ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕಗಳಿಗೊಂದು “ಬಿಬಿಸಿ” ಬಂದಿದೆ…

kb1.jpgಪುಸ್ತಕಗಳನ್ನು ಓದುವವರು ಕಡಿಮೆಯಾಗುತ್ತಿದ್ದಾರೆ ಎಂಬುದು ಮತ್ತೆ ಮತ್ತೆ ಕೇಳಿಬರುತ್ತಲೇ ಇರುವ ತಕರಾರು. ಆದರೆ, ಪುಸ್ತಕಗಳನ್ನು ಓದಿಸುವ ಹಂಬಲದ ಪ್ರಯತ್ನಗಳು ಮಾತ್ರ ಆಗೀಗ ನಡೆಯುತ್ತಲೇ ಇರುತ್ತವೆ. ಅಂಥದೇ ಒಂದು ಪ್ರಯತ್ನ, ಆದರೆ ವಿಭಿನ್ನ ಪ್ರಯತ್ನವನ್ನು ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಮಾಡಹೊರಟಿದ್ದಾರೆ. ಅದು, “ಬಿಳಿಗೆರೆ ಬುಕ್ ಚಾನಲ್” ಎಂಬ ಹೆಸರಿನಲ್ಲಿದೆ (ಶಾರ್ಟಾಗಿ, ಸ್ವೀಟಾಗಿ ಅದನ್ನು “ಬಿಬಿಸಿ” ಎನ್ನಬಹುದಲ್ಲ?). ಮುಖ್ಯವಾಗಿ ಇಅವತ್ತಿನ ವಿದ್ಯಾರ್ಥಿಗಳನ್ನು ಸಾಹಿತ್ಯ, ಸಂಸ್ಕೃತಿಯ ಓದಿಗೆ ಹಚ್ಚುವ ಆಸೆಯಿಂದ ಅವರು ಈ ಚಾನಲ್ ತೆರೆದಿದ್ದಾರೆ. “ಲೋಕಲ್ಲೇ ಗ್ಲೋಬಲ್ಲು, ಇದು ಪುಸ್ತಕ ತೋರುವ ಚಾನಲ್ಲು” ಎಂಬುದು ಅವರ ಈ ಚಾನಲ್ಲಿನ ಘೋಷವಾಕ್ಯ. ಅವರ ಕನಸಿನ ಬಗ್ಗೆ ಅವರಿಂದಲೇ ಇನ್ನಷ್ಟು ಕೇಳಿ.

* * *

ರಣು,

ನಾನು ಕೃಷ್ಣಮೂರ್ತಿ ಬಿಳಿಗೆರೆ, ಬಿಳಿಗೆರೆ ಚಾನಲ್ ನ ನೆಪಮಾತ್ರ ಚಾಲಕ, ಅಧ್ಯಾಪಕ, ಹಾಡುಗಾರ, ಸಾವಯವ ಕೃಷಿ ಮತ್ತು ಮಳೆನೀರ ಚಳವಳಿಯ ಕಾರ್ಯಕರ್ತ. “ನಾನು ಲೇಖಕ, ಇದು ನನ್ನ ಪುಸ್ತಕ” ಎನ್ನುವಾಗ ಅಹಂಕಾರವಿಲ್ಲದಿದ್ದರೆ ಓದುಗರ ಬಳಿಗೆ ಪುಸ್ತಕ ಕೊಂಡೊಯ್ಯುವುದು ಕಷ್ಟವಲ್ಲ ಎಂದು ನಂಬಿದವನು. ಇಷ್ಟಕ್ಕೂ ಕವಿ, ಶಿಲ್ಪಿ, ಕೃಷಿಕ, ತತ್ವಜ್ಞಾನಿ ಮುಂತಾದವರೆಲ್ಲ ಈ ಲೋಕಾನುಭವವನ್ನು ತಮ್ಮ ಶಕ್ತ್ಯಾನುಸಾರ ಕಟ್ಟಿಕೊಡುವವರಷ್ಟೆ. ಶಿವರಾಮ ಕಾರಂತ, ಜಿ.ಪಿ.ರಾಜರತ್ನಂ, ಗಳಗನಾಥ ಮುಂತಾದ ಪುಸ್ತಕ ಹೆತ್ತು ಹೊತ್ತವರು ಈ ಬಿಳಿಗೆರೆ ಚಾನಲ್ ಗೆ ಸ್ಫೂರ್ತಿ. ಕಣ್ಣಿಗೆ ಕಾಣದಿದ್ದರೆ ಚಿನ್ನದ ತುಣುಕು ಮಣ್ಣು ಪಾಲೇ, ಆದ್ದರಿಂದ ಪುಸ್ತಕಗಳನ್ನು ಕಾಣುವಂತೆ ಮಾಡುವುದು ಈ ಚಾನಲ್ ನ ಗುರಿ. ಇಷ್ಟವಾದರೆ, ಕೊಳ್ಳುವುದು ನಿಮ್ಮ ಪುಸ್ತಕ ಪ್ರೀತಿಗೆ ಸಂಬಂಧಿಸಿದ ವಿಚಾರ. ಕೃಷಿಕರು ಮಣ್ಣನ್ನು ಅನ್ನ ಮಾಡುವಂತೆ ಲೇಖಕರು ಅಕ್ಷರಗಳನ್ನು ಕಾಲದ ಜೊತೆ ಬೆರೆಸಿ ಅನುಭವವಾಗಿಸುತ್ತಾರೆ. ಅನ್ನ ದೇಹದೊಳಗೂ ಅಕ್ಷರ ಮನಸ್ಸಿನೊಳಗು ಬೆಳಕು ಹತ್ತಿಸಬಲ್ಲವು. ಪುಸ್ತಕ ಕೇವಲ ಜ್ಞಾನ ಮಾರ್ಗವಲ್ಲ, ಅದು ಧ್ಯಾನ ಮಾರ್ಗ.

ಓದುವ ಪ್ರೀತಿ ಬರೆಯುವ ಶಕ್ತಿಗಿಂತ ದೊಡ್ಡದು. ಏಕೆಂದರೆ, ಬರೆಯುವ ಶಕ್ತಿಗೆ ಮಿತಿ ಇದೆ. ಓದುವ ಪ್ರೀತಿಗೆ ಎಲ್ಲೆಯೇ ಇಲ್ಲ. ಅದೊಂದು ನಿರಂತರ ಹುಡುಕಾಟ. ಓದಿನ ದಾಹ ಇರುವವರಿಗೆ ಬಾಯಾರಿಕೆ ಇಲ್ಲ, ಕಾಲನದಿಯ ನೀರು ಇಂಥವರಿಗೆ ಸಾಕಾಗುವುದೇ ಇಲ್ಲ.

ಬಿಳಿಗೆರೆ ಚಾನೆಲ್ ಇದು ಒಳಿತು ಹಂಚುವ ಚಾನಲ್, ಮಾನ್ಯ ಓದುಗರೇ, ಕರೆದರೆ ಓ ಎನ್ನುವೆ, ನೀವು ಕೇಳಿದರೆ ಒಂದು ಕವಿತೆ ಓದಬಲ್ಲೆ, ಸೊಲ್ಲೆತ್ತಿ ಹಾಡಬಲ್ಲೆ.

* * *

ಸಂಪರ್ಕಕ್ಕಾಗಿ:
ಕೃಷ್ಣಮೂರ್ತಿ ಬಿಳಿಗೆರೆ, ತಿಪಟೂರು ತಾಲೂಕು, ತುಮಕೂರು ಜಿಲ್ಲೆ. ಮೊಬೈಲ್: 9480262971
ಇಮೈಲ್ ವಿಳಾಸ: kbiligere@yahoo.co.in

‍ಲೇಖಕರು avadhi

24 December, 2007

2 Comments

  1. shreekant.mishrikoti

    ಚಾನಲ್ಲು ಅಂದಿರಿ . ಎಂಥ ಛಾನೆಲ್ಲು ಗೊತ್ತಾಗಲಿಲ್ಲ .

  2. Malathi S

    The yahoo mail of K. Biligere bounced back. Needed to know more abt this Book channel
    Thanks
    Malathi S

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading