ಜಿ ರಾಜಶೇಖರ್ಚಂದ್ರಿಕಾ ಅವರ ‘ಮೋದಾಳಿ’ ಏಕಕಾಲಕ್ಕೆ ಪ್ರಾಚೀನವೂ, ಸಮಕಾಲೀನವೂ ಆಗಿರುವ ವಸ್ತುವನ್ನು ಚಿತ್ರಿಸುವ ನಾಟಕ. ಕ್ರಿ.ಶ. ೧೦ನೆಯ ಶತಮಾನದ್ದು ಎಂದು ಹೇಳಲಾದ ಶಿವಕೋಟ್ಯಾಚಾರ್ಯನ `ವಡ್ಡಾರಾಧನೆ’ಯ ಒಂದು ಕತೆಯ ಒಳಗಿನ ಇನ್ನೊಂದು ಕತೆಯಲ್ಲಿ ಸಿಗುವ ವೃತ್ತಾಂತದ ಸಣ್ಣ ಪ್ರಸಂಗವೊಂದನ್ನು ವಿಸ್ತರಿಸಿ ಚಂದ್ರಿಕಾ ತನ್ನ ನಾಟಕವನ್ನು ರಚಿಸಿದ್ದಾರೆ.
‘ವಡ್ಡಾರಾಧನೆ’ ಒಂದು ವಿಲಕ್ಷಣ ಕೃತಿ. ಕನ್ನಡದ ಮೊತ್ತಮೊದಲ ಗದ್ಯಕೃತಿಯಾಗಿರುವ ವಡ್ಡಾರಾಧನೆ ಜೈನ ಸಾಧಕರ ಆರಾಧನಾ ಗ್ರಂಥವೂ ಹೌದು. ತನ್ನ ಸ್ವರೂಪದಲ್ಲಿ ಇದು ೧೯ ಕತೆಗಳ ಒಂದು ಸಂಕಲನ. ಈ ಕತೆಗಳು ತಮ್ಮ ಕಥಾನಕದ ವಿವರ ಮಾತ್ರವಲ್ಲ ಕಥನ ತಂತ್ರ ಮತ್ತು ಶೈಲಿಗಳಲ್ಲಿ ಸಹ ವಿಶಿಷ್ಟವಾಗಿದೆ. ಸಂಯಮ, ಇಂದ್ರಿಯನಿಗ್ರಹ ಮತ್ತು ಅಹಿಂಸೆ ಜೈನಧರ್ಮದ ಮೂಲಾಧಾರ ತತ್ವಗಳಾಗಿವೆ. ಆದರೆ ಜೈನ ಪರಂಪರೆಯ ಅನನ್ಯ ಕೃತಿಯಾಗಿರುವ ವಡ್ಡಾರಾಧನೆಯ ಕತೆಗಳು ಲಂಪಟತನ, ಹಿಂಸೆ, ಕಾಮ, ಕ್ರೋಧ, ಮೋಹ, ಮದ, ಮತ್ಸರ ಮುಂತಾದ ಕೆಡುಕುಗಳನ್ನು ಅವುಗಳ ಭೀಭತ್ಸಕರ ಅತಿರೇಕ ಸ್ಥಿತಿಯಲ್ಲಿ ಚಿತ್ರಿಸಿ, ಆ ಅತಿಯೇ ಹುಟ್ಟಿಸುವ ಜುಗುಪ್ಸೆಯಲ್ಲಿ ತಪಸ್ಸು ಮತ್ತು ವೈರಾಗ್ಯಗಳ ಕಡೆ ಜೀವ ಸಾಗಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ.
ವಿಕೃತಿಯನ್ನು ಅವರ ಆತ್ಯಂತಿಕ ಸ್ಥಿತಿಯಲ್ಲಿ, ಚಿತ್ರಿಸುವ ಈ ಪುರಾತನ ಕೃತಿಯ ಪ್ರತಿಮಾ ವಿಧಾನ ಮತ್ತು ಕಥನ ತಂತ್ರ ಬೆರಗು ಹುಟ್ಟಿಸುವಷ್ಟು ಆಧುನಿಕವಾಗಿದೆ. ಪ್ರಾಯಶಃ ಈ ಕಾರಣಕ್ಕೇನೆ, ವಡ್ಡಾರಾಧನೆ ಚಂದ್ರಿಕಾ ಅವರ ಪ್ರಸ್ತುತ ನಾಟಕಕ್ಕೂ ಪ್ರೇರಣೆ ಕೊಟ್ಟಿದೆ.
‘ಮೋದಾಳಿ’, ತನ್ನ ಇಬ್ಬರು ಗಂಡಂದಿರಿಂದ ಪ್ರೀತಿಯನ್ನಾಗಲೀ, ದಾಂಪತ್ಯದ ಸಾಹಚರ್ಯವನ್ನಾಗಲೀ ಪಡೆಯಲಾಗದೆ, ನಡುವಯಸ್ಸಿನ ಗಂಡಸೊಬ್ಬನ ಜೊತೆ ಸಂಬಂಧ ಬೆಳೆಸಿ, ಅವನಿಂದಲೂ ತಿರಸ್ಕೃತಳಾಗುವ ಓರ್ವ ಹೆಣ್ಣಿನ ಕತೆ. ವಡ್ಡಾರಾಧನೆಯ ಕತೆಗಳಲ್ಲಿ ಮೊದಲನೆಯದಾದ `ಸುಕುಮಾರ ಸ್ವಾಮಿಯ ಕತೆ’ಯ ಒಳಗಿನ ಹಲವು ಉಪಕತೆಗಳ ನಡುವೆ, ಮೋದಾಳಿ ಎಂಬ ನೊಂದ ಹೆಣ್ಣಿನದ್ದು ಒಂದು ಕಿರು ಪ್ರಸಂಗ ಮಾತ್ರ.
ಮೂಲಕೃತಿಯಲ್ಲಿ ಕೆಲವು ಸಾಲುಗಳಲ್ಲೇ ಮುಗಿದು ಹೋಗುವ ಮೋದಾಳಿಯ ಕತೆಯಲ್ಲಿ ಚಂದ್ರಿಕಾ ಬಳಸಿಕೊಂಡಿರುವುದು ಅದರ ಕೆಲವು ಪ್ರಾಥಮಿಕ ವಿವರಗಳನ್ನು ಮಾತ್ರ. ಶ್ವೇತಪರ ಎಂಬ ಪಟ್ಟಣದಲ್ಲಿ ವ್ಯಾಪಾರಿಯಾಗಿದ್ದ ಮತ್ಸ್ಯ ಮತ್ತು ಅವನ ಪತ್ನಿ ಜೈಸೆ -ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು, ನಂದ ಮತ್ತು ಬೋದ. ಅದೇ ಊರಲ್ಲಿ ಸೂರದತ್ತು ಮತ್ತು ಅವನ ಪತ್ನಿ ವಸುದತ್ತೆ ಎಂಬ ಇನ್ನೊಬ್ಬ ವರ್ತಕ ದಂಪತಿಗಳಿದ್ದು ಅವರಿಗೆ ‘ಮೋದಾಳಿ’ ಎಂಬ ಮಗಳಿದ್ದಳು. ಮೋದಾಳಿಯನ್ನು ಮತ್ಸ್ಯ, ಜೈಸೆಯರ ಹಿರಿಮಗ ನಂದನಿಗೆ ಕೊಟ್ಟು ಮದುವೆ ಮಾಡುವುದು ಎಂದು ಮೊದಲೇ ಮಾತಾಗಿತ್ತು. ಕಾಲಕ್ರಮದಲ್ಲಿ ಪ್ರಾಯಕ್ಕೆ ಬಂದ ನಂದ, ತನ್ನ ಕುಲದ ವೃತ್ತಿಯಾದ ವ್ಯಾಪಾರವನ್ನು ಮಾಡುವ ಸಲುವಾಗಿ ದೂರದೇಶಕ್ಕೆ ತೆರಳಿದವ, ೧೨ ವರ್ಷ ಕಳೆದರೂ ಊರಿಗೆ ಹಿಂದಿರುಗಿ ಬರಲಿಲ್ಲ; ಹಾಗಾಗಿ ನಂದನ ತಮ್ಮ ಬೋಧನ ಜೊತೆ ಮೋದಾಳಿಯ ವಿವಾಹವೆಂದು ನಿಶ್ಚಯವಾಯಿತು. ಈ ಕುರಿತು ಕೂಡ ಮೊದಲೇ ಮಾತಾಗಿತ್ತು. ಈ ವಿವಾಹದ ತಯಾರಿ ನಡೆಯುತ್ತಿದ್ದಾಗಲೇ ನಂದ ಊರಿಗೆ ಮರಳಿ ಬಂದ. ತಮ್ಮನ ಜೊತೆ ವಿವಾಹ ನಿಶ್ಚಯವಾದ ಮೋದಾಳಿಯ ಕೈಹಿಡಿಯಲು ನಂದ ನಿರಾಕರಿಸಿದ. ಮೋದಾಳಿ ತನ್ನ ಅಣ್ಣನ ವಧುವಾಗಿರುತ್ತ ತಾನು ಹೇಗೆ ಅವಳನ್ನು ಲಗ್ನವಾಗಲಿ ಎಂದು ಬೋಧ ಸಹ ಆ ಪ್ರಸ್ತಾಪವನ್ನು ತಿರಸ್ಕರಿಸಿದ. ಹಾಗಾಗಿ ಮೋದಾಳಿ ಅವಿವಾಹಿತಳಾಗಿಯೇ ಉಳಿದಳು.
ಅದೇ ಊರಿನಲ್ಲಿ ನಾಗಸೂರ ಎಂಬ ವರ್ತಕನಿದ್ದ; ಅವನಿಗೆ ಬರೋಬ್ಬರಿ ಎಂಟು ಮಂದಿ ಹೆಂಡಂದಿರು! ಜನ್ನನ ‘ಯಶೋಧರ ಚರಿತೆ’ಯಲ್ಲಿ ರಾಣಿ ಅಮೃತ ಮತಿ ಗೂನುಬೆನ್ನಿನ ಕುಳ್ಳು ದೇಹದ ಕುರೂಪಿ ಅಷ್ಟವಂಕನಿಗೆ ಒಲಿದ ಹಾಗೆ. ಅಷ್ಟವಂಕನಿಗೆ ರೂಪವಿಲ್ಲದಿದ್ದರೂ, ಒಳ್ಳೆಯ ಕಂಠವಿತ್ತು. ಆತನ ಹಾಡಿಗೆ ಮರುಳಾಗಿ ಅಮೃತಮತಿ, ತನ್ನನ್ನು ತಾನು ಅವನಿಗೆ ಒಪ್ಪಿಸಿಕೊಂಡಳು. ಆದರೆ ನಾಗಸೂರನಲ್ಲಿ ಮೋದಾಳಿಯಂತಹ ಹೆಣ್ಣು ಮೋಹವಶಳಾಗುವಂತೆ ಮಾಡುವ ಯಾವ ವಿಶೇಷ ನೈಪುಣ್ಯವೂ ಇರಲಿಲ್ಲ. ಆದರೂ ಮೋದಾಳಿ ಅವನನ್ನು ಮೋಹಿಸಿದಳು! ಕಾಲ ಕ್ರಮೇಣ ಮೋದಾಳಿ ನಾಗಸೂರರ ಆಕ್ರಮ ಸಂಬಂಧ ಬಯಲಾಗಿ, ರಾಜಭಟರು ಆ ಜೋಡಿಯನ್ನು ಬಂಧಿಸಿದರು. ಮೋದಾಳಿ, ನಾಗಸೂರ ಇಬ್ಬರೂ ಬೆಂಕಿಯಲ್ಲಿ ಕಾದ ಕಬ್ಬಿಣದ ಪ್ರತಿಮೆಗಳನ್ನು ಅಪ್ಪಿಕೊಂಡು ಸಾಯುವಂತೆ ರಾಜಾಜ್ಞೆಯಾಯಿತು.
ಇದು ವಡ್ಡಾರಾಧನೆಯಲ್ಲಿ ನಮಗೆ ಸಿಗುವ ಮೋದಾಳಿಯ ಕತೆಯ ಹಂದರ. ಚಂದ್ರಿಕಾ, ತನ್ನ ನಾಟಕದಲ್ಲಿ ಮೂಲಕತೆಯ ಕೆಲವು ವಿವರಗಳನ್ನು ಮಾರ್ಪಡಿಸಿಕೊಂಡಿದ್ದಾರೆ. ಉದಾಹರಣೆಗೆ ಜೈನ ಕಾವ್ಯ ಪರಂಪರೆಯಲ್ಲಿ ಕಥಾನಾಯಕರು ತಮ್ಮ ನೆತ್ತಿಯಲ್ಲಿ ನರೆಗೂದಲು ಕಂಡು, ಬರಲಿರುವ ಸಾವನ್ನು ಮುಂದಾಗಿ ಗ್ರಹಿಸಿ, ವೈರಾಗ್ಯಪರರಾದರೆ ಪ್ರಸ್ತುತ ನಾಟಕದಲ್ಲಿ ನಾಗಸೂರ ತನ್ನ ತಲೆಯ ಬಿಳಿಕೂದಲು ಕಂಡು ತನ್ನ ಪ್ರಾಯ ಮುಗಿಯಿತೆ ಎಂದು ವಿಹ್ವಲನಾಗುತ್ತಾನೆ; ಹೆಣ್ಣಿನ ಸಂಗಕ್ಕಾಗಿ ಕಾತರಿಸುತ್ತಾನೆ. ಅವನ ಈ ಚಡಪಡಿಕೆ ಕಾಮವೂ ಅಲ್ಲ; ವ್ಯಾಮೋಹವೂ ಅಲ್ಲ; ಅದು ಬರೇ ಚಪಲ.
ಅವನ ವಶವರ್ತಿಯಾದ ಮೋದಾಳಿ ಗಂಡಿನ ಸಖ್ಯಕ್ಕಾಗಿ ಹಂಬಲಿಸಿದವಳು. ಆದರೆ ಅವಳ ಒಡನಾಟದಲ್ಲಿ ನಾಗಸೂರ ತನ್ನ ತೆವಲು ತೀರಿಸಿಕೊಂಡು ಅವಳನ್ನು ದೂರ ಸರಿಸುತ್ತಾನೆ. ‘ಗಂಡಿನಿಂದ ವಂಚಿತಳಾದ ಹೆಣ್ಣು’, ‘ಹೆಣ್ಣು ಎಂಬ ಕಾರಣಕ್ಕೇನೆ ಅನ್ಯಾಯಕ್ಕೆ ಒಳಗಾದ ಹೆಣ್ಣು’, ‘ಕಾರಣವಿಲ್ಲದೆ ನೋಯುವ ಹೆಣ್ಣು’ – ಇವೇ ಮುಂತಾದ ಬೋಗಾರುದುಃಖದ ಮಾತುಗಳಿಂದ ಮೋದಾಳಿ ಎಂಬ ಚೈತನ್ಯವನ್ನು ಗ್ರಹಿಸಲು ಸಾಧ್ಯವಿಲ್ಲ; ಉದಾರವಾದಿಗಳಿಗೆ ಮೋದಾಳಿಯ ಜೀವಕಾಮ, ಅರ್ಥವಾಗುವುದೂ ಇಲ್ಲ. ಮೂವರು ಗಂಡಸರಿಂದ ತಿರಸ್ಕೃತಳಾದರೂ, ಪ್ರಭುತ್ವ ವಿಧಿಸಿದ ಶಿಕ್ಷೆಗೆ ಪಾತ್ರಳಾದರೂ, ರಾಜಭಟರು ಅಟ್ಟಿಸಿಕೊಂಡು ಬಂದು ಕೊನೆಗೆ ಸೆರೆಹಿಡಿದರೂ ಮೋದಾಳಿ ಗಂಡಿನ ಅಧಿಕಾರಕ್ಕೆ ತಲೆಬಾಗುವುದಿಲ್ಲ.

ನಾಟಕದಲ್ಲಿ ಒಂದೆಡೆ ಸ್ವತಃ ಅವಳೇ ಹೇಳಿಕೊಳ್ಳುವ ಹಾಗೆ,.. ಅವಳು ಮಾಡಿದ ಅಪರಾಧವೆಂದರೆ ಇಬ್ಬರು ಗಂಡರ ಹೆಂಡತಿಯಾಗಿದ್ದು ಇನ್ನೊಬ್ಬನನ್ನು ಪ್ರೀತಿಸಿದ್ದು.’ ಆದರೆ ಮೋದಾಳಿ ಅದನ್ನು ಬಾಯಿಬಿಟ್ಟು ಹೇಳದಿದ್ದರೂ, ಎಲ್ಲರಿಗೂ ಮನದಟ್ಟಾಗುವ ಸತ್ಯವೆಂದರೆ, ಆ ಇಬ್ಬರು ಗಂಡಂದಿರು ಮತ್ತು ಮೂರನೆಯವನಾದ ಪ್ರಿಯಕರ ಯಾರೊಬ್ಬನ ಪ್ರೀತಿಯನ್ನೂ ಅವಳು ಪಡೆಯಲಿಲ್ಲ. ಮೋದಾಳಿಯ ಈ ‘ಅವಸ್ಥೆ’ ಮತ್ತು ಇದರ ನಡುವೆಯೇ ಸೆಟೆದು ನಿಲ್ಲುವ ಅವಳ ‘ಸ್ವ’; ಹೆಣ್ಣಿನ ಸಾರ್ವಕಾಲಿಕ ಸ್ಥಿತಿಗೆ ಮೋದಾಳಿ ಸಂಕೇತವಾಗುವ ಪರಿ ಇದು. ಅದಕ್ಕೆ ಸರಿಯಾಗಿ ಈ ನಾಟಕದ ಕಾಲ, ಮೋದಾಳಿಯ ಇಬ್ಬರ ಗಂಡಂದಿರು, ನಂದ ಮತ್ತು ಬೋಧ ಹಾಗೂ ಅವಳ ಪ್ರಿಯಕರ ನಾಗಸೂರನ ಗತಕಾಲದಿಂದ ಇದ್ದಕ್ಕಿದ್ದಂತೆ ನಾಟಕದ ಓದುಗ/ ಪ್ರೇಕ್ಷಕನ ಈ ಕ್ಷಣದ ವರ್ತಮಾನಕ್ಕೆ ಹೊರಳಿಕೊಳ್ಳುತ್ತದೆ.
ನಾಟಕದ ಒಂದು ದೃಶ್ಯದಲ್ಲಿ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಕಾರಣಕ್ಕೆ ಬಂಧಿತಳಾಗಿ ರಾಜಾಜ್ಞೆಯಂತೆ ಶಿಕ್ಷೆಯನ್ನು ಸಹ ಅನುಭವಿಸಬೇಕಾಗಿರುವ ಮೋದಾಳಿಯ ಸ್ಥಿತಿಯ ಬಗ್ಗೆ ನಾಗಸೂರನಿಗೆ ವಿಷಾದವಿದೆ; ಅದಕ್ಕೆ ತಾನು ಕಾರಣಕರ್ತನಾದೆನಲ್ಲ ಎಂಬ ವ್ಯಥೆಯೂ ಅವನನ್ನು ಕಾಡುತ್ತದೆ. [ನಾಟಕದ ಮೂಲ ಕೃತಿಯಾದ `ವಡ್ಡಾರಾಧನೆ’ಯಲ್ಲಿ ಮೋದಾಳಿ, ನಾಗಸೂರ ಇಬ್ಬರಿಗೂ ರಾಜಶಿಕ್ಷೆ ವಿಧಿಸುತ್ತಾನೆ. ಚಂದ್ರಿಕಾ ಅವರ ನಾಟಕದಲ್ಲಿ ಶಿಕ್ಷೆ ಆಗುವುದು ಮೋದಾಳಿಗೆ ಮಾತ್ರ; ನಾಗಸೂರ ಒಳಸಂಚು ನಡೆಸಿ, ಶಿಕ್ಷೆ ಪಾರಾಗುತ್ತಾನೆ] ಆದರೆ ಮೋದಾಳಿಯನ್ನು ಅವನು ಮನಃಪೂರ್ವಕ ಪ್ರೀತಿಸಿದವನೇ ಅಲ್ಲ. ‘ಸಂಬಂಧವೊಂದು ದೇಹವನ್ನು ಮೀರುವುದೇ ಆಗಬೇಕಲ್ಲವೆ? ಎಂಬ ಅವನ ಗೆಳೆಯನ ಪ್ರಶ್ನೆ ನಾಗಸೂರನನ್ನು ಯಾವತ್ತೂ ಬಾಧಿಸಿದ್ದೇ ಇಲ್ಲ.
ನಾಟಕದ ಮುಂದಿನ ದೃಶ್ಯದಲ್ಲಿ ನಾಗಸೂರ ಮೋದಾಳಿಯ ಜೊತೆ ಒರಟಾಗಿ ನಡೆದುಕೊಳ್ಳುತ್ತಾನೆ; ಕೊಂಕು ಮಾತನಾಡಿ ಹಂಗಿಸುತ್ತಾನೆ. ಅವಳು ತನಗೆ ಇನ್ನು ಬೇಡವಾದ ಸರಕು ಎಂದು ನೇರವಾಗಿ ಹೇಳಿಯೂ ಬಿಡುತ್ತಾನೆ. ನಾಟಕದ ಈ ದೃಶ್ಯದೊಳಗೆ ಒಂದು ದೃಶ್ಯಾಂತರವಿದೆ. ಅದರಲ್ಲಿ ನಾಗಸೂರ, ಮೋದಾಳಿಯಿಂದ ಬಿಡಿಸಿಕೊಳ್ಳಲು ತಾನು ಹೆಣೆದ ತಂತ್ರವನ್ನು, ತನ್ನ ಗೆಳೆಯನಿಗೆ ವಿವರಿಸಿ ಹೇಳುತ್ತಾನೆ. ಮೋದಾಳಿಗೆ ಪ್ರತ್ಯೇಕ ಮನೆ ಮಾಡಿಕೊಡುವುದಾಗಿ ನಂಬಿಸಿ, ಅವಳನ್ನು ಇನ್ನೊಂದು ಊರಿಗೆ ಸಾಗಿಸಿ, ಅಲ್ಲಿ ಅವಳನ್ನು ವ್ಯಭಿಚಾರದ ಆರೋಪದ ಮೇಲೆ ರಾಜಭಟರು ಬಂಧಿಸುವಂತೆ ನಾಗಸೂರ ಸಂಚು ಹೆಣೆದಿದ್ದಾನೆ. ನಾಗಸೂರ ತನ್ನ ಗೆಳೆಯನಿಗೆ ಇದನ್ನು ನಿರೂಪಿಸುತ್ತಿರುವಾಗಲೇ ಮೋದಾಳಿ, ನಾಟಕದ ಮೇಳದವರೊಡನೆ [ಅವರೆಲ್ಲರೂ ಸಮಕಾಲೀನರು] ಹಠಾತ್ತನೆ ರಂಗದೊಳಗೆ ನುಗ್ಗಿ ನಾಗಸೂರನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಇದು ಈ ನಾಟಕದ ಒಂದು ಮಾಂತ್ರಿಕ ಕ್ಷಣ.
ವಡ್ಡಾರಾಧನೆಯ ಎರಡು ಪಾತ್ರಗಳು [ನಾಗಸೂರ ಮತ್ತು ಅವನ ಗೆಳೆಯ], ನಮ್ಮ ಕಾಲದವರೇ ಆದ ನಾಟಕದ ಮೇಳಗಾತಿಯರು ಹಾಗೂ ಎಲ್ಲ ಕಾಲಗಳಲ್ಲೂ ಅಸ್ತಿತ್ವದಲ್ಲಿರುವ, ಆದರೆ ಎಲ್ಲಿಯೂ ನೆಲೆ ಇಲ್ಲದಿರುವ ಮೋದಾಳಿ-ರಂಗದ ಮೇಲೆ ಇವರೆಲ್ಲ ಒಟ್ಟಾಗಿ, ನಾಟಕದ ಅರ್ಥವಂತಿಕೆಯನ್ನು ಹೊಸ ಮಜಲಿಗೆ, ಹೊಸ ಎತ್ತರಕ್ಕೆ ಒಯ್ಯುವ ಮ್ಯಾಜಿಕಲ್ ಕ್ಷಣ ಇದು. ಈ ನಾಟಕದ ದೃಶ್ಯ ಸಂಯೋಜನೆಯಲ್ಲಿ ವಿಭಿನ್ನ ಕಾಲಗಳ ಪಾತ್ರಗಳು ಒಂದೆಡೆ ಸೇರಿ, ಕಾಲ ದೇಶಗಳ ಪರಿಕಲ್ಪನೆಯನ್ನು ತಲೆಕೆಳಗು ಮಾಡುವುದರ ಜೊತೆಗೆ, ಹಲವೆಡೆ ಒಂದು ದೃಶ್ಯದಲ್ಲಿ ಪ್ರತ್ಯಕ್ಷವಾಗುವ ಪಾತ್ರಗಳ ನೆನಪು ಅದರ ಮುಂದಿನ ದೃಶ್ಯವಾಗಿ ರೂಪಗೊಳ್ಳುತ್ತದೆ. ನಾಟಕದ ದೃಶ್ಯ ಸಂಯೋಜನೆಯ ಈ ತಂತ್ರ ಮೋದಾಳಿಯ ‘ಚಿರಪರಿಚಿತ’ ಯಾತನೆಯನ್ನು ನಾಟಕೀಯಗೊಳಿಸುತ್ತದೆ. ಮೋದಾಳಿಯ ದುರವಸ್ಥೆ, ಎಲ್ಲ ಕಾಲಗಳ ಎಲ್ಲ ಹೆಂಗಸರ ಅವಸ್ಥೆ ಎಂಬ ಕಾರಣಕ್ಕೆ ಅದು ಚಿರಪರಿಚಿತವೆನ್ನಿಸಿದರೂ, ಅದನ್ನು ಮಾಮೂಲಿ ಎಂದು ನಾವು ಕ್ಷುಲ್ಲಕಗೊಳಿಸುವಂತಿಲ್ಲ. ಮೋದಾಳಿಗೆ ಆದ ಅನ್ಯಾಯ, ಒಂದು ವಿಪರೀತ ಸ್ಥಿತಿ; ಥೇಟು ವಡ್ಡಾರಾಧನೆಯ ಕತೆಗಳ ವಿಪರೀತ ವಿದ್ಯಮಾನಗಳ ಹಾಗೇನೆ. [ಉದಾಹರಣೆಗೆ ವಡ್ಡಾರಾಧನೆಯ ‘ಕಾರ್ತಿಕ ಋಷಿಯ ಕತೆ’ಯಲ್ಲಿ ರಾಜನೊಬ್ಬ, ಚೆಲುವೆಯಾದ ತನ್ನ ಮಗಳನ್ನೇ ಮೋಹಿಸಿ, ಅವಳನ್ನು ಮದುವೆಯಾಗಿ, ಆ ಮದುವೆಯಿಂದ ಒಬ್ಬ ಮಗನನ್ನು ಪಡೆದು ಮುಂದೆ ಆ ಮಗ, ತನ್ನ ಮೂಲವನ್ನು ಅರಿತು ಋಷಿಯಾಗುತ್ತಾನೆ!]
ನಾಟಕದ ಪಾತ್ರಗಳ ಗತಕಾಲ ಮತ್ತು ವರ್ತಮಾನ ಹಾಗೂ ನಾಟಕದ ಪ್ರೇಕ್ಷಕ / ಓದುಗನ ಗತ ಮತ್ತು ವರ್ತಮಾನ, ಒಂದು ಇನ್ನೊಂದರಲ್ಲಿ ಕಲಸಿಕೊಂಡು ಈ ಕಾಲಾಂತರ, ದೇಶಾಂತರಕ್ಕೆ ಕೂಡ ಕಾರಣವಾಗಿ ನಾಟಕದ ಅರ್ಥವಂತಿಕೆಯನ್ನು ವಿಸ್ತರಿಸುವ ಪ್ರಕ್ರಿಯೆ ನಾಟಕದ ಮೊತ್ತಮೊದಲಿನ ದೃಶ್ಯದಿಂದಲೇ ಶುರುವಿಟ್ಟುಕೊಳ್ಳುತ್ತದೆ; ನಟರು ಅಭಿನಯಿಸಲಿರುವ ನಾಟಕ ಯಾವುದು ಎಂದು ಇನ್ನೂ ನಿರ್ಧಾರವಾಗಿಲ್ಲ. ಆಗಲೇ, ಮೇಳದವರು ರಂಗದ ಮುಂದೆ ಬಂದು ಪ್ರಾರ್ಥನೆಯನ್ನು ಹಾಡಲು ಪ್ರಾರಂಭಿಸಿ ಬಿಟ್ಟಿದ್ದಾರೆ! ನಾಟಕಕಾರ್ತಿ- ಅವಳು ತನ್ನ ಮಾತಿನ ನಡುವೆ ಇಂಗ್ಲಿಷ್ ಶಬ್ದಗಳನ್ನು ಬಳಸುವ ಆಧುನಿಕ ಹೆಣ್ಣು – ನಾಟಕದ ವಸ್ತುವಿನ ಕುರಿತು ಯೋಚಿಸುತ್ತಿದ್ದಾಳೆ. ಅಷ್ಟರಲ್ಲಿ ಮೇಳದವರಲ್ಲಿ ಒಬ್ಬಳ ಗಂಡ ಒಳನುಗ್ಗಿ, ಅವಳಿಂದ ದುಡ್ಡುಕಸಿದುಕೊಂಡು ಹೋಗುತ್ತಾನೆ. ರಂಗದ ಮೇಲೆ ಅವನ ವರ್ತನೆ ಹೇಗಿದೆ ಎಂದರೆ ತನ್ನ ಪತ್ನಿಯನ್ನು ಪೀಡಿಸಿ, ಅವಳಿಂದ ದುಡ್ಡು ಕಸಿಯುವುದು ಅವನಿಗೆ ರೂಢಿಯಾಗಿ ಬಿಟ್ಟಿದೆ.’ ಆ ಹೆಂಗಸಿನ ಗಂಡನಾಗಿ ಮತ್ತು ಓರ್ವ ಗಂಡಸಾಗಿ ಅದು ತನ್ನ ಹಕ್ಕು ಎಂದು ಆತ ಭಾವಿಸಿರುವಂತೆಯೂ ತೋರುತ್ತದೆ!
ಅಷ್ಟರಲ್ಲಿ ನಾಟಕದ ನಾಯಕಿಯೇ ಒಳನುಗ್ಗಿ `ನನ್ನ ಕತೆಯನ್ನು ಬೇಕಾದರೆ ನಾಟಕ ಮಾಡಿ; ಆದರೆ ನಿಮ್ಮ ನಾಟಕದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಬೇಡಿ’ ಎಂದು ನಿವೇದಿಸಿಕೊಳ್ಳುತ್ತಾಳೆ. ಅವಳ ತನ್ನ ಪಾತ್ರದ ದಿರುಸಿನಲ್ಲೇ ರಂಗದ ಒಳಗೆ ನುಗ್ಗಿ `ನಾನು ವೇಷ ಅಲ್ಲ; ಜೀವಂತ ಪಾತ್ರ’ ಎಂದು ಸಹ ಘೋಷಿಸುತ್ತಾಳೆ. ಏನು ಅವಳ ಮಾತಿನ ಅರ್ಥ? ಜೀವಂತ ಪಾತ್ರವೆಂದರೆ ನಮ್ಮ ನಿಮ್ಮ ಹಾಗೆ ಸ್ವಾಯುತ್ತ, ಸ್ವತಂತ್ರ ಅಸ್ತಿತ್ವವಿರುವ ಜೀವವೆಂದೆ? ಅಥವಾ ಯಾರೋ ಕೊಟ್ಟ, ಮತ್ತೆ ಯಾರೋ ಸಂಭಾಷಣೆ ಬರೆದ, ಇನ್ನೊಬ್ಬ ಯಾರೋ ನಿರ್ದೇಶಿಸುವ ಪಾತ್ರವೆ? ತಾನು ಜೀವಂತ ಪಾತ್ರ ಎಂದು ಘೋಷಿಸಿಕೊಂಡವಳು ನಾಟಕದ ಕಥಾನಾಯಕಿ ಮೋದಾಳಿ; ಅವಳು ಅವಳ ಕಾಲದ ಉಡುಗೆ ತೊಡುಗೆಯಲ್ಲೇ ನಮ್ಮೆದುರು ನಿಂತಿದ್ದಾಳೆ; ಹಾಗಾಗಿ ಅವಳದ್ದು ನಾಟಕದ ‘ಮೇಕ್ಅಪ್’ ಅಲ್ಲ. ಆದರೂ ರಂಗದ ಮೇಲೆ ಇದ್ದಾಳೆ. ನಿಜಕ್ಕೂ ಅವಳು ಯಾರು?
ಒಮ್ಮಿಂದೊಮ್ಮೆಗೆ ವಾಸ್ತವದ ಕಾಲದೇಶಗಳು ಮತ್ತು ನಾಟಕದ ಒಳಗಿನ ಕಾಲದೇಶಗಳು-ಈ ಪ್ರಬೇಧವನ್ನು ಧಿಕ್ಕರಿಸಿ ರಂಗಸ್ಥಳದೊಳಗೆ ಪ್ರವೇಶಿಸುವುದರ ಮುಖಾಂತರ `ಮೋದಾಳಿ’, ಯಾವ ಸಮಾಜದಲ್ಲಿ, ಯಾವ ಕಾಲದಲ್ಲಿ, ಹೆಣ್ಣಿನ `ಸ್ವ’ ಸ್ವಾತಂತ್ರ್ಯ ಮತ್ತು ಸ್ವಾಯತ್ತ ಅಸ್ತಿತ್ವಗಳನ್ನು ಗುರುತಿಸಲಾಗಿದೆ ಎಂದು ಸವಾಲು ಹಾಕುತ್ತಿದ್ದಾಳೆ. `ನಿನ್ನ ಕತೆಯನ್ನು ವರ್ತಮಾನದ ಬದಲಾದ ನಮ್ಮ ಜಮಾನಕ್ಕೆ ತಕ್ಕಂತೆ ಹೇಗೆ ಪ್ರೇಕ್ಷಕರ ಮುಂದೆ ಚಿತ್ರಿಸಲಿ ಎಂಬ ನಾಟಕಕಾರ್ತಿಯ ಸಂದೇಹಕ್ಕೆ ಮೋದಾಳಿ’ ನಿಜ, ಕಾಲ ತುಂಬ ಬದಲಾಗಿದೆ. ಆದ್ರೆ `ನದಿ ತನ್ನ ದಾರೀನ ಯಾವತ್ತಾದ್ರೂ ಮೀರಿದ್ಯಾ?’ ಎಂದು ಕೇಳುತ್ತಾಳೆ. ತನ್ನ ಬದುಕಿನ ಗತಿಯನ್ನು ನದಿಯ ಜೊತೆ ಹೋಲಿಸಿಕೊಳ್ಳುವ ಮೋದಾಳಿ ಆ ಮುಖಾಂತರ ಎಲ್ಲ ಕಾಲದ ಸಮಸ್ತ ಸ್ತ್ರೀಸಂಕುಲವನ್ನು ನದಿಯ ಹರಿವಿನ ಜೊತೆ ಸಮೀಕರಿಸುತ್ತಿದ್ದಾಳೆ. ಮೋದಾಳಿ ತನ್ನ ‘ಸ್ವ’ವನ್ನು ನದಿಗೆ ಹೋಲಿಸುತ್ತ ಹೆಣ್ತಿನದ ಸಾರ್ವಕಾಲಿಕ ಸ್ಥಿತಿ ಮತ್ತು ಕಾಲದಿಂದ ಕಾಲಕ್ಕೆ ಅದು ವ್ಯಕ್ತವಾಗುವ ವಿಭಿನ್ನ ಬಗೆಗಳನ್ನು ನಮಗೆ ಕಾಣಿಸುತ್ತಾಳೆ. ಹೆಣ್ಣಿನ ಶೋಷಣೆಯ ಸಾತತ್ಯ ಮತ್ತು ಶೋಷಣೆಯ ವಿಧಾನಗಳಲ್ಲಿ ನಿರಂತರ ಪರಿವರ್ತನೆ-ಇದು ಬದುಕಿನ ಮೂಲಭೂತ ಸ್ಥಿತಿ. ಮೋದಾಳಿ, ನದಿಯ ಜೊತೆ ತನ್ನನ್ನು ಹೋಲಿಸಿಕೊಂಡು ಆಡುವ ಮಾತು `ಒಂದು ನದಿಗೆ ಎರಡು ಸಲ ಕಾಲಿಡಲು ಸಾಧ್ಯವಿಲ್ಲ’ ಎಂಬ ಗ್ರೀಕ್ ತತ್ವಶಾಸ್ತ್ರಜ್ಞ ಹೆರಾಕ್ಲಿಟಸ್ನ ಹೇಳಿಕೆಯನ್ನು ನೆನಪಿಸುತ್ತದೆ. ಹೆರಾಕ್ಲಿಟಸ್ನ ಈ ಮಾತನ್ನು ಬೌದ್ಧ ಮಾಧಮಿಕರು ಹೀಗೆ ಬಿಡಿಸಿ ಹೇಳುವುದರ ಮುಖಾಂತರ ಅದರ ಅರ್ಥವನ್ನು ವಿಸ್ತರಿಸಿದರು.

೧. ಒಂದು ನದಿಗೆ ಎರಡು ಸಲ ಕಾಲಿಡಲು ಸಾಧ್ಯವಿಲ್ಲ.
೨. ಹಾಗೆ ಕಾಲಿಟ್ಟ ಮನುಷ್ಯ ಒಬ್ಬನೇ ಅಲ್ಲ; ಬೇರೆ ಬೇರೆಯೂ ಅಲ್ಲ.
೩. ಎರಡು ಸಲ ಕಾಲಿಟ್ಟ ನದಿ ಒಂದೇ ಅಲ್ಲ; ಬೇರೆ ಬೇರೆಯೂ ಅಲ್ಲ.
೪. ಎರಡು ಸಲ ನದಿಗೆ ಕಾಲಿಟ್ಟಾಗ ಇದ್ದ ಪರಿಸ್ಥಿತಿ ಒಂದೇ ಅಲ್ಲ; ಬೇರೆ ಬೇರೆಯೂ ಅಲ್ಲ.
೫. ಎರಡು ಸಲ ನದಿಗೆ ಕಾಲಿಟ್ಟಾಗ ಆದ ಪರಿಣಾಮ ಒಂದೇ ಅಲ್ಲ; ಬೇರೆ ಬೇರೆಯೂ ಅಲ್ಲ.
ಸತತವಾಗಿ, ನಿರಂತರವಾಗಿ ಹರಿಯುವ ನದಿ, ತನ್ನ ಸುತ್ತಲಿನ ಸೀಮೆಯ ಎಲ್ಲ ವಿದ್ಯಮಾನಗಳಿಗೂ ಸಾಕ್ಷೀಭೂತಳಾಗಿ ಹರಿಯುವ ನದಿ, ಸಾತತ್ಯ ಮತ್ತು ಪರಿವರ್ತನಶೀಲತೆಗಳಿಗೆ ರೂಪಕವಾಗುವಂತೆ, ಈ ನಾಟಕದ ‘ಮೋದಾಳಿ’ ಹೆಣ್ಣು ಅನುಭವಿಸುವ ಒಂಟಿತನ ಹಾಗೂ ನೋವಿನ ಸಾತತ್ಯ ಮತ್ತು ಅವು ವ್ಯಕ್ತಗೊಳ್ಳುವ ವಿಧಾನಗಳಲ್ಲಿ ಕಾಲದಿಂದ ಕಾಲಕ್ಕೆ ಆಗುವ ಪರಿವರ್ತನೆ-ಈ ಪ್ರಕ್ರಿಯೆಗೆ ಒಂದು ಸಶಕ್ತ ರೂಪಕವಾಗುತ್ತಾಳೆ.
ಚಂದ್ರಿಕಾ ಅವರ ನಾಟಕ, ಹೆಣ್ಣು ಅನುಭವಿಸುವ ಅವಮಾನ, ತಿರಸ್ಕಾರ, ಯಾತನೆ ಮತ್ತು ಹಿಂಸೆಗಳ ಒಂದು ನಿರೂಪಣೆಯಾಗಿರುವುದರ ಜೊತೆ ಧರ್ಮದ ಆಚರಣೆ ಮತ್ತು ಧರ್ಮದ ಪಾಲನೆಗಳ ನಡುವಿನ ಅಂತರದ ಕುರಿತ ಒಂದು ವಿಮರ್ಶೆಯೂ ಆಗಿದೆ. ವಡ್ಡಾರಾಧನೆಯ ಹಾಗೆ, ಚಂದ್ರಿಕಾ ಅವರ ನಾಟಕದಲ್ಲಿಯೂ ಹಿಂಸೆ ಮತ್ತು ಒರಟುತನದ ನಾನಾ ಬಗೆಗಳ ಚಿತ್ರಣವಿದೆ. ಅಸಹಾಯಕ ಹೆಂಗಸರು, ದುಡ್ಡಿಗೋಸ್ಕರ ಈ ಹೆಂಗಸರನ್ನು ಪೀಡಿಸಿ ಗೋಳಾಡಿಸುವ ಅವರ ವ್ಯಸನಿ ಗಂಡಂದಿರು, ಜೋಬದ್ರ ಗಂಡಂದಿರು, ಮನೆಹಾಳ ಗಂಡಸರು, ತೆವಲು ತೀರಿಸಿಕೊಂಡ ನಂತರ ತಮ್ಮ ಪ್ರೇಯಸಿಯರನ್ನು ಕಸಕ್ಕಿಂತ ಕಡೆಯಾಗಿ ಕಾಣುವ ಮುಠ್ಠಾಳ ಗಂಡಸರು, ಅಪರಾಧಿಗಳಿಗೆ ಬೆಂಕಿಯಲ್ಲಿ ಕಾದು ನಿಗಿನಿಗಿಸುವ ಕಬ್ಬಿಣದ ಪ್ರತಿಮೆಗಳನ್ನು ಅಪ್ಪಿಕೊಂಡು ಸಾಯುವ ಶಿಕ್ಷೆ ವಿಧಿಸುವ ಜೈನರಾಜ [ಅಷ್ಟು ಕ್ರೂರಿಯಾದರೂ, ವಂಶೋದ್ಧಾರಕನಾದ ಗಂಡು ಮಗುವಿಗಾಗಿ ಹಪಹಪಿಸುವ ಮೂರ್ಖ ಗಂಡು ಆತ! ಹೆಣ್ಣು ಮಕ್ಕಳು ವಂಶ ಬೆಳೆಸುವುದಿಲ್ಲವೆ?] – ಹೀಗೆ ಸಂವೇದನ ಶೂನ್ಯ ಪಾತ್ರಗಳ ಸ್ವಭಾವದ ವೈಪರೀತ್ಯ ಮತ್ತು ಹಿಂಸೆಯನ್ನು ಅತಿಗೆ ಒಯ್ದು ಚಿತ್ರಿಸುವ ಮುಖಾಂತರ ನಾಟಕ ಕಟ್ಟಿ ಕೊಡುವ ಬದುಕಿನ ವಾಸ್ತವ ಕರಾಳವಾಗಿದೆ.
ಉದಾಹರಣೆಗೆ ನಾಟಕದ ಎರಡನೆಯ ದೃಶ್ಯದಲ್ಲಿ ರಾಣಿ ಚಂದ್ರಮತಿ, ಇಬ್ಬರು ಗಂಡಂದಿರು ಇದ್ದೂ ಮೂರನೆಯವನೊಬ್ಬನನ್ನು ಮೋಹಿಸಿದ `ಅಪರಾಧ’ಕ್ಕಾಗಿ ಬಂಧಿತಳಾಗಿ ಸೆರೆಮನೆಯಲ್ಲಿರುವ ಮೋದಾಳಿಯನ್ನು ನೋಡಲು ಬಂದಿದ್ದಾಳೆ. ರಾಣಿಯ ಎದುರು, ಮೋದಾಳಿ ತನ್ನ ನಡವಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾಳೆ. ಮೋದಾಳಿಯ ಮಾತಿಗೆ ಪ್ರತಿಕ್ರಿಯಿಸುತ್ತ ಚಂದ್ರಮತಿ ಕೋಪದಲ್ಲಿ ಹೇಳುತ್ತಾಳೆ `ಮಹಾರಾಜ ಸೂರ್ಯಮಿತ್ರನಲ್ಲದೆ ಬೇರೆ ಯಾರೇ ಆಗಿದ್ದರೂ ನಿನ್ನ ತಲೆಯನ್ನು ತರಿದು ಬಿಡ್ತಾ ಇದ್ದರು. ಜೈನನಾದವನಿಗೆ ಹಿಂಸೆ ಸಲ್ಲದು. ಅದಕ್ಕೆ ನಿನ್ನ ಸುಮ್ಮನೆ ಬಿಟ್ಟಿದ್ದಾರೆ’ ಅವಳ ಮಾತೇ ಒಂದು ವಿರೋಧಾಭಾಸ! ಜೈನನಾದವನಿಗೆ ಹಿಂಸೆ ಸಲ್ಲದು ಸರಿ; ಆದರೆ ಹಿಂಸೆಯ ಸಂಕಲ್ಪ ಅಥವಾ ನಮ್ಮ ಯೋಚನೆಯಾಗಿ, ಕಲ್ಪನೆಯಾಗಿ ಕಾಣಿಸಿಕೊಳ್ಳುವ ಹಿಂಸೆ – ಇವು ಪರಿವಾಗಿಲ್ಲವಾ? ಧರ್ಮ ಬೋಧಿಸುವ ಅಹಿಂಸೆ ನಮ್ಮ ಬದುಕು ಮತ್ತು ವರ್ತನೆಗಳಲ್ಲಿ ಸಹಾನುಭೂತಿ ಜೀವದಯೆ ಮತ್ತು ಲೋಕಕಾರುಣ್ಯಗಳಲ್ಲಿ ವ್ಯಕ್ತವಾಗದೆ ಕರ್ಮಠರ ಏಕಾದಶಿ ಉಪವಾಸದ ಹಾಗೆ ಕೇವಲ ಗೊಡ್ಡು ಆಚರಣೆಯಾಗಿ ಮಾತ್ರ ಉಳಿದು ಬಿಟ್ಟಿರುವುದರ ಹಿನ್ನೆಲೆಯಲ್ಲಿ ಮಾತ್ರ.
ರಾಣಿಯ ಮಾತಿನ ಹಿಂದಿನ ಧಾರ್ಮಿಕ ಸೋಗಲಾಡಿತನವನ್ನು ನಾವು ಅರ್ಥಮಾಡಿಕೊಳ್ಳಬಹುದು. ತನ್ನ ಗಂಡ ಹಾಗೂ ನಾಡಿನ ದೊರೆ ಸೂರ್ಯಮಿತ್ರ ಜೈನನಾಗಿರುವುದರಿಂದ ಮೋದಾಳಿಯ ತಲೆಯನ್ನು ತರಿಯದೆ ಬಿಟ್ಟಿದ್ದಾನೆ. ಜೈನರಿಗೆ ಹಿಂಸೆ ಸಲ್ಲದು ಎಂದು ರಾಣಿ ಮುಗ್ಧಳಾಗಿ ಹೇಳುತ್ತಾಳೆ. ಅವಳಿಗೆ ತನ್ನ ಮಾತಿನ ಸತ್ಯದ ಬಗ್ಗೆ ಸಂದೇಹವಿಲ್ಲ. ಖ್ಯಾತ ಕತೆಗಾರ ಸಾದತ್ಹಸನ್ ಮಾಂಟೋ ತನ್ನ ಒಂದು ಕತೆಯಲ್ಲಿ ಅದೇ ಮಾತನ್ನು ವ್ಯಂಗ್ಯದಲ್ಲಿ ಬಳಸುತ್ತಾನೆ. ಆ ಕತೆ ಹೀಗಿದೆ
‘ಕೋಮು ಹಿಂಸೆಯ ಆ ದಿನಗಳಲ್ಲಿ ಊರಿನ ಆ ಬಡಾವಣೆಯಲ್ಲಿ ನೆಲೆಸಿದ್ದ ಅಲ್ಪಸಂಖ್ಯಾಕರಲ್ಲಿ ಕೆಲವರನ್ನು ಕೊಲ್ಲಲಾಯಿತು; ಹೇಗೋ ಬದುಕಿ ಉಳಿದ ಕೆಲವರು ಮನೆಮಾರು ತೊರೆದು ಪಲಾಯನ ಮಾಡಿದರು; ಒಬ್ಬ ಗಂಡಸು ಮತ್ತು ಅವನ ಪತ್ನಿ ಮಾತ್ರ ತಮ್ಮ ಮನೆಯ ನೆಲಮಾಳಿಗೆಯಲ್ಲಿ ಅಡಗಿ ಕುಳಿತರು.
ಯಾವ ಕ್ಷಣದಲ್ಲಾದರೂ ತಾವು ಪತ್ತೆಯಾಗಿ ಬಿಡಬಹುದು ಎಂಬ ಭಯದಲ್ಲಿ ಅವರು ಎರಡು ರಾತ್ರಿ ಕಳೆದರು. ಮತ್ತೂ ಎರಡು ರಾತ್ರಿಗಳು ಹಾಗೇ ಕಳೆದವು. ತಮ್ಮ ಮನೆಯಲ್ಲೇ ಅಡಗಿ ಕೂತ ಆ ದಂಪತಿಗಳಿಗೆ ಆಗ ಸಾವಿನ ಭೀತಿಗಿಂತ ಹೆಚ್ಚಾಗಿ ಹಸಿವು ಕಾಡತೊಡಗಿತು. ಹಾಗೆಯೇ ಮತ್ತೂ ನಾಲ್ಕು ದಿನಗಳು ಕಳೆದವು. ಈಗ ಆ ಗಂಡಹೆಂಡತಿ ಇಬ್ಬರೂ ಬದುಕು ಮತ್ತು ಸಾವುಗಳ ನಡುವೆ ವ್ಯತ್ಯಾಸವೇ ಕಾಣದಂತಹ ಸ್ಥಿತಿ ತಲುಪಿದ್ದರು. ತಾವು ಅಡಗಿಕೊಂಡಿದ್ದ ನೆಲಮಾಳಿಗೆಯಿಂದ ದಂಪತಿಗಳು ಹೊರಗೆ ಬಂದರು.
ಅವರ ಮನೆಯನ್ನು ಆಕ್ರಮಿಸಿಕೊಂಡು ಹೊಸದಾಗಿ ಬಿಡಾರ ಹೂಡಿದ್ದ ಗಂಡಸಿಗೆ, ಅಡಗಿ ಕೂತ ಗೃಹಸ್ಥ ಕ್ಷೀಣ ದನಿಯಲ್ಲಿ ಅರಿಕೆ ಮಾಡಿಕೊಂಡ, ‘ನಾವು ಶರಣಾಗಿದ್ದೇವೆ. ದಯವಿಟ್ಟು ನಮ್ಮನ್ನು ಕೊಂದುಬಿಡಿ’
‘ನಮ್ಮ ಧರ್ಮದಲ್ಲಿ ಕೊಲ್ಲುವುದು ನಿಷಿದ್ಧ’ ಮನೆಯನ್ನು ಆಕ್ರಮಿಸಿ ಕೂತವ ಹೇಳಿದ ; ಅವನು ಜೈನಧರ್ಮದವನು. ಹಸಿವೆ ಮತ್ತು ಭಯದಲ್ಲಿ ಕಂಗಾಲಾಗಿದ್ದ ಆ ದಂಪತಿಗಳನ್ನು `ಮುಂದಿನ ಅವಶ್ಯ ಕ್ರಮ’ಕ್ಕಾಗಿ ಜೈನಲ್ಲದ ಪಕ್ಕದ ಮನೆಯವರಿಗೆ ಒಪ್ಪಿಸಲಾಯಿತು.’
ಮಾಂಟೋನ ಕತೆಯ ವ್ಯಂಗ್ಯವನ್ನು ಚಂದ್ರಿಕಾ ಅವರ ನಾಟಕದಲ್ಲಿ ಸಹ ಕಾಣಬಹುದು. ನಾಟಕದಲ್ಲಿ ರಾಣಿ ಮುಗ್ಧಳಾಗಿ ರಾಜನ ಜೈನಧರ್ಮದ ಬಗ್ಗೆ ಹೇಳುವ ಮಾತು, ನಾಟಕದ ಹಿಂಸ್ರ ವಾತಾವರಣವನ್ನು ಇನ್ನಷ್ಟು ನಾಟಕೀಯವಾಗಿಸುತ್ತದೆ. ಈ ಹಿಂಸೆಯಿಂದ ಜೀವಕ್ಕೆ ಬಿಡುಗಡೆಯೇ ಇಲ್ಲವೆ? ನಾಟಕದಲ್ಲಿ ಹಿಂಸೆಯ ವಿವಿಧ ನಮೂನೆಗಳು ನಮ್ಮ ಗಮನ ಸೆಳೆದರೂ, ಆ ಹಿಂಸೆ, ಹತಾಶೆಗೆ ಕಾರಣವಾಗುವುದಿಲ್ಲ. ಸ್ವತಃ ನಾಟಕದ ನಾಯಕಿ ಮೋದಾಳಿಯೇ, ಅತ್ಯಂತ ದುರ್ಭರ ಕ್ಷಣಗಳಲ್ಲೂ ಹತಾಶೆಯಲ್ಲಿ ಕೈಕಟ್ಟಿ ಕೂರುವವಳಲ್ಲ. ನಾಟಕದ ಕೊನೆಯ ದೃಶ್ಯದಲ್ಲಿ ಮೋದಾಳಿ ಮತ್ತು ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಲು ಅವಳಿಗೆ ನೆರವಾದ ರಾಣಿ, ಇಬ್ಬರಿಗೂ ರಾಜಮರಣ ದಂಡನೆ ವಿಧಿಸುತ್ತಾನೆ. ಆಗಲೂ ರಾಣಿ ಮೋದಾಳಿಯನ್ನು ಬದುಕಿಸಿ, ತಾನೊಬ್ಬಳೇ ಮರಣದಂಡನೆಗೆ ಒಳಗಾಗುತ್ತಾಳೆ. ಅವಳದ್ದು ಜೀವದಯೆಯ ಆತ್ಮಾಹುತಿ; ನಾಟಕ ಇನ್ನೇನು ಮುಗಿಯಬೇಕು ಎನ್ನುವಷ್ಟರಲ್ಲಿ ಒಂದು ಮಗು-ಪ್ರಾಯಶಃ ಮೇಳದವರಲ್ಲಿ ಒಬ್ಬಾಕೆಯದ್ದು – ಜೋರಾಗಿ ಅಳುತ್ತದೆ. ರಂಗದಲ್ಲಿರುವ ಪಾತ್ರಧಾರಿಗಳೆಲ್ಲ ಮಗುವಿನ ಸುತ್ತ ನಿಲ್ಲುತ್ತಾರೆ; ಅಳುತ್ತಿರುವ ಮಗುವನ್ನು ಸಂತೈಸಲು ಎಂಬಂತೆ; ವಾತ್ಸಲ್ಯ ಮಾತ್ರ ಈ ಜಗತ್ತನ್ನು ಹಿಂಸೆಯಿಂದ ಕಾಪಾಡಬಲ್ಲದು ಎಂಬಂತೆ.
ನಾಟಕದ ಈ ದೃಶ್ಯ ಲೋಕಖ್ಯಾತ ನಿರ್ದೇಶಕ ಅಕಿರಾ ಕುರಾಸಾವಾನ ಸಿನೆಮಾ, ‘ರಾಶೋಮನ್’ನ ಮುಕ್ತಾಯದ ದೃಶ್ಯವನ್ನು ನೆನಪಿಸುತ್ತದೆ. ರಾಶೋಮಾನ್ ಕೂಡ ಮೋದಾಳಿಯ ಹಾಗೆ ಒಂದು ಹೆಣ್ಣಿನ ಕಥಾನಕ. ಒಮ್ಮೆ ತನ್ನ ಗಂಡನ ಜೊತೆ, ಕಾಡಿನ ದಾರಿಯಲ್ಲಿ ಪ್ರಯಾಣ ಹೊರಟ ಆಕೆಯ ಮೇಲೆ ಪರಪುರುಷನೊಬ್ಬ ಹಠಾತ್ತನೆ ಎರಗಿ ಆಕೆಯನ್ನು ಸಂಭೋಗಿಸುತ್ತಾನೆ. ಅದು ಅತ್ಯಾಚಾರವೆ? ಅಥವಾ ಅತ್ಯಾಚಾರದಂತೆ ಭಾಸವಾಗುವ ಅವನ ಕೃತ್ಯಕ್ಕೆ ಆ ಹೆಣ್ಣಿನ ಸಮ್ಮತಿಯೂ ಇತ್ತೆ? ಅವಳ ಗಂಡ, ಈ ಕೃತ್ಯದಲ್ಲಿ ಪರಪುರುಷನೊಂದಿಗೆ ಶಾಮೀಲಾಗಿದ್ದನೆ? ಅಥವಾ ತಟಸ್ಥನಾಗಿದ್ದನೆ? ಅಥವಾ ಕೇವಲ ಅಸಹಾಯಕನಾಗಿದ್ದನೆ? ಈ ಚಲನಚಿತ್ರದಲ್ಲಿ ಪ್ರೇಕ್ಷಕನಿಗೆ ತಲೆದೋರುವ ಯಾವ ಸಂದೇಹಕ್ಕೂ ಸಮರ್ಪಕವಾದ ಉತ್ತರಗಳು ದೊರೆಯುವುದಿಲ್ಲ.
ರಾಶೋಮನ್ ನಗರದ ಹೊರದ್ವಾರದ ಚಿತ್ರಿಕೆಯೊಡನೆ ಸಿನೆಮಾ ಕೊನೆಗೊಳ್ಳುತ್ತದೆ. ಜೋರಾಗಿ ಮಳೆ ಸುರಿಯುತ್ತಿದೆ; ಮಳೆಯಿಂದ ರಕ್ಷಿಸಿಕೊಳ್ಳಲು ಇಬ್ಬರು ಬೌದ್ಧ ಭಿಕ್ಷುಗಳ ಮಹಾದ್ವಾರವನ್ನು ಆಶ್ರಯಿಸಿದ್ದಾರೆ. ಅವರಲ್ಲಿ ಒಬ್ಬ ಅನಾಥ ಮಗುವೊಂದನ್ನು ಕೈಯಲ್ಲಿ ಹಿಡಿದಿದ್ದಾನೆ. ಅಷ್ಟರಲ್ಲಿ ಮರಕಡಿಯುವ ವೃತ್ತಿಯ ಒಬ್ಬ ಬಡಪಾಯಿ, ಮಳೆಯಿಂದ ತಪ್ಪಿಸಿಕೊಳ್ಳಲು ಅಲ್ಲಿಗೆ ಬರುತ್ತಾನೆ. ಬೌದ್ಧಭಿಕ್ಷುವಿನ ಕೈಯಲ್ಲಿರುವ ಮಗು ಕಂಡು ಅವನು, `ನನಗೆ ಆರು ಮಕ್ಕಳಿದ್ದಾರೆ; ಇದೊಂದು ಜಾಸ್ತಿ ಆಗುವುದಿಲ್ಲ; ನಾನು ಇದನ್ನು ಸಾಕುತ್ತೇನೆ’ ಎಂದು ಹೇಳಿ ಭಿಕ್ಷುಕನ ಕೈಯಿಂದ ಮಗುವನ್ನು ಎತ್ತಿಕೊಳ್ಳುತ್ತಾನೆ. ರಾಶೋಮನ್ನ ಚೇತೋಹಾರಿಯಾದ ಈ ದೃಶ್ಯದಂತೆಯೇ, ಮೋದಾಳಿ ನಾಟಕದ ಕೊನೆಯ ದೃಶ್ಯ ಕೂಡ, ಸಂಸಾರವಂದಿಗರ ಸೈರಣೆ ಮತ್ತು ಅಂತಃಕರಣಗಳನ್ನು ಎತ್ತಿಹಿಡಿಯುತ್ತದೆ.
ನಾಟಕವನ್ನು ನಾನು ಓದಿದ ಬಗೆಯನ್ನು ಈ ನನ್ನ ಮುನ್ನುಡಿಯ ಮುಖಾಂತರ ವಿವರಿಸಲು ಅವಕಾಶ ಕಲ್ಪಿಸಿಕೊಟ್ಟ ಚಂದ್ರಿಕಾ ಅವರಿಗೆ ನಾನು ಕೃತಜ್ಞ.





ವಿಮರ್ಶೆ ತುಂಬಾ ಚೆನ್ನಾಗಿದೆ. ಕೃತಿಯನ್ನು ಓದಬೇಕು ಎನ್ನಿಸುತ್ತಿದೆ
ಜಿ ರಾಜಶೇಖರರವರ ವಿಮರ್ಷೆ ತುಂಬಾ ಚೆನ್ನಾಗಿದೆ ನಾಟಕದ ಕೃತಿಯನ್ನು ಓದಬೇಕು