ಪಿ ಪಿ ಉಪಾಧ್ಯ ಅಂಕಣ- ಯಾರು ಲಂಚ ಕೋರರು…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

15

ಯಾರು ಲಂಚ ಕೋರರು

ಲಂಚ ಕೊಟ್ಟು ಮನುಷ್ಯರನ್ನು ಲಂಚಕೋರರನ್ನಾಗಿ ಮಾಡಿ ಮತ್ತೆ ಅವರು ನಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಹಾಗೆ ಮಾಡುವ ಕಲೆ ಭಾರತೀಯರಾದ ನಮಗೆ ಕರತಲಾಮಲಕ. ಏನೇ ಕೆಲಸವಿದ್ದರೂ ಯಾರಿಂದಲೇ ಮಾಡಿಸುವುದಿದ್ದರೂ `ದುಡ್ಡು ಬಿಸಾಕಿದರೆ ಆಯ್ತು’ ಎನ್ನುವ ಉಡಾಫೆಯ ಮಾತು ನಮ್ಮಲ್ಲಿ ಸರ್ವೇ ಸಾಮಾನ್ಯ.

ಇತ್ತೀಚಿನ ಸರ್ವೆಯೊಂದರ ಪ್ರಕಾರ ಪ್ರಪಂಚದ ಲಂಚಗುಳಿ ದೇಶಗಳಲ್ಲಿ ಭಾರತ ತನ್ನ ಸ್ಥಾನವನ್ನು ಅಭಿವೃದ್ಧಿಪಡಿಸಿಕೊಂಡಿದೆಯಂತೆ. ಅಂದರೆ ಲಂಚಗುಳಿತನ ಹೆಚ್ಚಾಗಿದೆ. ಅದರಲ್ಲೂ ಕರ್ನಾಟಕ ರಾಜ್ಯ ಅಗ್ರಸ್ಥಾನದಲ್ಲಿದೆಯೆಂದು ಅದೇ ಸರ್ವೆ ಹೇಳುತ್ತದೆ. ಅಪ್ಪಟ ಭಾರತೀಯನಾದ ನಾನು ಅಚ್ಚ ಕನ್ನಡಿಗನೂ ಹೌದು ಎಂದ ಮೇಲೆ ಅದಕ್ಕೆ ಹೊರತಾಗಲಿಕ್ಕುಂಟೇ? ಲಂಚ ತೆಗೆದು ಕೊಳ್ಳುವುದರಲ್ಲಿ ಅಲ್ಲ. ಲಂಚ ಕೊಡುವುದರಲ್ಲಿ. ಕೊಟ್ಟು ಕೈ ಸುಟ್ಟುಕೊಳ್ಳುವುದರಲ್ಲಿ.

ಪ್ರತಿ ಐದಾರು ವರ್ಷಗಳಿಗೊಮ್ಮೆ ಇಂಗ್ಲೆಂಡಿನಲ್ಲಿ ಎಲ್ಲರೂ ಮನೆ ರಿಪೇರಿ ಮಾಡಿಸುತ್ತಾರೆ. ರಿಪೇರಿಯ ನಂತರ ಹೆಚ್ಚು ಕಡಿಮೆ ಹೊಸ ಮನೆಯಂತೆಯೇ ಕಂಗೊಳಿಸುವಂತೆ ಮಾಡುತ್ತಾರೆ. ಆದರೆ ನಾವಿದ್ದ ಮನೆ ರಿಪೇರಿಗೆ ಭಾರತದಲ್ಲಿದ್ದ ನಮ್ಮ ಹೆಡ್ಡಾಫೀಸಿನಿಂದ ಪರವಾನಗಿ ಬರಬೇಕಿತ್ತಾದ್ದರಿಂದ ಮತ್ತು ಆ ಪರವಾನಗಿಯ ಬಗ್ಗೆ ತಮ್ಮ ಸಲಹೆ ಕೊಡಬೇಕಾಗಿದ್ದ ಮಂದಿ ಪ್ರತಿಯೊಂದು ಪೌಂಡನ್ನೂ ರೂಪಾಯಿಗೆ ಪರಿವರ್ತಿಸಿ ಅದರ ಅಗಾಧತೆಯನ್ನು ಕಂಡು ಬೆಚ್ಚಿ ಬಿದ್ದು ಮತ್ತು ಆ ರಿಪೇರಿಯ ಹಣದಲ್ಲಿ ಇಂಡಿಯಾದಲ್ಲಿ ಒಂದು ಬಂಗಲೆಯನ್ನೇ ಖರೀದಿಸಬಹುದೆನ್ನುವ ಸತ್ಯವನ್ನು ಕಂಡುಕೊಂಡವರಂತೆ ಆ ಪೇಪರನ್ನು ಮೇಲೆ ಕೆಳಗೆ ಎಳೆದಾಡಿ ಕತ್ತರಿ ಪ್ರಯೋಗದಿಂದ ಮಣಿಸಿ ಕೊನೆಗೊಮ್ಮೆ ಎಲ್ಲ ಕೊಕ್ಕೆಗಳನ್ನು ಮೀರಿ ಒಪ್ಪಿಗೆ ಪಡೆದು ಬರುವಾಗ ಇಲ್ಲಿನ ಮನೆ ಎರಡನೇ ಬಾರಿಗೆ ರಿಪೇರಿಗೆ ಒಡ್ಡಿಕೊಳ್ಳುವ ಹಂತವನ್ನೂ ಕಳೆದಿತ್ತು. ಅಂತೂ ಕಂಟ್ರಾಕ್ಟರನೊಂದಿಗೆ ನಾಲ್ಕು ತಿಂಗಳುಗಳ ಕಾಲ ಜಗ್ಗಾಡಿ ರಿಪೇರಿ ಮುಗಿದಾಗ ಮನೆ ಹೊಸ ಮನೆಯಂತೆಯೇ ಕಂಗೊಳಿಸುತ್ತಿತ್ತು.

ಆ ಬಿಳಿಯ ಕಾರ್ಪೆಂಟರುಗಳು, ನೆಲಕ್ಕೆ ಕಾರ್ಪೆಟ್ ಹಾಕುವವರು ಎಲ್ಲ ಶಿಸ್ತಿನ ಸಿಪಾಯಿಗಳೇ. ಬೆಳಿಗ್ಗೆ ಎಂಟು ಗಂಟೆಗೆ ಕೆಲಸಕ್ಕೆ ಹಾಜರಾದರೆಂದರೆ ನಮ್ಮ ಗಡಿಯಾರವನ್ನು ನಾವು ಸರಿ ಪಡಿಸಿಕೊಳ್ಳಬೇಕು. ಅಷ್ಟು ಕರಾರುವಾಕ್ಕು. ಮತ್ತೆ ಕೆಲಸ ಪ್ರಾರಂಭಿಸಿದರೆಂದರೆ ನಮ್ಮೂರಿನಲ್ಲಿ ಮೂಗಿಗೆ ಕವಡೆ ಕಟ್ಟಿ ಕೊಂಡು ದುಡಿಯುವುದು ಎನ್ನುತ್ತಾರಲ್ಲ ಹಾಗೆ. ಅತ್ತಿತ್ತ ನೋಡುವುದಿಲ್ಲ. ಹರಟೆ ಹೊಡೆಯುವುದಿಲ್ಲ. ಬೀಡಿ ಸಿಗರೇಟುಗಳಿಗೆ ಟೀ ಗೆ ಎಂದು ಸಮಯ ಹಾಳು ಮಾಡುವುದಂತೂ ದೂರವೇ ಉಳಿಯಿತು. ಲಂಚ್‍ಗೆ ಒಂದರ್ಧ ಗಂಟೆ ವಿರಾಮ. ಮತ್ತೆ ಸಂಜೆ ಐದರ ತನಕ ದುಡಿತ. ಐದಾಯ್ತೆಂದರೆ ಯಾವ ಕೆಲಸ ಎಲ್ಲೆಲ್ಲಿಗೆ ಬಂದಿದೆಯೋ ಅಲ್ಲಲ್ಲೇ ಬಿಟ್ಟು ಹೊರಟುಬಿಡುತ್ತಾರೆ.

ನಾವು ಮನೆಯ ಒಳಗಡೆ ಇದ್ದು ಕೊಂಡೇ ಮನೆ ರಿಪೇರಿ ಮಾಡಿಸ ಹತ್ತಿದ್ದರಿಂದ ನಾವು ತಿಂಡಿ ತಿನ್ನುವಾಗ ಊಟ ಮಾಡುವಾಗ ಅಲ್ಲಿಯೇ ಕೆಲಸ ಮಾಡುತ್ತಿರುತ್ತಿದ್ದ ಅವರನ್ನು ಕೇಳುತ್ತಿದ್ದೆವು. ಮೊದ ಮೊದಲು ಈ ಏಶಿಯಾದಿಂದ ಬಂದ ಜನ ಅದೇನನ್ನು ತಿನ್ನುತ್ತಾರೋ ತಮಗೇನನ್ನು ತಿನ್ನಿಸುತ್ತಾರೋ ಎಂದು ಹಿಂಜರಿದ ಅವರು ಒಮ್ಮೆ ರುಚಿ ನೋಡಿದ ನಂತರ ನಮ್ಮ ಇಡ್ಲಿ ಸಾಂಬಾರನ್ನು ಚಪ್ಪರಿಸಿ ತಿನ್ನಲಾರಂಭಿಸಿದ್ದರು. ಮಸಾಲೆ ದೋಸೆ, ಕೇಸರಿ ಭಾತನ್ನು ಪಟ್ಟಾಗಿ ಹೊಡೆಯುತ್ತಿದ್ದರು.

ದೊಡ್ಡ ದೊಡ್ಡ ಬೌಲ್‍ಗಳಲ್ಲಿ ತುಂಬಿಸಿಕೊಟ್ಟ ಸಾಂಬಾರನ್ನು ಕ್ಷಣಾರ್ಧದಲ್ಲಿ ಖಾಲಿ ಮಾಡಿ ಮತ್ತೆ ಮುಂದೆ ನೀಡುತ್ತಿದ್ದರು. ಅವರು ತಿನ್ನುತ್ತಿದ್ದ ರೀತಿ ಅವರ ನೀತಿಗೆ ವಿರುದ್ಧವಾಗಿ ಸಶಬ್ಧವಾಗಿ ಚಪ್ಪರಿಸುತ್ತಿದ್ದ ರೀತಿ ನಮ್ಮ ಮಕ್ಕಳಿಗೆ ತಮಾಷೆಯಾಗಿ ಕಾಣುತ್ತಿತ್ತು. ಅಂತೂ ಮಿಕಗಳು ನಮ್ಮ ಬಲೆಗೆ ಬಿದ್ದವು. ಮೂಲ ಪ್ಲಾನಿನಲ್ಲಿದ್ದ ಕೆಲ ಬದಲಾವಣೆಗಳನ್ನು ಕಂಟ್ರಾಕ್ಟರರವರೆಗೆ ಒಯ್ಯದೇ ಮಾಡಿಸಿಕೊಳ್ಳಬಹುದು. ಅದೂ ಕಿಚನ್‍ನಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾಡಿಕೊಳ್ಳಬಹುದು ಎಂದು ಕೇಳಿದರೆ `ಊಂ…ಹೂಂ..ಅದೆಲ್ಲ ಹೇಗಾಗುತ್ತದೆ…ಅಪ್ರೂವ್ಡ್ ಪ್ಲಾನ್ ಬಿಟ್ಟು ಹೋಗುವ ಹಾಗಿಲ್ಲ’ಎಂದು ಖಡಾ ಖಂಡಿತವಾಗಿ ಹೇಳಿದ್ದೇ ಅಲ್ಲದೆ ಪ್ಲಾನಿನಿಂದ ಒಂದಿಂಚೂ ಸರಿದಿರಲಿಲ್ಲ. ಅಷ್ಟೇ ಅಲ್ಲ ಒಂದು ಮೊಳೆಯನ್ನು ಹೆಚ್ಚಾಗಿ ಹೊಡೆಯಲು ಒಪ್ಪಿರಲಿಲ್ಲ

.

ಮನೆ ರಿಪೇರಿಯೆಲ್ಲ ಮುಗಿದ ನಂತರ ಮನೆಗೆ ಬಗ್ರ್ಲರ್ ಅಲಾರ್ಮ್ ಹೊಂದಿಸಲು ಇನ್ನೊಬ್ಬ ಬಂದಿದ್ದ. ಬೆಳಿಗ್ಗೆ ಬೇಗ ಬಂದ ಅವನೂ ನಮ್ಮ ಬ್ರೇಕ್‍ಫಾಸ್ಟಿನಲ್ಲಿ ಜತೆಯಾಗಿದ್ದ. ಮೊದಲ ದಿನವೇ ನಮ್ಮ ಇಡ್ಲಿ ಬೋಂಡ ಸಾಂಬಾರನ್ನು ಚಪ್ಪರಿಸಿದ್ದ. ಎರಡೂ ಕೈಗಳಲ್ಲಿ ಬೌಲನ್ನು ಎತ್ತಿ ಹಿಡಿದು ಹದ ಬಿಸಿಯಿದ್ದ ಆ ಸಾಂಬಾರನ್ನು ಸಶಬ್ಧವಾಗಿ ಅವನು ಕುಡಿಯುತ್ತಿದ್ದ ರೀತಿ ನಮಗೆ ನಗು ತರಿಸಿದ್ದರೂ ಶಿಷ್ಟಾಚಾರಕ್ಕೆ ಸುಮ್ಮನಿದ್ದೆವು. ಬಹಳ ಸಂತೋಷದಿಂದ ನಮ್ಮೊಂದಿಗೆ ಚನ್ನಾಗಿ ಮಾತಾಡುತ್ತಿದ್ದ ಅವನು ಕೆಲಸ ಪ್ರಾರಂಭ ಮಾಡಿದಾಗ ನಮ್ಮ patio ಬಾಗಿಲಿನ ಹತ್ತಿರ ಒಂದು extra point ಹಾಕು. ಮೆಟೀರಿಯಲ್‍ಗಳನ್ನು ನಾವು ಕೊಡುತ್ತೇವೆ. ಎಂದರೂ ಸುತರಾಂ ಒಪ್ಪಿರಲಿಲ್ಲ. ಅದು ಅವರ ಶಿಸ್ತು ಮತ್ತು ಲಾಯಲ್ಟಿ.
ಇನ್ನೊಂದು ಘಟನೆ ನೆನಪಾಗುತ್ತದೆ. ಅದು ಕಾರ್ ಪಾರ್ಕ್ ಮಾಡುವುದಕ್ಕೆ ಸಂಬಂಧಿಸಿದ್ದು.

ನಮ್ಮ ಮನೆಯೆದುರಿಗೇ ಡ್ರೈವ್ ವೇಗೆ ಅಡ್ಡವಾಗಿ ಕಾರು ನಿಲ್ಲಿಸಿದರೆ ಮನೆ ರಿಪೇರಿಯ ಎಸ್ಟಿಮೇಟ್ ಮಾಡಲು ನನ್ನ ಕಾರಿನಲ್ಲೇ ಬಂದ ಆ ಬಿಳಿಯ ಎಂಜಿನಿಯರ್ ಕಾರಿನಿಂದ ಕೆಳಗಿಳಿಯಲು ಒಪ್ಪಿರಲೇ ಇಲ್ಲ. `ನನ್ನದೇ ಮನೆಯಪ್ಪ. ಬೇರೆ ಯಾರೂ ಬರುವುದಿಲ್ಲ ಇಲ್ಲಿಗೆ’ ಎಂದರೆ `ಹಾಗಿದ್ದರೆ ಕಾರನ್ನು ಒಳಗೆ ತೆಗೆದುಕೊಂಡು ಹೋಗಿ ನೀಟಾಗಿ ಪಾರ್ಕ್ ಮಾಡಿ. ಹೀಗೆ ಡ್ರೈವ್ ವೇಗೆ ಅಡ್ಡಲಾಗಿ ನಿಲ್ಲಿಸುವುದು ತಪ್ಪು’ ಎಂದಿದ್ದವ ಕಾರನ್ನು ಸರಿಯಾದ ಜಾಗದಲ್ಲಿ ನಿಲ್ಲಿಸಿದ ಮೇಲೆಯೇ ಕೆಳಗಿಳಿದದ್ದು.

ನೋ ಪಾರ್ಕಿಂಗ್ ಜಾಗದಲ್ಲಿ ಕಾರು ಪಾರ್ಕ್ ಮಾಡಿದರೆ ಅಲ್ಲಿ ದೊಡ್ಡ ಮೊತ್ತದ ದಂಡವನ್ನೇ ಹಾಕುತ್ತಾರೆ. ಅಂತಹ ತಪ್ಪು ಮಾಡಿದವರು ಯಾರೂ ದಂಡ ಕೊಡಲು ತಕರಾರು ಮಾಡುವುದೂ ಇಲ್ಲ. ಉಸಿರೆತ್ತದೆ ತಾವು ಮಾಡಿದ ತಪ್ಪನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಕೇಳಿದಷ್ಟು ದಂಡ ತೆತ್ತು ರಶೀದಿ ಪಡೆಯುತ್ತಾರೆ. ಅಲ್ಲಿ ಹೆಚ್ಚಿನ ಕಡೆಗಳಲ್ಲಿ `ನೋ ಪಾರ್ಕಿಂಗ್’ ಬೋರ್ಡೇನೂ ಇರುವುದಿಲ್ಲ. ರಸ್ತೆಯ ಅಂಚಿಗೆ ಉದ್ದಕ್ಕೂ ಹಳದಿಯ ಪಟ್ಟಿಯಿದ್ದರೆ ಅದರರ್ಥ ನೋ ಪಾರ್ಕಿಂಗ್. ಎರಡೆರದು ಹಳದಿ ಪಟ್ಟಿಗಳಿದ್ದರೆ ಕ್ಷಣ ಮಾತ್ರವೂ ಅಲ್ಲಿ ವಾಹನಗಳಾನ್ನು ನಿಲ್ಲಿಸುವ ಹಾಗಿಲ್ಲ. ಡ್ರೈವಿಂಗ್ ಪಾಠ ತೆಗೆದುಕೊಳ್ಳುವಾಗ ಇವೆಲ್ಲವನ್ನೂ ಕಲಿತುಕೊಳ್ಳಬೇಕು ಮತ್ತು ಮುಂದೆ ಅವನ್ನು ಪಾಲಿಸಲೂ ಬೇಕು. ಯಾವ ಪ್ರದೇಶದಲ್ಲಿ ಎಷ್ಟು ಸ್ಪೀಡಾಗಿ ಗಾಡಿ ಓಡಿಸಬೇಕು, ಯಾವ ಚಿಹ್ನೆಗೆ ಏನು ಅರ್ಥ ಮತ್ತು ಎಲ್ಲೆಲ್ಲಿ ವಾಹನ ನಿಲ್ಲಿಸಬೇಕು ಎಂಬುದೆಲ್ಲ ಡ್ರೈವಿಂಗ್ ಪಾಠದ ಭಾಗಗಳು.


ಅಂತಹುದರಲ್ಲಿ ಒಮ್ಮೆ ಅರ್ಜಂಟ್ ಇದ್ದುದರಿಂದ ಒಂದು ದೊಡ್ಡ ಅಂಗಡಿಯ ಮುಂದಿನ ರಸ್ತೆಯ ಬದಿಯಲ್ಲಿ ಕಾರು ನಿಲ್ಲಿಸಿ ಒಳ ಹೋಗಿದ್ದೆ ಕೂಡಲೇ ಬರುತ್ತೇನಲ್ಲ ಎಂದು. ಮನೆಯ ಹತ್ತಿರವೇ ಇದ್ದುದರಿಂದ ಅಲ್ಲಿನ ಪಾರ್ಕಿಂಗ್ ಗಾರ್ಡ್‍ಗಳೆಲ್ಲ ಮುಖ ಪರಿಚಯದವರೇ ಎನ್ನುವ ಭಂಡತನ ಬೇರೆ. ಅಂಗಡಿಯ ಕೆಲಸ ಮುಗಿಸಿ ಹೊರಬರುವಾಗ ಯೂನಿಫಾರ್ಮ್ ತೊಟ್ಟ ಗಾರ್ಡ್ ಒಬ್ಬ ಮುಗುಳ್ನಗು ನಗುತ್ತ ನಿಂತಿದ್ದ. ಒಮ್ಮೆಗೆ ಎದೆ ಧಸಕ್ ಎಂದರೂ ಪರಿಚಯದ ಮುಖ. ಮುಗುಳ್ನಗು ಬೇರೆ ನಗುತ್ತಿದ್ದಾನೆ ಎಂದುಕೊಂಡು ಸುಧಾರಿಸಿಕೊಳ್ಳುತ್ತಾ ಚೀಲದಲ್ಲಿಂದ ಒಂದು ಚಾಕೋಲೇಟ್ ಬಾರ್ ಮತ್ತು ಕೋಕ್ ಕ್ಯಾನ್ ಕೊಟ್ಟಿದ್ದೆ.

ಥ್ಯಾಂಕ್ಸ್ ಹೇಳಿ ಕೋಕ್ ಹೀರಲು ತೊಡಗಿದವನೊಂದಿಗೆ ಹವೆಯ ವಿಷಯ ಮಾತನಾಡಿ ಕೆಲ ನಿಮಿಷಗಳ ನಂತರ ‘ಗುಡ್ ಬೈ’ಎಂದು ಹೇಳಿ ಕಾರಲ್ಲಿ ಕುಳಿತಿದ್ದೆ. ಇನ್ನೇನು ಕಾರನ್ನು ಸ್ಟಾರ್ಟ್ ಮಾಡಬೇಕು..ತೆರೆದಿದ್ದ ಗ್ಲಾಸಿನೊಳಗೆ ಕೈ ಚಾಚಿ ಟಿಕೆಟ್ ಒಂದನ್ನು ನೀಡಿದ್ದ. `ಇದು ನೋ ಪಾರ್ಕಿಂಗ್ ವಲಯ. ನೀವಿಲ್ಲಿ ಕಾರ್ ಪಾರ್ಕ್ ಮಾಡಿದ್ದೀರಿ. ಒಂದು ವಾರದೊಳಗೆ ನಮ್ಮ ಆಫೀಸಿನಲ್ಲಿ ಕಟ್ಟಿದರೆ ಇಪ್ಪತ್ತು ಪೌಂಡುಗಳು ತಡಮಾಡಿದರೆ ನಲ್ವತ್ತು ಪೌಂಡುಗಳಷ್ಟು ದಂಡವನ್ನು ತೆರಬೇಕು’ ಎಂದು ಬರೆದಿತ್ತಲ್ಲಿ. ಕಂಪ್ಯೂಟರ್ ರಶೀದಿ ಅದು ಮತ್ತು ಅದರ ಸಹ ಪ್ರತಿ ಅದಾಗಲೇ ಅವನ ಆಫೀಸಿನಲ್ಲಿ ಪ್ರಿಂಟಾಗಿ ದಾಖಲೆಯಾಗಿರುತ್ತದೆ. ಅವನೊಬ್ಬ ಖಾಸಗಿ ಕಂಟ್ರಾಕ್ಟರನ ಕೈ ಕೆಳಗೆ ಕೆಲಸ ಮಾಡುವ ವ್ಯಕ್ತಿ. ಆದರೂ ಆಳರಸರಿಗೆ ಅಷ್ಟು ವಿಧೇಯರು!

ಕೆಲ ವರ್ಷಗಳ ಹಿಂದೆ ಚೆನ್ನೈನ ಪ್ಯಾರಿಸ್ ಪ್ರದೇಶದಲ್ಲಿ ರಾತ್ರಿ ಸುಮಾರು ಒಂಭತ್ತು ಗಂಟೆಯ ಹೊತ್ತಿಗೆ ಒನ್ ವೇಯಾಗಿದ್ದ ರಸ್ತೆಯ ಮೂಲಕ ರಾತ್ರಿಯ ಹೊತ್ತಲ್ಲವೇ ಎಂದು ಕೇವಲ ಹತ್ತೇ ಮೀಟರ್ ದೂರದಲ್ಲಿದ್ದ ಮೈನ್ ರೋಡನ್ನು ಪ್ರವೇಶಿಸಿದ್ದೆ. ಅದೆಲ್ಲಿ ಅಡಗಿ ಕುಳಿತಿದ್ದನೋ ಆ ದೊಡ್ಡ ಮೀಸೆಯ ಟ್ರಾಫಿಕ್ ಪೋಲೀಸ್ ಗಬಕ್ಕನೇ ನಡು ರಸ್ತೆಯಲ್ಲಿ ಪ್ರತ್ಯಕ್ಷನಾಗಿ ನನ್ನನ್ನು ತಡೆದಿದ್ದ ಮತ್ತು “ಒನ್ ವೇನಲ್ಲಿ ಬಂದಿದ್ದೀರಿ …. ತೆಗೆಯಿರಿ ….. ತೆಗೆಯಿರಿ ಹತ್ತು ರೂಪಾಯಿ” ಎಂದಿದ್ದ. ಮರು ಮಾತನಾಡದೇ ಹತ್ತರ ನೋಟನ್ನು ತುರುಕಿದರೆ ಸೆಲ್ಯೂಟ್ ಹೊಡೆದು ದಾರಿ ಬಿಟ್ಟಿದ್ದ.

ಬೆಂಗಳೂರಿನಲ್ಲಿ ಬಿಸ್ಸೀ ರಸ್ತೆಯೊಂದರಲ್ಲಿ ಏನು ಮಾಡುವುದಕ್ಕೂ ತೊಚದೆ ಒಂದೇ ಸಮನೆ ಹೊಡೆದುಕೊಳ್ಳುತ್ತಿದ್ದ ಸೆಲ್ ಫೋನನ್ನು ಎತ್ತಿಕೊಂಡಿದ್ದೆ. ಸಂಜೆಯ ಟ್ರಾಫಿಕ್. ಬಹಳ ನಿಧಾನವಾಗಿ ಚಲಿಸುತ್ತಿತ್ತು. ಮಾತು ಮುಗಿಸಿ ಇನ್ನೇನು ಫೋನ್ ಕೆಳಗಿಡಬೇಕು. ಎಲ್ಲಿಂದಲೋ ಪ್ರತ್ಯಕ್ಷನಾದ ಪೋಲೀಸು ಪೇದೆ `ಬದಿಗೆ ಬನ್ನಿ ಸಾರ್. ನಮ್ಮ ಸಾಹೇಬರು ಆವಾಗಿನಿಂದ ನಿಮ್ಮನ್ನು ಗಮನಿಸುತ್ತಲೇ ಬರುತ್ತಿದ್ದಾರೆ…. ರಶೀದಿ ಬೇಕೆಂದರೆ ಮುನ್ನೂರು ಕೊಡಿ. ಬೇಡವೆಂದರೆ ಎಷ್ಟಾದರೂ ಕೊಡಿ…..’ ಚರ್ಚೆಯ ನಿಷ್ಫಲತೆಯನ್ನು ಯಾವತ್ತೋ ಕಂಡುಕೊಂಡಿದ್ದ ನಾನು ಸಿಕ್ಕಿದಷ್ಟನ್ನು ಅವನ ಕೈಗೆ ತುರುಕಿ ಅಲ್ಲಿಂದ ಜಾರಿಕೊಂಡಿದ್ದೆ.

ಇತ್ತೀಚೆಗಷ್ಟೆ ಡ್ರೈವಿಂಗ್ ಕಲಿತಿರುವ ನನ್ನ ಮಗ ನೂರರ ನೋಟೊಂದನ್ನು ಯಾವಾಗಲೂ ಎದುರುಗಡೆ ಜೇಬಿನಲ್ಲಿ ಇಟ್ಟುಕೊಂಡೇ ಡ್ರೈವಿಂಗ್ ಹೊರಡುತ್ತಾನೆ. ಇದಕ್ಕೆ ಬೇರೆ ಟಿಪ್ಪಣಿಯ ಅಗತ್ಯವಿದೆಯೇ?

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Avadhi

March 6, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

ಶ್ರೀನಿವಾಸ ಪ್ರಭು ಅಂಕಣ: ಅನಿರುದ್ಧನ ‘ಜಾಮಿಂಗ್ ಸೆಷನ್ಸ್’ ಮತ್ತು ‘ಸಾಮಿ’..

ಶ್ರೀನಿವಾಸ ಪ್ರಭು ಅಂಕಣ: ‘ನೃತ್ಯ ಭೂಷಣ’ ಎಂಬ ಗರಿ ಮುಡಿದ ರಾಧಿಕೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This