ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಿವರ್ತನೆ ಎನ್ನುವುದು ಭಕ್ತಿಯ ಗರಗಸದಂತೆ..

ರಹಮತ್ ತರೀಕೆರೆ

ಮಹಿಳೆ ಬದಲಾಗುತ್ತಿದ್ದಾಳೆ ಎಂಬ ಮಾತನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಹೀಗೆನ್ನುವಾಗ ಯಾವ ವರ್ಗದ ಅಥವಾ ಸಮುದಾಯದ ಮಹಿಳೆ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಬೇಕು. ಈ ಪ್ರಶ್ನೆಗೆ ನಿರ್ದಿಷ್ಟ ಚೌಕಟ್ಟಿಲ್ಲದೆ ಸರ್ವಾನ್ವಯ ಎಂಬಂತಹ ನೆಲೆಯಲ್ಲಿ ಉತ್ತರಿಸುವುದು ಕಷ್ಟ. ಇದಕ್ಕೆ ಉತ್ತರವನ್ನು ನಮ್ಮ ಊರು ಬೀದಿ ಮನೆಯ ಚಿತ್ರಗಳ ಮೂಲಕವೇ ಹುಡುಕಬೇಕೊ ಏನೋ?

ನಾನಿರುವ ಹೊಸಪೇಟೆ ಪಟ್ಟಣದಲ್ಲಿ ಅನೇಕ ಸ್ತರದ ಮಹಿಳೆಯರಿದ್ದಾರೆ. ಎದ್ದುಕಾಣುವುದು ಮನೆಗೆಲಸಕ್ಕೆ ಬರುವ ಕೆಳವರ್ಗದ ಮಹಿಳೆಯರು. ಇವರಲ್ಲಿ ಬಹಳ ಜನ ಸಣ್ಣವಯದಲ್ಲೇ ವಿಧವೆಯರಾದವರು ಇಲ್ಲವೇ ಗಂಡಬಿಟ್ಟವರು. ಈ ವಿಧವೆಯರ ಗಂಡ ಆಗಿದ್ದ ಬಹುಪಾಲು ಜನ ಕುಡಿತಕ್ಕೆ ಬಿದ್ದು ಅಕಾಲ ಮೃತ್ಯುವಿಗೆ ಈಡಾಗಿರುವರು. ಕುಡಿತ ಕರ್ನಾಟಕದ ಈ ಭಾಗದಲ್ಲಿ ಶಾಪ. ಇದಕ್ಕೆ ಹೊಣೆಗೇಡಿಗಳೆಂದು ಕೇವಲ ಗಂಡಸರನ್ನು ಅಪರಾಧಿಗಳಾಗಿಸುವುದು ಸುಲಭ.

ಅವರನ್ನು ಕುಡಿತಕ್ಕೆ ದೂಡಿದ ಸಂಗತಿ ಯಾವುದು? ಬಡತನವೇ? ವೈಯಕ್ತಿಕ ದುರ್ಬಲತೆಯೇ? ಅವರಿಗೆ ಮದ್ಯ ಸಲೀಸಾಗಿ ಸಿಗುವಂತೆ ಮಾಡಿರುವ ಪ್ರಭುತ್ವವೇ? ಅವರು ವಾಸಿಸುವ ಸಾಮಾಜಿಕ-ಆರ್ಥಿಕ ಪರಿಸರವೇ? ಕೋಟ್ಯಧಿಪತಿಗಳು ಮತ್ತು ಗತಿಯಿಲ್ಲದವರು ಎಂಬ ಇತ್ತುದಿಯಲ್ಲಿ ವಿಭಜಿತವಾಗಿರುವ ಬಳ್ಳಾರಿ ಸೀಮೆಯ ಆರ್ಥಿಕ ತರತಮವೇ?

ಬಳ್ಳಾರಿ ಸೀಮೆಯಲ್ಲಿ ಸಾವಿರಾರು ಕೂಲಿಕಾರ ಹೆಂಗಸರು ಮಕ್ಕಳನ್ನು ಓದಿಸಲು, ಹೆಣ್ಣುಮಕ್ಕಳ ಮದುವೆ ಮಾಡಿಸಲು, ಸಣ್ಣದೊಂದು ಗುಡಿಸಲು ಕಟ್ಟಿಕೊಳ್ಳಲು ಹೋರಾಟ ಮಾಡುತ್ತಿರುವುದನ್ನು ನೋಡಬಹುದು; ಬೀಡಿ ಸೇದುತ್ತ ಕಟ್ಟೆಯಮೇಲೆ ಕುಳಿತು ಪಟ್ಟಾಂಗ ಹೊಡೆಯುವ ಗಂಡಸರನ್ನೂ ನೋಡಬಹುದು. ಗಂಡಸರಂತೆ ವಿಶ್ರಾಂತಿ ಪಡೆಯುತ್ತಿರುವ ಮಹಿಳೆಯರು ಕಣ್ಣಿಗೆ ಬೀಳುವುದು ಕಡಿಮೆ.

ಹಿಮಾಲಯದ ಚಾರಣದಲ್ಲೂ ಹೊಲದಲ್ಲಿ ಕೆಲಸ ಮಾಡುವ ನೂರಾರು ಮಹಿಳೆಯರನ್ನು ಕಂಡಿರುವೆ; ನೆರೆಪೀಡಿತ ಹಳ್ಳಿಗಳಲ್ಲಿ ತಿರುಗಾಡುವಾಗಲೂ, ಬಿದ್ದ ಮನೆಯನ್ನು ಕಟ್ಟಿಕೊಳ್ಳುವಲ್ಲಿಯೂ ಮಹಿಳೆಯರ ತಳಮಳವೇ ಎದ್ದುಕಂಡಿದೆ ನನಗೆ. ಭಾರತದ ಬಹುದೊಡ್ಡ ಶ್ರಮಜೀವಿ ವರ್ಗವೆಂದರೆ ಕೆಳವರ್ಗದ ಮಹಿಳೆಯರೇ ಇರಬೇಕು.

ಬದುಕನ್ನು ಕಟ್ಟಿಕೊಳ್ಳಲು ಹೋರಾಡುವ ಈ ಗುಣವು ಮಹಿಳೆಯರಲ್ಲಿ ಜೈವಿಕವಾಗಿಯೇ ಇದೆಯೊ ಅಥವಾ ಇದು ನಿನ್ನ ಕೆಲಸ ಎಂಬ ಗಂಡಸರ ಸಾಮಾಜಿಕ ಧೋರಣೆಯಿಂದ ಈ ದಂದುಗಕ್ಕೆ ಒತ್ತರಿಸಲ್ಪಟ್ಟಿದ್ದಾರೊ? ಎರಡನೆಯದೇ ನಿಜವಿರಬೇಕು. ಇದಕ್ಕೆ ಪ್ರತಿಯಾಗಿ ಗಂಡಸರಿಂದ, ಬುರ್ಖಾ ತೊಡಿಸುವ, ಶಾಲೆಗೆ ಕಳಿಸದಿರುವ, ಸಮಾನ ಅವಕಾಶ ನಿರಾಕರಿಸುವ ನೂರಾರು ಅಡ್ಡಿಗಳು ಹೇರಲ್ಪಡುತ್ತಿವೆ. ಇಷ್ಟಾಗಿಯೂ ಮಹಿಳೆಯರು ತೋರುವ ಚೈತನ್ಯಶೀಲತೆ ದಂಗುಬಡಿಸುತ್ತದೆ. ಈಗೀಗ ಗ್ರಾಮೀಣ ಮಹಿಳೆಯರು ಪಂಚಾಯಿತಿ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರದ ವಲಯಕ್ಕೆ ಪ್ರವೇಶಿಸುತ್ತಿದ್ದಾರೆ. ಪರಿಸ್ಥಿತಿ ಬದಲಾಗುತ್ತಿದೆ. ಆದರೂ ಅವರನ್ನು ಘನತೆಯಿಂದ ನಡೆಸಿಕೊಳ್ಳುವ ಸಮಾಜವಿನ್ನೂ ಸೃಷ್ಟಿಯಾಗಿಲ್ಲ.

ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಪುರುಷರಲ್ಲಿ ವಿಸ್ಮಯ ಮತ್ತು ಅಸೂಯೆ ಎರಡೂ ಇದ್ದಂತಿವೆ. ಬಾನು ಚಾಲನೆ ಮಾಡುವ ಸ್ಕೂಟರಿನಲ್ಲಿ ಒಮ್ಮೊಮ್ಮೆ ನಾನು ಹಿಂದಿನ ಸೀಟಿನಲ್ಲಿ ಕುಳಿತು ಪೇಟೆಗೆ ಹೋಗುವುದುಂಟು. ಇದನ್ನು `ಹೀಗೂ ಉಂಟೆ?’ ಎಂಬಂತೆ ಕೆಲವರು ನೋಡುವರು. ಯಾಕೆ ಹೀಗಾಗಬಾರದು ಎಂದು ಕೆಲವರಾದರೂ ಭಾವಿಸುತ್ತಿರಬಹುದು ಎಂದು ಊಹಿಸುತ್ತೇನೆ. ಇದು ನಿಜಕ್ಕೂ ಸಣ್ಣವಿಚಾರ. ಆದರೆ ಜನರ ಆಲೋಚನಾ ಕ್ರಮದಲ್ಲಿ ಚಲನೆ ತಿರುವು ಕೊಡಬಹುದಾದ ವಿಚಾರ.

ಮಹಿಳೆಯರು ಜಿಲ್ಲಾ ಅಥವಾ ತಾಲೂಕು ಪಂಚಾಯಿತಿ ಸದಸ್ಯರೊ ಅಧ್ಯಕ್ಷರೊ ಆಗಿ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳಲು ಇನ್ನೂ ಸಾಧ್ಯವಾಗದೆ ಇರಬಹುದು. ಆದರೆ ಅವರು ಜಿಲ್ಲಾಧಿಕಾರಿ ಶಾಸಕ ಮಂತ್ರಿಗಳ ಜತೆ ಕೂರುವ ಚಿತ್ರಕ್ಕೆ ಹೊಸಸಂದೇಶ ಕೊಡುವ ಗುಣವಿದೆ.

ನಮ್ಮ ದೇಶದಲ್ಲಿ ಅನೇಕ ಮಹಿಳೆಯರು ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ನಿತ್ಯಜೀವನದಲ್ಲಿ ಅವರ ಕುರಿತ ಸಮಾಜದ ನಡವಳಿಕೆ ಪೂರ್ತಿ ಬದಲಾಗಿಲ್ಲ. ಸಣ್ಣಮಟ್ಟದಲ್ಲಿ ಚಲನೆ ಆರಂಭವಾಗಿದೆ. ಇದುವೇ ಪುರುಷವಾದಿ ಅಸಹನೆ ಪ್ರಕಟವಾಗುವುದಕ್ಕೂ ಕಾರಣವಾಗಿದೆ.

ಇಬ್ಬರು ಹೆಣ್ಣಮಕ್ಕಳ ತಂದೆಯಾದ ನಾನು ಮಕ್ಕಳಿಂದಲೂ ಜೀವನ ಸಂಗಾತಿ ಬಾನುವಿನಿಂದಲೂ ಎಷ್ಟೊಂದು ಕಲಿತಿದ್ದೇನೆ. ಇದನ್ನು ಕೃತಜ್ಞತೆಯಿಂದ ಏಕಾಂತದಲ್ಲಿ ಧೇನಿಸುತ್ತೇನೆ. ಸಾಮಾಜಿಕ ಗ್ರಹಿಕೆಗಳಿಂದಲೇ ಪುರುಷ ಮನೋಭಾವದಲ್ಲಿರುವ ಅಮಾನುಷ ಅಂಶಗಳನ್ನು ಕಳೆದು ಮಾನವೀಯಗೊಳಿಸಬಲ್ಲ ವಿಶಿಷ್ಟ ಶಕ್ತಿ ಮಹಿಳೆಯರಿಗಿದೆ. ಧೀಮಂತ ಸ್ವತಂತ್ರ ಮನೋವೃತ್ತಿಯ ಮಹಿಳೆಯರು ಎಂದರೆ, ಪುರುಷರ ಅವಲಂಬನೆ ಇಲ್ಲದೆಯೂ ಬಾಳನ್ನು ಕಟ್ಟಿಕೊಳ್ಳಬಲ್ಲವರು.

ಸಾಂಪ್ರದಾಯಿಕ ಕುಟುಂಬ ರಚನೆಯಲ್ಲೇ ಮಹಿಳೆಯರ ಸ್ವಾತಂತ್ರ್ಯ ಕಸಿಯುವ ಇಕ್ಕುಳ ಕತ್ತರಿಗಳಿವೆ. ಎಂತಲೇ ಕೆಲವು ಮಹಿಳೆಯರು ಈ ಸಂಸಾರವೇ ಬೇಡವೆಂದು ಹೊರನಡೆದು ಧೀಮಂತರಾಗಿರುವರು. ಹಾಗೆ ನಡೆದು ಅಪರಿಮಿತ ಸ್ವಾತಂತ್ರ್ಯ ಅನುಭವಿಸಿರುವರು.

ಆದರೆ ನಿತ್ಯ ಸಂಸಾರದ ಜಂಜಡಗಳಲ್ಲಿ ಇದ್ದೂ ಈಸುವವರು ನಿಜವಾದ ಧೀರರು. ಅವರು ಹೋರಾಟ ಮಾಡದೆಯೂ ಧೀಮಂತರಾಗಿ ಬಾಳುವಂತೆ ನಮ್ಮ ಸಾಂಪ್ರದಾಯಿಕ ಕುಟುಂಬ ಪರಿಕಲ್ಪನೆಯಲ್ಲೇ ಪಲ್ಲಟವಾಗಬೇಕು. ಈ ಪಲ್ಲಟದ ಒಂದು ಪರಿಯನ್ನು ನಾನು ಓದುವ ಸಾಹಿತ್ಯವೂ ಕಾಣಿಸುತ್ತದೆ. ನಾಗವೇಣಿ ಸುನಂದಾ ವೈದೇಹಿ ಅವರ ಕತೆಗಳನ್ನು, ವಿನಯಾ ಶರೀಫಾ ಸವಿತಾ ಲಲಿತಾ ಅವರ ಕವಿತೆಗಳನ್ನು ಅಥವಾ ವಿಜಯಮ್ಮ ಪ್ರತಿಭಾರ ಆತ್ಮಕತೆಗಳನ್ನು ಓದುವಾಗ `ಸಣ್ಣಪುಟ್ಟ’ ಸಂಗತಿಗಳಿಗೆ ಹೋರಾಟ ಮಾಡುವ ಮಹಿಳೆಯರ ಚಿತ್ರಗಳು ಸೆಳೆಯುತ್ತವೆ.

ನಮ್ಮ ಪರಿಸರದಲ್ಲಿರುವ ಕೆಲಸಗಾರ ಮಹಿಳೆಯರು ಬದುಕನ್ನು ಕಟ್ಟಿಕೊಳ್ಳುವುದು ಹಾಗೂ ನಮ್ಮ ಲೇಖಕಿಯರು ಬರೆಹಕ್ಕೆ ಬೇಕಾದ ತಮ್ಮದೇ ಆದ ಭಾಷೆ ಮತ್ತು ರೂಪಗಳನ್ನು ಹುಡುಕಿಕೊಳ್ಳುವುದು-ಎಂದೂ ನನಗೆ ಬೇರೆಯಾಗಿ ಕಂಡಿಲ್ಲ. ಈ ಮಾತು ಲೇಖಕಿಯರಿಗೆ ಮಾತ್ರ ಸಂಬಂಧಪಟ್ಟದ್ದಲ್ಲ; ಹತ್ತಿಕ್ಕಲ್ಪಟ್ಟ ಸಮುದಾಯಗಳಿಂದ ಅವುಗಳ ಪ್ರಜ್ಞಾವಂತ ಪ್ರತಿನಿಧಿಗಳಾಗಿ ಸಾರ್ವಜನಿಕ ಬದುಕಿಗೆ ಬರುವವರ ಮಾತು, ಕ್ರಿಯೆ, ಬರೆಹಗಳಿಗೂ ಸಂಬಂಧಿಸಿದ್ದು.

ಶೇಕ್ಸ್ ಪಿಯರ್ ಟಾಲ್‍ಸ್ಟಾಯ್ ಬರೆಹಗಳಿಗೆ ಸಾಧ್ಯವಾಗದ ಚಾರಿತ್ರಿಕ ಹೊಣೆಗಾರಿಕೆಗಳನ್ನು, ಬಸವಣ್ಣ ಕುವೆಂಪು ಅಚಿಬೆ ದೇವನೂರ ಕಮಲಾದಾಸ್ ಪ್ಯಾಲಸ್ತೈನ್ ಕವಿಗಳ ಸಾಹಿತ್ಯ ನಿಭಾಯಿಸಿದ್ದು ಹೀಗೇ ಇರಬೇಕು. ಲೋಕವನ್ನು ಬದಲಿಸಬೇಕು ಎಂಬ ವಾಂಛೆಯುಳ್ಳ ಎಲ್ಲ ಬರೆಹ ಮತ್ತು ಕ್ರಿಯೆಗಳು, ತಮ್ಮ ರೂಪ ಪರಿಕರಗಳಲ್ಲೂ ಬದಲಾವಣೆ ತಂದುಕೊಳ್ಳುತ್ತವೆ. ಬದಲಿಸುವ ಮತ್ತು ಬದಲಾವಣೆಯಾಗುವ ಎರಡೂ ಲೋಕಗಳು ಪರಸ್ಪರ ಅನುಸಂಧಾನದಲ್ಲಿ ಒಟ್ಟಿಗೆ ಬದಲುತ್ತಿರುತ್ತವೆ. ಸಮಾಜದ ಪರಿವರ್ತನೆ ಎನ್ನುವುದು ಬಸವಣ್ಣ ಹೇಳುವ ಭಕ್ತಿಯ ಗರಗಸದಂತೆ. ಬರುತ್ತಲೂ ಕೊಯ್ಯುವುದು; ಹೋಗುತ್ತಲೂ ಕೊಯ್ಯುವುದು. ಆದರೆ ಈ ಕೊಯಿತವೇ ತನ್ನ ತರ್ಕದ ತುದಿಯಲ್ಲಿ ನಾವೆಲ್ಲ ಕೂರುವ ಮರಮುಟ್ಟನ್ನು ಹುಟ್ಟಿಸುವುದು.

‍ಲೇಖಕರು Avadhi GK

17 February, 2018

1 Comment

  1. ರಾಜೀವ ನಾಯಕ

    ಸರ್ ಮನಮುಟ್ಟುವ ಬರಹ..ನಿಜ, ನೀವಂದಂತೆ ಮಹಿಳೆಯರ ನಿತ್ಯ ಸಂಸಾರದ ಜಂಜಡಗಳಲ್ಲಿ ಇದ್ದೂ ಈಸುವ ಗುಣವೇ ಸಮಾಜವನ್ನು ಪೊರೆಯುತ್ತಿದೆ. ವ್ಯಸನಿಗಳಾದ ಗಂಡಸರು ಸಂಸಾರವನ್ನು ನಿರ್ಲಕ್ಷಿಸಿದಾಗ ಅದನ್ನು ಸಂಭಾಳಿಸುವವರು ಮಹಿಳೆಯರೇ! ಇದನ್ನು ನಾನು ನಮ್ಮ ಅಂಕೋಲೆ ಕಡೆಯ ಕೆಲವು ಶ್ರಮಜೀವಿ ಹಾಲಕ್ಕಿ ಹೆಂಗಸರನ್ನು ಮತ್ತು ಮುಂಬೈನ ಕೇಳಾಮಾಂಶಿಗಳನ್ನೂ, ಘರರಗುಟಿ ಖಾನಾ ಮಾರುವ ಹೆಣ್ಣುಮಕ್ಕಳನ್ನೂ ನೋಡಿ ಅರಿತುಕೊಂಡಿದ್ದೇನೆ…
    “ಬದಲಿಸುವ ಮತ್ತು ಬದಲಾವಣೆಯಾಗುವ ಎರಡೂ ಲೋಕಗಳು ಪರಸ್ಪರ ಅನುಸಂಧಾನದಲ್ಲಿ ಒಟ್ಟಿಗೆ ಬದಲುತ್ತಿರುತ್ತವೆ” ನಿಮ್ಮ ಈ ಮಾತು ಇಷ್ಟವಾಯಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading