ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಪಿ ಉಪಾಧ್ಯ ಸರಣಿ ಕಥೆ 60- ಅಂತ್ಯನ ಪುಸ್ತಕ ಇಂಗ್ಲೀಷಿನಲ್ಲೂ…

ಪಿ ಪಿ ಉಪಾಧ್ಯ

ಪ್ರೊಫೆಸರರ ಉತ್ಸಾಹದಿಂದಾಗಿ ವೇಗದಲ್ಲಿ ಅಬ್ಬರದ ಪ್ರಚಾರ ಪಡೆದ ಈ ವಿಷಯ ಇಡೀ ದೇಶದ ಬರಹಗಾರರ ವಲಯದಲ್ಲಿಯೇ ಅತೀ ದೊಡ್ಡ ಸುದ್ದಿ ಮಾಡಿತು. ಜೊತೆಗೇ ಎಲ್ಲೆಲ್ಲಿಂದಲೋ ಅಂತ್ಯನಿಗೆ ಫೋನ್ ಕರೆಗಳೂ ಬರಲಾರಂಭಿಸಿದುವು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುವವರಾದರೆ ಪರವಾಯಿಲ್ಲ. ಬೇರೆ ಭಾಷೆಗಳವರೊಂದಿಗೆ ಮಾತನಾಡುವಾಗ ಕಷ್ಟವಾಗುತ್ತದೆ. ಆದರೂ ತಿಳಿದಷ್ಟರ ಮಟ್ಟಿಗಿನ ಹಿಂದಿಯ ಜೊತೆ ಇಂಗ್ಲೀಷನ್ನು ಬೆರೆಸಿ ಮಾತನಾಡಿದ. ಹೆಚ್ಚಿನ ಮಾತುಗಳೆಲ್ಲ ಮೆಚ್ಚಿಗೆ ಮತ್ತು ಹೊಗಳಿಕೆಯವೇ ಆಗಿದ್ದುದರಿಂದ ಅದು ಹೇಗೋ ನಿಭಾಯಿಸಿದ.

ಫೋನ್ ಮಾತುಕತೆ ಹೋಗಲಿ. ಅವನ್ನು ಮುಖತಃ ನೋಡಲು ಬರುವವರದ್ದೇ ಇನ್ನೊಂದು ಸಮಸ್ಯೆ. ಒಂದೊ೦ದು ದಿನ ಜನ ಹಿಂಡು ಹಿಂಡಾಗಿಯೂ ಬಂದರು. ಅವರ ಅಬ್ಬರ ಎಷ್ಟು ಹೆಚ್ಚಾಗಿತ್ತೆಂದರೆ ಯಕ್ಷಗಾನ ಕೇಂದ್ರದ ಮಾಮೂಲಿ ಚಟುವಟಿಕೆಗಳಿಗೆ ತೊಂದರೆಯಾಗುವಷ್ಟು. ಮೊದಲೇ ಸೂಚನೆ ಕೊಟ್ಟು ಬರುವವರಿಗಾದರೆ ಹೇಳಬಹುದು. ‘ಎಷ್ಟು ಹೊತ್ತಿಗೆ ಬರಬಹುದು ಮತ್ತು ಬಂದರೆ ಎಷ್ಟು ಹೊತ್ತು ಇರಬಹುದು ಅಥವಾ ಬರಲೇಬೇಡಿ ನೀವು ಮಾತನಾಡಿದರಲ್ಲ ಅಷ್ಟೇ ಸಾಕು’ ಎಂದಾದರೂ ಹೇಳಬಹುದು. ಆದರೆ ಹೆಚ್ಚಿನವರು ಯಾವದೇ ಮುನ್ಸೂಚನೆ ಕೊಡದೆ ಬರುವವರು.

ಶಾಸ್ತ್ರೀಗಳಿಗೂ ಉಭಯಸಂಕಟ. ಬೇಡ ಎಂದು ಹೇಳುವ ಹಾಗೂ ಇಲ್ಲ. ಅಷ್ಟೇ ಅಲ್ಲ ಅಂತ್ಯನ ಯಶಸ್ಸಿನಲ್ಲಿ ತಮ್ಮದೂ ಒಂದು ಚೂರು ಪಾತ್ರ ಇದ್ದೇ ಇತ್ತಲ್ಲ. ಹಾಗಾಗಿ ಬಂದವರಿ೦ದಾಗುತ್ತಿದ್ದ ಎಲ್ಲ ತೊಂದರೆಗಳನ್ನೂ ಸಹಿಸಿಕೊಂಡರು. ಎಲ್ಲಿಯವರೆಗೆಂದರೆ ಮಾಧ್ಯಾಹ್ನದ ಸುಮಾರಿಗೆ ಬಂದವರು ಊಟದ ಹೊತ್ತಿನ ವರೆಗೂ ಉಳಿದು ಊಟದ ಪಂಕ್ತಿಯಲ್ಲಿ ಕುಳಿತರೆ ಅವರಿಗೆ ಊಟವನ್ನೂ ಬಡಿಸುವಷ್ಟು. ಕೆಲವೊಮ್ಮೆ ಮಾಡಿದ ಅಡಿಗೆ ಕಡಿಮೆಯಾಗುತ್ತಿದೆ ಅನ್ನಿಸಿದರೆ ತಾವೇ ಊಟವನ್ನು ತಡವಾಗಿ ಮಾಡುವವರೆಗೆ.

ಅಂತ್ಯನಿಗೇ ಕೆಲವೊಮ್ಮೆ ಕಿರಿಕಿರಿಯೆನಿಸುತ್ತದೆ. ಶಾಸ್ತ್ರೀಗಳಿಗಾಗುತ್ತಿದ್ದ ತೊಂದರೆ ನೋಡಿ ಆತಂಕವೂ ಆಗುತ್ತದೆ. ಅದನ್ನೆಲ್ಲಿಯಾದರೂ ಶಾಸ್ತ್ರೀಗಳ ಮುಂದೆ ತೋರಿಸಿಕೊಂಡರೆ ಅವರೇ ಇವನನ್ನು ಸಮಾಧಾನ ಪಡಿಸುತ್ತಾರೆ. ‘ಅಲ್ಲ ಅಂತ್ಯ.. ಇಂತಹ ಸಂದರ್ಭದಲ್ಲಿಯೂ ನಾವು ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳದಿದ್ದರೆ ಹೇಗೆ. ನೀನು ಈ ಮಟ್ಟಕ್ಕೆ ಬೆಳೆದಿರುವುದು ನಮಗೆಲ್ಲ ಎಷ್ಟು ಹೆಮ್ಮೆ. ಅಂತಹುದರಲ್ಲಿ ಇದೆಲ್ಲ ಯಾವ ಲೆಕ್ಕ ಬಿಡು’ ಎನ್ನುತ್ತಾರೆ.

ಆದಿಯೂ ಅಂತ್ಯ ಹೆಸರು ಗಳಿಸುವುದನ್ನು ನೋಡಿ ಸಂತೋಷಪಡುತ್ತಿದ್ದಾನೆ. ಬಹುಶಃ ಅವರೆಲ್ಲರ ನಡುವೆ ಅತೀ ಹೆಚ್ಚು ಸಂತೋಷಪಡುತ್ತಿದ್ದವ ಅವನೇ. ತಮ್ಮನನ್ನು ನೋಡಲು, ಹೊಗಳಲು ಮತ್ತು ಮೆಚ್ಚುಗೆಯನ್ನು ತೋರಿಸಲು ಬಂದವರನ್ನು ಉಪಚರಿಸುವ ಸಲುವಾಗಿ ಆಗುವ ಖರ್ಚೂ ಕೇಂದ್ರದ ಮಟ್ಟಿಗೆ ಒಂದು ಸಮಸ್ಯೆಯೇ. ಆ ಹೆಚ್ಚಿನ ಖರ್ಚನ್ನು ತಾನೇ ಭರಿಸುವುದಾಗಿ ಅವನಾಗಿಯೇ ಹೇಳಿದ. ಮೊದ ಮೊದಲಿಗೆ ಶಾಸ್ತ್ರೀಗಳು ‘ಈಗಲೇ ಎಲ್ಲ ಖರ್ಚನ್ನೂ ನೀವೇ ನೋಡಿಕೊಳ್ಳುತ್ತಿದ್ದೀರಿ. ಅದರ ಮೇಲೆ ಇದು ಬೇರೆ’ ಎಂದರೂ `ಇದೆಲ್ಲ ಯಾರ ಬಗ್ಗೆ ಹೇಳಿ.. ನನ್ನ ತಮ್ಮನಿಗಾಗಿ ಅಲ್ಲವೇ.. ನಾವಲ್ಲದೆ ಇನ್ಯಾರು ನೋಡಿಕೊಳ್ಳುತ್ತಾರೆ’ ಎಂದು ಸಮಾಧಾನಪಡಿಸಿದ ಮೇಲೆ ಸುಮ್ಮನಾದರು.

ಶಾಮಣ್ಣನವರು ಮತ್ತು ಕಮಲಮ್ಮ ಇಬ್ಬರಿಗೂ ಎಲ್ಲ ಅಯೋಮಯ. ಅಂತ್ಯ ಯಕ್ಷಗಾನದಲ್ಲಿ ಹೆಸರು ಮಾಡಿ ದೇಶ ವಿದೇಶಗಳಲ್ಲಿ ತಿರುಗಾಡುತ್ತಿದ್ದಾಗಲೇ ಅತೀವ ಹೆಮ್ಮೆಪಡುತ್ತಿದ್ದ ಅವರಿಗೆ ಈಗ ಅದಕ್ಕಿಂತ ಹೆಚ್ಚು. ಅದು ಬೇರೆ ಅವನ ಪುಸ್ತಕದ ಬಗ್ಗೆ ಅವನೇ ಮನೆಯಲ್ಲಿ ಹೇಳಿಕೊಳ್ಳದಿದ್ದರೂ ಆದಿ ಮಾತ್ರ ದಿನವೂ ವರದಿ ಒಪ್ಪಿಸುತ್ತಿದ್ದ. ‘ಇಂದು ದೆಹಲಿಯಿಂದ ಹಿಂದೀಯವರು ಕೇಳಿದರು.. ಇವತ್ತು ಹೈದರಾಬಾದಿನಿಂದ ತೆಲುಗಿನ ಬರಹಗಾರರೊಬ್ಬರು ಫೋನ್ ಮಾಡಿದ್ದರು..’ ಹೀಗೆ.

ಆಕ್ಸ್ಫರ್ಡಿನ ಪ್ರೊಫೆಸರರ ಪತ್ರ ಬಂದ ದಿನವಂತೂ ಆದಿಯ ಕಾಲು ನೆಲದ ಮೇಲೆ ನಿಲ್ಲಲೇ ಇಲ್ಲ. ದಾರಿಯ ಮೇಲೆ ಸಿಕ್ಕಿದವರೊಂದಿಗೆಲ್ಲ ಹೇಳುತ್ತ ಮನೆಗೆ ಬಂದವ ಗಟ್ಟಿ ಸ್ವರದಲ್ಲಿ ಅಪ್ಪ ಅಮ್ಮನನ್ನು ಕರೆದಿದ್ದ. ಇಷ್ಟೊಂದು ಉತ್ಸಾಹವನ್ನು ಅವನಲ್ಲಿ ಎಂದೂ ಕಂಡಿರದ ಆ ಅಪ್ಪ ಅಮ್ಮನಿಗೂ ಆಶ್ಚರ್ಯ. `ನಮ್ಮ ಅಂತ್ಯನ ಪುಸ್ತಕ ಇಂಗ್ಲೀಷಿನಲ್ಲೂ ಬರುತ್ತದೆ.. ಅದೂ ಆಕ್ಸ್ಫರ್ಡ್ ಯುನಿವರ್ಸಿಟಿಯಿಂದ. ಅಲ್ಲಿನ ಪ್ರೊಫೆಸರ್ ಒಬ್ಬರೇ ಕಾಗದ ಬರೆದಿದ್ದಾರೆ’ ಹೆಚ್ಚು ಕಡಿಮೆ ಓಡುತ್ತಲೇ ಮನೆಯೊಳಗೆ ಬರುತ್ತ ಹೇಳಿದ್ದ.

ಇಂಗ್ಲಿಷ್ ಎಂದುದು ಅವರಿಬ್ಬರಿಗೂ ಅರ್ಥವಾಗಿತ್ತು. ಆದರೆ ಆಕ್ಸ್ಫರ್ಡ್ ಅದಿದೆಲ್ಲ ಶಾಮಣ್ಣನವರಿಗೆ ತುಸು ತಲೆಗೆ ಹೊಕ್ಕರೂ ಕಮಲಮ್ಮನಿಗೆ ತುದಿ ಬುಡ ಅರ್ಥವಾಗಲಿಲ್ಲ. ಅಂತೂ ಮಗನ ಪುಸ್ತಕ ಇಂಗ್ಲೀಷಿನಲ್ಲಿಯೂ ಬರುತ್ತದೆ ಎನ್ನುವುದೊಂದೇ ಅರ್ಥವಾಗಿದ್ದು ಅವರಿಗೆ. ಅಮ್ಮನ ಮುಖದಲ್ಲಿನ ಭಾವನೆಯನ್ನು ಅರಿತವನಂತೆ ಆದಿ ನಿಧಾನವಾಗಿ ಬಿಡಿಸಿ ಬಿಡಿಸಿ ಹೇಳಿದ.

ಎಲ್ಲ ಅರ್ಥವಾಗುತ್ತಿದ್ದಂತೆಯೇ ಕಮಲಮ್ಮನ ಮನಸ್ಸು ಹಿಂದಿನ ದಿನಗಳಿಗೋಡಿತು. ಇದೇ ಮಗನನ್ನೇ ಅಲ್ಲವೇ ಬೇಡದ ಮಗುವೆಂದು ತಿರಸ್ಕರಿಸಿದ್ದು. ಇದೇ ಮಗುವನ್ನೇ ಅಲ್ಲವೇ ದೂರ ಹೋಗಲಿ ಎಂದು ತಾನೇ ಅಣ್ಣನ ಮನೆಗೆ ಕಳುಹಿಸಿದ್ದು. ಕಣ್ಣು ಹನಿಗೂಡುತ್ತದೆ. ಅದೇ ಅನಂತನ ನೆನಪಾಗುತ್ತದೆ. ಎಷ್ಟೊಂದು ಮುಚ್ಚಟೆಯಿಂದ ಸಾಕಿದ್ದೆ. ಅವನಿಗೆ ಕೊಟ್ಟ ಪ್ರೀತಿಯ ಹತ್ತರಲ್ಲಿ ಒಂದು ಪಾಲಿನಷ್ಟು ಕೊಟ್ಟಿದ್ದರೂ ಈ ಮಗು ಅಣ್ಣನ ಮನೆಗೆ ಹೋಗಲು ಒಪ್ಪುತ್ತಿತ್ತೋ ಇಲ್ಲವೋ.

ಅಣ್ಣನ ಜೊತೆಗೆ ಹೋಗುವಾಗ ಹಿಂತಿರುಗಿ ನೋಡದೆಯೂ ಹೋಗಿತ್ತಲ್ಲ ಮಗು.. ಆಕೆಯ ಕಣ್ಣು ತುಂಬಿ ಬರುತ್ತದೆ ಈಗ. ಗಮನಿಸಿದ ಆದಿಗೆ ತಿಳಿಯಿತು. ಅಮ್ಮ ಹಿಂದಿನದ್ದನ್ನೆಲ್ಲ ಜ್ಞಾಪಿಸಿಕೊಳ್ಳುತ್ತಿದ್ದಾಳೆ ಎಂದು. ಅಂತ್ಯನನ್ನು ಹೊಗಳಿದಾಗೆಲ್ಲ ಆಕೆ ಹಿಂದಿನದನ್ನು ನೆನಸಿಕೊಂಡು ಅಳುವುದು ಹೊಸದೇನಲ್ಲ. ಇವತ್ತಂತೂ ಖಂಡಿತ ಅದೆಲ್ಲ ನೆನಪಾಗಲೇಬೇಕು ಎನ್ನಿಸಿದರೂ ಅಮ್ಮನ ಕಣ್ಣಲ್ಲಿ ನೀರನ್ನು ನೋಡುವುದು ಸಾಧ್ಯವಾಗಲಿಲ್ಲ ಆದಿಗೆ. ‘ಅಮ್ಮ ಹಿಂದಿನದೆಲ್ಲ್ಲ ನೆನಸಿಕೊಂಡು ಅಳುವುದು ಯಾಕೆ? ಅದೆಲ್ಲ ಮುಗಿಯಿತಲ್ಲ. ಈಗ ಅಂತ್ಯ ನಮ್ಮೊಂದಿಗೇ ಇದ್ದಾನೆ. ನಮ್ಮೊಂದಿಗೆ ಇದ್ದುದರಿಂದಲೇ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾದದ್ದು ಅವನಿಗೆ. ನೀನು ನೋಡುತ್ತಲೇ ಇರು… ಒಂದು ದಿನ ನಿನ್ನ ಮಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾನೆ’

ಅಮ್ಮನ ಅಳು ಜೋರಾಯಿತೇ ವಿನಃ ಮುಗಿಯುವ ಅಂದಾಜು ಕಾಣದ್ದರಿಂದ ಅವಳನ್ನು ಸ್ವಲ್ಪ ಹೊತ್ತು ಹಾಗೆಯೇ ಬಿಡುವುದೇ ಒಳ್ಳೆಯದು ಎಂದುಕೊ೦ಡ ಆದಿಯೇ ಅಲ್ಲಿಂದ ಹೊರಟು ಹೋದ. ಶಾಮಣ್ಣನವರು ಮಾತ್ರ ಅವರ ಮಾಮೂಲಿ ಮುಗುಳ್ನಗೆ ಬೀರುತ್ತಲೇ ಇದ್ದರು. 

ಇವರೆಲ್ಲರ ಈ ತೆರನ ಉತ್ಸಾಹದ ನಡುವೆ ತುಸು ಕಡಿಮೆ ಉತ್ಸಾಹದಲ್ಲಿ ಇದ್ದವನೆಂದರೆ ಅಂತ್ಯ ಒಬ್ಬನೇ. ಅದು ಅವನ ಮಾಮೂಲಿ ಅಭ್ಯಾಸ. ಆರಕ್ಕೆ ಏರದೆ ಮೂರಕ್ಕೆ ಇಳಿಯದೆ ಇರುವುದು ಅವನೇ ರೂಢಿಸಿಕೊಂಡ ಅಭ್ಯಾಸ. ಬಹುಶಃ ಚಿಕ್ಕವನಿದ್ದಾಗಲೇ ಅಮ್ಮನಿಗೆ ಬೇಡವಾದವನು ತಾನು ಎನ್ನುವ ಭಾವನೆ ಮನಸ್ಸಿನಲ್ಲಿ ಹೊಕ್ಕು ಆಳದಲ್ಲಿ ಹಾಗೆಯೇ ಕುಳಿತದ್ದೂ ಇರಬಹುದು. ಅದು ಬೇರೆ ಮಾವನ ಮನೆಯಲ್ಲಿ ಬೆಳೆದವನು. ಅವರು ಎಷ್ಟೇ ಪ್ರೀತಿ ವಿಶ್ವಾಸ ತೋರಿಸಿದರೂ ಅದು ತಂದೆ ತಾಯಂದಿರ ಪ್ರೀತಿಗೆ ಸಮನಾದೀತೇ. ಅದರಿಂದಲೇ ಅವನಲ್ಲಿ ಈ ತೆರನ ಪ್ರವರ್ತಿ ಬೆಳೆದು ಬಂದದ್ದೂ ಇರಬಹುದು.

ಅವನಿಗೆ ಸಂತೋಷವಿಲ್ಲ ಎಂದಲ್ಲ. ಆದರೆ ಉಳಿದವರಂತೆ ತೋರಿಸಿಕೊಳ್ಳಲಾರ. ವಾರಾಂತ್ಯಕ್ಕೆ ಮನೆಗೆ ಬಂದವನೂ ಅಷ್ಟೆ. ತಂದೆ ತಾಯಿಯರೊಂದಿಗೆ ಮಾಮೂಲಿ ಮಾತುಗಳು. ಅವರೇ ಹೊಗಳಿದಾಗಲೂ ಯಾವುದೇ ಏರಿಳಿತವಿಲ್ಲದ ಧ್ವನಿಯಲ್ಲಿನ ಉತ್ತರ. ಅಮ್ಮನೇ ಕೇಳಿದಳು ‘ಅಲ್ಲ ನಾವೆಲ್ಲ ಇಷ್ಟೊಂದು ಖುಶಿಯಲ್ಲಿದ್ದೀವಿ. ನಿನಗೆ ಸಂತೋಷ ಆಗ್ತಾ ಇಲ್ಲವೇನೋ…’ ಮಾತಿನ ಕೊನೆಯಲ್ಲಿ ಆಕೆಯ ಧ್ವನಿಯೂ ತುಸು ಕುಗ್ಗಿತ್ತು. ಮನದಾಳದಲ್ಲಿ ಹುದುಗಿದ್ದ ಅಪರಾಧೀ ಭಾವವೂ ಇರಬಹುದು. ಅದು ಅಂತ್ಯನ ಮನಸ್ಸಿಗೆ ಹೊಳೆದೇ ಬಿಟ್ಟಿತೇನೋ. `ಇಲ್ಲ ಅಮ್ಮ.. ನೀವೆಲ್ಲ ಇಷ್ಟು ಖುಷಿ ಪಡುವಾಗ ನನಗೆ ಸಂತೋಷ ಆಗದೆ ಇರುತ್ತದೆಯಾ…’. ತರಾತುರಿಯಿಂದ ಹೇಳಿದ. ಅಮ್ಮನಿಗೆ ತುಸು ನೆಮ್ಮದಿ.

। ಇನ್ನು ನಾಳೆಗೆ ।

‍ಲೇಖಕರು Admin

3 July, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading