ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪರಾಕುಗಳಲ್ಲಿ ಕಳೆದುಹೋಗುತ್ತಿರುವ ಸಮಾನತಾವಾದಿ

ನಾ ದಿವಾಕರ


ಜನ್ಮ ದಿನಾಚರಣೆ, ಪುಣ್ಯತಿಥಿ, ವಾರ್ಷಿಕ ಸಂಸ್ಮರಣೆ ಮತ್ತು ಮೂರ್ತಿಪೂಜೆಯ ನೆಲೆಯಲ್ಲಿ ವ್ಯಕ್ತಿ ಕೇಂದ್ರಿತ ಆರಾಧನೆಯ ಸಂಸ್ಕೃತಿಯನ್ನು ಪೋಷಿಸುವಲ್ಲಿ ತನ್ನದೇ ಆದ ವಿಶಿಷ್ಟ ಸಂಪ್ರದಾಯ ಬೆಳೆಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಮತ್ತೊಬ್ಬ ಮಹಾನ್ ಪುರುಷನ 125ನೆಯ ಜನ್ಮ ದಿನಾಚರಣೆಯ ಪ್ರಕ್ರಿಯೆ ಚಾಲನೆ ಪಡೆಯುತ್ತಿದೆ. ತತ್ವ, ಸಿದ್ದಾಂತ ಮತ್ತು ಮೌಲ್ಯಗಳನ್ನು ವ್ಯಕ್ತಿತ್ವದ ಚೌಕಟ್ಟಿನಲ್ಲಿ ಬಂಧಿಸಿ , ಸಾರ್ವಜನಿಕ ವಲಯದಲ್ಲಿ ಈ ಸಂವೇದನಾಶೀಲ ವಿದ್ಯಮಾನಗಳಿಗಿಂತಲೂ ವ್ಯಕ್ತಿಗತ ವರ್ಚಸ್ಸನ್ನೇ ಪ್ರಧಾನವಾಗಿ ಬಿಂಬಿಸಿದಾಗ ಯಾವುದೇ ಮಹಾನ್ ವ್ಯಕ್ತಿ ಕೆಲವೇ ನಿದರ್ಿಷ್ಟ ಗುಂಪುಗಳ ಕೈಬಂಧಿಯಾಗಿಬಿಡುವುದು ಸಹಜ. ಭಾರತದಂತಹ ಜಾತಿಪೀಡಿತ, ಜಾತಿ ಪ್ರಜ್ಞೆಯ ಸಮಾಜದಲ್ಲಿ ಈ ಬೆಳವಣಿಗೆ ಇನ್ನೂ ಅಪಾಯಕಾರಿಯಾಗಿಬಿಡುತ್ತದೆ. ಹಾಗಾಗಿಯೇ ಇಲ್ಲಿ ಚಾರಿತ್ರಿಕ ವ್ಯಕ್ತಿಗಳ ಸುತ್ತ ವಿಭಿನ್ನ ರಂಗುಗಳ ಪ್ರಭಾವಳಿ ನಿರ್ಮಾಣವಾಗುತ್ತದೆ.
ಕೃತಕ ಧ್ವನಿ ಬೆಳಕುಗಳ ಅಬ್ಬರದಲ್ಲಿ ವ್ಯಕ್ತಿಯ ಸಹಜ ವ್ಯಕ್ತಿತ್ವ ಮಸುಕಾಗುತ್ತದೆ. ಈ ರಂಗುರಂಗಿನ ಪ್ರಭಾವಳಿಯ ಚೌಕಟ್ಟಿನಲ್ಲಿ ಚಾರಿತ್ರಿಕ ವ್ಯಕ್ತಿಯ ತತ್ವ ಸಿದ್ಧಾಂತಗಳು ಕ್ಥತಕ ಬೆಳಕಿನ ಕಿರಣಗಳಲ್ಲಿ ಸಮ್ಮಿಳಿತಗೊಂಡು ಮರೆಯಾಗುತ್ತವೆ. ಈ ಸನ್ನಿವೇಶದಲ್ಲಿ ಧುತ್ತೆಂದು ಎದುರಾಗುವ ಆರಾಧನಾ ಸಂಸ್ಕೃತಿ ಚಿರಂತನ ಜೀವಾತ್ಮವೊಂದನ್ನು ಶಿಲಾರೂಪದ ಜಡಾತ್ಮವನ್ನಾಗಿ ಪರಿವತರ್ಿಸುತ್ತದೆ. ಆರಾಧನೆಗೊಳಗಾಗುವ ಚಾರಿತ್ರಿಕ ವ್ಯಕ್ತಿ ದೂರದಲ್ಲೆಲ್ಲೋ ನಿಂತು ನೋಡುವ ಅಸಹಾಯಕ ದನಿಗಳಿಗೆ ಅತೀತ ಶಕ್ತಿಯಂತೆ ಕಾಣತೊಡಗುತ್ತಾನೆ. ಈ ಸನ್ನಿವೇಶವನ್ನು ಸೃಷ್ಟಿಸುವ ಕೆಲವೇ ಗುಂಪುಗಳಿಗೆ ಪ್ರತಿಮೆ ಮೇಲ್ ಚಲನೆಯ ಚಿಮ್ಮು ಹಲಗೆಯಾಗುತ್ತದೆ. ಶಿಲೆಯಲ್ಲವೀ ಕಲೆಯ ಬಲೆ ಎನ್ನುವಂತೆ ಒಂದು ಶಿಲಾ ಪ್ರತಿಮೆ ರಾಜಕೀಯ ಕಲೆಯ ಬಲೆಯಾಗಿ ಪರಿಣಮಿಸುತ್ತದೆ. ಹಾರ ತುರಾಯಿಗಳು, ಪರಾಕುಗಳು, ಆತ್ಮರತಿಯ ಭಜನಾ ಸಂಸ್ಕೃತಿ ಮತ್ತು ಪೌರೋಹಿತ್ಯದ ಕೈಂಕರ್ಯಗಳು ವ್ಯಕ್ತಿಯನ್ನು ಆಗಸದೆತ್ತರಕ್ಕೆ ಏರಿಸುತ್ತಲೇ ಚಾರಿತ್ರಿಕ ವ್ಯಕ್ತಿಯ ತತ್ವ, ಸಿದ್ದಾಂತಗಳನ್ನು ಪ್ರತಿಮೆಯ ಕಾಲಡಿಯಲ್ಲೇ ಸಮಾಧಿ ಮಾಡಿರುತ್ತವೆ. ಯಾರಿಗೂ ತಿಳಿಯದಂತೆ.
ಬಹುಶಃ ಡಾ. ಬಿ ಆರ್ ಅಂಬೇಡ್ಕರ್ ಇಂತಹ ಒಂದು ವಿಶಿಷ್ಟ ಸಂದರ್ಭದಲ್ಲಿ ಸಿಲುಕಿದ್ದಾರೆ ಎನಿಸುತ್ತಿದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿನಾಶಕ್ಕೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಒಂದು ಪರಿಹಾರವನ್ನು ಶೋಧಿಸುತ್ತಾ, ದಮನಿತ ಜನಸಮುದಾಯಗಳಿಗೆ ಕಾಯಕಲ್ಪ ಒದಗಿಸಿದ ಅಂಬೇಡ್ಕರ್ ಅವರ 125ನೆಯ ಜನ್ಮ ದಿನಾಚರಣೆಯ ಪ್ರಕ್ರಿಯೆಗೆ ಇಂದು ಚಾಲನೆ ದೊರೆಯಲಿದೆ. ತಮ್ಮ 125ನೆಯ ಜನ್ಮದಿನದ ಸಂದರ್ಭದಲ್ಲಿ ಭಾರತದ ತಳಸಮುದಾಯಗಳ, ಶೋಷಿತ ಜನತೆಯ, ದಮನಿತರ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸ್ತ್ರವಾಗಬೇಕಿದ್ದ ಅಂಬೇಡ್ಕರ್ ಇಂದು ಇದೇ ಅಮಾಯಕ ಜನತೆಯ ಅಸಹಾಯಕತೆಯನ್ನು ಬಳಸಿಕೊಂಡು ಶಿಖರದಂಚಿಗೆ ತಲುಪಿರುವ ಸ್ವಾರ್ಥ ರಾಜಕಾರಣಿಗಳ ರಾಜಕೀಯ ದಾಳವಾಗಿದ್ದಾರೆ. ಅಧಿಕಾರ ರಾಜಕಾರಣದ ಬತ್ತಳಿಕೆಯಾಗಿದ್ದಾರೆ. ಅಂಬೇಡ್ಕರ್ ಅವರ ನೂರನೆಯ ಜನ್ಮ ದಿನದ ಸಂದರ್ಭದಲ್ಲಿ ಅವರು ಬಯಸಿದ ಸಾಮಾಜಿಕ ಸೌಹಾರ್ದತೆ, ಭ್ರಾತೃತ್ವ ಮತ್ತು ಮಾನವೀಯ ಮೌಲ್ಯಗಳನ್ನು ಮಸೀದಿಯೊಂದರ ಧ್ವಂಸದ ಮೂಲಕ ಸಮಾಧಿ ಮಾಡಿದ ವಿಕೃತ ಮನಸ್ಸುಗಳೇ ಇಂದು ಅಂಬೇಡ್ಕರ್ ಧರ್ಮದ ನೆಲೆಯಲ್ಲಿ ಮತ್ತೊಂದು ಸಮಾಧಿಯನ್ನು ನಿರ್ಮಿಸುತ್ತಿದೆ. ಶೋಷಿತರ ದಾರಿ ದೀಪವಾಗಬೇಕಿದ್ದ ಅಂಬೇಡ್ಕರ್ ಅವರನ್ನು ಶೋಷಕರ ಮುನ್ನಡೆಯ ಮಾರ್ಗದಲ್ಲಿ ಪ್ರಖರ ಕಿರಣದಂತೆ ಬಳಸಿಕೊಳ್ಳಲಾಗುತ್ತಿದೆ.
ಸಾಮಾಜಿಕ ಸುಧಾರಣೆಗಾಗಿ, ಕ್ರಾಂತಿಕಾರಿ ಬದಲಾವಣೆಗಾಗಿ ಮತ್ತು ಸಮಾಜದ ದುಷ್ಟ ಶಕ್ತಿಗಳ ವಿನಾಶಕ್ಕಾಗಿ ತಮ್ಮ ಜೀವ ಮುಡಿಪಾಗಿಟ್ಟು ಅಂತ್ಯ ಕಾಣುವ ಮಹಾನ್ ವ್ಯಕ್ತಿಗಳನ್ನು ಮಂಟಪದೊಳಗೆ ಉತ್ಸವ ಮೂತರ್ಿಗಳಂತೆ ಪ್ರತಿಷ್ಠಾಪಿಸಿ, ಯಾವುದೋ ಒಂದು ಧರ್ಮ-ಜಾತಿ ಅಥವಾ ಸಮುದಾಯದ ಚೌಕಟ್ಟಿನೊಳಗೆ ಬಂಧಿಸಿಡುವ ಭಾರತೀಯ ಸಮಾಜದ ಪಾರಂಪರಿಕ ಸಂಸ್ಕೃತಿಗೆ ಬಲಿಯಾಗಿರುವವರ ಪೈಕಿ ಅಂಬೇಡ್ಕರ್ ಮೊದಲಿಗರು ಎನ್ನಲು ಅಡ್ಡಿಯಿಲ್ಲ. ಹಾಗಾಗಿಯೇ ಅಸ್ಪೃಶ್ಯರೊಬ್ಬರ ಸ್ಪರ್ಶದಿಂದ ಮೈಲಿಗೆಯಾದ ಪ್ರತಿಮೆಯೊಂದು ಸ್ವಚ್ಚ ಭಾರತ ಅಭಿಯಾನದ ಒಂದು ಭಾಗವಾಗಿ ಪರಿಣಮಿಸುವ ವಿದ್ಯಮಾನ ಸಾರ್ವಜನಿಕ ಚರ್ಚೆಗೊಳಗಾಗುತ್ತದೆ. ಆದರೆ ಇದೇ ಪ್ರತಿಮೆಯ ಆಂತರ್ಯದಲ್ಲಿರುವ ಮೌಲಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ತತ್ವಗಳನ್ನು ಗುಡಿಸಿಹಾಕುತ್ತಿರುವ ಸಂಗತಿ ನಮ್ಮ ಕಣ್ಣಿಗೆ ಗೋಚರಿಸುವುದೇ ಇಲ್ಲ. ಸಮಾನತೆಯನ್ನು ಪ್ರಭುತ್ವ ದಯಪಾಲಿಸುವ ಸವಲತ್ತುಗಳ ಚೌಕಟ್ಟಿನಲ್ಲೇ ಪರಾಮರ್ಶಿಸುವ ಪ್ರವೃತ್ತಿಯಿಂದ ಆಥರ್ಿಕ ಸಮಾನತೆಯೇ ಭಾರತೀಯ ಸಮಾಜದ ಜಾತಿ ಪ್ರಜ್ಞೆಯನ್ನು ಹೋಗಲಾಡಿಸುತ್ತದೆ ಎಂಬ ಭ್ರಮೆ ಸೃಷ್ಟಿಯಾಗಿದೆ. ಮತ್ತೊಂದೆಡೆ ಸಾಮುದಾಯಿಕ ಅಸ್ಮಿತೆಗಳನ್ನು ಕಳಚಿಹಾಕಿ ಹೊಸ ರೂಪ ಪಡೆದ ಕೂಡಲೇ ಶೋಷಣೆ ಅಂತ್ಯವಾಗುತ್ತದೆ ಎಂಬ ಭ್ರಮೆ ಆವರಿಸಿದೆ. ಹಾಗಾಗಿ ಸಾಮಾಜಿಕ ಸಮಾನತೆ ಮತ್ತು ಸಾಂಸ್ಕೃತಿಕ ಸೌಹಾರ್ದತೆ ಹದಗೆಡುತ್ತಿದ್ದರೂ ಗಮನಕ್ಕೆ ಬರುತ್ತಿಲ್ಲ. ದಮನಿತ ಜನಸಮುದಾಯಗಳಿಗೆ ಅಗತ್ಯವಾದ ಸಾಮಾಜಿಕ ಪರಿಸರವನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಾಲ್ಕು ದಶಕಗಳ ಹಿಂದೆ ನಡೆದಂತಹ ಪ್ರಯತ್ನಗಳು ಇಂದು ಗಾಂಧಿವಾದದ ಸುನಾಮಿಗೆ ಸಿಲುಕಿ ಅಂಬೇಡ್ಕರ್ ಮೌನ ಪ್ರವಾದಿಯಾಗಿ ಕಾಣುತ್ತಿದ್ದಾರೆ.
ದಲಿತ, ಶೋಷಿತ, ದಮನಿತ ಜನಸಮುದಾಯಗಳನ್ನು ಪ್ರಭುತ್ವದ ಸವಲತ್ತುಗಳ ಮೂಲಕ, ಸೌಕರ್ಯಗಳ ಮೂಲಕ ಮತ್ತು ಜೀವನಶೈಲಿಯನ್ನು ಉತ್ತಮಪಡಿಸುವ ಯೋಜನಾಬದ್ಧ ತುಣುಕುಗಳ ಮೂಲಕ ಸಂತೃಪ್ತಿಗೊಳಿಸಲು ಯತ್ನಿಸುತ್ತಿರುವ ಆಳುವ ವರ್ಗದ ಪ್ರತಿನಿಧಿಗಳಿಗೆ ಅಂಬೇಡ್ಕರ್ ಅಧಿಕಾರ ರಾಜಕಾರಣದ ಚಿಮ್ಮುಹಲಗೆಯಾಗಿ ಪರಿಣಮಿಸಿದ್ದಾರೆ. ಅಧಿಕಾರಸ್ಥರ ಈ ಹುನ್ನಾರವನ್ನು ಗ್ರಹಿಸುವ ಶಕ್ತಿ, ಬುದ್ಧಿಮತ್ತೆ ಇದ್ದೂ ಸಹ ತಮ್ಮ ಆತ್ಮಸಾಕ್ಷಿಯನ್ನು ಪಣಕ್ಕಿಟ್ಟು ಅಂಬೇಡ್ಕರ್ವಾದಿಗಳು ಆಳುವ ವರ್ಗದ ಒಂದು ಭಾಗವಾಗಿ ಹೋಗಿದ್ದಾರೆ. ದಲಿತ ಸಮುದಾಯದ ಬೇಕು ಬೇಡಗಳನ್ನು ತಳಮಟ್ಟದ ಜನಸ್ತೋಮದ ನೆಲೆಯಲ್ಲಿ ನಿಂತು ಪರಾಮರ್ಶಿಸುವ ವ್ಯವಧಾನವನ್ನೇ ದಲಿತ ಸಂಘಟನೆಗಳು ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿಯೇ ತಾವು ಆಕಸ್ಮಿಕವಾಗಿ, ತಮಗರಿವಿಲ್ಲದೆಯೇ ಜನಿಸಿದ ಹಿಂದೂ ಧರ್ಮದಲ್ಲಿದ್ದು ಸಾಯಲಾರೆ ಎಂದು ಘೋಷಿಸಿ ಬೌದ್ಧ ಧರ್ಮ ಸ್ವೀಕರಿಸಿದ ಅಂಬೇಡ್ಕರ್ ಇಂದು ಹಿಂದೂ ಪುನರುತ್ಥಾನ ಪ್ರಕ್ರಿಯೆಗೆ ಚೇತನಾ ಸ್ವರೂಪಿಯಾಗಿ ಬಳಸಲ್ಪಡುತ್ತಿದ್ದಾರೆ. ಈ ಅಪಾಯವನ್ನು ತಡೆಗಟ್ಟದೆ ಹೋದರೆ ಬಹುಶಃ ಅಂಬೇಡ್ಕರ್ ಒಬ್ಬ ಮಹಾನ್ ಸಮಾನತಾವಾದಿಯ ಸ್ಥಾನದಿಂದ ಪಲ್ಲಟಗೊಂಡು ಪ್ರವಾದಿಯಾಗಿ ಕಂಗೊಳಿಸುತ್ತಾರೆ.
ತಮ್ಮ ಒಂದು ಕೈಯ್ಯಲ್ಲಿ ಗ್ರಂಥವನ್ನು ಹಿಡಿದುಕೊಂಡು ಮತ್ತೊಂದು ಕೈಯ್ಯನ್ನು ದಿಗಂತದತ್ತ ತೋರುತ್ತಿರುವ ಅಂಬೇಡ್ಕರ್ ಪ್ರತಿಮೆಗಳನ್ನು ವಿಡಂಬನಾತ್ಮಕವಾಗಿ ಹಲವಾರು ಸಂದರ್ಭಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ಪ್ರತಿಮೆಯನ್ನು ಹೀಗೆ ಕಾಣಬಹುದು. ಭಾರತದ ಸಾಮಾಜಿಕ ಮೌಲ್ಯಗಳನ್ನು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಚಾರಿತ್ರಿಕ ನೆಲೆಯಲ್ಲಿ ಅಧ್ಯಯನ ಮಾಡಿ ತಮ್ಮ ಕೈಯ್ಯಲ್ಲಿ ಹಿಡಿದಿರುವ ಅಂಬೇಡ್ಕರ್ ತಮ್ಮ ಕೈಯ್ಯೊಳಗಿನ ಗ್ರಾಂಥಿಕ ಸಂಸ್ಕೃತಿಗಿಂತಲೂ ಭಿನ್ನವಾದ , ಒಂದು ಸಮಾನತಾ ನೆಲೆಯ, ಮಾನವೀಯ ಮೌಲ್ಯಗಳಿರುವ ತಾತ್ವಿಕ ಗ್ರಂಥ ಅದೋ ಅಲ್ಲಿ ದೂರದಲ್ಲಿ ಏಳು ಸುತ್ತಿನ ಕೋಟೆಯೊಳಗೆ ಹುಗಿದಿಟ್ಟಿದ್ದೇನೆ, ಕೋಟೆಯನ್ನು ಭೇಧಿಸಿ ಈ ಮೌಲ್ಯಗಳ ಮಾಪನ ಮಾಡಲು ಅತ್ತ ಮುನ್ನಡೆಯಿರಿ ಎಂದು ಅಂಬೇಡ್ಕರ್ ಹೇಳುತ್ತಿರುವಂತಿದೆ. ಈ ಕೂಗನ್ನು ಕೇಳಿಸಿಕೊಳ್ಳುವವರಾರು ? ಇದು ಮೂರ್ತ ಪ್ರಶ್ನೆ !

‍ಲೇಖಕರು G

15 April, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading