ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪೂರ್ಣದೃಷ್ಟಿ : ಕುವೆಂಪು ಮತ್ತು ತೇಜಸ್ವಿ – ಡಾ ಬಿ ಆರ್ ಸತ್ಯನಾರಾಯಣ

’ತೇಜಸ್ವಿಯನ್ನು ಹುಡುಕುತ್ತಾ’ ಪುಸ್ತಕದ ಮುಖಪುಟ ಮತ್ತು ಅದರ ಒಂದು ಲೇಖನ ’ಅವಧಿ’ ಓದುಗರಿಗಾಗಿ

ಡಾ ಬಿ ಆರ್ ಸತ್ಯನಾರಾಯಣ

ಮಹಾಸ್ಫೋಟದಿಂದಲೊ ಇನ್ಯಾವುದರಿಂದಲೊ ಈ ಜಗತ್ತು ಸೃಷ್ಟಿಯಾದಂದಿನಿಂದಲೂ ಇರುವ ಒಂದು ಶಕ್ತಿಯನ್ನು ಋತ ಎಂದಿಟ್ಟುಕೊಳ್ಳೋಣ. ಈ ಋತ ಎಂಬುದೇ ಅಂತಿಮ ಸತ್ಯ. ಇದನ್ನು ಮನುಕುಲದ ಋಷಿ-ಸಂತರು ಅವರವರಿಗೆ ತೋಚಿದಂತೆ ಕಂಡುಕೊಂಡಿದ್ದಾರೆ. ಕಂಡುಕೊಂಡಿದ್ದನ್ನು ಈ ಜಗತ್ತಿನ ಮುಂದೆ ಪ್ರಸ್ತುತಪಡಿಸಿದ್ದಾರೆ. ಅದರರ್ಥ, ಅವರಿಗಿಂತ ಮುಂಚೆ ಆ ಸತ್ಯವೆಂಬುದು ಇರಲೇ ಇಲ್ಲ ಎಂದರ್ಥವಲ್ಲ. ಹಿರಿಯರ ಪ್ರಸ್ತುತಿಯಾದ್ದರಿಂದ ಅದು ಹಿರಿಯ ಸತ್ಯ; ಸನಾತನರು ಪ್ರತಿಪಾದಿಸಿದ್ದರಿಂದ ಅದು ಸನಾತನ ಸತ್ಯ.
ಸತ್ಯದ ಸಾಕ್ಷಾತ್ಕಾರಕ್ಕಾಗಿ ಮನುಕುಲದ ಅದೆಷ್ಟೊ ಮಹಾತ್ಮರು ತಮ್ಮ ತಮ್ಮ ದಾರಿಯಲ್ಲಿ ಪ್ರಯತ್ನಸಿದ್ದಾರೆ. ಪ್ರಯತ್ನಿಸುತ್ತಿದ್ದಾರೆ. ಅದೆಷ್ಟೊ ಸಾಕ್ಷಾತ್ಕಾರಗಳು ಅಭಿವ್ಯಕ್ತಿಯಾಗದೆ ಹಾಗೆಯೇ ಮರೆಯಾಗಿ ಹೋಗಿವೆಯೊ ಬಲ್ಲವರಾರು!? ಏಕೆಂದರೆ, ಈ ಸಾಕ್ಷಾತ್ಕಾರ ಮಹಾಕಷ್ಟದ್ದು. ಇನ್ನು ಅದರ ಅಭಿವ್ಯಕ್ತಿ ಅದಕ್ಕಿಂತ ಕಷ್ಟದ್ದು! ಆದರೂ ಋಷಿಸದೃಶ ಸಾಧಕರು ಮಾತ್ರ, ಸಾಧ್ಯವಾದಷ್ಟೂ ಅದನ್ನು ಸಾಮಾನ್ಯ ಜನಮತಿಗೆ ಅರ್ಥವಾಗುವಂತೆ ಮಾಡಿದ್ದಾರೆ. ಅದಕ್ಕೆ ಅವರು ಆಯ್ದುಕೊಂಡ ಮಾರ್ಗಗಳನ್ನು ವಿಶಾಲರ್ಥದಲ್ಲಿ ಕಲಾಮಾರ್ಗ ಎಂದಿಟ್ಟುಕೊಳ್ಳಬಹುದು. ಈ ಕಲಾಮಾರ್ಗದಲ್ಲಿ ಚಿತ್ರಕಲೆ, ಸಾಹಿತ್ಯ, ನೃತ್ಯ, ಸಂಗೀತ ಮೊದಲಾದವುಗಳಲ್ಲದೆ ಇತ್ತೀಚಿನ ಫೊಟೊಗ್ರಫಿ, ಡಿಜಿಟಲ್ ತಂತ್ರಜ್ಞಾನದಂತಹ ಅಭಿವ್ಯಕ್ತಿ ಮಾರ್ಗಗಳೂ ಸೇರಿವೆ.
ಈ ಪೂರ್ಣಸತ್ಯವೇ ದರ್ಶನ. ದರ್ಶನ ಜಡವಾದುದಲ್ಲ; ನಿತ್ಯ ಚಲನಶೀಲವಾದುದು. ಆದ್ದರಿಂದಲೇ ಅದನ್ನು ಒಮ್ಮೆ ಕಂಡುಕೊಂಡು ಇದೇ ಅಂತಿಮ ಸತ್ಯ ಎಂದು ಜಗತ್ತಿನ ಎದುರು ಬಿಚ್ಚಿಡಲಾಗಿಲ್ಲ. ದರ್ಶನ ಎಂದರೆ ಕಾಣು ಕಾಣುವುದು ಎಂಬುದು ಸಾಮಾನ್ಯ ಅರ್ಥ. ಇಲ್ಲಿ ದರ್ಶನ ಎಂದರೆ ಕಂಡಿದ್ದು ಅಥವಾ ಈಗಾಗಲೇ ಕಂಡಿರುವುದೂ ಅಲ್ಲ; ನಿರಂತರವಾಗಿ ಕಾಣುತ್ತಲೇ ಇರುವುದು ದರ್ಶನ. ಸತ್ಯದ ಸಾಕ್ಷಾತ್ಕಾರ ಅಥವಾ ದರ್ಶನ ಎಂಬುದಕ್ಕೆ ಒಂದು ಸಾಮಾನ್ಯ ವ್ಯಾಖ್ಯೆಯೇ ಇಲ್ಲ. ಏಕೆಂದರೆ ಅದನ್ನು ನಿಜವಾಗಿ ಅನುಭವಿಸಿದವನು, ಅದನ್ನು ಹಾಗೆಯೇ ಅಭಿವ್ಯಕ್ತಿಗೊಳಿಸಲು ಸಾಧ್ಯವೇ ಇಲ್ಲ. ಅಂದರೆ ಅಭಿವ್ಯಕ್ತಿಗೆ ಕಷ್ಟಸಾಧ್ಯವಾದ ಅನುಭವವೇ ಪೂರ್ಣಸತ್ಯ. ಹಾಗಾದರೆ, ನಮ್ಮ ಋಷಿಗಳು, ಕವಿಗಳು, ದಾರ್ಶನಿಕರು ಅದನ್ನು ಹೇಳಿಲ್ಲವೆ? ಹೇಳಿದ್ದಾರೆ; ಆದರೆ ಅದು ಹೇಗಿತ್ತೊ ಹಾಗೆ ಅಲ್ಲ, ಕಲಾಮಾರ್ಗದಲ್ಲಿ. ಅದನ್ನು ಕಾವ್ಯದ ಪರಿಭಾಷೆಯಲ್ಲಿ ಕುವೆಂಪು ಅವರು “Poetic Vision (ದರ್ಶನ) s not an intellectually built up (by an acute intellect) but intentively grasped thing” ಎಂದು ಕೈವಾರಿಸಿದ್ದಾರೆ.
ಅಂತಿಮ ಸತ್ಯ ಅಥವಾ ಪೂರ್ಣ ಸತ್ಯ ಎಂಬುದರ ಸ್ವರೂಪವೇನು? ಅದರ ಸ್ವರೂಪ ನಿರ್ಣಯಕ್ಕೆ ಇರುವ ಮೂಲತತ್ವಗಳೇನು? ಈ ಮೂಲತತ್ವಗಳ ಪ್ರತಿಪಾದಕರಾರು?…. ಹೀಗೆ ನೂರಾರು ಪ್ರಶ್ನೆಗಳ ಸರಣಿಯನ್ನೇ ಕೇಳಬಹುದಾದರೂ, ಅವಕ್ಕೆಲ್ಲಾ ಉತ್ತರ ಇಲ್ಲ ಎಂಬುದೇ ಆಗಿದೆ. ಪೂರ್ಣತ್ವದ ಬಗ್ಗೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಕನ್ನಡಾವತಾರವೆತ್ತಿರುವ ಉಪನಿಷದ್‌ವಾಣಿಯೊಂದು ಹೀಗಿದೆ.

ಪೂರ್ಣಮದು; ಪೂರ್ಣಮಿದು;
ಪೂರ್ಣದಿಂ ಬಂದುದೀ ಪೂರ್ಣಂ
ಆ ಪೂರ್ಣದಿಂ ಪೂರ್ಣಮಂ ಕಳೆದೊಡಂ
ಪೂರ್ಣಮೆಯೆ ತಾನುಳಿವುದು.
ಮೇಲ್ನೋಟಕ್ಕೆ ಇದೊಂದು ಸೊನ್ನೆ ಎನ್ನಿಸಿದರೆ ತಪ್ಪೇನಿಲ್ಲ. ಆದರೆ ಅದು ಅನಂತತೆಯೂ (Infinity) ಆಗಿರಬಹುದಲ್ಲವೆ? ಹೌದು, ಅದೊಂದು ಸೊನ್ನೆಯೂ ಹೌದು; ಇನ್ಫಿನಿಟಿಯೂ ಹೌದು! ಏಕಕಾಲಕ್ಕೆ ನಿರಪೇಕ್ಷವೂ ಸಾಪೇಕ್ಷವೂ ಆಗಿರುವಂತೆ! ಹೀಗೆ ಏಕಕಾಲದಲ್ಲಿ ಶೂನ್ಯವೂ ಇನ್ಫಿನಿಟಿಯೂ ಆಗಿರುವ ಪೂರ್ಣತ್ವ ಎಂಬುದರ ಸಾಕ್ಷಾತ್ಕಾರ ಸಾಧ್ಯವೆ? ಇಲ್ಲ! ಸಾಧಕನಾದವನು ಪೂರ್ಣತೆಗೆ ಹತ್ತಿರವಾಗಬಹುದೇ ಹೊರತು, ಅದರ ಸಂಪೂರ್ಣ ಸಾಕ್ಷಾತ್ಕಾರ ಸಾಧ್ಯವೇ ಇಲ್ಲ. ಆದರೆ, ಆ ಸಾಕ್ಷಾತ್ಕಾರದ ಸರ್ವಪ್ರಯತ್ನವೂ ಪೂರ್ಣತೆಯೆಡೆಗಿನ ಚಲನೆಯೇ ಆಗಿರುತ್ತವೆ. ಇದನ್ನೇ ಕುವೆಂಪು ಅವರು ಸರಳವಾಗಿ ಅದು ಒಂದು ದುಂಡಾದ ಗಾಜಿನ ಬುರುಡೆಯಂತೆ; ಆ ಗೋಳದಲ್ಲಿ ಮೊದಲೆಲ್ಲಿ. ತುದಿ ಎಲ್ಲಿ? ಮೇಲೆ ಯಾವುದು, ಕೆಳಗೆ ಯಾವುದು? ಮುಖ್ಯವೇನು ಅಮುಖ್ಯವೇನು? ಎಲ್ಲಾ ಒಂದೇ; ಯಾವ ಕಣಕ್ಕೆ ಕೈಯಿಟ್ಟಿರೂ ಪೂರ್ಣದೆಡೆಗೆ ಸಾಗುತ್ತೇವೆ. ಎನ್ನುತ್ತಾರೆ. ಇಂತಹ ಪೂರ್ಣತೆಯೆಡೆಗೆ ಸಾಗಲು ಮೂರು ಮಹಾಮಂತ್ರಗಳಿವೆ ಎನ್ನುತ್ತಾರೆ ಕವಿ. ಅವುಗಳೆಂದರೆ ಸಮನ್ವಯ, ಸರ್ವೋದಯ ಮತ್ತು ಪೂರ್ಣದೃಷ್ಟಿ. ಈ ಮೂರೇ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದ ತ್ರಿಣೇತ್ರಗಳೆಂದೂ ಹೇಳಿದ್ದಾರೆ. ಇವುಗಳಲ್ಲಿ ಕೊನೆಯದಾದ ಪೂರ್ಣದೃಷ್ಟಿಯೇ ಅತ್ಯಂತ ಪ್ರಮುಖವಾದುದು. ಮೂರು ಮಹಾಮಂತ್ರಗಳನ್ನು ಸೇರಿಸಿದ ತ್ರಿಭುಜ ರಚನೆಯಾದರೆ ಮೇಲಿನ ತುದಿಯೇ ಪೂರ್ಣದೃಷ್ಟಿ; ಬಾಹುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಕೆಳಗಿನ ಬಾಹುವೇ ಅದು. ಬ್ರಹ್ಮಸೃಷ್ಟಿಯ ಪೂರ್ಣಪ್ರತಿಮೆಯನ್ನು ಪೂರ್ಣವಾಗಿ ಗ್ರಹಿಸುವ ದರ್ಶನ ಶಕ್ತಿಯೇ ಪೂರ್ಣದೃಷ್ಟಿ. ಅದು ಮನೋಮಯ ಮಾನವ ಮತಿಗೆ ದುಸ್ಸಾಧ್ಯ. ಸಿದ್ಧನೂ ಸ್ಥಿತಿಪ್ರಜ್ಞನೂ ಆಗಿ ವಿಜ್ಞಾನಮಯಕ್ಕೇರಿದ ಪೂರ್ಣಯೋಗಿಗೆ ಮಾತ್ರ ಪೂರ್ಣದೃಷ್ಟಿ ಸಾಧ್ಯ. ಪೂರ್ಣದೃಷ್ಟಿಯು ಆದ್ಯಂತ್ಯವಿಲ್ಲದ್ದು ಹಾಗೂ ಸ್ವಯಂಪೂರ್ಣವಾದುದು. ಇದು ಕೇವಲ ಕಲಾಸೃಷ್ಟಿಗೆ ಮಾತ್ರವಲ್ಲ ವಾಸ್ತವ ಬದುಕಿಗೂ ಅಗತ್ಯ ಎಂಬುದು ಕುವೆಂಪು ಅವರ ಅನಿಸಿಕೆ. ಪೂರ್ಣದೃಷ್ಟಿ ವಾಸ್ತವವೆನಿಸಿಕೊಳ್ಳುತ್ತಿರುವ ಲೋಕಕ್ಕೂ ಆ ಲೋಕದ ಜೀವನಕ್ಕೂ ಅನ್ವಯಿಸುತ್ತದೆ. ಅವಿದ್ಯೆಯನ್ನು ಉತ್ತರಿಸುವ ಲೋಕಾತೀತದಲ್ಲಿಯೂ ಅದು ವಿದ್ಯಾಶಕ್ತಿಯಾಗುತ್ತದೆ…. ಅದು ಪ್ರಜ್ಞಾಪ್ರತಿಷ್ಟಿತವಾದ ಯೋಗಸ್ಥಿತಿ ಎಂಬುದು ಅವರ ಖಚಿತಾಭಿಪ್ರಾಯ.
ಸೃಷ್ಟಿಕವಿಯ ವಿಶ್ವಕಾವ್ಯಕ್ಕೆ ಆನಂದವೇ ಕಾರಣ, ಉದ್ದೇಶ ಮತ್ತು ಪ್ರಯೋಜನ ಎಂಬುದು ಪೂರ್ಣದೃಷ್ಟಿಗೆ ಮಾತ್ರ ಸ್ವಸಂವೇದ್ಯ. ಖಂಡ ಅಥವಾ ಅಂಶದೃಷ್ಟಿಗೆ ಅದು ಸ್ವಯಂಸಾಧ್ಯವಲ್ಲ ಎಂಬ ಅವರ ಮಾತುಗಳು ಪೂರ್ಣದೃಷ್ಟಿಯ ಮಹತ್ವವನ್ನು ಮನಗಾಣಿಸುತ್ತವೆ. ಈಗಾಗಲೇ ಇರುವ ನಿತ್ಯನೂತನವಾದ ಪೂರ್ಣತ್ವವನ್ನು ಕಾಣಲು ಪೂರ್ಣದೃಷ್ಟಿ ಅತ್ಯವಶ್ಯಕ. ಅರ್ಧದೃಷ್ಟಿ ಅನರ್ಥಕಾರಿ. ಪೂರ್ಣದೃಷ್ಟಿಯಿಂದಲೇ ಶ್ರೇಯಸ್ಸು. ಪೂರ್ಣದೃಷ್ಟಿಯೇ ನಿಜವಾದ ಸರ್ವೋತ್ಕೃಷ್ಟವಾದ ದರ್ಶನ ಎಂಬುದು ಕುವೆಂಪು ಅವರ ಅಚಲವಾದ ನಂಬಿಕೆಯಾಗಿತ್ತು.
ಪೂರ್ಣದೃಷ್ಟಿಯಿಂದ ಮಾತ್ರ ಪೂರ್ಣತೆಯನ್ನು ಸ್ಪರ್ಶಿಸಲು ಸಾಧ್ಯ! ಅದನ್ನು ಅಖಂಡ ಸತ್ಯವೆಂದೂ ಬೇಕಾದರೆ ಕರೆಯಬಹುದು. ಗಾಜಿನ ಗೋಲ ಅಸಂಖ್ಯಾತ ಕಣಗಳ ಮೊತ್ತ. ಆದರೆ ಅದರ ಒಂದೊಂದು ಕಣವೂ ಆ ಗೋಲಕ್ಕೆ (ಪೂರ್ಣತೆಗೆ) ಅವಶ್ಯಕ. ಆ ಗಾಜಿನ ಗೋಲದ ಯಾವ ಕಣವನ್ನು ಸ್ಪರ್ಶಿಸಿದರೂ ಪೂರ್ಣತೆಯನ್ನು ಸ್ಪರ್ಶಿಸಿದಂತೆಯೆ ಸರಿ. ವಿದ್ಯುತ್ ಪ್ರವಹಿಸುತ್ತಿರುವ ತಂತಿಯನ್ನು ಎಲ್ಲಿ ಮುಟ್ಟಿದರೂ ಶಾಕ್ ಹೊಡೆಯುತ್ತದೆ ಅಲ್ಲವೆ? ದೇವನೊಬ್ಬ ನಾಮ ಹಲವು; ದಾರಿಗಳೂ ಹಲವು! ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ; ಯಾವುದೂ ಯಃಕಶ್ಚಿತವಲ್ಲ! ಎನ್ನುವ ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮುನ್ನುಡಿಯಲ್ಲಿ ಪೂರ್ಣದೃಷ್ಟಿಯ ಸಾಕ್ಷಾತ್ಕಾರವನ್ನು ಹಾಗು ಅದರ ಕಲಾಭಿವ್ಯಕ್ತಿಯನ್ನು ಅತ್ಯಂತ ಸ್ಪಷ್ಟವಾಗಿ ಕಾಣಬಹುದು.
ರಾಮನ ಕಿರೀಟದಾ ರನ್ನವಣಿಯೋಲೆ ರಮ್ಯಂ,
ಪಂಚವಟಿಯೊಳ್ ತೃಣಸುಂದರಿಯ ಮೂಗುತಿಯ
ಮುತ್ತಪನಿಯಂತೆ ಮಿರುಮಿರುಗಿ ಮೆರೆವ ಹಿಮಬಿಂದುವುಂ.
ಮಹಾಕವಿ ಕುವೆಂಪುವನ್ನೇ ಸೃಜಿಸುತ್ತಿರುವ ರಾಮಾಯಣದ ನಾಯಕ ಶ್ರೀರಾಮ. ಪರಮಪುರುಷೋತ್ತಮ ಅಂದ ಮಾತ್ರಕ್ಕೆ ಸಂಚಿಕೆ ಸಂಚಿಕೆಯಲ್ಲೂ, ಪುಟ ಪುಟದಲ್ಲೂ ರಾಮನಾಮ ಸಂಕೀರ್ತನೆಯನ್ನು ಮಾಡಲಾದೀತೆ? ಭಕ್ತಕವಿಯೋರ್ವನಂತೆ ಸಹಸ್ರನಾಮಗಳನ್ನು ಸೃಷ್ಟಿಸಲಾದೀತೆ? ರಾಮ-ಮಂಥರೆ, ಗುತ್ತಿ-ವಿವೇಕಾನಂದ, ಮಂದಣ್ಣ-ಕರ್ವಾಲೊ ಎಲ್ಲರೂ ಗಾಜಿನ ಗೋಲದ ಒಂದೊಂದು ಕಣಗಳಷ್ಟೆ. ಅವರಲ್ಲಿ ಯಾರನ್ನು ಸ್ಪರ್ಶಿಸಿದರು ಪೂರ್ಣತೆಯನ್ನು ಸ್ಪರ್ಶಿಸಿದಂತೆಯೆ. ಈ ಸಂದರ್ಭದಲ್ಲಿ ತೇಜಸ್ವಿ ಸಂವಾದವೊಂದರಲ್ಲಿ ಹೇಳಿದ ಮಾತುಗಳು ನೆನಪಾಗುತ್ತವೆ. ಒಬ್ಬ ಮೇದರವನು ಕಷ್ಟಪಟ್ಟು ಹೇಗೆ ಒಂದು ಬುಟ್ಟಿ ಹೆಣೆಯುತ್ತಾನೋ ಅಷ್ಟೇ ಕಷ್ಟಪಟ್ಟು ಕಥೆ, ಕಾದಂಬರಿ, ಕವನ ಮತ್ತು ಹಕ್ಕಿಗಳ ಛಾಯಾಚಿತ್ರ ಎಲ್ಲವೂ ಕಷ್ಟದಿಂದ ಬಂದಿರತಕ್ಕಂತವೇ ಹೊರತು ಸ್ವಯಂ ಸ್ಫೂರ್ತಿಯಿಂದ ಇದ್ದಕ್ಕಿದ್ದಂತೆ ಒಂದು ದಿನ ನಾವು ಸಾಧನೆ ಮಾಡಿಬಿಟ್ಟೆವು ಅನ್ನುವುದು ಸುಳ್ಳು ಅನ್ನಿಸುತ್ತೆ ಎನ್ನುತ್ತಾರೆ. ಪೂರ್ಣಜ್ಞಾನಿಯಾದವನಿಗೆ ಮಾತ್ರ ರಾಮನ ಕಿರೀಟದ ಮಣಿಯಷ್ಟೇ ಮುಖ್ಯವಾಗಿ ಹುಲ್ಲಿನೆಸಳ ತುದಿಯಲ್ಲಿರುವ ಮಂಜಿನ ಹನಿಯೂ ಮುಖ್ಯವಾಗುತ್ತದೆ. ಮೇದರವನು ಹೆಣೆಯುವ ಬುಟ್ಟಿಯೂ ಒಂದು ಒಳ್ಳೆಯ ಪೈಂಟಿಂಗೂ ಅಷ್ಟೇ ಮುಖ್ಯವಾಗುತ್ತದೆ. ಸರ್ವದರಲ್ಲಿಯೂ ಸರ್ವವನ್ನು ಕಾಣುವ ಸರ್ವದಾ ಭಾವವಿದು. ಇದಕ್ಕೆ ಸರ್ವೋದಯ, ಸಮಭಾವ, ಸಮಬಾಳು ಸಮಪಾಲು ಎಂಬ ಲೌಕಿಕ ಅರ್ಥಗಳನ್ನಷ್ಟೇ ಆರೋಪಿಸುವುದು ಅಲ್ಪದೃಷ್ಟಿ. ಅದು ಕವಿಯ ಕಲಾಕಾರನ ಪೂರ್ಣದೃಷ್ಟಿಯೂ ಹೌದು ಎಂಬ ಹೃದೆಚ್ಚರಿಕೆ ಸಹೃದಯನಿಗೆ, ಮುಖ್ಯವಾಗಿ ವಿಮರ್ಶಕನಿಗೆ ಇದ್ದರೆ ಅದು ಪೂರ್ಣದೃಷ್ಟಿ.
ಮೇಲೆ ಕುವೆಂಪು ಬಳಸಿದ ಸ್ವಸಂವೇದ್ಯ ಎಂಬ ಪದದ ಬದಲು ತೇಜಸ್ವಿ ಹೃದ್ಗತ ಎಂಬ ಪದ ಬಳಸಿರುವುದನ್ನು ನೋಡಬಹುದು. ಅಖಂಡ ಸತ್ಯ, ಪೂರ್ಣದೃಷ್ಟಿ, ಅನೇಕತೆಯಲ್ಲಿ ಏಕತೆ ಮುಂತಾದ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತ ಮತ್ತು ಹೇಳುತ್ತಾ ಇರುತ್ತೇವೆ. ಅನೇಕ ಸಾರಿ ಈ ಮಾತುಗಳು ನಮಗೆ ತರ್ಕಗತವಾಗಿರುತ್ತವೆಯೇ ಹೊರತು ಹೃದ್ಗತವಾಗಿರುವುದಿಲ್ಲ ಎನ್ನುತ್ತಾರೆ. ಈ ಹೃದ್ಗತವಾಗುವುದೆಂದರೆ ಏನು? ಜೀವಿ ಉಸಿರಾಡುತ್ತದೆ. ಉಸಿರಾಡುವುದು ಜೀವಿಗೆ ಹೃದ್ಗತ. ಮನುಷ್ಯನ ಹೃದಯ ಬಡಿದಕೊಳ್ಳುತ್ತಿರುತ್ತದೆ. ಹಾಗೆ ಬಡಿದುಕೊಳ್ಳುವುದು ಹೃದಯಕ್ಕೆ ಹೃದ್ಗತ. ನಮ್ಮ ರಾಷ್ಟ್ರಗೀತೆ ಜನಗಣಮನವನ್ನು ಗುಂಪಿನಲ್ಲಿ ನಿಂತಾಗ ಸರಾಗವಾಗಿ ಹಾಡಿ ಮುಗಿಸುತ್ತೇವೆ. ಆದರೆ ಒಬ್ಬರೇ ಹಾಡಿಕೊಳ್ಳಲು ಹೋದರೆ ಆಗುವುದಿಲ್ಲ. ಇನ್ನು ಬಾಯಿಪಾಠ ಮಾಡಿ ಬೇಕಾದರೆ ಹೇಳಬಹುದು. ಆದರೆ ಆ ರಾಷ್ಟ್ರಗೀತೆಯ ಪದಪದದ, ಶಬ್ದಾರ್ಥದ ಅಂತಃಸತ್ವ ನಮಗೆ ಕಾಣಬೇಕು. ಭಾವಗೋಚರವಾಗಬೇಕು.
ಮಯಾಲೋಕದ ಮುನ್ನುಡಿಯಲ್ಲಿ ಇಲ್ಲಿನ ಕಥಾಪ್ರತಿಮೆಗಳೂ ದೃಶ್ಯಪ್ರತಿಮೆಗಳೂ ಓದುತ್ತ ಹೋದಂತೆ ಒಂದರಮೇಲೊಂದು ಸಂಯೋಜನೆಗೊಳ್ಳುತ್ತಾ ಮಾಯಾಲೋಕವನ್ನು ಸೃಷ್ಟಿಸುತ್ತವೆ ಎಂದಿದ್ದಾರೆ. ಹಲಸಿನ ಹಣ್ಣಿನ ವಾಸನೆ, ರುಚಿ, ಆಕಾರ ಇತ್ಯಾದಿಗಳೆಲ್ಲ ಬಿಡಿ ಬಿಡಿಯಾಗಿಯೇ ಅನೇಕ ಇಂದ್ರಿಯಗಳ ಮುಖಾಂತರ ನಮ್ಮ ಅರಿವಿಗೆ ರವಾನಿಸಲ್ಪಡುತ್ತವೆ. ಅವುಗಳೆಲ್ಲದರ ಸಂಯೋಜಿತ ಸ್ವರೂಪವೇ ಹಲಸಿನ ಹಣ್ಣು ಎಂಬ ಮಾತನ್ನು ತೇಜಸ್ವಿ ಅಣ್ಣನ ನೆನಪು ಕೃತಿಯಲ್ಲಿ ಆಡಿದ್ದಾರೆ. ಪೂರ್ಣದೃಷ್ಟಿಯಿದ್ದವನಿಗೆ ಮಾತ್ರ ಅದನ್ನು ನೋಡಿದ ಕ್ಷಣವೇ ಹಲಸಿನ ಹಣ್ಣು ಎಂದು ಅರ್ಥವಾದರೆ, ಅಲ್ಪದೃಷ್ಟಿಯಿದ್ದವನಿಗೆ, ಹಣ್ಣನ್ನು ಕುಯ್ದು ತಿಂದಮೇಲೆ ಅಥವಾ ಬೇರೊಬ್ಬರು ಹೇಳಿದ ಮೇಲೆ ಓಹೊ ಇದು ಹಲಸಿನ ಹಣ್ಣು ಎಂದು ಅರ್ಥವಾಗುತ್ತದೆ. ಹಲಸಿನ ಹಣ್ಣನ್ನು ನೋಡಿದಾಕ್ಷಣ ಅದರ ರುಚಿ, ವಾಸನೆ ಎಲ್ಲವೂ ಭಾವಗೋಚರವಾಗಿ ಬಾಯಲ್ಲಿ ನೀರೂರುವ, ವಾಸನೆಗೆ ಮೂಗರಳಿಸುವ ಬಾಹ್ಯ ಪ್ರತಿಕ್ರಿಯೆಗಳ ಜೊತೆಗೆ ಹಲಸಿನ ಹಣ್ಣಿನ ದರ್ಶನ ಮಾತ್ರದಿಂದಲೇ ಸರ್ವೇಂದ್ರಿಯಗಳ ಮೂಲಕ ನಮ್ಮ ಅಂತಃಪ್ರಜ್ಞೆಗಿಳಿದು ಆನಂದದ ಅಲೆಯೊಂದು ತೇಲಿಹೋಗುತ್ತದೆ ಅಲ್ಲವೆ? ಅದು ಹೃದ್ಗತ. ಈ ಹೃದ್ಗತವಾಗುವುದೆಂದರೆ ಅದನ್ನು ಮನನ-ಪುನಃರ್ಮನನ ಮಾಡಿಕೊಳ್ಳುವುದಲ್ಲ; ಅದಾಗಿಯೇ ಆಗುವುದು. ಜ್ಞಾನದ ವಿಸ್ತರಣೆಯಿಂದ, ಹೆಚ್ಚೆಚ್ಚು ಜ್ಞಾನಾರ್ಜನೆಯಿಂದ ಅದು ಲಭಿಸುವುದಿಲ್ಲ; ಅದು ವಿಸ್ತರಿಸುವುದಿಲ್ಲ; ರಿಯಲೈಸ್ ಆಗುತ್ತದೆ ಅಂದರೆ ಗೋಚರಿಸುತ್ತದೆ; ಆದರೆ ಗೋಚರಿಸುತ್ತಲೇ ಇರುವುದಿಲ್ಲ. ಯಾವ ಪ್ರಾಣಿಯೂ ಆಗಾಗ ಹೃದಯ ಬಡಿದುಕೊಳ್ಳುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳುವುದಿಲ್ಲ! ಆ ಗೋಚರಿಸುವ ಕ್ಷಣ ಮತ್ತೆ ಇಡೀ ಕಾಲಚಕ್ರದಲ್ಲಿ ಬರದೆಯೂ ಹೋಗಬಹುದು. ಆದ್ದರಿಂದ ಗೋಚರಿಸಿದ ಕ್ಷಣವೇ ಅದು ಯಾವುದಾದರೊಂದು ರೂಪದಲ್ಲಿ ಅಭಿವ್ಯಕ್ತಿಯಾಗಬೇಕು. ಕಲಾಮಾದ್ಯಮವೊಂದೆ ಸಧ್ಯಕ್ಕೆ ಅದಕ್ಕಿರುವ ಏಕೈಕ ಮಾರ್ಗ. ಆ ಮಾರ್ಗ ಪೂರ್ಣದೃಷ್ಟಿಯಿಂದ ಕೂಡಿರಬೇಕು ಹಾಗೂ ಪೂರ್ಣತೆಯೆಡೆಗೆ ನಿರ್ದೇಶಿತವಾಗಿರಬೇಕು. ಆಗ ಮಾತ್ರ ಕಲಾಸೃಷ್ಟಿ ಉತ್ತಮ ತರದ್ದಾಗಿರುತ್ತದೆ.
ಕಲ್ಪಾಂತರಗಳ ಸಂಕ್ಷಿಪ್ತಾಕೃತಿ,
ಜಗಶಿಲ್ಪಿಯ ಯುಗಯುಗ ಕರ್ಮದ ಕೃತಿ,
ಶತಮಾನಂಗಳ ಸಂಗ್ರಹ ಸಂಸ್ಕೃತಿ:
ಮಲಗಿದೆ ನವಶಿಶು ತೊಟ್ಟಿಲಲಿ!
ಕುವೆಂಪು ಅವರ ಕೂಸಿನ ಕನಸು ಎಂಬ ಪದ್ಯದ ಮೊದಲ ಸಾಲುಗಳಿವು. ತೊಟ್ಟಿಲಲ್ಲಿರುವ ಹಸುಗೂಸನ್ನು ಚೆಲುವನೆಂದು, ದೇವನೆಂದು, ದೇವಕೀಕಂದನೆಂದು ವರ್ಣಿಸಿ ಪುಳಕಗೊಳ್ಳುತ್ತಿದ್ದ ಕವಿಸಮೂಹದ ನಡುವೆ, ಆ ಕೂಸನ್ನು ಕಲ್ಪಾಂತರಗಳ ಸಂಕ್ಷಿಪ್ತಾಕೃತಿ ಎಂದು, ಜಗತ್ತನ್ನು ನಿರ್ಮಾಣ ಮಾಡಿದ ಶಿಲ್ಪಿಯು ಯುಗ ಯುಗಗಳ ಕಾಲ ಕೆಲಸ ಮಾಡಿ ಸಿದ್ಧಪಡಿಸಿದ ಕೃತಿಯೆಂದು, ಶತಶತಮಾನಗಳ ಸಂಸ್ಕೃತಿಯ ಸಂಗ್ರಹರೂಪವೆಂದು ಕುವೆಂಪು ಭಾವಿಸುತ್ತಾರೆ. ಶತಶತಮಾನಗಳಿಂದಲೂ ರೂಪಗೊಂಡ ಸಂಸ್ಕೃತಿಯ ಮೊತ್ತ ಆ ಶಿಶು. ಅದು ಪ್ರತ್ಯೇಕವಲ್ಲ. ಅದೊಂದು ನಿತ್ಯಸರಪಳಿಯ ಕೊಂಡಿ! ಅದರ ಆಲೋಚನೆಗಳು ಅದರವು ಎನ್ನಲಾಗುವುದಿಲ್ಲ. ಅದರ ಆಲೋಚನೆಯೊಂದರ ಮೇಲೆ ಯುಗಯುಗಗಳ, ಇತಿಹಾಸಗಳ ಪ್ರಭಾವವಿರುತ್ತದೆ. ಇತಿಹಾಸವೆಂದರೆ ನಾವು ಬರೆದಿಟ್ಟುಕೊಂಡಿರುವ ಪುಸ್ತಕದ ಇತಿಹಾಸವಲ್ಲ; ಅದು ಜಗತ್‌ಸೃಷ್ಟಿಯ ಇತಿಹಾಸ! ಸೃಷ್ಟಿವಿಕಾಸದ ಇತಿಹಾಸ! ಮಗುವಿನ ನಗುವಿಗೆ, ಅದರ ಕೈ ಚಲನೆಗೆ ವಿಶ್ವದ ಅನಂತತೆಯಲ್ಲಿ ಏನೇನು ಅರ್ಥಗಳಿದ್ದಾವೆಯೊ ಬಲ್ಲವರಾರು?…. ಹೀಗೆಲ್ಲಾ, ತೊಟ್ಟಿಲಲ್ಲಿ ಮಲಗಿರುವ ಮಗುವಿನ ಸುತ್ತಲೇ, ಇಡೀ ಬ್ರಹ್ಮಾಂಡದ, ಸೃಷ್ಟಿಯ, ಸಂಸ್ಕೃತಿ-ನಾಗರಿಕತೆಯ ಕನಸನ್ನು ಬಿಚ್ಚಿಡುವದೇ ಪೂರ್ಣದೃಷ್ಟಿ. ಅಖಂಡತ್ವದ ಅಮೃತಸ್ಪರ್ಶ.
ಕಲ್ಪಾಂತರಗಳ ಸಂಕ್ಷಿಪ್ತಾಕೃತಿ ಎಂಬ ಕುವೆಂಪು ಅವರ ಸಾಲನ್ನು ತೇಜಸ್ವಿ ಇನ್ನೂ ಸರಳವಾಗಿ ತಾಂತ್ರಿಕವಾಗಿ ನಮಗೆ ವಿವರಿಸುತ್ತಾರೆ. ಬರವಣಿಗೆ ಜೀವನವನ್ನು ಒಂದು ಕಂಟಿನ್ಯುಟಿಯಾಗಿ ನೋಡುತ್ತೆ ಎನ್ನುವ ತೇಜಸ್ವಿ ಒಂದು ಸ್ಟಿಲ್ ಫೊಟೊ ಹೇಗೆ ಕಂಟಿನ್ಯುಟಿಯ ಹಾಗೂ ಅನಂತತೆಯ ಪ್ರತಿನಿಧಿಯಾಗಿರುತ್ತದೆ ಎಂಬುದನ್ನು ಹೀಗೆ ಹೇಳುತ್ತಾರೆ: ಕಂಟ್ಯೂನಿಟಿಯ ಒಂದು ಸೆಕೆಂಡ್‌ನ ಫ್ರೀಜ್ ಮಾಡುತ್ತಿದ್ದ ಹಾಗೇನೆ….. ಸಡನ್ ಆಗಿ ಆರ್‍ಟಿಸ್ಟಿಕ್ ಅಂಡ್ ಸ್ಪಿರಿಚ್ಯುಲ್ ಡೈಮೆನ್ಷನ್ ಹೇಗೆ ಬರುತ್ತೆ ಆ ಇಮೇಜಸ್‌ಗೆ. ಕಂಟ್ಯೂನಿಟಿಯಲ್ಲಿ ಇಲ್ಲದೇ ಇದ್ದಂತಹ ಆಯಾಮಗಳು ಫ್ರೋಜನ್ ಇಮೇಜಸ್‌ಗೆ ಬಂದುಬಿಡುತ್ತೆ. ಆ ಒಂದು ಫ್ರಾಕ್ಷನ್ ಆಫ್ ದಿ ಸೆಕೆಂಡ್ ಹೇಗೆ ಅನಂತತೆಯ ಪ್ರತಿನಿಧಿ ಅನ್ನೋದನ್ನ ತೋರಿಸುವುದಕ್ಕೆ ಪ್ರಯತ್ನ ಮಾಡುತ್ತೆ.
ಕಲ್ಪಾಂತರಗಳ ಸಂಕ್ಷಿಪ್ತಾಕೃತಿ ಎಂಬ ಮಾತನ್ನು ಈಗ ಜಗತ್ತಿನ ಪ್ರತೀಕ್ಷೆಯಲ್ಲಿರುವ ದೇವಕಣಕ್ಕೂ ಅನ್ವಯಿಸಬಹುದು. ಜಗತ್ತು ದೇವಕಣದ ಹುಡುಕಾಟದಲ್ಲಿ ತೊಡಗಿದೆ. ಈ ಇಡೀ ಬ್ರಹ್ಮಾಂಡದ ಉಗಮಕ್ಕೆ ದೇವಕಣ ಕಾರಣ ಎನ್ನುತ್ತದೆ ವಿಜ್ಞಾನ. ಯಾವ ದೇವಕಣದಿಂದ ಈ ಜಗತ್ತು ಸೃಷ್ಟಿಯಾಯಿತೊ, ಆ ದೇವಕಣದ ಹುಡುಕಾಟಕ್ಕೆ ಇಡೀ ಜಗತ್ತು ಪ್ರಯತ್ನಿಸುತ್ತಿದೆ. ನಮ್ಮ ಕಲ್ಪನೆಗೂ ನಿಲುಕದ ಆದ್ಯಂತ್ಯವಿಲ್ಲದ ಈ ಬ್ರಹ್ಮಾಂಡದ ಸಂಕ್ಷಿಪ್ತಾಕೃತಿಯಾಗಿ ದೇವಕಣವನ್ನು ಹಾಗೂ ಅದನ್ನು ಸಾಧಿಸುವಲ್ಲಿನ ಆನಂದವನ್ನು ನಾವು ನೋಡಬೇಕಾಗಿದೆ. ಕುವೆಂಪು ಅವರ ಶಿಲಾತಪಸ್ವಿ ಎಂಬ ಕವಿತೆಯಲ್ಲಿ ಮಹಾಸ್ಫೋಟದ ವಿವರಗಳು ಬರುತ್ತವೆ. ಭೂಮಿಯಲ್ಲಿ ಬಿದ್ದ ಒಂದು ತುಂಡು ಕಲ್ಲಿಗೂ ವಿಶ್ವಕಾವ್ಯದಸ್ಪಷ್ಟ ಪೂರ್ಣತೆಯಲ್ಲಿ ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆ ಇರುತ್ತದೆ ಎನ್ನುತ್ತಾರೆ. ಮನುಷ್ಯರಾದ ನಮಗೆ ವಿಶ್ವಕಾವ್ಯದ ಪೂರ್ಣತೆಯ ಭಾಗವಾಗುವ ಆಕಾಂಕ್ಷೆ ಸಹಜವಾಗಿಯೇ ಇರುತ್ತದೆಯಾದರೂ ಅದು ಅಗೋಚರ ಹಾಗೂ ಅಪ್ರಕಟಿತ. ಕವಿಯ ಕಣ್ಣಿದ್ದವನಿಗೆ ಅರ್ಥಾತ್ ಪೂರ್ಣದೃಷ್ಟಿಯಿದ್ದವನಿಗೆ ಮಾತ್ರ ಅದು ಭಾವಗೋಚರವಾಗುತ್ತದೆ.
ಕೂಸಿನ ಕನಸು ಕವಿತೆಯಲ್ಲಿ ಮಗುವಿನ ಪ್ರತಿ ಚಲನೆಗೂ ಬ್ರಹ್ಮಾಂಡ ರಚನೆಗೂ, ಸೃಷ್ಟಿಯ ಚಲನಶೀಲತೆಗೂ ಪರಸ್ಪರ ಸಂಬಂದಗಳನ್ನು ಬೆಸೆಯುವ ಅಖಂಡದೃಷ್ಟಿಯ ಕುವೆಂಪು ಅವರ ಹುಡುಕಾಟವನ್ನು, ತೇಜಸ್ವಿ ಚಿದಂಬರ ರಹಸ್ಯ ಕಾದಂಬರಿಯಲ್ಲಿ ಮುಂದುವರೆಸುತ್ತಾರೆ ಹಾಗೂ ಇನ್ನೊಂದು ಮಗ್ಗುಲಿಗೆ ಹೊರಳಿಸುತ್ತಾರೆ. ಮನುಷ್ಯಪ್ರಜ್ಞೆ ನಿಜವಾಗಿ ಸ್ವತಂತ್ರವೋ? ಅಥವ ಅದೊಂದು ಭ್ರಮೆಯೋ? ಇಡೀ ಗ್ರಹತಾರೆ ನಿಹಾರಿಕೆಗಳ ಈ ವಿಶ್ವೆಲ್ಲಾ ತಮ್ಮ ತಮ್ಮ ನಿಯಮಕ್ಕೆ ಬದ್ಧವಾಗಿ ವರ್ತಿಸುತ್ತಿವೆ. ಪ್ರತಿಯೊಂದು ಅಣು ಪರಮಾಣುವಿನಲ್ಲೂ ಎಲೆಕ್ಟ್ರಾನುಗಳು ಪ್ರೋಟಾನುಗಳೂ ತಮ್ಮ ನಿಯಮಗಳ ಸರಹದ್ದಿನಲ್ಲಿ ಸುತ್ತುತ್ತಿವೆ. ಅಂಥದರಲ್ಲಿ ಇದರಿಂದ ಹೊಮ್ಮಿದ ಈ ಪ್ರಜ್ಞೆ ನಿಯಮಾತೀತವೆ? ನಿಜವಾಗಿಯೂ ಸ್ವತಂತ್ರವೆ? ಇದು ನಿಜವಾಗಿಯೂ ನನ್ನನ್ನು ಚಕಿತಗೊಳಿಸುವ ಚಿದಂಬರ ರಹಸ್ಯ ಎನ್ನುತ್ತಾರೆ.
ಮನುಷ್ಯಪ್ರಜ್ಞೆ ಸ್ವತಂತ್ರ, ಅದು ಯಾವುದೇ ನಿಯಮಕ್ಕೆ ಒಳಪಟ್ಟಿಲ್ಲ ಎಂದಾದರೆ, ಮಾನವನೇ ಸರ್ವಸ್ವತಂತ್ರ. ಅವನೇ ದೇವರು!!! ಆದರೆ, ಆತನ ಪ್ರಜ್ಞೆ ಒಂದು ನಿಯಂತ್ರಣಕ್ಕೆ ಒಳಪಟ್ಟಿದ್ದೇ ಆಗಿದ್ದಲ್ಲಿ, ನಮ್ಮೆಲ್ಲಾ ನಿರ್ಧಾರಗಳು, ಪ್ರಯತ್ನ, ಸಂಶೋಧನೆ, ಮಂಗಳಯಾನ ಸಾಧನೆ ಎಲ್ಲವೂ ಮೊದಲೇ, ಯಾರಿಂದಲೋ ನಿರ್ಧಾರಿಸಲ್ಪಟ್ಟ ಸತ್ಯಗಳು. ಅಂದರೆ ರೆಡಿಮೇಡ್ ಸ್ಕ್ರಿಪ್ಟ್! ಜೀವನವೇ ಒಂದು ನಾಟಕ. ಜಗತ್ತು ಒಂದು ರಂಗಭೂಮಿ, ನಾವೆಲ್ಲಾ ಅಲ್ಲಿ ಪಾತ್ರಧಾರಿಗಳು ಎಂಬ ಮಾತು ನೂರಕ್ಕೆ ನೂರರಷ್ಟು ಸತ್ಯ! ಸಿದ್ಧವಾಗಿರುವ ನಾಟಕದಲ್ಲಿ ನಾವೆಲ್ಲಾ ಬಂದು ಒಂದೊಂದು ಪಾತ್ರ ಮಾಡಿ ಹೋಗುತ್ತಿದ್ದೇವೆ ಅಷ್ಟೆ! (ಶ್ಮಶಾನ ಕುರುಕ್ಷೇತ್ರಂ ನಾಟಕದಲ್ಲಿ ಸ್ವರ್ಣಸ್ವಪ್ನದಿಂದ ಎಚ್ಚೆತ್ತ ದುರ್ಯೋಧನನ ಪಾತ್ರಧಾರಿ ಇದ್ದಕ್ಕಿದ್ದಂತೆ ಕೃಷ್ಣನೊಡನೆ “ನಾನೆನ್ನ ಪಾತ್ರಮಂ ನೇರಮಾಗಭಿನಯಿಸಿ ತೋರ್ದೆನೇನ್? ಮೇಣ್ ಅದರೊಳೇನಾದರುಂ ತಪ್ಪಿದೆನೊ?” ಎಂದು ಕೇಳುವುದನ್ನು, “ನಾಟಕಮಂ ನೇರವಾಗಿ ಕೊನೆಗಾಣ್ಚು! ನಾನ್ ಪೋಗಿ ಬರ್ಪೆನ್. ಅಲ್ಲಿ ನಿನ್ನನ್ ಮರಳಿ ಕಾಣುವೆನ್” ಎಂದು ಕೃಷ್ಣ ಹೇಳುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು)
ಮನುಷ್ಯಪ್ರಜ್ಞೆ ವಿಧಿನಿಯಮಗಳ ಅಧೀನಾನೋ ಅಥವಾ ಸ್ವತಂತ್ರವೊ? ಇವೆರಡರಲ್ಲಿ ಯಾವುದು ಸತ್ಯವಾದರೂ ಅದು ವಿಸ್ಮಯವೇ ಆಗಿರುತ್ತದೆ! ಕುವೆಂಪು ಅವರ ರಸೋ ವೈ ಸಃ’ ಎಂಬ ಸಾಹಿತ್ಯ ಮೀಮಾಂಸೆಯ ಪುಸ್ತಕದಲ್ಲಿ ಕವಿನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ’ ಎಂಬ ಲೇಖನವಿದೆ. ಒಂದು ಕಲಾಕೃತಿಯ ನಿರ್ಮಾಣದಲ್ಲಿ ಕಲಾವಿದನ ಪಾತ್ರವೇನು? ಕಲಾವಿದ ಸರ್ವತಂತ್ರ ಸ್ವತಂತ್ರನೇ? ಅಥವಾ ಪರತಂತ್ರ ಅಧೀನನೇ? ಎಂಬೆಲ್ಲಾ ಪ್ರಶ್ನೆಗಳೆಲ್ಲಾ ಬರುತ್ತವೆ.
ಮೊದಲಿಗೆ ‘ನಿಯತಿಕೃತ ನಿಯಮ’ ಎಂಬುದನ್ನು ಮಾತ್ರ ಓದಿಕೊಂಡಾಗ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿ (ದೇವರು, ಗುರುತ್ವಾಕರ್ಷಣ ಯಾವುದೋ ಒಂದು) ಅದು ಕೆಲವೊಂದು ನಿಯಮಕ್ಕೆ ಒಳಪಟ್ಟಿದೆ. ಅಥವಾ ತನ್ನಷ್ಟಕ್ಕೆ ತಾನೇ ಕೆಲವೊಂದು ನಿಯಮಗಳನ್ನು ಸೃಷ್ಟಿಸಿಕೊಂಡಿದೆ. ಅಂತಹುದೊಂದು ಅಥವಾ ಹಲವು ನಿಯಮಗಳಿವೆ. ‘ರಾಹಿತ್ಯ’ ಎಂದು ಓದಿಕೊಂಡರೆ, ಕವಿನಿರ್ಮಿತಿ ನಿಯತಿಕೃತ ನಿಯಮ’ಗಳಿಗೆ ರಾಹಿತ್ಯವಾದದ್ದು, ಹೊರತಾದದ್ದು ಎಂದಾಗುತ್ತದೆ. ಅಂದರೆ ಕವಿ ಅಥವಾ ಕಲಾವಿದ ಸರ್ವತಂತ್ರ ಸ್ವತಂತ್ರ! ಕವಿರ್ಮಿತಿಯು ನಿಯತಿಕೃತ ನಿಯಮಗಳಿಗೆ ಅತೀತವಾದದ್ದು ಎಂಬುದು ಮೀಮಾಂಸಕ ಕುವೆಂಪು ಅಭಿಮತವಲ್ಲ. ಅವರ ಅಭಿಪ್ರಾಯ ‘ಕವಿನಿರ್ವಿತಿ ನಿಯತಿಕೃತವಾಗಿಯೂ ಇದ್ದು, ನಿಯಮರಾಹಿತ್ಯವೂ ಆಗಿರಬೇಕು! ಅದನ್ನು ಮುಂದೆ ನೋಡಬಹುದು.
ಇಡೀ ಶೀರ್ಷಿಕೆಯನ್ನು -ಕುವೆಂಪು ಬರೆದಿರುವಂತೆ- ಕವಿನಿರ್ಮಿತಿಯಲ್ಲಿ ನಿಯತಿಕೃತ ನಿಯಮರಾಹಿತ್ಯ’ ಎಂದು ಓದಿಕೊಂಡಾಗ ಎರಡು ಪ್ರಮುಖ ಅಂಶಗಳು ಎದ್ದು ಕಾಣುತ್ತವೆ. ಒಂದು ನಿಯತಿಕೃತ; ಇನ್ನೊಂದು ನಿಯಮರಾಹಿತ್ಯ. ಕವಿಯ ಕೃತಿ ನಿಯತಿಕೃತವಾಗಿಯೂ ಅಂದರೆ ಈ ಜಗತ್ತನ್ನು ಮುನ್ನಡೆಸುತ್ತಿರುವ ಶಕ್ತಿಗೆ ಅಥವಾ ಆ ಶಕ್ತಿಯಿಂದ ಕೃತವಾದ (ನಿರ್ಮಿಸಲ್ಪಟ್ಟ) ನಿಯಮಗಳಿಗೆ ಅಧೀನವಾಗಿಯೇ ಇದೆ ಎಂದಾಗುತ್ತದೆ. ನಿಯಮ ರಾಹಿತ್ಯವಾಗಿದೆ ಎಂದರೆ ಅದು ಸರ್ವತಂತ್ರಸ್ವತಂತ್ರ, ಅದು ನಿಯಮವನ್ನು ಮೀರಿದ್ದಾಗಿದೆ ಎಂದಾಗುತ್ತದೆ. ನಿಯಮಕ್ಕೊಳಪಟ್ಟು ನಿಯಮವನು ಮೀರುವುದು. ಕಾನೂನನ್ನು ಗೌರವಿಸುತ್ತಲೇ ಅದನ್ನು ಮೀರುವುದು – ಗಾಂಧೀಜಿಯ ಆಶಯವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಕುವೆಂಪು ಪ್ರತಿಪಾದಿಸಿರುವ ವಿಚಾರಧಾರೆ ಅತ್ಯಂತ ಅಮೂರ್ತವಾದುದು. ಚಿದಂಬರ ರಹಸ್ಯ’ದಲ್ಲಿ ತೇಜಸ್ವಿಯವರು ಅದನ್ನು ಆದಷ್ಟು ಮೂರ್ತಗೊಳಿಸಿ ನಮ್ಮ ಕೈಗೆಟಕುವಂತೆ ಮಾಡಿದ್ದಾರೆ ಎನ್ನಬಹುದು.
ಭಾರತೀಯ ಕಾವ್ಯಮೀಮಾಂಸೆಯಲ್ಲಿ ಕವಿಯನ್ನು ಅಭಿನವ ಸೃಷ್ಟಿಕರ್ತ ಎಂದು ಕರೆದಿರುವುದನ್ನು ಮನಗಾಣಬೇಕು. ಕಾವ್ಯಕೃತಿಯನ್ನು ರಚಿಸುವ ಕವಿಯೂ ಈಶ್ವರ ಸೃಷ್ಟಿಯಲ್ಲಿ ಒಂದು ಕೃತಿಮಾತ್ರನಾಗಿದ್ದಾನೆ.’ ಎಂದು ಕುವೆಂಪು ಅವರದೇ ಒಂದು ಮಾತಿದೆ. ಅದನ್ನೇ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಮೊದಲಲ್ಲಿಯೇ,
“ನೆಯ್ದಾಳುತಿದೆ ಜಗವನೊಂದು ಅತಿವಿರಾಣ್ ಮನಂ,
ಸೂಕ್ಷ್ಮಾತಿಸೂಕ್ಷ್ಮ ತಂತ್ರದಿಂ ಬಿಗಿದು ಕಟ್ಟಿಯುಂ
ಜೀವಿಗಳ್ಗೆ ಇಚ್ಛೆಯಾ ಸ್ವಾತಂತ್ರ್ಯಭಾವಮಂ ನೀಡಿ”
ಎಂದು ಹಾಡಿದ್ದಾರೆ. ಇದು ಅನಾದಿಕವಿ ತತ್ವಕ್ಕೆ ಪೂರಕವಾಗಿ ಇರುವಂತದ್ದು. ಇಡೀ ಸೃಷ್ಟಿಯೇ ಒಂದು ಮಹಾಕಾವ್ಯ ಅಥವಾ ಮಹಾಕಲಾಕೃತಿ! ಅದು ಶಾಶ್ವತವೂ ನಿತ್ಯನೂತನವೂ ಆದುದಾಗಿದೆ. ಅದನ್ನು ಋತ ಅಥವಾ ನಿಯತಿ ಅಥವಾ ಶಕ್ತಿ ಅಥವಾ ದೇವರು (ಅತಿವಿರಾಣ್ ಮನಂ) ಸೃಷ್ಟಿಮಾಡಿದೆ; ಮಾಡುತ್ತಲೇ ಇದೆ. ಅದರಲ್ಲಿ ಈ ಜಗತ್ತಿನ ಪ್ರತಿಯೊಂದು ಆಗುಹೋಗುಗಗಳು, -ಮಹಾಸ್ಫೊಟ, ಗ್ರಹತಾರೆನಿಹಾರಿಕೆಗೆಳ ಚಲನೆ, ಆಕರ್ಷಣೆ, ಜೀವವಿಕಾಸ, ಮನುಷ್ಯಪ್ರಯತ್ನ, ನಾಗರಿಕತೆ, ಸಾಧನೆ, ಯೋಚನೆ, ಆಲೋಚನೆ, ತಂತ್ರ, ಕುತಂತ್ರ- ಎಲ್ಲವೂ ಆ ಸೃಷ್ಟಿಕಾವ್ಯದ ಭಾಗಗಳೇ ಆಗಿವೆ. ಸನ್ನಿವೇಶಗಳೇ ಆಗಿವೆ, ಪಾತ್ರಗಳೇ ಆಗಿವೆ! ಆದ್ದರಿಂದ ಕಲಾಕೃತಿಯನ್ನು ನಿರ್ಮಿಸುವ ಕಲಾವಿದನೂ ಈ ಬೃಹತ್ ಸೃಷ್ಟಿಯಲ್ಲಿ ಒಂದು ಕೃತಿ ಮಾತ್ರ!
ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಕೊನೆಯ ಸಂಚಿಕೆ ಅಭಿಷೇಕ ವಿರಾಡ್‌ದರ್ಶನಂ. ರಾಮಪಟ್ಟಾಭಿಷೇಕದ ಕಥೆಯನ್ನು ಬರೆಯಲು ಕುಳಿತ ಕವಿಗೆ ಅತೀಂದ್ರೀಯ ಶಕ್ತಿಯೊಂದು ಅನುಭವದ್ಗೋಚರವಾಗುತ್ತದೆ. ಅದನ್ನು ಕವಿ ‘ನೀನಾರ್, ಮಹಾಪುರುಷ?’ ಎಂದು ಪ್ರಶ್ನಿಸುತ್ತಾರೆ. ಆಗ ಆ ಅತೀಂದ್ರಿಯ ಶಕ್ತಿ ಹೀಗೆ ಹೇಳುತ್ತದೆ:
ಅನಾದಿಕವಿ ಕಣಾ! ವಾಲ್ಮೀಕಿ
ವ್ಯಾಸ ಹೋಮರ್ ದಾಂತೆ ಫಿರ್ದೂಸಿ ಮಿಲ್ಟನ್
ಮಹಾಕವೀಶ್ವರರೆನಗೆ ಬಾಹುಮಾತ್ರಗಳಲ್ತೆ?
ಬಹುನಾಮರೂಪಗಳ್, ಬಹುಕಾಲದೇಶಗಳ್
ನನಗೆ. ನೀನುಂ ನಾನೆಯೆ, ಕುವೆಂಪು!
ಈ ಜಗತ್ತಿನಲ್ಲಿ ಇದುವರೆಗೆ ಆಗಿ ಹೋಗಿರುವ ಮಹಾಮಹಾ ಮಹಿಮರು, ಮಹತ್‌ಘಟನೆಗಳು, ಮಹಾಸ್ಪೋಟ, ಚಂದ್ರಲೋಕಯಾತ್ರೆ, ಮಂಗಳಯಾನ, ಮಹಾಯುದ್ಧಗಳು, ಮಹಾಮಹಾ ವೈಜ್ಞಾನಿಕ ಸಂಶೋಧನೆಗಳು (ವಿಜ್ಞಾನ ನಿತ್ಯಸತ್ಯದ ವಿಸ್ತರಣೆ ಎಂಬ ಅಭಿಪ್ರಾಯವೂ ಇದೆ.) – ಎಲ್ಲವೂ ಆ ಅನಾದಿಕವಿ ಚಿತ್ರಿಸಿರುವ ಪಾತ್ರಗಳು ಘಟನೆಗಳು ಮಾತ್ರ! ಈ ಸೃಷ್ಟಿಯೇ ಒಂದು ಬೃಹತ್ ಕಲಾಕೃತಿ ಎಂದು ಪರಿಭಾವಿಸುವ ಕವಿ ಕುವೆಂಪು, ಆ ಕಲಾಕೃತಿಗೆ ಹಾರುವ ಹಕ್ಕಿಗಳ ಪಂಕ್ತಿಯ ರುಜು ಮಾಡಿಸುತ್ತಾರೆ ಎಂಬುದು ಗಮನಾರ್ಹ.
ಜಗತ್ತಿನ ಮಹಾಮಹಾ ಕವಿಚೇತನಗಳನ್ನೆಲ್ಲಾ ತನ್ನ ಬಾಹುಮಾತ್ರಗಳೆಂದು ಭಾವಿಸುವ ಅನಾದಿಕವಿಯನ್ನು ಬೇಕಾದರೆ ಅನಾದಿ ಮಹಾತ್ಮ ಎಂದೊ ಅನಾದಿ ಶಕ್ತಿ ಎಂದೊ ಇಟ್ಟುಕೊಳ್ಳೋಣ. ಈ ಮನುಕುದಲ್ಲಿ ಆಗಿಹೋದ, ಮಹತ್ತಾದ ಕೆಲಸಗಳನ್ನು ಮಾಡಿದ, ಮಹತ್ತಾದ ಚಿಂತನೆಗಳನ್ನು ಹುಟ್ಟುಹಾಕಿದ, ಪೂರ್ಣತ್ವದೆಡೆಗೆ ಮನುಕುಲವನ್ನು ನಿರ್ದೇಶಿಸಿದ ಮಹಾತ್ಮರೆಲ್ಲರೂ ಆ ಅನಾದಿ ಶಕ್ತಿಯ ಬಾಹುಮಾತ್ರಗಳೆ ಆಗಿರುತ್ತಾರೆ. ಅವರ ಚಿಂತನೆ, ಮಾತು ಎಲ್ಲವೂ ಅನಾದಿ ಶಕ್ತಿಗೆ ಸೇರಿದವುಗಳೆ ಆಗುತ್ತವೆ. ಇದನ್ನೇ, ಫುಕೋಕಾ ಅವರ ಬಗೆಗೆ ಆಡಿದ ತೇಜಸ್ವಿಯವರ ಒಂದು ಮಾತು ಇನ್ನಷ್ಟು ಸರಳಗೊಳಿಸಿ ನಮ್ಮ ಮುಂದಿಡುತ್ತದೆ. ಫುಕೋಕಾ ಅವರು ಗಾಂಧಿ, ಲೋಹಿಯಾ, ಜೆಪಿ ಮೊದಲಾದವರು ಹೇಳಿದ್ದನ್ನೇ ಕೃಷಿಯ ಪರಿಭಾಷೆಯಲ್ಲಿ ಹೇಳುತ್ತಿದ್ದಾರೆ ಎನ್ನುತ್ತಾರೆ ತೇಜಸ್ವಿ. ಗಾಂಧಿ, ಲೋಹಿಯಾ, ಜೆಪಿ ರಾಜಕಾರಣಿಗಳಾಗಿದ್ದುಕೊಂಡು ಸತ್ಯದರ್ಶನಕ್ಕಾಗಿ ಕಾತರಿಸಿದವರು. ಫುಕೋಕಾ ಕೃಷಿಕನಾಗಿದ್ದುಕೊಂಡು ಸಾಧನೆಗಿಳಿದವನು. ಅವರೆಲ್ಲರ ಅಂತಿಮ ಹುಡುಕಾಟ ಒಂದೇ ಆಗಿತ್ತು ಎಂಬುದನ್ನು ಮನಗಾಣಲು ಅಗತ್ಯವಾಗಿ ಬೇಕಿರುವುದು ಪೂರ್ಣದೃಷ್ಟಿ!
ಇನ್ನೊಂದು ಸಂದರ್ಶನದಲ್ಲಿ ತೇಜಸ್ವಿಯವರ ಹಲವಾರು ಆಸಕ್ತಿಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಕೊಟ್ಟ ಉತ್ತರವೂ ಪೂರ್ಣದೃಷ್ಟಿಯಿಂದಲೇ ಕೂಡಿದ್ದಾಗಿದೆ. ನಾನು ಕಣ್ಣಿಗೆ ಕಂಡಿದ್ದನ್ನೆಲ್ಲಾ ಆಸಕ್ತಿಯಿಂದ ಕುತೂಹಲದಿಂದ ನೋಡುತ್ತಾ ತಿಳಿಯುತ್ತಾ ಹೋಗುತ್ತೇನೆ. ಜ್ಞಾನಾರ್ಜನೆಯ ಪ್ರಚಂಡ ಸಂತೋಷ ಇರುವುದು ಇಲ್ಲೇ…… ಫೊಟೋಗ್ರಫಿ, ಕೃಷಿ, ಸಂಗೀತ, ಬರವಣಿಗೆ ಇವೆಲ್ಲಾ ಬೇರೆ ಬೇರೆ ನಾಮಕರಣ ಮಾಡಿ ನಾವು ವರ್ಗೀಕರಿಸಿದ್ದೇವೆಯೇ ಹೊರತು, ಇವೆಲ್ಲದರ ಒಳಹೊಕ್ಕು ನೋಡಿದರೆ ಒಂದರೊಳಗೊಂದು ಸಂಯೋಜನೆಗೊಂಡಿರುವುದು ಕಾಣುತ್ತದೆ. ಫೋಟೊಗ್ರಫಿಯ ಅನೇಕ ಶಿಸ್ತುಗಳು, ಕಾಂಪೋಜಿಷನ್, ನೆರಳು ಬೆಳಕಿನ ವಿನ್ಯಾಸ ಇವೆಲ್ಲಾ ಬೇರೆ ಬೇರೆ ರೀತಿಯಿಂದ ಸಾಹಿತ್ಯದಲ್ಲೂ ಸಂಗೀತದಲ್ಲೂ ಇರುವುದನ್ನು ಕಾಣಬಹುದು. ಕೆಲವು ಸಾರಿ ಹೀಗೆ ಬೆರಳು ಮಾಡಿ ತೋರಿಸುವುದಕ್ಕೂ ಅಸಾಧ್ಯವಾದಷ್ಟು ಸೂಕ್ಷ್ಮವಾಗಿ ಪರಸ್ಪರ ಸಂಬಂದಿಸಿರುತ್ತವೆ ಎಂದಿದ್ದರು. ಇನ್ನೊಮ್ಮೆ, ವರ್ಗೀಕರಣ ಮಾಡದೆ ಹಾಗೆ ನೋಡಿದರೆ ಎಲ್ಲವೂ ಸಮಾನವಾಗಿಯೇ ಕಾಣುತ್ತವೆ ಎಂದಿದ್ದರು. ಮನುಷ್ಯ ಲೋಕದ ಹೈರಾರ್ಕಿ, ಮೇಲುಕೀಳು ಇವುಗಳ ಬಗ್ಗೆ, ಜ್ಞಾನದ ವಿಭಾಗೀಕರಣ ಇವುಗಳ ಬಗ್ಗೆ ತೇಜಸ್ವಿಯವರಿಗೆ ಬಹಳ ಬೇಸರವಿತ್ತು. ಅದೊಂದು ರೀತಿಯಲ್ಲಿ ಅಲ್ಪದೃಷ್ಟಿ. ಪೂರ್ಣದೃಷ್ಟಿಗೆ ವಿರುದ್ಧಮುಖಿಯಾದುದು. ಈ ರೀತಿಯ ದೃಷ್ಟಿಕೋನದಿಂದ ಬದುಕನ್ನು, ಸಮಾಜವನ್ನು, ಜಗತ್ತನ್ನು ಅಥವಾ ಒಂದು ಕಲಾಕೃತಿಯನ್ನು ನೋಡುವ ನಮ್ಮ ಖಂಡತುಂಡ ಮನೋದೃಷ್ಟಿಯಿಂದಾಗಿಯೇ ನಮಗೆ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುತ್ತಿದ್ದರು. ಮಗದೊಮ್ಮೆ ಅನ್ಯಾಲಿಟಿಕಲ್ ಅಪ್ರೋಚ್‌ನಿಂದ ನೋಡದನ್ನ ಬಿಡಬೇಕು. ಆವಾಗ ನಮಗೆ (ಕೃಷಿ, ಫೊಟೊಗ್ರಫಿ, ಸಾಹಿತ್ಯ, ಸಂಗೀತ, ಪೈಂಟಿಂಗ್, ಫಿಷಿಂಗ್, ಬೇಟೆ ಇತ್ಯಾದಿ) ಇವೆಲ್ಲಾ ಒಂದೇ ಪ್ರಜ್ಷೆಯ ವಿವಿಧ ರೂಪಗಳು ಅನ್ನೋದು ಆರ್ಥ ಆಗುತ್ತೆ….. ಮೆನಿ ಟೈಮ್ಸ್ ದೀಸ್ ಥಿಂಗ್ಸ್, ದೇ ಆರ್ ಆಲ್ ಕಾಂಟ್ರಿಬ್ಯೂಟೆಡ್ ಈಚ್ ಅದರ್! ಎಂದಿದ್ದರು. ಅವರ ನಾನು ಸಿತಾರ್, ಕುಂಚ, ಪೆನ್ನು, ಕ್ಯಾಮೆರಾ ಎಲ್ಲವನ್ನೂ ಹಿಡಿಯುತ್ತೇನೆ. ಅವೆಲ್ಲವೂ ಒಂದರ ಅಭಿವ್ಯಕ್ತಿ. ಅವುಗಳ ನಡುವೆ ಯಾವುದೇ ವ್ಯತ್ಯಾಸ ಕಾಣದು. ಎನ್ನುವ ಮಾತನ್ನೂ ಈ ಹಿನ್ನೆಲೆಯಲ್ಲಿ ಪರಿಭಾವಿಸಬಹುದು. ಅವೆಲ್ಲವೂ ಒಂದರ ಅಭಿವ್ಯಕ್ತಿ ಎನ್ನುವಲ್ಲಿ, ಆ ಒಂದು ಪೂರ್ಣಸತ್ಯವೇ ಆಗಿರುತ್ತದೆ.
ಯಾವುದೇ ಸಂಗತಿಯನ್ನು ಸಂಶಯಿಸದೆ, ಪ್ರಶ್ನಿಸದೆ, ತಮ್ಮ ಅನುಭದ ತೆಕ್ಕೆಗೆ ತೆಗೆದುಕೊಳ್ಳದೆ ಪ್ರತಿಕ್ರಿಯಿಸುವ ಸ್ವಭಾವ ತೇಜಸ್ವಿಯವರದ್ದಲ್ಲ. ಈ ಪೂರ್ಣತೆ, ಪೂರ್ಣದೃಷ್ಟಿ ಇವುಗಳ ಬಗ್ಗೆಯೂ ಅವರು ನಮ್ಮ ಒಳಗಿನ ಮತ್ತು ಹೊರಗಿನ ವಿಶ್ವಕ್ಕೆ ಎಲ್ಲೆ ಕಟ್ಟುಗಳೇ ಇಲ್ಲದೆ ನಿರ್ದಿಗಂತವಾಗಿರುವಾಗ ಪೂರ್ಣತೆ ಮತ್ತು ಅಖಂಡತೆ ನಿಜವಾಗಿಯೂ ಸಾಧ್ಯವೆ? ಯಾವುದನ್ನು ಎಷ್ಟು ಪರಿಪೂರ್ಣವಾಗಿ ತಿಳಿದಿದ್ದೇವೆಂದು ಅಂದುಕೊಂಡರೂ ಬೇರೊಂದು ದೃಷ್ಟಿಕೋನದಿಂದ ಅದು ಅಪರಿಪೂರ್ಣ ಅರ್ಧಸತ್ಯವಾಗಿಯೇ ಉಳಿಯುವುದಿಲ್ಲವೆ? ಇಂತಹ ಗಂಭೀರವಾದ ಪ್ರಶ್ನೆಗಳನ್ನು ಹಾಕಿಕೊಂಡೇ ಹುಡುಕಾಟಕ್ಕಿಳಿದವರು ಎಂಬುದನ್ನು ಗಮನಿಸಬೇಕು.
ಸಾಹಿತ್ಯ ರಚನೆ ಆತ್ಮಸಾಕ್ಷಾತ್ಕಾರದ ಒಂದು ಹಾದಿಯೆ? ಅನ್ನುವ ಪ್ರಶ್ನೆಗೆ ಪೂರ್ಣಜ್ಞಾನ ಅನ್ನೋದು ಖಂಡಿತವಾಗ್ಲೂ ಸಿಗೋಲ್ಲ….. ಅದು ರಿಯಲೈಸ್ ಆಗಬೇಕೆ ಹೊರತು, ಎಕ್ಸ್ಟೆಂಡ್ ಮಾಡ್ತಾ ಮಾಡ್ತಾ ವಿಸ್ತರಿಸುತ್ತಾ ಹೋಗೋದರಿಂದ ಆಗೋದಿಲ್ಲ. ಎಂದಿದ್ದರು. ಜ್ಞಾನವನ್ನು ವಿಸ್ತರಿಸುತ್ತಾ ವಿಸ್ತರಿಸುತ್ತಾ ಕೊನೇಗೆ ಒಂದು ಪರ್‌ಫೆಕ್ಟ್ ನಾಲೆಡ್ಜ್ ಸಿಗುತ್ತೆ ಅನ್ನೋದು ಸುಳ್ಳು! ಎಂಬುದು ಅವರದೇ ಮಾತು. ಕುವೆಂಪು ಅವರು ಪತಂಜಲಿಯ ಪ್ರಕೃತ್ಯಾಪೂರಾತ್ ಎಂಬ ಮಾತನ್ನು ಡಾರ್ವಿನ್‌ನ ವಿಕಾಸವಾದದ ಮೇಲಿಟ್ಟು ಪೂರ್ಣದೃಷ್ಟಿಯಿಂದ ಅವಲೋಕನ ನಡೆಸಿದಂತೆ, ಪರಸ್ಪರ ಧ್ರುವಗಳಿಂತೆ ಎಂದು ಪ್ರಸ್ತುತ ಭಾರತದ ಮನಸ್ಥಿತಿ ಭಾವಿಸಿರುವ ನಮ್ಮ ಅಧ್ಯಾತ್ಮ ಚಿಂತಕರ ಹಾಗೂ ಮಾರ್ಕ್ಸ್‌ನ ಚಿಂತನೆಗಳನ್ನೂ ಒಂದೇ ಫ್ರೇಮಿನಲ್ಲಿಟ್ಟು ತೇಜಸ್ವಿ ನೋಡಬಲ್ಲವರಾಗಿದ್ದರು. ಕಮ್ಯೂನಿಸ್ಟ್ ದೇವರನ್ನು ನಂಬೋದಿಲ್ಲ. ಫಂಡಮೆಂಟಲಿಸ್ಟ್ ದೇವರನ್ನು ನಂಬ್ತಾನೆ. ಆದರೆ ಇನ್ನೊಂದು ದೃಷ್ಟಿಕೋನದಿಂದ ನೋಡಿ ನೀವು; ಕಮ್ಯನಿಸ್ಟ್ ಹೇಳ್ತಾರೆ: ಬಡತನ ರೋಗ ರುಜಿನ ತೊಂದರೆ ತಾಪತ್ರಯ ಹೆಚ್ಚಾದಂಗೂ ಹೆಚ್ಚಾದಂಗೂ ವರ್ಲ್ಡ್ ರೆವಲ್ಯೂಷನ್ ಹತ್ರ ಬರ್‍ತಾ ಹೋಗುತ್ತೆ, ಏಕೆಂದರೆ ಅವೆಲ್ಲಾ ಯೂನಿಫೈಡ್ ಆಗಿ ಆಗಿ ಒಂದು ದಿವಸ ಟೋಟಲ್ ರೆವಲ್ಯೂಷನ್ ಬರುತ್ತೆ ಅಂತಾರೆ. ಫಂಡಮೆಂಟಲಿಸ್ಟ್ ಏನು ಹೇಳ್ತಾರೆ? ಪಾಪದ ಕೊಡ ತುಂಬ್ತಾ ತುಂಬ್ತಾ ಅವತಾರಪುರುಷ ಬರೋ ಕಾಲ ಹತ್ರ ಬರುತ್ತೆ ಅಂತಾರೆ. ಇದನ್ನು ನಾನ್ಯಾಕೆ ಹೇಳಿದೆ ಅಂತ್ಹೇಳಿದ್ರೆ, ಹೊರನೋಟಕ್ಕೆ ಇವರಿಬ್ಬರೂ ಕಂಪ್ಲೀಟ್ ಬೇರೆ ಬೇರೆ. ಆದರೆ ಇವರ ಚಿಂತನಾ ಕ್ರಮವನ್ನು ನೋಡಿದಾಗ ಸಿಮಿಲಾರಿಟೀಸ್ ಕಾಣುತ್ತೆ! ಎಂದಿದ್ದರು. ಎಲ್ಲರೂ ಫಂಡಮೆಂಟಲಿಸ್ಟ್ ಮತ್ತು ಕಮ್ಯೂನಿಸ್ಟರನ್ನು ಪರಸ್ಪರ ಎದುರಾಳಿಗಳಂತೆ ಕಂಡು ಚಿಂತಿಸುತ್ತಿದ್ದಾಗ, ಅವೆರಡು ಚಿಂತನಾಕ್ರಮಗಳನ್ನು ಅರ್ಥ ಮಾಡಿಕೊಂಡು ಅವುಗಳಲ್ಲಿದ್ದ ಸಮಾನ ಅಂಶಗಳನ್ನು ಹೆಕ್ಕಿ ತೆಗೆಯುವುದು ಖಂಡದೃಷ್ಟಿಗಂತೂ ಸಾಧ್ಯವಿಲ್ಲ. ಮಾರ್ಕ್ಸ್ ಚರಿತ್ರೆಯ ಕಂಟ್ಯೂನಿಟಿಯಲ್ಲಿ ನೋಡಿದ; ನಮ್ಮ ಅಧ್ಯಾತ್ಮಿಕ ಚಿಂತಕರು ಅದನ್ನು ಫ್ರಾಕ್ಷನ್ ಆಫ್ ಎ ಸೆಕೆಂಡಿನಲ್ಲಿ (ರಿಯಲೈಸ್) ನೋಡಿದರು….. ದೀಸ್ ಆರ್ ದ ಟೂ ಟೈಪ್ಸ್ ಆಫ್ ಪರ್‍ಸೆಪ್ಷನ್ಸ್. ಅಂಡ್ ಪೂರ್ಣಜ್ಞಾನ (ಸಾಕ್ಷಾತ್ಕಾರ) ಅನ್ನೋದು, ಇಟ್ ಕಮ್ಸ್ ಸಮ್‌ವೇರ್ ಇನ್ ದ ಮಿಡ್ಲ್! ನಾನು ಸ್ಪೆಕ್ಯುಲೇಟೀವ್ ಥಿಂಕರ್ ಆಗಿ ಹೇಳ್ತಿರೋದು ಅಷ್ಟೇನೆ ಎಂದಿದ್ದರು. ಈ ಹಿನ್ನೆಲೆಯಲ್ಲೇ ನಾನು ಪೂರ್ಣಜ್ಞಾನ ಅಥವಾ ದರ್ಶನ ಎಂಬುದು ಚಲನಶಿಲವಾದುದು ಎಂದು ಮೊದಲೇ ಹೇಳಿದ್ದು.
ಇಕಾಲಜಿ ತೇಜಸ್ವಿಯವರ ಚಿಂತನೆ ಮತ್ತು ಅಭಿವ್ಯಕ್ತಿ ಕ್ರಮದ ಕೇಂದ್ರಪ್ರಜ್ಞೆಯಾಗಿತ್ತು. ಇಕಾಲಜಿ ಈಸ್ ಆನ್ ಎಮರ್ಜಿಂಗ್ ಫೋರ್‍ಸ್ ಆಸ್ ಆನ್ ಆಲ್ಟರ್‍ನೇಟೀವ್ ಟು ಆಲ್ ಫಿಲಾಸಫಿ ಅಂಡ್ ಥಿಯರೀಸ್ ಎಂದು ಬಲವಾಗಿ ಪ್ರತಿಪಾದಿಸಿದ್ದರು. ಪರಿಸರ ಸಂಬಂಧಿ ಹೋರಾಟಗಳಲ್ಲೂ ಭಾಗವಹಿಸಿದ್ದರು. ಪ್ರಚಾರಪ್ರಿಯರು ಪರಿಸರ ನಾಶದ ಬಗ್ಗೆ ಅತಿಯಾಗಿ ರಾಡಿ ಎಬ್ಬಿಸುತ್ತಿದ್ದುದನ್ನು ಅವರು ಗಮನಿಸಿದ್ದರು. ಪ್ರಚಾರ ಸನ್ಮಾನ ಪ್ರಶಸ್ತಿಗಳಿಗಾಗಿಯೇ ಚಳುವಳಿಗೆ ಧುಮುಕಿದವರನ್ನೂ ಕಂಡಿದ್ದರು. ತಕರಾರು ತೆಗೆಯುವ ಬದಲು ಕಾಂಕ್ರೀಟ್ ಸಲ್ಯೂಷನ್ ಮುಂದಿಡಿ ಎಂದು ಗದರಿದ್ದೂ ಉಂಟು. ಅದರಿಂದಾಗಿಯೆ ಪರಿಸರ ತನ್ನ ಮೇಲಾಗುವ ಧಕ್ಕೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂದು ಬೇರೊಂದು ಆಯಾಮದ ಚಿಂತನೆಗೂ ತೊಡಗಿದ್ದರು. ಅದು ಪೂರ್ಣದೃಷ್ಟಿಗೆ ಮಾತ್ರ ಸಾಧ್ಯವಾಗವಂತದ್ದು. ಅದನ್ನೇ ಚಿದಂಬರ ರಹಸ್ಯ ಕಾದಂಬರಿಯಲ್ಲಿ ಕಲಾತ್ಮಕವಾಗಿ ಅಭಿವ್ಯಕ್ತಿಸಿರುವುದನ್ನು ಕಾಣಬಹುದು. ಮನುಷ್ಯ ನಾಲ್ಕು ಕಾಲಿನ ಪ್ರಾಣಿಯಾಗಿದ್ದವನು ಎರಡು ಕಾಲಿನಲ್ಲಿ ನಡೆಯಲು ಆರಂಭಿಸಿದ ಆ ಕ್ಷಣ ಇವತ್ತಿನ ಮನುಷ್ಯರೇನಾದರು ಇದ್ದರೆ ಇದು ಅಪಾಯಕಾರಿ ಎನ್ನುತ್ತಿದ್ದರಂತೆ. ಆದರೆ ಐವತ್ತು ಲಕ್ಷ ವರ್ಷಗಳ ನಂತರ ನಿಂತು ನೋಡಿದಾಗ ಆ ಒಂದು ಡಿಸ್ಟಾರ್ಷನ್, ಇಡೀ ಸಂಸ್ಕೃತಿ ನಾಗರೀಕತೆ ಇಷ್ಟೆಲ್ಲಾ ಕ್ರಿಯೇಷನ್ನುಗಳಿಗೆ ಕಾರಣ ಆಯ್ತು ಎಂದು ಅಚ್ಚರಿ ಪಡುತ್ತಾರೆ. ಎಲ್ಲರೂ ಗೋವಧೆ ನಿಷೇದ ಕಾನೂನನ್ನು ಧಾರ್ಮಿಕ ಮತ್ತು ಆಹಾರಪದ್ಧತಿ ಎಂದೇ ವಿಶ್ಲೇಷಿಸುತ್ತಿದ್ದಾಗ, ಅದನ್ನು ಸಾಮಾಜಿಕ, ಆರ್ಥಿಕ ಸಮಸ್ಯೆಯ ದೃಷ್ಟಿಯಿಂದ ವಿವರಿಸಿದವರು ತೇಜಸ್ವಿ. ಏಕಕಾಲದಲ್ಲಿ ಒಂದೇ ಸಮಸ್ಯೆಯನ್ನು ಬಹು ಆಯಾಮಗಳಲ್ಲಿ ಗ್ರಹಿಸಿ ಚಿಂತಿಸಿ ಅಭಿವ್ಯಕ್ತಿಸುವ ಪ್ರತಿಭೆ ಅವರಿಗೆ ಜನ್ಮಜಾತವಾಗಿಯೇ ಇತ್ತು.
ಏನು ಬರೆಯಬೇಕು ಎಂಬುದು ತೇಜಸ್ವಿಯವರಿಗೆ ಒಂದು ಸಮಸ್ಯೆಯೇ ಆಗಿರಲಿಲ್ಲ! ಅವರ ಚಿಂತೆಯಿದ್ದುದು ಅಭಿವ್ಯಕ್ತಿ ಮಾದ್ಯಮದ ಬಗ್ಗೆ. ಅದಕ್ಕಾಗಿಯೇ ಅವರು ಸಾಹಿತ್ಯ, ಚಿತ್ರಕಲೆ, ಫೊಟೊಗ್ರಫಿ ಎಂದು ತಮ್ಮ ಅಭಿವ್ಯಕ್ತಿ ಮಾರ್ಗಗಳನ್ನು ಬದಲಿಸುತ್ತಲೇ ಇದ್ದರು. ಸಾಧಕನ ಬದುಕಿನಲ್ಲಿ ಸಾಹಿತ್ಯ ಒಂದು ಉಪಉತ್ಪನ್ನ ಅಷ್ಟೇ. ವಚನಕಾರರ ಉದ್ಧೇಶ ಸಾಹಿತ್ಯ ಸೃಷ್ಟಿಯಾಗಿರಲಿಲ್ಲ. ಕುವೆಂಪು ಅವರೇ ಸಾಹಿತ್ಯ ನನ್ನ ಪರಮ ಉದ್ದೇಶವಲ್ಲ. ಅಧ್ಯಾತ್ಮವೇ ನನ್ನ ಮೂಲ ಉದ್ದೇಶ ಎಂದು ಹೇಳಿಕೊಂಡಿದ್ದಾರೆ. ಹಾಗೇ ಜೀವಪರವಾದ, ಜೀವನಪರವಾದ ನಿಲುವನ್ನು ಹೊಂದಿದ್ದ ತೇಜಸ್ವಿ ಒಂದೇ ದಾರಿಯಲ್ಲಿ ನಡೆಯಲು ಹೇಗೆ ಸಾಧ್ಯ. ಆದ್ದರಿಂದಲೇ ಅವರ ದಾರಿ ಬದಲಾಗುತ್ತಲೇ ಇತ್ತು. ಪ್ರತಿ ಕೃತಿಯ ಮುನ್ನುಡಿಯಲ್ಲಿ ನಿಂತು ನಾನು ನನ್ನ ದಾರಿಯನ್ನು ಬದಲಾಯಿಸಿದ್ದೇನೆ ಎಂದು ತೇಜಸ್ವಿ ಹೇಳದಿರಬಹುದು. ಆದರೆ ಅದು ಅವರ ಕೃತಿಗಳಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಅಬಚೂರು ಪೋಸ್ಟಾಫೀಸು ಕೃತಿಯಿಂದ ಹಿಡಿದು ಮಾಯಾಲೋಕದವರೆಗಿನ ಅವರ ಎಲ್ಲ ಕೃತಿಗಳನ್ನು, ಅನುವಾದ ಕೃತಿಗಳನ್ನು ಸೇರಿಸಿ ಕಾಲಾನುಕ್ರಮದಲ್ಲಿ ಇಟ್ಟು ನೋಡಿದರೆ ಈ ಮಾತು ಸ್ಪಷ್ಟವಾಗುತ್ತದೆ. ಮಾಯಾಲೋಕದ ಕಿರು ಮುನ್ನುಡಿಯಲ್ಲಿ ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ಹೊಸ ನುಡಿಗಟ್ಟುಗಳು, ಹೊಸ ಉಕ್ತಿಭಂಗಿ, ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ನಾವೀಗ ಗಮನ ಹರಿಸಿ ಹೊಸ ದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ ಎಂದು ಘೊಷಿಸುತ್ತಾರೆ. ಸಂದರ್ಶನವೊಂದರಲ್ಲಿ ತೇಜಸ್ವಿ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಬರೆಯುವ ಸಾಹಿತಿಯಾಗಿ ನನಗಿರುವ ಸಮಸ್ಯೆಗಳು ಯಾವ ಪ್ರಾಕಾರದ ಹಣೆಪಟ್ಟಿ ಹಚ್ಚಿಕೊಂಡು ಬರೆಯಲಿ ಎಂಬುದು ಖಂಡಿತಾ ಅಲ್ಲ. ನನ್ನ ಅನುಭವ ಮತ್ತು ಆಲೋಚನೆಗಳನ್ನು ಇತರರಿಗೆ ವರ್ಗಾಯಿಸುವ ಅತ್ಯಂತ ಕ್ಷಿಪ್ರ ಮತ್ತು ಸಮರ್ಥ ಮಾರ್ಗ ಯಾವುದು ಎಂದು. ಅವರ ಪ್ರತಿಯೊಂದು ಕೃತಿಯೂ ಹೊಸ ಮಾರ್ಗದ ಅನ್ವೇಷಣೆಯಲ್ಲಿಯೇ ತೊಡಗಿವೆಯೆಂದು ಅನ್ನಿಸಿದರೆ ಅದು ಖಂಡಿತ ಅತಿಶಯೋಕ್ತಿಯಲ್ಲ. ಪೂರ್ಣದೃಷ್ಟಿಯ ಸಾಕ್ಷಾತ್ಕಾರದ ಹಂಬಲವೂ ಹೌದು! ಪೂರ್ಣತೆಗೆ ಹತ್ತಿರವಾಗುವ ಊರ್ಧ್ವಮುಖ ಚಲನೆಯೂ ಹೌದು!
ಯಾವುದೆ ಕಲಾಸೃಷ್ಟಿಗೆ ಪೂರ್ಣದೃಷ್ಟಿಯಿಲ್ಲದಿದ್ದರೆ ಅಥವಾ ಕಲಾಸೃಷ್ಟಿಯ ಗ್ರಹಿಕೆಯಲ್ಲಿ ಪೂರ್ಣದೃಷ್ಟಿ ಇಲ್ಲದಿದ್ದರೆ ಅದೊಂದು ಅಪೂರ್ಣ ಕ್ರಿಯೆ ಹಾಗೂ ಪ್ರತಿಕ್ರಿಯೆಯಾಗಿಯೇ ಉಳಿದುಬಿಡುತ್ತದೆ. ಸರ್ವೋದಯ ಸಮನ್ವಯ ಪೂರ್ಣದೃಷ್ಟಿಗಳನ್ನು ಧ್ಯೇಯವಾಗಿಟ್ಟುಕೊಂಡು ವಿಶ್ವಮಾನವನ ಸೃಷ್ಟಿಗೆ ಕಾರಣವಾಗುವ ಸಾಹಿತ್ಯಕ್ಕೆ ಮಾತ್ರ ಭವಿಷ್ಯವಿದೆ. ಮುಂದಿನ ಸಾಹಿತ್ಯ ಆ ದಿಶೆಯಲ್ಲಿ ನಡೆದರೆ ಮಾತ್ರ ಸರ್ವಮಾನ್ಯವಾಗುತ್ತದೆ, ಇಲ್ಲವಾದರೆ ಲೊಳಲೊಟ್ಟೆಯಾಗುತ್ತದೆ ಎಂಬುದು ಕುವೆಂಪು ಅವರ ಖಚಿತಾಭಿಪ್ರಾಯ.
ಕುವೆಂಪು ಮತ್ತು ತೇಜಸ್ವಿ ಇಬ್ಬರಿಗೂ ಪ್ರವಾಸವೆಂದರೆ ಅಲರ್ಜಿ! ಇಬ್ಬರೂ ಸ್ಥಾವರ ಪ್ರಕೃತಿಯವರೆ. ತೇಜಸ್ವಿಯವರ ಯಾರಿಗೆ ತಾವಿರುವಲ್ಲೇ ಸಂತೋಷ ಉತ್ಸಾಹ ಕುತೂಹಲಗಳಿರುವುದಿಲ್ಲವೋ ಅವರು ಅದನ್ನು ಹುಡುಕಿಕೊಂಡು ಎಲ್ಲಿಗೆ ಪ್ರವಾಸ ಹೋಗುವುದೂ ವ್ಯರ್ಥ. ಎಂಬ ಮಾತು ಗಮನಾರ್ಹ. ಗಾಜಿನ ಗೋಲದ ಯಾವ ಕಣವನ್ನು ಸ್ಪರ್ಶಿಸಿದರೂ ಪೂರ್ಣತೆಯೆಡೆಗೆ ಪಯಣ ಎಂಬಂತೆ, ಕುವೆಂಪು ತೇಜಸ್ವಿ ಇಬ್ಬರೂ ತಾವಿದ್ದಲ್ಲಿಯೇ ಪೂರ್ಣತೆಯ ಸಾಧಕರಾಗಿದ್ದರು ಎಂಬುದಕ್ಕೆ ಅವರ ಕಲಾಕೃತಿಗಳೇ ಸಾಕ್ಷಿಯಾಗಿವೆ.
ತೇಜಸ್ವಿಯವರದು ಜನ್ಮಜಾತ ಪ್ರತಿಭೆ ಎಂದು ಹೇಳಿದ್ದೇನೆ. ಕುವೆಂಪು ಅವರಿಗೆ ಸಹಜವಾದ ಪ್ರತಿಭೆ ಮತ್ತು ಸಾಧನೆಯಿಂದ ಪೂರ್ಣದೃಷ್ಟಿ ಸಿದ್ಧಿಸಿತ್ತು. ಕುವೆಂಪು ಆದುನಿಕ ಕಾಲದ ವೈಚಾರಿಕ ಶಿಖರ. ಶ್ರೀರಾಮಕೃಷ್ಣ-ವಿವೇಕಾನಂದರ ಅಗ್ನಿಕುಲುಮೆಯಿಂದ ಸಿಡಿದ ಕಿಡಿ. ತೇಜಸ್ವಿ ಇನ್ನೂ ಅಮ್ಮನ ಗರ್ಭದಲ್ಲಿದ್ದಾಗಲೇ ಬಳೆಯುತಿರೆ ದಿವ್ಯಾರ್ಭಕಂ ಗರ್ಭಗುಡಿಯಲ್ಲಿ ನಿನ್ನ ಮೈ, ಗರ್ಭಿಣಿಯೆ, ದೇವಾಲಯಂ; ಪೂಜ್ಯೆ ನೀನೆನಗೆ………. ಪೂರ್ಣಾಂಗಿ, ತೇಜಸ್ವಿ ಪೂರ್ಣಚಂದ್ರ ಶರೀರೆ, ಶಿವಕೃತಿ ಕಲಾರಂಗಮೆನಗೆ ನೀನ್, ಓ ನೀರೆ! ಎಂದು ಹಾಡಿದ ದಿವ್ಯಪ್ರತಿಭೆ. ತೇಜಸ್ವಿ ಜನನವಾದ ತಕ್ಷಣ ನನ್ನ ಕುವರನಾಗಲಿ ಪೂರ್ಣಚಂದ್ರಸಮ ತೇಜಸ್ವಿ: ಕಾಂತಿ ಶಾಂತಿಯನಿತ್ತು ನಲಿಸುವ ರಸತಪಸ್ವಿ! ಎಂದು ಆಶೀರ್ವಾದವನ್ನು ಸಂಕಲ್ಪಿಸಿದ ಪಿತೃರ್ಷಿ! ನೀನೆಮ್ಮ ಪ್ರಾರ್ಥನೆಯ ಶಿಶು ಕಣಾ, ತೇಜಸ್ವಿ: ಬರಿಯ ತನುಜಾತನಲ್ಲಹುದಾತ್ಮಜಾತನುಂ ಎಂಬ ತುಂಬು ನಂಬಿಕೆಯಿಂದ ಮೆಯ್ಯ ಭೋಗಕೆ ಮನದ ಯೋಗದ ಮುಡಿಪನಿತ್ತು ನಮ್ಮಾಶೆ ಬಿಜಯಗೈಸಿದೆ ನಿನ್ನನೀ ಜಗಕೆ ಪೆತ್ತು. ತನುವಿನ ಭೀಮತೆಗೆ ಮನದ ಭೂಮತೆಯೆ ಕಾರಣಂ. ಕಾಯ ಕಾಂತಿಗೆ ತಾಯಿ ತಂದೆಯರ ಮೆಯ್ಯ ತೇಜಂ ಮಾತ್ರಮಲ್ತಾತ್ಮದೋಜಮಂ ಕಾರಣಂ ಎಂದು ಹಾಡಿದ ಋಷಿಕವಿ.
ಕವಿಯ ಬೃಹದಾಲೋಚನಾ ಸಾರಂ,
ಕವಿಕಲ್ಪನೆಯ ಮಹಾ ಭೂಮ ಭಾವಂಗಳುಂ,
ಕವಿ ಶರೀರದ ನಾಳದಲಿ ಹರಿವ ನೆತ್ತರೊಳ್
ತೇಲುತಿಹ ಸಹ್ಯಾದ್ರಿ ಪರ್ವತಾರಣ್ಯಮುಂ,
ಕವಿ ಸವಿದ ಸೂರ್ಯ ಚಂದ್ರೋದಯಸ್ತಾದಿಗಳ
ಜಾಜ್ವಲ್ಯ ಸೌಂದರ್‍ಯಮುಂ, ಜೀವ ದೇವರಂ
ಹುಟ್ಟು ಸಾವಂ ಸೃಷ್ಟಿಯುದ್ದೇಶಮಿತ್ಯಾದಿ
ಸಕಲಮಂ ಧ್ಯಾನಿಸಿ ಮಥಿಸಿ ಮುಟ್ಟಿಯನುಭವಿಸಿ
ಕಟ್ಟಿದ ಋಷಿಯ ದರ್ಶನ’ದ ರಸ ಮಹತ್ವಮುಂ,
ಪೃಥಿವಿ ಸಾಗರ ಗಗನಗಳನಪ್ಪಿ ಕವಿ ಪೀರ್ದ
ನೀಲ ಶ್ಯಾಮಲ ಭೀಮ ಮಹಿಮೆಯುಂ, ತತ್ತ್ವದಿಂ
ಕಾವ್ಯದಿಂ ವಿಜ್ಞಾನದಿಂದಂತೆ ಋಷಿಗಳಿಂ
ಕವಿಗಳಿಂದಾಚಾರ್ಯವರ್ಯರಿಂ ಪಡೆದಖಿಲ
ಸುಜ್ಞಾನ ಕೃಪೆಯುಂ ನೆರಪಿ ಪಡೆದಿಹವು ನಿನ್ನ
ವ್ಯಕ್ತಿತ್ವಮಂ.
ತನಗೆ ಲಭಿಸಿದ ದರ್ಶನದಿಂದ, ತಾನು ಪಡೆದಿದ್ದು ಕೇವಲ ಮಗುವಲ್ಲ; ಒಂದು ವ್ಯಕ್ತಿತ್ವವನ್ನೇ ಪಡೆದಿದ್ದೇನೆ ಎಂಬ ಅಚಲ ವಿಶ್ವಾಸ ಕುವೆಂಪು ಅವರದ್ದು. ತಂದೆಯ ಈ ಎಲ್ಲಾ ಹರಕೆ ಆಶೀರ್ವಾದ ಸಂಸ್ಕಾರ ಮೊದಲಾದ ಅಮೂರ್ತಾಂಶಗಳ ಜೊತೆಗೆ, ಸ್ವಯಂ ಸಾಧನೆಯಿಂದ ಗಳಿಸಿಕೊಂಡ ಅನುಭವದ ಮೂರ್ತ ರೂಪವೇ ತೇಜಸ್ವಿ.!
ಕುವೆಂಪು ಮತ್ತು ತೇಜಸ್ವಿಯವರ ಕಲಾಕೃತಿಗಳ ಸಹೃದಯರು ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ, ಅವರಿಬ್ಬರನ್ನೂ ಇಡಿಯಾಗಿಯೇ ಓದಿಕೊಳ್ಳಬೇಕಾದ ಪೂರ್ಣದೃಷ್ಟಿಯ ಅವಶ್ಯಕತೆ. ಅವರಿಬ್ಬರನ್ನು ಪೂರ್ಣದೃಷ್ಟಿಯಿಂದ ಓದಿಕೊಳ್ಳದೇ ಹೋದರೆ, ಕುವೆಂಪು ಹೆಚ್ಚೊ? ತೇಜಸ್ವಿ ಹೆಚ್ಚೊ? ಎಂದು ಕ್ಷುಲ್ಲಕ ವಿಶ್ಲೇಷಣೆಗಿಳಿಯುವ ಪ್ರಚಾರಪ್ರಿಯ ವಿಮರ್ಶಕರಿಗೂ ಸಹೃದಯರಿಗೂ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ. (ಸಹೃದಯನೊಬ್ಬ ವಿಮರ್ಶಕನಾಗಬೇಕಿಲ್ಲ; ಆದರೆ ವಿಮರ್ಶಕ ಸಹೃದಯನಾಗಿರಲೇಬೇಕು.)
ಅನ್ನಮಯ, ಪ್ರಾಣಮಯಗಳ ನಡುವೆ ಗಿರಕಿ ಹೊಡೆಯುತ್ತಿದ್ದವರ ನಡುವೆಯೇ ಮನೋಮಯ, ವಿಜ್ಞಾನಮಯಗಳಲ್ಲಿ ವಿಹರಿಸಿ. ಆನಂದಮಯತೆಗೇರಿದವರು ಕುವೆಂಪು. ಅಂತೆಯೇ, ಜಾತಿಪದ್ಧತಿಯೂ ಸೃಷ್ಟಿಶಕ್ತಿಗೆ ಪ್ರೇರಕವಾಗವಲ್ಲುದು ಎಂಬಂತಹ ಅದ್ಭುತ ಸಂಶೋಧನೆಯಲ್ಲಿ ತೊಡಗಿದ್ದವರ ನಡುವೆ, ಮಹಾತ್ಮರನ್ನು, ಮಹಾಕವಿಗಳನ್ನು, ದಿವಂಗತರನ್ನು ಬಿಡದೆ ಅವರಿಗೂ ಜಾತಿ ಚಿಹ್ನೆಗಳನ್ನು ಅಂಟಿಸುವ ಅವಸರದಲ್ಲಿದ್ದವರ ನಡುವೆ, ಸ್ವತಃ ತೇಜಸ್ವಿಯವರಿಗೇ ಪರಿವರ್ತನಶೀಲ ನವ್ಯ ಸಾಹಿತಿ ಎಂದು ಬ್ರಾಂಡ್ ಬಿಗಿಯಲು ಹೊಂಚಿಸುತ್ತಿದ್ದವರ ನಡುವೆ, ತೇಜಸ್ವಿ ಭಿನ್ನವಾಗಿ ನಿಲ್ಲುವುದು ಅವರ ಪೂರ್ಣದೃಷ್ಟಿಯ ಮನೋಭಾವದಿಂದಲ್ಲದೆ ಬೇರಲ್ಲ. ಬೇರೆಲ್ಲರಿಗಿಂತ ಪೂರ್ಣದೃಷ್ಟಿಯ ತೇಜಸ್ವಿ ಹೇಗೆ ಭಿನ್ನವಾಗಿ ನಿಲ್ಲುತ್ತಾರೆ ಎಂಬುದಕ್ಕೆ ಒಂದು ಸಾಹಿತ್ಯೇತರ ಸ್ವಾನುಭವವನ್ನು ಇಲ್ಲಿ ದಾಖಲಿಸಬಹುದು. ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ವಿಷಯವಾರು ವರ್ಗೀಕರಿಸಲು ಕೆಲವು ವಿಧಾನಗಳಿವೆ. ಅವುಗಳಲ್ಲಿ ಕಥೆ ಕಾದಂಬರಿ ಕಾವ್ಯ ನಾಟಕ ಹೀಗೆ ಒಂದೊಂದಕ್ಕೂ ಒಂದೊಂದು ನಿರ್ಧಿಷ್ಟವಾದ ಸಂಖ್ಯೆಯಿರುತ್ತದೆ. ಆದರೆ ತೇಜಸ್ವಿಯಂತವರ ಪುಸ್ತಕಗಳಿಗೆ ಯಾವ ಸಂಖ್ಯೆ ಕೊಡುವುದು? ಅವರ ಅಣ್ಣನ ನೆನಪು ಪುಸ್ತಕವನ್ನು ಜೀವನ ಚರಿತ್ರೆ ಎಂದು ಹೇಗೆ ಕರೆಯುವುದು? ಒಂದು ಕಾಲಘಟ್ಟದ ಸಂಸ್ಕೃತಿ ಕಥನವೆಂದು ಏಕೆ ಕರೆಯಬಾರದು? ಪರಿಸರದ ಕಥೆಗಳನ್ನು ಯಾವ ಗುಂಪಿಗೆ ಸೇರಿಸುವುದು? ಇಕಾಲಜಿಗೆ ಅಥವಾ ಸಣ್ಣಕಥೆಗಳು ವಿಭಾಗಕ್ಕಾ? ಮಿಲೆನಿಯಂ ಸೀರೀಸ್‌ನ ಪುಸ್ತಕಗಳನ್ನು ಸಣ್ಣ ಕಥೆಗಳೆಂದು ಕರೆಯುವುದೆ? ಪ್ರಬಂಧಗಳೆಂದು ಕರೆಯುವುದೆ? ಆಂಥ್ರಪಲಾಜಿಗೆ ಸೇರಿಸುವುದೆ? ಜೀವಜಾಲಕ್ಕಾ? ಆಕಾಶಯಾನಕ್ಕಾ? ಮಾಯಾಲೋಕವನ್ನು ಕೇವಲ ಕಾದಂಬರಿಯೆಂದು ಬ್ರಾಂಡ್ ಮಾಡುವುದೆ? ಜುಗಾರಿಕ್ರಾಸ್ ಕೇವಲ ಪತ್ತೆದಾರಿಯೆ?…… ಹೀಗೆ ಯಾವ ವಿಭಾಗದ ಲೇಬಲ್ಲನ್ನೂ ಅಂಟಿಸದೆ ಎಲ್ಲಾ ಪುಸ್ತಕಗಳನ್ನು ಒಂದೆಡೆ ಇಟ್ಟು ತೇಜಸ್ವಿ ಪುಸ್ತಕಗಳು ಎನ್ನುವುದೇ ಸೂಕ್ತವಲ್ಲವೆ? ಯಾರು ಯಾವ ಪುಸ್ತಕವನ್ನು ಕೈಗೆತ್ತಿಕೊಂಡರೂ ಪೂರ್ಣತೆಯೆಡೆಗೆ ಕೊಂಡೊಯ್ಯುವ ಶಕ್ತಿ ತೇಜಸ್ವಿಯವರ ಪುಸ್ತಕಗಳಿಗಿದೆ ಎಂಬುದೇ ತೇಜಸ್ವಿಯವರನ್ನು ನಮ್ಮ ಕಾಲದ ಅನನ್ಯ ಲೇಖಕನನ್ನಾಗಿಸಿವೆ.
 

‍ಲೇಖಕರು G

20 March, 2015

2 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading