ಪುಟ್ಟರಾಧ್ಯ ಎಸ್ ಓದಿದ ‘ಕಿನೊ ಮತ್ತು ಇತರ ಕತೆಗಳು’

ಪುಟ್ಟರಾಧ್ಯ ಎಸ್

ಪೋಸ್ಟ್ ಕೋವಿಡ್ ಬದಲಾವಣೆಗಳು ಎಲ್ಲರನ್ನೂ ತಟ್ಟಿವೆ ಹಾಗೆಯೇ ನನ್ನನ್ನು ಕೂಡ. ವರ್ಷಗಳಷ್ಟು ಸಮಯ ಮನೆಯಲ್ಲಿ ಕೆಲಸ ಮಾಡಿ ಆಫೀಸಿಗೆ ಮತ್ತೆ ಕರೆಯುವ ಹೊತ್ತಿಗೆ ನಾವಾಗಲೆ ಬೆಂಗಳೂರಿನಲ್ಲಿ ನಮ್ಮ ಏರಿಯಾವನ್ನು ಬದಲಿಸಿದ್ದೆವು. ವಾರಕ್ಕೊಂದು ದಿನ ಆಫೀಸಿಗೆ ಬರಲು ಹೇಳಿದಾಗ ಆಫೀಸಿಗೂ ಮತ್ತೆ ಮನೆಗೆ ಗೂಗಲ್ ಮ್ಯಾಪಿನಲ್ಲಿ ದೂರ ಎಷ್ಟೆಂದು ಹುಡುಕಿದಾಗ ಬರೋಬ್ಬರಿ ನಲವತ್ತು ಕಿಲೋಮೀಟರ್ ಎಂದು ತೋರಿಸುತ್ತಿತ್ತು. ಇನ್ನು ಅಷ್ಟು ದೂರ ಗಾಡಿ ಚಲಾಯಿಸುವ ಯಾವುದೇ ಮನಸ್ಸಿರದೇ ಈಗ ಸೇರಿಕೊಂಡ ಮನೆಯಿಂದ ಮೆಟ್ರೋ ಪ್ರಯಾಣ ಸುಲಭವಾಗಿ ದಕ್ಕುವುದಾದ್ದರಿಂದ ಮೆಟ್ರೋ ಪ್ರಯಾಣ ಶುರು ಮಾಡಿದೆ.

ದುಬೈನಲ್ಲಿದ್ದಾಗ ಮೆಟ್ರೋ ಬಳಸಿದ್ದು ಬಿಟ್ಟರೆ ಈಗಲೇ ಬಳಸಲು ಶುರುವಾದದ್ದು. ಹೆಂಡತಿ ಪ್ರತಿದಿನ ಆಫೀಸು ಹೋಗುವುದರಿಂದ ವಾರಕ್ಕೊಮ್ಮೆ ನಾನೂ ಜೊತೆಯಾದೆ. ಮೊದಲಾ ದಿನ ವಾಪದಾಗುವಾಗ ಮೆಟ್ರೋ ದಾಸರಹಳ್ಳಿ ತಲುಪಿರಬೇಕು ಹಲವು ಜನ ಇಳಿಯಲು ಶುರು ಮಾಡಿದರು ನಾನೂ ಮುಂದಿನ ಸ್ಟಾಪ್ ನಲ್ಲಿ ಇಳಿಯಬೇಕು ಎಂಬುದನ್ನು ಆ ಜನ ಜಾತ್ರೆಯಲ್ಲಿ ಮರೆತು ಇಳಿಯಲು ಹೋದರೆ ಹಿಂದಿನಿಂದ ಯಾರೋ ನನ್ನನ್ನು ಬಲವಾಗಿ ಎಳೆಯುತ್ತಿದ್ದಾರೆ ಎನಿಸಿತು.

ಮೊದಲ ಪ್ರಯಾಣ ಬೇರೆ ಸ್ವಲ್ಪ ಗಾಬರಿ ಆತುರ ಇನ್ನೂ ಜೋರಾಗಿ ಪ್ರಯತ್ನಿಸಿದೆ, ನನ್ನ ಬ್ಯಾಗು ಎಲ್ಲಿಗೋ ಸಿಕ್ಕಿ ಹಾಕಿಕೊಂಡು ಇನ್ನೆನ್ನು ಮೆಟ್ರೋ ಟ್ರೈನಿನ ಬಾಗಿಲು ಮುಚ್ಚಿಕೊಳ್ಳಲಿದೆ ಎನಿಸಿತು. ಹಿಂದೆ ತಿರುಗಿದೆ, ಹೆಂಡತಿ ಮಾಸ್ಕಿನ ಮರೆಯಲ್ಲಿ ತಡೆಯಲಾರದ ನಗು ನಗುತ್ತಿದ್ದಾಳೆ. ನಾನು ಎಲ್ಲಿ ಇಳಿದಾನೋ ಎಂದು ನನ್ನ ಬ್ಯಾಗು ಹಿಡಿದು ಎಳೆಯುತ್ತಿದ್ದವಳು ಅವಳೇ. ಮನೆಗೆ ಬಂದ ನಂತರ ಅಲ್ಲಿ ನಡೆದ ಘಟನೆಯನ್ನು ಸ್ವಲ್ಪ ಉಪ್ಪು ಕಾರ ಸೇರಿಸಿ ವಿಚಿತ್ರ ವಿಶೇಷವಾಗಿ ಆಡಿಕೊಳ್ಳುತ್ತ ಈಗಲೂ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ. ಹೀಗೆ ಮೆಟ್ರೋದಲ್ಲಿ ಕಳೆದು ಹೋದ ನನಗೆ ಮತ್ತೊಮ್ಮೆ ಕಳೆದು ಹೋದ ಅನುಭವವಾಗಿದ್ದು ಮುರಕಮಿಯ ಲೋಕಕ್ಕೆ ಪ್ರವೇಶವಾದ ಮೇಲೆ.

ಪ್ರತಿ ವಾರ ಆಫೀಸಿಗೆ ಹೋಗಬೇಕಾದರೆ ಜೊತೆಯಲ್ಲಿ ಹೆಂಡತಿ ಇರುತ್ತಿದ್ದರಿಂದ ಸಮಯ ಕಳೆದು ಹೋಗುತ್ತಿತ್ತು ಆದರೆ ವಾಪಸಾಗುವಾಗ ಒಬ್ಬನೇ ಇರುತ್ತಿದ್ದರಿಂದ ಕಳೆದ ತಿಂಗಳು ಕೊಂಡಿದ್ದ ಕಿನೊ ಮತ್ತು ಇತರ ಕತೆಗಳು ಪುಸ್ತಕ ಓದಲು ಶುರುಮಾಡಿದೆ. ಆಫೀಸಿನಿಂದ ಮನೆಗೆ ಬರುವ ಹೊತ್ತಿಗೆ ಒಂದೋ ಎರಡು ಕತೆಗಳನ್ನು ಮುಗಿಸುತ್ತಿದ್ದ ನನಗೆ ಪ್ರತಿ ಕತೆಗಳು ವಿಚಿತ್ರವಾಗಿ ಡಿಸ್ಟರ್ಬ್ ಮಾಡಲು ಶುರು ಮಾಡಿದ್ದವು. ಮುಂದಿನ ವಾರದ ಮೆಟ್ರೋ ಪ್ರಯಾಣ ಬರುವಷ್ಟರಲ್ಲಿ ಇನ್ನುಳಿದ ಬಿಡುವಿನ ಸಮಯದಲ್ಲಿ ಕಿಟಾರು, ಆ ನಿದ್ರೆ ಬಾರದ ಹೆಂಗಸು, ಕಳೆದುಹೋದ ಷೇರು ಮನುಷ್ಯ ಹೀಗೆ ಒಬ್ಬೊಬ್ಬರು ನೆನಪಿಗೆ ಬರಲು ಶುರುವಾದರೆ ಪುಸ್ತಕ ಮುಗಿಯುವ ಹೊತ್ತಿಗೆ ಮೆಟ್ರೋ ಯಾವಾಗ ಹತ್ತುವೆನೋ ಅನಿಸಲು ಶುರುವಾಯಿತು.

ಕೊನೆಯ ಕತೆಯನ್ನಂತು ಎಲ್ಲಿ ಬಿಡುವ ಸಿಕ್ಕಿತೋ ಅಲ್ಲಿಯೇ ನಿಂತು ಓದಿ ಮುಗಿಸಿದೆ. ವಾರಾಂತ್ಯವಾದರೆ ಊರು ತೋಟ ಸೇರುವ ನನಗೆ ವಾರದ ಶುರುವಿನಲ್ಲಿ ಮತ್ತೆ ಈ ನಗರ ಕಾದಿರುತ್ತದೆ. ಈ ನಗರದಲ್ಲಿ ಸ್ವಂತವಾಗಿ ಗಾಡಿ ಚಲಾಯಿಸಿಕೊಂಡು ಹೋಗುವಾಗ ನಮ್ಮ ನೋಟ ಒಂಥರಾ ಇದ್ದರೆ ಸಾರ್ವಜನಿಕ ಸಾರಿಗೆ ಹಿಡಿದರೆ ನಾವು ಕಾಣುವ ನೋಟ ಬೇರೆಯದೇ ಇರುತ್ತದೆ. ಇಲ್ಲಿ ಬರೀ ನಾವು ನಾವಾಗಿ ಇರುವುದಿಲ್ಲ, ಹಲವರ ಬದುಕಿನ ತುಣುಕುಗಳು ನಮಗೆ ಅರಿವಾಗುತ್ತಲೆ ಇರುತ್ತದೆ. ಮೆಟ್ರೋನಲ್ಲಿ ಕಾಣುವ ಧಾವಂತದ ಬದುಕು, ಬೆಂಗಳೂರಿನಲ್ಲಿ ದಿನವಿಡೀ ಮನೆಯಲ್ಲಿ ಒಂಟಿಯಾಗಿ ಕೂತು ಕೆಲಸ ಮಾಡುವ (WFH) ದಿನಗಳು ವಿಚಿತ್ರ ಯೋಚನೆಗಳನ್ನು ತರುತ್ತವೆ.

ಈ ನಗರೀಕರಣದಲ್ಲಿ ಆಗುತ್ತಿರುವ ಆರ್ಥಿಕ ಬದಲಾವಣೆಗಳು ನಮ್ಮ ಪೀಳಿಗೆಯ Quality Of Life ಅನ್ನು ಹಣದಲ್ಲಿ ಅಳೆದು ನಮಗೆ ನಾವೇ ವಿಚಿತ್ರ ಸನ್ನಿವೇಶಗಳಲ್ಲಿ ಸಿಕ್ಕಿ ಹಾಕಿಸಿಕೊಳ್ಳುತ್ತಿದ್ದೇವೆ ಅನಿಸುತ್ತಿದೆ. ನಾನು ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ದಿನಚರಿ ಹೀಗಿರುತ್ತಿತ್ತು, ಬೆಳಿಗ್ಗೆ ಐದು ನಲವತ್ತೈದಕ್ಕೆ ಏಳುವುದು, ನಿದ್ರೆಯಲ್ಲಿಯೆ ಬಚ್ಚಲು ತಲುಪಿ ಬಿಸಿ ನೀರಿನ ಶವರ್ ಆನ್ ಮಾಡುವುದು. ಆಗ ನಿದ್ರೆ ನಿಧಾನವಾಗಿ ಮೈ ಬಿಡುತ್ತಿತ್ತು. ಶವರ್ ಆಫ್ ಮಾಡುವುದು. ತಲೆಗೆ ಶಾಂಪೂ ಹಚ್ಚುವುದು, ಮೈಗೇ ಸೋಪು ಹಚ್ಚುವುದು ಮತ್ತೊಮ್ಮೆ ಶವರ್ ಆನ್ ಮಾಡುವುದು. ಮೈ ಒರೆಸಿ ನೇತು ಹಾಕಿರುತ್ತಿದ್ದ ಬಟ್ಟೆ ಏರಿಸಿ ಕಂಪನಿ ಗಾಡಿಯಲ್ಲಿ ಕುಳಿತರೆ ಆಫೀಸು, ಕೆಲವೊಮ್ಮೆ ಓವರ್ ಟೈಮ್ ಮಾಡಿ ಮತ್ತೆ ಮನೆ ಸೇರಿ ಊಟ ಮಾಡಿ ಮಲಗುವುದು.

ಮುಂದಿನ ದಿನವೂ ಅದೇ, ಮುಂದಿನ ವಾರವೂ ಇದೇ, ಕೊನೆಗೆ ನಾನಲ್ಲಿದ್ದ 543 ದಿನಗಳು ಅದನ್ನೇ ಮಾಡಿದ್ದು. ಹಣವೇನೋ ಬರುತ್ತಿದ್ದರೂ ಕೊನೆ ಕೊನೆಗೆ ತಿಂಗಳ ನಂತರ ಸಂಬಳ ಆದಾಗ ಎಟಿಎಂ ಇಂದ ಬಿಡಿಸಿ ರೂಮಿನ ಚೇರ್ ಮೇಲೆ ಎಸೆದು ಹೋದರೆ ಯಾವಾಗಲೋ ಅರ್ರ್ಧ ಘಂಟೆ ಸಮಯ ಸಿಕ್ಕರೆ ಭಾರತಕ್ಕೆ ಹಣ ಟ್ರಾನ್ಸಫರ್ ಮಾಡುವುದು ಬಿಟ್ಟರೆ ಅದಕ್ಕೆ ಅರ್ಥವೇ ಇಲ್ಲದಂತಾಗಿ ಹೋಗಿತ್ತು. ಕೊನೆ ಕೊನೆಗೆ ಈ ಏಕತಾನದ ಬದುಕು ಬೇಡ, ಹಣವೂ ಬೇಡ ಎನಿಸಿ ಭಾರತಕ್ಕೆ ಓಡಿ ಬಂದದ್ದು ನೆನಪಿದೆ. ಹತ್ತಿರತ್ತಿರ ಹದಿನೈದು ವರ್ಷದ ಹಿಂದಿನ ಮಾತು ಬಿಡಿ. ಆಗ ಹೀಗಿರಲು ಇಲ್ಲ, ಆ ಕಡೆಯ ಕಾಲ್ ಕನೆಕ್ಟ್ ಆಗಿ ಕೇಳಿಸಲು ಹತ್ತು ಸೆಕೆಂಡ್ ಕಾಯಬೇಕಾಗಿತ್ತು, ದುಬೈನಲ್ಲಿ ಕೆಲಸ ಮಾಡುತ್ತಿದ್ದರೆ ವಾಪಸು ಭಾರತಕ್ಕೆ ಎರಡು ವರ್ಷಕ್ಕೊ ಮೂರು ವರ್ಷಕ್ಕೊ ಭೇಟಿ ನೀಡಲು ಆಗುತ್ತಿತ್ತು.

ಒಮ್ಮೆ ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯೇ ಕೆಲಸ ಮಾಡುತ್ತಿದ್ದ ಒಬ್ಬ ಭಾರತಕ್ಕೆ ಮರಳಿ ಆಗ ತಾನೇ ಮದುವೆಯಾಗಿ ಮತ್ತೆ ಕೆಲಸ ಮುಂದುವರೆಸಲು ದುಬೈ ಆಫೀಸಿಗೆ ಬಂದಿದ್ದ. ಬಂದವನನ್ನು ತಮಾಶೆಗೆ ಅವನ ಸ್ನೇಹಿತರು ಛೇಡಿಸಿದ್ದು ಹೀಗೆ “ಮದುವೆಯಾಗಿ ಅವಳನ್ನು ಅಲ್ಲಿಯೇ ಬಿಟ್ಟು ಬಂದೆಯೆಲ್ಲಾ ಈಗ ಅವಳನ್ನು ನೋಡಿಕೊಳ್ಳರೋ ಯಾರು !?” ಅವನು ಬಹಳ ಪ್ರಾಮಾಣಿಕವಾಗಿ ಮತ್ತು ಸಾಮಾನ್ಯವಾಗಿ ತಟ್ಟನೆ ಹೇಳಿದ “ತಮ್ಮ ಇದಾನೆ”. ಎಲ್ಲರೂ ಒಮ್ಮೆ ಜೋರಾಗಿ ನಕ್ಕರು. ಅವನು ಒಮ್ಮೆ ಆ ಕ್ಷಣಕ್ಕೆ ತತ್ತರಿಸಿದ ಆದರೆ ಹೆಚ್ಚು ತೋರ್ಪಡಿಸಿಲಿಲ್ಲ ಎನಿಸುತ್ತದೆ. ಆ ದಿನದಿಂದ ಅವನು ಬರು ಬರುತ್ತಾ ಗಮನಿಸುವಷ್ಟು ಮೆತ್ತಗಾಗುತ್ತ ಹೋದ, ಅದು ಅವನ ಇನ್ಸೆಕ್ಯೂರಿಟಿ ಎನ್ನುವುದೊ ಅಥವಾ ಅವನು ದೂರದೂರಿನ ದುಬೈನಲ್ಲಿ ಇದ್ದು ಹಣ ದುಡಿಯಲೇಬೇಕು ಎಂಬ ಆರ್ಥಿಕ ಒತ್ತಡವೋ ತಿಳಿಯದು.

ಹೀಗೆ ಈ ಗ್ಲೋಬಲೈಜೇಶನ್ ವ್ಯವಸ್ಥೆಗಳು ಎಂತಹ ಒತ್ತಡಗಳಿಗೆ ಸಿಲುಕಿಸುತ್ತದೆ ಎಂದಾಗುತ್ತದೆ.ಹೀಗೆ ಮತ್ತೊಂದು ನೆನಪು, ಇಂಜಿನಿಯರಿಂಗ್ ಮುಗಿಸಿದವನೆ ರೂರಲ್ ಡೆವೆಲಪ್ಮೆಂಟ್ ಸಂಸ್ಥೆಯೊಂದಕ್ಕೆ ವಾಲಂಟೀರ್ ಆಗಿ ಸೇರಿದೆ. ಅಲ್ಲಿ ಕೊಡಗಿನ ಕಾಡಿನ ಜನರ ಜೊತೆ ಕೆಲಸ ಮಾಡುವ ಜವಾಬ್ದಾರಿ ಸಿಕ್ಕಿತ್ತು. ನಾನು ಕೆಲಸ ಮಾಡುತ್ತಿದ್ದ ಸಂಸ್ತೆಯ ಉದ್ದೇಶ ಅಲ್ಲಿನ ಜನರ Quality of life ಏರಿಸುವುದು ಎಂದೇ ಆಗಿತ್ತು. ಅದರ ತಕ್ಕನ ಹಾಗೆ ಸಂಸ್ಥೆಯ ವತಿಯಿಂದ ನಾವು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೆವು. ಅಂದರೆ ಅವರ ಬದುಕಿನ ಮಟ್ಟ ಏರಿಸಿಕೊಳ್ಳಲು ಅವರನ್ನು ಹೊಸ ಹೊಸ ತಂತ್ರಜ್ಞಾನಗಳತ್ತ ತಿರುಗುವಂತೆ ಮಾಡುವುದು ಒಂದಾಗಿತ್ತು.

ಅಲ್ಲಿಂದ ಸಾಗಿ ಈಗ ಹತ್ತಿರತ್ತಿರ ಹದಿನೈದು ವರ್ಷ ಮುಂದೆ ಬಂದಿದ್ದೇನೆ, ವಾಪಸು ತಿರುಗಿ ನೋಡಿದರೆ ನಗರೀಕರಣದ, ತಂತ್ರಜ್ಞಾನದ, ಆರ್ಥಿಕ ಸದೃಢತೆಯ ಅಮಲಿನಲ್ಲಿ ನಮ್ಮ Quality of life ಕಳೆದುಹೋಗಿದೆ ಹೊರತು ಹದಿನೈದು ವರ್ಷದ ಹಿಂದೆ ಕೊಡಗಿನಲ್ಲಿ ಇದ್ದಾಗಲೇ ಅಲ್ಲಿಯ ಜನರ Quality of life ಚೆನ್ನಾಗಿಯೇ ಇತ್ತು ಎನಿಸುತ್ತದೆ. ಒಟ್ಟಿನಲ್ಲಿ ಇಲ್ಲಿನ ಕತೆಗಳು ಹಲವು ಬಾರಿ ನನ್ನನ್ನು ನಾನೇ ಕನ್ನಡಿಯಲ್ಲಿ ನಿಂತು ವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದವು, ಜೊತೆಗೆ ಕೆಲವು ಗೊಂದಲಗಳನ್ನು ಸೇರಿಸಿ ಕೆಲವೊಮ್ಮೆ ನಿವಾರಿಸಿ ಒಂದು ಕ್ಲಾರಿಟಿಯನ್ನು ತಂದಿವೆ- ಈ ನಗರೀಕರಣದ ಯಾಂತ್ರಿಕ ಜೀವನದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು, ಇಲ್ಲೇ ಕಳೆದು ಹೋಗದಂತೆ ನಮಗೆ ಬಯಸಿದಂತೆ ಬದುಕಿದರೆ ಮಾತ್ರ ಒತ್ತಡ ಕಡಿಮೆಯಾಗುತ್ತದೆ. ಈ ಕಿನೊ ಮತ್ತು ಇತರ ಕತೆಗಳು ಕನ್ನಡ ಅನುವಾದ ಆಗದೆ ಹೋಗಿದ್ದರೆ ನಾನು ಓದುತ್ತಿರಲಿಲ್ಲವೇನೋ – ಬಹಳ ಧನ್ಯವಾದಗಳು ಮಂಜುನಾಥ ಚಾವಾ೯ಕ ಅವರೇ.

‍ಲೇಖಕರು Admin

August 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: