ಪಿ ಪಿ ಉಪಾಧ್ಯ ಸರಣಿ ಕಥೆ 45 – ಕೊನೆಗೂ ಅಳುವೇ ಅವನ ಸಂಗಾತಿಯಾಯ್ತು…

ಪಿ ಪಿ ಉಪಾಧ್ಯ

ಅಂತೂ ತಂಡದ ಅಮೆರಿಕ ಪ್ರವಾಸ ಯಾರೂ ನಿರೀಕ್ಷಿಸಿರದಷ್ಟು ಯಶಸ್ವಿಯಾಯ್ತು. ಇಲ್ಲಿನವರ ಆಹ್ವಾನವನ್ನು ಸ್ವೀಕರಿಸುವಾಗ, ಮತ್ತೆ ಇಲ್ಲಿಗೆ ಪ್ರಯಾಣಿಸುವಾಗ ಅಷ್ಟೇಕೆ ನ್ಯೂಯಾರ್ಕಿನಲ್ಲಿ ಸುರುವಿನ ದಿನದ ಪ್ರದರ್ಶನವನ್ನು ನೀಡುವಾಗ ಇದ್ದ ಆ ಅಳುಕು ಪೂರ್ತಿಯಾಗಿ ನಶಿಸಿತ್ತು ಅಷ್ಟೇ ಅಲ್ಲ. ಪ್ರಪಂಚದ ಯಾವ ಭಾಗದ ಪ್ರೇಕ್ಷಕರನ್ನೂ ಧೈರ್ಯವಾಗಿ ಎದುರಿಸಬಲ್ಲೆವು ಎನ್ನುವ ಛಾತಿ ಪ್ರತಿಯೊಬ್ಬರಲ್ಲೂ ಮೂಡಿತ್ತು. ಶಾಸ್ತ್ರೀಗಳಿಗಂತೂ ಜೀವನದಲ್ಲೇ ಪ್ರಥಮ ಬಾರಿಗೆ ಇಂತಹ ಯಶಸ್ಸನ್ನು ಕಂಡೆವಲ್ಲ ಎನ್ನುವ ತೃಪ್ತಿ. ಆರಕ್ಕೆ ಹಿಗ್ಗದೆ ಮೂರಕ್ಕೆ ಕುಗ್ಗದೆ ಇರುವ ಪ್ರವರ್ತಿಯನ್ನೇ ರೂಢಿಸಿಕೊಂಡಿದ್ದ ಅಂತ್ಯನೂ ಕಾರ್ಯಕ್ರಮದ ಯಶಸ್ಸಿನಿಂದ ಉತ್ಸಾಹಿತನಾಗಿದ್ದ.

ಎಲ್ಲ ಪ್ರಸಂಗಗಳಲ್ಲೂ ಅವನದ್ದೇ ಪ್ರಮುಖ ಪಾತ್ರ. ಪ್ರಸಂಗವನ್ನು ಸಾರಾಸಗಟಾಗಿ ಹೊಗಳಿದವರೂ ಕೊನೆಯದಾಗಿ ಅಂತ್ಯನ ಪಾತ್ರದ ಬಗ್ಗೆ ಪ್ರತ್ಯೇಕವಾಗಿ ಒಂದೆರಡು ವಿಶೇಷ ಮಾತುಗಳನ್ನು ಹೇಳದೆ ಇರುತ್ತಿರಲಿಲ್ಲ. ಅವನ ವೃಷಸೇನ, ಆಭಿಮನ್ಯು ಮತ್ತು ಕರ್ಣನ ಪಾತ್ರಗಳು ಯಾವತ್ತೂ ಯಾರ ಗಮನದಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಕೆಲವರಂತೂ ಅದನ್ನೇ ಹೇಳುತ್ತಿದ್ದರು. ಶೋದಲ್ಲಿನ ಕೆಲವೊಂದು ಕೊರತೆಗಳು ಎಲ್ಲಾದರೂ ಇದ್ದಿದ್ದರೂ ಅವು ಮುಚ್ಚಿಹೋಗುವಂತಾದದ್ದು ಅಂತ್ಯನ ಪಾತ್ರದಿಂದಾಗಿ ಎಂತಲೂ ಹೇಳಿದ್ದರು. ಇದೆಲ್ಲ ಕೇಳಿದ ಅಂತ್ಯ ನಿಜವಾಗಿಯೂ ಗಾಳಿಯಲ್ಲಿ ತೇಲಬೇಕಿತ್ತು. ಆದರೆ ಅದು ಅವನ ಪ್ರವರ್ತಿಗೆ ಒಗ್ಗುವದಿಲ್ಲ.

ಮೊದಲಿನಿಂದಲೂ ಹಾಗೆಯೇ. ತನ್ನ ಸಂತೋಷವನ್ನು ಎಂದಿಗೂ ಪ್ರದರ್ಶಿಸಿಕೊಳ್ಳದವನು. ಜೊತೆಗೆ ಮನಸ್ಸಿನ ಮೂಲೆಯಲ್ಲಿಯೇ ಕುಳಿತು ಅವನನ್ನು ಹಣಿಯುತ್ತಿದ್ದ ಅಣ್ಣ ಅನಂತನ ಬಾರದಿರುವಿಕೆ. ಅದೇ ಅಣ್ಣನ ಸ್ನೇಹಿತರೆಂದು ಹೇಳಿಕೊಂಡವರು, ಅವನಿದ್ದ ಊರಿನಲ್ಲೇ ತಾವೂ ಇರುವವರೆಂದವರು, ಜೊತೆಯಲ್ಲಿಯೇ ಅವನದೇ ಕಾಲೇಜಿನಲ್ಲಿ ಕಲಿಯುವವರು ತಾವು ಎಂದವರು ಎಲ್ಲ ಬಂದಿದ್ದರು. ಆದರೆ ಅನಂತ ಮಾತ್ರ ಬಂದಿರಲಿಲ್ಲ. ಅದೂ ತನ್ನ ತಮ್ಮನೇ ದೂರ ದೇಶದಿಂದ ಬಂದಿದ್ದಾನೆ ಎಂದರೂ ಬರಲಿಲ್ಲ…

ಯಶಸ್ಸಿನ ಸಂತೋಷವನ್ನು ಪೂರ್ತಿಯಾಗಿ ಆನಂದಿಸಲು ಬಿಡಲಿಲ್ಲ ಆ ಅಣ್ಣ. ಅದಕ್ಕಿಂತ ಹೆಚ್ಚಿನದು ನಾಳೆಗೆ ಊರಿಗೆ ಹೋದ ಮೇಲೆ ಅಮ್ಮ ಕೇಳಿಯೇ ಕೇಳುತ್ತಾಳೆ. `ಅನಂತ ಸಿಕ್ಕಿದ್ದನೇ.. ಅವನಿದ್ದ ಊರಿನಿಂದ ಕೆಲವೇ ಮೈಲುಗಳ ದೂರದಲ್ಲಿ ನಿಮ್ಮ ಆಟವಿದ್ದುದಂತೆ…’ ಎಂದು ಕೇಳಿದರೆ ಏನೆಂದು ಉತ್ತರಿಸುವುದು. ಆಗಲೇ ಶಾಸ್ತ್ರೀಗಳು ಒಂದೆರಡು ಬಾರಿ ಸೂಚ್ಯವಾಗಿ ಕೇಳಿದ್ದಾರೆ… ಹೇಳಿದ್ದಾರೆ. ‘ಯಾಕೆ ಗೆಳೆಯರೆಲ್ಲ ಬಂದರೂ ಅನಂತ ಬರಲಿಲ್ಲ..’ ಎಂದು. ಅವರೂ ಹಾಗೆಯೇ. ಯಾವುದನ್ನೂ ಕೆದಕಿ ಕೇಳುವವರಲ್ಲ. ಅಷ್ಟು ಹೇಳಿ ಸುಮ್ಮನಾಗಿದ್ದರು. ಜೊತೆಗಿದ್ದ ಉಳಿದವರೂ ಒಂದೆರಡು ಸಲ ಆ ಬಗ್ಗೆ ಮಾತಾಡಿಕೊಂಡಿದ್ದರು. ಆದರೆ ಪ್ರದರ್ಶನದ ಯಶಸ್ಸಿನ ಗುಂಗಿನಲ್ಲಿಯೇ ತೇಲಾಡುತ್ತಿದ್ದ ಅವರೂ ಅದಕ್ಕಿಂತ ಮುಂದೆ ಹೋಗಿರಲಿಲ್ಲ. ಅಂತ್ಯ ಮಾತ್ರ ಒಳಗೇ ಅಳುತ್ತಿದ್ದ.

ಕೊನೆಗೂ ಅಳುವೇ ಅವನ ಸಂಗಾತಿಯಾಯ್ತು. ಅನಂತ ಬರಲೇ ಇಲ್ಲ. ವಿಶೇಷ ಕೇಳಿಕೆಯ ಮೇರೆಗೆ ನ್ಯೂಯಾರ್ಕಿನಲ್ಲಿ ನಡೆದ ಎರಡನೇ ಪ್ರದರ್ಶನದ ಎರಡು ದಿನಗಳಲ್ಲೂ ಹಿಂದಿನ ಶೋಗೆ ಬಂದ ಮಂದಿಯೇ ಬಹಳ ಸಂಖ್ಯೆಯಲ್ಲಿ ಬಂದಿದ್ದರು. ಅದರಲ್ಲೂ ಅನಂತನಿರುವ ಊರಿನಿಂದ ಬಂದವರೇ ಹೆಚ್ಚು. ಅವರಲ್ಲಿ ಹೆಚ್ಚಿನವರು ಅನಂತನ ಗುರುತಿನವರು ಮತ್ತು ಸ್ನೇಹಿತರು. ಹಿಂದೆ ಬಂದಾಗ ಆಡಿದ ಮಾತುಗಳನ್ನೇ ಆಡಿದ್ದರು. ಅನಂತ ಯಾವುದೋ ಸಬೂಬು ಹೇಳಿ ಬರದೇ ಉಳಿದ ಎಂದರು. ಅವರೆಲ್ಲರ ಮಾತನಲ್ಲಿಯೂ ಹೇಳಿದ್ದಕ್ಕಿಂತ ಹೇಳದೇ ಇದ್ದುದೇ ಹೆಚ್ಚಿನದು ಎನ್ನುವುದನ್ನು ಅಂತ್ಯ ಗಮನಿಸಿದ್ದ.

ಆ ರಾತ್ರಿಯಿಡೀ ಅಳುತ್ತಲೇ ಇದ್ದ. ಇಬ್ಬರು ಮೂವರು ಇದ್ದ ರೂಮಿನಲ್ಲಿ ಉಳಿದವರಿಗೆ ಗೊತ್ತಾಗ ಬಾರದೆಂದು ಬಃಳ ಪ್ರಯತ್ನಿಸಿದ್ದ. ಆದರೂ ವಯಸ್ಸಿನಲ್ಲಿ ಹಿರಿಯವನಿದ್ದ ಜೊತೆಗಾರನೊಬ್ಬ ಇವನ ದುಃಖವನ್ನು ಗಮನಿಸಿದವ ಒಂದೆರಡು ಬಾರಿ ಇವನನ್ನು ಸಮಾಧಾನಿಸಲು ನೋಡಿದರೂ ತನ್ನ ಮಾತು ಯಾವುದೂ ಫಲಕಾರಿಯಾಗದು ಎನ್ನಿಸಿದಾಗ ಸುಮ್ಮನಾಗಿ ಬಿಟ್ಟ.

ಮಾರನೆಯ ದಿನವೇ ಅವರೆಲ್ಲ ದೇಶಕ್ಕೆ ಹಿಂತಿರುಗುವ ಸಲುವಾಗಿ ತಮ್ಮ ತಮ್ಮ ಸರಕುಗಳನ್ನು ಕಟ್ಟಿಕೊಳ್ಳಲು ತೊಡಗಿದ್ದರು. ಬರುವಾಗ ಇದ್ದುದಕ್ಕಿಂತ ಈಗ ಸಾಮಾನು ಜಾಸ್ತಿಯಾಗಿತ್ತು. ಪ್ರತಿಯೊಂದು ಶೋ ಮುಗಿದ ನಂತರ ಪ್ರೇಕ್ಷಕರು ಕೊಡುತ್ತಿದ್ದ ಬಹುಮಾನಗಳೊಂದಿಗೆ ಊರಿಂದ ಬಂದವರೆoದು ಅಲ್ಲಿನ ಮಂದಿ ಕೊಟ್ಟಿದ್ದ ಉಡುಗೊರೆಗಳು. ಯಾವುದೂ ಬಿಡುವಂತಹುದಲ್ಲ. ಕಷ್ಟಪಟ್ಟು ಕಟ್ಟಿಕೊಂಡಿದ್ದರು. ಅಂತ್ಯ ಮಾತ್ರ ಆ ಬಗ್ಗೆ ಅಂತಹ ಉತ್ಸಾಹ ತೋರಿಸಿರಲಿಲ್ಲ. ನೋಡಿದವರು ಇವನೆಲ್ಲಿಯಾದರೂ ಅವರೆಲ್ಲ ಅಷ್ಟು ಆಸ್ಥೆಯಿಂದ ಕೊಟ್ಟಿದ್ದ ಉಡುಗೊರೆಗಳನ್ನೆಲ್ಲ ಅಲ್ಲಿಯೇ ಬಿಟ್ಟು ಹೋಗುತ್ತಾನೋ ಎಂದು ಅನುಮಾನಿಸುವಷ್ಟು. ಶಾಸ್ತ್ರೀಗಳೇ ಹೇಳಬೇಕಾಯ್ತು. ಕೊನೆಗೆ ಶಾಸ್ತ್ರೀಗಳ ಆದೇಶದ ಮೇರೆಗೆ ಅವನ ರೂಮಿನವರೇ ಅವನ ಎಲ್ಲ ಉಡುಗೊರೆಗಳನ್ನು ಪ್ಯಾಕ್ ಮಾಡಿದರು.

ಅಷ್ಟು ಮಂದಿಯಲ್ಲಿ ಅಂತ್ಯನದ್ದೇ ದೊಡ್ಡ ಪ್ಯಾಕು. ಎಲ್ಲ ಕಡೆ ಮೆಚ್ಚುಗೆ ಮತ್ತು ಬಹುಮಾನದ ಸುರಿಮಳೆ ಸುರಿಯುತ್ತಿದ್ದದು ಅಂತ್ಯನಿಗೇ. ಹಾಗಾಗಿ. ಉಳಿದವರೆಲ್ಲ ಈಚೆಗೆ ಬಂದು ತಮಗೆ ದೊರೆತ ಬಹುಮಾನಗಳ ಪ್ಯಾಕೆಟನ್ನು ಬಿಡಿಸಿ ಒಬ್ಬರಿಂದೊಬ್ಬರಿಗೆ ತೋರಿಸಿಕೊಳ್ಳುತ್ತ ಭಾರತದಲ್ಲಾದರೆ ಇದಕ್ಕೆ ಕನಿಷ್ಟ ಇಷ್ಟು ರೂಪಾಯಿಗಳಾಗಬಹುದು ಎಂದು ಹೇಳುತ್ತ ತಮ್ಮ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರೆ ಅಂತ್ಯ ಮಾತ್ರ ಮೌನಿಯೇ.

ಅಷ್ಟೆಲ್ಲ ದುಃಖ ಒಳಗಿಟ್ಟುಕೊಂಡೂ ವೇಷ ಹಾಕಿಕೊಂಡು ಸ್ಟೇಜನ್ನು ಏರಿದನೆಂದರೆ ಎಲ್ಲವನ್ನೂ ಮರೆತು ಬಿಡುತ್ತಿದ್ದ. ಮನಸ್ಸಿನೊಳಗಿನ ನೋವಿನ ಕುರುಹೂ ಇರುತ್ತಿರಲಿಲ್ಲ. ಆಗೆಲ್ಲ ಅವನು ಅಂತ್ಯನಲ್ಲ. ಹಾಕಿದ ವೇಷ ನಟಿಸುವ ಪಾತ್ರದಲ್ಲಿಯೇ ಲೀನನಾಗಿಬಿಡುತ್ತಿದ್ದ. ಹಾಗಾಗಿಯೇ ಪ್ರತೀ ಶೋದಲ್ಲಿಯೂ ಅಷ್ಟೊಂದು ಹೊಗಳಿಕೆ, ಮೆಚ್ಚುಗೆ ಮತ್ತು ಬಹುಮಾನಗಳು. ಪುನಃ ಅವನು ಅಂತ್ಯನಾಗುವುದು ಚೌಕಿಗೆ ಮರಳಿ ವೇಷ ಕಳಚಿದಾಗಲೇ.

| ಇನ್ನು ನಾಳೆಗೆ |

‍ಲೇಖಕರು Admin

June 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: