ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಾಟ್ನಾದಲ್ಲಿ ಸಂತೋಷ್ ಅನಂತಪುರ

ಸಂತೋಷ್ ಅನಂತಪುರ

ಅದಾಗ ತಾನೆ ಉತ್ತರ ಪ್ರದೇಶದ ಜನತೆಗೆ ಆನೆ ಸವಾರಿ ಸಾಕಾಗಿ ಸೈಕಲ್ ಸವಾರಿಗೆ ಮೊರೆ ಹೋದ ಕ್ಷಣಗಳವು. ಆ ಸಂದರ್ಭದಲ್ಲಿ ನಾನು ಬರೇಲಿಗೆ ಪ್ರಯಾಣ ಬೆಳೆಸಿದ್ದೆ. ದೆಹಲಿ ಮಾರ್ಗವಾಗಿ ಗಾಜ಼ಿಯಾಬಾದ್ ಗೆ ಬಂದು ರೈಲಿನ ಮೂಲಕ ಬರೆಲಿಗೆ ತೆರಳುವವನಿದ್ದೆ. ಗಾಜಿಯಾಬಾದ್ ನಲ್ಲಿ ಒಂದಿಷ್ಟು ಮೊಘಲ್ ರುಚಿ ಉಂಡು…ನಿಲ್ದಾಣದಲ್ಲಿ ಭಾರತದ ಜನಸಂಖ್ಯೆ ಕಂಡು ಬೆಚ್ಚಿದ್ದೆ ಸಹ ! ಹಾಗೆ ‘ ಬರೆಲಿನಲ್ಲಿ ‘ಕಳೆದು ಹೋಗಿದ್ದ ನನ್ನಾಕೆಯ ಜುಮೀಕಿಯ ಹುಡುಕಾಟದಲ್ಲಿ ಬರೇಲಿ ಬಜಾರ್ ಅನ್ನು ತಡಕಾಡಿದ್ದೆ…ಕೊನೆಗೂ ಜುಮುಕಿ ಸಿಗದೆ…ಆಕೆಗಾಗಿ ಒಂದಿಷ್ಟು ಅಂದ-ಚಂದದ ಬಟ್ಟೆಗಳನ್ನು, ಸಿಹಿ ತಿನಿಸುಗಳನ್ನು ಹೊತ್ತು ತಂದಿದ್ದೆ. ಬರೇಲಿ ಬಜಾರಿನಲ್ಲಿ ಮು೦ಫಲಿ….ಎಂಬ ಹೆಸರು ಕೇಳಿ ಇದ್ಯಾವುದೋ ಹೊಸ ಬಗೆಯ ಫಲವೇ ಇರಬೇಕು ಎಂದುಕೊಂಡು ಅಲ್ಲಿ ಹೋಗಿ ನೋಡಿದರೆ ಅದು ನಮ್ಮ ಬಸವನಿಗೆ ಪ್ರಿಯವಾದ “ ಕಡ್ಲೆ ಬೀಜ “ ವಾಗಿತ್ತು ! ಅಲ್ಲಿಂದ ನನ್ನ ಪಯಾಣವು ಯಾದವಕುಲ ಪ್ರಸಿದ್ದ ಲಾಲು ಯಾದವ್ ರಾಜ್ಯಕ್ಕೆ ಸಾಗಿತ್ತು. ರಾಜಧಾನಿ ಪಟ್ನಾದ ಜಯಪ್ರಕಾಶ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಸಮಾಜವಾದವು ನನ್ನನ್ನು ಅವರಿಸಿದ್ದು ಸುಳ್ಳಲ್ಲ. ಹಾಗೆ ರಸ್ತೆ ಮಾರ್ಗವಾಗಿ ಸಂಚರಿಸುವಾಗ , ಓಂ ಪುರಿಯ ಮುಖದಂತಿದ್ದ ರಸ್ತೆಯು ಹೇಮಾಮಾಲಿನಿಯ ಕೆನ್ನೆಯಂತೆ ನುಣುಪಾಗಿರುವುದನ್ನು ಕಂಡು ಲಾಲು – ನಿತೀಶರ ನಡುವೆ ಒಮ್ಮೆ ಕನಸಿನ ಕನ್ಯೆ ಹಾಗೆ ಬಂದು ಸುಳಿದು ಹೋದದ್ದೂ ಸುಳ್ಳಲ್ಲ !

ಬಿಹಾರವನ್ನು ಸ್ಪರ್ಶಿಸಿದ್ದೇ – ಬುದ್ಧ, ಅಶೋಕ, ಜೆ.ಪಿ, ಕರ್ಪೂರಿ ಠಾಕುರ್ ಎಲ್ಲರೂ ಒಂದು ಸಲ ಮನದಲ್ಲಿ ಸುಳಿದಾಡಿದರು. ವೈಭವದ ದಿನಗಳು, ವೈಚಾರಿಕತೆ, ಸಮಾಜವಾದದ ಚಳುವಳಿಗಳು ಒಂದರ ಹಿಂದೆ ಒಂದರಂತೆ ಸಾಗಿ ಬಂದು ಗುಂಡಾರಾಜ್, ಜಾತಿರಾಜ್ ತನಕ ಬಂದು ನಿಂತಿತು. ಎಲ್ಲವೂ ಕಾಲ ಚಕ್ರದಡಿಯಲ್ಲಿ ಹುದುಗಿ ಹೋಗಿದ್ಡುವು. ಬಿಹಾರ ಎಂದರೆ ಬೆಚ್ಚಿ ಬೀಳುತ್ತಿದ್ದ ನಾನು ಅಲ್ಲಿ ಹೋಗಿ ನೋಡಿದಾಗ ಬದಲಾವಣೆಯು ಸ್ಪಷ್ಟವಾಗಿ ಕಾಣಿಸಿತು. ಬೆಳಗ್ಗೆ ೧೧ ಕ್ಕೆ ತೆರೆಯುತ್ತಿದ್ದ ಅಂಗಡಿ ಮುಗ್ಗಟ್ಟುಗಳು ಸಂಜೆ ೭ ರ ಹೊತ್ತಿಗೆ ಮುಚ್ಚಿ ಬಿಡುತ್ತಿದ್ದುವು. ಏನಿದು ” ಅಭಿವೃದ್ಧಿ “ಎಂದು ಕೇಳಿದರೆ, ತೆರೆಯದೇ ಇರುತ್ತಿದ್ದ, ಸಂಜೆ ೫ ಆಗುತ್ತಲೇ ಮುಚ್ಚಿಬಿಡುತ್ತಿದ್ದ ಅಂಗಡಿ ಮುಗ್ಗಟ್ಟುಗಳ “ ಅಭಿವೃದ್ಧಿಗೆ “ ಹೋಲಿಸಿದರೆ ಇದು ಬಹು “ದೊಡ್ಡ ಅಭಿವೃದ್ಧಿಯಂತೆ !” ಮಹಿಳೆಯರೂ, ಹುಡುಗಿಯರೂ ಓಡಾಡಬಹುದಾದ ನಾಡಾಗಿ ಬಿಹಾರ್ ಇದೀಗ ಬದಲಾಗಿದೆ. ಲಾಲು ಜಿ ಹೆಣೆದ ಜಾತಿ ರಾಜಕೀಯದ ಕೊನೆಯಿನ್ದ ತನ್ನ ಜಾತಿ ರಾಜಕೀಯ ಆರಂಭಿಸಿದ ನಿತೀಶ್ ಈ ವಿಚಾರವಾಗಿ ಲಾಲು ಜೊತೆಗೇ ಇದ್ದಾರೆ ! ಅಂದರೆ, ಇಂದು ಯಾವುದೇ ರಾಜಕಾರಣಿಗೂ, ರಾಜಕೀಯ ಪಕ್ಷಕ್ಕೂ ‘ನಾಮ’ ದ ಬಲದ ಅಗತ್ಯ ಇದ್ದೇ ಇದೆ. ಇದನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ, ಮಗ್ಗಲು ಬದಲಾಯಿಸುವಂತೆ, ರಾಜಕಾರಣಿಗಳು ಮಾಡುತ್ತಿರುವುದು. ‘ಹಾಲೂ ಹಳಸಿತ್ತು, ಬೆಕ್ಕೂ ಹಸಿದಿತ್ತು’, ಎಂಬಂತೆ, ಬಿಹಾರದ ಜನತೆ ಯಾದವ ಕುಲ ಶ್ರೇಷ್ಟನನ್ನು ನಿರಾಕರಿಸಿ, ಕುರ್ಮಿ ಪಂಗಡ ದ ನಿತೀಶ್ ರನ್ನು ಆರಿಸಿದ್ದು. ಇಬ್ಬರೂ ಒಂದೇ ಗರಡಿಯಲ್ಲಿ ಪಳಗಿದ್ದರೂ, ವಿಚಾರಧಾರೆಗಳು ಕೂಡಾ ಒಂದೇ ಗೆರೆಯಲ್ಲಿ ಹೋಗಲು, ಅದರ ಉದ್ದ-ಅಗಲಗಳಲ್ಲಿ ವ್ಯತ್ಯಾಸ ತೋರಿ ಬಂದು, ಬಿಹಾರದ ರಾಜಕಾರಣಿಗಳು ಭಿನ್ನ ಹಾದಿಯನ್ನು ಹಿಡಿದರು. ಹಾಗೇ ಒಂದಿಷ್ಟು ಬದಲಾವಣೆಯಂತೂ ಆಗಿರುವುದು ಖರೇ.

ಹೀಗೆ ಶಿಕ್ಷಣದ ಬಗ್ಗೆ ಒಂದಿಷ್ಟು ವಿಚಾರ ವಿನಿಮಯವನ್ನು ಗೆಳೆಯರ ಬಳಿ ಮಾಡುತ್ತಿರಲು ತಿಳಿದು ಬಂದ ವಿಷಯ ಏನೆಂದರೆ, ಅಲ್ಲಿ ಭೂಮೀಹಾರ್ ಮತ್ತು ರಜಪೂತ್ಸ್ ಸಮುದಾಯದವರು ಭಾರಿ ಶ್ರೀಮಂತರು ಮತ್ತು ಅತಿ ಹೆಚ್ಚು ಭೂಮಿಯ ಒಡೆಯರು ಕೂಡ . ಅವರು ಎಷ್ಟೇ ದುಡ್ಡು ಕೊಟ್ಟಾದರೂ ಸರಿ ಡಾಕ್ಟರೋ, ಎಂಜಿನಿಯರೋ ಕೋರ್ಸಿಗೆ ಸೇರುತ್ತಿದ್ದರು…ಸೇರಿದ ವರುಷ, ಎರಡರಲ್ಲಿ ತಮ್ಮದೇ ಅಂತಸ್ತಿನ, ಹೆಚ್ಚು ಸ್ತ್ರೀ ಧನ ಸಿಗುವ ಕನ್ಯೆಯೊಬ್ಬಳನ್ನು ವರಿಸಿ ಗೃಹಸ್ತರಾಗುತ್ತಿದ್ದರು. ಮತ್ತೆ ಮುಂದೆ ಓದು ? ಎಂದು ಕೇಳಿದರೆ ಅದಕ್ಕೆ ಉತ್ತರ: ಮಂದಗತಿಯಲ್ಲಿ ಸಾಗಿ ಅದನ್ನು ಪೂರ್ಣಗೊಳಿಸದೇ, ತನ್ನೂರಿಗೆ ಬಂದು ಮನೆತನದ ಜವಾಬ್ದಾರಿಯನ್ನು ಹೋರುತ್ತಾರಂತೆ ! ಹೀಗಾಗಿ ಉತ್ತರ ಭಾರತದ ಯಾವುದೇ ವಿದ್ಯಾ ಸಂಸ್ಥೆಗಳು ಬಿಹಾರದ ಈ ಎರಡು ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಅರ್ಜಿ ಹಾಕಿದರೆ ಸ್ವೀಕರಿಸುತ್ತಿಲ್ಲವಂತೆ !! ಇದು ಅವರಿಗೆ ಒಂದು ರೀತಿಯಲ್ಲಿ ತಮ್ಮ ಸ್ಟೇಟಸ್ ಅನ್ನು ಕಾಪಾಡಿಕೊಳ್ಳುವ ಮತ್ತು ತೋರಿಸಿಕೊಳ್ಳುವ ಬಗೆ. ಹಾಗಂತ ಅಲ್ಲಿನ ಜನರು ಬುದ್ಧಿವಂತರೂ ಹೌದು !
ವಿಮಾನದಲ್ಲಿ ಸಹ ಪ್ರಯಾಣಿಕನಾಗಿದ್ದ ಸರ್ದಾಜಿಯೊಬ್ಬರ ಬಳಿ ಪಾಟ್ಣಾ ದಲ್ಲಿ ನೋಡಲು ಏನೇನಿದೆ ಎಂದು ವಿಚಾರಿಸಿದ್ದೆ. ಅದಕ್ಕ ಅವರು ತಪ್ಪದೇ ” ಪಾಟ್ಣಾ ಸಾಹಿಬ್” ಗೆ ಭೇಟಿ ನೀಡು ಬೇಟಾ ಎಂದಿದ್ದರು. ಸಿಖ್ಖರ ಹತ್ತನೆ ಗುರು ಗೋವಿಂದ ಸಿಂಗ್ ಹುಟ್ಟಿದ ಸ್ಥಳವದು ಎಂದು, ಪದೇ ಪದೇ ಇಳಿಯುವಾಗಲೂ ಪುತ್ತ…ರ್….ಯಾದ್ ರಕಿಯೊ…! ಎಂದು ನೆನಪಿಸಿದ್ದರು. ಹಾಗೆ, ಅವರಿಚ್ಛೆ ನನ್ನಿಚ್ಚೆಯಾಗಿ, ಎಂದೂ ಗುರುದ್ವಾರಕ್ಕೆ ಹೋಗದ ನಾನು ಮೊದಲ ಬಾರಿಗೆ ಹೊರಟು ನಿಂತಿದ್ದೆ. ಪಟ್ನಾ ಸಾಹಿಬ್ ಗುರುದ್ವಾರಕ್ಕೆ ತೆರಳಿದಾಗ, ಖುರ್ಬಾನಿ ಹಾಡು ಕಿವಿಗೆ ಇಂಪಾಗಿ ಕೇಳಿಸುತ್ತಿತ್ತು. ಶುಭ್ರ, ಸ್ವಚ್ಛ ಆವರಣದೊಳಗೆ ಆಡಿಯಿಟ್ಟರೆ ಏನೋ ಒಂದು ರೀತಿಯ ಶಾಂತತೆ ನನ್ನನ್ನು ಆವರಿಸಿತ್ತು. “ಸಾಸರಿಯಕಾಲ್ …” ಎಂದೇ ಎಲ್ಲರಿಗೂ ನಮಸ್ತೆ ಹೇಳುವ ಅಲ್ಲಿನ ಮಂದಿಯ ಜೊತೆಗೆ ನಾನು ಸೇರಿ ಹಾಗಂತ ಹೇಳಲು, ಕಹಾನ್ ಸೆ ಹೈ ಆಪ್ ? ಎಂದು ನನ್ನನ್ನೇ ಪ್ರಶ್ನಿಸಿದರು. ನಾನೊಬ್ಬ ಯಾತ್ರಿಕ, ಮೊದಲಬಾರಿಗೆ ಗುರುದ್ವಾರಕ್ಕೆ ಬರುತ್ತಿದ್ದೇನೆ. ಇಲ್ಲಿನ ರೀತಿ ರಿವಾಜುಗಳೇನು ? ಎಂದು ಕೇಳಿದೆ. ಅಲ್ಲಿನ ಸಿಬ್ಬಂದಿಯೊಬ್ಬರು ಸಹಾಯಕನನ್ನು ನನ್ನ ಜೊತೆಗೆ ಕಳುಹಿಸಿಕೊಟ್ಟರು. ಅವರು ಜೊತೆಯಲ್ಲೇ ಕರೆದುಕೊಂಡು ಹೋಗಿ ಕೈ-ಕಾಲು ತೊಳೆಸಿ, ತಲೆಗೆ ಕಟ್ಟಿಕೊಳ್ಳಲು ವಸ್ತ್ರವೊಂದನ್ನು ನೀಡಿ ಅದನ್ನು ಪಗಡಿಯ ಬದಲಾಗಿ ತಲೆಗೆ ಸುತ್ತಿಕೊಂಡು ಒಳಗಡಿಯಿಟ್ಟೆ. ಬೆಳಿಗ್ಗಿನ ಹೊತ್ತು. ಖುರ್ಬಾನಿ ಇಂಪಾಗಿ ಹಾಡುತ್ತಿದ್ದರು. ಎಲ್ಲರೂ ‘ವಾಯೆ ಗುರು’ ಎಂದು ತಮ್ಮ ಗುರುವನ್ನು ಮನಸಾರೇ ನೆನೆಯುತ್ತಿದ್ದರು. ನಾನೂ ‘ವಾಯೆ ಗುರು’ ಎಂದು ಮನಸಾರೇ ಬೇಡಿಕೊಂಡೆ. ಅಲ್ಲೇ ಕುಳಿತಿದ್ದ ನನಗೆ ಪ್ರಸಾದವನ್ನು ವಿತರಿಸಿದರು. ಬೆಲ್ಲ-ಬೇಳೆ-ಕಾಯಿ-ತುಪ್ಪ ಮಿಶ್ರಣವು ಪ್ರಸಾದದ ರೂಪದಲ್ಲಿ ನನ್ನ ಹೊಟ್ಟೆಯೊಳಗಿಳಿದಿತ್ತು. ಹಾಗೇ ಗರ್ಭಗುಡಿಗೆ ಸುತ್ತು ಬರುವಾಗ ಅಲ್ಲೇ ಪ್ರಸಾದ ವಿತರಣೆ ಮಾಡುತ್ತಿದ್ದ ಸಿಖ್ಖ್ ಅರ್ಚಕರು ಕರೆದು ಒಂದು ವಸ್ತ್ರದ ತುಂಬಾ ಸಕ್ಕರೆ ಮಿಠಾಯಿಯನ್ನು ತುಂಬಿ ಅದರ ಜೊತೆ ಗುರುನಾನಕರ ಭಾವ ಚಿತ್ರವನ್ನೂ ಕೊಟ್ಟು ಆಶೀರ್ವಾದ ಮಾಡಿದರು.ಮರಳಿ ಬರುವಾಗ ಗೇಟಿನ ಬಳಿ ನಿಂತಿದ್ದ ಕಾವಲುಗಾರ ತನ್ನ ‘ಈಟಿ ‘ ಜೊತೆಗೆ ಸಾಸರಿಯಕಾಲ್…ಪಾಜೀ ಎಂದು ನಮಸ್ಕರಿಸಲು ಅವನು ನಿಂತ ಭಂಗಿಗೆ, ಕೂಗಿದ ರೀತಿಗೆ, ಸಲಾಮು ಹೊಡೆದ ಸ್ಟೈಲ್ ಗೆ ಅವನ ಫೋಟೋ ಕ್ಲಿಕ್ಕಿಸಿ ಹೊರ ಬಂದು ಸೈಕಲ್ ರೀಕ್ಷಾಕ್ಕೆ ಕಾಯುತ್ತಿದ್ದೆ.

ಹಾಗೆ ಪಾಟ್ನಾದ ಬೀದಿಯಲ್ಲಿ ಸೈಕಲ್ ರೀಕ್ಷಾದ ಸಹಾಯದಿಂದ ಬರುತ್ತಿರುವಾಗ…..ಜನರೆಲ್ಲಾ ಅಡ್ಡಾ ದಿಡ್ಡಿ ಓಡುತ್ತಿರಲು, ಸೈಕಲ್ ತುಳಿಯುವವನ ಬಳಿ ಯಾಕಾಗಿ ಎಂದು ವಿಚಾರಿಸಲು ಅವನು ಇನ್ನೊಬ್ಬನಲ್ಲಿ ವಿಚಾರಿಸಿ ನನಗೆ ಏನು ಎತ್ತ ಎಂದು ಹೇಳದೇ ‘ಆಂಧಿ…ಆಂಧಿ…’ ಎಂದು ಮಾತ್ರ ಹೇಳಿ ತುಳಿಯುತ್ತಿರುವ ಸೈಕಲ್ ಮತ್ತು ಅದರಲ್ಲಿ ‘ಅಂಡ’ ನ್ನು ನೋಯಿಸಿಕೊಂಡು ಕುಳಿತಿದ್ದ ನನ್ನನ್ನು ಬಿಟ್ಟು ಆ ಜನ ಪರಾರಿ…! ಸ್ವಲ್ಪ ಹೊತ್ತಲ್ಲಿ ಇಡೀ ಪ್ರದೇಶವೇ ಸ್ಟ್ಯಾಚ್ಯೂ ಆಗಿದ್ದು… ನಾನೇನೋ ಇದು…ಯಾರೋ ದೊಡ್ಡವರೇ ಬರುತ್ತಿರಬೇಕು ಎಂದು ಅಲ್ಲೇ ಕುಳಿತಿದ್ದೆ…..ಅಷ್ಟರಲ್ಲಿ ಅವರು ಬಂದೆ ಬಿಟ್ಟರು…ನೋಡು ನೋಡುತ್ತಿದ್ದಂತೆಯೇ ಧೂಳು ತುಂಬಿದ ಬಲವಾದ ಗಾಳಿ ಬೀಸುತ್ತಾ ಎಲ್ಲೆಡೆ ಹಬ್ಬಿ ನನ್ನನ್ನು ಮುತ್ತಿಯೇ ಬಿಟ್ಟಿತ್ತು. ನಿಮಿಷಗಳೆರಡು ಕಣ್ಣು ಮುಚ್ಚಿ ತೆರೆಯುವುದರೊಳಗೆ ನಾನು ‘ ಆಂಧಿ ಮನುಷ್ಯನಾಗಿದ್ದೆ ‘ ! ಮೈ ಮುಖವೆಲ್ಲ ಧೂಳು, ಮಣ್ಣು ಗಳಿಂದ ತುಂಬಿ ಹೋಗಿತ್ತು. ಎಲ್ಲೋ ರಕ್ಷಣೆಗೆಂದು ಆಡಗಿದ್ದ ನಮ್ಮ ಸೈಕಲ್ ರಿಕ್ಷ ಡ್ರೈವರ್ ಓಡಿ ಬಂದು…’ ಏ ಕಾ ಮಹರಾಜ್….ಆಪ್ ಇದರಿಹಿ ಬೈಠೆ ಹೈ…? ಹಮ್ ಕಹಾತ್ ಹೈ ನಾ….?! ಎಂದು ಪಕ್ಕಾ ಬಿಹಾರಿ ರಾಗದಲ್ಲಿ ಕೇಳಲು ಬಾಯೀ ಬಿಡಲು ಆಗದ ನನ್ನ ಅವಸ್ಥೆ ಒಬ್ಬರನ್ನೊಬ್ಬರು ನೋಡುವುದರಲ್ಲೇ ಮುಗಿದು ಹೋಗಿತ್ತು. ಹಾಗೂ ಹೀಗೂ…ನವರಾತ್ರಿಯ ವೇಷಧಾರಿಯಾಗಿ ಹೊಟೆಲ್ ಪ್ರವೇಶಿಸಿದರೆ, ಪ್ರವೇಶ ನಿರಾಕರಿಸಲು…..ಹೊಟೆಲ್ ರೂಮ್ ನ ಬೀಗದ ಕೈಯನ್ನು ತೋರಿಸಿ, ನಾನವನಲ್ಲ…ಅವನು ನಾನಲ್ಲ ಎಂದು ಉಪೇಂದ್ರನ ಸ್ಟೈಲ್ ನಲ್ಲಿ ಹೇಳದೆ…, ನಾನು ಅವನೇ…ಅವನೇ ನಾನು ಎಂದು ಸಾಬೀತು ಪಡಿಸಿಕೊಳ್ಳುವಷ್ಟರಲ್ಲಿ ಸಾಕು ಸಾಕಾಗಿತ್ತು. “ಜಬ್ ತಕ್ ಸಮೋಸಾ ಮೇ ಆಲೂ ರಹೆಗಾ…ತಬ್ ತಕ್ ಬಿಹಾರ್ ಮೇ ಲಾಲು ರಹೆಗಾ ..” ಎಂಬ ಘೋಷ ವಾಕ್ಯವು “ಆಲೂ” ಇಲ್ಲದ ಯಾವುದೇ ಆಹಾರ ಪದಾರ್ಥಗಳನ್ನು ನೋಡಿದಾಗ ನೆನಪಾಯಿತು. ಸದ್ಯಕ್ಕೆ ಅಲ್ಲಿ ‘ಲಾಲು’ ಇಲ್ಲದ ಬಿಹಾರ ಮತ್ತು ‘ಆಲೂ’ ಇರುವ ಬಿಹಾರ !!!
ನನಗೆ ಬಹಳ ಆಪ್ತರೂ , ಸ್ನೇಹಿತರು ಆದ ಅಬ್ದುಲ್ ಬಾರಿ ಸಿದ್ದಿಕೀ ಸಾಬ್…ಬೆಂಗಳೂರಿಗೆ ಬಂದಾಗಲೆಲ್ಲಾ…ನನ್ನನ್ನು ತಪ್ಪದೇ ಭೇಟಿ ಮಾಡಿ ಹೋಗುತ್ತಿದ್ದರು. ವರ್ಷಗಳ ಕೆಳಗೆ ಅವರ ಪಕ್ಷದ ಶಾಸಕನ ಮದುವೆ ಲೀಲಾ ಪ್ಯಾಲೇಸ್ ನಲ್ಲಿ ನಡೆದಿತ್ತು. ಅದಕ್ಕೆ ಅವರು ನನ್ನನ್ನು ಕುಟುಂಬ ಸಮೇತ ಕರೆದಿದ್ದರು ಜೊತೆಗೆ ಮನೆಗೇ ಕಾರನ್ನೂ ಕಳುಹಿಸಿದ್ದರು. ಹಾಗೆ ನಾನು ನನ್ನವಳೊಡನೆ ಆ ಮದುವೆಗೆ ಹೋಗಿದ್ದೆ. ಈ ಮದುವೆಯಲ್ಲಿ ನನ್ನ ಇನ್ನೊಂದು ಕುತೂಹಲ ಎಂದರೆ ” ಲಾಲು ಜಿ” ಆಗಿದ್ದರು. ಅಂತೂ ಆ ಕ್ಷಣ ಬಂದೆ ಬಿಟ್ಟಿತು. ಸಿದ್ದಿಕೀ ಸಾಬ್ ನಮ್ಮನ್ನು ಅವರ ಬಳಿ ಕರೆದೊಯ್ದರು. ಸೂಟ್ ರೂಮಿನಲ್ಲಿ, ತನ್ನದೇ ಸ್ತೈಲಿನಲ್ಲಿ, ಕುಳಿತಿದ್ದ ಲಾಲು ಜಿ ಯ ಬಳಿ ನನ್ನ ಪರಿಚಯ ಮಾಡಿಕೊಟ್ಟರು. ಅದಕ್ಕವರು , ” ಟಿಪಿಕಲ್ ಬಿಹಾರಿ ರಾಗದಲ್ಲಿ….ಅಚ್ಚಾ…..ತುಮ್ ಉಸ್ ಕಂಪೆನಿ ಕಾ ಮಾಲಿಕ್ ಹೊ…? ಎಂದು ಪ್ರಶ್ನಿಸಿದರು. ಇದೇನಪ್ಪ ಈ ತರಾ ಅಂದುಕೊಂಡು, ” ನಹೀಂ ಲಾಲು ಜಿ … ಹಮ್ ಉಸ್ ಕಂಪೆನಿ ಕ ಸೇವಕ್ ಹೈ ! ” ಎಂದು ಹೇಳಿದ್ದೆ . ಬಹುತ್ ಅಚ್ಚೆ ಹಿಂದಿ ಬೊಲ್ತೆ ಹೊ…! ಎಂದು ಪ್ರಶಂಸಿಸಿದ್ದರು. ಹಾಗೂ ಹೀಗೂ ಅವರ ಬಳಿ ಒಂದಿಷ್ಟು ರಾಜಕೀಯದ ಮಾತುಗಳನ್ನಾಡಿ ಅಂದು ಅವರಿಂದ ಬೀಳ್ಗೊಂಡಿದ್ದೆ. ಪಾಟ್ಣಾ ಆಯಾ ಕರೊ…ಎಂದು ಆಮಂತ್ರಣವನ್ನೂ ಕೊಟ್ಟಿದ್ದರು. ಹೀಗೆ ಸಿದ್ದಿಕಿ ಸಾಬ್ ಮತ್ತು ಭಾಬಿ ಯಾವತ್ತು ಬೆಂಗಳೂರಿಗೆ ಬಂದರೂ ಮಾತನಾಡದೇ ಹೋಗುತ್ತಿರಲಿಲ್ಲ. ಬಹಳಷ್ಟು ಸಲ ಅವರೇ ನೆನೆಸಿಕೊಂಡು ಫೋನಾಯಿಸಿದ್ದಿದೆ. ಎಷ್ಟೋ ಸಲ ಪಾಟ್ಣಾ ಗೆ ಹೋಗಬೇಕೆಂದುಕೊಂಡವನು ಹೋಗಲಾಗಲಿಲ್ಲ. ಇದೀಗ ಆ ಸಮಯ ಒದಗಿ ಬಂದಿತ್ತು. ಆ ಸಂಜೆ ನನ್ನ ಆಫೀಸಿನ ಕೆಲಸ ಕಾರ್ಯಗಳು ಮುಗಿಯಲು, ಅವರಿಗೆ ಫೋನಾಯಿಸಿದೆ. ಯಾವತ್ತೂ ೩ ನೇ ರಿಂಗ್ ಗೆ ಎತ್ತುವ ಅವರು ಅಂದು ಎತ್ತಲಿಲ್ಲ ಬದಲಾಗಿ ಅವರ ಪಿ.ಎ. ಎತ್ತಿ ಹೇಳಿದ ಸಾಹೇಬರು, ‘ ನಮಾಜ್’ ನಲ್ಲಿದ್ದಾರೆ, ಆಮೇಲೆ ಕರೆ ಮಾಡಿ ಎಂದು ಫೊನಿಟ್ಟನು. ಸರಿ ಎಂದು ನಾನು ಭಾಭಿಗೆ ಫೋನ್ ಮಾಡಿದೆ. ಆಕೆ, ಅಲ್ಲಿನ ಪ್ರಸಿದ್ಧ ವಿವಿ.ಯಲ್ಲಿ ಮನ:ಶಾಸ್ತ್ರ ವಿಷ್ಯದಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಫೋನ್ ಎತ್ತಿದ ಕೂಡಲೇ…. ಅರೆ ಸಂತೋಷ್ ಜಿ… ಬಹುತ್ ದಿನೋಂಕೆ ಬಾದ್ ಹಮ್ರಾ ಯಾದ್ ಕಿಯಾ…? ಕಹಾ ಹೈ ಆಪ್…? ಎಂದು ಕೇಳಿದರು. ” ಭಾಬಿ ಮೈ ಇದರ್ ಆಪ್ ಕಾ ಪಾಟ್ಣಾ ಮೈ ಹೂ…” ಎಂದೆ..ಅರೆ…ಕ್ಯಾ ಬಾತ್ ಹೈ..ಏನು, ಎಲ್ಲಿ , ಎಂದು ವಿಚಾರಿಸಿ ನಾನಿಳಿದಿದ್ದ ಹೊಟೆಲ್ ಗೆ ಕಾರನ್ನು ಕಳುಹಿಸಿ ಮನೆಗೆ ಕರೆಯಿಸಿಕೊಂಡರು. ಹೋದವನಿಗೆ, ಖುದ್ದು ಸಿದ್ದಿಕಿ ಸಾಬ್ ಅವರೇ ಸ್ವಾಗತಿಸಿದರು. ಅರೆ ಬಾಯೀ….ಹಮ್ ಬಹುತ್ ಖುಷ್ ಹೈ….ಇದರ್ ಆಕೆ ಆಪ್ ಹಮ್ಸೇ ಮಿಲ್ನ್ ಆಯೆ. ಆಗರ ಆಪ್ ಇದರ್ ಆಕೆ ಹಮ್ಸೇ ನ ಮಿಲ್‌ನೆ ಆಯೆ, ತೋ ಹಮೆ ಬಹುತ್ ಬುರಾ ಲಗ್ತಾ ತಾ..” ಎಂದು ಅಪ್ಪಿಕೊಂಡರು. ಕ್ಯಾ ಭಾಯಿ ಅಕೇಲೆ….ಬೀವಿ ಔರ್ ಬೆಟೀ ಕೋ ನಹೀಂ ಲೇ ಕೆ ಆಯೆ..? ಎಂದು ಕೇಳಿ ಅದಕ್ಕೆ ನನ್ನಿಂದ ಉತ್ತರವನ್ನೂ ಪಡೆದು, ರಜ ಕಳೆಯಲೆಂದು ನನ್ನ ಮನೆಗೆ ಹೋಗಿದ್ದ ಮಡದಿ -ಮಗಳ ಜೊತೆ ಅಲ್ಲಿಂದಲೇ ಫೋನಿನಲ್ಲಿ ಮಾತನಾಡಿ ಕುಶಲ ವಿಚಾರಿಸಿದರು. ನನ್ನ ಅಪ್ಪ-ಅಮ್ಮನನ್ನು, ತಂಗಿ-ಭಾವನನ್ನೂ ವಿಚಾರಿಸಿದರು. ಯಾಕೆಂದರೆ, ಅವರು ನನ್ನ ತಂಗಿಯ ಮದುವೆಗೆ, 2005 ರಲ್ಲಿ ಬಿಹಾರದಿಂದ ಚುನಾವಣೆಯ ಪ್ರಚಾರದ ನಡುವೆಯೂ ಬಂದು ಹರಸಿ ಹೋಗಿದ್ದರು. ಅಂದು ಮಂಗಳೂರಿನ ಎಸ್.ಪಿ. ಸೀಮಂತ್ ಕುಮಾರ್ (ನೆನಪು ಸರಿಯಾಗಿದ್ದರೆ) ನನ್ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಯಾಕೆ ಬಿಹಾರದ ಮಂತ್ರಿಯೊಬ್ಬರು ಬರುವುದನ್ನು ಅವರಿಗೆ ತಿಳಿಸಲಿಲ್ಲ ಎಂದು. ಈ ಚುನಾವಣಾ ಪ್ರಚಾರದ ಅಬ್ಬರದ ನಡುವೆ ಅವರು ಬರುತ್ತಾರೆಂಬ ಖಾತ್ರಿ ನನಗಿರಲಿಲ್ಲ, ಎಂದು ಸಿದ್ದಿಕ್ ಸಾಬ್ ಅವರ ಎದುರೇ ಸೀಮಂತ್ ಕುಮಾರ್ ಅವರಿಗೆ ಹೇಳಿದೆ. ಅದಕ್ಕೆ ಸಿದ್ದಿಕ್ ಸಾಬ್, ಮೈ ನೇ ಫ್ಯಾಸ್ಲಾ ಕಿಯಾ ಥಾ ಕೀ ಆಪ್ ಕೀ ಬೆಹನ್ ಕೀ ಷಾದಿ ಮೇ ಆಜವೋಂ…ಲೆಕಿನ ಪ್ರೊತೋಕೋಲ್ ಕೆ ಮುತಾಬಿಕ್, ಇದರ್ ಸೂಚನಾ ದೇನಾ ಭೂಲ್ ಗಯಾ..ಎಂದು ಅವರು ಎಸ್.ಪಿ. ಸಾಹೆಬ್ರಿಗೆ ಸಮಜಾಯಿಷಿ ನೀಡಿದರು.
ಅಂದು ರಾತ್ರಿಯ ಮಾತುಕತೆಯಲ್ಲಿ ಅವನ್ನೆಲ್ಲಾ ನಾವು ನೆನೆದು ಕೊಳ್ಳುತ್ತಿದ್ದೆವು. ಜತೆಯಲ್ಲಿದ್ದ ಭಾಬಿ, ಸಾಕು ಮಾತನಾಡಿದ್ದು ಎಂದು ನಮ್ಮನ್ನು ಊಟಕ್ಕೆ ಎಬ್ಬಿಸಿದರು. ಘಮ ಘಮ ತುಪ್ಪದ ಪರಿಮಳ ಮೂಗಿಗೆ ಬಡಿಯುತ್ತಿತ್ತು. ಭಾಭಿಯ ಕೈಯಲ್ಲೇ ತಯಾರಾದ ಊಟವನ್ನು ಅವರ ಕೈಯಿಂದಲೇ ಬಡಿಸಿಕೊಂಡು, ಸಿದ್ದಿಕಿ ಸಾಬ್ ಜೊತೆ ಕುಳಿತು ಮೆಲ್ಲುತ್ತಿದ್ದೆ. ನಂತರ ಸಂಪ್ರದಾಯದಂತೆ ಪಾನ್ ಬರಲು ಅದನ್ನೆತ್ತಿ ಬಾಯೊಳಗಿಟ್ಟು, ಊಟದ ನಂತರದ ‘ ವಾಕ್ ಪಥ ‘ ವನ್ನು ಶುರು ಹಚ್ಚಿಕೊಂಡೆವು. ಸಿದ್ದಿಕಿ ಸಾಹೇಬರು…ರೈಟ್ ಮನ್ ಇನ್ ರಾಂಗ್ ಪಾರ್ಟಿ ಅನ್ನೋ ಹಾಗೆ ಸಿದಾ – ಸಾದಾ ಸರಳ, ಸಜ್ಜನ, ಸುಸಂಸ್ಕೃತ, ಬುದ್ಧಿವಂತ ರಾಜಕಾರಣಿ. ಆಗ ನಡೆದ ಮಾತುಕಥೆಗಳು ಹೀಗಿವೆ ; ರಾಜಕೀಯ ಪಲಕುಗಳ ಬಗ್ಗೆ ಮಾತನಾಡುತ್ತಾ, ಅವರು ತಮ್ಮ ಗುರುಗಳಾದ ದಿ.ಕರ್ಪುರಿ ಠಾಕುರ್ ಅವರನ್ನು ಮಾತು ಮಾತಿಗೆ ನೆನೆದುಕೊಂಡು ಬಹಳಷ್ಟು ವಿಚಾರಗಳನ್ನು ಹೇಳುತ್ತಿದ್ದರು. ಅವರೇ ಹೇಳುವಂತೆ, ” ನನ್ನ ರಾಜಕೀಯ ಗುರು ಕರ್ಪೂರಿ ಠಾಕುರ್ ಸಾಹೇಬರು ಕುಳಿತ ಆಸನದಲ್ಲಿ ಇಂದು ನಾನು ಕುಳಿತುಕೊಳ್ಳಬೇಕಾದರೆ ಅಲ್ಪ-ಸ್ವಲ್ಪವಾದರೂ ಅವರ ಉತ್ತಮ ಗುಣ ನಡತೆಗಳನ್ನು ನಾನು ಬದುಕಲ್ಲಿ ಅಳವಡಿಸಿಕೊಳ್ಳಬೇಕಲ್ಲವೇ ಸಂತೋಷ್ ಜಿ ” ಎಂದು ಹೇಳುತ್ತಿದರು. ಲಾಲು ಪಕ್ಷದಲ್ಲಿ ಖುದ್ದು ರಾಬ್ಡಿ ದೇವಿಯವರೇ ಚುನಾವಣೆಯಲ್ಲಿ ಸೋತು ಮಕಾಡೆ ಮಲಗಿದಾಗ ವಿರೋಧ ಪಕ್ಷದ ನಾಯಕನನ್ನಾಗಿ ತಮ್ಮವರನ್ನೇ ಆರಿಸಲು ಬಹಳಷ್ಟು ಕಸರತ್ತು ನಡೆಸಿದ ಲಾಲು ಜಿ ಮತ್ತು ತಂಡ, ಕೊನೆಗೂ ಆಯ್ದು ಬಂದ ಶಾಸಕರ ಒಕ್ಕೊರಲಿನ ಬೇಡಿಕೆಯಂತೆ, ಕ್ಲೀನ್ ಇಮೇಜ್ ಇರುವ ಸಿದ್ದಿಕಿ ಸಾಹೇಬರನ್ನು ಪಕ್ಷದ ಬಲವರ್ಧನೆಗೆ ಹಾಗೂ ಪಕ್ಷದ ಫೇಸ್ ವ್ಯಾಲ್ಯೂ ಆಗಿ ಕಂಡು ಕೊಂಡು, ಆರಿಸಿ, ಆ ಸ್ಥಾನದಲ್ಲಿ ಕೂರಿಸಿದ್ದಾರೆ. ತಮ್ಮ ಸರ್ಕಾರಿ ನಿವಾಸದಲ್ಲಿ, ಪುಟ್ಟದೊಂದು ಕೈದೋಟ ಮಾಡಿಕೊಂಡು ಅಲ್ಲಿ ತರಕಾರಿ, ಹಣ್ಣು, ಹೂಗಳನ್ನು ಬೆಳೆಸಿ ಅದನ್ನೇ ದಿನ ನಿತ್ಯದ ಬಳಕೆಗೆ ಉಪಯೋಗಿಸುತ್ತಾರೆ. ಅಲ್ಲದೇ ಹಸು, ಎಮ್ಮೆಗಳನ್ನೂ ಸಾಕಿ ಹಾಲು, ಮೊಸರು, ತುಪ್ಪ ಅಂತ ಅದನ್ನೂ ಬಳಸಿಕೊಳ್ಳುತ್ತಾರೆ. ಹೀಗೆ ರಾಜಕೀಯದ ಮಾತು ಕಥೆಗಳಲ್ಲಿ ಅವರನ್ನ ಕೇಳಿಯೇಬಿಟ್ಟೆ, ಸಾರ್ ನಿಮ್ಮನ್ನು ನಿತೀಶ್ ಕುಮಾರ್ ಅವರು ಜೆಡಿ (ಯು) ಪಕ್ಷಕ್ಕೆ ಆಹ್ವಾನಿಸಿ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತಾರೆಂದಿದ್ದಾರಲ್ಲವೇ ? ಎಂದು ಕೇಳಿದೆ. ಅದಕ್ಕೆ ಅವರು ‘ ಸಂತೋಷ್ ಜಿ….ನಿತೀಶ್ ಜಿ ನೇ ಹಮೆ ಬುಲಾವ ಔರ್ ಆಫರ್ ಭೀ ಕೀ ಎ ತೆ…ಹಮ್‌ನೇ ಕಹಾ..ನಿತೀಶ್ ಜಿ ….ಹಮೆ ಆಪ್ ಕೆ ಬೈಟೆ ಹೂವೇ ಕುರ್ಸಿ ಚಾಹಿ ಎ…ಬದ್ಲೆ ಮೇ ಆಪ್ ಕೆ ದಿಯೇ ಹೂವೇ ಕುರ್ಸಿ ನಹೀಂ ಚಾಹಿ ಎ….” ಎಂದು ಹೇಳಿದೆ ಅಂದು ಪಾನ್ ತುಂಬಿದ ತಮ್ಮ ಬಾಯನ್ನು ಮೇಲೆತ್ತಿ ಒಂದು ನಗೆ ನಕ್ಕರು. ಸಂವಿಧಾನವನ್ನು ಚೆನ್ನಾಗಿ ಅರಿತಿರುವ ಅವರು ತಮ್ಮ ಬಿಡುವಿನ ವೇಳೆಯನ್ನು ತಮ್ಮ ಗ್ರಂಥಾಲಯದಲ್ಲಿ ಕಳೆಯುವ ಸಿದ್ದಿಕಿ ಸಾಬ್, ಪ್ರಸಕ್ತ ರಾಜಕೀಯ ವಿದ್ಯಾಮಾನಗಳನ್ನು ಕೂಲಂಕುಶವಾಗಿ ಅಭ್ಯಸಿಸಿ, ಜನ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಮುಡಿಪಾಗಿರಿಸಿಕೊಂಡಿದ್ದಾರೆ. ಅವರ ಮುಂದಿನ ರಾಜಕೀಯ ದಿನಗಳಿಗೆ ಶುಭಾಶಯವನ್ನು ಹೇಳಿ, ಅವರಿಂದ, ಅವರ ಮನೆಯವರಿಂದ ಬೀಳ್ಗೊಂಡು. ನನ್ನ ಮುಂದಿನ ಪಯಣವನ್ನು ಜಾರ್ಖಂಡ್ ರಾಜಧಾನಿಯಾದ ರಾಂಚಿಯತ್ತ ಬೆಳೆಸಿದೆ.
 

‍ಲೇಖಕರು G

29 August, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading