ಈಗೀಗ ಅವಳು ಹೀಗಾಗಿದ್ದಾಳೆ. ಸಣ್ಣದೊಂದು ಸಾಸಿವೆಯಂಥ ಮಾತಿಗೂ ಪಟಪಟ ಸಿಡಿದುಬಿಡುವ ಕಾವಲಿಯಂತೆ. ಮುಚ್ಚಳ ತೆಗೆದೊಡನೆ ‘ಭಸ್’ ಎಂದು ಮುಖಕ್ಕೆ ಹಬೆ ರಾಚುವ ಕುಕ್ಕರಿನಂತೆ. ಮನೆ ಮಂದಿಯನ್ನು ಕಂಡರೆ ಗುರ್ರೆಂದು ಹರಿಹಾಯುತ್ತಾಳೆ. ಚಿಕ್ಕ ಚಿಕ್ಕ ತಪ್ಪಿಗೂ ಮಕ್ಕಳನ್ನು ಹಿಗ್ಗಾ ಮುಗ್ಗಾ ಬೈಯುತ್ತಾಳೆ ಗಂಡನನ್ನು ಕಂಡರೆ ಸಾವಿರಾರು ಸೈನಿಕರು ಒಮ್ಮೆಲೆ ಎರಗಿದಂತೆ ಮೊನಚು ಮಾತುಗಳಿಂದ ತಿವಿಯುತ್ತಾಳೆ. ಅಕಾರಣವಾಗಿ ಗಳಗಳ ಅತ್ತು ಪ್ರಶ್ನೆಯಾಗುತ್ತಾಳೆ. ನಿರಂತರವಾಗಿ ಹುಡುಕಿತ್ತಿದ್ದಾಳೆ. ಆಲ್ಬಂಗಳನ್ನು ಕೆದಕೆದಕಿ ದಿಟ್ಟಿಸುತ್ತಿದ್ದಾಳೆ. ಎಣ್ಣೆ ಪಳಚಿದ ಜೋಡಿ ಜಡೆ ಹೆಣೆದುಕೊಂಡು ಶೇಪಿಲ್ಲದ ದಪ್ಪ ಹುಬ್ಬಿನಡಿ ಆಕಳ ಕರುವಿನ ಕಣ್ಣು ಪಿಳುಕಿಸುತ್ತ ಯಾರದ್ದೇನು ಮುಲಾಜು ನನಗೆ ಎಂಬ ಅಹಂಕಾರದ ಚೂಪು ಮೂಗು ಹೊಳಪಿಸುತ್ತ ನಿಂತ ನೆರಿಗೆ ಲಂಗದ ಹುಡುಗಿ ಈಗೆಲ್ಲಿ ಸಿಗುತ್ತಾಳೆಂದು ತಲೆ ಕೆಡಿಸಿಕೊಂಡು ನೋಡುತ್ತಿದ್ದಾಳೆ.
ಅವಳ ಕಣ್ಣಿಗೆ ಎಲ್ಲ ಚಿತ್ರಗಳು ಸ್ಫುಟವಾಗಿ ಕಾಣುತ್ತಿವೆ. ಹುಣಿಸೆ ಮರಕ್ಕೆ ಕಟ್ಟಿದ ಉಯ್ಯಾಲೆಯಲ್ಲಿ ಕೂತು ಮೋಡಕ್ಕೆ ಕಾಲು ತಾಗಿಸಲೇ ಬೇಕೆಂಬ ಹಠದಿಂದ ಜೀಕಿಜೀಕಿ ವಿಪರೀತ ವೇಗದಿಂದ ಆಡುತ್ತಿದ್ದುದು ಅಜ್ಜಿಯ ನೆರಿಗೆ ಬಿದ್ದ ಹೊಟ್ಟೆಯ ಮೇಲೆ ಕೈಯಾಡಿಸುತ್ತ ಬೆಳ್ಳಿ ಸಾರೋಟಿನ ರಾಜಕುಮಾರನ ಕತೆ ಕೇಳುತ್ತ ಕೇಳುತ್ತ ರೋಮಾಂಚನಗೊಂಡು ನಸುಕಿನಲ್ಲಿ ಮಂಜು ಕವಿದಾಗ ಬಾವುಟ ಗುಡ್ಡೆಯ ಮೇಲೆ ಹತ್ತಿ ಹೋಗಿ ಹುಡುಕಿ ಹುಡುಕಿ ಏದುಸಿರು ಬಿಟ್ಟಿದ್ದು, ನಿದ್ದೆಗೆಟ್ಟು ಓದಿ ಪಿತ್ತ ಕೆರಳಿ ವಾಂತಿ ಮಾಡಿಕೊಳ್ಳುತ್ತಲೇ ಹೋಗಿ ಪರೀಕ್ಷೆ ಬರೆದು ಫಸ್ಟು ಬಂದಿದ್ದು, ಹೆಣ್ಣು ಯಾರ ಅಧೀನಳೂ ಅಲ್ಲ-ಸ್ತ್ರೀ ಸ್ವಾತಂತ್ರ್ಯ ಎನ್ನುವುದು ಯಾರ್ಯಾರೋ ಕೊಡುವ ಭಿಕ್ಷೆಯಲ್ಲ ಎಂದು ಮೇಜು ಕುಟ್ಟಿ ಭಾಷಣ ಮಾಡಿ ಮೆಡಲು ತಂದಿದ್ದು, ನೆಚ್ಚಿನ ಕವಿಯಿಂದ ಮುನ್ನುಡಿ ಬರೆಸಿಕೊಂಡು ಸಂಕಲನ ಮುದ್ರಿಸಿದ್ದು ಒಂದೇ ಎರಡೇ ಸಿಡಿ ಹಾಕಿಕೊಂಡು ಸಿನಿಮಾ ನೋಡುತ್ತಿರುವಂತೆ ಎಲ್ಲ ದ್ರಶ್ಯಗಳೂ ತಂತಾನೇ ಹಾದು ಹೋಗುತ್ತವೆ. ಆ ಜೀವನೋತ್ಸಾಹ, ಛಲ, ಆತ್ಮವಿಶ್ವಾಸ, ಲವಲವಿಕೆಗಳೆಲ್ಲ ಎಲ್ಲಿ ಹೋದವು? ದು:ಖ ಉಮ್ಮಳಿಸಿ ಬರುತ್ತಿದೆ.
ಮೆಜೆಸ್ಟಿಕ್ ಜನಜಂಗುಳಿಯಲ್ಲಿ ಮುಚ್ಚಳ ತೆಗೆದು ಮಕಾಡೆ ಬಿದ್ದ ಹಕ್ಕಿಗರಿಗಳ ಬುಟ್ಟಿಯಂತಾಗಿದೆ ಬದುಕು. ಗಾಳಿಗೆ ಹಾರುತ್ತ ಹಾರುತ್ತ ಹಗುರ ತೂಕದ ಗರಿಗಳು ಯಾರ್ಯಾರದ್ದೋ ಕಾಲಡಿಗೆ ಬಿದ್ದಿವೆ. ಯಾರದ್ದೋ ತುರುಬಿಗೆ ಸಿಕ್ಕಿವೆ. ಗಮನಿಸುವ ವ್ಯವಧಾನ ಕಿಂಚಿತ್ತೂ ಇಲ್ಲದ ಜನ ಅವರವರ ತುತರ್ಿಗೆ ಓಗೊಟ್ಟು ಓಡುತ್ತಿದ್ದಾರೆ. ಯಾರನ್ನೂ ಕರೆಯುವಂತಿಲ್ಲ, ಕಾಯುವಂತಿಲ್ಲ. ಅವರ ಅನಾದರಕ್ಕೆ ಬೇಸರಿಸಿಕೊಳ್ಳುವಂತಿಲ್ಲ. ಹತ್ತಿರ ಹೋಗಿ ಕಾಲಡಿಯ ಗರಿಗಳ ಹೆಕ್ಕಿಕೊಳ್ಳಬೇಕು. ಹಿಂಬಾಲಿಸಿಕೊಂಡು ಸಾವಕಾಶ ತೆಕ್ಕೊಳ್ಳಬೇಕು. ಅವನ ಕೋಟಿಗೆ ಸಿಕ್ಕಿಕೊಂಡಿದ್ದು, ಇವಳ ಜಾಕೀಟಿಗೆ ನೇತು ಬಿದ್ದಿದ್ದು, ಆಕೆಯ ತರಕಾರಿ ಬುಟ್ಟಿ, ಈತನ ಗಡ್ಡದ ತುದಿ ಎಲ್ಲೇ ಇರಲಿ ಗರಿ ನಮ್ಮದು. ಒಂಚೂರು ಸಹನೆ, ಒಂದು ಹಿಡಿ ಧೈರ್ಯ ಹಾಗೂ ತುಂಬಿ ತುಳುಕುವ ಶ್ರದ್ಧೆ ಅವೆಲ್ಲಕ್ಕೂ ಹೆಚ್ಚಾಗಿ ಅಪ್ಪಟ ವ್ಯಾಮೋಹ ಇದ್ದರೆ ಸಾಕು. ಎಲ್ಲ ಗರಿಗಳೂ ಸಿಗುತ್ತವೆ. ಮೆತ್ತಮೆತ್ತಗಿನ ತುಪ್ಪಳದಿಂದ ಬುಟ್ಟಿ ತುಂಬುತ್ತದೆ. ಬಣ್ಣ ಬಣ್ಣದ ಕನಸು ಜಮೆಯಾಗಿ ಜೀವದಲ್ಲೊಂದು ಜಾತ್ರೆ ಹುಟ್ಟುತ್ತದೆ. ಇಲ್ಲ ಇಲ್ಲ ಈ ಬದುಕು ಯಾರ್ಯಾರಿಗಾಗಿಯೋ ಅಲ್ಲ. ಅವರಿವರ ಕಿರೀಡಕ್ಕೆತುಪ್ಪಳ ಹೊಲಿದದ್ದು ಸಾಕು. ಇದೀಗ ಸ್ವಂತದ ಸರದಿ. ನಮ್ಮ ತಲೆಯಳತೆಗೆ ನಾವೇ ಇರೀಟ ಹೊಲಿದುಕೊಳ್ಳಬೇಕು. ಯಾರೂ ಅಳತೆ ಕೇಳಿಲ್ಲವೆಂದು ಅಳುತ್ತ ಕೂರುವುದಕ್ಕಾಗುವುದಿಲ್ಲ. ಎಲ್ಲರಿಗಾಗಿ ಹೊಲಿದು ಹೊಲಿದು ಗಳಿಸಿದ ಪ್ರಾವಿಣ್ಯತೆಯಿದೆ. ನನಗೇಕೆ ಬಿಡು ಎಂಬ ತಾತ್ಸಾರ ಬಿಡಬೇಕು. ಇದು ನಾನು ಮತ್ತು ಈ ನನ್ನ ಹಾಗೆ ಇರುವುದು ನಾನು ಮಾತ್ರ ಎಂಬ ಎಂಬ ಸತ್ಯವನ್ನು ಕಣ್ಣಿನೆರಡೂ ಕನ್ನಡಿಗಳು ಅಚ್ಚೊತ್ತಿಕೊಳ್ಳಬೇಕು. ಕಣ್ಣರೆಪ್ಪೆಯೊಳಗೆ ಸ್ವಂತ ಕಾಳಜಿಯ ಉರುಟಾದ ಬೆಚ್ಚನೆಯ ದೊಡ್ಡ ಹನಿಯೊಂದು ಜಮೆಯಾಗಿ ಕುಳಿತುಕೊಳ್ಳಬೇಕು. ಆ ಹನಿ ಕೂಗಿ ಕೂಗಿ ಹೇಳಬೇಕು ಸುಂದರಿ ಸುಂದರಿ ಪ್ರಪಂಚದಲ್ಲಿ ನಿನ್ನಂತೆ ಇರುವವಳು ನೀನು ಮಾತ್ರ.
ಹೀಗೇಕೆ ಆಗಿದೆಯೆಂದು ಯೋಚಿಸುತ್ತಾಳೆ. ಸೋಪು ನೀರಲ್ಲಿ ತೊಳೆದೊಡನೆ ಬಣ್ಣ ಕಳೆದುಕೊಂಡ ಅಗ್ಗದ ಅಂಗಿಯಂತೇಕೆ ಆಗಿದೆ ಬದುಕು? ತನ್ನ ಜೀವಂತಿಕೆಯ ಸೂಯರ್ಾಸ್ತವೇ ಆಗಿ ಹೋಯಿತೆ? ಮತ್ತೊಮ್ಮೆ ಎಲ್ಲವನ್ನೂ ಮೊದಲಿಂದ ಆರಂಭಿಸಲು ಬರುವಂತಿದ್ದರೆ ಚೆನ್ನಾಗಿತ್ತಲ್ಲವೆ ಎಂದುಕೊಳ್ಳುತ್ತಾಳೆ. ಶಾಲೆಗೆ ಹೋಗುವಾಗ ಅಕ್ಷರ ಸೊಟ್ಟಗಾದರೆ ಎರಡೇ ಹನಿ ನೀರು ಹಾಕಿ ಪಾಟಿಯನ್ನು ಚೊಕ್ಕಾಗಿ ಒರೆಸಿಕೊಂಡು ಮತ್ತೆ ಹೊಸದಾಗಿ ಗುಂಡಗೆ ಬರೆಯಲು ಬರುತ್ತಿತ್ತು. ಹದಿನೇಳೆಂಟ್ಲೆ ತಪ್ಪಿದರೆ ಹದಿನೇಳೊಂದ್ಲೆಯಿಂದ ಶುರು ಮಾಡಲು ಬರುತ್ತಿತ್ತು. ನೋಟು ಬುಕ್ಕಿನಲ್ಲಿ ತಪ್ಪಾದರೆ ಆ ಪೇಜನ್ನೇ ಹರಿದು ಹಾಕಿ ಮತ್ತೆ ಖೋರಾ ಪೇಜಿನಲ್ಲಿ ಬರೆಯಲು ಬರುತ್ತಿತ್ತು. ಆದರೆ ಇದೇನಾಗಿ ಹೋಯ್ತು? ಕೆರೆಯಲ್ಲಿ ಜಾರಿ ಬಿದ್ದ ಕಸ್ತೂರಿಯ ತುತ್ತೂರಿಯಂತೆ ಗಗಗಗ ಸದ್ದು ಮಾಡುತ್ತಿರುವುದೇಕೆ? ಇಲ್ಲ ಇಲ್ಲ ಇದು ಪೇಪರು ಕೊಟ್ಟು ಹೊರ ಬಂದ ಪಬ್ಲಿಕ್ ಪರೀಕ್ಷೆ
ವೈದ್ಯರು ಮೆನೊಪಾಸು ಎಂದು ಹೆಸರಿಟ್ಟು ಬಗೆಬಗೆಯ ಗುಳಿಗೆ ಕೊಟ್ಟಿದ್ದಾರೆ. ಯೋಗ,ವಾಕಿಂಗ್, ಸಂಗೀತ, ಧ್ಯಾನಗಳೆಲ್ಲ ಜಾರಿಗೆ ತನ್ನಿರಿ ಎಂದಿದ್ದಾರೆ. ಅವರ ಸಲಹೆಯಂತೆ ಮನೆ ಮಂದಿಯೆಲ್ಲ ಬಾಯ್ಮುಚ್ಚಿಕೊಂಡು ತಮ್ಮ ಮೌನ ಸಹಕಾರ ನೀಡುತ್ತಿದ್ದಾರೆ. ಆದರೆ ಇದು ಅವಳೇ ಸರಿ ಮಾಡಿಕೊಳ್ಳಬಹುದಾದ ಅವಳೊಳಗಿನ ಸಮಸ್ಯೆ. ಸಂಘರ್ಷಗಳ ಕೆಸರಲ್ಲಿ ಹುಗಿದು ಹೋಗಿರುವ ಮನೋರಥವನ್ನು ಅವಳೇ ಎತ್ತಿ ನಿಲ್ಲಿಸಬೇಕಿದೆ. ಒಳಗೆಲ್ಲೋ ಅಡಗಿ ಕೂತ ಪುಟ್ಟ ಹುಡುಗಿಯನ್ನು ಹೊರಗೆ ಎಳೆದುಕೊಂಡು ಬಂದು ಮತ್ತೆ ಕುಂಟಾಬಿಲ್ಲೆಯ ಹುರುಪಿನಂಗಳಕ್ಕಿಳಿಯ ಬೇಕಿದೆ. ಕೂದಲಿಗೆ ಬಣ್ಣ ಬಳಿದರೆ ಖಂಡಿತ ಕಪ್ಪಾಗುತ್ತದೆ. ವ್ಯಾಯಾಮದಿಂದ ಬೊಜ್ಜು ಕರಗುತ್ತದೆ. ಸದಾ ನಗುತ್ತಿದ್ದರೆ ಸುಕ್ಕು ದೂರಾಗುತ್ತದೆ. ಸೊಂಟ-ಬೆನ್ನು-ತಲೆ ನೋವುಗಳೆಲ್ಲ ಮರೆಯುವಂತೆ ಚಟುವಟಿಕೆಯಲ್ಲಿ ಮಗ್ನವಾದರೆ ಬದುಕು ಸಹ್ಯವಾಗದೇ ಉಳಿದೀತೆ? ಈವರೆಗೂ ಮಾಡಲು ಸಾಧ್ಯವಾಗದೇ ಉಳಿದ ಕೆಲಸಗಳನ್ನೆಲ್ಲ ಒಂದೊಂದಾಗಿ ನಿರ್ವಹಿಸಿದರೆ ಮುಂದೆ ಉಳಿದಿರುವ ಬದುಕು ಎಷ್ಟು ಪುಟ್ಟದಾಗಿ ಹಗುರಾಗಿ ಕಾಣುತ್ತದೆ. ಪ್ರವಾಸ, ಬರವಣಿಗೆ, ಓದು, ಕಂಪ್ಯೂಟರ್ ಕಲಿಕೆ, ಡ್ರೈವಿಂಗ್ ಸಾಹಿತ್ಯ, ಸಂಗೀತ, ಸಮಾಜ ಸೇವೆ ಅಬ್ಬಬ್ಬಾ ಒಂದು ಜನ್ಮ ಸಾಲುವುದಿಲ್ಲ. ಸಾಕು ಬಿಡು ಅಂತ ಬಿಡಲೇ ಬಾರದು. ಇರುವುದೊಂದೇ ಜನ್ಮ. ಸಾಧ್ಯವಾದಷ್ಟು ಎಲ್ಲವನ್ನೂ ಅವಕಾಶ ಸಿಕ್ಕಂತೆ ನಿರ್ವಹಿಸುತ್ತ ಸಾಗಬೇಕು. ಕೆರೆಯಲ್ಲಿ ಬಿದ್ದ ತುತ್ತೂರಿ ಎತ್ತಿಕೊಂಡು ಬಣ್ಣ ಹೋಗಿ ಬೋಳಾಗದ್ದರೂ ಚಿಂತೆಯಿಲ್ಲ, ಒಣಗಿಸಿಕೊಂಡು ಉಸಿರು ಹಾಕಿ ಊದಬೇಕು ಮತ್ತೆ ಸರಿಗಮಪದನಿಸ ಧ್ವನಿ ಬರುವ ತನಕ.








Nice Article, ಹುಣಿಸೆ ಮರಕ್ಕೆ ಕಟ್ಟಿದ ಉಯ್ಯಾಲೆ, ತೆರೆದು ಬಿದ್ದ ಹಕ್ಕಿ ಗರಿಗಳ ಬುಟ್ಟಿ, ಬಣ್ಣ ಕಳೆದುಕೊಂಡ ಅಂಗಿ, ಕೆರೆಯಲ್ಲಿ ಜಾರಿಬಿದ್ದ ಕಸ್ತೂರಿಯ ತುತ್ತೂರಿ, ಬಾಲ್ಯದ ಕನವರಿಕೆ… ಜೊತೆಗೊಂದು ವಿಷಯ…
ನಿಮ್ಮ ಶೈಲಿ, ಬರಹವನ್ನ ಹಿಡಿದಿಟ್ಟ ಲಹರಿ ಇಷ್ಟವಾಯಿತು.
ಒಂದು ಸಾಮಾನ್ಯ ಹೆಣ್ಣಿನ ಸ್ಥಿತಿಯನ್ನು ತುಂಬಾ ಚೆನ್ನಾಗಿ ವಿವರವಾಗಿ ಬರೆದಿದ್ದೀರಿ. – ಸಾಕು ಬಿಡು ಅಂತ ಬಿಡಲೇ ಬಾರದು. ಇರುವುದೊಂದೇ ಜನ್ಮ. ಸಾಧ್ಯವಾದಷ್ಟು ಎಲ್ಲವನ್ನೂ ಅವಕಾಶ ಸಿಕ್ಕಂತೆ ನಿರ್ವಹಿಸುತ್ತ ಸಾಗಬೇಕು. – ಮೆಸೇಜ್ ಚೆನ್ನಾಗಿದೆ.
ಏನು ಹೇಳೋದು ಗೊತ್ತಾಕ್ತಿಲ್ಲ…ಆದ್ರೆ ಬರೆದಿರೋದು ತುಂಬಾ ಚೆನ್ನಾಗಿದೆ…ತಿಂಗಳು ತಿಂಗಳೂ ಕಾಡಿದ್ದು ಸಾಕಾಗದೆ ಕೊನೆಗೆ ನಿಲ್ಲುವಾಗಲೂ ಕಾಟ ಕೊಟ್ಟೇ ಕೊನೆಯಾಗೋದು…ಅನುಭವಿಸದೇ ಬೇರೆ ವಿಧಿಯಿಲ್ಲ…ಆ ಹಂತದಲ್ಲಿ ಕಾಡುವ ಭಾವಗಳ ತಾಕಲಾಟಕ್ಕೆ ಅಕ್ಷರ ರೂಪ…nice