ಮೌನದಂಬಾರಿಯ ಮೇಲೆ….
ಮಂಜು ನಾರಾಯಣ್
ಮೊನ್ನೆ ಹೀಗೇ… ಬೆಂಗಳೂರಿನ ನಾಟಕ ತಂಡವೊಂದು ತಮ್ಮ ನಾಟಕವೊಂದಕ್ಕೆ ಬೆಳಕು ವಿನ್ಯಾಸ ಮಾಡಲು ನನ್ನಂಥ ಸೋಮಾರಿಗೆ ಆಹ್ವಾನವಿತ್ತಿತ್ತು. ಮತ್ತು, ಮರುದಿನದ ಮುಂಜಾನೆಯೇ ನಾಟಕ ತಾಲೀಮು, ತಾಲೀಮಿಗಿಂತ ಮುಂಚೆ ತಂತ್ರಜ್ಞ-ವಿನ್ಯಾಸಗಾರರ ಸಭೆ ನಡೆಯಲಿದ್ದು ಆ ಸಭೆಗೆ ಬರುವಂತೆ ಆಗ್ರಹಪೂರಕ ಮನವಿಯಿಟ್ಟಿತು. ನಾನು ಸೂರ್ಯವಂಶಸ್ಥನಾದರೂ.. ವಿಧಿ ಇಲ್ಲದೇ ಮುಂಜಾನೆಯೇ ಎದ್ದು, ನನ್ನ ಸಂಗಾತಿಯ ಹೊಟ್ಟೆಗೆ 50 ರೂಪಾಯಿ ಪೆಟ್ರೋಲ್ ಹಾಕಿಸಿ ಮಾರ್ಗಮದ್ಯದಲ್ಲಿ ಗಾಂಧಿಬಜಾರಿನ ಬಳಿ ಸ್ನೇಹಿತನೊಂದಿಗೆ ಸ್ಟ್ರಾಂಗ್ ಕಾಫಿ ಗುಟುಕಿಸಿ, ಹರಟಿಸಿ ರವೀಂದ್ರ ಕಲಾಕ್ಷೇತ್ರದೆಡೆಗೆ ಹೊರಟೆ. ಯಾವಾಗಲೂ ಬಣ್ಣಬಣ್ಣದ ಚರ್ಮದ ಹೊದಿಕೆಯೊಂದಿಗೇ ಕನಸುಗಳನ್ನೂ ಹೊತ್ತುತಿರುಗುವ ತರುಣತರುಣಿಯರಿಂದಲೇ ಗಿಜಿಗುಡುಗುವ ಗಾಂಧಿ’ಮಾರ್ಗ’ವಿಲ್ಲದ ಗಾಂಧಿಬಜಾರ್ ನಲ್ಲಿ ಅಂದು ನನಗೆ ಕಂಡದ್ದು, ಸರಸಸಲ್ಲಾಪಕ್ಕೋ…. ದ್ವೇಷಸಪ್ತಾಹಕ್ಕೋ… ರೆಡಿಯಾಗುತ್ತಿದ್ದ ಬೀದೀನಾಯಿಗಳ ದಂಡು ಒಂದೆಡೆಯಾದರೆ, ನಗರದ ಯಾವ ಕಸವನ್ನು ಮೇವಿಗೆ alternate ಆಗಿ ತಿನ್ನಬಹುದೆಂಬ ಸಮಾಲೋಚನೆಯಲ್ಲಿ ಗಂಭೀರವಾಗೇ ಮಗ್ನವಾಗಿದ್ದ ಸಿಟಿ ಸೀಮೇಹಸುಗಳ ದಂಡು ರಸ್ತೆಮಧ್ಯದಲ್ಲಿ ವೃತ್ತಮಾಡಿದ್ದುದ್ದು ಮತ್ತೊಂದು. ಹಾಗೂ ಅಲ್ಲಿ ಇಲ್ಲಿ ಬೆರಳೆಣಿಕೆಯಷ್ಟು ಜನ ತಮ್ಮ ಬೆಳಗಿನ ಸಾಂಸಾರಿಕ ಜವಾಬುದಾರಿಗಳನ್ನು ಸಂತೋಷವಲ್ಲದ ಸಂತೋಷದಲ್ಲಿ ಸರಿದೂಗಿಸುತ್ತಿದ್ದರು. ಹೀಗೆ ರಸ್ತೆಯನ್ನು ಮಾತ್ರ ನೋಡದೆ ಅಕ್ಕಪಕ್ಕೆಲಗಳಲ್ಲೆಲ್ಲಾ ನೋಡುತ್ತಾ ಹೊರಟ ನನಗೆ ಕಾದಿತ್ತು ಒಂದು ಗಂಡಾಂತರ……
ಆಗತಾನೇ ತಿಕ್ಕಿ ತೀಡಿ ಪಾಲಿಷ್ ಮಾಡಿದ್ದ ಕಂದು ಬಣ್ಣದ ಬೂಟು, ಸುಕ್ಕನ್ನೇ ಕಾಣದಂತಿದ್ದ ಖಾಕಿ ಪ್ಯಾಂಟು-ಷರ್ಟು, ಸೊಂಟಕ್ಕೆ ಬಿಗಿಯಾಗಿ ಕಟ್ಟಿದ್ದ ಕಂದು ಬೆಲ್ಟ್, ತಲೆಯಮೇಲೊಂದು ಯಾವುದೋ ಲಾಂಚನ ಹೊಂದಿದ್ದ ಹ್ಯಾಟು, ಒಂದೂವರೆ ಅಡಿಯ ಸಣ್ಣ ಕೋಲು ಹಿಡಿದಿದ್ದ ಎಡಗೈಯೊಂದು, ನಾನು ಹೋಗುತಿದ್ದ ದಾರಿಗೆ ಅಡ್ಡವಾಗಿ ಬಂದು, ನಿಲ್ಲಿಸಲು ಸೂಚಿಸಿತು. ಇದುವರೆವಿಗೂ ದರೋಡೆ ಮಾಡದಿರುವ ನನಗೆ ಅದೇಕೋ ಕಾಣೆ ಪೋಲೀಸ್ ಅಂದ್ರೆ ಭಯ. ನಾನು ನನ್ನ ವಾಹನಕ್ಕೆ ಬ್ರೇಕ್ ಹಾಕಿದೆನೇ ಹೊರತು ನನ್ನ ಆಲೋಚನೆಗಳಿಗೆ ಬ್ರೇಕ್ ಕಟ್ಟಾಗಿತ್ತು.
ಆತಂಕ, ಭಯದಿಂದ ತತ್ತರಿಸಿ ಹೋಗಿದ್ದ ನನಗೆ ಬೂಟು ಹೊತ್ತಕಾಲುಗಳು ನನ್ನೆಡೆಗೆ ಬರುತ್ತಿದ್ದುದು ಕಂಡು ಪ್ರಾಣವೇ ಬಾಯಿಗೆ ಬಂದಂತಾಗಿತ್ತು.ಯಾವ್ದಕ್ಕೂ ಇರಲಿ ಅಂತ ಜೇಬಿನೊಳಗೇ ನೋರರ ಒಂದು ನೋಟಿಗೆ ಬೆರಳಾಕಿ ತೆಗೆಯಬೇಕೆನ್ನುವಷ್ಟರಲ್ಲಿ, “ಏನ್ರಿ ಮಿಸ್ಟರ್?” ಎಂಬ ಮಧುರವಾದ ಧ್ವನಿಯೊಂದು ನನ್ನ ಕಿವಿ ತಮಟೆಯ ಮೇಲೆ ಬೀಳಲೂ,.. ತಿರುಗಿ ನೋಡಲೂ.. ತೆಗೆದುಕೊಂಡ ಸಮಯ ಕೆಲ ಸೆಕೆಂಡುಗಳಾದರೂ, ಅದರ ಅನುಭವ ಮಾತ್ರ ವಿವರಣಾತೀತ. ಹೌದು, ನನ್ನ ಪಕ್ಕಕ್ಕೆ ಬಂದು ನಿಂತದ್ದು ಒಂದು ಸುಂದರವಾದ ಹುಡುಗಿ. ನನ್ನ ದೇಹದಲ್ಲಿ ಆ ಮೊದಲು ಮನೆಮಾಡಿದ್ದ ಭಯ ಧಪ್ ಅಂತ ಕೆಳಗುರುಳಿ ರಪ್ ಅಂತ ಅದಾವುದೋ ಭಾವ ಅಂಬರವೇರುತ್ತಿತ್ತು. ಅವಳ ದೇಹಸಿರಿ ಮತ್ತು ಮುಖದ ತೇಜಸ್ಸನ್ನು ಮತ್ತೆ ಮತ್ತೆ ನೋಡಬೇಕೆನಿಸಿದರೂ… ಆಕೆ ಧರಿಸಿದ್ದ ಪೋಲೀಸ್ ಧಿರಿಸು ನನ್ನನ್ನು ಹೆದರಿಸಿ ಹಂಗಿಸುತ್ತಿತ್ತು. ‘ಉಳ್ಳವರ ಸಹವಾಸ ನಮಗ್ಯಾಕೆ ಎಂದುಕೊಳ್ಳುತ್ತಾ…’ ಇನ್ನೇನು ಕಾದಿದೆಯೋ ಎಂದುಕೊಳ್ಳುತ್ತಾ… ವಿನಯವಿಲ್ಲದ ನಯದಲ್ಲಿ ” ಮೇಡಂ!” ಎಂದೆ. ಆಕೆ ಮಾತ್ರ ಅದೇ ಪೋಲೀಸ್ ಖದರ್ ನಲ್ಲಿ ” ಎಲ್ ಗ್ರೀ ಹೋಗ್ತಾ ಇರೋದು?”.

ಈ ಬಾರಿಯ ಪ್ರಶ್ನೆ ಅಷ್ಟು ಮಧುರವಾಗಿರಲಿಲ್ಲ ಅನ್ಸುತ್ತೆ. ಯಾರಿಗೊತ್ತು ಬಹುಶಃ theory of utility apply ಆಗಿರಬಹುದು. ಈ ರೀತಿಯ ಇನ್ವೆಸ್ಟಿಗೇಟ್ ಸ್ಟಾಟ್ ಆದ ಮೇಲೆ ತೀರಿದ ಕಷ್ಟ ತಿರುಗಿಬಂದಂತೆ, ಈಬಾರಿ ಭಯ ನನ್ನ ಮನಸ್ಸಿನಲ್ಲಿ 30/ 40 ಸೈಟ್ ಕೊಂಡ್ಕೊಂಡ್ ಬಿಡ್ತು. ” ಕಲಾಕ್ಷೇತ್ರಕ್ಕೆ ಮೇಡಂ, ರಿಹರ್ಸಲ್ ಇದೆ “, ” ಹೋ.. ನನ್ಗೂ ಸ್ವಲ್ಪ ಕೆಲ್ಸ ಇದೆ, ನಾನೂ ಬರ್ತೀನಿ ನಡೀರೀ..”. ಎಂದು ನನ್ನ ಯಾವ ಅನುಮತಿಯನ್ನೂ ಕೇಳದೆ taken for granted ಎಂಬಂತೆ ನನ್ನ ಸಂಗಾತಿಯ ಉಳಿದರ್ದ ಬೆನ್ನಿನ ಮೇಲೆ ಕುಳಿತೇ ಬಿಟ್ಟಳು. ನನ್ನ ಸಂಗಾತಿ ಮಾತ್ರ ನನ್ನನ್ನು ಪ್ರಶ್ನಾರ್ಥಕವಾಗಿ ನೋಡುತ್ತಿತ್ತು. ಇನ್ನೇನು ಮಾಡಲು ಸಾಧ್ಯ’ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ’ ಎಂದು ಸಮಾಧಾನಿಸುತ್ತ, ಒಂದು ಕಿವಿಯನ್ನು ಹಿಡಿದು ಮತ್ತೊಂದು ಕಿವಿಯನ್ನು ಹಿಂಡಿ ಹೊರಡಲು ಸೂಚಿಸಿದೆ ಸಂಗಾತಿಗೆ.
ಸೂಚಿಸಿದಂತೆ ಸಾಗುತ್ತಿದ್ದ ಸಂಗಾತಿಗೆ ಯಾವ ಯೋಚನೆಯೋ ಕಾಡಲಿಲ್ಲವಾದರೂ, ನನಗೆ ಮಾತ್ರ ಚಲಿಸಿದ ಸುಮಾರು ದೂರ ಮಾತಿಲ್ಲ ಕಥೆಇಲ್ಲ, ಮೌನದಂಬಾರಿಯಂತೆ ಕಂಡರೂ, ನನ್ನ ತಲೆಯತುಂಬೆಲ್ಲಾ ಅದೆಷ್ಟೋ ಅಸಂಖ್ಯಾತ ಪ್ರಶ್ನೆ, ಗುಮಾನಿ, ಊಹೆಗಳು ಡಿಕ್ಕಿಹೊಡೆಯುತ್ತಿರುವಾಗಲೇ…. ನನ್ನ ಬೆನ್ನ ಹಿಂದೆ ಏನೋ ಮಾತು ಬಂದು ಹೋದಂತಾಯಿತು. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ನನ್ನ ಸುಪ್ತಪ್ತಜ್ಞೆಯೊಂದು ‘ಹುಂ’ ಅನ್ನಿಸಿತು. ನಂತರವೇ ತಿಳಿದದ್ದು investigatation part -2 ಪ್ರಾರಂಭವಾಗಿದೆಎಂದು. ” ಏನ್ ಕೆಲ್ಸ ಮಾಡ್ತೀರಿ?”, ” ಕಲಾ ರಂಗದಲ್ಲಿ ಕೂಲಿ ಕೆಲ್ಸ ಮಾಡ್ಕೊಂಡಿದ್ದೀನಿ ಮೇಡಂ”, “ಹೊಟ್ಟೆ ತುಂಬುತ್ತೇನ್ರೀ… ನಿಮ್ ಫೀಲ್ಡಲ್ಲೀ? ಹೆಂಗ್ ಬದುಕ್ತೀರಾ ಈ ಬೆಂಗಳೂರಿನಲ್ಲಿ?” ಈ ಮಾತು ಕೇಳಿ ನನಗೆ ಪೋಲೀಸರ ಬಗ್ಗೆ ಇದ್ದ ಬಿಗುಮಾನದಭಯ ಸಡಿಲವಾಗಿ ಗೌರವಭಾವ ಮೂಡುವುದಕ್ಕೂ, ಕಲಾಕ್ಷೇತ್ರ ತಲುಪುವುದಕ್ಕೂ ಒಂದೇ ಆಯ್ತು. ಆಕೆಯೊಂದಿಗೆ ಈಗ ನಿಜಕ್ಕೂ ಮಾತನಾಡಬೇಕೆನ್ನಿಸುತ್ತಿತ್ತಾದರೂ ಕೇಳುವುದು ಹೇಗೆ? ಗಾಡಿಯಿಂದ ಇಳಿದವಳೇ ಒಂದು ‘ಥ್ಯಾಂಕ್ಸ್’ ಬಿಸಾಕಿ ಸೀದಾ ಹೊರಟೇಬಿಟ್ಟಳು.
ಆಕೆ ಹೋಗುವುದನ್ನೇ ನೋಡುತ್ತಿರುವಾಗ, ಅಲ್ಲೇ ಯಾವುದೋ ಟಿವಿ ಸೀರಿಯಲ್ ಶೂಟಿಂಗ್ ನಡೀತ್ತಿತ್ತು. ಆ ಗುಂಪಿನಲ್ಲಿ ಈಕೆ ನೋಡುನೋಡುತ್ತಿದ್ದಂತೆ ಮಾಯವಾದಳು. ನನ್ನ ಸಂಗಾತಿಯನ್ನು parkingನಲ್ಲಿ ನಿಲ್ಲಿಸಿ ಯಾವ ಶೂಟಿಗ್ ಎಂದು ಕುತೂಹಲದಿಂದ ನಾನು ಇಣುಕಿ ನೋಡಲು ನನಗೆ ಮತ್ತೊಂದು ಅಚ್ಚರಿ, ‘ರೋಲ್ ಕ್ಯಾಮರಾ.. ಆಕ್ಷನ್’ ಎಂಬ ಪದಗಳು ಹೇಳಿದ್ದಕ್ಕೂ ಕ್ಯಾಮರಾ ಮುಂದೆ ನನ್ನೊಂದಿಗೆ ಬಂದಿದ್ದ ಪೋಲೀಸ್ ಧಾರಿಣಿ ಮಾತುಗಳನ್ನುದುರಿಸುವುದಕ್ಕೂ….. ನನಗೆ ನಂಬಲೇ ಆಗಲಿಲ್ಲ. ಆಕೆ ನಟಿಸಿದ್ದು ನನ್ನೊಂದಿಗಾ..? ಅಥವಾ ನಟಿಸುತ್ತಿರುವುದು ಈಗಲಾ…? full confussion… ಬಹುಶಃ ಆಕೆ ಪ್ರಸನ್ನರ ‘ನಟನೆಯ ಪಾಠಗಳು’ ಪುಸ್ತಕವನ್ನು ಚೆನ್ನಾಗಿ ಅರ್ಥೈಸಿಕೊಂಡಿರಬಹುದೆಂದು ನನ್ನ ಚಿತ್ತ!!






ಚೆನ್ನಾಗಿದೆ.ನಿಮ್ಮ ಬರವಣಿಗೆಯ ಶೈಲಿ ನನಗೆ ಇಷ್ಟವಾಯಿತು.
ಅದಕ್ಕೆ ಹೇಳೋದು, ಪೊಲೀಸ್ ಆದ್ರೇನು ಪುಢಾರಿ ಆದ್ರೇನು? ಯಾರಿಗೂ ಅಂಜಾಬಾರದು.ನಮ್ಮ ಪಾಡಿಗೆ ನಾವು ನಿಯತ್ತಿಂದ ಇದ್ದರೆ ಆಯ್ತು.
it is nice
ನಿಮ್ಮ ಅನುಭವ ನಮಗೆ ತಿಳಿಸಿದ ಬರವಣಿಗೆಯ ಶೈಲಿ ಚನ್ನಾಗಿದೆ.ಮುಂದುವರೆಯಲಿ.
ಚೆನ್ನಾಗಿದೆ.
chennagide
vishwanath anekatte