ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕದ ಹೂರಣವಂತೂ ನಮ್ಮ ಕೈಲಿದೆ..

ganesha yaji

ಗಣೇಶ ಯಾಜಿ 

ತುಂಬಾ ದಿನಗಳ ನಂತರ ಸಂಪರ್ಕಕ್ಕೆ ಯಾಜಿ ಪ್ರಕಾಶನ’ ಬರುತ್ತಿದೆ. ಈಗಾಗಲೇ ಇಪ್ಪತ್ತನಾಲ್ಕು ಮೌಲಿಕ ಕೃತಿಗಳನ್ನು ಯಾಜಿ ಪ್ರಕಾಶನ’ ಓದುಗರ ಕೈಗೆ ನೀಡಿದೆ. ಆ ಪೈಕಿ ಎರಡು ಕೃತಿಗಳು (ಪತ್ರಕರ್ತ ಡಾ. ಸರಜೂ ಕಾಟ್ಕರ್ ಅವರ ಬಾಜೀರಾವ್ ಮಸ್ತಾನಿ’ ಮತ್ತು ‘ಜುಲೈ ೨೨, ೧೯೪೭) ಸಿನಿಮಾ ಆಗಿವೆ. ಇದೀಗ, ಮತ್ತೊಬ್ಬ ಗಣ್ಯರ ಕೃತಿಯೊಂದು ಸಿನಿಮಾ ಆಗಿ, ಮಾರುಕಟ್ಟೆಗೆ ಬರಲು ಅಣಿಯಾಗಿದೆ. ಅದರ ಪುಸ್ತಕರೂಪ ಪ್ರಕಟಣೆಗೊಂಡು, ಲೋಕಾರ್ಪಣೆ ಗೊಳ್ಳಲಿದೆ. ಹೆಚ್ಚು ಕುತೂಹಲಕ್ಕೆ ಎಡೆಗೊಡದೇ ನೇರ ವಿಷಯಕ್ಕೆ ಬರುವೆ.

gopala wajapeyiಹಿಂದಿಯ ಶ್ರೇಷ್ಠ ಚಿಂತಕ, ನಾಟಕಕಾರ ಶ್ರೀಯುತ ಭೀಷ್ಮ ಸಾಹನಿಯವರ ನಾಟಕ ‘ಕಬಿರಾ ಖಡಾ ಬಜಾರ್ ಮ್ಞೇ’. ಇದನ್ನು ಹಿರಿಯ ಪತ್ರಕರ್ತ, ನಾಟಕಕಾರ ಶ್ರೀಯುತ ಗೊಪಾಲ ವಾಜಪೇಯಿ ‘ಸಂತ್ಯಾಗ ನಿಂತಾನ ಕಬೀರ’ ಎಂಬುದಾಗಿ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ರಾಜ್ಯದ ಒಳ-ಹೊರಗೆಲ್ಲ ನೂರಾರು ಪ್ರಯೋಗಗಳನ್ನು ಕಂಡ ಇದು ಹಲವು ವರ್ಷಗಳ ಹಿಂದೆ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿತ್ತು. ಪ್ರಸ್ತುತ ಕೃತಿಯನ್ನು ಆಧರಿಸಿ ಡಾ. ಶಿವರಾಜ್ ಕುಮಾರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ‘ಕಬೀರ’ ಇನ್ನೇನು ತೆರೆಗೆ ಬರಲು ಕ್ಷಣಗಣನೆ ನಡೆಯುತ್ತಿದೆ. ಈಗಾಗಲೇ ಚಿತ್ರದ ಬಗ್ಗೆ, ಅದರ ಹಾಡುಗಳ ಬಗ್ಗೆ ಗಾಂಧಿ ನಗರದಲ್ಲಿ ಚರ್ಚೆ ಶುರುವಾಗಿದೆ. ಈ ಚಿತ್ರದ ಹಾಡುಗಳು ಮತ್ತು ಸಂಭಾಷಣೆಯನ್ನು ಶ್ರೀಯುತ ಗೋಪಾಲ ವಾಜಪೇಯಿಯವರೇ ಬರೆದಿದ್ದಾರೆ.

ಕಳೆದ ವರ್ಷ ಸಿನಿಮಾ ಸೆಟ್ಟೇರುವ ಹೊತ್ತಿಗೆ ಶ್ರೀಯುತ ಗೋಪಾಲ ವಾಜಪೇಯಿಯವರು ಫೇಸ್ ಬುಕ್‌ನಲ್ಲಿ ನನಗೊಂದು ಮೆಸೇಜು ಹಾಕಿ, ಯಾಜಿಯವರೇ, ನಾನು ಅನುವಾದಿಸಿರುವ ‘ಸಂತ್ಯಾಗ ನಿಂತಾನ ಕಬೀರ’ ನಾಟಕ ಈಗ ಸಿನಿಮಾ ಆಗುತ್ತಿದೆ. ಡಾ. ಶಿವರಾಜ್ ಕುಮಾರ್ ‘ಕಬೀರ’ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ಈ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಅದರ ಮರುಮುದ್ರಣ ಮಾಡಬೇಕಿದೆ. ನಿಮ್ಮ ಪ್ರಕಾಶನದಿಂದ ಸಾಧ್ಯವೇ?” ಎಂದು ಕೇಳಿದ್ದರು. ಅದಕ್ಕೆ ನಾನು, ಸರ್, ವಿಚಾರಿಸಿ, ಮತ್ತೆ ಕರೆ ಮಾಡುವೆ,” ಎಂದಿದ್ದೆ. ಹೀಗೆ ಸುಮಾರು ದಿನಗಳ ನಂತರ ಮತ್ತೆ ಅವರು ಡಿಟಿಪಿ ಕೆಲಸ ಆಗಿದೆ, ಕಳಿಸಿ ಕೊಡಲೇ?” ಎಂದು ಕೇಳಿದರು. ನಾನು, ಸರ್, ಇದರ ಮೂಲ ಲೇಖಕರ ಒಪ್ಪಿಗೆ ಬೇಕಲ್ಲ?” ಎಂದೆ. ಅದಕ್ಕೆ ಅವರು, ‘ಭೀಷ್ಮ ಸಾಹನಿಯವರ ಮಗಳ ಜೊತೆ ಮಾತಾಡಿರುವೆ. ಅವರಿಗೊಂದು ಪತ್ರ ಬರೆಯಿರಿ” ಎಂದು ತಾವೇ ಅದರ ಒಕ್ಕಣೆಯನ್ನು ನನಗೆ ಮೇಲ್ ಮಾಡಿದರು. ಅದನ್ನು ನಾವು ಡಾ. ಕಲ್ಪನಾ ಸಾಹನಿಯವರಿಗೆ ಮೇಲ್ ಮಾಡಿದೆವು.

ಶ್ರೀಯುತ ಭೀಷ್ಮ ಸಾಹನಿಯವರ ಎಲ್ಲ ಕೃತಿಗಳ ಹಕ್ಕು ಸ್ವಾಮ್ಯವನ್ನು ಹೊಂದಿರುವವರು ಡಾ. ಕಲ್ಪನಾ ಸಾಹನಿ.
ನಮ್ಮ ಮೇಲ್‌ಗೆ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಏನೋ ಎಂಬ ನಮ್ಮ ಆತಂಕವನ್ನು ದೂರ ಮಾಡುವಂತೆ, ಮೂರನೆಯ ದಿನವೇ ಡಾ. ಕಲ್ಪನಾ ಸಾಹನಿ ಮನಃಪೂರ್ವಕವಾಗಿ ಒಪ್ಪಿಗೆ ನೀಡಿ, ನಮ್ಮನ್ನು ಅಭಿನಂದಿಸಿದ್ದರು. ಕೂಡಲೇ ಈ ವಿಚಾರವನ್ನು ಶ್ರೀಯುತ ಗೋಪಾಲ ವಾಜಪೇಯಿ ಅವರಿಗೂ ತಿಳಿಸಿ, ಖುಷಿ ಹಂಚಿಕೊಂಡೆವು. ನಾನು ಅಲ್ಲಿಯ ತನಕ ಈ ಅನುವಾದವನ್ನು ಓದಿರಲಿಲ್ಲ; ಅದರ ಪ್ರಯೋಗವನ್ನೂ ನೋಡಿರಲಿಲ್ಲ. ಓದಿದೆ, ಇಷ್ಟವಾಯಿತು. ನಮ್ಮ santyaga nintana kabeeraಪ್ರಕಾಶನದ ಒಂದಷ್ಟು ಜನ ಹಿತೈಷಿ ಸಲಹೆಗಾರರಿಗೂ ನಾಟಕದ ಅನುವಾದವನ್ನು ಓದಲು ಕೊಟ್ಟು, ಒಪ್ಪಿಗೆ ಪಡೆದೆವು. ಮುಂದಿನ ಎರಡು ದಿನಗಳಲ್ಲೇ ಪುಟ ವಿನ್ಯಾಸ ಮಾಡಿ, ಮೊದಲ ಕರಡನ್ನು ಶ್ರೀಯುತ ಗೊಪಾಲ ವಾಜಪೇಯಿಯವರಿಗೆ ಕಳಿಸಿದೆ. ಅವರು ನಾಲ್ಕೇ ದಿನಗಳಲ್ಲಿ ಕರಡನ್ನು ತಿದ್ದಿ ಕಳಿಸಿದರು. ಜತೆಗೆ ಅಗತ್ಯವಿರುವ ಪೂರಕ ಪುಟಗಳನ್ನೂ ಸಿದ್ಧಪಡಿಸಿ ಲಗತ್ತಿಸಿದ್ದರು. ಇದೀಗ ಪುಸ್ತಕದ ಹೂರಣವಂತೂ ನಮ್ಮ ಕೈಲಿದೆ. ಅದು ಹೋಳಿಗೆಯ ರೂಪ ಧರಿಸಿ ನಿಮ್ಮ ಹೃದಯದ ತಟ್ಟೆಗೆ ಬೀಳಬೇಕು, ಅಷ್ಟೇ.

ನಮ್ಮ ಪ್ರಕಾಶನದ ಹೆಮ್ಮೆಯ ಇಪ್ಪತ್ತೈದನೆಯ ಕೃತಿ ಎನಿಸಲಿರುವ ಸಂತ್ಯಾಗ ನಿಂತಾನ ಕಬೀರ’ ಅನೇಕ ವಿಶೇಷಗಳನ್ನು ಹೊತ್ತು ಬರಲಿದೆ. ಇದು ಮೂಲ ಲೇಖಕ ಭೀಷ್ಮ ಸಾಹನಿಯವರಿಗೆ ನೂರು ತುಂಬಿದ ಸಂದರ್ಭದಲ್ಲಿ ಹೊರಬರುತ್ತಿದೆ ಎಂಬುದು ಮೊದಲ ವಿಶೇಷ. ಈ ಮಹಾ ಚಿಂತಕನ ಬದುಕು-ಬರಹ, ಸಿದ್ಧಾಂತ-ಹೋರಾಟಗಳನ್ನು ನಮ್ಮೆದುರು ಬಿಚ್ಚಿಡುವ ವಿಸ್ತೃತ ಲೇಖನ ಇನ್ನೊಂದು ವಿಶೇಷ. ಈ ಕೃತಿಯನ್ನು ಓದಿ ಮೆಚ್ಚಿಕೊಂಡಿರುವ ಹಿರಿಯ ನಟ ಅನಂತ್ ನಾಗ್ ತುಂಬ ಪ್ರೀತಿಯಿಂದ ಲೇಖಕದ್ವಯರ ಕುರಿತು ಪ್ರಶಂಸಾಪರ ನುಡಿಗಳನ್ನು ಬರೆದು ಕೊಟ್ಟಿದ್ದಾರೆ. ಹಿಂದಿ ನಾಟಕಗಳ ಸಮರ್ಥ ಅನುವಾದಗಳನ್ನು ನಮಗೆ ನೀಡುತ್ತಲೇ ಬಂದಿರುವವರು ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿಯವರು. ಪ್ರಸ್ತುತ ಅನುವಾದದ ಬಗ್ಗೆ ಅವರು ಮಾಡಿರುವ ಅವಲೋಕನ ಈ ಕೃತಿಯ ಮೌಲ್ಯವನ್ನು ನಿರ್ಧರಿಸುವುದರ ಜೊತೆಗೆ, ಕೃತಿ ಓದಿಗೆ ಒಂದು ಒಳ್ಳೆಯ ಪ್ರವೇಶಿಕೆಯೂ ಆಗಿದೆ.

ಇನ್ನು, ಕನ್ನಡದ ಹೂಮನಸ್ಸಿನ ಕವಿ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರು ಕವನರೂಪದಲ್ಲಿಯೇ ಶುಭ ಹಾರೈಸಿ, ಶ್ರೀ ಗೋಪಾಲ ವಾಜಪೇಯಿಯವರನ್ನು ಹರಸಿರುವರು. ‘ಕಬೀರ’ ಚಿತ್ರ್ರಕ್ಕಾಗಿ ಶ್ರೀ ಗೋಪಾಲ ವಾಜಪೇಯಿಯವರು ಬರೆದ ಎಲ್ಲ ಹಾಡುಗಳ ಸಾಹಿತ್ಯವನ್ನು ಕೊನೆಯ ಪುಟಗಳಲ್ಲಿ ಓದುಗರಿಗಾಗಿ ನೀಡಲಾಗಿದೆ. ಈ ಪುಸ್ತಕದ ಮೊದಲ ಆವೃತ್ತಿಗೆ ಮುನ್ನುಡಿ ಬರೆದಿದ್ದವರು ಬೆಂಗಳೂರಿನ ಪ್ರಾದೇಶಿಕ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥ ಸಿ. ಬಸವಲಿಂಗಯ್ಯ. ಅದರ ಸಂಕ್ಷಿಪ್ತ ರೂಪವನ್ನು ಈ ಆವೃತ್ತಿಯಲ್ಲೂ ಬಳಸಿಕೊಳ್ಳಲಾಗಿದೆ.

‍ಲೇಖಕರು Admin

11 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading