ಪಿ ಚಂದ್ರಿಕಾ ಅಂಕಣ ಆರಂಭ- ಮೂವರು ಮಹಮದರು

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ.

‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು ಕಥಾ ಸಂಕಲನ , ಕಾದಂಬರಿ ಚಂದ್ರಿಕಾ ಅವರ ಹಿರಿಮೆಯನ್ನು ಸಾರಿವೆ.

ಸದಾ ಚಟುವಟಿಕೆಯ ಚಂದ್ರಿಕಾಗೆ ಕೃಷಿಯಲ್ಲೂ ಆಸಕ್ತಿ. ಕನ್ನಡದ ಹೆಮ್ಮೆಯ ಪ್ರಕಟಣಾ ಸಂಸ್ಥೆ ‘ಅಭಿನವ’ದ ರೂವಾರಿಗಳಲ್ಲೊಬ್ಬರು.

ಇಂದಿನಿಂದ ಅವರ ಹೊಸ ರೀತಿಯ ಅಂಕಣ ಆರಂಭ. ಇದನ್ನು ಕಾದಂಬರಿ ಎಂದು ಕರೆಯಿರಿ, ಇಲ್ಲಾ ಅನುಭವ ಕಥನ ಎನ್ನಿ. ಚಂದ್ರಿಕಾ ನಡೆಸುವ ಪ್ರಯೋಗ ಮಾತ್ರ ಸದ್ದಿಲ್ಲದೇ ಹೊಸ ಅಲೆಯನ್ನು ಸೃಷ್ಟಿಸುತ್ತಲೇ ಇರುತ್ತದೆ.

ಮುಕ್ಕಚ್ಛೇರಿಯಲ್ಲಿ..

ಮುಕ್ಕಚೇರಿಯ ಸುಭಾಷ್‌ನಗರದ ಒಳಗೆ ಕಾರು ತಿರುಗಿದಾಗ ದಾರಿಯುದ್ದಕ್ಕೂ ಕಂಟಿಯ ಗಿಡಗಳು. ಒಂದು ವಿಶಾಲ ಮೈದಾನ. ‘ಕಾರ್ ಇಲ್ಲೇ ಪಾರ್ಕ್ ಮಾಡೋಣ ಮತ್ತೆ ಮುಂದೆ ಜಾಗ ಇಲ್ಲ’ ಎಂದರು ಚಂದ್ರಹಾಸ ಉಲ್ಲಾಳರು. ಕಾರು ಅವರದ್ದಾದ್ದರಿಂದ ಅವರು ಹೇಳಿದ ಹಾಗೆ ಕೇಳುವುದು ನಮ್ಮ ಕರ್ತವ್ಯವಾಗಿತ್ತು.

ನಾನು, ಚಂಚಲಾ ಮತ್ತು ನಿರ್ದೇಶಕ ಪಂಚಾಕ್ಷರಿ ಇಳಿಯಲು ಅನುವಾದೆವು. ಮೈದಾನದಲ್ಲಿ ಕ್ರಿಕೆಟ್ ಆಡುವ ಹುಡುಗರು ‘ಕಾರನ್ನು ಸ್ವಲ್ಪ ಮುಂದೆ ಹಾಕಿ ಅಂಕಲ್, ನಾವು ಆಡ್ತಾ ಇದೀವಿ’ ಎಂದರು. ಇಕ್ಕಟ್ಟಾದ ಮಣ್ಣಿನ ರಸ್ತೆಯಲ್ಲಿ ಹಾದು ಬರುವಾಗ ಕಾರು ಆಚೆ ಈಚೇ ಆಡಿತ್ತು.

ಸುತ್ತ ಮುತ್ತ ಇದ್ದ ಮುಳ್ಳುಕಂಟಿಯ ಗಿಡಗಳು ರಸ್ತೆಯ ಒಳ ಹೊಕ್ಕಾಗ ‘ನಮ್ಮನ್ನು ಹಾದು ಹೋಗಬಲ್ಲಿರಾ?’ ಎಂದು ಅಡ್ಡಲಾಗಿ ತನ್ನ ಟೊಂಗೆಗಳನ್ನು ಆಡಿಸಿದ್ದವು. ಕಾರಿಂದ ಇಳಿದು ಕಂಟಿ ತರಚಿದ ಗುರುತುಗಳನ್ನು ಹುಡುಕುತ್ತಿದ್ದ ಚಂದ್ರಹಾಸರು, ಹುಡುಗರ ಕಲರವಕ್ಕೆ ಬೆಚ್ಚಿ, ಇಳಿಯುತ್ತಿದ್ದ ನಮ್ಮನ್ನು ತಡೆದು ಕಾರನ್ನು ಪಕ್ಕಕ್ಕೆ ಹಾಕಿದರು. ‘ಕಿಡಿಗೇಡಿಗಳು ಕಾರಿನ ಮೇಲೆ ಗೀಚಿಯೋ, ಬ್ಯಾಟನ್ನು ತಾಕಿಯೋ, ಗುರುತು ಮಾಡಿದ್ರೆ ಕಷ್ಟ’ ಎಂದು ತಮಗೇ ಹೇಳಿಕೊಳ್ಳುವಂತೆ ನಮಗೂ ಹೇಳಿದ್ದರು.

ಕಾರು ನಿಂತ ಕಡೆಯಿಂದ ಇಳಿಯಲು ನೋಡುವಾಗ ಹುಡುಗರ ದಂಡು ಹತ್ತಿರ ಬಂದು ‘ಯಾರ ಮನೆಗೆ ಅಂಕಲ್?’ ಎನ್ನುತ್ತಾ ನಮ್ಮನ್ನು ಸುತ್ತುವರೆದರು. ಆ ಹುಡುಗರೆಲ್ಲರೂ ಮುಸ್ಲೀಮರೇ. ಕೆಲವರ ತಲೆಯ ಮೇಲೆ ಟೋಪಿ ಇದ್ದರೆ, ಕೆಲವರ ತಲೆ ಮೇಲೆ ಇರಲಿಲ್ಲ. ಪಕ್ಕಾ ಮುಸ್ಲೀಂ ಶೈಲಿಯ ಜುಬ್ಬಾ ಇಜಾರ. ನಮ್ಮನ್ನು ನೋಡಿದರೆ ಇವರು ಇಲ್ಲಿಗೆ ಬರಬಾರದವರು ಎಂದವರಿಗೆ ಅನ್ನಿಸಿರಲಿಕ್ಕು ಸಾಕು. ‘…ಇಲ್ಲ ಹೀಗೆ ಸಮುದ್ರ ನೋಡಲಿಕ್ಕೆ ಬಂದೆವು’ ಎಂದಾಗ ಅವರ ಉತ್ಸಾಹ ಜಾರಿ ‘ಆರೇ ಆರೇ ಖೇಲ್ ಖತಂ ಕರೇಗಾ’ ಎಂದು ಬ್ಯಾಟನ್ನು ಬೀಸುತ್ತಾ ಹೊರಟುಬಿಟ್ಟರು.

‘ಸಮುದ್ರದ ಕಡೆಗೆ ಹೋಗುವುದಾದರೂ ಹೇಗೆ?’ ಎಂದು ಕೇಳೋಣವೆಂದರೆ ಎಲ್ಲರೂ ಆಟದಲ್ಲಿ ಮಗ್ನರಾಗಿದ್ದರು. ‘ಬನ್ನಿ ನಂಗೊತ್ತು, ಇಲ್ಲೊಂದು ಮಸೀದಿ ಇದೆ; ಅದರ ಪಕ್ಕದಲ್ಲೇ ಹೋಗಬೇಕು. ಇದೆಲ್ಲಾ ನಾವು ಸುತ್ತಾಡಿದ ಜಾಗಗಳೇ’ ಎಂದು ಚಂದ್ರಹಾಸ್ ನಮ್ಮನ್ನು ಕರೆದೊಯ್ದರು. ತೆಳು ದೇಹದ, ಎತ್ತರದ ನಿಲುವಿನ ಚಂದ್ರಹಾಸ್ ಬಿಎಸ್‌ಎನ್‌ಎಲ್‌ನಲ್ಲಿ ಸಹಾಯಕ ಇಂಜಿನಿಯರ್. ಸ್ಥಳ ಮಂಗಳೂರಿನ ಬಳಿಯ ಉಲ್ಲಾಳ. ತೋಟದ ನಡುವೆ ಅದ್ಭುತವಾದ ಮನೆಯನ್ನು ಕಟ್ಟಿಕೊಂಡು, ಪ್ರಶಾಂತವಾದ ಜೀವನ ನಡೆಸುವ ಅವರ ಹವ್ಯಾಸ ರಂಗಭೂಮಿ. ಹೆಂಡತಿ ಬ್ಯಾಂಕಿನಲ್ಲೋ, ಟೀಚರಿಕೆ ಮಾಡುತ್ತಾರೋ ಸರಿಯಾಗಿ ಗಮನ ಕೊಟ್ಟು ಕೇಳಿಲ್ಲವಾದ್ದರಿಂದ ತಲೆಯಲ್ಲಿ ಉಳಿದಿಲ್ಲ.

ಒಟ್ಟಿನಲ್ಲಿ ಅವರಲ್ಲಿ ಸುಖೀ ಸಂಸಾರದ ಲಕ್ಷಣಗಳು ಕಾಣುತ್ತಿದ್ದವು. ಹಾಗಾಗಿ ಇವರ ಹುಚ್ಚುಗಳೂ ಹೆಚ್ಚಿದ್ದವು. ಮನೆಯಲ್ಲಿ ಇವಕ್ಕೆಲ್ಲಾ ಮಾಫಿಯೂ ಇತ್ತು ಅನ್ನಿಸುತ್ತೆ. ನಾಟಕ ಬಿಟ್ಟರೆ, ಅನೇಕ ವ್ಯಾಪಾರಿಯಲ್ಲದ ಚಲನಚಿತ್ರಗಳಿಗೆ ಮಾರ್ಗದರ್ಶನ ನೀಡುತ್ತಾ, ತಾವೂ ಅದರಲ್ಲಿ ಪಾಲುಗೊಳ್ಳುತ್ತಾ ಸಾರ್ಥಕ್ಯವನ್ನು ಕಂಡುಕೊಳ್ಳುವ ಚಂದ್ರಹಾಸ್ ನಮ್ಮ ಪಾಲಿನ ನಿಜವಾದ ಮಾರ್ಗದರ್ಶಿ.

ಆಟದ ಮೈದಾನದಿಂದ ಪಕ್ಕಕ್ಕೆ ತಿರುಗಿದರೆ ಪುಟ್ಟದೊಂದು ಪಳ್ಳಿ (ಮಸೀದಿ) ಅದರ ದೊಡ್ಡ ಗುಮ್ಮಟದ ಕೆಳಭಾಗಕ್ಕೆ ನಾಲ್ಕು ಚಿಕ್ಕ ಗುಮ್ಮಟಗಳು, ಅವಕ್ಕೆ ಧ್ವನಿವರ್ಧಕಗಳು – ಕೂಗುವ ಭಾಂಗ್ (ಆಜಾನ್) ಕೇರಿಯವರನ್ನೆಲ್ಲಾ ತಲುಪುವ ಜರೂರು. ಇಕ್ಕಟ್ಟಾದ ಕಿರು ದಾರಿಯಲ್ಲಿ ಸ್ವಲ್ಪ ದೂರ ಸಾಗಿದರೆ ಸಮುದ್ರದ ಭೋರ್ಗರೆತ ಇನ್ನಷ್ಟು ಹತ್ತಿರ. ಈಗ ಅಲೆಗಳು ಎದ್ದೆದ್ದು ಕುಣಿವ ಚಿತ್ರ ಕಣ್ಣಿಗೆ ಗೋಚರವಾಗದಿದ್ದರೂ ಕಿವಿ ಅದನ್ನು ಕಣ್ಣಿಗೆ ತಲುಪಿಸುತ್ತಿತ್ತು. ಕಾರಣ ಸಮುದ್ರದ ದಂಡೆಯ ಉದ್ದಕ್ಕೂ ಹಾಕಿದ್ದ ತಡೆಗೋಡೆಗಳು.

ಸಮುದ್ರದ ತಡೆಗೋಡೆಯನ್ನು ಅಷ್ಟು ಹತ್ತಿರದಿಂದ ನಾನು ನೋಡಿರಲಿಲ್ಲ. ನನ್ನ ಬಾಲ್ಯ ಸಮುದ್ರವನ್ನು ನೋಡದೆಯೇ ಕಳೆದಿತ್ತು. ಯಾಕೆಂದರೆ ಬಯಲುಸೀಮೆಯವಳಾದ ನನಗೆ ಕರಾವಳಿಯಾಗಲಿ, ಅಲ್ಲಿನ ಮೀನುಗಾರರಾಗಲಿ ಬರೀ ಪುಸ್ತಕದ ಜಗತ್ತು ಮಾತ್ರ. ಪಂಚಾಕ್ಷರಿಯೂ ತಿಪಟೂರಿನವರಾದ್ದರಿಂದ ಅವರ ಸ್ಥಿತಿಯೂ ನನಗಿಂತ ಬೇರೆ ಇರಲಿಲ್ಲ. ಚಂಚಲಾ ಉಡುಪಿಯವರೇ ಆದ್ದರಿಂದ, ಜೊತೆಗೆ ಸುಮಾರು ತುಳು ಸಿನಿಮಾಗಳಿಗೆ ಕೆಲಸ ಮಾಡಿದ್ದರಿಂದ ಅವರಿಗೆ ಈ ವಾತಾವರಣ ಸಾಮಾನ್ಯವಾಗಿತ್ತು. 

ಸಮುದ್ರ ತಡೆಗೋಡೆಯ ಪಕ್ಕದಲ್ಲೇ ಸಾಲು ಸಾಲು ತೆಂಗಿನ ಮರಗಳು- ಅಲ್ಲಲ್ಲಿ ಬಿದ್ದವಕ್ಕೆ ಲೆಕ್ಕವಿಲ್ಲ. ಕಡಲ ಕೊರೆತಕ್ಕೆ ಬಿದ್ದ ಮರಗಳು ಹಳತಾಗಿದ್ದರಿಂದಲೋ ಅಥವಾ ಸಮುದ್ರದ ಉಪ್ಪು ಮತ್ತು ತೇವ ತಾಕಿದ್ದರಿಂದಲೋ ಕಪ್ಪಾಗಿದ್ದವು. ಅದರ ಕೊಯ್ದ ಬೊಡ್ಡೆಯನ್ನೇ ಟೇಬಲ್ ಥರ ಮಾಡಿಕೊಂಡು ಕೆಲ ಮಕ್ಕಳು ಕಡಲೇಪುರಿ, ಈರುಳ್ಳಿ, ಎಣ್ಣೆ ಎಲ್ಲವನ್ನೂ ಇಟ್ಟುಕೊಂಡು ಚುರುಮುರಿ ಮಾಡುತ್ತಿದ್ದರು. ಅವರಲ್ಲಿ ಒಬ್ಬನ ವಯಸ್ಸು ಏಳೆಂಟು ಇರಬಹುದು. ಎಲ್ಲಾ ಪದಾರ್ಥಗಳನ್ನೂ ಸೇರಿಸಿ ಕಲೆಸುವ ಅವನ ಚಾಕಚಕ್ಯತೆಯನ್ನು ನೋಡಿ ಅಚ್ಚರಿಗೊಂಡು ನಿಂತ ನಮಗೆ, ಚುರುಮುರಿ ಕೊಳ್ಳುವಂತೆ ದುಂಬಾಲು ಬಿದ್ದ. ಆಗತಾನೆ ಊಟ ಮುಗಿಸಿ ಬಂದಿದ್ದರಿಂದ ನಮಗೆ ಏನೂ ಬೇಡವಾಗಿತ್ತು. ಆದರೆ ಅವನು ಬಿಡುವಂತಿರಲಿಲ್ಲ.

ಚಂದ್ರಹಾಸ ಮತ್ತು ಪಂಚಾಕ್ಷರಿ ಇಬ್ಬರೂ ಮುಂದೆ ಹೊರಟುಬಿಟ್ಟರು. ಅವರಿಗೆ ಜಾಗದ ಇಂಚಿಂಚನ್ನೂ ನೋಡುವುದಿತ್ತು. ‘ಚುರುಮುರಿ ಬರೀ ಹತ್ತು ರೂಪಾಯಿ’ ಎಂದದ್ದಕ್ಕೆ ಚೆನ್ನಾಗಿಲ್ಲದಿದ್ದರೆ ಆಮೇಲೆ ನೋಡೋಣ ಎಂದಕೊಂಡು ನಾನು, ಚಂಚಲಾ ತೆಗೆದುಕೊಂಡೆವು. ನಾವಂದುಕೊಂಡದ್ದಕ್ಕಿಂತ ತುಂಬಾ ಚೆನ್ನಾಗಿತ್ತು. ‘ನೀವೇ ಮಾಡಿದಿರಾ?’ ಎಂದು ಮಕ್ಕಳನ್ನು ಕೇಳಿದೆ. ಅಷ್ಟರಲ್ಲಿ ಕರ್ಟನ್ ಹಾಕಿದ್ದ ಮನೆಯ ಒಳಗಿಂದ ಮೂವತ್ತರ ಹೆಂಗಸೊಬ್ಬಳು ಬಗ್ಗಿ ನೋಡಿ ‘ಚೆನ್ನಾಗಿಲ್ಲವಾ? ಈ ಮಕ್ಕಳು ಬೇಡಾಂದ್ರೆ ಕೇಳಲ್ಲ ಭಾನುವಾರ ನೋಡಿ…’ ಎಂದು ನಕ್ಕಳು. ‘ಇಲ್ಲ ತುಂಬಾ ಚೆನ್ನಾಗಿದೆ… ಅದಕ್ಕೆ ಕೇಳಿದೆ’ ಎಂದೆ. ‘ಓ ಹೌದಾ? ಇವನಿಗೆ ದೊಡ್ಡಮನೆ ಕಟ್ಟಲಿಕ್ಕುಂಟು ಅದಕ್ಕೆ ಈಗಿನಿಂದಲೇ ಹಣ ಸೇರಿಸ್ತಿದಾನೆ’ ಎಂದಳು. ಅವನ ಕಡೆ ಕಣ್ಣರಳಿಸಿದೆ.

ಆ ವಯಸ್ಸಿನ ನಮ್ಮ ಮಕ್ಕಳು ಆಡಲಿ ಎಂದು ಬಯಸುತ್ತೇವೆ. ಅವೂ ಅದು ಬೇಕು, ಇದು ಬೇಕು ಎಂದು ಹಠ ಮಾಡುತ್ತವೆ. ಆದರೆ ಈ ಹುಡುಗ ಮನೆ ಕಟ್ಟುವ ಕನಸನ್ನು ನನಸು ಮಾಡಲಿಕ್ಕೆ ನಿಂತಿದ್ದಾನೆ. ಅವನನ್ನು ನೋಡಿ ಅಚ್ಚರಿ ಎನಿಸಿತು. ಹೃದಯ ತುಂಬಿ ಬಂತು. ಅಪ್ರಯತ್ನಪೂರ್ವಕವಾಗಿ ‘ಚೆನ್ನಾಗಿ ಓದು ಮಗೂ’ ಎಂದೆ. ಅವನು ಪುಟ್ಟ ಪೈಜಾಮಾದ ಜೇಬಿನಿಂದ ನೋಟುಗಳನ್ನು ತೆಗೆದು ಅದರೊಂದಿಗೆ ನಾನು ಕೊಟ್ಟದ್ದನ್ನು ನೀಟಾಗಿ ಜೋಡಿಸಿಕೊಂಡ. ಅಷ್ಟು ದೂರ ಹೋಗಿ ತಿರುಗಿ ಬಂದೆ. ‘ನಿನ್ನ ಹೆಸರೇನು’ ಕೇಳಿದೆ. ಹೆಸರನ್ನು ಹೇಳಿ ಅವ ಮುಗುಳುನಕ್ಕ.

ಆ ನಗು ಗಾಳಿಯಲ್ಲಿ ತೇಲಿ ನನ್ನನ್ನು ತಲುಪಿದ ಹಾಗಾಯಿತು. ನನ್ನ ಮಗ ಕಣ್ಣ ಮುಂದೆ ಬಂದ ಹಾಗಾಯಿತು. ‘ನಮ್ಮ ಮಕ್ಕಳನ್ನು ತುಂಬಾ ಕಾಳಜಿ ಮಾಡುತ್ತೇವೆ ಅಲ್ಲವಾ? ಆದರೆ ಈ ಹುಡುಗ ಏಳೆಂಟು ವರ್ಷಕ್ಕೇ ದೊಡ್ಡವನಾಗಿಬಿಟ್ಟ ಅಬ್ಬಾ!’ ಎಂದೆ. ಚಂಚಲಾ ತಮ್ಮ ಅನುಭವವನ್ನು ಹೇಳುತ್ತಿದ್ದರು. ಇಬ್ಬರೂ ಚುರುಮುರಿಯನ್ನು ಸವಿಯುತ್ತಾ ಸಾಗಿದೆವು.

ನಮ್ಮ ಮುಖದಲ್ಲಿ ಹರಡಿದ್ದ ನಗುವಿಗೆ ಕಾರಣವನ್ನು ಹುಡುಕುವಂತೆ ಅಳೆಯುತ್ತಾ ‘ಎಲ್ಲಿ ಹೋಗಿಬಿಟ್ಟಿದ್ದಿರಿ?’ ಎಂದರು ಪಂಚಾಕ್ಷರಿ. ‘ಕನಸುಗಳು ನನಸಾಗಲಿವೆ’ ಎಂದೆ. ಚಂಚಲಾ ನಕ್ಕರು. ಅವರಿಗೆ ಏನರ್ಥವಾಯಿತೋ ಗೊತ್ತಾಗಲಿಲ್ಲ. ‘ಹೆಣ್ಣುಮಕ್ಕಳೇ ಹೀಗೆ… ದೊಡ್ಡ ಒಗಟು’ ಎಂದರು ಚಂದ್ರಹಾಸ್. ಅಷ್ಟು ದೊಡ್ಡ ತಡೆಗೋಡೆಯ ಪಕ್ಕದಲ್ಲೇ ನಡೆದು ಹೋಗುವಾಗ ನಮ್ಮನ್ನು ಕೆಲ ಕುತೂಹಲದ ಕಣ್ಣುಗಳು ಹಿಂಬಾಲಿಸಿದವು. ಎದುರಾದ ಗಡ್ಡಧಾರಿಯೊಬ್ಬ ‘ಏನು ಬಂದಿರುವುದು? ಸರ್ವೆ ಮಾಡಲಿಕ್ಕುಂಟಾ? ಸುಮ್ಮನೆ ಸರ್ವೆಮಾಡಿಕೊಂಡು ಹೋಗಿ ಸರಕಾರಕ್ಕೆ ಲೆಕ್ಕ ಒಪ್ಪಿಸಿ ನಮಗೆ ಮಾತ್ರ ಹಣ ತಲುಪಿಸದೆ ನೀವೇ ನುಂಗಿ ಹಾಕುವುದಾ? ಎಂದರು. ‘ಯಾವ ಸರ್ವೆ? ನಮಗೂ ಅದಕ್ಕೂ ಸಂಬಂಧ ಇಲ್ಲ. ನಾವಿಲ್ಲಿ ಸಿನಿಮಾ ಮಾಡಲಿಕ್ಕೆ ಲೊಕೇಷನ್ ನೋಡಲಿಕ್ಕೆ ಬಂದಿರೋದು’ ಎಂದರು ಪಂಚಾಕ್ಷರಿ. ‘ಓಹ್ ಸಿನಿಮಾಗಾ? ಈ ಜಾಗ ನಿಮಗೆ ಯಾರು ಹೇಳಿದ್ದು?’ ಎಂದೆಲ್ಲಾ ಪ್ರಶ್ನೆಗಳನ್ನು ಕೇಳತೊಡಗಿದರು.

‘ಒಬ್ಬ ಹೆಂಗಸು ಸಮುದ್ರದ ಉಬ್ಬರದಲ್ಲಿ ಮನೆಯನ್ನು ಕಳಕೊಳ್ತಾಳೆ ಆ ಕಥೆ ಮಾಡಲಿಕ್ಕೆ ಬಂದಿದ್ದೇವೆ’ ಎಂದೆ. ‘ವರ್ಷಾ ಮಳೆಗಾಲಕ್ಕೆ, ಚಂಡಮಾರುತಕ್ಕೆ  ಮನೆಗಳು ಸಮುದ್ರದ ಪಾಲಾಗ್ತಾನೇ ಇರುತ್ವೆ. ಇದನ್ನ ನೀವು ಕಥೆ ಮಾಡಲಿಕ್ಕೆ ಬಂದದ್ದಾ? ಇದರಿಂದ ಏನು ಪ್ರಯೋಜನಾ? ಸರ್ಕಾರದ ಕಣ್ಣು ತೆರೆಯುವುದುಂಟಾ?’ ಎಂದು ಗೊಣಗುತ್ತಾ ಹೊರಟುಹೋದರು.

ಆರಂಭದಲ್ಲೇ ಇಂಥಾ ವಿರೋಧವಾ? ಇನ್ನು ಇಲ್ಲಿ ಸಿನಿಮಾ ತೆಗೆದ ಹಾಗೆ ಎನಿಸಿತು. ಆದರೆ ಅವರ ಹಾವ ಭಾವ, ನಿಲುವು ನನಗೆ ಯಾರು ಯಾರನ್ನೋ ನೆನಪಿಸಲಿಕ್ಕೆ ಶುರುಮಾಡಿದವು. ಅದರಲ್ಲೂ ತೀಕ್ಷ್ಣವಾದ ಆ ಕಣ್ಣುಗಳು ಚಿರಪರಿಚಿತ ಅನ್ನಿಸತೊಡಗಿತು.        

। ಇನ್ನು ಮುಂದಿನ ವಾರಕ್ಕೆ ।                    

‍ಲೇಖಕರು Avadhi

June 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. PARAMESHWARAPPA KUDARI

    ಚಂದ್ರಿಕಾ ಬರೆಹ‌ ಚನ್ನಾಗಿದೆ.ನಾವೂ ಅವರ ಜೊತೆ ಹೊರಟಂತೆ ಭಾಸವಾಯಿತು

    ಪ್ರತಿಕ್ರಿಯೆ
  2. Meenakshi R

    ಸಮುದ್ರದ ಅಲೆ ಅಬ್ಬರಗಳನ್ನ ಕಥೆ ಜೀವಂತವಾಗಿ ಕಟ್ಟಿಕೊಡುತ್ತದೆ ಅಲ್ಲದೆ ಅಲ್ಲಿನ ಇಡೀ ಪರಿಸರ ನೆನಪಾಗಿ ಉಳಿಯುವಂತೆ ಮಾಡುತ್ತದೆ ಮುಂದಿನ ಭಾಗಕ್ಕೆ ಕಾತರತೆಯ ಕಾಯುವಿಕೆ ಇದೆ ಚಂದ್ರಿಕಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: