ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಚಂದ್ರಿಕಾ ಕಾದಂಬರಿ ‘ನಾನು ಚೈತನ್ಯ’ –ಹೋರಾಟವೆಂಬುದು ಜೀವದ ಹಾಡು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಪಿ ಚಂದ್ರಿಕಾ ಅವರ ‘ಮೂವರು ಮಹಮದರು’ ಕೃತಿ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿ ‘ಬಹುರೂಪಿ’ಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3JUdyum ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಚಂದ್ರಿಕಾ ನಡೆಸುವ ಪ್ರಯೋಗ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

 19

ಮಾತಂಗಿಯ ಮೇಲೆ ಅತ್ಯಾಚಾರ ಆಗಿದೆ ಎನ್ನುವುದನ್ನು ಹೇಳಲಿಕ್ಕೆ ವೈದ್ಯರೇ ಬೇಕಿರಲಿಲ್ಲ. ಅವಳನ್ನು ನೋಡಿದ ಯಾರಿಗೂ ಅರ್ಥವಾಗುತ್ತಿತ್ತು. ʻದೇಹದ ಗಾಯಕ್ಕಿಂತ ಮನಸ್ಸಿನ ಮೇಲೆ ಆಗಿರೋ ಗಾಯ ಜಾಸ್ತಿ. ನಾನು ಟ್ರೀಟ್ಮೆಂಟ್ ಕೊಡ್ತೀನಿ. ಆದರೆ ಮೊದಲು ಇದಕ್ಕೆ ಕಾರಣ ಯಾರೋ ಅವರ ಮೇಲೆ ಕಂಪ್ಲೇಂಟ್ ಕೊಡಿ, ಒಬ್ಬ ಅಸಹಾಯಕ ಹುಡುಗಿಯ ಮೇಲೆ ಹೀಗೆ ರಾಕ್ಷಸರ ಹಾಗೆ ಯಾಕೆ ನಡೆದುಕೊಳ್ಳುತ್ತಾರೋʼ ಎಂದು ಬೇಸರಿಸಿಕೊಂಡರು ಡಾಕ್ಟರ್. ಅದೇ ಎಂದು ಗೊತ್ತಿದ್ದರೂ ಇನ್ನೊಬ್ಬರು ಹೌದು ಎಂದು ಪುಷ್ಟೀಕರಿಸಿದ ಮೇಲೆ ದುಃಖವಾಗುತ್ತಲ್ಲ ಹಾಗೆ ಅತ್ತಳು ಗೌರತ್ತೆ. ಅದು ಅತ್ತು ಹಗುರಾಗುವ ರೀತಿಯೋ ಅಥವಾ ದಾರಿ ಕಾಣದಾದಾಗ ಆಗುವ ಸಂಕಟವೋ ಗೊತ್ತಾಗದೆ ಕಕ್ಕಾಬಿಕ್ಕಿಯಾದೆ. ʻದೊಡ್ಡವಳು ನೀನೇ ಹೀಗಾಡಿದರೆ ಹೆಂಗೆ ಗೌರಾ? ಸ್ವಲ್ಪ ಸುಮ್ಮನಿರು. ಎಲ್ಲಾ ಪರೀಕ್ಷೇನ ನಮ್ಮಂಥವರಿಗೇ ತಂದಿಡ್ತಾನೆ ಆ ದೇವುರುʼ ಎಂದು ಅಸಹಾಯಕವಾದರೂ ಅಧಿಕಾರಯುತವಾಗಿ ಅಮ್ಮ ಗೌರತ್ತೆಯನ್ನು ಗದರಿಸಿದಳು.

ಊರಲ್ಲಿ ತಲೆಎತ್ತಿ ತಿರುಗುವುದು ಹೇಗೆ? ನಾನು ಊರಿಗೆ ಬರಲ್ಲ ಎಂದು ಹಟ ಹಿಡಿದಳು ಗೌರತ್ತೆ. ನನಗೆ ಅರ್ಥವೇ ಆಗಲಿಲ್ಲ, ಇದರಲ್ಲಿ ಅವಮಾನ ಆಗಬೇಕಿರುವುದು ಆ ಕಲ್ಲನಿಗೆ ಹೊರತು ಗೌರತ್ತೆಗ್ಯಾಕೆ? ಎಲ್ಲ ಎರಡು ದಿನ ಸರಿಯಾಗುತ್ತೆ. ಮಗಳಿಗೆ ಧೈರ್ಯ ಹೇಳು ಎಂದು ಹುರಿದುಂಬಿಸುತ್ತಿದ್ದಳು ಅಮ್ಮ. ಎಷ್ಟು ಕಷ್ಟಗಳಲ್ಲಿ ಬೆಂದು ಎದ್ದಿದ್ದಾಳೆ. ಅಮ್ಮನನ್ನು ದಿಟ್ಟಿಸಿದೆ. ಅವಳ ಮುಖದಲ್ಲಿ ವಯಸ್ಸಿಗೂ ಮೀರಿದ ಸುಕ್ಕುಗಳು ಕಂಡು ಪಾಪ ಅನ್ನಿಸಿತ್ತು. ಮತ್ತದೇ ಮೆರವಣಿಗೆ ಎತ್ತಿನ ಬಂಡಿ ಊರ ತಲುಪುವಾಗ ಮಕ್ಕಳು ಮುದುಕರು, ಹೆಂಗಸರು ಗಂಡಸರಾದಿಯಾಗಿ ಬಾಗಿಲು, ರಸ್ತೆಗಳಲ್ಲಿ ನಿಂತು ನಮ್ಮೂರ ಹುಡುಗಿಗೆ ಆದ ಅನ್ಯಾಯಕ್ಕೆ ಮರುಗಿದ್ದರು. ಔಷಧದ ಪ್ರಭಾವದಿಂದ ಸ್ವಲ್ಪ ಸ್ವಲ್ಪವಾಗಿ ಚೇತರಿಸಿಕೊಂಡ ಮಾತಂಗಿ ಸಂಜೆಯ ವೇಳೆಗೆ ಕಣ್ಣು ಬಿಟ್ಟು ಆಚೀಚೆ ನೋಡಿದಳು. ನಾನು ಮಾತಂಗಿ… ಎಂದೆ. ಸ್ವಲ್ಪವೇ ಕತ್ತು ಸರಿಸಿ ನೋಡಿದ ಅವಳ ಕಣ್ಣುಗಳಲ್ಲಿ ಧಾರಾಕಾರ ನೀರಿತ್ತು. ʻಹೇಗಿದ್ದೀ ಮಾತಂಗೀ?ʼ ಎಂದು ಅವಳ ಹಣೆಯನ್ನು ಸವರಿದೆ. ಮಾತಂಗಿಗೇನಾಯಿತು ಎಂದು ತಿಳಿಯುವಾಗ ರಾತ್ರಿಯಾಗಿತ್ತು.

ಮಾತಂಗಿಗೆ ಕುರಿ ಕಾಯಲು ಮನಸ್ಸಿಲ್ಲವಾಗಿತ್ತಲ್ಲ ಹಾಗೇ ಮನೆಯಲ್ಲಿರಲೂ ಸಾಧ್ಯವಾಗಲಿಲ್ಲ. ನಾನೂ ಮನೆಯಲ್ಲಿಲ್ಲದ ಕಾರಣ ಹಾಗೇ ಯಾರನ್ನಾದರು ಮಾತಾಡಿಸಿಕೊಂಡು ಬರುವ ಎಂದು ಹೊರಬಂದಿದ್ದಾಳೆ. ಅವರ ಮನೆಯ ಹಿಂಭಾಗಕ್ಕೆ ಸ್ವಲ್ಪ ದೂರ ನಡೆದರೆ ಸ್ವಾಮಣಪ್ಪನ ಮನೆಯ ತಿಪ್ಪೆ. ತೊಂಡೆ ಬಳ್ಳಿಯೊಂದು ತಿಪ್ಪೆಯೊಳಗಿಂದ ಹೊರಕ್ಕೆ ನುಸುಳಿ ಕಾಯಿ ಬಿಟ್ಟಿತ್ತು. ಎಳೆಕಾಯಿ ತಿನ್ನಲು ಚಂದ ಅಲ್ಲವಾ? ಅದನ್ನ ಕಿತ್ತು ತಿನ್ನುವಾಗ ಆ ಕಡೆಯ ಬೇಲಿಯಲ್ಲಿ ಭರ‍್ರೆಂದು ಯಾವುದೋ ಪ್ರಾಣಿ ಹೋದ ಹಾಗೆ ಅನ್ನಿಸಿದೆ. ಅವಳ ಅನುಭವದ ಪ್ರಕಾರ ಅದು ಮೊಲ. ಜಮೀನುದಾರನ ಮನೆಯ ಆಳು ಕಲ್ಲ ಅಲ್ಲಿಗೆ ತೊಪ್ಪೆಯ ಮಂಕರಿಯನ್ನ ಹಿಡಿದು ಬಂದಿದ್ದಾನೆ. ಮೊಲಕ್ಕಾಗಿ ಹುಡುಕುತ್ತಿದ್ದ ಮಾತಂಗಿಯನ್ನು, ʻಏನು ಹುಡುಕುತ್ತಿದ್ದೀಯಾ?ʼ ಎಂದಿದ್ದಾನೆ. ಅವಳು, ʻಉಷ್ ಜೋರಾಗಿ ಮಾತಾಡಬೇಡ ಇಲ್ಲೇ ಎಲ್ಲೋ ಮೊಲ ಇದೆʼ ಎಂದು ಹುಡುಕಾಟಕ್ಕಿಳಿದಾಗ, ಎಲ್ಲವೂ ತಮಾಷಿ ಅನ್ನಿಸಿ ಅವಳ ಜೊತೆ ಅವನೂ ಮೊಲ ಹಿಡಿವ ಆಟಕ್ಕೆ ಇಳಿದಿದ್ದಾನೆ. ಹೊಂಚುಹಾಕಿ ಹಿಡಿವ ಅವಳ ಚಾಕಚಕ್ಯತೆ ಕಂಡು ಬೆರಗಾಗಿ ಮೊಲವನ್ನು ಹೀಗೂ ಹಿಡಿಯಲು ಸಾಧ್ಯವಾ? ಎಂದು ಬೆರಗಿಂದ ನೋಡುವಾಗ ಮಧ್ಯಮ ಗಾತ್ರದ ಮೊಲವೊಂದು ಅವಳ ಕೈಗೆ ಸಿಕ್ಕಿಕೊಂಡಿದೆ. ಅದರ ಕಿವಿಯನ್ನು ಎತ್ತಿ ಹಿಡಿದು ತೋರಿಸಿ, ʻಹೇಳಿದ್ನಲ್ಲಾ ನೋಡುʼ ಎನ್ನುವಾಗ ಕಲ್ಲ, ʻಅದು ನಮ್ಮ ಬೇಲಿಯ ಒಳಗೆ ಸಿಕ್ಕಿದ್ದರಿಂದ ನನಗೇ ಸೇರಬೇಕುʼ ಎಂದು ಅದನ್ನು ಕಸಿದುಕೊಳ್ಳಲು ಮುಂದಾಗಿದ್ದಾನೆ. ʻಆಕಾಶ ನಿಮ್ಮ ದಣಿ ತಲೆಮೇಲಿದೆ ಅಂತ ಅದು ದಣಿಯದ್ದು ಅನ್ನೋ ಪೈಕಿ ನೀನುʼ ಎಂದು ಮಾತಂಗಿಯೂ ಮಾತು ಸೇರಿಸಿದ್ದಾಳೆ. ಕೋಪಗೊಂಡ ಕಲ್ಲ, ʻಏನು ನೀನು ನಮ್ಮ ದಣಿಗಳನ್ನ ಅನ್ನೋದು? ಈ ಮೊಲ ನಮ್ಮ ದಣಿಗಳ್ದು ಅಲ್ಲ ಅಂತ ಹೇಳೋ ಗಂಡುಮಗ ಈ ಊರಲ್ಲಿ ಇದ್ದಾನಾ? ನಾನೂ ನೋಡ್ತೀನಿʼ ಎಂದ ಅವನಿಗೆ, ʻಗಂಡು ಮಗ ಯಾಕೆ ನಾನೇ ಹೇಳ್ತೀನಿʼ ಎಂದು ಮಾತಿನ ಭರದಲ್ಲಿ ಮಾತಂಗಿ ಅಂದೂ ಬಿಟ್ಟಿದ್ದಾಳೆ. ಇದು ಕಲ್ಲನ ಅಹಂ ಅನ್ನು ಕೆಣಕಿ ಅವಳ ಕೈಲಿರುವ ಮೊಲವನ್ನು ಹಿಡಿದು ಎಳೆಯ ತೊಡಗಿದ. ಈ ಎಳೆದಾಟದಲ್ಲಿ ಮೊಲ ಅವಳ ಕೈಯ್ಯಿಂದ ತಪ್ಪಿಸಿಕೊಂಡು ಹೋಗಿ ಮಾತಂಗಿ ಅವನ ಕೈಗಳಲ್ಲಿ ಸಿಕ್ಕಿದ್ದಳು. ಅವನ ಕೈಗಳನ್ನು ಕೊಸರಿಕೊಳ್ಳುತ್ತಾ, ʻನಿನ್ನಿಂದ ನನ್ನ ಮೊಲ ತಪ್ಪಿಸಿಕೊಂಡಿತುʼ ಎಂದು ಅವನಿಗೆ ಬೈದಿದ್ದಾಳೆ, ಅವನಿಗೆ ಏನನ್ನಿಸಿತೋ ಏನೋ ಅವಳನ್ನು ಹತ್ತಿರಕ್ಕೆ ಎಳೆದುಕೊಂಡು, ʻಆ ಮೊಲ ಹೋದರೆ ಏನು ಈ ಮೊಲ ಸಿಕ್ಕಿತುʼ ಎನ್ನುತ್ತಾ ಅವಳನ್ನು ತನ್ನ ತೋಳುಗಳಲ್ಲಿ ಇರುಕಿಸಿಕೊಂಡಿದ್ದಾನೆ. ʻಏಯ್ ಕಲ್ಲಾ ಯಾಕೋ ಮೈಲಿ ಹೆಂಗಿದೆ?ʼ ಎಂದು ಮಾತಂಗಿ ಎನ್ನುವಾಗ, ʻಬಿಸಿ ಏರಿದೆ. ಏನ್ ಮಾಡ್ಲಿ ಇಳಿಸಿಕೊಳ್ಳಲೇ ಬೇಕುʼ ಎಂದು ಅವಳನ್ನು ಎಳೆದುಕೊಂಡು ಹೋಗಿದ್ದಾನೆ. ಅಮಲಿಳಿದ ಮೇಲೆ ಅವಳನ್ನು ಜೀವಂತ ಉಳಿಸಿದರೆ ತನ್ನ ಹೆಸರು ಹೊರಗೆ ಬರುತ್ತೆ ಎಂದು ಉಸಿರು ಕಟ್ಟಿಸಿದ್ದಾನೆ. ಕಲ್ಲನ ಆಕ್ರಮಣದಿಂದಾಗಿ ಮಾತಂಗಿಗೆ ಮೊದಲೇ ಸುಸ್ತಾದ್ದರಿಂದ ಪ್ರಜ್ಞಾನಹೀನ ಸ್ಥಿತಿಗೆ ತಲುಪಿಬಿಟ್ಟಿದ್ದಳು. ಸತ್ತಿದ್ದಾಳೆ ಎಂದು ಭಾವಿಸಿದ ಅವನು ಹೆಣವನ್ನು ಮಾಡುವುದಾದರೂ ಏನು? ತಾನು ಇಲ್ಲಿಂದ ಹೋಗಿಬಿಟ್ಟರೆ ತನ್ನ ಮೇಲೆ ಅನುಮಾನ ಪಡುವವರಾದರೂ ಯಾರು? ಎಂದು ಅಲ್ಲೇ ಬಿಟ್ಟು ಹೊರಟಿದ್ದಾನೆ. ಆದರೆ ಪ್ರಜ್ಞೆ ಮರಳಿದ ಮೇಲೆ ಸ್ವಲ್ಪ ಸ್ವಲ್ಪವೇ ತೆವಳುತ್ತಾ ಮಾತಂಗಿ ಬಾವಿಯ ತನಕ ಬಂದಿದ್ದಾಳೆ. ಅಲ್ಲಿಂದ ಮುಂದೆ ಬರಲಾಗದೇ ಅಲ್ಲೇ ಬಿದ್ದು ಬಿಟ್ಟಿದ್ದಾಳೆ. 

ಘಟನೆಯನ್ನು ಕೇಳಿದ ಮೇಲೆ ನಖಶಿಖಾಂತ ಉರಿದುಹೋಯಿತು. ಹೆಣ್ಣುಮಕ್ಕಳು ಆಟದ ವಸ್ತುಗಳಾ? ಆಡಿದ ಗುರುತು ಉಳಿದೀತು ಎಂದು ಬದುಕುವ ಹಕ್ಕನ್ನಾ ಕಸಿದುಕೊಳ್ಳುತ್ತಾರಾ? ಯಾಕೆ ಎಲ್ಲ ಶಿಕ್ಷೆಯನ್ನು ನಾವೇ ಅನುಭವಿಸಬೇಕು? ನಮ್ಮ ದೇಹವೇ ನಮಗೆ ಶಾಪವಾ? ಪಾಪ  ಮಾತಂಗಿ ತಿಳಿಮನಸ್ಸಿನ ಹುಡುಗಿ. ತಾನಾಯಿತು ತನ್ನ ಕುರಿಗಳಾಯಿತು ಎಂದು ಇದ್ದವಳು. ಅವಳಿಗಿದ್ದ ಆಸೆ ಮೊಲದ ಮಾಂಸ ಒಂದೇ. ಅದಕ್ಕಾಗಿ ಇವತ್ತು ಈ ಸ್ಥಿತಿಗೆ ಬಂದು ತಲುಪಿದ್ದಾಳಲ್ಲಾ? ಎಂದು ಕಣ್ಣೀರು ಬಂತು. ತಪ್ಪು ಮಾಡಿದವನಿಗೆ ಶಿಕ್ಷೆ ಆಗದಿದ್ದರೆ ಹೇಗೆ? ಆ ಕಲ್ಲನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎನ್ನುವ ತೀರ್ಮಾನಕ್ಕೆ ನಾನಂತೂ ಬಂದಿದ್ದೆ. ಆದರೆ ನನ್ನ ಮಾತನ್ನು ಒಪ್ಪಲು ಮಾತಂಗಿಯ ಮನೆಯವರ್ಯಾರೂ ಸಿದ್ಧವಿರಲಿಲ್ಲ. ಯಥಾಪ್ರಕಾರ ಮನೆ ಮಾನಮರ್ಯಾದೆ ಪ್ರಶ್ನೆ ಎದುರಾಗಿಬಿಟ್ಟಿತ್ತು. 

ನಾನು, ಸತೀಶ ಎಲ್ಲ ಎಷ್ಟು ಹೇಳಿದರೂ, ಊರಲ್ಲೇ ಇರಬೇಕು. ಪೊಲೀಸು, ಕಾನೂನು ಅಂತ ಹೋದ್ರೆ ಹೋದ ಮರ್ಯಾದೆ ಮತ್ತೆ ವಾಪಾಸು ಬಂದೀತೇ? ಎಂದ ಊರ ಜನ ಆದ ತಪ್ಪನ್ನು ಸರಿ ಮಾಡಿಕೊಂಡು ಬಿಡೋಣ ಎಲ್ಲ ನಮ್ಮ ಕೈಲೇ ಇದೆ ಎಂದಿದ್ದರು. ಸರಿ ಮಾಡಿಕೊಳ್ಳಲಿಕ್ಕೆ ಮುರಿದದ್ದು ಆಟಿಕೆಯಲ್ಲ, ಮಾತಂಗಿಯ ಮನಸ್ಸು. ದೇಹ ಮನಸ್ಸುಗಳು ಆಘಾತದಲ್ಲಿರುವಾಗ ಸರಿ ಮಾಡುವ ಮಾತು ಯಾಕೆ ಆಡುತ್ತಾರೆ? ಕಾನೂನು ಎಲ್ಲವನ್ನೂ ನೋಡಿಕೊಳ್ಳುವಾಗ ಅದನ್ನು ಬಿಟ್ಟು ಇವರ್ಯಾವ ಪರಿಹಾರ ಕೊಡಬಹುದು ಎಂದು ಕುತೂಹಲವೂ ಇತ್ತು.

ಅವರು ಕೊಟ್ಟ ಸಲಹೆ ಕೇಳಿ ನಾನೇ ದಂಗಾದೆ. ಕೆಡಿಸಿದ್ದಕ್ಕೆ ಅವನಿಗೆ ಕೊಟ್ಟು ಮದುವೆ ಮಾಡುವುದಂತೆ. ಇದೆಂಥಾ ಶಿಕ್ಷೆ? ನಾನು ಮಾವನ ಜೊತೆ, “ಇದೆಂಥಾ ನ್ಯಾಯ ಮಾವ? ಅವನಿಗೆ ಜೈಲಾಗಬೇಕು ಅಂದ್ರೆ ನೀವು ಮದುವೆ ಮಾಡುವ ಮಾತಾಡ್ತಾ ಇದೀರಲ್ಲಾ?ʼ ಎಂದೆ. ʻಮತ್ತಿನ್ನೇನು ಮಾಡಲಿ? ಇವಳನ್ನ ಯಾರು ಮದ್ವೆ ಆಗ್ತಾರೆ?ʼ ಎಂದು ಶೂನ್ಯವನ್ನು ದಿಟ್ಟಿಸಿದ್ದ. ಅರೆ ಹಾಗಂತ ಜನ್ಮಪೂರ್ತಿ ಆ ಕಲ್ಲನ ಜೊತೆ ಮಾತಂಗಿ ದಿನಾ ಶಿಕ್ಷೆ ಅನುಭವಿಸಬೇಕಾ? ʻಎಲ್ಲದಕ್ಕೂ ಮದುವೇನೇ ಅಂತಿಮ ಅಲ್ಲʼ ಎಂದ ಸತೀಶ. ʻಇನ್ನೊಬ್ಬರ ವಿಚಾರಕ್ಕೆ ಏನು ಬೇಕಾದರೂ ಮಾತಾಡಬಹುದಪ್ಪಾ ಕಷ್ಟ ನಮ್ಮದುʼ ಎಂದ ಮಾವ. ಮತ್ತೆ ಮಾತು ಬೆಳೆಸುತ್ತಿದ್ದ ನನ್ನ ತಡೆದು ಅಮ್ಮನೂ, ʻಇದೆಲ್ಲಾ ನಿನಗೆ ಗೊತ್ತಾಗಲ್ಲ, ರೊಟ್ಟಿಯನ್ನು ಕಾಗೆ ಮುಟ್ಟಿದ ಮೇಲೆ ಆ ರೊಟ್ಟಿಯನ್ನು ಯಾರಾದರೂ ತಿನ್ನುತ್ತಾರೆಯೇ? ಅದು ಕಾಗೆಯ ಪಾಲೇ ಅಲ್ಲವೇ?ʼ ಎಂದಳು. ʻಅಮ್ಮಾ ಹೆಣ್ಣುಮಕ್ಕಳು ಅಂದ್ರೆ ಇಷ್ಟೇನಾ? ನಾವು ರೊಟ್ಟಿ ಅಲ್ಲ. ಜೀವಂತ ಮನುಷ್ಯರುʼ ಎಂದಿದ್ದೆ ಅತ್ಯಂತ ನೋವಿನಿಂದ. ನನ್ನ ಮಾತನ್ನು ಕೇಳಲು ಯಾರೂ ಸಿದ್ಧವಿರಲಿಲ್ಲ.   

ಇಲ್ಲ ಇವರ್ಯಾರಿಗೂ ನ್ಯಾಯದ ಕಲ್ಪನೆಯೇ ಇಲ್ಲ. ನಾನು ಸಾರಿ ಹೇಳಿದರೂ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಮಾತಂಗಿ ಅಳಲಿಲ್ಲ. ಆದರೆ ಈ ಮಾತುಗಳಿಂದ ಅವಳಿಗೆ ಆಘಾತವಾಗಿತ್ತು. ಕಲ್ಲ ಅವಳ ಮುಗ್ಧ ದೇಹದ ಮೇಲೆ ಅಮಾನುಷವಾಗಿ ಎರಗಿ ಮಾಡಿದ ಗಾಯ ಮಾಯಲಾಗದ್ದು. ಅವಳು ಮದುವೆ ಆಗಲಾರೆ ಎಂದು ಹೇಳಲಾರಳು. ಹೇಳಿದರೂ ಕೇಳಲಿಕ್ಕೆ ಯಾರೂ ಸಿದ್ಧವಿರಲಿಲ್ಲ. ʻಹೇಗಾದರೂ ಮಾಡಿ ಇದರಿಂದ ಕಾಪಾಡು ನನ್ನʼ ಎಂದು ಅಂಗಲಾಚಿದ ಮಾತಂಗಿಯ ಕಣ್ಣುಗಳ ದೈನ್ಯತೆ ನನ್ನ ಎದೆಯನ್ನು ಸುಟ್ಟುಬಿಟ್ಟಿತ್ತು. ಅವಳಿಗೆ ಹೋರಾಡು ಎನ್ನುವಂತಿಲ್ಲ, ಆ ಧೈರ್ಯ ಅವಳಲ್ಲಿಲ್ಲ. ಮತ್ತೇನು ಮಾಡಲಿಕ್ಕೆ ಸಾಧ್ಯ? ಆಕಾಶದಷ್ಟು ಅವಕಾಶವನ್ನು ಜಗತ್ತೆ ಒಮ್ಮೆ ನನಗೆ ಕೊಡು. ಇಡೀ ಜಗತ್ತನ್ನೆ ಬದಲಿಸಿಬಿಡುವೆ ಎಂದು ಮನಸಾರೆ ಅತ್ತಿದ್ದೆ. ಆದರೆ ಪ್ರತಿಭಟನೆ ಹೇಗೆ ಮಾಡಲಿ? ಅವರಿಗೇ ಬೇಕಾಗದ್ದು ನಿನಗೆ ಯಾಕೆ ಎಂದರೆ ನನ್ನಲ್ಲಿ ಉತ್ತರವೇನು? ʻಸಮಾಧಾನ ಮಾಡಿಕೋ, ಅವರ ತಂದೆ-ತಾಯಿಯೋ, ಅವಳೋ ಯಾರಾದರೂ ಒಬ್ಬರು ನಮ್ಮ ಜೊತೆ ನಿಂತರೆ ಸಾಕು ನಾವು ಹೋರಾಡಬಹುದು, ಅವರೇ ಬೇಡ ಅಂದ ಮೇಲೆ ನಾವಾದರೂ ಏನು ಮಾಡಿಯೇವು?ʼ ಎಂದಿದ್ದ ಸತೀಶ. ದಾಂಪತ್ಯದ ಬಗ್ಗೆ ಮಧುರಾತಿಮಧುರ ಭಾವನೆಗಳನ್ನು ಕಳಕೊಂಡು ಮಾತಂಗಿ ಸಂಸಾರದ ಮೆಟ್ಟಿಲು ಹತ್ತಲು ಸಿದ್ಧವಾದಳು. ಇಲ್ಲ ಅವಳನ್ನು ಹಾಗೆ ಸಿದ್ಧ ಮಾಡಿಬಿಟ್ಟರು. ಅವಳಿಗೆ ಸಮಯವನ್ನೂ ಕೊಡಲಿಲ್ಲ. ತಪ್ಪುಗಳನ್ನು ತಕ್ಷಣವೇ ಸರಿ ಮಾಡಿಕೊಂಡು ಬಿಡಬೇಕಲ್ಲಾ!?

ಮಾತಂಗಿಯಂಥಾ ಹೆಣ್ಣಿಗೆ ದಾರಿ ನೂರು. ಹಸೆಮಣೆ ಏರಬೇಕಿದ್ದವಳು ಓಡಿ ಹೋದಳು. ಅವಳ ಗುಂಡಿಗೆ ಅಷ್ಟು ಗಟ್ಟಿ ಇತ್ತು ಅಂತ ಗೊತ್ತೇ ಇರಲಿಲ್ಲ. ಆ ವಿಷಯ ಕೇಳಿದ ತಕ್ಷಣ ನನ್ನ ತುಟಿಯಂಚಲ್ಲಿ ನಗುವಿತ್ತು. ಅವಕಾಶ ಸಿಕ್ಕರೆ ಯಾವ ಹೆಣ್ಣು ಅಬಲೆಯಲ್ಲ. ಅವಕಾಶವನ್ನು ಕಲ್ಪಿಸಿಕೊಳ್ಳುವಲ್ಲಿ ಮೂರ್ಖಳೂ ಅಲ್ಲ. ಅವಳದ್ದೂ ಪ್ರತಿಭಟನೆಯ ಒಂದು ದಾರಿಯೇ.  

ಊರಿನವರಿಗೆ ಆದ ಅನ್ಯಾಯದ ಕಲ್ಪನೆಯೂ ಇರಲಿಲ್ಲ. ಮದುವೆಗೆ ಮೊದಲೇ ಎಲ್ಲವೂ ಆದ್ದರಿಂದ ಅವಳನ್ನು ಮದುವೆ ಆಗಬೇಕು. ಅವನು ಹಾಳು ಮಾಡಿದ್ದರಿಂದ ಅವನೇ ಸರಿ ಮಾಡಬೇಕು! ಅದು ಬೇರೆ ವಸ್ತುವಿನ ವಿಷಯದಲ್ಲಾಗಿದ್ದರೆ ಸರಿ. ಆದರೆ ಹೆಣ್ಣಿನ ಜೀವನದ ಪ್ರಶ್ನೆ. ಅವಳ ಇಷ್ಟ ಮುಖ್ಯ ಎಂದರೆ ಯಾರು ಕೇಳುವವರು? ಒಮ್ಮೆ ಆದರೂ ಅದೇ, ಜೀವನಪೂರ್ತಿ ಆದರೂ ಅದೇ. ಓಡಿ ಹೋಗುವ ಜರೂರು ಏನಿತ್ತು? ಮಾತಂಗಿಯು ಓಡಿಹೋಗಿದ್ದಕ್ಕೆ ಎಲ್ಲರಿಗೂ ನನ್ನ ಮೇಲೆ ಅನುಮಾನ, ನಾನೇ ಅವಳನ್ನು ಎಲ್ಲಿಗೋ ಕಳಿಸಿದೆ ಎಂದು. ಆದರೆ ಹೀಗೆ ಓಡಿ ಹೋಗಿ, ತನಗಿಷ್ಟವೇ ಇಲ್ಲ ಎಂದು ಹೇಳಬಹುದು ಎಂದು ಊಹೆ ಕೂಡಾ ಮಾಡಿಕೊಂಡಿರಲಿಲ್ಲ. ಎದುರು ನಿಂತು ಜಗಳ ಮಾಡುವುದಷ್ಟೇ ನನಗೆ ಗೊತ್ತಿದ್ದದ್ದು. ದುರಂತ ಎಂದರೆ ಸತ್ತು ಸತ್ತೇ ಬದುಕುವ ಅನಿವಾರ್ಯತೆಯನ್ನು ಪಕ್ಕಕ್ಕೆ ತಳ್ಳಿ ಬೆಳಕನ್ನು ಅರಸಿ ಹೋದ ಅವಳನ್ನು ಮತ್ತೆ ಹುಡುಕಿ ತಂದು ಕಲ್ಲನಿಗೇ ಕೊಟ್ಟು ಮದುವೆ ಮಾಡಿದರು. ಆಮೇಲಿನ ಅತ್ಯಾಚಾರವನ್ನು ಊರವರು ಅತ್ಯಾಚಾರ ಎಂದು ಕರೆಯಲೇ ಇಲ್ಲ. ಮದುವೆಯ ದಿನ ನಾನು ಅವಳನ್ನು ಕೇಳಿದೆ, ʻಮಾತಂಗಿ ಹೇಳೆ, ಈಗೇನು ಮಾಡ್ತೀಯ?ʼ ಮಾತಂಗಿ ತನ್ನ ಪ್ರತಿಭಟನೆಯನ್ನು ಎದೆಯಲ್ಲಿ ಉಳಿಸಿಕೊಂಡವಳಂತೆ,  ʻನನಗೆ ಅವನು ಗಂಡನಲ್ಲʼ ಎಂದಿದ್ದಳು. ಅವನೆಷ್ಟು ಹಿಂಸೆ ಮಾಡಿದರೂ ಅವನನ್ನು ಮಾತನಾಡಿಸಲಿಲ್ಲ. ಕೋಪಗೊಂಡ ಗಂಡಸಿಗೆ ಅಹಂನ ತಣಿಸುವಿಕೆಗೆ ಇರುವುದು ಅತ್ಯಾಚಾರ ಅದು ತಾಳಿ ಕಟ್ಟಿದರೂ ಕಟ್ಟದಿದ್ದರೂ.

ಮಾತಂಗಿ ಈಗ ಹೇಗಿರಬಹುದು? ನನ್ನ ನೋಡಿ ಗುರುತಿಸುತ್ತಾಳಾ? ಇಲ್ಲವಾ? ಎಲ್ಲಕ್ಕಿಂತ ಮುಖ್ಯ ಅವಳು ಮತ್ತೆಂದೂ ಮೊಲ ಹಿಡಿದಳೋ ಇಲ್ಲವೇನೋ ಕೇಳಬೇಕು. ಹೀಗೆಂದು ಯೋಚನೆ ಮಾಡುತ್ತಾ ಮಾತಂಗಿಯ ಮನೆಯ ಮುಂದೆ ನಿಂತಾಗ ಎಂಥಾದ್ದೋ ಉದ್ವೇಗ. ಕಂಬದ ಜಗುಲಿಯ ಮಾಡಿಗೆ ಕಟ್ಟಿದ್ದ ಸೊಪ್ಪು ಮನೆಯಲ್ಲಿ ಆಡಿದೆ ಎಂದು ಹೇಳುತ್ತಿತ್ತು. ಮನೆಯ ಮುಂದೆ ಅಂಗಳದ ಮೂಲೆಯಲ್ಲಿ ಸೊಪ್ಪು ಮಡಿಸೀರೆ ಕಟ್ಟಿಸಿಕೊಂಡು ಮರೆಯಾಗಿ ಮನೆಯೊಡತಿಯ ಪಾಲನೆ ಶಕ್ತಿಯನ್ನು ಹೇಳುತ್ತಿತ್ತು. ʻಮಾತಂಗಿ…ʼ ಎಂದು ಕೂಗಿದೆ. ನನಗೆ ಗೊತ್ತಿಲ್ಲದ ಆವೇಶವೊಂದು ನನ್ನ ಧ್ವನಿಗೆ ದಕ್ಕಿ ಬಿಟ್ಟಿತ್ತು. ಒಳಗಿನಿಂದ ಓಡಿ ಬರುವವಳನ್ನು ನೋಡಿದೆ. ನನ್ನ ಮಾತಂಗಿಯೇ ಇವಳು? ಬಂದದ್ದು ನಾನೇ ಎಂದು ಊಹೆ ಮಾಡಲಿಕ್ಕೆ ಅವಳಿಗೆ ತುಂಬಾ ಕಾರಣಗಳಿತ್ತು. ಓಡಿ ಬಂದವಳೇ ಅಪ್ಪಿಕೊಂಡು, ʻಹೇಗಿದ್ದೀಯ ರಾಜ್ಯಾ?ʼ ಎಂದಳು. ಮರೆತ ನನ್ನ ಹೆಸರು ಮತ್ತೆ ನೆನಪಿಗೆ ಬಂದಿತ್ತಾದರೂ ಯಾಕೋ ಅವಳ ಆಪ್ತವಾದ ಧ್ವನಿಯಲ್ಲೂ ಆ ಹೆಸರು ಅಪರಿಚಿತ ಅನ್ನಿಸಿತ್ತು. ಲೋಕದ ಎದುರು ನನ್ನ ಅಸ್ತಿತ್ವವನ್ನು ಹೇಳುವ ಹೆಸರು ಬೇರೆಯದ್ದೆ ಇತ್ತಲ್ಲ.

ನಮ್ಮ ನಮ್ಮ ಬಗ್ಗೆ ಮಾತಾಡಿಯಾದ ಮೇಲೆ ಮಕ್ಕಳ ಬಗ್ಗೆ ಮಾತಾಡಿಕೊಂಡೆವು. ನನಗೆ ಹೇಳಲ್ಲಿಕೆ ತುಂಬಾ ಏನೂ ಇರಲಿಲ್ಲ. ಒಟ್ಟು ಐದು ಮಕ್ಕಳ ತಾಯಿ ಮಾತಂಗಿ ಸೊರಗಿದ್ದಳು. ಆದರೆ ಒಳಗಿನಿಂದ ಗಟ್ಟಿಯಾಗಿದ್ದಳು. ಮಕ್ಕಳನ್ನು ಹಟದಿಂದ ಓದಿಸುತ್ತಿದ್ದಳು. ದೊಡ್ಡ ಮಗ ಈ ವರ್ಷ ಕಳೆದರೆ ಎಂ.ಟೆಕ್ ಮುಗಿಸುತ್ತಿದ್ದ. ಹಿಂದೆ ಇದ್ದ ಎರಡು ಗಂಡು, ಎರಡು ಹೆಣ್ಣುಮಕ್ಕಳೂ ಓದುತ್ತಿದ್ದರು. ʻಕೊನೆಯ ಮಗಳು ಈ ಸಲ ಎಸ್ಎಸ್ಎಲ್‌ಸಿ. ಅವಳನ್ನು ಡಾಕ್ಟರ್ ಮಾಡಿಬಿಡುತ್ತೇನೆʼ ಎಂದಳು. ಇಂಥಾ ಹಳ್ಳಿಯಲ್ಲಿದ್ದುಕೊಂಡು ಅವಳ ಹಟವನ್ನು ಮೆಚ್ಚಬೇಕು. ತಾನೇ ದುಡಿದು ಮಕ್ಕಳನ್ನು ಓದಿಸುತ್ತಿದ್ದಳು. ಅಳೆದು ಸುರಿದು ʻನಿನ್ನ ಗಂಡ…?ʼ ಎಂದೆ. ತೀಕ್ಷ್ಣವಾಗಿ ನನ್ನ ನೋಡುತ್ತಾ ಮಾತಂಗಿ, ʻಯಾರು?ʼ ಎಂದಳು. ನಾನು ಮಾತಾಡಲಿಲ್ಲ. ಸೊರಗಿದ್ದ ದೇಹದ ಆ ಕಣ್ಣುಗಳಲ್ಲಿ ಬೆಂಕಿಯೊಂದು ಹುಟ್ಟಿದ ಹಾಗನ್ನಿಸಿತ್ತು. ʻಅದೊಂದು ಪ್ರಾಣಿ. ಕುಡಿಯುತ್ತೆ, ಮನೆಗೆ ಬರುತ್ತೆ. ಮೈಮೇಲೆ ಬೀಳುತ್ತೆ. ಹಾಗೆ ಬಿದ್ದ ಪ್ರತಿಸಲವೂ ಮೊದಲ ಬಾರಿ ಅನುಭವಿಸಿದ್ದೆನಲ್ಲಾ ಅದೇ ನೆನಪಾಗುತ್ತದೆ. ಆ ಕ್ಷಣ ನರಕಕ್ಕೆ ಬಾಗಿಲು ತೆರೆದುಬಿಡುತ್ತೇನೆ. ಹಾಳಾಗಿ ಹೋಗಲಿ ಜೀವಮಾನಪೂರ್ತಿ ಶಿಕ್ಷೆ ಅನುಭವಿಸುವುದೇ ನನ್ನ ಹಣೆಯಲ್ಲಿದೆ. ಬಿಡು ನಿನ್ನ ಕನಸುಗಳಾದರೂ ಸಾಕಾರವಾದವಲ್ಲಾʼ ಎಂದಳು.

ಒಮ್ಮೆ ಮಾಡಿದ್ದ ತಪ್ಪಿಗೆ ಕಲ್ಲನನ್ನು ಜೀವಮಾನ ಪೂರ್ತಿ ಕ್ಷಮಿಸಿಲ್ಲವಲ್ಲ ಮಾತಂಗಿ! ಒಪ್ಪಿಕೊಳ್ಳಲಿಲ್ಲ ಯಾವುದನ್ನೂ. ಇಷ್ಟು ವರ್ಷಗಳಲ್ಲಿ ಅವಳು ತನ್ನ ಅಚಲವಾದ ನಿರ್ಧಾರದಿಂದ ಇಂಚಿನಷ್ಟೂ ದೂರ ಸರಿಯಲೇ ಇಲ್ಲ. ಕನಿಷ್ಟ ಅವನನ್ನು ಮನುಷ್ಯ ಅಂತಲೂ ಗಣಿಸದ ಅವಳ ಗಟ್ಟಿತನ ನನಗೆಲ್ಲಿ ಬರಬೇಕು. ಅಂದುಕೊಂಡ ಹಾಗೆ ಬದುಕುವ ಅವಳೆಲ್ಲಿ? ಬದುಕುತ್ತಿದ್ದೇನೆ ಎಂದು ತೋರಿಸಿಕೊಳ್ಳುವ ನಾನೆಲ್ಲಿ? ನಾನು ಅವಳ ಪ್ರಶ್ನೆಗೆ ಉತ್ತರಿಸಲಿಲ್ಲ. ಅವಳನ್ನು ನೋಡಲು ಬರುವಾಗ ನಾನು ಅವಳಿಗಿಂತ ದೊಡ್ಡವಳು ಎಂದು ತೋರಿಸಿಕೊಳ್ಳುವ ಹಮ್ಮಿತ್ತಾ? ಇದ್ದಿರಲೇ ಬೇಕು. ಯಾಕೆಂದರೆ ಕೀರ್ತಿ, ಪ್ರತಿಷ್ಠೆ, ವರ್ಚಸ್ಸು ಎಲ್ಲವೂ ನನಗಿದೆ ಎಂದುಕೊಂಡಿದ್ದೆನಲ್ಲಾ. ಜಗತ್ತಿನ ಕಣ್ಣಿಗೆ ಏನೂ ಅಲ್ಲದ ಮಾತಂಗಿ ಸ್ವತಃ ತಾನೇ ಪ್ರತಿಭಟನೆ ಎನ್ನುವ ಹಾಗೆ ನನ್ನೆದುರು ನಿಂತಿದ್ದಳು. ಸಹಾರ ಜೊತೆಗಿನ ಒಳಗಿನ ಗುದ್ದಾಟವನ್ನು ಹೊರಗೆ ತೋರಿಸಿಕೊಳ್ಳದೆ ನಯನಾಜೂಕಲ್ಲಿ ಬದುಕುತ್ತಿರುವ ನಾನು ಹಳ್ಳಿಯಲ್ಲಿ ತಾನೇ ತಾನಾಗಿ ಬದುಕುತ್ತಿರುವ ಅವಳ ಎದುರು ಸೋತಂತೆ ತಲೆ ತಗ್ಗಿಸಿದ್ದೆ. ಹೋರಾಟ ಅನ್ನುವುದು ತೋರಿಕೆಯದ್ದಲ್ಲ, ಅದು ಜೀವದ ಹಾಡು. ʻಸಾಧಿಸಿ ತೋರಿಸಿದೆಯಲ್ಲೇʼ ಎಂದು ಶರಣಾದವಳಂತೆ ಅವಳನ್ನು ತಬ್ಬಿ, ಅವಳ ಹಟ ನನ್ನೆದೆಗೆ ಕಿಂಚಿತ್ತಾದರೂ ಬರಬಾರದೆ ಎಂದುಕೊಂಡೆ. ಸೋತೆ ಎನ್ನುವ ಭಾವನೆ ನನ್ನಲ್ಲಿ ಮತ್ತೆ ಮತ್ತೆ ಮೂಡತೊಡಗಿತ್ತು.

‍ಲೇಖಕರು avadhi

13 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading