ಹರಿಹರಪ್ರಿಯ
‘ಕಳೆದ 50 ವರುಷಗಳಿಂದ ಕುವೆಂಪು ವ್ಯಕ್ತಿತ್ವ, ವಿಚಾರ, ಹೋರಾಟ, ಬರವಣಿಗೆಗಳಿಂದ ಪ್ರಭಾವಿತನಾಗಿಯು, ಪ್ರಚೋದಿತನಾಗಿಯು ಬೆಳೆದುಬಂದವನು ನಾನು. ಕುವೆಂಪು ಹೆಸರಿನ ಹಲವಾರು ಪ್ರಶಸ್ತಿಗಳನ್ನೂ ಪಡೆದುಕೊಂಡವನು ನಾನು. ಆದರೆ, ಇದೀಗ ಕನ್ನಡ ವಿಶ್ವವಿದ್ಯಾಲಯ, ಹಂಪಿಯವರು ಪ್ರಕಟಿಸಿರುವ 12 ಸಂಪುಟಗಳನ್ನೂ ತಂದು ನೋಡಿದ ಮೇಲೆ, ಇನ್ನು ಮೇಲೆ ಕುವೆಂಪು ಬಗ್ಗೆ ಬಾಯಿಬಿಡುವುದೇ ಮೂರ್ಖತನ ಎಂಬ ನಿಲುವಿಗೆ ಬಂದಿದ್ದೇನೆ.
ಏಕೆಂದರೇ, 2013 ರಲ್ಲಿ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿಯವರು ಹೊರತಂದ ಸಮಗ್ರ ಸಂಪುಟಗಳನ್ನು ತಂದು ಮನೆಯಲ್ಲಿ ಇಟ್ಟುಕೊಂಡೆ. ಇದೀಗ ಪ್ರೊ.ಡಾ.ಕೆ.ಸಿ.ಶಿವಾರೆಡ್ಡಿಯವರ ನಾಮಾಂಕಿತದಲ್ಲಿ ಹೊರಬಂದಿರುವ. ಹೆಗ್ಗಡತಿ, ಮದುಮಗಳು, ರಾಮಾಯಣ ದರ್ಶನಂ… ಇತ್ಯಾದಿ ತಂದು ಮನೆಯಲ್ಲಿ ಜಾಗವೇ ಇಲ್ಲದಂತೆ ಆಗಿದೆ. ಮುಂದೆಮುಂದೆ ಇನ್ನೂ ಎಂತೆಂತಹ ಮಹಾನುಭಾವರು ಸಂಪಾದಿಸಿದ ಕುವೆಂಪು ಕೃತಿಗಳನ್ನು ಕಣ್ಣಾರಕಾಣಬೇಕೋ ಕಾಣೆ.
1974 ರಲ್ಲಿ ಮೊಬೈಲ್ ಝರಾಕ್ಸ್…ಇಲ್ಲದಿದ್ದಾಗ ಊರುಕೇರಿ ಸುತ್ತಿ ಕುವೆಂಪು ಪತ್ರಗಳನ್ನು ಪ್ರತಿಮಾಡಿಕೊಂಡು ಬಂದು, ಸೂಕ್ತ ಅಡಿ ಟಿಪ್ಪಣಿ ಹಾಕಿ ಪ್ರಕಟಿಸಿದೆ. ಈಗಿನ ಸಂಪಾದಕರು, ಜವಾಬ್ದಾರಿಯುತ ವಿಶ್ವವಿದ್ಯಾಲಯ ಅನಾಮತ್ ಹಾಕಿಕೊಂಡು, ಮಾರಾಟಮಾಡುತ್ತಿದೆ ಎಂದರೆ, ಇವಕ್ಕೆ ಮಾನ, ಮರ್ಯಾದೆ, ನಾಚಿಕೆ ಇದೆಯಾ? ಟಿಪ್ಪಣಿ ಇವರ ಅವ್ವಂದಿರು ಹಾಕಿರುವುದ? ಹೋಗಲಿ ಸಮಗ್ರ ಅನ್ನುತ್ತ, ಹಿಂದಿನ ಆವೃತ್ತಿಗಳನ್ನೆ ಮಕ್ಕಿಕಾಮಕ್ಕಿ ಕುಟ್ಟುತ್ತಿದ್ದಾರಲ್ಲ, ಕುವೆಂಪು ಭಾಷಣಗಳು ಕೋ.ಚೆ. ದೇಜಗೌ, ಸಂಗ್ರಹಿಸಿದ್ದೆಲ್ಲ ಯಾಕಿಲ್ಲ? “ಚಿತ್ರಾಂಗದ”, “ಶ್ರೀ ರಾಮಾಯಣ ದರ್ಶನಂ” ಗಳಿಗಿಂತ ಮೊದಲು ಬಂದದ್ದು “ಸಮುದ್ರಲಂಘನ” ಅದನ್ನು ಶೋಧಿಸಿದ್ದು ಪ್ರೊ.ಕ.ವೆಂ.ರಾಜಗೋಪಾಲರು. ಅದು ಮೊದಲು ಪ್ರಕಟವಾದದ್ದು 1931ರಲ್ಲಿ, ಅರ್ಥಸಾಧಕ ಪತ್ರಿಕೆಯಲ್ಲಿ.
ಅದರ ಮರುಮುದ್ರಣ 1981ರಲ್ಲಿ, ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ನಿಂದ. ಶಿವಾರೆಡ್ಡಿ ಎಂಬೋ ಈ ಮಹಾಜ್ಞಾನಿ 1981ರಲ್ಲಿ ಕುವೆಂಪು ಬರೆದರೇನೋ ಅನ್ನುವಂತೆ ಇಲ್ಲಿ ಮಾಡಿದ್ದಾರಲ್ಲ, ಇದೇನು ವಿ.ವಿ. ಘನಸ್ತಿಕೇ? ಕುವೆಂಪುವೇ 1959ರಲ್ಲಿ “ಪ್ರಸಾರಂಗ” ಎಂಬ ಹೊತ್ತಿಗೆ ತಂದಿದ್ದಾರೆ ಅದು ಯಾವ ಸಂಪುಟದಲ್ಲಿದೆಯೋ? 1980ರಲ್ಲಿ ಡಾ.ಪ್ರಭುಶಂಕರರೊಂದಿಗೆ ಮಕ್ಕಳಿಗೆ ವಿಜ್ಞಾನ ದೃಷ್ಟಿ ಎಂಬ ಪುಸ್ತಕ ಬಂದಿದೆ. ಅದೆಲ್ಲಿ?
ಇನ್ನು ಬಹಳ ಮುಖ್ಯವಾಗಿ “ಶ್ರೀ ರಾಮಕೃಷ್ಣ ಲೀಲಾಪ್ರಸಂಗ”, “ಕೊಲಂಬೊ ಇಂದ ಆಲ್ಮೋರಕೆ”, “ಹೈಮಾಚಲ ಸಾನ್ನಿಧ್ಯ” … ಮುಂತಾದ ಕೃತಿಗಳಿಗೆ ಕುವೆಂಪು ಬರೆದ ಮುನ್ನುಡಿಗಳು, ಅವರ ಭಾಷಣಕ್ಕೂ ಮಿಗಿಲಾದ ಕ್ರಾಂತಿಕಾರಿ ವಿಚಾರಗಳಿಂದ ಕೂಡಿವೆ. ಅವೂ ಈ ಸಮಗ್ರದಲ್ಲಿ ಇದೆ ಎಂದು ಯಾರಾದರು ಹೇಳಿದರೆ ನಂಬುವೆ.
1930-31 ರಲ್ಲಿಯೇ ಸೇವಕಸೈನ್ಯ ಎಂಬ ಹೆಸರಿನಿಂದ ನೇಗಿಲಯೋಗಿ, ಗೊಲ್ಲನ ಗಾಯತ್ರಿ, ಹಾಳೂರು-ಬಂದಿವೆಯಲ್ಲಾ, ಇವು ಮಕ್ಕಳ ಸಾಹಿತ್ಯವೇ? ಇದೇನಿದು ಸೇವಕಸೈನ್ಯ!? 1950ರಲ್ಲಿ, prof.g.s.halappa ಅವರೊಂದಿಗೆ prof.k.v.puttappa ನವರು “the language problem” ಹೊರತಂದಿದ್ದಾರಲ್ಲಾ, ಇದು ಇಲ್ಲಿ ಸ್ಥಳಪಡೆದಿದೆಯೋ? ಹೋಗಲಿ ಬಿಡಿ.
ಸಧ್ಯ ಕುವೆಂಪು ಕೃತಿಗಳು ಸಂಪಾದಕರ ಹೆಸರಿನಲ್ಲಿ ಬರುತ್ತಿವೆ. ಮುಂದೆ ಕಂಡಕಂಡವರು, ಬಿಕನಾಸಿಗಳು ಬೇವರ್ಸಿಗಳು ತಮ್ಮತಮ್ಮ ಹೆಸರಿನಲ್ಲಿಯೇ ಪ್ರಕಟಿಸಿದರೂ ಗಾಬರಿ ಆಗುವುದು ಬೇಡ. ಇದ್ದಕ್ಕೆ ಒಂದು ಉಜ್ಜ್ವಲ ಸಾಕ್ಷಿಗೆ, ಶಿವರಾಮಕಾರಂತರ ಮನೆಗೆ ಹೋಗಿ ಬನ್ನಿ. ಕಾರಂತರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಾಗ ಮಹಾನ್ ಕನ್ನಡ ಸಾಹಿತ್ಯ ಪರಿಷತ್ತು ಒಪ್ಪಿಸಿದ ಬಿನ್ನವತ್ತಳೆಯಲ್ಲಿ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಕಾದಂಬರಿ ಬರೆದವರು ಎಂದು ದಾಖಲಿಸಿದೆ. ಕನ್ನಡ ವಿ.ವಿ.ಹಂಪಿ ವಿದ್ವಾಂಸರನ್ನು ನೋಡಿದರೇ ,ಯಾಕೆ ಆ ಹೆಸರು ಅವರ ಸೊತ್ತೋ ಎಂಬುವ ಕಾಲವೂ ದೂರವಿಲ್ಲವಷ್ಟೇ!?
0 Comments