ಪಿ ಪಿ ಉಪಾಧ್ಯ ಅಂಕಣ- ಅತಿಥಿ ದೇವೋ ಭವ…

ಬರಹದ ಹಿನ್ನೆಲೆ
1993 ರಿಂದ 1997ರ ವರೆಗೆ ನಾಲ್ಕು ವರ್ಷಗಳ ಕಾಲ ಇಂಗ್ಲೆಂಡಿನಲ್ಲಿ ಭಾರತೀಯ ಜೀವ ವಿಮಾ ನಿಗಮದ ಶಾಖೆಯಲ್ಲಿ ಮಾರಾಟ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುವ ಅವಕಾಶ ಲಭ್ಯವಾಗಿತ್ತು. ವಿಮೆಯ ಮಟ್ಟಿಗೆ ಬಹಳ ಮುಂದುವರಿದಿರುವ ಆ ದೇಶದಲ್ಲಿ ವಿಮೆಯ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದೇ ಅಲ್ಲದೆ ತೀರ ಭಿನ್ನವಾಗಿರುವ ಅಲ್ಲಿನ ಬದುಕಿನ ಬಗ್ಗೆಯೂ ತಿಳಿದುಕೊಳ್ಳುವ ಅವಕಾಶ ದೊರೆಯಿತು. ಅವಧಿ ಮುಗಿಸಿ 1997ರಲ್ಲಿ ನಮ್ಮ ದೇಶಕ್ಕೆ ಹಿಂದಿರುಗಿ ಬಂದಾಗ ಸ್ವಾಭಾವಿಕವಾಗಿಯೇ ಅಲ್ಲಿನ ಅನುಭವದ ಹಿನ್ನೆಲೆ ಇಲ್ಲಿನ ಬದುಕನ್ನು ಮೊದಲಿಗಿಂತ ತುಸು ವಿಭಿನ್ನ ದೃಷ್ಟಿಯಲ್ಲಿ ನೋಡುವಂತೆ ಮಾಡಿತ್ತು.

ಬರವಣಿಗೆಯಲ್ಲಿ ಆಗಲೇ ಎರಡು ಮೂರು ದಶಕಗಳ ಕೃಷಿ ಮಾಡಿದ್ದ ನನಗೆ ಆ ಅನಿಸಿಕೆಗಳನ್ನು ಕೂಡಲೇ ಬರಹ ರೂಪಕ್ಕೆ ಇಳಿಸಬೇಕೆನಿಸಿದರೂ ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿ ಬಂದ ಕಾರಣದಿಂದ ಉಂಟಾದ ಸಮಯದ ಕೊರತೆಯ ಜೊತೆಗೆ ಸಹಜ ಉದಾಸೀನವೂ ಸೇರಿ ಈ ಕೆಲಸ ಮುಂದೆ ಹೋಗುತ್ತಲೇ ಇತ್ತು. ಅನಿಸಿಕೆಗಳು ಬರಹ ರೂಪ ಪಡೆಯಲು ಹತ್ತು ವರ್ಷಗಳೇ ಬೇಕಾದುವು. ಅಂತೂ 2009ನೇ ಇಸವಿಯಲ್ಲಿ ನಾನು ಸರ್ವೀಸಿನಿಂದ ನಿವೃತ್ತಿಯಾಗುವವರೆಗೆ ಕಾಯಬೇಕಾಯ್ತು. 2010 -11ರಲ್ಲೇ ಬರೆದರೂ ಅದನ್ನು ಪ್ರಕಟಿಸುವ ಆತುರವನ್ನೇನೂ ತೋರಿಸದ್ದರಿಂದ ಹಸ್ತಪ್ರತಿ ಹಾಗೆಯೇ ಉಳಿದು ಹೋಗಿತ್ತು. 

12

ಅತಿಥಿ ದೇವೋ ಭವ

ಇಂಗ್ಲಂಡಿನಲ್ಲಿದ್ದಷ್ಟು ದಿನವೂ ನಮ್ಮನ್ನು ತೀರ ಹೆದರಿಸುತ್ತಿದ್ದುದು ಅಪರಿಚಿತ ಅತಿಥಿಗಳ ಆಗಮನ. ಅತಿಥಿಗಳನ್ನು ಆದರಿಸುವುದರಲ್ಲಿ ಸದಾ ಎತ್ತಿದ ಕೈ ಆಗಿದ್ದ ನನ್ನ ಮನೆಯವಳಿಗೆ ನಮ್ಮ ಪರಿಚಯದ, ಸಂಬಂಧದ ಗೆಳೆಯರ ಅತಿಥಿಗಳ ಬಗ್ಗೆ ಚಿಂತೆಯಲ್ಲ. ನಮ್ಮ ಸಂಬಂಧಿಕರು ಯಾರೂ ಬಂದದ್ದೂ ಇಲ್ಲ. ಪರಿಚಯದವರು ಬಂದರೂ `ಹಾಯ್’ ಎಂದು ಹೇಳಿ ಹೋಗುತ್ತಿದ್ದರಷ್ಟೆ. ಗೆಳೆಯರಂತೂ ಬರೀ ಫೋನಿನಲ್ಲೋ ಇಲ್ಲ ಪತ್ರದ ಮೂಲಕವೋ ಅಷ್ಟೆ. ಎಲ್ಲೋ ಹಾಗೆ ಬಂದು ಉಳಿದವರಿದ್ದರೂ ನಮ್ಮೊಂದಿಗಿದ್ದಷ್ಟು ದಿನವೂ ತಾವೊಂದು ಬಂದು ನಮ್ಮನ್ನು ತೊಂದರೆಗೀಡು ಮಾಡಿದೆವೆಂದು ಅಲವತ್ತುಕೊಳ್ಳುತ್ತಲೆ ಊರಿಗೆ ವಾಪಾಸು ಹೋಗಿ ನಮ್ಮ ಉಪಚಾರದ ವೈಖರಿಯನ್ನು ಬಾಯಿ ತುಂಬಾ ಹೊಗಳಿ ಮನಸಾರ ಹರಸಿದವರು.

ನಮ್ಮನ್ನು ಹೆದರಿಸುತ್ತಿದ್ದವರು ಅವರಲ್ಲ. ನನ್ನ ಇಪ್ಪತ್ತೈದು ವರ್ಷಗಳ ಸರ್ವೀಸಿನಲ್ಲಿ ಒಮ್ಮೆಯೂ ಮುಖ ನೋಡದಿದ್ದ ಭಾರತದಲ್ಲಿ ಸಹೋದ್ಯೋಗಿಗಳಾಗಿದ್ದವರ ಮೂಲಕ ಬರುತ್ತಿದ್ದಂತಹ ಅವರ ಸಂಬಂಧೀಕ ಅತಿಥಿಗಳು. ಅತಿಥಿಗಳೂ ಅಷ್ಟೆ. ನಾವೆಂದೂ ಅವರ ಮುಖ ನೋಡಿರುವುದಿಲ್ಲ. ಮುಂದೆಂದೂ ನೋಡುವ ಅವಕಾಶವೂ ಇಲ್ಲ. ನಮ್ಮ ದೊಡ್ಡ ತಪ್ಪೆಂದರೆ ಅವರ ಸಂಬಂಧೀಕರು ಕೆಲಸ ಮಾಡುವ ಸಂಸ್ಥೆಯಲ್ಲಿಯೇ ನಾವು ಕೆಲಸ ಮಾಡುತ್ತಿದ್ದುದು ಮತ್ತು ಆ ಸಂಸ್ಥೆಯ ಲಂಡನ್ ಶಾಖೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದುಕೊಂಡದ್ದು.

ಹೀತ್ರೋ ವಿಮಾನ ನಿಲ್ದಾಣದಲ್ಲಿ ಅವರ ಗುರುತು ಹಿಡಿದು ಅವರನ್ನು ಮನೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು ಅವರ ಅಗತ್ಯಗಳೆಲ್ಲವನ್ನೂ ಪೂರೈಸಿ ಅವರಿಗೆ ತೃಪ್ತಿಯಾಗುವವರೆಗೆ ಇಟ್ಟುಕೊಂಡು ಪುನಃ ಅವರನ್ನು ಅದೇ ಹೀತ್ರೋ ನಿಲ್ದಾಣಕ್ಕೆ ತಂದು ವಿಮಾನವನ್ನು ಹತ್ತಿಸಿ ಬರುವುದರಲ್ಲಿ ನನಗೆ ಮತ್ತು ನನ್ನ ಹೆಂಡತಿಗೆ ಸುಸ್ತು. ಈ ತೆರದಲ್ಲಿ ನಮ್ಮ ನಾಲ್ಕು ವರ್ಷದ ಅಲ್ಲಿನ ವಾಸ್ತವ್ಯದಲ್ಲಿ ಕನಿಷ್ಟ ನಲವತ್ತು ಮಂದಿಯಾದರೂ ಬಂದು ನಮ್ಮ ಉಪಚಾರದ, ಔದಾರ್ಯದ ಸುಖವನ್ನು ಉಂಡು ಹೋಗಿರಬಹುದು. ಈಗ ಇಂಡಿಯಾಕ್ಕೆ ತಿರುಗಿ ಬಂದ ನಮ್ಮನ್ನು ಅವರಲ್ಲಿ ಒಬ್ಬರಾದರೂ ಮಾತಾಡಿಸಿದ್ದರೆ ಹೇಳಿ.

ಅವರಲ್ಲಿ ಒಬ್ಬರಂತೂ ಹದಿಮೂರು ದಿನಗಳ ಕಾಲ ನಮ್ಮೊಂದಿಗಿದ್ದು ನನ್ನ ಹೆಂಡತಿ ಮಾಡಿ ಬಡಿಸುತ್ತಿದ್ದ ದಕ್ಷಿಣ ಭಾರತದ ತಿಂಡಿ ತಿನಿಸುಗಳನ್ನು ಸಖತ್ತಾಗಿ ಸಮಯಕ್ಕೆ ಸರಿಯಾಗಿ ಹೊಡೆದಿದ್ದರು. ಒಂದು ದಿನ ಯಾವುದೋ ಕಾರಣಕ್ಕೆ ಬೆಳಿಗ್ಗಿನ ತಿಂಡಿಗೆ ಇಡ್ಲಿ ದೋಸೆಗಳನ್ನು ಮಾಡಲು ಸಾಧ್ಯವಾಗದೆ ಬ್ರೆಡ್ ಟೋಸ್ಟ್ ಮತ್ತು ಬೇಯಿಸಿದ ಬೀನ್ಸ್, ಕಾರ್ನ್ ಫ್ಲೇಕ್ಸ್ ಮತ್ತು ಹಾಲು ಜತೆಗೆ ಒಂದು ಗ್ಲಾಸು ತಾಜಾ ಕಿತ್ತಳೆ ರಸವನ್ನು ಕೊಟ್ಟರೆ ಮುಖವನ್ನು ಸಿಂಡರಿಸಿಕೊಂಡೇ ಬ್ರೇಕ್ ಫಾಸ್ಟ್ ಮುಗಿಸಿದ್ದರು. ಜೊತೆಯಲ್ಲಿ ಶಾಪಿಂಗ್ ಗೆ ಹೋದಾಗ ಇಂಡಿಯಾದಲ್ಲಿ ತಮಗಾಗಿ ಕಾದಿರುತ್ತಿದ್ದ ಮಕ್ಕಳಿಗಾಗಿ ಪಾಶ್ಚಾತ್ಯ ಸಂಗೀತದ ಸಿ ಡಿ ಗಳನ್ನು ಹೊರೆ ಹೊರೆಯಾಗಿ ಪ್ಯಾಕ್ ಮಾಡಿಸಿಕೊಂಡು ಹಣ ಪಾವತಿಸುವ ಕೌಂಟರಿನಲ್ಲಿ ನನ್ನ ಮುಖ ನೋಡಿದ್ದರು.

ಕೈಯಲ್ಲಿ ಕ್ಯಾಷ್ ಇಲ್ಲದ ನಾನು ಕ್ರೆಡಿಟ್ ಕಾರ್ಡಿನಲ್ಲಿ ಪಾವತಿಸಿ ಬಿಲ್ಲು ತೀರಿಸಿದ್ದೆ. ಅಷ್ಟೆಲ್ಲ ಮಾಡಿಸಿಕೊಂಡ ಆಸಾಮಿ ನಾವು ಇಂಡಿಯಕ್ಕೆ ಬಂದ ವರ್ಷದ ನಂತರ ಆಫೀಸು ಕೆಲಸದ ಮೇಲೆ ಬಂದವರು ಅಕಾಸ್ಮಾತ್ತಾಗಿ ಬೆಂಗಳೂರಿನಲ್ಲಿ ಸಿಕ್ಕಿದಾಗ `ಓಹ್..ಯಾವಾಗ ಬಂದಿರಿ ಇಂಡಿಯಾಕ್ಕೆ.. ಎಲ್ಲಿದ್ದೀರಿ ಈಗ..? ಇಷ್ಟು ದಿನಗಳಿಂದ ನೀವು ಎಲ್ಲಿದ್ದೀರೆಂದು ವಿಚಾರಿಸುತ್ತಲೇ ಇದ್ದೆ’ ಎಂದು ಏನೇನೋ ಹೇಳಿ ತಪ್ಪಿಸಿಕೊಂಡಿದ್ದರು. ಮತ್ತೆ ಸಿಕ್ಕಿರಲೇ ಇಲ್ಲ. ಆಗ ಅವರು ಕೆಲಸ ಮಾಡುತ್ತಿದ್ದುದು ನಮ್ಮ ಹೆಡ್ಡಾಫೀಸಿನಲ್ಲಿ ನಮ್ಮ ಪ್ರಮೋಶನ್ ಟ್ರಾನ್ಸ್ಫಾರ್ ಗಳನ್ನು   ನೋಡಿಕೊಳ್ಳುವ ವಿಭಾಗದ ಮುಖ್ಯಸ್ತರಾಗಿ. ಈಗಂತೂ ನಿವೃತ್ತರಾಗಿರುತ್ತಾರೆ. ಇಲ್ಲ ನಮ್ಮ ಸಂಸ್ಥೆಯನ್ನು ಬಿಟ್ಟು ಹೋಗಿರುತ್ತಾರೆ. ಅಂತೂ ನಮ್ಮೊಂದಿಗಿಲ್ಲ ಅಷ್ಟೆ.

ಒಮ್ಮೆಯಂತೂ ಭಾರತ ಸರಕಾರದ ದೊಡ್ಡ ಸಂಸ್ಥೆಯ ಮುಖ್ಯಸ್ತ. ವ್ಯವಹಾರದ ನಿಮಿತ್ತ ಎರಡು ದಿನಗಳ ಕಾಲ ನನ್ನೊಂದಿಗೆ ಕಳೆಯಬೇಕಾಗಿತ್ತು. ಉಳಿದಂತೆ ಅವರ ಸಂಸ್ಥೆ ಮತ್ತು ಭಾರತ ಸರಕಾರ ಅವರ ಖರ್ಚನ್ನು ನಿಭಾಯಿಸುತ್ತಿದ್ದರೂ ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸುವ ಹೊಣೆ ನನ್ನ ಮೇಲೆ ಬಿದ್ದಿತ್ತು. ಇಂಗ್ಲೆಂಡಿಗೆ ಬಂದು ಶೇಕ್ಸ್ ಪಿಯರ್  ಹುಟ್ಟಿದ ಜಾಗವನ್ನು ನೋಡದೆ ಹೋದರೆ ಹೇಗೆ. ಹಳೆಯ ಸ್ಮಾರಕಗಳನ್ನು ಯಥಾವತ್ತಾಗಿ ಇಟ್ಟುಕೊಳ್ಳುತ್ತಾರೆಂಬ ಹೆಗ್ಗಳಿಕೆ ಸಾಧಿಸಿದ ಆ ದೇಶದಲ್ಲಿನ ಇನ್ನೊಂದೆರಡು ಸ್ಮಾರಕಗಳನ್ನಾದರೂ ನೋಡಬೇಕಲ್ಲ. ಆ ಪಟ್ಟಿಯಲ್ಲಿ ಬಕ್ಕಿಂಗ್‍ಹ್ಯಾಮ್ ಪ್ಯಾಲೇಸ್ ಮತ್ತು ವಾರ್ವಿಕ್‍ಶೈರ್ ಫೋರ್ಟ್ ಅಂತೂ ಸೇರಲೇ ಬೇಕು. ಸರಿ ಎರಡು ದಿನಗಳ ಕಾಲ ನನ್ನ ಕಾರಿನಲ್ಲಿ ಅವರನ್ನು ಸುತ್ತಿಸಿದ್ದಾಯಿತು.

ಶುದ್ಧ ಶಾಕಾಹಾರಿಯಾದ ಅವರಿಗೆ ಊಟ ತಿಂಡಿಯನ್ನು ಕೊಡಿಸುವುದೇನೂ ಕಷ್ಟದ ಕೆಲಸವಾಗಿರಲಿಲ್ಲ. ಓಳ್ಳೆಯ ಸೇಬು ಹಣ್ಣುಗಳನ್ನು ಒದಗಿಸಿದರಾಯಿತು. ಆದರೆ ಕಷ್ಟಕ್ಕೆ ಬರುತಿದ್ದುದು ಅವರು ನೋಡ ಹೊರಟ ಜಾಗಗಳಲ್ಲಿ ತೆರಬೇಕಾಗಿದ್ದ ಪ್ರವೇಶ ಶುಲ್ಕ ಕೊಡಬೇಕಾಗಿ ಬಂದಾಗ. ನಮ್ಮ ದೇಶದಿಂದ ಬರುವವರ ಗಮನಕ್ಕೇ ಬರದ ಸಂಗತಿಯದು. ಸ್ವದೇಶದಲ್ಲಿ ಪುಕ್ಕಟೆಯಾಗಿ ಎಂತೆಂತಹ ಜಾಗಗಳನ್ನು ನೋಡಿದ್ದ ಅವರ ಕಲ್ಪನೆಗೂ ಸಿಗದ ವಿಷಯವದು. ಅಲ್ಲಿ ಪ್ರತಿ ಜಾಗದಲ್ಲೂ ಪ್ರವೇಶ ಧನ ಹತ್ತು ಪೌಂಡುಗಳು. ದಿನಕ್ಕೆ ನಾಲ್ಕು ಜಾಗಗಳನ್ನು ನೋಡ ಹೊರಟರೆ ನಲುವತ್ತು ಪೌಂಡು. ಅಷ್ಟು ದೊಡ್ಡ ಅಧಿಕಾರಿಗಳನ್ನು ಅವರಷ್ಟಕ್ಕೆ `ನೀವೇ ನೋಡಿಕೊಂಡು ಬನ್ನಿ’ ಎಂದು ಬಿಡಲಿಕ್ಕಿದೆಯೇ. ಅದೂ ಹೊಸ ಜಾಗದಲ್ಲಿ! ಜೊತೆಯಲ್ಲಿ ನಾನೂ. ನನಗೂ ಟಿಕೆಟ್ಟು. ಒತ್ತಾಯದ ಮಾಘ ಸ್ನಾನ. ಎರಡು ದಿನಗಳಿಗೆ ಇನ್ನೂರು ಪೌಂಡು.

ಶುದ್ಧ ಶಾಕಾಹಾರಿಯಾದ ಅವರಿಗೆ ತಿನ್ನಲೆಂದು ಇಟ್ಟಿದ್ದ ಸೇಬುಗಳೊಂದಿಗೆ ಚಾಕುವೊಂದನ್ನು ಇಟ್ಟಿದ್ದೆ. ಸೇಬುವನ್ನು ಚಪ್ಪರಿಸಿದ ಅವರ ದೃಷ್ಟಿ ಚಾಕುವಿನ ಮೇಲೆ. ಸರಿಯೆಂದು ನೀವೇ ತೆಗೆದುಕೊಳ್ಳಿ ಎಂದಿದ್ದೆ. ನಾವು ಭಾರತಕ್ಕೆ ಹಿಂತಿರುಗಿ ವರ್ಷ ಕಳೆಯುವುದರೊಳಗೆ ಬೆಂಗಳೂರಿನ ದೊಡ್ಡ ಕಾರ್ಯಕ್ರಮವೊಂದಕ್ಕೆ ಮುಖ್ಯ ಅತಿಥಿಯಾಗಿ ಬಂದ ಅವರನ್ನು ಅನಾಯಾಚಿತವಾಗಿ ಭೇಟಿ ಮಾಡುವ ಸಂದರ್ಭ ಬಂದಾಗ ಎರಡು ದಿನಗಳ ಕಾಲ ಒಟ್ಟೊಟ್ಟಿಗೆ ತಿರುಗಿದ್ದನ್ನು ನೆನಪು ಮಾಡಿದರೆ `ವಯಸ್ಸಾಯ್ತು ನೋಡಿ, ಅದಕ್ಕೇ ನೆನಪುಳಿಯುವುದಿಲ್ಲ’ ಎಂದು ಜಾರಿಕೊಂಡಿದ್ದರು. `ಆ ಚಾಕುವಿನ ನೆನಪಾದರೂ ಇದೆಯಾ’ ಎಂದು ನಾನೂ ಕೇಳಲಿಲ್ಲ. ಕುಸುರಿ ಕೆಲಸ ಮಾಡಿದ್ದ ಶುದ್ಧ ಬೆಳ್ಳಿ ಮತ್ತು ದಂತದ ಹಿಡಿಕೆಯ ಆ ಚೂರಿಯ ಬೆಲೆ ಬರೀ ಇಪ್ಪತ್ತಾರು ಪೌಂಡುಗಳು.

ಇನ್ನೊಂದು ಘಟನೆ. ಇಂಡಿಯಾದಲ್ಲಿ ನನಗಿಂತ ತೀರಾ ಮೇಲಿನ ಮಟ್ಟದಲ್ಲಿ ನಮ್ಮದೇ ಸಂಸ್ಥೆಯಲ್ಲಿ ಅಧಿಕಾರಿಯಾಗಿದ್ದವರ ಎಂಜಿನಿಯರ್ ಪುತ್ರನಿಗೆ ಲಂಡನ್ನಿನಲ್ಲಿ ಒಂದೂವರೆ ತಿಂಗಳು ಕೆಲಸ ಮಾಡುವ ಅವಕಾಶ ದೊರಕಿತ್ತು. Action Replay – ನಾಟಕದ ಅಂಕದ ಪುನರಾವರ್ತನೆ. ಹೀತ್ರೋ ವಿಮಾನ ನಿಲ್ದಾಣದಲ್ಲಿ ಕಾದು ಅವನ ಗುರುತು ಹಿಡಿದು ಮನೆಗೆ ಕರೆದು ಕೊಂಡು ಹೋಗಿದ್ದೆ. ಮನೆಯ ಕಾರ್ಪೆಟ್ ಹಾಕಿದ ನೆಲವನ್ನು ನೋಡಿ `ಹಾಲಿನಲ್ಲಾದರೂ ಪರವಾಯಿಲ್ಲ’ ಇದ್ದು ಬಿಡುತ್ತೇನೆ ಎನ್ನುವ ಇಂಗಿತದ ಅವನ ಮಾತುಗಳಿಗೆ ಕಿವಿ ಕೊಡದೆ `ಬೆಡ್ ಎಂಡ್ ಬ್ರೇಕ್‍ಫಾಸ್ಟ್’ ವ್ಯವಸ್ಥೆಯನ್ನು ಮಾಡಿ ಕೊಟ್ಟಿದ್ದೆ.

ರಾತ್ರಿಯ ಊಟ ಬೆಳಿಗ್ಗಿನ ಟೀ, ತಿಂಡಿ ಮತ್ತು ವಾಸ್ತವ್ಯ ಎಲ್ಲ ಸೇರಿ ದಿನಕ್ಕೆ ಐದು ಪೌಂಡುಗಳು ಅಷ್ಟೆ. ಯಾರನ್ನೋ ಬೇಡಿ ಕಾಡಿ ನನ್ನ ವರ್ಚಸ್ಸನ್ನು ಉಪಯೋಗಿಸಿ ಮಾಡಿಕೊಟ್ಟ ಈ ಸೌಕರ್ಯಕ್ಕೆ ಹೊರಗಡೆ ಚಾಲ್ತಿಯಲ್ಲಿದ್ದ ಕನಿಷ್ಟ ದರ ದಿನಕ್ಕೆ ನಲವತ್ತು ಪೌಂಡುಗಳು. ಅಸಮಾಧಾನಾಲ್ಲೇ ಇದ್ದ ಅವನನ್ನು ಮಾರನೇ ದಿನವೇ ಅಲ್ಲಿ ಬಿಟ್ಟು ಬಂದಿದ್ದೆ `ದಿನಕ್ಕೆ ಇನ್ನೂರೈವತ್ತು ಮುನ್ನೂರು ರೂಪಾಯಿ ಎಂದರೆ ಕಷ್ಟವೇ’ ಎಂದು ಗೊಣಗುತ್ತಿದ್ದುದನ್ನು ಕಿವಿಯ ಮೇಲೇ ಹಾಕಿಕೊಳ್ಳದೇ.

ಒಂದೂವರೆ ತಿಂಗಳುಗಳ ಕಾಲ ಸಂಬಳವಲ್ಲದೇ ಅವರ ಖರ್ಚೆಲ್ಲವನ್ನೂ ಭರಿಸಲು ಕಂಪೆನಿಯವರು ಕೊಡುತ್ತಿದ್ದ ಭತ್ತೆಯ ಜತೆಗೆ ಅಲ್ಲಿ ಪ್ಯಾಕು ಮಾಡುವುದಕ್ಕೂ ಜನ ತುಂಬಾ ಜಾಸ್ತಿ ಚಾರ್ಜ್ ಮಾಡುತ್ತಾರೆಂಬುದನ್ನು ಕಂಡು ಕೊಂಡ ಅವ ಕಂಪೆನಿಯ ಸುಮಾರು ಇನ್ನೂರು ಕಂಪ್ಯೂಟರುಗಳನ್ನು ತಾನೇ ಪ್ಯಾಕ್ ಮಾಡಿ ಆ ಹಣವನ್ನೂ ತಾನೇ ತೆಗೆದು ಕೊಂಡಿದ್ದ. ಕಂಪ್ಯೂಟರ್ ಪ್ಯಾಕ್ ಮಾಡುವಂತಹ ನಾಜೂಕಿನ ಕೆಲಸದ ಮಜೂರಿ ಪ್ರತಿ ಕಂಪ್ಯೂಟರಿಗೆ ಮೂವತ್ತು ಪೌಂಡುಗಳು!

ಅಂತಹ ವ್ಯಕ್ತಿ ಇಂಡಿಯಾಕ್ಕೆ ಹಿಂತಿರುಗುವಾಗ ಸಾಮಾನ್ಯವಾಗಿ ಆ ತೆರ ಬರುವ ಎಲ್ಲ ಭಾರತೀಯರಂತೆಯೇ ಚಿನ್ನ ಖರೀದಿಸುವ ಬಯಕೆ ತೋರಿಸಿದ್ದ. ಆ ದೇಶದಲ್ಲಿ ಯಾವುದೇ ಸಾಮಾನನ್ನು ಖರೀದಿಸಿ ಮೂರು ತಿಂಗಳೊಳಗೆ ಅದನ್ನು ದೇಶದಿಂದ ಹೊರಗೊಯ್ದರೆ ಅದರ ಮೇಲೆ ನೀವು ಕೊಟ್ಟಂತಹ ಹದಿನೇಳೂವರೆ ಪರ್ಸೆಂಟ್ ವ್ಯಾಟ್ ಮನ್ನಾ. ನೀವು ಮಾಡಬೇಕಿದ್ದುದಿಷ್ಟೆ. ದೇಶ ಬಿಡುವಾಗ ಏರ್ ಫೋರ್ಟಿನಲ್ಲಿನ ಸುಂಕದವರ ಮೂಲಕ ನೀವು ದೇಶ ಬಿಟ್ಟುದಕ್ಕೆ ಪುರಾವೆ ಪಡೆದು ಮಾರಾಟದ ಮಳಿಗೆಯವರಿಗೆ ಒದಗಿಸಬೇಕು. ಆಗ ಆ ಭಾಗವನ್ನು ಗ್ರಾಹಕನಿಗೆ ವಾಪಾಸು ಮಾಡುತ್ತಾರೆ. ಈ ವ್ಯಾಟ್ ಎನ್ನುವುದು ಚಿನ್ನಕ್ಕೂ ಅನ್ವಯಿಸುತ್ತದೆ.

ನಮ್ಮ ಗುರುತಿನ ವ್ಯಾಪಾರಿಗಳು ನಮ್ಮ ಮೇಲಿನ ನಂಬಿಕೆಯಿಂದ ಆ ವ್ಯಾಟಿನ ಭಾಗವನ್ನು ತೆಗೆದುಕೊಳ್ಳದೆಯೇ ರಶೀದಿ ಕೊಟ್ಟು ಬಿಡುತ್ತಾರೆ. ಆದರೆ ಆ ರಶೀದಿಯನ್ನು ಮಾತ್ರ ವಿಮಾನ ಹತ್ತುವ ಮೊದಲು ಸುಂಕದವನ ಮೊಹರು ಒತ್ತಿಸಿ ಟಪಾಲಿಗೆ ಹಾಕಿ ಹೋಗಬೇಕು. ವ್ಯಾಪಾರಿಗಳು ಸ್ವಂತ ವಿಳಾಸದ ಸ್ಟಾಂಪ್ ಹಚ್ಚಿದ ಲಕೋಟೆಯನ್ನೂ ಕೊಟ್ಟಿರುತ್ತಾರೆ. ನಮ್ಮ ಈ ಮಹಾನುಭಾವರಿಗೂ ಅದೇ ತೆರನ ವ್ಯವಸ್ಥೆಯ ಮೇಲೆ ಚಿನ್ನ ಕೊಡಿಸಿ ಏನೆಲ್ಲ ಜಾಗ್ರತೆ ಹೇಳಿ ಅವರನ್ನು ಇಂಡಿಯಾಕ್ಕೆ ಕಳುಹಿಸುವ ದಿನ ವಿಮಾನ ನಿಲ್ದಾಣಕ್ಕೆ ಕರೆದು ಕೊಂಡು ಹೋಗಿ ಲಗೇಜನ್ನು ಚೆಕ್-ಇನ್ ಮಾಡಿಸಿ ಇವರು ಒಳ ಹೋಗುವ ಮುನ್ನ `ರಶೀದಿ’ ಎಂದರೆ `ಓಹ್.. ಅದು ನನ್ನ ಲಗೇಜಿನ ಜತೆ ಆಗಲೇ ಒಳ ಹೋಗಿ ಬಿಟ್ಟಿದೆ’ ತಣ್ಣಗೆ ಹೇಳುತ್ತ ಒಳ ಹೋಗಿದ್ದ. ನಾನು ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳುವುದೊಂದೇ ಬಾಕಿ. “ಕೊನೇ ಪಕ್ಷ ಊರಿಗೆ ಹೋದ ಮೇಲಾದರೂ ಆ ರಶೀದಿಯನ್ನು ನನಗೆ ಕಳುಹಿಸಿಬಿಡಿ” ಎಂದಿದ್ದೆ ಸೋತ ದನಿಯಲ್ಲಿ. ತಲೆ ಅಲ್ಲಾಡಿಸುತ್ತ ಹೋದ ಅವರಿಗೆ ಅದು ಕೇಳಿಸಿತೋ ಇಲ್ಲವೋ ಗೊತ್ತಿಲ್ಲ. ಮುಂದೆ ಇಂಡಿಯಾಕ್ಕೆ ಹೋದ ಮೇಲೆ ರಶೀದಿಯಿರಲಿ ಆ ಮನುಷ್ಯನ ಸುದ್ದಿಯೂ ಇಲ್ಲ. ಬೇಸತ್ತು ಅವನ ತಂದೆಗೆ ಬರೆದರೆ ಇಂಗ್ಲೆಂಡಿಗೆ ಮಗನನ್ನು ಕಳುಹಿಸುವ ಮುನ್ನ ಫೋನಿನಲ್ಲಿ ಗೋಗರೆಯುತ್ತಿದ್ದ ಆ ತಂದೆಯದೂ ಉತ್ತರವಿಲ್ಲ.

ನನಗೆ ನಂಬಿಗೆಯ ಪ್ರಶ್ನೆ. ಸೀದಾ ಹೋಗಿ ಆ ಚಿನ್ನದ ವ್ಯಾಪಾರಿಗೆ ಯಾರೋ ತೆಗೆದುಕೊಂಡ ಚಿನ್ನದ ಬಾಬ್ತು ನೂರಾ ನಲುವತ್ತಮೂರು ಪೌಂಡುಗಳನ್ನು ತೆತ್ತು ಬಂದಿದ್ದೆ. ಆ ವರ್ಷ ಹದಿಮೂರಕ್ಕೆ ಕಾಲಿಡುತ್ತಿದ್ದ ನಮ್ಮ ಮಗಳ ಹುಟ್ಟಿದ ಹಬ್ಬಕ್ಕೆ ಅವಳಿಗೊಂದು ಚಿನ್ನದ ಬ್ರೇಸ್‍ಲೆಟ್ ಕೊಡಿಸಬೇಕೆಂದಿದ್ದ ನಮ್ಮ ಕನಸು ಕನಸಾಗಿಯೇ ಉಳಿದಿತ್ತು.

ಇಂಡಿಯಾದಿಂದ ಯಾರಾದರೂ ಅತಿಥಿಗಳು ಬರುತ್ತಾರೆಂದ ಕೂಡಲೇ ನಾವು ಭಾರತದಿಂದ ಹೋದ ಆಫೀಸರುಗಳೆಲ್ಲ ಸೇರಿ ಚರ್ಚಿಸುವುದಿತ್ತು. ಚರ್ಚಿಸುವ ವಿಷಯ ಬೇರೇನಿಲ್ಲ. ಆ ಅತಿಥಿಗಳನ್ನು ಯಾರ ಮನೆಯಲ್ಲಿ ಇರಿಸಬೇಕು ಎನ್ನುವುದರ ಬಗ್ಗೆ ಅಷ್ಟೆ.

ಉಳಿದೆಲ್ಲ ಆಫೀಸರುಗಳ ಹೆಂಡಂದಿರೂ ಪೌಂಡಿನ ಆಸೆಗೆ ಮತ್ತು ಆ ಪೌಂಡನ್ನು ಪರಿವರ್ತಿಸಿದಾಗ ಸಿಗಬಹುದಾದ ರೂಪಾಯಿಗಳ ಆಸೆಗೆ ಬಲಿ ಬಿದ್ದು ಭಾರತದಲ್ಲಿದ್ದಾಗ ಕಣ್ಣೆತ್ತಿ ನೋಡಲೂ ಹೇಸುತ್ತಿದ್ದಂತಹ ಕೆಲಸಗಳಿಗೆ ಸೇರಿಕೊಂಡದ್ದರಿಂದ ಎಲ್ಲ ಅತಿಥಿ ಸತ್ಕಾರದ ಸೌಲಭ್ಯ ಆ ಪೌಂಡಿನ ಆಸೆಗೆ ಬಲಿ ಬೀಳದೆ ಮನೆಯಲ್ಲೇ ಇರುತ್ತಿದ್ದ ನನ್ನ ಹೆಂಡತಿಯ ಪಾಲಿಗೆ ಬರುತ್ತಿತ್ತು. ಅವರ ಪ್ರಥಮ ಪಾದಾರ್ಪಣೆ ನನ್ನ ಮನೆಗೆ! ಖರ್ಚಿನ ಬಾಬ್ತು ನನ್ನ ತಲೆಗೆ!

ಯಾರನ್ನೂ ಉಪಚರಿಸಿದ್ದಕ್ಕೆ ಬೇಸರವಿಲ್ಲ. ಅದು ನಮ್ಮ ಸಂಸ್ಕಾರ. ಸಂತೋಷದ ಕೆಲಸವೂ. ನಮ್ಮೊಂದಿಗಿದ್ದ ಉಳಿದವರೆಲ್ಲ ಪೌಂಡಿಗೆ ಪೌಂಡು ಕೂಡಿಸುತ್ತ ಹಣ ಮಾಡುತ್ತಿದ್ದ ಸಮಯದಲ್ಲಿ ಇದ್ದ ಮಿತ ಆದಾಯದಲ್ಲೇ ಅಷ್ಟೆಲ್ಲ ಖರ್ಚು ಮಾಡಿ ನಾವು ಉಪಚರಿಸಿದ್ದನ್ನ ಅದೆಷ್ಟು ಬೇಗ ಜನ ಮರೆಯುತ್ತಾರಲ್ಲ ಎಂದು ಖೇದವಾಗುತ್ತದೆ ಅಷ್ಟೆ.

‍ಲೇಖಕರು Avadhi

February 13, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Dinesh

    I was in Singapore for two years. Same experience there. Honoring guets in our Indian culture but these guests misuse our hospitality.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: