ಪುಸ್ತಕ ಪರಿಚಯ
ಶೈಲಜಾ ಹಾಸನ ಅವರ ‘ಮೋಹ’ ಕಾದಂಬರಿ ಕುರಿತು
ಡಾ. ಶಾಲಿನಿ ವಿ.ಎಲ್
ಮಳೆರಾಯನ ಪ್ರಭಾವದಿಂದ ಬರುವ ರೋಗಿಗಳು ಕೊಂಚ ಕಡಿಮೆಯಾದಾಗ ಸಮಯ ಕಳೆಯಲು ಶೈಲಜಾ ಹಾಸನ ಅವರ ‘ಮೋಹ’ ಕಾದಂಬರಿ ಕೈಗೆತ್ತಿಕೊಂಡೆ. ಎತ್ತಿಕೊಂಡಿದ್ದಷ್ಟೇ, ಕೊನೆ ಪುಟದವರೆಗೂ ನನಗೆ ವಿರಾಮ ತೆಗೆದುಕೊಳ್ಳಲೇ ಮನಸ್ಸಾಗಲಿಲ್ಲ. ಒಂದು ಸಿನಿಮಾ ನೋಡಿದಂತೆ ಪುಸ್ತಕದ ಒಳಗೆ ಕಳೆದು ಹೋದೆ.
‘ಮೋಹ’ ಮಧ್ಯಮ ಕುಟುಂಬದ ಮೂವರು ಹೆಣ್ಮಕ್ಕಳನ್ನು ಹೆಮ್ಮೆಯಿಂದ ಬೆಳೆಸಿದ ತಂದೆ-ತಾಯಿಯ ಹಿರಿಮಗಳು ‘ಭಾವನಾ’ ಹಾಗೂ ಮನೆ ತುಂಬ ಹೆಣ್ಮಕ್ಕಳಿದ್ದಾಗ ತಂದೆ ತಾಯಿ ಹೆಣ್ಮಕ್ಕಳ ಕಾಳಜಿ, ಮದುವೆ, ಬಾಣಂತನದಲ್ಲಿ ಕಳೆದು ಹೋದಾಗ ಆ ವಾತಾವರಣದಲ್ಲಿ ಬೆಳೆದ ‘ಶ್ರೀಕರ’ನ ದಾಂಪತ್ಯದ ಕಥೆ.
ಭಾವನಾತ್ಮಕ ಜೀವಿ ಭಾವನಾ, ಅಹಂಕಾರಿ ತನ್ನ ಇಚ್ಚೆಯಂತೇ ಬದುಕಬೇಕೆಂಬ ಶ್ರೀಕರ, ಅವನೊಂದಿಗೆ ಅನುಸರಿಸಿಕೊಂಡು ತನ್ನ ಆಸೆ ಕನಸು ಸ್ವಾತಂತ್ರ್ಯ ಬದಿಗಿಟ್ಟು ಗಂಡನ ಕೈಗೊಂಬೆಯಾಗಿ ಬಾಳುವ ಭಾವನಾ ಬಹುಶಃ ಬಹುತೇಕ ಭಾರತೀಯ ನಾರಿಯರ ಪ್ರತಿರೂಪ. ಗಂಡೆಂದರೆ ಸರ್ವಾಧಿಕಾರಿ, ಹಣ ಬಟ್ಟೆ ನಗನಾಣ್ಯದಲ್ಲಿ ಹೆಣ್ಣನ್ನು ಗೆಲ್ಲುವೆ, ಅವಳು ತನ್ನ ದಾಸಿಯೆಂದು ತನುಮನ ಬಲವಂತವಾಗಿ ಕಿತ್ತುಕೊಳ್ಳುವ ಗಂಡಸರ ಪ್ರತಿರೂಪ ಶ್ರೀಕರ.

ಗಂಡನಿಗಾಗಿ ಸಮಾಜಕ್ಕಾಗಿ ಎಲ್ಲವನ್ನೂ ಹಲ್ಲುಕಚ್ಚಿ ಸಹಿಸುವ ಘನತಾಳ್ಮೆ ಹೆಣ್ಣಿಗೆ ಆ ದೇವರು ಕರುಣಿಸಿದ್ದರೂ ಯಾರಾದರೂ ಒಡಲ ಕುಡಿಯ ಚಿವುಟಲು ಬಂದರೆ ಚಂಡಿಚಾಮುಂಡಿಯಾಗುತ್ತಾಳೆ. ಹೆಣ್ಣು ಭ್ರೂಣಹತ್ಯೆಗೆ ಗಂಡ ಮುಂದಾದಾಗಲೂ ಅಲ್ಲಿಯವರೆಗೆ ಎಲ್ಲಾ ಸಹಿಸಿದ್ದ ಆ ಹೆಣ್ಣು ತನ್ನ ಸಹನೆ ಕಟ್ಟೆ ಹೊಡೆದು ಗಂಡನ ಧಿಕ್ಕರಿಸಿ ಬರುವಾಗ ತಾಯ್ತನದ ಹಂಬಲಿಕೆ ಚಡಪಡಿಕೆ ಮನಕಲಕುತ್ತದೆ.
ಗಂಡಬಿಟ್ಟವಳೆಂದು ಜರಿಯದೆ ಮಗಳ ನಿರ್ಧಾರ ಬೆಂಬಲಿಸುವ ತವರಿನವರ ನಿಲುವು ಅನುಕರಣೀಯ. ಮಗಳು ಬೇಡ, ಹೆಂಡತಿ ಬೇಕೆನ್ನುವ ಶ್ರೀಕರ ಮೋಸದಲ್ಲಿ ವರ್ಷದ ಕಂದನನ್ನು ಕೊಲ್ಲುವ ಕ್ರೂರತನಕ್ಕೆ ಮುಂದಾಗುವ ಹೇಯ ಕೃತ್ಯ ಬೆಚ್ಚಿಬೀಳಿಸುತ್ತದೆ, ಮುಂದೆ ಕಂದ ಉಳಿಯುವುದೇ? ಶ್ರೀಕರ ಬದಲಾಗುವನೇ? ಭಾವನಾಳ ಬದುಕೇನೂ?? ಕುತೂಹಕಲಕಾರಿ ಮನದ ಭಾವನೆಗಳಲ್ಲಿ ಏರಿಳಿತ ಹುಟ್ಟಿಸಿ ಕಥೆಯೊಳಗೆ ನಮ್ಮನ್ನು ಮಗ್ನನಾಗಿಸಿ ಹಲವು ಪ್ರಶ್ನೆಗಳ ನಮ್ಮ ಮುಂದಿರಿಸುತ್ತದೆ.

ಸಮಾಜದಲ್ಲಿ ಹೆಣ್ಣಿನ ಸ್ಥಾನ? ಗಂಡಿನ ದರ್ಪ? ಗಂಡನನ್ನ ತಿರಸ್ಕರಿಸಿದ ಹೆಣ್ಣನ್ನು ಸ್ವೀಕರಿಸುವ ಹೆತ್ತವರ ಮನಸ್ಥಿತಿ, ಹೆಣ್ಣನ್ನು ಅಷ್ಟು ದ್ವೇಷಿಸಲು ಕಾರಣವಾದ ಅವನು ಬೆಳೆದ ವಾತಾವರಣ, ಮಧ್ಯದಲ್ಲಿ ಬರುವ ಅಂತರ್ಜಾತಿ ವಿವಾಹ, ಬಂಜೆತನದಂತಹ ವೈಜ್ಞಾನಿಕ ವಿಷಯಗಳು ಎಲ್ಲವೂ ಮನಸ್ಸನ್ನು ಆವರಿಸುತ್ತದೆ.
ಕಥೆ ಮೊದಲಿಂದ ಕೊನೆಯವರೆಗೂ ಕೊಂಚವೂ ಬೇಸರಿಸದೆ ಹೆಣ್ಣಿನ ತೊಳಲಾಟದೊಂದಿಗೆ ನಾವೇ ಅವಳ ನೋವ ಅನುಭವಿಸುತ್ತಿದ್ದೇವೇನೋ ಎಂಬಂತೆ ಕರೆದುಕೊಂಡು ಹೋಗುತ್ತದೆ.
—
ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಿ…
https://imojo.in/2hzi5ur





0 Comments