ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಪ್ರತಿಫಲನ' ದಲ್ಲಿ ಕಂಡ ಎ. ಎನ್. ಪ್ರಸನ್ನ

ನಾಟಕ, ಸಿನೆಮಾ, ಕಾದಂಬರಿ, ಕಥೆ ಕ್ಷೇತ್ರದಲ್ಲಿ ಸಮಾನ ಆಸಕ್ತಿ ಹೊಂದಿರುವ ಎ ಎನ್ ಪ್ರಸನ್ನ ಅವರು ಈಗಾಗಲೇ ಹಲವಾರು ಕೃತಿಗಳ ಮೂಲಕ ಹೆಸರಾಗಿದ್ದಾರೆ.
ಸಧ್ಯದಲ್ಲೇ ಇವರ ಹೊಸ ಕಥಾ ಸಂಕಲನ ‘ಪ್ರತಿಫಲನ’ ಹೊರಬರಲಿದೆ. ಈ ಕೃತಿಗೆ ಖ್ಯಾತ ವಿದ್ವಾಂಸರಾದ ಪ್ರೊ ಸಿ ಎನ್ ರಾಮಚಂದ್ರನ್ ಅವರು ಬರೆದ ಮುನ್ನುಡಿ ಇಲ್ಲಿದೆ-
ಮಹಿಳಾಕೇಂದ್ರಿತ ಮನೋಜ್ಞ ಕಥೆಗಳು

ಸಿ ಎನ್. ರಾಮಚಂದ್ರನ್
ಸಣ್ಣ ಕತೆ, ಅನುವಾದ, ಚಲನಚಿತ್ರ ವಿಮರ್ಶೆ ಹಾಗೂ ನಿರ್ದೇಶನ, ಟೆಲಿಫಿಲ್ಮ್ ತಯಾರಿಕೆ, ಇತ್ಯಾದಿ ವೈವಿಧ್ಯಪೂರ್ಣ ಕ್ಷೇತ್ರಗಳಲ್ಲಿ ಮಾಡಿರುವ ತಮ್ಮ ಸಾಧನೆಗಳಿಂದ ವೃತ್ತಿಯಲ್ಲಿ ಎಂಜಿನಿಯರ್ ಆದ ಎ. ಎನ್. ಪ್ರಸನ್ನ ಕನ್ನಡ ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಇವರಿಗೆ ಖ್ಯಾತಿಯನ್ನು ತಂದುಕೊಟ್ಟ ಕೃತಿಗಳೆಂದರೆ ಉಳಿದವರು (ಕ. ಸಾ. ಅಕಾಡೆಮಿ ಪ್ರಶಸ್ತಿ), ರಥಸಪ್ತಮಿ (ಬಿ. ಎಚ್ ಶ್ರೀಧರ ಪ್ರಶಸ್ತಿ) ನೂರು ವರ್ಷದ ಏಕಾಂತ (ಮಾರ್ಕ್ವೆಜ್ ನ One Hundred Years of Solitude ಕಾದಂಬರಿಯ ಅನುವಾದ (ಕುವೆಂಪು ಭಾಷಾ ಭಾರತಿಯ ಅನುವಾದ ಪ್ರಶಸ್ತಿ), ಚಿತ್ರಕಥೆಯ ಸ್ವರೂಪ ಎಂಬ ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದ ವಿರಳ ಕೃತಿ, ಇತ್ಯಾದಿ.
ಅವರ ಇತ್ತೀಚಿನ (ಐದನೆಯ) ಕಥಾಸಂಕಲನ ‘ಪ್ರತಿಫಲನ’. ಈ ಸಂಕಲನದ ಆರು ನೀಳ್ಗತೆಗಳಲ್ಲಿ ನಾಲ್ಕು ಕಥೆಗಳು (‘ಆಗಮನ,’ ‘ಹೀಗೊಂದು ದಿನ,’ ‘ಪರಿಹಾರ’ ಮತ್ತು ‘ಪ್ರತಿಫಲನ’) ವಾಸ್ತವವಾದಿ ಕಥೆಗಳಾದರೆ, ‘ಬಾಂಬೆ ಶೋ’ ಮತ್ತು ‘ಸೋಫಾ’ ಎಂಬ ಎರಡು ಕಥೆಗಳನ್ನು ‘ಭ್ರಾಮಕ ಕಥೆಗಳು’ (Fantasy Tales) ಎಂದು ಕರೆಯಬಹುದು.
ಮೊದಲಿಗೆ ಈ ಆರೂ ಕಥೆಗಳ ಬಗ್ಗೆ ಒಂದೆರಡು ಸಾಮಾನ್ಯೀಕೃತ ಹೇಳಿಕೆಗಳು. ಪ್ರಸನ್ನ ನುರಿತ ಕತೆಗಾರರಾಗಿರುವುದರಿಂದ ಈ ಕಥೆಗಳನ್ನು ಅವರು ಸ್ವಾರಸ್ಯಕರವಾಗಿ ಕಟ್ಟಿದ್ದಾರೆ. ಪ್ರತಿಯೊಂದು ಕಥೆಯೂ ನಾಟಕೀಯವಾಗಿ ಕಥೆಯ ನಿರ್ಣಾಯಕ ಘಟ್ಟದಿಂದ ಪ್ರಾರಂಭವಾಗಿ, ಅನಂತರ ಹಿನ್ನೋಟಗಳ ಮೂಲಕ ಹಿಂದಿನ ಕಥೆಯ ಭಾಗವನ್ನು ದಾಖಲಿಸಿ, ಅನಂತರ ಮುಕ್ತಾಯದತ್ತ ಸಾಗುತ್ತದೆ. ಆದರೆ ಕಥೆಯ ಈ ಗತಿ ‘ಮುಕ್ತಾಯದತ್ತ’ ಅಷ್ಟೇ; ಆದರೆ ಯಾವ ಕಥೆಯೂ ಸಂಪೂರ್ಣವಾಗಿ ಮುಕ್ತಾಯವಾಗುವುದಿಲ್ಲ, ಮುಂದೇನಾಗುತ್ತದೆ ಎಂಬ ಕುತೂಹಲವನ್ನು ಉಳಿಸಿಕೊಂಡೇ ಮುಗಿಯುತ್ತದೆ. ಎಲ್ಲಾ ವಾಸ್ತವವಾದಿ ಕಥೆಗಳೂ ‘ಅಪರಾಧ ಕಥೆಗಳು’; ಪ್ರತಿಯೊಂದು ಕಥೆಯಲ್ಲಿಯೂ ಅವಿವಾಹಿತ ಮಹಿಳೆಯೊಬ್ಬಳ ಮೇಲೆ ಅವಳ ಗೆಳೆಯ-ಪರಿಚಿತ-ಪ್ರೇಮಿ ಮುಂತಾದವರಿಂದ ಅತ್ಯಾಚಾರವಾಗುತ್ತದೆ. (ಉಳಿದ ಎರಡು ಭ್ರಾಮಕ ಕಥೆಗಳಲ್ಲಿಯೂ ಮತ್ತೊಂದು ಬಗೆಯ ಅಪರಾಧ ನಡೆಯುತ್ತದೆ.)
ಹೀಗೆಂದ ಕೂಡಲೇ ಎದುರಾಗುವ ಪ್ರಶ್ನೆಯೆಂದರೆ, ‘ಅಪರಾಧ ಕಥೆಗಳನ್ನು (crime stories) ನಾವು ಪ್ರತಿದಿನವೂ ಎಲ್ಲಾ ಮನರಂಜನೆಯ ವಾಹಿನಿಗಳಲ್ಲಿ ನೋಡಬಹುದು; ಹಾಗಾದರೆ, ಈ ಕಥೆಗಳನ್ನು ನಾವು ಯಾಕೆ ಗಂಭೀರವಾಗಿ ಪರಿಗಣಿಸಬೇಕು?’ ಈ ಪ್ರಶ್ನೆಗೆ ಅನೇಕ ಉತ್ತರಗಳು ಸಾಧ್ಯ.
ಮೊದಲನೆಯದಾಗಿ, ವಾಹಿನಿಗಳಲ್ಲಿ ಬರುವ ಅಪರಾಧ ಕಥೆಗಳಲ್ಲಿ ಅಪರಾಧ ಹಾಗೂ ಅಪರಾಧಿಗಳನ್ನು ಹಿಡಿಯಲು ಪೋಲೀಸರು ಹೂಡುವ ತಂತ್ರಗಾರಿಕೆ ಇವುಗಳೇ ಮುಖ್ಯವಾಗುತ್ತವೆ. ಆದರೆ, ಈ ಸಂಕಲನದ ಕಥೆಗಳಲ್ಲಿ ಅಪರಾಧ ಕಥೆಯ ಮೇಲ್ಪದರ ಮಾತ್ರ; ಕಥೆಗಾರರಿಗೆ ಮುಖ್ಯವಾಗುವುದು ಆ ಅಪರಾಧ ಯಾರ ಮೇಲಾಗುತ್ತದೆ ಮತ್ತು ಆ ಸಂದರ್ಭಗಳಲ್ಲಿ ಆ ಬಲಿಪಶುವಿನ ಭಾವನೆಗಳೇನು, ಪ್ರತಿಕ್ರಿಯೆಯೇನು ಎನ್ನುವುದು.
ಎರಡನೆಯದಾಗಿ, ನಾಲ್ಕೂ ಕಥೆಗಳಲ್ಲಿ ನಾವು ಕಾಣುವುದು ಮಹಿಳೆಯೊಬ್ಬಳಿಗೆ ಅತ್ಯಂತ ಪರಿಚಿತನಾಗಿರುವವನಿಂದಲೇ ಅವಳ ಮೇಲಾಗುವ ಅತ್ಯಾಚಾರ. ಈ ಕಾರಣದಿಂದ, ‘ಅಪರಾಧಿ ಯಾರು’ ಎಂಬ ಪ್ರಶ್ನೆ ಮುಖ್ಯವಾಗುವುದಿಲ್ಲ; ಏಕೆಂದರೆ ಆ ಅಪರಾಧಿಯು ಯಾರು ಎಂಬುದು ಮೊದಲೇ ಗೊತ್ತಿದೆ. ಎಂದರೆ, ಈ ‘ಅಪರಾಧ ಕಥೆ’ ಎಂಬುದು ಕತೆಗಾರರ ಒಂದು ಪ್ರಯೋಗ, ಓದುಗನನ್ನು ಕಥೆಯತ್ತ ಸೆಳೆಯುವ ಒಂದು ಕಥನ ತಂತ್ರ. ಈ ಕಾರಣಕ್ಕಾಗಿಯೇ ನಾಲ್ಕು ವಾಸ್ತವಾದಿ ನೀಳ್ಗತೆಗಳೂ ಮಹಿಳಾಕೇಂದ್ರಿತವಾಗಿದ್ದು ಮಹಿಳಾ ದೃಷ್ಟಿಕೊನದಿಂದ ನಿರೂಪಿಸಲ್ಪಟ್ಟಿವೆ. ಈ ಅಂಶಗಳನ್ನು ಸ್ಪಷ್ಟಪಡಿಸಲು ಒಂದೆರಡು ಕಥೆಗಳನ್ನು ಈಗ ಸ್ವಲ್ಪ ವಿವರವಾಗಿ ನೋಡಬಹುದು.
ಸಂಕಲನದ ಮೊದಲ ಕಥೆ “ಆಗಮನ.” ಇದರ ಕೇಂದ್ರ ಪಾತ್ರವಾದ ಸರಸು ಎಂಬ ಮಧ್ಯವಯಸ್ಸಿನ ಮಹಿಳೆ ಸಣ್ಣ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು ತುಂಬಾ ಕಷ್ಟದಿಂದ ತನ್ನ ಮಗ ಬಾಲಾಜಿಯನ್ನು ಬೆಳೆಸುತ್ತಾ ಅವನಿಗೆ ಉಚ್ಚ ಶಿಕ್ಷಣವನ್ನು ಕೊಡಿಸುತ್ತಾಳೆ. ಕಥೆಯು ಪ್ರಾರಂಭವಾಗುವಾಗ ಮಗನ ಮದುವೆಯ ಬಗ್ಗೆಯೇ ಚಿಂತಿಸುತ್ತಾ, ಅಂದು ಅವನ ಹುಟ್ಟುಹಬ್ಬವಾದುದರಿಂದ ಅವನಿಗೆ ಪ್ರಿಯವಾದ ಮೈಸೂರ್ ಪಾಕ್ ಮಾಡಿಕೊಂಡು ಅವನನ್ನು ಕಾಯುತ್ತಿರುವಾಗ, ಎದುರು ಮನೆಯಿಂದ ತರುಣಿಯೊಬ್ಬಳ ಚೀತ್ಕಾರವು ಕೇಳಿಬರುತ್ತದೆ.
ಅದೇನೆಂದು ನೋಡಲು ಸರಸು ಅಲ್ಲಿ ಹೋದಾಗ ಕತ್ತಲೆಯಲ್ಲಿ ಅಪರಿಚಿತನೊಬ್ಬನು ಆ ತರುಣಿಯನ್ನು ಬಲಾತ್ಕಾರ ಮಾಡುತ್ತಿರುವುದನ್ನು ನೋಡುತ್ತಾಳೆ; ಕೂಡಲೇ ಕೈಯಲ್ಲಿದ್ದ ದೊಣ್ಣೆಯಲ್ಲಿ ಅವನ ತಲೆಗೆ ಹೊಡೆದು ಅವನನ್ನು ಬೀಳಿಸುತ್ತಾಳೆ. ನಂತರ ಪೋಲೀಸರು ಬಂದು ಅವನನ್ನು ಬಂಧಿಸಿ ಜೈಲಿಗೆ ತಳ್ಳುತ್ತಾರೆ. ಮಾರನೆಯ ದಿನ ಆ ಅತ್ಯಾಚಾರಿ ತನ್ನ ಮಗ ಬಾಲಾಜಿಯೇ ಎಂದು ಗೊತ್ತಾಗುತ್ತದೆ. ಬದುಕಿನ ಈ ಘೋರ ವ್ಯಂಗ್ಯದಿಂದ ಸರಸು ತನ್ನ ಸ್ಥಿಮಿತವನ್ನು ಕಳೆದುಕೊಂಡು ಪೋಲೀಸ್ ಸ್ಟೇಷನ್‍ಗೆ ಹೋದಾಗ. ತನ್ನ ಕೈಯಲ್ಲಿದ್ದ ಮೈಸೂರ್ ಪಾಕ್ ಚೂರುಗಳನ್ನು ಅವನ ಬಾಯಿಗೆ ತುರುಕಿ ಉಳಿದ ಚೂರುಗಳನ್ನು ಅವನ ಮುಖದ ಮೇಲೆ ಎಸೆಯುತ್ತಾಳೆ.
ಈ ದೀರ್ಘ ಕಥೆಯಲ್ಲಿ ಅಪರಾಧದ ವಿವರಗಳು ಕೊನೆಯ ಎರಡು ಪುಟಗಳಲ್ಲಿ ಬರುತ್ತವೆ; ಅಲ್ಲಿಯವರೆಗಿನ ಕಥೆಯಲ್ಲಿ ಕತೆಗಾರರು ತೋರಿಸುವುದು ಸರಸುವಿನ (ಎಂದರೆ ತಾಯಿಯ) ಒಂಟಿತನ (ಇರುವ ಒಬ್ಬಳೇ ಮಗಳು ತಾನು ಪ್ರೀತಿಸುವವನನ್ನು ಮದುವೆಯಾಗಿ ಅಮೆರಿಕಾಕ್ಕೆ ಹಾರುತ್ತಾಳೆ; ಮಗನು ದಿನಪೂರ್ತಿ ತನ್ನ ಗೆಳೆಯರೊಡನೆ ಹಾಗೂ ತನ್ನ ಪುಸ್ತಕಗಳೊಡನೆ ಕಳೆಯುತ್ತಾನೆ; ಕೊನೆಗೆ ತನಗೆ ಜೊತೆಯಾಗಲೆಂದು ತನ್ನ ತಂಗಿಯ ಮಗ ನಾಗೇಶನನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಅವನನ್ನು ಓದಿಸುತ್ತಾಳೆ), ಮಗನ ಪ್ರಪಂಚದ ಬಗ್ಗೆ ಏನೂ ಗೊತ್ತಿಲ್ಲದ ಮುಗ್ಧತೆ (“ಒಮ್ಮೊಮ್ಮೆ ತಮಗಿಂತ ಅವನ ಒಡನಾಡಿಗಳಿಗೆ ಅವನ ಬಗ್ಗೆ ಹೆಚ್ಚು ತಿಳಿದಿರಬಹುದೆ” ಎಂದು ಅವಳು ಸಂದೇಹ ಪಡುತ್ತಾಳೆ), ಮಗನ ಮೇಲಿನ ಪ್ರೀತಿ (ಮೈಸೂರ್ ಪಾಕ್ ಮಾಡಲು ಅವಳು ಇನ್ನಿಲ್ಲದಂತೆ ಒದ್ದಾಡುತ್ತಾಳೆ), ನೆರೆಹೊರೆಯವರೊಡನೆ ಅವಳು ಗಳಿಸಿರುವ ಸ್ನೇಹ (ಎದುರು ಮನೆಯವರು ತಮ್ಮ ಬೆಳೆದ ಮಗಳನ್ನು ನೋಡಿಕೊಳ್ಳಲು ಅವಳಿಗೆ ಹೇಳಿ ನಿಶ್ಚಿಂತೆಯಿಂದ ಹೊರಗೆ ಹೋಗುತ್ತಾರೆ), ಮತ್ತು ತನ್ನ ಮಗನೇ ‘ಸೀರಿಯಲ್ ವ್ಯಭಿಚಾರಿ’ ಎಂದು ಗೊತ್ತಾದಾಗ ಅವಳಿಗಾಗುವ ನೋವು-ಸಂಕಟ-ಅಸಹಾಯಕತೆ, ಇತ್ಯಾದಿ. ಆದುದರಿಂದ ಕಥೆಯಲ್ಲಿ ಬರುವ ಅತ್ಯಾಚಾರ ಒಂದು ಆನುಶಂಗಿಕ ವಿವರ ಅಷ್ಟೇ, ಕತೆಗಾರರ ಕಾಳಜಿ ಇರುವುದು ತಾಯಿಯೊಬ್ಬಳ ವಿಶಿಷ್ಟ ಅನುಭವಕ್ಕೆ ಅಕ್ಷರ ರೂಪ ಕೊಡುವುದು.
ಹೀಗೆಯೇ, ಬದುಕಿನ ಕ್ರೂರ ವ್ಯಂಗ್ಯವನ್ನು ದಾಖಲಿಸುವ ಮತ್ತೊಂದು ಕಥೆ “ಪ್ರತಿಫಲನ.” ಈ ಕಥೆಯೂ ಒಂದು ನಿರ್ಣಾಯಕ ಘಟ್ಟದಿಂದ, ಎಂದರೆ (ಪ್ರಾಯಃ) ಪೋಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಅಶ್ವಿನಿ ಮಾರನೆಯ ದಿನವೇ ಒಂದು ಊರಿಗೆ ಒಂದು ಆಪಾದನೆಯ ವಿಚಾರಣೆಗಾಗಿ ಹೋಗುವಲ್ಲಿಂದ, ಪ್ರಾರಂಭವಾಗುತ್ತದೆ. ಆ ಊರಿಗೆ ಹೋಗುವಾಗ ಹಾಗೂ ಆ ಊರಿನಲ್ಲಿ ಅಲ್ಲಲ್ಲಿ ತಿರುಗಾಡುವಾಗ ಅಶ್ವಿನಿ ತನ್ನ ಬೆಳೆದ ಮಗಳಿಗೆ ನಿಧಾನವಾಗಿ ತನ್ನ ಕಥೆಯನ್ನು ಹೇಳುತ್ತಾಳೆ. ಅದೇ ಊರಿನಲ್ಲಿ ಹುಟ್ಟಿ ಬೆಳೆದ ಅಶ್ವಿನಿ, ಅವಳ ತಂದೆ ತನ್ನ ಬಾಲ್ಯದಲ್ಲಿಯೇ ಯಾವುದೋ ಸುಳ್ಳು ಆಪಾದನೆಯನ್ನು ಎದುರಿಸಲಾರದೆ ದೇಶಾಂತರ ಹೋದದ್ದು; ತಾಯಿಗೆ ಕ್ಯಾನ್ಸರ್ ಆಗಿ ಬಹು ಬೇಗ ಅವಳೂ ತನ್ನ ಬದುಕನ್ನು ಕೊನೆಗಾಣಿಸಿದ್ದು; ಸ್ವಲ್ಪ ದಿನಗಳ ನಂತರ ಅವಳ ತಮ್ಮನೂ ಆಕಸ್ಮಿಕವಾಗಿ ನದಿಯಲ್ಲಿ ಸಾವನ್ನಪ್ಪಿದುದು – ಎಲ್ಲವನ್ನೂ ಅವಕಾಶ ಸಿಕ್ಕಿದಾಗ ಮಗಳಿಗೆ ಹೇಳುತ್ತಾಳೆ.
ತಂದೆ-ತಾಯಿಯರನ್ನು ಕಳೆದುಕೊಂಡು ದಿಕ್ಕು ದೆಸೆಯಿಲ್ಲದ ಅಶ್ವಿನಿಗೆ ಆ ಊರಿನ ನಗರ ಸಭೆಯ ಕೌನ್ಸಿಲರ್ ಆಗಾಗ ಸ್ವಲ್ಪ ಸಹಾಯ ಮಾಡುತ್ತಾನೆ; ದಿನಗಳೆದಂತೆ, ಅದನ್ನೇ ನೆಪ ಮಾಡಿಕೊಂಡು ಆ ಅನಾಥೆಯ ಮೇಲೆ ಅತ್ಯಾಚಾರವನ್ನು ಎಸಗಿ, ತಿಂಗಳಾನುಗಟ್ಟಲೆ ಅದನ್ನು ಮುಂದುವರೆಸುತ್ತಾನೆ. ಅವನನ್ನು ಎದುರಿಸಲಾಗಲಿ, ಪೋಲೀಸಿಗೆ ದೂರು ಕೊಡುವುದಾಗಲಿ ಅಶ್ವಿನಿಗೆ ಅಸಾಧ್ಯ. ಆದರೂ ಆ ಅತ್ಯಾಚಾರದಿಂದ ತಾನು ತಾಯಿಯಾಗುವ ಸಂದರ್ಭ ಬಂದಾಗ ಏನಾದರೂ ಅಬಾರ್ಶನ್ ಮಾಡಿಸಿಕೊಳ್ಳಲು ಒಪ್ಪದೆ, ತನ್ನ ಗೆಳತಿಯ ಸಹಾಯದಿಂದ ಮಗುವನ್ನು ಹೆತ್ತು (ಅದೇ ಈಗ ಅವಳೊಡನೆ ಇರುವ ಮಗಳು), ತನ್ನ ಶಿಕ್ಷಣವನ್ನು ಮುಂದುವರೆಸಿ, ಕೊನೆಗೆ ಒಂದು ಕೆಲಸ ಸಿಕ್ಕಿ ಹತ್ತಿರದ ನಗರಕ್ಕೆ ಹೋಗುತ್ತಾಳೆ.
ಕೊನೆಗೆ ಗೊತ್ತಾಗುವುದೇನೆಂದರೆ, ಈಗ ಅವಳು ವಿಚಾರಣೆ ನಡೆಸಲು ಬಂದದ್ದು ತನ್ನ ಮೇಲೆ ಅತ್ಯಾಚಾರ ಮಾಡಿದ ಆ ಕೌನ್ಸಿಲರ್ ವಿರುದ್ಧ ಅದೇ ರೀತಿಯ ಅಪರಾಧವನ್ನು ಕುರಿತು ಬಡ ಹುಡುಗಿಯೊಬ್ಬಳು ಮಾಡಿರುವ ದೂರನ್ನು ಕುರಿತು. ಸುಳ್ಳು ಸಾಕ್ಷಿಗಳನ್ನು ಹಾಗೂ ಪತ್ರಗಳನ್ನು ಈಗಾಗಲೇ ಸಿದ್ಧಪಡಿಸಿರುವ ಆ ಪ್ರಭಾವಿ ವ್ಯಕ್ತಿಯ ವಿರುದ್ಧ ತಾನು ಹೇಗೆ ಆ ಬಡ ಹುಡುಗಿಗೆ ನ್ಯಾಯ ಕೊಡಿಸಬಹುದು ಎಂದು ಅಶ್ವಿನಿ ಯೋಚನೆಯಲ್ಲಿ ಮುಳುಗಿದಲ್ಲಿಗೆ ಕಥೆ ಮುಗಿಯುತ್ತದೆ.
ತನ್ನ ಬಾಲ್ಯದ ಕಥೆಯನ್ನು, ಅದರಲ್ಲೂ ತನ್ನ ಮೇಲಾದ ಅತ್ಯಾಚಾರಗಳ ಸಂಗತಿಯನ್ನು ತುಂಡು ತುಂಡಾಗಿ ಬೆಳೆದ ಮಗಳಿಗೆ ಹೇಳುವಾಗ ಅಶ್ವಿನಿ ಅನುಭವಿಸುವ ತಾಕಲಾಟ, ಸಂಕಟ, ಭಾವೋದ್ವೇಗ, ಇತ್ಯಾದಿಗಳನ್ನು ದೀರ್ಘವಾಗಿ ಹಾಗೂ ಎಳೆಎಳೆಯಾಗಿ ಕಥೆ ದಾಖಲಿಸುತ್ತದೆ. ಒಂದು ಸಂದರ್ಭದಲ್ಲಿ, ಅತ್ಯಾಚಾರಿಯ ಬಗ್ಗೆ ಆಪಾದನೆ ಮಾಡುವ ಆ ಬಡಹುಡುಗಿಯ ಧೈರ್ಯವನ್ನು ಮೆಚ್ಚುತ್ತಾ ಹೀಗೆ ತನಗೆ ತಾನೇ ಒಪ್ಪಿಕೊಳ್ಳುತ್ತಾಳೆ: “ಅವಳು ಧೀರೆ, ತಾನು ಹೇಡಿ ಮತ್ತು ಪುಕ್ಕಲು. ನೋಡುವವರ ದೃಷ್ಟಿಯಲ್ಲಿ ಇತರರ ಅಭಿಪ್ರಾಯವೇ ಬೇರೆಯಾದರೆ ನೈತಿಕ ವಿಷಯಗಳಿಗೆ ಸಂಬಂಧಿಸಿದಂತೆ ಅವಳು ತನಗಿಂತ ತುಂಬಾ ಮೇಲ್ಮಟ್ಟದವಳು.” ಆದರೆ ಈಗ ಬದಲಾಗಿರುವ ಅವಳ ಛಲವನ್ನು, ಎಂದಿಗೂ ಬದುಕಿನಲ್ಲಿ ಸೋಲಬಾರದೆಂಬ ದೃಢ ಸಂಕಲ್ಪವನ್ನೂ ಕಥೆ ನಮ್ಮೆದುರು ಇಡುತ್ತದೆ. “ಎಂಥ ಕಠಿಣ ಪರಿಸ್ಥಿತಿಗೂ ಬಗ್ಗುವುದಿಲ್ಲ, ಹೋರಾಡುತ್ತೇನೆ” ಎಂಬ ತನ್ನ ಸಂಕಲ್ಪದಿಂದ ಅಶ್ವಿನಿ ಎಂದೂ ದೂರವಾಗುವುದಿಲ್ಲ.
ಉಳಿದೆರಡು ಕಥೆಗಳೂ ಮಹಿಳೆಯರ ಇದೇ ಬಗೆಯ ಹೋರಾಟದ ಛಲವನ್ನು, ಅಚಲ ಇಚ್ಛಾಶಕ್ತಿಯನ್ನು ಹೃದಯಸ್ಪರ್ಶಿಯಾಗಿ ದರ್ಶಿಸುತ್ತವೆ. ಒಟ್ಟಾರೆಯಾಗಿ ಹೇಳಬೇಕಾದರೆ, ಈ ನಾಲ್ಕೂ ನೀಳ್ಗತೆಗಳು ಒಂದು ಘೋರ ಅಪರಾಧದ ಸುತ್ತಾ ರಚಿಸಲ್ಪಟ್ಟಿದ್ದರೂ ಅವುಗಳ ಕಾಳಜಿ ಇರುವುದು ಪುರುಷಕೇಂದ್ರಿತ ವ್ಯವಸ್ಥೆಯಲ್ಲಿ ನರಳುವ ಮಹಿಳೆ ಹಾಗೂ ಅವಳಲ್ಲಿರುವ ಅಗಾಧ ಹೋರಾಟದ ಛಲವನ್ನು ಕುರಿತು.
ಈ ಕಿರು ಲೇಖನವನ್ನು ಮುಗಿಸುವ ಮೊದಲು ಮತ್ತೊಂದು ಕಥೆಯನ್ನು ಪ್ರಸ್ತಾಪಿಸಲೇ ಬೇಕು. ಇಲ್ಲಿರುವ ಎರಡು ಭ್ರಾಮಕ ಕಥೆಗಳಲ್ಲಿ ಒಂದು “ಬಾಂಬೆ ಶೋ.” ಸುಮಾರು ಐದಾರು ದಶಕಗಳ ಹಿಂದೆ, ಊರ ಜಾತ್ರೆಗಳಲ್ಲಿ/ ಸಂತೆಗಳಲ್ಲಿ ‘ರಾಜಾ ದೇಖೋ, ರಾಣಿ ದೇಖೋ,’ ಎಂದು ತಮ್ಮ ಮುಂದಿದ್ದ ಪೆಟ್ಟಿಗೆಯಲ್ಲಿ ಕೆಲವು ಚಲನಚಿತ್ರಗಳ ತುಂಡುಗಳನ್ನು ತೋರಿಸುತ್ತಾ, ಅದಕ್ಕಾಗಿ ಗಿರಾಕಿಗಳಿಂದ ಮೂರು ಕಾಸು-ಆರು ಕಾಸು ತೆಗೆದುಕೊಳ್ಳುತ್ತಾ ಬದುಕುತ್ತಿದ್ದವರು ಕೆಲವರಿಗಾದರೂ ಇಂದೂ ನೆನಪಿರಬಹುದು.
ಆ ಆಟದಿಂದಲೇ ಸ್ಫೂರ್ತಿ ಪಡೆದ ಈ ಕಥೆಯಲ್ಲಿ ಬರುವ ಬಾಂಬೆ ಶೋ “ಕನಸಿನ, ಕಲ್ಪನೆಯ ಉಗ್ರಾಣ,” ಯಾರು ಏನು ನೋಡಲು ಬಯಸುತ್ತಾರೋ ಅದನ್ನು ಆ ಪೆಟ್ಟಿಗೆಯ ಮೂತಿಯಲ್ಲಿ ಒಂದು ಕಣ್ಣಿನಿಂದ ನೋಡಬಹುದು – ಶ್ರೀನಾಥನಿಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್, ಚಂದ್ರಶೇಖರ್ ಬೌಲಿಂಗ್, ಒಬ್ಬರಿಗೆ ತವರಿನ ಮನೆ, ಮತ್ತೊಬ್ಬರಿಗೆ ತಮ್ಮ ಬಾಲ್ಯದ ಗೆಳತಿ, ಇತ್ಯಾದಿ. ತನ್ನ ಬಾಲ್ಯದಲ್ಲಿ ಇಂತಹ ಬಾಂಬೆ ಶೋ ನೋಡಿ ಖುಶಿ ಪಟ್ಟಿದ್ದ, ಸದ್ಯ ಬೆಂಗಳೂರಿನಲ್ಲಿ ಆಫೀಸರ್ ಆಗಿರುವ ಶ್ರೀನಾಥ ಒಂದು ಬೆಳಿಗ್ಗೆ ತನ್ನ ಕಾಂಪೌಂಡಿನೊಳಗಡೆ ಒಬ್ಬನನ್ನು ನೋಡಿ ಯಾರೆಂದು ವಿಚಾರಿಸುತ್ತಾನೆ; ಅವನು ಬಾಂಬೆ ಶೋ ನಡೆಸುವವನೆಂದು, ಅವನ ಹೆಸರು ಶಿವಾನಂದನೆಂದು, ಈ ನಗರದಲ್ಲಿ ಎಲ್ಲಿಯೂ ಅವನಿಗೆ ರಾತ್ರಿ ಕಳೆಯಲು ಜಾಗ ಸಿಗದೆ ಇವನ ಅಂಗಳದಲ್ಲಿ ಮಲಗಿದ್ದನೆಂದು ಗೊತ್ತಾಗುತ್ತದೆ.
ತನ್ನ ಬಾಲ್ಯದ ನೆನಪುಗಳ ಕಾರಣದಿಂದ ಅವನು ತನ್ನ ಪುಟ್ಟ ಔಟ್ ಹೌಸ್‍ನಲ್ಲಿ ಇರಲು ಅವನಿಗೆ ಶ್ರೀನಾಥ ಅನುವು ಮಾಡಿಕೊಡುತ್ತಾನೆ; ಅವನ ಮಗ ಅ ಪೆಟ್ಟಿಗೆಯಲ್ಲಿ ‘ಟಾಮ್ ಅಂಡ್ ಜೆರಿ’ ನೋಡುತ್ತಾ ಖುಶಿಪಡುತ್ತಾನೆ. ದಿನ ಕಳೆದಂತೆ, ಆ ಶೋ ಹೆಚ್ಚು ಜನಪ್ರಿಯವಾಗಿ ಅನೇಕರನ್ನು ಆಕರ್ಷಿಸುತ್ತದೆ. ಬಂದವರಲ್ಲಿ ಕೆಲವರು ಆ ಪೆಟ್ಟಿಗೆ ಚೆನ್ನಾಗಿ ಕಾಣಲು ಅದಕ್ಕೆ ಬಣ್ಣದ ಗೌಸು ಹಾಕುತ್ತಾರೆ; ಮತ್ತೆ ಕೆಲವರು ಪೆಟ್ಟಿಗೆಯ ಮುಂಭಾಗದಲ್ಲಿ ತೋರಣ ಕಟ್ಟುತ್ತಾರೆ.
ಸ್ವಲ್ಪ ದಿನಗಳ ನಂತರ ಶ್ರೀನಾಥನ ಹೆಂಡತಿ ಬಂದವರಿಗೆಲ್ಲಾ ಕಾಫಿ ಮಾಡಿ ಕೊಡಬೇಕಾಗುತ್ತದೆ. ಅನಂತರ, ಇನ್ನೂ ಹೆಚ್ಚು ಜನರು ಬರಲು ತೊಡಗಿದಾಗ ಆ ಶೋವನ್ನು ತನ್ನ ಮನೆಗೇ ವರ್ಗಾಯಿಸಿ ಶ್ರೀನಾಥ ಮತ್ತು ಅವನ ಹೆಂಡತಿ-ಮಗ ಔಟ್‍ಹೌಸ್‍ನಲ್ಲಿ ಇರುವಂತಾಗುತ್ತದೆ. ಕೊನೆಗೆ, ಶ್ರೀನಾಥನ ಮೇಲಿನ ಅಧಿಕಾರಿ ಅಲ್ಲಿಗೆ ಬಂದು, ತನಗೆ ಬೇಕಾದುದನ್ನು ನೋಡಿ ಸಂತೋಷಪಟ್ಟು, ಮುಂದೆ ನಡೆಯುವ ದೊಡ್ದ ಎಕ್ಸಿಬಿಷನ್‍ನಲ್ಲಿ ಆ ಶೋಗೂ ಅವಕಾಶವನ್ನು ಕೊಡುತ್ತಾನೆ. ಆದರೆ, ಆ ಎಕ್ಸಿಬಿಷನ್‍ಗೆ ಬರುವ ಯುವ ಪೀಳಿಗೆಯವರು “ರೋಚಕತೆ, ಉನ್ಮಾದ, ಅದೃಷ್ಟ ಪರೀಕ್ಷೆ, ಕ್ರೌರ್ಯ ಹಾಗೂ ಹಿಂಸೆಯನ್ನು ವೈಭವೀಕರಿಸುವ ದೃಶ್ಯಾವಳಿಗೆ ಮುಗಿಬಿದ್ದು” ಶಿವಾನಂದನ ಬಾಂಬೆ ಶೋ ನೋಡಲು ಯಾರೂ ಇಲ್ಲದಂತಾಗುತ್ತದೆ. ಕೊನೆಗೊಂದು ದಿನ, ಯಾರಿಗೂ ತಿಳಿಯದಂತೆ ಶಿವಾನಂದ ತನ್ನ ಮಾಯಾಪೆಟ್ಟಿಗೆಯೊಡನೆ ಆ ನಗರದಿಂದ ಮಾಯವಾಗುತ್ತಾನೆ.
ಅಗಾಧ ಧ್ವನಿಶಕ್ತಿಯುಳ್ಳ ಮತ್ತು ಅನೇಕ ನೆಲೆಗಳಲ್ಲಿ ಅರ್ಥೈಸಬಹುದಾದ ಈ ಕಥೆ ಕನ್ನಡದ ಶ್ರೇಷ್ಠ ಭ್ರಾಮಕ ಕಥೆಗಳಲ್ಲಿ ಒಂದು. ಮುಖ್ಯವಾಗಿ, ಈ ಬಾಂಬೆ ಶೋ ಬದಲಾದ ಪ್ರೇಕ್ಷಕರ ಅಭಿರುಚಿಯಿಂದ ಇಂದು ಸೊರಗಿರುವ ಪ್ರಾಚೀನ ಕಲೆಗಳನ್ನು ಧ್ವನಿಸುತ್ತದೆ. ಒಂದು ನೆಲೆಯಲ್ಲಿ ಪಾರಂಪರಿಕ ಗ್ರಾಮೀಣ ನಾಟಕಗಳಿಗೆ ಹಾಗೂ ಕಲೆಗಳಿಗೆ, ಮತ್ತೊಂದು ನೆಲೆಯಲ್ಲಿ ಜಾನಪದ ಗೀತ-ನರ್ತನಗಳಿಗೆ, ಇನ್ನೊಂದು ನೆಲೆಯಲ್ಲಿ ಮೌಖಿಕ ಕಥನ ಪ್ರದರ್ಶನಗಳಿಗೆ ಬಾಂಬೆ ಶೋ ಅದ್ಭುತ ರೂಪಕವಾಗುತ್ತದೆ. ಹಾಗೆಯೇ, ಬೇರೆಯೇ ಆದ ನೆಲೆಯಲ್ಲಿ, ಒಂದು ಸರಳ ಕಲೆ ಬೆಳೆಯುತ್ತಾ ಒಂದು ಸಂಕೀರ್ಣ ವ್ಯವಸ್ಥೆಯಾದಾಗ ಆ ಕಲೆ ತನ್ನ ತಿರುಳನ್ನೇ ಹೇಗೆ ಕಳೆದುಕೊಳ್ಳುತ್ತದೆ ಎಂಬುದನ್ನೂ ಸೂಚಿಸುತ್ತದೆ.
ಎ. ಎನ್. ಪ್ರಸನ್ನ ಕುಶಲ ಕಥೆಗಾರರು ಹಾಗೂ ಅನವರತ ಪ್ರಯೋಗಶೀಲರು. ಈ ಸಂಕಲನದ ಕಥನ ಪ್ರಯೋಗಗಳು ನನಗೆ ತುಂಬಾ ಸಂತೋಷವನ್ನು ಕೊಟ್ಟಿವೆ; ಹಾಗೆಯೇ ಇತರ ಓದುಗರಿಗೂ ಅದೇ ಬಗೆಯ ಸಂತೋಷವನ್ನು ಕೊಡುತ್ತವೆ ಎಂಬ ನಂಬಿಕೆ ನನಗಿದೆ

‍ಲೇಖಕರು avadhi

17 January, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading