ಗಂಗಾ ಚಕ್ರಸಾಲಿ
ಹೈಸ್ಕೂಲಿನಲ್ಲಿ, ‘ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆ’
ಪ್ರಬಂಧ ಸ್ಪರ್ಧೆಯಲ್ಲಿ ಪುಟಗಳನ್ನು ತುಂಬಿಸುವೆ
ಆದರೆ ನನ್ನ ಮನದ ಹೋರಾಟಕ್ಕೆ..
ಆರಂಭದಲ್ಲಿಯೇ ಚುಕ್ಕಿ ಇಡುವೆ:
ಕಾಲೇಜಿನಲ್ಲಿ, ‘ಲವ್ ಮ್ಯಾರೇಜ್’ಪರವಾಗಿ
ಚರ್ಚಾಸ್ಪರ್ಧೆಯಲ್ಲಿ ಅದ್ಭುತ ವಾದ ಮಂಡಿಸುವೆ
ನಿಜವಾಗಿಯೂ ಅಪ್ಪ,ಅಮ್ಮ ಹೇಳಿದ,
ಹುಡುಗನನ್ನೇ ಮದುವೆಯಾಗುವೆ..
ಸ್ತ್ರೀಶಕ್ತಿ ಸಂಘಗಳಲ್ಲಿ ʼಸ್ತ್ರೀ ಗುಲಾಮಳಲ್ಲʼ
ಕುರಿತಾಗಿ ಕರತಾಡನ ನಿಲ್ಲದಷ್ಟು,ಭಾಷಣ ಮಾಡುವೆ
ಆದರೆ ಮನೆಯವರು ಹೇಳಿದ ಸಮಯಕ್ಕೆ
ಸರಿಯಾಗಿ ಮನೆಯಲ್ಲಿರುವೆ…
ಮಾನಿನಿಯರ ಸಂಕಷ್ಟ..ವ್ಯಥೆಗಳನ್ನು
ಕಥೆ,ಕಾದಂಬರಿಗಳಲ್ಲಿ ಎಳೆಎಳೆಯಾಗಿ ಬಿಚ್ಚಿಡುವೆ
ಓದುಗರ ಕಣ್ಣಂಚು ತೋಯುವಷ್ಟು…ಆದರೆ..
ಅದೆಲ್ಲಾ ನನ್ನ ಅನುಭವಗಳೆಂಬುದನ್ನು ಮುಚ್ಚಿಡುವೆ:
ಅಧಿಕಾರಿಣಿಯಾಗಿ ಒಳ್ಳೆಯ ಕೆಲಸ ಮಾಡುವೆ
ಜನರ ಮೆಚ್ಚುಗೆ ಪಡೆಯುವೆ
ಮನೆಯ ಪ್ರತಿ ಕೆಲಸಕ್ಕೂ…
ಮನೆಯವರ ನಿರ್ಧಾರಕ್ಕೆ ತಲೆಬಾಗುವೆ;
ಪಾತ್ರ ಬದಲಾಗಿದೆಯೋ?
ನಾವುಗಳು ಬದಲಾಗಿದ್ದೇವೆಯೋ?
ಶತಮಾನಗಳುರುಳಿದರೂ…..
ಪಾತ್ರ ಬದಲಾಗಬಹುದು,ನಾವುಗಳಲ್ಲ…
ಅಧಿಕಾರಿಣಿಯಾಗಿ ಜನಮೆಚ್ಚುವಂತೆ
ಕಾರ್ಯ ಮಾಡಿ ಹೆಸರು ಗಳಿಸುವೆ
ಮನೆಯಲ್ಲಿನ ಪ್ರತಿ ನಿರ್ಧಾರಕ್ಕೂ
ಪತಿಯನ್ನು ಕೇಳುವೆ…
ಪಾತ್ರಗಳು ಬದಲಾದರೇನು?
ನಾನು.. ‘ಸ್ತ್ರೀ’ ಅಲ್ಲವೇ..
ಶತಮಾನಗಳುರುಳಿದರೂ…
ಕಾರ್ಯಗಳು ಬದಲಾಗಿವೆ,ʼನಾನಲ್ಲʼ
0 ಪ್ರತಿಕ್ರಿಯೆಗಳು