನು ಕಳಿಸಿದ. ಆ ಅಧಿಕಾರಿಯ ಮುಂದೆ ಹೈದರ್ ತನ್ನ ಪಡೆಯ ಗಾಯಗೊಂಡವರ ಸಾಲು ನಿಲ್ಲಿಸಿದ. ಅದರಲ್ಲಿ ನಿಜವಾಗಿ ಗಾಯಗೊಂಡವರು ಅರವತ್ತ ಏಳು. ಹೈದರ್ ಸಾಲು ನಿಲ್ಲಿಸಿದ್ದು ಸುಮಾರು ಏಳುನೂರು. ಅವರ ಕೈಕಾಲುಗಳಿಗೆ ಅರಿಶಿನದ ಪಟ್ಟಿ ಕಟ್ಟಲಾಗಿತ್ತು. ಅವರು ನೋವಿನಿಂದ ಗೋಳಿಡುತ್ತ ಚೆನ್ನಾಗಿ ಅಭಿನಯಿಸಿದರು.
ಪ್ರತಿಯೊಬ್ಬನಿಗೂ ಗಾಯ ವಾಸಿಯಾಗುವ ಅವಧಿಯನ್ನು ಲೆಕ್ಕ ಹಾಕಿ ತಿಂಗಳಿಗೆ ಒಬ್ಬನಿಗೆ ಹದಿನಾಲ್ಕು ರೂಪಾಯಿಯಂತೆ ಹೈದರನಿಗೆ ನೀಡಲಾಯಿತು. ನಿಜವಾಗಿಯೂ ಗಾಯಗೊಂಡವರಿಗೆ ಮಾತ್ರ ಹೈದರ್ ಏಳು ರೂಪಾಯಿ ಕೊಟ್ಟ. ಇದರ ಜೊತೆಗೆ ಸೇನಾ ಮುಖ್ಯಾಧಿಕಾರಿಗಳಿಗೆ ನಂಜರಾಜ ಕಳಿಸಿದ್ದ ಉಡುಗೊರೆಗಳನ್ನು, ಹೈದರ್ ಪ್ರತಿಯೊಬ್ಬರಿಗೂ ಆತನಿಗೇ ಬೇರೆಲ್ಲರಿಗಿಂತ ಹೆಚ್ಚು ಕೊಡುತ್ತಿದ್ದೇನೆ ಎನ್ನುವಂತೆ ನಂಬಿಸಿ ನೀಡಿದ.
ಅದೇ ಸಮಯದಲ್ಲಿ ಖಂಡೇ ರಾವ್ ಹೈದರನ ಕುರಿತಾದ ಎಲ್ಲಾ ಸಂಗತಿಗಳನ್ನು ಅತಿ ಉತ್ಪ್ರೇಕ್ಷೆ ಮಾಡಿ ನಂಜರಾಜನಿಗೆ ವರದಿ ಒಪ್ಪಿಸುತ್ತಿದ್ದ. ದೇಶದಲ್ಲಿ ಅರಾಜಕತೆ ಇದೆ, ದಂಗೆ ಎದ್ದಿದೆ ಅದಕ್ಕೆ ಪಡೆ ಕಳಿಸಬೇಕು ಇತ್ಯಾದಿ ವರದಿ ಮಾಡುತ್ತಿದ್ದ. ಒಂದು ಸಂದರ್ಭದಲ್ಲಿ ಜೇಹಾನ್ ಖಾನ್ ಎನ್ನುವ ಅಧಿಕಾರಿ ಗಮನಿಸಿದಂತೆ ಹತ್ತು ಸಾವಿರ ಸೈನಿಕರನ್ನು ಹದಿನೆಂಟು ಸಾವಿರ ಎಂದು ಲೆಕ್ಕ ನೀಡಲಾಯಿತು.
ದಿಂಡಿಗಲ್ಲಿನಲ್ಲಿ ಹೈದರ್, ಫ್ರೆಂಚ್ ತಜ್ಞರ ನೆರವಿನಿಂದ ಸುಸಜ್ಜಿತ ಶಸ್ತ್ರಾಗಾರವನ್ನು ಸ್ಥಾಪಿಸಿಕೊಂಡ. ಇಲ್ಲಿಂದ ಮುಂದೆ ಬೇಡನೂರನ್ನು ವಶಪಡಿಸಿಕೊಳ್ಳುವವರೆಗೆ ತನ್ನ ರಾಜಕೀಯ ಬದುಕಿಗೆ ಭದ್ರ ಬುನಾದಿ ಹಾಕಿಕೊಳ್ಳುವ ತಯಾರಿ ನಡೆಸಿದ. ಬೇಡನೂರನ್ನು ವಶಪಡಿಸಿಕೊಂಡ ಮೇಲೆ ಮೈಸೂರು ಅರಸರನ್ನು ಒತ್ತಟ್ಟಿಗಿರಿಸುವ ಕೆಲಸ ಹೈದರ್ ಗೆ ಅಷ್ಟೇನೂ ಕಷ್ಟವಾಗಿರಲಿಲ್ಲ. ಆದರೆ ಪರಿಸ್ಥಿತಿ ಹೇಗಾಯಿತೆಂದರೆ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವಂತೆ ಒಡೆಯರೇ ಹೈದರನಲ್ಲಿ ಸಹಾಯ ಕೇಳಿದರು. ಅದೂ ಹೈದರನನ್ನು ಉದ್ಧಾರ ಮಾಡಿದ ನಂಜರಾಜನನ್ನೇ ಹುಟ್ಟಡಗಿಸುವಂತೆ! ಅದಕ್ಕೆ ಹಣವನ್ನೂ ಕೂಡಾ ಕೊಟ್ಟರು!
**

1767 ಹೈದರಲಿ ಕೋಯಿಂಬತ್ತೂರಿನಲ್ಲಿ ಸಂಜೆ 5 ಗಂಟೆಯಲ್ಲಿ ತನ್ನ ಪರಿವಾರದ ಜೊತೆಗೆ ಕುದುರೆಯ ಮೇಲೆ ಸವಾರಿ ಹೊರಟಿದ್ದ. ಒಬ್ಬಳು ಹೆಂಗಸು ‘ನ್ಯಾಯ ಸ್ವಾಮಿ’ ಎನ್ನುತ್ತಾ ಅಡ್ಡಬಿದ್ದಳು. ಹೈದರ್ ನಿಂತು ಆಕೆಯನ್ನು ಹತ್ತಿರ ಕರೆದು ಏನೆಂದು ವಿಚಾರಿಸಿದ. ಆಕೆ ಹೇಳಿದಳು ‘ಹುಜೂರ್, ನನಗಿರುವುದು ಒಬ್ಬಳೇ ಮಗಳು. ಅವಳನ್ನು ಆಘಾ ಮುಹಮ್ಮದ್ ಹಾರಿಸಿಕೊಂಡು ಹೋಗಿದ್ದಾನೆ’.
ಹೈದರ್ ನುಡಿದ ‘ಆಘಾ ಮಹಮ್ಮದ್ ಒಂದು ತಿಂಗಳಿಂದ ಊರಲ್ಲಿಲ್ಲಾ, ನೀನು ಹೇಳುತ್ತಿರುವುದು ನಿಜವಾದರೆ ಇಷ್ಟು ದಿನ ಯಾಕೆ ದೂರು ನೀಡದೆ ಕಾಯುತ್ತಿದ್ದೆ?’
ಮುದುಕಿ ಹೇಳಿದಳು ‘ಹುಜೂರ್, ನಾನು ಅನೇಕ ಅಹವಾಲನ್ನು ಹೈದರ್ ಷಾ ಹತ್ತಿರ ಕೊಟ್ಟೆ ಇದುವರೆಗೆ ಉತ್ತರ ಬರಲಿಲ್ಲ’
ಆಘಾ ಮುಹಮ್ಮದ್ ಗೆ ಆಗ ಅರವತ್ತು ವರ್ಷ ವಯಸ್ಸು. ಆತ ಇಪ್ಪತ್ತೈದು ವರ್ಷಗಳ ಕಾಲ ಹೈದರ ಅರಮನೆಯಲ್ಲಿ ಸೇವೆಯಲ್ಲಿದ್ದ. ಆತನಿಗೆ ಹೈದರ್ ಸಾಕಷ್ಟು ಜಾಗೀರು ಮತ್ತು ಹಣವನ್ನು ನೀಡಿ ಸೇವೆಯಿಂದ ಮುಕ್ತಗೊಳಿಸಿ ಅವನ ಜಾಗದಲ್ಲಿ ಹೈದರ್ ಷಾನನ್ನು ನೇಮಿಸಿದ್ದ.
ತನ್ನ ಸ್ಥಾನದ ಮಹತ್ವ ಸಾರುವ ದೊಡ್ಡ ಚಿನ್ನದ ಪದಕ ತೊಟ್ಟ ಹೈದರ್ ಷಾ ಮುಂದೆ ಬಂದ. ‘ಹುಜೂರ್, ಈ ಹೆಂಗಸು ಮತ್ತು ಅವಳ ಮಗಳು ಕೆಟ್ಟ ನಡತೆಯವರು, ಲಜ್ಜೆಗೆಟ್ಟ ಬದುಕು ಬಾಳುತ್ತಿದ್ದಾರೆ’ ಎಂದ.
ಹೈದರ್ ತಕ್ಷಣ ಪರಿವಾರಕ್ಕೆ ಅರಮನೆಗೆ ಹಿಂದಿರುಗಲು ಅಪ್ಪಣೆ ಮಾಡಿ ಆ ಹೆಂಗಸಿಗೆ ತಮ್ಮ ಹಿಂದೆಯೇ ಅರಮನೆಗೆ ಬರಲು ತಿಳಿಸಿದ.
ಇಡೀ ಆಸ್ಥಾನದ ಜನ ಉದ್ವೇಗದಲ್ಲಿ ಚಡಪಡಿಸಿದರು. ಏಕೆಂದರೆ ಹೈದರ್ ಷಾ ಎಲ್ಲರಿಗೂ ಬೇಕಾದವನಾಗಿದ್ದ. ಆದರೆ ಯಾರಿಗೂ ಹೈದರನ ಹತ್ತಿರ ಆತನನ್ನು ವಹಿಸಿಕೊಂಡು ಮಾತನಾಡುವ ಧೈರ್ಯವಿರಲಿಲ್ಲ. ಕೊನೆಗೆ ಹೈದರ್ ಮಗ ಟಿಪ್ಪು, ಹೇಗಾದರೂ ಮಾಡಿ ಮಾತಾಡಿ ಆತನ ಶಿಕ್ಷೆ ಕಡಿಮೆಗೊಳಿಸಿ ಎಂದು, ಹೈದರ್ ಮರ್ಯಾದೆ ಕೊಡುತ್ತಿದ್ದ, ಯುರೋಪಿಯನ್ ಕಮಾಂಡೆಂಟ್ ನನ್ನ ಬೇಡಿಕೊಂಡ. ಟಿಪ್ಪುವಿಗಾಗಿ ಆತ ಹೈದರನ ಬಳಿಗೆ ಬಂದು ಹೈದರ್ ಷಾನನ್ನು ಕ್ಷಮಿಸಿಬಿಡಿ ಎಂದು ಕೋರಿಕೊಂಡ. ಅದಕ್ಕೆ ಹೈದರ್ ಒಪ್ಪಲಿಲ್ಲ.
‘ನಿಮ್ಮ ಕೋರಿಕೆಯನ್ನು ನಾನು ಅಂಗೀಕರಿಸಲು ಸಾಧ್ಯವಿಲ್ಲ. ಏಕೆಂದರೆ ರಾಜ ಮತ್ತು ಪ್ರಜೆಗಳ ನಡುವಿನ ಸಂವಹನವನ್ನು ತಪ್ಪಿಸುವುದಕ್ಕಿಂತ ದೊಡ್ಡ ಅಪರಾಧ ಬೇರೆ ಇಲ್ಲ. ದುರ್ಬಲರಿಗೆ ನ್ಯಾಯ ಸಿಗುವಂತೆ ನೋಡಿಕೊಳ್ಳುವುದು ಬಲಿಷ್ಠರ ಕರ್ತವ್ಯ. ದೇವರು ಅವರಿಗೆ ಕೊಟ್ಟಿರುವ ರಕ್ಷಕ ಎಂದರೆ ರಾಜ. ತನ್ನ ಪ್ರಜೆಗಳ ಶೋಷಣೆಯನ್ನು ಪರಿಹರಿಸದೇ ಅಲಕ್ಷ್ಯ ಮಾಡಿದರೆ ಅವರ ಪ್ರೀತಿ ಮತ್ತು ನಂಬಿಕೆ ಕಳೆದುಕೊಳ್ಳುತ್ತಾನೆ, ಅದರಿಂದ ಜನರು ದಂಗೆ ಏಳುವ ಸಾಧ್ಯತೆ ಹೆಚ್ಚಾಗುತ್ತದೆ’

ಹೀಗೆ ಹೇಳಿ ಹೈದರ್, ಭಟ ಹೈದರ್ ಶಾಗೆ ಇನ್ನೂರು ಕೊರಡೆ ಏಟನ್ನು ವಿಧಿಸಿದ.
ಜೊತೆಗೆ ತನ್ನ ನುರಿತ ಕುದುರೆ ಸವಾರನಿಗೆ ಆ ಹೆಂಗಸನ್ನು ಕರೆದುಕೊಂಡು ಆಘಾ ಮುಹಮ್ಮದ್ ಇರುವ ಕಡೆಗೆ ಹೋಗಿ, ಅಲ್ಲಿ ಹೆಂಗಸಿನ ಮಗಳು ಅವನ ಜೊತೆ ಇದ್ದಲ್ಲಿ ಅವಳನ್ನು ತಕ್ಷಣ ಅವಳ ತಾಯಿಗೆ ಒಪ್ಪಿಸಿ ಮತ್ತು ಆಘಾ ಮುಹಮ್ಮದ್ ನ ತಲೆಯನ್ನು ಕತ್ತರಿಸಿ ತೆಗೆದುಕೊಂಡು ಬರುವಂತೆ ಅಪ್ಪಣೆ ಮಾಡಿದ. ಅಕಸ್ಮಾತ್ ಅವನ ಜೊತೆ ಹುಡುಗಿ ಇಲ್ಲದಿದ್ದರೆ ಆಘಾನನ್ನು ತಾನಿರುವಲ್ಲಿಗೆ ಮರ್ಯಾದೆಯಿಂದ ಕರೆದುಕೊಂಡು ಬರುವಂತೆ ಹೇಳಿದ.
ಭಟ ಅಲ್ಲಿಗೆ ಹೋದಾಗ ಅಲ್ಲಿ ಆಘಾ ಮುಹಮ್ಮದ್ ಜೊತೆ ಹುಡುಗಿ ಇದ್ದಳು. ತಕ್ಷಣ ಅವಳನ್ನು ತಾಯಿಗೆ ಒಪ್ಪಿಸಿ ಆಘಾನ ತಲೆಯನ್ನು ಕತ್ತರಿಸಿ ತರಲಾಯಿತು.
ಹೈದರ್ ಹೇಳಿದ ‘ವೇಶ್ಯೆಯಾಗಿದ್ದ ಮಾತ್ರಕ್ಕೆ ಹುಡುಗಿಯನ್ನು ಎತ್ತಿಕೊಂಡು ಹೋಗಬಹುದು ಎಂದುಕೊಳ್ಳುವುದು ಮೂರ್ಖತನ. ನ್ಯಾಯ ಎಲ್ಲರಿಗೂ ಒಂದೇ’.






0 Comments