ಅಭಿವೃದ್ಧಿಯ ವಿಕೃತಿಗೆ ಹಿಡಿದ ಕೈಗನ್ನಡಿ
-ಡಾ.ಎನ್.ಜಗದೀಶ್ ಕೊಪ್ಪ.
ಯಾವುದೇ ಒಂದು ಕೃತಿ ಅಥವಾ ಸಿನಿಮಾ ನಾವು ಓದಿದ, ನೋಡಿದ ನಂತರವೂ ನಮ್ಮನ್ನು ಕಾಡುವುದರ ಮೂಲಕ ತಮ್ಮ ಶ್ರೇಷ್ಟತೆಯನ್ನು ಮನದಟ್ಟು ಮಾಡಿಕೊಡುತ್ತವೆ. ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯ ಗರಿಯೊಂದಿಗೆ ಈ ವಾರ ತೆರೆ ಕಂಡಿರುವ ಬಿ.ಸುರೇಶ್ ನಿರ್ದೇಶನದ ಪುಟ್ಟಕ್ಕನ ಹೈವೇ ಚಿತ್ರ ಅಂತಹ ಗುಣವನ್ನೊಳಗೊಂಡಿದೆ. ಜೊತೆಗೆ ಕನ್ನಡ ಚಿತ್ರ ಸೃಜನಶಿಲತೆಯ ಕೊರತೆಯಿಂದ ಬಳಲುತ್ತಿರುವ ಸಂದರ್ಭದಲ್ಲಿ ಈ ಚಿತ್ರ ನಿಂತ ನೀರಾಗಿರುವ ಗಾಂಧಿನಗರಕ್ಕೆ ಶಾಕ್ ನೀಡುವುದರ ಜೊತೆಗೆ ಚಿಂತನೆಗೆ ಹಚ್ಚಿದೆ.

ಸಿನಿಮಾ ಎಂದರೆ ಕೇವಲ ಕಮರ್ಶಿಯಲ್ ದೃಷ್ಟಿಕೋನ ಮಾತ್ರವಲ್ಲ, ಅದರಾಚೆಗೂ ಮೀರಿ ನಿರ್ದೇಶಕನಾದವ ತಾನು ಕಂಡ ಸಮಾಜವನ್ನು ಹಾಗೂ ಬದುಕನ್ನು ಒಡಲಾಳದ ಸಂಕಟಗಳ ಮೂಲಕ ದೃಶ್ಯ ಮಾಧ್ಯಮದಲ್ಲಿ ಕಟ್ಟಿಕೊಡುವ ಶ್ರದ್ಧೆ ಮತ್ತು ಬದ್ಧತೆಯ ಸಂಕೇತವೆಂಬುದನ್ನು ಸುರೇಶ್ ಈ ಚಿತ್ರದ ಮುಖಾಂತರ ಸಾಧಿಸಿ ತೋರಿಸಿದ್ದಾರೆ.
ಜಾಗತೀಕರಣದ ಈ ಸಂದರ್ಭದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಮಾರಾಟದ ಸರಕುಗಳಂತೆ ಬಿಂಬಿಸುತ್ತಿರುವಾಗ, ನಮ್ಮ ಗ್ರಹಿಕೆಗಳ ನೆಲೆಗಟ್ಟಿನಾಚೆ ನಾವು ನೋಡಲಾಗದ, ತಲುಪಲಾಗದ ಲೋಕವೊಂದಿದೆ ಎಂಬುದನ್ನು ಈ ಸಿನಿಮಾ ಸಾಕ್ಷೀಕರಿಸಿದೆ.
ಅಭಿವೃದ್ಧಿಯ ಮೀಮಾಂಸೆ ಎಂದರೆ ಒಬ್ಬನ ಹಿತಕ್ಕಾಗಿ ಹತ್ತು ಜನರ ಹಿತಾಸಕ್ತಿಯನ್ನು ಬಲಿಕೊಡುತ್ತಿರುವ ವರ್ತಮಾನದ ಪ್ರಕ್ರಿಯೆ. ಈ ಸಂದರ್ಭದಲ್ಲಿ ಹಳ್ಳಿಗಳ ಆತ್ಮದಂತಿರುವ ಭಾರತದ ಶೋಚನೀಯ ಕಥಾನಕವೊಂದನ್ನು ಗಟ್ಟಿ ಕಥಾ ಹಂದರದ ಮೂಲಕ ಈ ಸಿನಿಮಾದಿಂದ ತೋರಿಸಿ ನಮ್ಮನ್ನು ಮರು ಚಿಂತನೆಗೆ ಪ್ರೇರೇಪಿಸಿರುವ ಸುರೇಶ್ ಹಾಗೂ ಅವರ ಬಳಗದ ಶ್ರಮ ಪ್ರಶಂಸನೀಯ.
ಕೊಳ್ಳುಬಾಕ ಸಂಸ್ಕೃತಿ, ದೈಹಿಕ ಲೋಲುಪತೆ ನಮ್ಮ ಬದುಕಿನ ಮೂಲ ಮಂತ್ರವಾಗಿರುವ ಈ ಸಂದರ್ಭದಲ್ಲಿ ಭಾರತ ದೇಶ ಏಕ ರಾಷ್ಟ್ರವಾಗಿ ಉಳಿದಿಲ್ಲ. ಈಗ ಸೃಷ್ಟಿಯಾಗಿರುವುದು ಎರಡು ಭಾರತಗಳು. ಅವುಗಳೆಂದರೆ, ಒಂದು ಉಳ್ಳವರ ಭಾರತ ಮತ್ತೊಂದು ನರಳುವವರ ಭಾರತ. ಪೇಜ್ ೩ ಸಂಸ್ಕೃತಿಯನ್ನು ಕೇಂದ್ರವಾಗಿರಿಸಿಕೊಂಡಿರುವ ನಮ್ಮ ಮಾಧ್ಯಮಗಳಿಗೆ ಮತ್ತು ಆಧುನಿಕ ತಲೆಮಾರಿಗೆ ನರಳುವ ಭಾರತದ ಸಂಕಟಗಳೆಂದರೆ ಅಲರ್ಜಿ. ಈಗ ಏನಿದ್ದರೂ ನಮ್ಮ ದೇಶ ಭಕ್ತಿ ಪ್ರಕಟವಾಗುವುದು ಭಾರತ – ಪಾಕ್ ನಡುವಿನ ಕ್ರಿಕೆಟ್ ಪಂದ್ಯಗಳಲ್ಲಿ ಮಾತ್ರ.
ಇಂತಹ ಸಂಕಟಮಯ ಸನ್ನಿವೇಶದಲ್ಲಿ ಹೆದ್ದಾರಿ ನಿರ್ಮಾಣವೊಂದರ ನೆಪದಲ್ಲಿ ನಮ್ಮ ನರಳುವ ಭಾರತದ ಅನಕ್ಷರಸ್ಥರು, ಮುಗ್ಧರು ಅನಾಹುತ ಮತ್ತು ಆಮಿಷಗಳಿಗೆ ತಮಗರಿವಿಲ್ಲದಂತೆ ಹೇಗೆ ಬಲಿಯಾಗುತ್ತಾರೆಂಬುದನ್ನು ನಿರ್ಲಿಪ್ತವಾಗಿ ತೆರೆದಿಡುವ ಬಗೆಯೇ ಈ ಚಿತ್ರದ ಹೈಲೈಟ್.
ಅಭಿವೃದ್ಧಿ ಕುರಿತಂತೆ ಯಾವುದೇ ಘೋಷಣೆಯನ್ನು ಅಥವಾ ತಮ್ಮ ಅಭಿಪ್ರಾಯವನ್ನು ಪ್ರೇಕ್ಷಕರ ಮೇಲೆ ಹೇರದೆ, ಸಮಸ್ಯೆಯೊಂದನ್ನು ಎಲ್ಲಾ ಕೋನಗಳಿಂದ ವಿಶ್ಲೇಷಿಸಿ ಅಂತಿಮ ತೀರ್ಮಾನವನ್ನು ಪ್ರೇಕ್ಷಕರಿಗೆ ಬಿಟ್ಟುಕೊಟ್ಟಿರುವುದು ಸುರೇಶ್ರವರ ಪ್ರಬುದ್ಧತೆಗೆ ಸಾಕ್ಷಿಯಾಗಿದೆ.
ಈ ಚಿತ್ರದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿರುವ ಕಲಾವಿದರು ಸಾಮಾನ್ಯರೇನಲ್ಲ. ಕತೆಯ ಗಟ್ಟಿಯಾದ ತಿರುಳನ್ನು ಅರ್ಥಮಾಡಿಕೊಂಡು ಪಾತ್ರಗಳನ್ನು ತಮ್ಮ ಮೈ-ಮನಗಳಿಗೆ ಆವಾಹಿಸಿಕೊಂಡು ನಟಿಸಿರುವ ಶೃತಿ, ಪ್ರಕಾಶ್ ರೈ, ಅಚ್ಯುತ, ಮಂಡ್ಯ ರಮೇಶ್ ಬಹುಕಾಲ ನೆನಪಿನಲ್ಲುಳಿಯುತ್ತಾರೆ. ಚಿತ್ರಕ್ಕೆ ಪೂರಕವಾಗಿ ದುಡಿದಿರುವ ಛಾಯಾಗ್ರಾಹಕ ರಾಮಚಂದ್ರ ಹಾಗೂ ಸಂಗೀತ ನೀಡಿರುವ ಹಂಸಲೇಖರ ಶ್ರಮವೂ ಈ ಚಿತ್ರದಲ್ಲಿ ಎದ್ದುಕಾಣುತ್ತದೆ.
ಪದೇ-ಪದೇ ಕಾಡುವ ಹರಿತವಾದ ಸಂಭಾಷಣೆಯುಳ್ಳ ಹಾಗೂ ಕನ್ನಡ ನೆಲದ ಜ್ವಲಂತ ಸಮಸ್ಯೆಯೊಂದನ್ನು ದೃಶ್ಯ ಕಾವ್ಯದ ಮೂಲಕ ಕಟ್ಟಿಕೊಟ್ಟಿರುವ ಸುರೇಶ್ ಹಾಗೂ ಅವರ ಬಳಗದ ಶ್ರಮವನ್ನು ನಾವು ಅಭಿನಂದಿಸಬೇಕು. ಜೊತೆಗೆ ಸಿನಿಮಾ ನೋಡುವುದರ ಮೂಲಕ ಪ್ರೋತ್ಸಾಹಿಸಬೇಕು.





good analysis Dr koppa
am also agree with Dr koppa & Mohan!
ಉತ್ತಮ ವಿಶ್ಲೇಷಣೆ.
ಪುಟ್ಟಕ್ಕನ ಹೈವೇಗೆ ಹೋಗಲೇ ಬೇಕು…!
aparoopadalli graama bharatada Aalachitrana vannu puttakkana moolaka
bimbisalu prayatnisalaagide. Bhaarata
andare nagaravondee allavalla.
prashasti chitrakkondee alla. adu nijavaagi nonda graamakke.
’ಪುಟ್ಟಕ್ಕನ ಹೈವೆ’ ನೋಡಿದೆ.
ಬಹಳ ಸುಂದರವಾಗಿ ಹೆಣೆದ ಕಥೆ. ಅದಕ್ಕೆ ರಾಮಚಂದ್ರರ ಛಾಯಾಗ್ರಹಣ ಬಹಳ ಸೊಗಸಾಗಿ ಮೂಡಿ ಬಂದಿದೆ.
ಹಳ್ಳಿಯಲ್ಲಿ ಸಾಮಾನ್ಯವಾಗಿ ಕಾಣುವ ಕೀಟಗಳು ಹಾಗು ದೃಷ್ಯಗಳನ್ನು ಸೆರೆ ಹಿಡಿದಿರುವುದು ಮನಮೋಹಕ.
puttakkana highway nodalebeku. Adare tumakoorige baruvudu yaavaaga?