
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.
‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ, ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.
ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.
ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.
37
ಮುತುವಲಿಯ ಮನೆಯ ಶೂಟಿಂಗ್ ಮುಗಿಸಿ ಸಂಜೆಯ ಹೊತ್ತಿಗೆ ಎಲ್ಲರೂ ಪಾತುಮ್ಮನ ಮನೆಯ ಲೊಕೇಷನ್ಗೆ ಬಂದರು. ಮಧ್ಯದಲ್ಲಿ ನೀರು ಖಾಲಿಯಾದರೆ ಎಂದು ಎರಡು ಟ್ಯಾಂಕರ್ಗಳಿಗೆ ಹೇಳಿಟ್ಟಿದ್ದೆವು. `ಫೋನ್ ಮಾಡಿ ತಕ್ಷಣ ಕಳಿಸುತ್ತೇನೆ’ ಎಂದಿದ್ದರು ಟ್ಯಾಂಕರ್ ಮಾಲೀಕರು. ಸೂರ್ಯಾಸ್ತದ ಹೊತ್ತಿಗೆ ಶೂಟಿಂಗ್ ಶುರುವಾದ್ದರಿಂದ ಮಳೆಯ ವಾತಾವರಣದ ವಿವರಗಳನ್ನು ತೋರಿಸುವುದು ತೊಡಕಾಗಲಿಲ್ಲ. ಜೋರು ಮಳೆ ಸಮುದ್ರ ಉಕ್ಕುವುದನ್ನು ಸೂಚಿಸುವಂತೆ ಚಿತ್ರಿಸಬೇಕಿತ್ತು. ಅದು ಬೇಸಿಗೆ ಕಾಲವಾದ್ದರಿಂದ ಮೋಡದ ವಾತಾವರಣ ತರುವುದು ಕಷ್ಟವೇ ಅದನ್ನು ದಾಟಿಕೊಳ್ಳಲಿಕ್ಕೆ ನಾವು ಹೀಗೆ ಮಾಡದೆ ಬೇರೆ ದಾರಿಯೂ ಇರಲಿಲ್ಲ.
ಅವತ್ತು ತುಂಬಾ ಚಿತ್ರೀಕರಣ ಸಾಧ್ಯವಾಗದೇ ಹೋದ್ದರಿಂದ ಮೊದಲ ದೃಶ್ಯವೇ ಬಾಕಿ ಉಳಿದುಬಿಟ್ಟಿತ್ತು. ಆ ದೃಶ್ಯದಲ್ಲಿ ಕಥೆಯ ಒಟ್ಟು ಆಶಯ ವ್ಯಕ್ತವಾಗಬೇಕಿತ್ತು. ಸೀತರಾಮ ಬೈತಾಡಿಯಪ್ಪ ಎನ್ನುವ ವಿಲೇಜ್ ಅಕೌಂಟೆಂಟ್ ಬಂದು ಸರಕಾರ ಕೊಟ್ಟಿರುವ ಜಾಗದಲ್ಲಿ ಪಾತುಮ್ಮನ ಮನೆ ಕಟ್ಟಿಕೊಳ್ಳುವುದರ ಬಗ್ಗೆ ಹೇಳುತ್ತಾ, ಇಲ್ಲದಿದ್ದರೆ ನಿನ್ನ ಜಾಗದಲ್ಲಿ ಬೇರೆ ಯಾರಾದರೂ ಮನೆಕಟ್ಟಿಯಾರು. ಆಗ ನಿನ್ನ ಹಕ್ಕು ಪತ್ರಗಳನ್ನು ತಗೊಂಡು ಹೋಗಿ ಒಲೆಗೆ ಇಕ್ಕಬೇಕಾಗುತ್ತದೆ ಎಂದು ಹೇಳುತ್ತಾನೆ. ಅಲ್ಲಿಂದಲೇ ಪಾತುಮ್ಮನ ಮನೆ ಕಟ್ಟುವ ಪ್ರಯತ್ನ ಆರಂಭ ಆಗಬೇಕಿತ್ತು.
ನಾವು ಮೊದಲ ದೃಶ್ಯ ಮತ್ತು ಕೊನೆಯ ದೃಶ್ಯವನ್ನು ಒಟ್ಟಿಗೆ ಹಾಕಿಕೊಂಡಿದ್ದೆವು. ಕಾರಣ ಎರಡೂ ದೃಶ್ಯದ ಹಿನ್ನೆಲೆ ಮಳೆಯಾಗಿತ್ತು. ಪ್ರಸಂಗ ಬೇರೆಯಾದರೂ ಸಂದರ್ಭ ಮಳೆ ಆಗಿತ್ತು. ಮಳೆ ಬಂದು ಮನೆಯಲ್ಲಿ ತುಂಬಿಕೊಂಡಿದ್ದ ನೀರನ್ನು ಎತ್ತು ಆಚೆಗೆ ಹಾಕುತ್ತಿರುವಾಗ ವಿಲೇಜ್ ಅಕೌಂಟೆಂಟ್ ಬಂದು ಮಾತಾಡಬೇಕಿತ್ತು. ಮತ್ತು ಕೊನೆಯ ದೃಶ್ಯ ಮಳೆ ಬಂದು ಪಾತುಮ್ಮಳ ಮನೆ ಬಿದ್ದು ಹೋಗುವ ದೃಶ್ಯವಾಗಿತ್ತು. ಎರಡಕ್ಕೂ ಮಳೆಯು ಬೇಕಿದ್ದರಿಂದ ಅನಿವಾರ್ಯವಾಗಿ ಮೊದಲ ಹಾಗೂ ಕೊನೆಯ ದೃಶ್ಯಗಳನ್ನು ಒಟ್ಟಿಗೆ ಇಟ್ಟುಕೊಂಡಿದ್ದೆವು.
ತಡವಾಗಿ ಪಾತುಮ್ಮಳ ಮನೆಯ ಲೊಕೇಶನ್ಗೆ ಬಂದಿದ್ದರಿಂದ ಮುಖ್ಯ ಪಾತ್ರವಾಗಿದ್ದ ಮಳೆ ಬರುವಾಗ ಪ್ರಾಕೃತಿಕವಾಗಿ ಏನೆಲ್ಲಾ ನಡೆಯುತ್ತದೆ ಎಂದು ಅಂದುಕೊಂಡಿದ್ದೆವೋ ಅದನ್ನು ಮಾತ್ರ ಚಿತ್ರೀಕರಿಸಲಿಕ್ಕೆ ಅವತ್ತಾಯಿತು. ಜೋರು ಮಳೆ ಶುರುವಾಗುವುದು. ಪಾತುಮ್ಮ ಮತ್ತವಳ ಮೊಮ್ಮಗಳು ಎಲ್ಲಾ ಸಾಮಾನುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದೂ ಮಾತಿಲ್ಲದ ಬರೀ ಕ್ರಿಯೆಯಿರುವ ಇಂಥಾ ದೃಶ್ಯಗಳನ್ನು ಚಿತ್ರೀಕರಿಸಿಕೊಂಡೆವು.

ಮಾರನೆ ದಿನ ಚಿತ್ರೀಕರಣದ ಕೊನೆಯ ದಿನ ಅಂತ ನಿರ್ಧಾರ ಮಾಡಿಬಿಟ್ಟಿದ್ದೆವು. ಕಾರಣ ಜಯಶ್ರೀಯವರು ಬೆಂಗಳೂರಿಗೆ ಹೊರಡಬೇಕಿತ್ತು. ಅವರು ನಮಗೆ ಕೊಟ್ಟಿದ ಕಾಲ್ ಶೀಟ್ ಅವತ್ತಿಗೆ ಮುಗಿಯುತ್ತಿತ್ತು. ಅವರಿಗೆ ಫ್ಲೈಟ್ ಟಿಕೇಟ್ ಬುಕ್ ಮಾಡಿದ್ದೆವು. ಈಗ ನಮಗೆ ಆತಂಕ ಶುರುವಾಗಿತ್ತು. ಮಳೆ, ಮನೆ ಬೀಳುವುದು ಎಲ್ಲವನ್ನೂ ಇಟ್ಟುಕೊಂಡು ಜಯಶ್ರೀಯವರದ್ದೇ ದೃಶ್ಯಗಳನ್ನು ನಾವು ಸಂಜೆ ಐದರ ಒಳಗೆ ಮುಗಿಸಲಿಕ್ಕೆ ಆಗುತ್ತಾ? ಎಂದು.
ನಮ್ಮ ಆತಂಕದ ಮಧ್ಯೆಯೇ ಶೂಟಿಂಗ್ ಶುರು ಮಾಡಿದೆವು. ನೀರನ್ನು ಗುಡಿಸಿಲಿನೊಳಗೆ ತುಂಬಿಸಿ ಅದನ್ನು ತೆಗೆದು ಹೊರಗೆ ಹಾಕುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುವಾಗಲೇ ಫೈರ್ ಇಂಜಿನ್ನ ಟ್ಯಾಂಕರ್ನಲ್ಲಿ ನೀರು ಖಾಲಿಯಾಯಿತು. ಮಾತಾಡಿದಂತೆ ನೀರಿನ ಟ್ಯಾಂಕರ್ಗೆ ಫೋನ್ ಮಾಡಿದ್ರೆ, `ಹೊರಗೆ ಹೋಗಿದೆ. ನೆನ್ನೆಯೆಲ್ಲಾ ಕಾದೆವು, ನೀವು ಫೋನ್ ಮಾಡಲಿಲ್ಲ. ಅದಕ್ಕೆ ಇವತ್ತು ನಿಮಗಾಗಿ ಕಾಯಲಿಲ್ಲ’ ಎಂದರು. ಎಲ್ಲರದ್ದೂ ಬಿಸನೆಸ್ ಏನು ಮಾಡಲಿಕ್ಕಾಗುತ್ತೆ? ಮತ್ತೆ ಬೇರೆ ಟ್ಯಾಂಕರ್ ನವರಿಗೆ ಹೇಳಿ ನೀರನ್ನು ತರುಸುವಾಗ ಮತ್ತರ್ಧಗಂಟೆ ನಾಶವಾಗಿತ್ತು. ನಮಗೆ ಯೋಚನೆ ಮಾಡಲಿಕ್ಕೂ ಆಗುತ್ತಿಲ್ಲ್ಲ ಅಷ್ಟು ಆತಂಕ. ಜಕ್ಕು ಮಹಮದ್ ಕಾಯುತ್ತಾ ನಿಂತಿದ್ದ. ನಾನು ಆತನಿಗೆ ನಮಸ್ತೆ ಹೇಳಿ ನನ್ನ ಕೆಲಸ ಮುಂದುವರೆಸಿದೆ. ಆತ ತನ್ನ ಸೈಕಲ್ ಅನ್ನು ಅಲ್ಲೇ ತೆಂಗಿನ ಮರಕ್ಕೆ ಒರಗಿಸಿ ನಿಂತ. ಸೈಕಲ್ಗೆ ಕಟ್ಟಿದ್ದ ಮೀನಿನ ಕ್ರೇಟ್ ಖಾಲಿಯಾಗಿದ್ದರೂ ವಾಸನೆ ಬರುತ್ತಿತ್ತು. `ಇವತ್ತು ಕಾಕ ಯಾಕೆ ಬಂದಿರುವುದು ಗೊತ್ತಾ?’ ಎಂದಳು ಹಸೀನಮ್ಮ. ಯಾಕೆ? ಎನ್ನುವಂತೆ ಅವಳನ್ನು ನೋಡಿದೆ. `ಹಣ ವಸೂಲಿ ಮಾಡಲಿಕ್ಕೆ’ ಎಂದು ನಕ್ಕಳು. ಪಾಪ ಆತನಿಗೆ ಎಷ್ಟೆಲ್ಲಾ ನಿರೀಕ್ಷೆಗಳಿರಬಹುದೋ ಎಂದು ನೆನೆದು ನನಗೆ ಬೇಸರವಾಯಿತು.
ಅರ್ಧ ಗಂಟೆೆಯ ನಂತರ ನೀರಿನ ಟ್ಯಾಂಕರ್ ಬಂತು. ಅಷ್ಟರಲ್ಲಿ ಸಣ್ಣ ಪುಟ್ಟ ದೃಶ್ಯ ಭಾಗಗಳನ್ನು ಚಿತ್ರೀಕರಿಸಿಕೊಂಡೆವು. ಹವ್ಯಾಸಿ ತಂಡದ ನಟರುಗಳನ್ನು ಕರೆತಂದಿದ್ದರಿಂದ ಮೊದಲ ಸೀನು ಅಂಥಾ ಕಷ್ಟವಾಗಲಿಲ್ಲ. ಅವತ್ತು ಜಯಶ್ರೀಯವರು ತುಂಬಾ ಚೆನ್ನಾಗಿ ಆಕ್ಟ್ ಮಾಡುತ್ತಿದ್ದರು. ಚಂದ್ರಹಾಸರು ಎಲ್ಲರಿಗೂ ಭಾಷೆಯನ್ನು ತಿದ್ದುತ್ತಿದ್ದರು. ಅಲ್ಯುಮಿನಿಯಮ್ ಪಾತ್ರೆಗಳು ಗುಡಿಸಿಲಿನಲ್ಲಿ ತುಂಬಿಸಿದ್ದ ನೀರಿನಲ್ಲಿ ತೇಲುತ್ತಿದ್ದವು. ಅದರಿಂದಲೇ ಒಂದನ್ನು ತೆಗೆದು ನೀರನ್ನು ಚೆಲ್ಲುತ್ತಾ ತೀರಾ ಸಹಜವಾಗಿ ಮಾತಾಡುತ್ತಿದ್ದರು.
ಊಟದ ಬಿಡುವಿನಲ್ಲಿ ಸಲಾಂ ಸಾಬ್ನನ್ನು ಕರೆದು, `ಇವತ್ತು ಈ ಗುಡಿಸಲನ್ನು ಬೀಳಿಸಬೇಕು. ಎಲ್ಲೆಲ್ಲಿ ಹಗ್ಗ ಕಟ್ಟಿದ್ದೀರೋ ಅದನ್ನು ಸಡಿಲ ಮಾಡು’ವಂತೆ ಹೇಳಿದ್ದೆ. ಸಲಾಂ ಸಾಬ್ ನಗುತ್ತಾ, `ನೋಡಿ, ಹದಿನೈದು ದಿನಗಳ ಹಿಂದೆ ಇಲ್ಲಿ ಏನೂ ಇರಲಿಲ್ಲ ನೀವು ಗುಡಿಸಲನ್ನು ಹಾಕಿದಿರಿ, ನಮಗೆ ಇದು ಮುಂಚಿನಿಂದಲೂ ಇತ್ತೇನೋ ಅನ್ನಿಸುತ್ತಿದೆ. ಈಗ ಬೀಳಿಸುವುದು ಸ್ವಲ್ಪ ನೋವಿನ ಮಾತು. ಇರಲಿ, ಬಿಡಿ ಸ್ವಲ್ಪ ಬಿಗಿ ಮಾಡಿದರೆ ಜನ ಇದನ್ನು ಬಳಸಿಕೊಳ್ಳಲೂ ಬಹುದಲ್ಲವಾ?’ ಎಂದ. `ನಾವು ಸೆಟ್ ಹಾಕಿರುವುದೇ ಚೆನ್ನಾಗಿರೋ ಮನೆಯನ್ನು ಬೀಳಿಸಲಿಕ್ಕೆ ಯಾರೂ ಕೊಡಲ್ಲ ಅಂತ. ನೀವು ಇದನ್ನೂ ಬೀಳಿಸಬೇಡಿ ಅಂತ ಹೇಳಿದ್ರೆ ಹೇಗೆ?’ ಎಂದೆ. ಅದೂ ನಿಜವೇ ಎಂದು ಸಲಾಂ ಸಾಬ್ ನಕ್ಕು ಹೊರಟ. ಹೊರಡುವಾಗ ನಾನು ಮತ್ತೆ `ನೆನಪಿರಲಿ ಮತ್ತೆಲ್ಲೋ ಕೆಲಸ ಎಂದು ಹೋಗಿಬಿಡಬೇಡಿ’ ಎಂದೆ. ಗೊತ್ತಿದೆ ಎನ್ನುವಂತೆ ಸನ್ನೆ ಮಾಡಿ ಹೊರಟ.
ಎಷ್ಟು ಬೇಗ ಸಮಯ ಜಾರಿ ಹೋಯಿತು. ಹದಿನೈದು ದಿನಗಳನ್ನು ಈ ಜಾಗಗಳಲ್ಲಿ ಕಳೆದುಬಿಟ್ಟೆವಲ್ಲಾ? ನಾಳೆ ಕಳೆದರೆ ಮತ್ತೆ ನಮ್ಮ ನಮ್ಮ ಊರುಗಳಿಗೆ ಹೊರಡಬೇಕು. ಆಶ್ಚರ್ಯಾನ್ನಿಸುತ್ತೆ, ಮಗ, ಗಂಡ, ಮನೆ ಎಲ್ಲಾ ಕಾಡಿಸಲಿಕ್ಕೆ ಶುರುವಾಯಿತು. ಬದುಕು ವಿಚಿತ್ರ. ನಮ್ಮದಲ್ಲದ ಜಾಗದಲ್ಲಿ ಬಂದು, ಎಲ್ಲವನ್ನೂ ನಮ್ಮದು ಮಾಡಿಕೊಳ್ಳುವ ಬದುಕಿನ ಜಾದೂಗೆ ಏನು ಹೇಳಬೇಕು?
ಮಧ್ಯಾಹ್ನದ ಮೇಲೆ ವಾತಾವರಣ ಬದಲಾಗಿಬಿಟ್ಟಿತು. ಅಂಥಾ ಉರಿಬಿಸಿಲಿನ ನಡುವೆ ಮೋಡಗಳು ದಟ್ಟೈಸಿಕೊಂಡು ಬಂದವು. ನಮಗೆ ಆಶ್ಚರ್ಯ. ಕೃತಕಮಳೆಯ ಜೊತೆ ನಿಜವಾದ ಮಳೆ ಹನಿಗಳು ಬೆರೆತು ನಮಗೆ ಇಡೀ ಪ್ರಕೃತಿಯೇ ನಮ್ಮ ಕೆಲಸಕ್ಕೆ ಸಹಕರಿಸಿತೇನೋ ಎನ್ನುವಂತೆ ಅನ್ನಿಸಿಬಿಟ್ಟಿತು. `ಇಂಥಾದ್ದು ಅಪರೂಪಕ್ಕೆ ನಡೆಯುತ್ತೆ’ ಅಂತ ಕ್ಯಾಮೆರಾಮನ್ ಅಶೋಕ್ ಹೇಳುತ್ತಿದ್ದರು. ನಮಗಂತೂ ಅದು ದೊಡ್ಡ ಸೋಜಿಗದ ಹಾಗೆ ಅನ್ನಿಸಿತ್ತು.
ಹಗ್ಗಗಳನ್ನು ಸಡಿಲಿಸಿದ್ದರಿಂದ ಗುಡಿಸಲನ್ನು ಬೀಳಿಸುವುದು ಸುಲಭವಾಗಿತ್ತು. ಒಮ್ಮೆ ಸರಿಯಾಗಿ ಬೀಳಲಿಲ್ಲ ಎಂದರೆ ಮತ್ತೆ ಬೀಳಿಸಲಾಗುವುದಿಲ್ಲ. ಬೇರೆ ಯಾವ ದೃಶ್ಯಕ್ಕಾದರೂ ಟ್ರಯಲ್ ನೋಡಬಹುದು ಇಂಥಾ ದೃಶ್ಯಗಳಿಗೆ ಆಗುವುಗಿಲ್ಲ. ಇದು ಸಮಸ್ಯೆ ಆದ್ದರಿಂದ ನಾವೆಲ್ಲಾ ಅದರ ಬಗ್ಗೆ ಬಹಳಷ್ಟು ಕಾಳಜಿ ವಹಿಸಿದ್ದೆವು. ಪುಟ್ಟಣ್ಣ, ಪುನೀತಾ, ಸಲಾಂ ಸಾಬ್ ಮತ್ತು ನಾನು ಗುಡಿಸಿಲಿನ ಹಿಂಭಾಗದಲ್ಲಿದ್ದೆವು. ಬೀಳಿಸಿದ ಮೇಲೆ ನಾವು ಯಾರೂ ಕ್ಯಾಮೆರಾಕ್ಕೆ ಕಾಣಬಾರದು. ಎಲ್ಲಾ ಎಚ್ಚರಿಕೆಯನ್ನೂ ತೆಗೆದುಕೊಂಡಿದ್ದರಿಂದ ಕೆಲಸ ಸರಿಯಾಗಿ ಆಯಿತು. ಮೇಲಿಂದ ಮಳೆ ಜೋರಾಗಿ ಸುರಿದು ಗುಡಿಸಿಲು ಸಹಜವಾಗಿ ಬಿದ್ದಿತು ಎನ್ನುವ ಹಾಗೆ ಕಾಣಿಸುವ ಹಾಗೆ ವ್ಯವಸ್ಥೆ ಮಾಡಿದ್ದೆವು. ನಮ್ಮ ನಿರೀಕ್ಷೆ ಸರಿಯಾಗೆ ಇತ್ತು. ಆ ದೃಶ್ಯ ಚೆನ್ನಾಗಿಯೇ ಬಂತು.
ಗುಡಿಸಲು ಬಿದ್ದಿದ್ದರಿಂದ ಹಣೆಯಲ್ಲಿ ಗಾಯವಾಗಿದ್ದ ಪಾತುಮ್ಮ ಶ್ರೀನಿವಾಸಾಚಾರಿಯನ್ನು ನೋಡಿ ಅಳುತ್ತಾಳೆ. ಆ ದೃಶ್ಯದಲ್ಲಿ ಜಯಶ್ರೀಯವರು ಗ್ಲಿಸರಿನ್ ಇಲ್ಲದೆ ಕಣ್ಣಲ್ಲಿ ನೀರನ್ನು ತಂದುಕೊಂಡಿದ್ದರು.
ಈ ಮಧ್ಯೆಯೇ ಸಮಯ ಮುಗಿದು ಹೊರಡುವಾಗ ಫೈರ್ ಇಂಜಿನ್ನವರು ಹಣಕ್ಕಾಗಿ ಬೇಡಿಕೆಯನ್ನಿಟ್ಟರು. ನಾವು ಒಂದು ಸಾವಿರ ರೂಪಾಯಿಗಳನ್ನು ಕೊಟ್ಟೆವು. ಊಟ, ತಿಂಡಿ ಕಾಫಿ ಎಲ್ಲವನ್ನೂ ಹೊತ್ತು ಹೊತ್ತಿಗೆ ನೋಡಿಕೊಂಡೂ ನಾವು ಹೇಳಿದಂತೆ ಒಂದಿಷ್ಟು ಕೆಲ ಮಾಡಿಕೊಟ್ಟರಲ್ಲ ಎಂದು. ಕೊಟ್ಟ ಹಣ ಸಾಲದು ಎಂದು ಮಿಜಿ ಮಿಜಿ ಮಾಡಿದರು. ನಾನವರಿಗೆ ಖಡಾಖಂಡಿತವಾಗಿ, `ನೋಟ್ ಬ್ಯಾನಿನಿಂದ ಹಣವೇ ಇಲ್ಲದ ಈ ಸ್ಥಿತಿಯಲ್ಲಿ ಇಷ್ಟನ್ನು ಕೊಡುತ್ತಿರುವುದೇ ಹೆಚ್ಚು’ ಎಂದಿದ್ದೆ. ಪಂಚಾಕ್ಷರಿ ಅದನ್ನಾದ್ರೂ ಯಾಕೆ ಕೊಡಬೇಕು? ಫೀಸ್ ಕಟ್ಟಿಲ್ಲವಾ?’ ಎಂದಿದ್ದರು.
ಸ್ಥಳದಲ್ಲೇ ಹೊಳೆಯುವ ಸಣ್ಣ ಪುಟ್ಟ ದೃಶ್ಯಗಳನ್ನು ಸೇರಿಸಿಕೊಳ್ಳುವಾಗ, ಬಿದ್ದು ಹೋದ ಗುಡಿಸಲನ್ನು ನೋಡಲಿಕ್ಕೆ ಜನ ಸೇರಿದರೆ ಚೆನ್ನಾಗಿರುತ್ತೆ ಅಂತ ಅನ್ನಿಸಿತು. ಜನರನ್ನು ತಂದು ನಿಲ್ಲಿಸುವುದು ಹೇಗೆ? ಎನ್ನುವ ಸವಾಲು ಎದುರಾಯಿತು. `ಮುಖವನ್ನು ತೋರಿಸುವುದಿಲ್ಲ, ನಿಮ್ಮ ನೆನಪಾಗಿ ಈ ದೃಶ್ಯ ಇರಲಿ’ ಎಂದು ಕೇಳಿಕೊಂಡಿದ್ದರ ಪರಿಣಾಮ ಮುಕ್ಕಚ್ಚೇರಿಯ ಇಪ್ಪತ್ತಕ್ಕು ಹೆಚ್ಚು ಜನ ಹೆಣ್ಣುಮಕ್ಕಳು ಬಂದು ನಿಂತರು. ನನ್ನನ್ನೂ ಜೊತೆಯಲ್ಲಿ ಬಂದು ನಿಲ್ಲುವಂತೆ ಹೇಳಿದರು. ನಾನೂ ತಲೆಯ ಮೇಲೊಂದು ಬಟ್ಟೆಯನ್ನು ಹಾಕಿಕೊಂಡು ಮುಖ ಕಾಣದಂತೆ ಅವರೊಂದಿಗೆ ನಿಂತೆ.

`ಎಲ್ಲಾ ಮುಗಿಯಿತಲ್ಲವೇ? ಇನ್ನೇನಾದರೂ ಬಾಕಿ ಇದೆಯಾ?’ ಎಂದು ಕೇಳಿದರು ಪಂಚಾಕ್ಷರಿ. `ಇನ್ನು ಕಾಶಿಯ ಭಾಗವನ್ನು ಬಿಟ್ಟರೆ ಎಲ್ಲಾ ಮುಗಿದ ಹಾಗೆ’ ಎಂದೆ. `ಈಗ ಸಧ್ಯ ಇನ್ನೇನೂ ಇಲ್ಲವಲ್ಲ. ಇವತ್ತಿಗೆ ಮುಗಿಸಬಹುದಲ್ಲವೇ?’ ಎಂದರು. `ಖಂಡಿತಾ’ ಎಂದೆ. ಪಂಚಾಕ್ಷರಿ ಶೂಟಿಂಗ್ ಮುಗಿಯಿತು ಎಂದು ಘೋಷಣೆ ಮಾಡಿದರು.
ನಮ್ಮ ನಮ್ಮ ವಸ್ತುಗಳನ್ನು ತೆಗೆದುಕೊಂಡು ಹೊರಡುವಾಗ, ಜಕ್ಕು ಮಹಮದ್ ಎದುರಾದ. ಆತನಿಗೆ, `ಸರ್ ದಯವಿಟ್ಟು ನಾಳೆ ಬನ್ನಿ’ ಎಂದೆ. `ಶೂಟಿಂಗ್ ಮುಗಿದ ಮೇಲೆ ಮತ್ತೆ ನೀವೆಲ್ಲಿ ಬರ್ತೀರಾ?’ ಎಂದು ಕೇಳಿದ ಜಕ್ಕು ಮಹಮದ್ಗೆ, ಹಸೀನಮ್ಮಾ `ಅವರ ಎಲ್ಲ ವಸ್ತುಗಳು ಇಲ್ಲೆ ಇವೆಯಲ್ಲಾ ಮೋನಕಾ. ಬರುತ್ತಾರೆ ಬಿಡು ನಾಳೆ ಬಂದುಬಿಡು’ ಎಂದಳು. `ಬರುವಿರಲ್ಲವೆ?’ ಎನ್ನುತ್ತಾ ಆತ ಹೊರಟ. ಸಲಾಂ ಸಾಬ್ಗೆ `ಹಾಕಿರುವ ಗುಡಿಸಿಲಿನ ಎಲ್ಲಾ ಸೆಟ್ ತೆಗೆದು ಮೊದಲಿದ್ದ ಹಾಗೆ ಮಾಡಬೇಕು, ಆಮೇಲೆ ನಿಮಗೆ ಪೂರ್ತಿ ಪೇಮೆಂಟ್ ಕೊಡುವುದು’ ಎಂದೆ. ಅದಕ್ಕಾತ ಒಪ್ಪಿದ.
ಕಾಸ್ಟೂ÷್ಯಮ್, ಪ್ರಾಪರ್ಟಿ ಎಲ್ಲಾ ತೆಗೆದುಕೊಂಡು ಟಿಟಿ ಹತ್ತುವಾಗ ನಮಗೂ ಈ ಜಾಗಕ್ಕೂ ಏನು ಸಂಬಂಧ? ಯಾಕಿಲ್ಲಿಗೆ ಬಂದೆವು? ಯಾಕೆ ಹೋಗುತ್ತಿದ್ದೇವೆ? ಎಂದೆಲ್ಲಾ ಅನ್ನಿಸಿತು. ನಿಜಕ್ಕೂ ನನ್ನನ್ನಾವರಿಸಿದ್ದು ಶೂನ್ಯವಾ? ನಿರಾಳತೆಯಾ? ಗೊತ್ತಾಗಲಿಲ್ಲ. ತುಂಬಾ ಸಮಯ ನಾವು ಕೇಳಿಕೊಳ್ಳುವ ಪ್ರಶ್ನೆಗಳು ತಾತ್ವಿಕವಾಗಿರುತ್ತದೆ ಅದಕ್ಕೆ ಭಾವನಾತ್ಮಕತೆಯನ್ನು ಬೆರೆಸಿಬಿಟ್ಟರೆ ಸಹಿಸಿಕೊಳ್ಳುವುದು ಕಷ್ಟವಾಗುತ್ತದೆ. ಬಹುಶಃ ಅವತ್ತು ನಮಗಾದದ್ದು ಅದೇ.
ಅಂದು ರಾತ್ರಿ ಎಲ್ಲರೂ ಒಬ್ಬೊಬ್ಬರಾಗಿ ಹೊರಟರು. ಮೊದಲು ಹೊರಟದ್ದು ಕ್ಯಾಮರಾ ಮನ್, ನಂತರ ನಟರು, `ಹೊರಡುವವರೆಲ್ಲಾ ಹೊರಡಿ’ ಎಂದಿದ್ದರಿಂದ ನಾನೂ, ಪುನೀತ, ಪಂಚಾಕ್ಷರಿಯನ್ನು ಬಿಟ್ಟರೆ ಪುಟ್ಟಣ್ಣನೂ ಸೇರಿದಂತೆ ಎಲ್ಲರೂ ಹೊರಟರು. ಪಾತುಮ್ಮನ ಮನೆಯಲ್ಲಿದ್ದ ಅಕ್ಕಪಕ್ಕದವರ ಮನೆಯಿಂದ ತೆಗೆದುಕೊಂಡಿದ್ದ ಕೆಲ ಪಾಪರ್ಟಿಗಳನ್ನು ಕೊಟ್ಟುಬಿಟ್ಟಿದ್ದರೆ ನಾನೂ ಹೊರಟು ಬಿಡಬಹುದಿತ್ತು ಅನ್ನಿಸಿತು. ಆದರೆ ಕರ್ತವ್ಯ ಇದ್ದಿದ್ದರಿಂದ ಉಳಿದುಕೊಳ್ಳಲೇ ಬೇಕಿತ್ತು. ನಾನು ಒಪ್ಪಿಸಿದ್ದ ಕೆಲಸಗಳಿಗೆ ಪೇಮೆಂಟ್ ಬಾಕಿಯಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮುಕ್ಕಚ್ಚೇರಿಯ ಆ ಹೆಣ್ಣುಮಕ್ಕಳಿಗೆ ಒಂದು ಕೃತಜ್ಞತೆಯನ್ನು ಹೇಳಬೇಕಿತ್ತು.
। ಇನ್ನು ಮುಂದಿನ ವಾರಕ್ಕೆ ।






0 Comments