ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಪಿ ಶೇಷಾದ್ರಿ ಅವರ ಡಿಸೆಂಬರ್ 1 ಅರ್ಥಪೂರ್ಣ ಸೃಷ್ಟಿ, ಆದರೆ’ – ಸಿಎನ್ ರಾಮಚಂದ್ರನ್

ಸಿ ಎನ್ ರಾಮಚಂದ್ರನ್

ನೆನ್ನೆ ಶೇಷಾದ್ರಿ ಅವರ ಹೊಸ –ಹಾಗೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ಪಡೆದಿರುವ -ಡಿಸೆಂಬರ್ ಒಂದು ಚಿತ್ರವನ್ನು ನೋಡುವ ಅವಕಾಶ ಒದಗಿತು. ಈ ಅವಕಾಶವನ್ನು ಕಲ್ಪಿಸಿಕೊಟ್ಟ ಶೇಷಾದ್ರಿ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ, ನನಗೆ ಆ ಚಿತ್ರ ಕೊಟ್ಟ ಅನುಭವವನ್ನು ‘ಅವಧಿ’ಯ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ.
ನಾನು ಗ್ರಹಿಸಿದಂತೆ, ಚಿತ್ರದ ಕೇಂದ್ರಾಶಯ ‘ಗ್ರಾಮ ವಾಸ್ತವ್ಯ’ ದಂತಹ ರಾಜಕೀಯ ಗಿಮಿಕ್ಗಳಿಂದ ಹಳ್ಳಿಗಳಲ್ಲಿ ವಾಸಿಸುತ್ತಿರುವವರ ಅಮಾಯಕ ಬದುಕು ಹೇಗೆ ಅಸ್ತವ್ಯಸ್ತವಾಗುತ್ತದೆ ಎಂಬುದರ ಚಿತ್ರಣ. ಈ ಚಿತ್ರಣವನ್ನು ಮೂರು ಭಾಗಗಳಲ್ಲಿ ನೋಡಬಹುದು: ಹಳ್ಳಿಗರ ಬದುಕು -ಅಧಿಕಾರಶಾಹಿಯ ಆಗಮನ -ಮುಖ್ಯಮಂತ್ರಿಯ ವಾಸ್ತವ್ಯ ಮತ್ತು ಪರಿಣಾಮ.
ಹಳ್ಳಿಗರ ಬದುಕನ್ನು ಚಿತ್ರಿಸುವ ಮೊದಲ ಭಾಗ ಅದ್ಭುತವಾಗಿ ಕಟ್ಟಲ್ಪಟ್ಟಿದೆ. ಗ್ರಾಮಜೀವನದ ಪ್ರಾತಿನಿಧಿಕ ಘಟಕವಾಗಿ ದ್ಯಾವಕ್ಕನ ಕುಟುಂಬ ಬರುತ್ತದೆ; ಆ ಕುಟುಂಬ ಆರ್ಥಿಕವಾಗಿ ಹೀನ ಸ್ಥಿತಿಯಲ್ಲಿದೆ (ದ್ಯಾವಕ್ಕ ರೊಟ್ಟಿಗಳನ್ನು ಮನೆಯಲ್ಲಿ ತಾನೇ ತಯಾರಿಸಿ, ಪೇಟೆಗೆ ಹೊತ್ತುಕೊಂಡು ಹೋಗಿ ಖಾನಾವಳಿಗಳಿಗೆ ಮಾರಿ, ಬರುವ ಹಣದಿಂದ ಕುಟುಂಬದ ಬದುಕು ನಡೆಯುತ್ತದೆ; ಅವಳ ಗಂಡ ಮಹದೇವಪ್ಪ ಮೊದಲಿಗೆ ಟ್ರಕ್ ಡ್ರೈವರ್ ಆಗಿದ್ದರೂ ಚಿತ್ರವು ಪ್ರಾರಂಭವಾಗುವ ಹೊತ್ತಿಗೆ ಒಂದು ಆಕಸ್ಮಿಕದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡು ಈಗ ಕುಂಟನಾಗಿದ್ದಾನೆ. ಹೀಗೆ ಆರ್ಥಿಕ ನೆಲೆಯಲ್ಲಿ ಬಡವರಾಗಿದ್ದರೂ ಪರಸ್ಪರ ಪ್ರೀತಿ-ಗೌರವಗಳಿಂದ ಹಾಗೂ ಸ್ವಾಭಿಮಾನದಿಂದ ಈ ಕುಟುಂಬ ತೃಪ್ತಿಯಿಂದ ಬದುಕುತ್ತಿರುತ್ತದೆ. ಈ ಭಾಗವನ್ನು ಅತಿ ಸೂಕ್ಷ್ಮ ವಿವರಗಳಿಂದ ನಿರ್ದೇಶಕರೂ ಆದ ಶೇಷಾದ್ರಿ ತುಂಬಾ ಕೌಶಲ್ಯದಿಂದ ಕಟ್ಟಿಕೊಡುತ್ತಾರೆ:

ರೊಟ್ಟಿ ತಟ್ಟುವಾಗ ದ್ಯಾವಕ್ಕನಿಗಿರುವ ಶ್ರದ್ಧೆ, ಅವನ್ನು ತಲೆಯ ಮೇಲಿಟ್ಟುಕೊಂಡು ಹೋಗುವಾಗ ಆತ್ಮಗೌರವದಿಂದ ಅವಳು ನಡೆಯುವ ರೀತಿ, ಒಂದು ಖಾನಾವಳಿಯ ಮಾಲೀಕನು ಅವಳ ರೊಟ್ಟಿಗಳನ್ನು ತಿರಸ್ಕರಿಸಿದಾಗ ಮತ್ತೊಮ್ಮೆ ಅವನೇ ಕರೆಕಳಿಸುವ ತನಕ ಅಲ್ಲಿಗೆ ಕಾಲಿಡದಿರುವುದು, ಸ್ಕೂಲಿಗೆ ಹೋಗುವ ಮಗನನ್ನು ಮುದ್ದು ಮಾಡುವ ರೀತಿ, ಗಂಡನನ್ನು ಯಾರೋ ಜೊತೆಯಲ್ಲಿ ಕರೆದುಕೊಂಡು ಹೋದರೆನ್ನುವ ಸುದ್ದಿ ತಿಳಿದಾಗ ಅವಳು ತೋರುವ ಭೀತಿ ಹಾಗೂ ಧಾವಂತ -ಇತ್ಯಾದಿ ವಿವರಗಳಿಂದ ಆ ಸ್ವಾಭಿಮಾನಿ ಗೃಹಿಣಿಯ ಪಾತ್ರ ಜೀವಂತವಾಗಿ ನಮ್ಮೆದುರು ಉಸಿರಾಡುತ್ತದೆ.
ಅವಳ ಗಂಡ ಮಾದೇವಪ್ಪನೂ ಅಷ್ಟೇ ಸ್ವಾಭಿಮಾನಿ: ತಾನು ಕಳೆದುಕೊಂಡ ತನ್ನ ಕಾಲಿಗೆ ಪರಿತಪಿಸದೆ ಅದರ ಬಗ್ಗೆ ಜೋಕ್ ಮಾಡುವಷ್ಟು ಶಾಂತ ಮನಸ್ಸಿನವನು; ಹೆಂಡತಿಯೊಡನೆ ‘ದಾಸರೇ ಹೇಳಿದಾರಲ್ಲಾ -ಒಳ್ಳೆಯವರಿಗಿದು ಕಾಲಿಲ್ಲ ಎಂದು’ ಎಂದು ಹೇಳುತ್ತಾ ನಗುತ್ತಾನೆ; ಮತ್ತು ಊರಿನ ಸಾಹುಕಾರರ ಹಿಟ್ಟಿನ ಗಿರಣಿಯಲ್ಲಿ ಕೆಲಸಮಾಡುತ್ತಾ ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುತ್ತಾನೆ.
ಇನ್ನು ಆ ಕುಟುಂಬದ ಮೂರನೆಯ ವ್ಯಕ್ತಿ ಎಂದರೆ ಅವನ ತಾಯಿ: ಮುದುಕಿಯಾಗಿರುವುದರಿಂದ ಮಂಜಾಗಿರುವ ತನ್ನ ಕಣ್ಣನ್ನು ಡಾಕ್ಟರ್ಗೆ ತೋರಿಸಿ ಸರಿಪಡಿಸಿಕೊಳ್ಳಬೇಕೆಂಬುದು ಅವಳ ಮಹದಾಸೆ: ಕಣ್ಣು ಕೊಡಿಸೋ ಯಪ್ಪಾ ಎಂಬುದು ಅವಳ ಪ್ರತಿದಿನದ ಕೋರಿಕೆ. ಆದರೂ ತನ್ನ ಕುಟುಂಬದ ಬಗ್ಗೆ ಅವಳಿಗಿರುವ ಅಭಿಮಾನವನ್ನು ಚಿತ್ರದ ಕೊನೆಯಲ್ಲಿ ಅವಳು ಪತ್ರಕರ್ತನಿಗೆ ಗ್ರಹಚಾರ ಬಿಡಿಸುವಾಗ ನೋಡಬೇಕು.
ಸ್ಕೂಲಿಗೆ ಹೋಗುವ ಮಗನಾದರೋ ಜಾಣ; ಅವನಿಗಿರುವ ಒಂದೇ ಆಸೆಯನ್ನು –ಹೊಸ ಚಪ್ಪಲಿ ಹಾಗೂ ಬೂಟು – ಅವನ ತಾಯಿ ಪೂರೈಸಿದಾಗ ಅವನ ಹಿಗ್ಗು ಶಬ್ದಾತೀತ. ಈ ವಿವರಗಳೊಡನೆಯೇ ಆ ಹಳ್ಳಿಯಲ್ಲಿಲ್ಲದಿರುವ ಕುಡಿಯುವ ನೀರು, ಕರೆಂಟು, ಕಲ್ಲು-ಕೊಚ್ಚೆಗಳಿಂದ ತುಂಬಿದ ದಾರಿಗಳಲ್ಲದ ದಾರಿಗಳು, ಇವಾವುದನ್ನೂ ಲಕ್ಷಿಸದ ಜೋಗತಿಯರು -ಎಂದರೆ ಒಂದು ಪರಂಪರಾಗತ ಗ್ರಾಮವು ತನ್ನ ಪಾಡಿಗೆ ತಾನು ಮಾನದಿಂದ ಬದುಕುವುದನ್ನು ನಿರ್ದೇಶಕರು ಕಟ್ಟಿಕೊಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಡಿಸಿ ಆಫೀಸಿನ ಕೆಳದರ್ಜೆಯ ಅಧಿಕಾರಿಗಳು ಇದ್ದಕ್ಕಿದ್ದಂತೆಯೇ ಆ ಹಳ್ಳಿಗೆ ನುಗ್ಗಿ, ದ್ಯಾವಕ್ಕನ ಗಂಡನನ್ನು ತಮ್ಮ ಜೊತೆಯಲ್ಲಿ (ಯಾವ ಕಾರಣವನ್ನೂ ಕೊಡದೆ) ಕರೆದುಕೊಂಡು ಹೋಗುವುದರಿಂದ ಚಿತ್ರದ ಎರಡನೆಯ ಭಾಗ ಪ್ರಾರಂಭವಾಗುತ್ತದೆ. ಈ ಭಾಗದಲ್ಲಿ ನಿರ್ದೇಶಕರು ಮುಖ್ಯವಾಗಿ ತೋರಿಸುವುದು ಅಧಿಕಾರಶಾಹಿಗೆ ಗ್ರಾಮೀಣ ಜನತೆಯನ್ನು ಕುರಿತು ಇರುವ ಅಸಡ್ಡೆ ಹಾಗೂ ತಿರಸ್ಕಾರ, ಅಧಿಕಾರಿಗಳ ದರ್ಪ, ಆದರೆ ಮೇಲಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಅವರು ತೋರಿಸುವ ಅತಿ ವಿಧೇಯತೆ -ಇತ್ಯಾದಿ ಸರಕಾರದ ನೌಕರಶಾಹಿಯ ಸ್ವರೂಪ, ಮುಖ್ಯ ಮಂತ್ರಿಯ ಗ್ರಾಮ ವಾಸ್ತವ್ಯಕ್ಕಾಗಿ ಅವರೆಲ್ಲರೂ ಮಾಡುವ ಪೂರ್ವ ಸಿದ್ಧತೆಗಳು, ದ್ಯಾವಕ್ಕನ ಮನೆಗೆ ಟಿವಿ, ಫ್ರಿಜ್, ಮಂಚ, ಕಮೋಡ್ ಇತ್ಯಾದಿಗಳನ್ನು ತಂದು ತುಂಬುವುದು ‘ನಗರಬದುಕಿನ ಅವಶ್ಯಕತೆಗಳನ್ನೆಲ್ಲಾ ಗ್ರಾಮದಲ್ಲಿಯೇ ಪೂರೈಸುವುದಾದರೆ ಅದು ಗ್ರಾಮ-ವಾಸ್ತವ್ಯ ಹೇಗಾಗುತ್ತದೆ?’ ಎಂಬಂತಹ ಸ್ವವಿರೋಧವನ್ನು. ಈ ಭಾಗವೂ ವ್ಯಂಗ್ಯ-ವಿನೋದಗಳಿಂದ ಕೂಡಿ ಸಾಕಷ್ಟು ಯಶಸ್ವಿಯಾಗಿದೆ.
ನನಗೆ ಸಮಸ್ಯೆಗಳು ಎದುರಾಗುವುದು ಮುಖ್ಯ ಮಂತ್ರಿಯ ಗ್ರಾಮವಾಸ್ತವ್ಯದಿಂದ ಪ್ರಾರಂಭವಾಗುವ ಮೂರನೆಯ ಭಾಗದಿಂದ. ಎಂದರೆ, ಮುಖ್ಯ ಮಂತ್ರಿಯ ಪಾತ್ರವನ್ನು ಸಾಕಷ್ಟು ವಾಸ್ತವವಾಗಿಯೇ ನಿರ್ದೇಶಕರು ಬೆಳೆಸಿದ್ದಾರೆ -ಮುಖ್ಯ ಮಂತ್ರಿಯ ಆಡಂಬರಪ್ರಿಯತೆ, ತೋರಿಕೆಯ ವಿನಯ, ನಿಜವಾದ ದರ್ಪ (ಮಗು ಅತ್ತಾಗ ಅಲ್ಲಿರಲಿಕ್ಕೇ ಬಂದಿರುವ ಮಂತ್ರಿ ಅಸಹನೆಯಿಂದ ಅತ್ತ ನೋಡುತ್ತಾನೆ; ಇತರ ಅಧಿಕಾರಿಗಳು ಆ ಕುಟುಂಬದ ಎಲ್ಲರನ್ನೂ ಹೊರಗೆ ದಬ್ಬುತ್ತಾರೆ), ಇತ್ಯಾದಿ ವಿವರಗಳ ಮೂಲಕ. ಈ ಗ್ರಾಮವಾಸ್ತವ್ಯ ಎಂತಹ ಅರ್ಥಹೀನ ಯೋಜನೆ ಎಂಬುದನ್ನು ದ್ಯಾವಕ್ಕ ದಂಪತಿಗಳು ತಮ್ಮ ಮನೆಯಿಂದಲೇ ಹೊರಹಾಕಲ್ಪಟ್ಟು ಹೊರ ಜಗಲಿಯ ಮೇಲೆ ಚಳಿಗೆ ನಡುಗುತ್ತಾ ರಾತ್ರಿಯನ್ನು ಕಳೆಯುವಾಗ. ಆ ಹಳ್ಳಿಯವರೆಲ್ಲರೂ ಆ ವಾಸ್ತವ್ಯದಿಂದ ತಮ್ಮ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತವೆಂದು ನಂಬಿ, ಬೇಡಿಕೆ ಅರ್ಜಿಗಳನ್ನು ದ್ಯಾವಕ್ಕನ ಬಳಿ ಕೊಟ್ಟಿರುತ್ತಾರೆ; ಆದರೆ ಅವಳಿಗಾಗಲಿ ಅವಳ ಗಂಡನಿಗಾಗಲಿ ಮುಖ್ಯ ಮಂತ್ರಿಯೊಡನೆ ಒಂದು ನಿಮಿಷವೂ ಮಾತನಾಡಲಾಗುವುದಿಲ್ಲ. ಇದು ಗ್ರಾಮವಾಸ್ತವ್ಯದ ಘೋರ ವ್ಯಂಗ್ಯ.
ಕೊನೆಗೆ, ಮುಖ್ಯ ಮಂತ್ರಿ ರಾಜಧಾನಿಗೆ ಹೊರಟಾಗ ಟಿವಿಯ ವಾರ್ತೆಯ ಮೂಲಕ ಅವನ ನಿಜವಾದ ತಂತ್ರ -ಅಥವಾ ಕ್ರೂರ ಯೋಜನೆ -ಎಲ್ಲರಿಗೂ ಗೊತ್ತಾಗುತ್ತದೆ: ದ್ಯಾವಕ್ಕನ ಗಂಡ ಏಡ್ಸ್ ರೋಗಿಯೆಂದು, ಆದುದರಿಂದ ಆ ‘ಏಡ್ಸ್ ದಿನ’ದಂದು (ಡಿಸೆಂಬರ್ ಒಂದು) ಅವನು ಅಲ್ಲಿ ಒಂದು ರಾತ್ರಿ ಕಳೆದನೆಂದು. ಇದರಿಂದ, ಅವನಿಗೆ ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರತಿಷ್ಠೆ ದೊರಕುತ್ತದೆ; ಆದರೆ, ಏಡ್ಸ್ ಎಂದರೇನೆಂದೇ ಗೊತ್ತಿಲ್ಲದ ದ್ಯಾವಕ್ಕನ ಕುಟುಂಬ ಎಲ್ಲರಿಂದ ತಿರಸ್ಕಾರಕ್ಕೆ ಒಳಗಾಗಿ ಛಿದ್ರಛಿದ್ರವಾಗುತ್ತದೆ.
ಕೊನೆಯಲ್ಲಿ ಈ ‘ಏಡ್ಸ್ ಪ್ರಕರಣ’ ಅವಶ್ಯಕವೆ? ನನಗೆ ತೋರುವಂತೆ, ಈ ಕಥಾಧಾರೆಯಿಂದ ಚಿತ್ರದ ಮೂಲ ಆಶಯ -ರಾಜಕಿಯ ಗಿಮಿಕ್ಗಳ ಅರ್ಥಹೀನತೆ -ಕುಗ್ಗುತ್ತದೆ: ‘ಈ ಕ್ರೂರ ತಂತ್ರವನ್ನು ತಾನು ಖ್ಯಾತಿಯನ್ನು ಪಡೆಯುವುದಕ್ಕಾಗಿ ರೂಪಿಸಿದ ಮುಖ್ಯಮಂತ್ರಿಯಲ್ಲದಿದ್ದರೆ, ಗ್ರಾಮವಾಸ್ತವ್ಯದಂತಹ ಯೋಜನೆಗಳು ಅರ್ಥಪೂರ್ಣವಾಗಿರುತ್ತವೆ’ ಎಂಬಂತಹ ಭಾವನೆ ಮೂಡುತ್ತದೆ. ಎಂದರೆ, ಮೊದಲಿನಿಂದಲೂ ಒಂದು ನಗರೀಕೃತ-ಅಧಿಕಾರಶಾಹಿಯ ಸ್ವಾರ್ಥ ಯೋಜನೆಗಳ ಕಾರಣದಿಂದ ಗ್ರಾಮಜೀವನ ಹದಗೆಡುತ್ತದೆ ಎಂಬಂತಹ ಅನುಭವವೇ ಕೊನೆಯಲ್ಲಿ ಉಲ್ಟಾ ಹೊಡೆಯುತ್ತದೆ. ದ್ಯಾವಕ್ಕನು ರೊಟ್ಟಿಗಳನ್ನು ಮುಖ್ಯಮಂತ್ರಿಗಳ ಮುಖಕ್ಕೆ ಎಸೆಯುವುದು ಅವಳ ಅರ್ಥಹೀನ ಪ್ರತಿಭಟನೆಯನ್ನು ದಾಖಲಿಸುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಡಿಸೆಂಬರ್ ಒಂದು ಒಂದು ಅರ್ಥಪೂರ್ಣ ರಾಜಕೀಯ ವಿಡಂಬನೆ; ಆದರೆ, ಕೊನೆಯಲ್ಲಿ ಇದ್ದಕ್ಕಿದ್ದಂತೆ ಬರುವ ‘ಏಡ್ಸ್’ ತಿರುವು ಕಥೆಯ ವ್ಯಾಪಕ ಧ್ವನಿಯನ್ನು ಸ್ವಲ್ಪ ಮಟ್ಟಿಗೆ ಕುಗ್ಗಿಸುತ್ತದೆ.

‍ಲೇಖಕರು G

23 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading