‘ಪಡ್ಡಾಯಿ’ ಕಟ್ಟಿದ ಕಥೆ- ಮೀನು ಸಂತೆಯಲ್ಲಿ ಸೇರಿಹೋದ ನಟರು

ಚಿಕ್ಕ ವಯಸ್ಸಿನಲ್ಲಿಯೇ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದವರು ಅಭಯ ಸಿಂಹ. ಇವರು ನಿರ್ದೇಶಿಸಿದ ಮೊದಲ ಚಲನಚಿತ್ರ ‘ಗುಬ್ಬಚ್ಚಿಗಳು’. ೨೦೦೮ ರಲ್ಲಿ ಆರಂಭವಾದ ಇವರ ಚಿತ್ರ ಪಯಣಕ್ಕೆ ಈಗ ದಶಕದ ವಸಂತ.

ಕಡಲ ಅಲೆಗಳ ಅಬ್ಬರವನ್ನು ಆಲಿಸುತ್ತಲೇ ಬೆಳೆದ ಹುಡುಗನಿಗೆ ಮನಸ್ಸು ಮತ್ತೆ ಮತ್ತೆ ಅತ್ತಲೇ ಎಳೆದದ್ದು ಆಕಸ್ಮಿಕವಲ್ಲ. ತಾನು ಬಾಲ್ಯದಿಂದಲೂ ಕಂಡ ಸಮುದ್ರ, ಮೀನುಗಾರರು, ದೋಣಿ, ಬಲೆ, ಹಡಗು ಎಲ್ಲವನ್ನೂ ಸೇರಿಸಿ ಕಟ್ಟಿದ ಚಿತ್ರವೇ ‘ಪಡ್ಡಾಯಿ’.

ತುಳು ಭಾಷೆಯ ಈ ಸಿನೆಮಾ ಕೇವಲ ಭಾಷೆಯ ಕಾರಣಕ್ಕಾಗಿ ಮಾತ್ರ ನೋಡುಗರನ್ನು ಕಾಡಲಿಲ್ಲ. ಬದಲಿಗೆ ಇದು ಯಶಸ್ವಿಯಾಗಿ ತುಳು ನೆಲದ ಸಂಸ್ಕೃತಿಯನ್ನು ಕಟ್ಟಿಕೊಟ್ಟ ಚಿತ್ರ. ಈ ಚಿತ್ರಕ್ಕೆ ಮತ್ತೆ ರಾಷ್ಟ್ರ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿತು.

 

ಅಭಯ ಸಿಂಹ ಹೇಗೆ ತಮ್ಮ ಸಿನೆಮಾವನ್ನು ಕಟ್ಟುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ. ಈ ಪ್ರಶ್ನೆಯನ್ನು ನಾವೂ ಕೇಳಬೇಕು ಎಂದುಕೊಂಡಿದ್ದಾಗಲೇ ಅಭಯ ಸಿಂಹ ‘ಅಕ್ಷರ ಪ್ರಕಾಶನ’ದ ಮೂಲಕ ‘ಪಡ್ಡಾಯಿ’ ಕಟ್ಟಿದ ಕಥೆಯ ಕೃತಿಯನ್ನು ಹಿಡಿದು ಬಂದರು.

ಕನ್ನಡದಲ್ಲಿ ಸಿನೆಮಾ ಕುರಿತ ಕೃತಿಗಳು ಬೆರಳೆಣಿಕೆಯಷ್ಟು. ಇಂತಹ ಸಂದರ್ಭದಲ್ಲಿ ಚಿತ್ರಕಥೆಯ ಸಮೇತ ಅಭಯ ಸಿಂಹ ಪಡ್ಡಾಯಿ ಕಟ್ಟಿದ ಕಥೆಯನ್ನು ಹೇಳಿದ್ದಾರೆ. ಓದಿ-

ಈ ಕೃತಿ ಕೊಳ್ಳುವ ಆಸಕ್ತಿ ಇದ್ದಲ್ಲಿ  ಇಲ್ಲಿ ಒತ್ತಿ 

। ನಿನ್ನೆಯಿಂದ ।

7

 

ಈ ಸಮಯದ ಸದುಪಯೋಗ ಪಡೆಯುತ್ತಾ, ನಮ್ಮ ಕಲಾವಿದರು, ಉಡುಪಿಯಲ್ಲಿ ಬೀಡುಬಿಟ್ಟು, ದಿನವೂ ಮಲ್ಪೆಯ ಬಂದರಿಗೆ ಹೋಗಲಾರಂಭಿಸಿದರು. ಅಲ್ಲಿನ ಮೀನುಗಾರರೊಂದಿಗೆ ಮಾತನಾಡುತ್ತಾ, ದೋಣಿಯಲ್ಲಿ ಆಗೊಮ್ಮೆ ಈಗೊಮ್ಮೆ ಅವರೊಂದಿಗೆ ಹೋಗುತ್ತಾ, ಮೀನು ಮಾರುವ ಹೆಂಗಸರೊಂದಿಗೆ ಹರಟೆ ಹೊಡೆಯುತ್ತಾ, ಅವರ ಜೀವನ ಶೈಲಿಯನ್ನು ತಮ್ಮದಾಗಿಸಿಕೊಳ್ಳಲಾರಂಭಿಸಿದರು. ನಟರೆಲ್ಲರೂ ತುಳು ಮಾತನಾಡುವವರೇ ಆಗಿದ್ದರೂ, ಮೊಗವೀರರ ತುಳುವಿನ ಧಾಟಿ, ಕೆಲವು ಪದಗಳ ಬಳಕೆ ಭಿನ್ನವಾಗಿರುತ್ತವೆ.

ನಮ್ಮ ರಂಗಪರಿಣತ ನಟ, ನಟಿಯರು ಅದನ್ನು ಸ್ವಂತವಾಗಿಸುತ್ತಾ ಸಾಗಿದರು. ಮಳೆ ಜೋರಾದ ಕೆಲವು ದಿನಗಳಲ್ಲಿ, ಎಲ್ಲ ಬಿಡಾರದಲ್ಲೆ ಕುಳಿತು, ಸಂಭಾಷಣೆಗಳನ್ನು ಗುಂಪಿನಲ್ಲಿ ಚರ್ಚಿಸುತ್ತಿದ್ದೆವು. ಪಾತ್ರ ಯಾಕೆ ಹೀಗೆ ಮಾತನಾಡುತ್ತಿದೆ? ಅದರ ಹಿನ್ನೆಲೆ ಏನು ಎಂದೆಲ್ಲ ಸಾಗಿದ ವಿಚಾರಗಳು ಮುಂದೆ ಕ್ಯಾಮರಾದ ಎದುರು ಚದರಿದಂತೆ ಬರುವ ಮಾತಿನ ತುಣುಕುಗಳಿಗೆ ಘನ ನೆಲೆಯನ್ನೆ ಕಲ್ಪಿಸಿದವು. ಕೆಲವು ದಿನ ರಾತ್ರಿ ಎರಡು ಗಂಟೆಯವರೆಗೂ ಚರ್ಚೆ ನಡೆದದ್ದಿತ್ತು. ಪಾತ್ರಧಾರಿಗಳು ನಿಧಾನಕ್ಕೆ ಪಾತ್ರಗಳೇ ಆಗಲಾರಂಭಿಸಿದರು.

ವಿಷ್ಣುಪ್ರಸಾದ್, ರಕ್ಷಿತ್, ಚಂಚಲಾ, ನಾನು ಹಾಗೂ ಪಾತ್ರಧಾರಿಗಳು ಕುಳಿತು ಪಾತ್ರೋಚಿತವಾದ ವಸ್ತ್ರವಿನ್ಯಾಸದ ಕುರಿತೂ ಚರ್ಚೆ ನಡೆಸಿದ್ದೆವು. ಪಾತ್ರಧಾರಿಗಳಲ್ಲಿ ಇರುವಂಥಾ ಬಟ್ಟೆ ಯಾವುದು? ಕೊಳ್ಳಬೇಕಾದದ್ದು ಯಾವುದು ಇತ್ಯಾದಿ ಪಟ್ಟಿ ಮಾಡುತ್ತಾ ಹೋದೆವು. ಅಗತ್ಯವಾಗಿದ್ದ ಕೆಲವು ಬಟ್ಟೆಯನ್ನು ಕೊಂಡು, ಕೂಡಲೇ ಬಳಸಲಾರಂಭಿಸಿದೆವು.

ಪಾತ್ರಧಾರಿಗಳು ಆ ಬಟ್ಟೆಯನ್ನು ಸಾಕಷ್ಟು ಸವೆಸಿ, ತಮ್ಮದಾಗಿಸಿಕೊಳ್ಳಬೇಕಿತ್ತು. ಹಾಗೆಯೇ, ಒಂದೊಂದೇ ಸಿದ್ಧತೆ ಇನ್ನೇನು ಮುಗಿಯುತ್ತಾ ಬಂತು ಎನ್ನುವಾಗ, ಹೊಸ ಸವಾಲು ಧುತ್ತನೆ ಎದ್ದು ನಿಲ್ಲುತ್ತಿತ್ತು. ಈ ಹೋರಾಟಕ್ಕೆ ಕೊನೆ ಇಲ್ಲ ಎಂದುಕೊಳ್ಳುತ್ತಿರುವಾಗಲೇ ಚಿತ್ರೀಕರಣದ ದಿನ ಬಂದೇ ಬಿಟ್ಟಿತು. ನಮ್ಮ ಮೂಲ ಯೋಜನೆಯಂತೆ ೨೫ ದಿನಗಳಲ್ಲಿ ನಾವು ಚಿತ್ರೀಕರಣವನ್ನು ಮುಗಿಸುವುದು ಎಂದು ನಿರ್ಧಾರವಾಗಿತ್ತು. ಆದರೆ ಮಳೆಯ ಜೊತೆಯಲ್ಲೆ ಚಿತ್ರೀಕರಿಸುವ ನಿರ್ಧಾರ, ದೃಶ್ಯದ ದೃಷ್ಟಿಯಿಂದ ಎಷ್ಟು ಮುಖ್ಯವಾಗಿತ್ತೋ, ನಿರ್ಮಾಣದ ದೃಷ್ಟಿಯಿಂದ ಅಷ್ಟೇ ದೊಡ್ಡ ಸವಾಲೂ ಆಗಿತ್ತು.

ನಮ್ಮ ಚಿತ್ರೀಕರಣದ ಪ್ರಥಮ ಹೆಜ್ಜೆ ತೊಡಗಿದ್ದು ಮಂಗಳೂರಿನ ಸಿಟಿ ಸೆಂಟರ್ ಮಾಲ್‌ನಲ್ಲಿ. ಚಿತ್ರೀಕರಣದ ಮೊದಲ ದಿನ ಸಾಮಾನ್ಯವಾಗಿ, ತಂಡಕ್ಕೆ ಪರಸ್ಪರ ಹೊಂದಿಕೊಳ್ಳುವ ಸಮಯವಾಗಿರುತ್ತದೆ. ಅಂದೂ ಹಾಗೇ ಆಯಿತು. ಕಲಾವಿದರು, ನಿಧಾನಕ್ಕೆ ತಮ್ಮ ಪಾತ್ರಗಳನ್ನು ಅನುಭವಿಸಲು ಆರಂಭಿಸಿದರು.

ವಿಷ್ಣು, ಕ್ಯಾಮರಾ ಹಾಗೂ ಬೆಳಕಿನ ತಂಡವನ್ನು ತಾನು ಗ್ರಹಿಸಿದ ಚಿತ್ರದ ದೃಶ್ಯ, ಧ್ವನಿಗೆ ಬೇಕಾದಂತೆ ದುಡಿಸಿಕೊಳ್ಳಲಾರಂಭಿಸಿದರು. ನನ್ನ ನಿರ್ದೇಶನ ತಂಡವೂ, ತನ್ನೊಳಗೆ ಒಂದು ಲಯವನ್ನು ಕಂಡುಕೊಳ್ಳಲಾರಂಭಿಸಿತು. ಮಧ್ಯಾಹ್ನಕ್ಕಾಗುವಾಗಲೇ ಇಡೀ ತಂಡ ಚುರುಕಾಗಿ, ತನ್ನ ಲಕ್ಷ್ಯದೆಡೆಗೆ ಹೊರಟಾಗಿತ್ತು.

ಎರಡೇ ದಿನಗಳಲ್ಲಿ ನಾವು ಮಂಗಳೂರು ಬಿಟ್ಟು ಉಡುಪಿ ಸೇರಿದೆವು. ಪಡುಕರೆಯ ಸುತ್ತಮುತ್ತಲು ಮೊದಲೇ ಗುರುತಿಸಿಕೊಂಡಿದ್ದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆವು. ಯೋಜನೆಯಂತೆ ದೃಶ್ಯಗಳನ್ನು ಒಂದೊಂದೇ ಸೆರೆ ಹಿಡಿಯುತ್ತ ಮುಂದುವರಿದೆವು.

ಭಾರತೀಯ ಚಿತ್ರರಂಗದಲ್ಲಿ ಸಾಂಪ್ರದಾಯಿಕವಾಗಿ ನಡೆದು ಬರುತ್ತಿರುವ ವಿಧಾನದಲ್ಲಿ, ಚಿತ್ರೀಕರಣದ ವೇಳೆ ದಾಖಲಿಸಿಕೊಂಡ ಸಂಭಾಷಣೆ ಇತ್ಯಾದಿ ಧ್ವನಿಗಳನ್ನು ಮತ್ತೆ ಡಬ್ಬಿಂಗ್ ಸ್ಟೂಡಿಯೋಗಳಲ್ಲಿ, ಸಂಕಲನದ ನಂತರ ಮರು ದಾಖಲೀಕರಿಸಿಕೊಳ್ಳಲಾಗುತ್ತದೆ. ಈ ವಿಧಾನದಲ್ಲಿ, ಕೆಲಸ ಚುರುಕಾಗುತ್ತದೆ ಹಾಗೂ ಅತ್ಯಂತ ಸ್ವಚ್ಛವಾಗಿರುತ್ತದೆ.

ಆದರೆ, ಈ ‘ಸ್ವಚ್ಛ’ ಎನ್ನುವ ಕಲ್ಪನೆ ವಾಸ್ತವಕ್ಕೆ ದೂರವಾದದ್ದು. ನಿಜ ಜೀವನದಲ್ಲಿ ಎಲ್ಲಾ ಧ್ವನಿಗಳೂ ಇತರ ಧ್ವನಿಗಳ ಮಿಶ್ರಣದೊಂದಿಗೇ ನಮಗೆ ಕೇಳಿಸುವುದು. ‘ಪಡ್ಡಾಯಿ’ಯಲ್ಲಿ ನಾವು ಈ ಸತ್ಯದ ದಾಖಲೀಕರಣಕ್ಕಾಗಿ, ಸಿಂಕ್ ಸೌಂಡ್ (ಸ್ಥಳದಲ್ಲೇ ಧ್ವನಿ ದಾಖಲೀಕರಣ) ತಂತ್ರವನ್ನೇ ಅನುಸರಿಸಿದೆವು. ಸಿಂಕ್ ಸೌಂಡಿನ ತರ್ಕ ಸರಳ – ಯಾವುದೇ ದೃಶ್ಯ ಪರಿಸರದ ಸಹಜ ಧ್ವನಿಗಳೊಂದಿಗೆ ಸೆರೆಹಿಡಿದರೆ ಮಾತ್ರ ಭಾವಚಿತ್ರ ಸಂಪೂರ್ಣ ಕಟ್ಟಿದಂತಾಗುತ್ತದೆ.

ಈ ತಂತ್ರಜ್ಞಾನ ಸ್ವಲ್ಪ ದುಬಾರಿ. ಇದಕ್ಕೆ ಮುಖ್ಯ ಕಾರಣ, ಚಿತ್ರೀಕರಣದ ವೇಳೆಯಲ್ಲಿ ಕ್ಯಾಮರಾ ನೋಟದ ಹೊರಗೆ ಇದ್ದರೂ, ಸ್ಪುಟವಾಗಿ ಮಾತುಗಳನ್ನು ಗ್ರಹಿಸುವಂಥಾ ಸಾಮರ್ಥ್ಯವಿರುವ ಮೈಕ್‌ಗಳು ಬೇಕಾಗುತ್ತವೆ. ಅದನ್ನು ದೊಡ್ಡ ಪರದೆಯ, ದೊಡ್ಡ ಸ್ಪೀಕರ್‌ಗಳಲ್ಲಿ ಕೇಳಿಸುವಂತೆ ಮಾಡುವಾಗ ಬಹಳ ಚೆನ್ನಾಗಿ ರೆಕಾರ್ಡ್ ಮಾಡಿಕೊಳ್ಳುವಂಥಾ ರೆಕಾರ್ಡರ್‌ಗಳು ತುಸು ದುಬಾರಿ ಬಾಡಿಗೆಯವು.

ಹಾಗೇ, ಈ ಪ್ರಕ್ರಿಯೆಗೆ ಕನಿಷ್ಟ ಇಬ್ಬರು ತಂತ್ರಜ್ಞರು ಚಿತ್ರೀಕರಣದ ವೇಳೆಯಲ್ಲಿ ಇರಬೇಕಾಗುತ್ತದೆ. ಇನ್ನು ಈ ವಿಧಾನ, ಚಿತ್ರೀಕರಣದ ವೇಗಕ್ಕೆ ಬಾಧಕವೂ ಹೌದು. ಚಿತ್ರೀಕರಣ ಶಾಟ್‌ಗಳನ್ನು ಪ್ರತ್ಯೇಕ ತುಣುಕುಗಳಾಗಿ ಚಿತ್ರೀಕರಿಸಿಕೊಂಡು ಜೋಡಿಸುವುದರಿಂದ, ಸಂಭಾಷಣೆ ಬಿಟ್ಟು ಉಳಿದ ಧ್ವನಿಗಳೆಲ್ಲವೂ ಪ್ರತಿ ಶಾಟ್‌ನಲ್ಲೂ ಒಂದೇ ರೀತಿ ಇರುವಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ.

ಉದಾಹರಣೆಗೆ, ಒಂದು ಶಾಟ್ ತೆಗೆಯುವಾಗ ಹಿನ್ನೆಲೆಯಲ್ಲಿ ಕಾಗೆ ಕೂಗುತ್ತಿದ್ದರೆ, ಸಂಕಲನದ ನಂತರ ಪಕ್ಕದಲ್ಲೆ ಬರುವ ಇನ್ನೊಂದು ಶಾಟ್‌ನಲ್ಲಿ ಆ ಕಾಗೆಯ ಧ್ವನಿ ಇಲ್ಲದಿದ್ದರೆ, ರಸಾಭಾಸವಾಗುತ್ತದೆ. ಆಗ, ಕಾಗೆ ಕೂಗುವುದನ್ನು ನಿಲ್ಲಿಸಿ ಚಿತ್ರೀಕರಿಸಬೇಕಾಗುತ್ತದೆ. ಹೀಗಾಗಿ, ಎಷ್ಟೋ ಬಾರಿ ನಮ್ಮ ನಿಯಂತ್ರಣದಲ್ಲಿ ಇಲ್ಲದ ಧ್ವನಿಗಳಿಗಾಗಿ ಚಿತ್ರೀಕರಣ ಹೊಂದಿಸಿಕೊಳ್ಳಬೇಕಾಗುತ್ತದೆ.

ನಾವು ಸಮುದ್ರಕ್ಕೆ ಸಾಕಷ್ಟು ಹತ್ತಿರದಲ್ಲೆ ಇಡೀ ಚಿತ್ರೀಕರಣ ನಡೆಸಿದ್ದರಿಂದ, ಅಲ್ಲಿ ಆಗೀಗ ಬರುವ ದೋಣಿಗಳ ಯಂತ್ರದ ಶಬ್ದ, ಸಾಕಷ್ಟು ದೂರದಿಂದಲೇ ಕೇಳಿಸಲಾರಂಭಿಸುತ್ತಿತ್ತು. ನಮ್ಮನ್ನು ಹಾದು ಹೋಗಿ ಸಾಕಷ್ಟು ಸಮಯದವರೆಗೂ ಆ ಧ್ವನಿ ಕೇಳಿಸುತ್ತಿರುತ್ತಿತ್ತು. ಆ ಧ್ವನಿ ಮುಗಿಯುವವರೆಗೂ ನಾವು ಕಾಯಲೇ ಬೇಕಾಗುತ್ತಿತ್ತು.

ಇದೆಲ್ಲದರ ಜೊತೆಗೆ, ನಮ್ಮ ಚಿತ್ರೀಕರಣದಿಂದಾಗಿಯೇ ಆಗುವ ಶಬ್ದಗಳ ನಿಯಂತ್ರಣವೂ ಅಗತ್ಯ. ಲೈಟಿಂಗಿಗೆ ಬಳಸುವ ಜನರೇಟರ್ ನಿಶಬ್ದವಾಗಿರಬೇಕು (ಇದು ಸಾಮಾನ್ಯ ಜನರೇಟರ್‌ಗಿಂತ ತುಸು ದುಬಾರಿ) ಚಿತ್ರೀಕರಣದ ವೇಳೆಯಲ್ಲಿ ನಮ್ಮದೇ ಮಾತುಕಥೆ ಸಂಪೂರ್ಣ ನಿಯಂತ್ರಣದಲ್ಲಿರಬೇಕು. ಇವೆಲ್ಲ ಸಾಕಷ್ಟು ಕಿರಿಕಿರಿ ಅನಿಸಿದರೂ, ಉತ್ತಮ ಧ್ವನಿ ರೆಕಾರ್ಡಿಂಗಿಗೆ, ಈ ತಾಳ್ಮೆ ಅಗತ್ಯ. ಜೇಮಿ ತಮ್ಮ ಅಸಿಸ್ಟೆಂಟ್ ಕಿಶೋರ್ ಜೊತೆಗೂಡಿಕೊಂಡು, ಧ್ವನಿ ದಾಖಲೀಕರಣವನ್ನು ಯಶಸ್ವಿಗೊಳಿಸಿದರು.

ಎಲ್ಲರೂ ಸಿನಿಮಾ ಪ್ರೀತಿಯಿಂದ ಮಾತ್ರವೇ ಕೆಲಸದಲ್ಲಿ ತೊಡಗಿಸಿಕೊಂಡಾಗ, ಅದರ ಸಂತೋಷವೇ ಬೇರೆ. ಇಲ್ಲಿ ಒಟ್ಟು ಕೃತಿಯ ಬಗ್ಗೆ ಇರುವ ಒಲವಿನಿಂದಾಗಿ ಆಯಾ ದಿನಗಳ ಕಷ್ಟಗಳು ಅರಿವಿಗೇ ಬರುವುದಿಲ್ಲ. ದೃಶ್ಯವೊಂದಕ್ಕೆ ಪ್ರಭಾಕರ್ ಕಾಪಿಕಾಡ್ ಸೈಕಲ್ಲಿನಿಂದ ಬೀಳಬೇಕಿತ್ತು. ಅದಕ್ಕೆ ಕಾರಣವಾಗಿ ಶ್ರೀನಿಧಿ ಓಡಿ ಬಂದು ಸೈಕಲ್ಲಿಗೆ ಡಿಕ್ಕಿ ಹೊಡೆಯಬೇಕಿತ್ತು.

ಮೊದಲ ಒಂದೆರಡು ಪ್ರಯತ್ನದಲ್ಲಿ ಇದರ ತಾಳಮೇಳ ಹೊಂದಲೇ ಇಲ್ಲ. ಶ್ರೀನಿಧಿ ಅಂದಾಜು ತಪ್ಪಿ ಬಿದ್ದು ತರಚಿಕೊಂಡದ್ದು, ಪ್ರಭಾಕರ್ ಬೀಳಿನ ಸಹಜತೆಗೆ ಒಡ್ಡಿಕೊಂಡು ನಿಜಕ್ಕೂ ರಕ್ತ ಹರಿಸಿದ್ದು, ಕೊನೆಯಲ್ಲಿ ಇಬ್ಬರೂ ಅದನ್ನು ಸಂಭ್ರಮಿಸಿದ್ದು, ಇಂದು ಮಧುರವಾಗಿ ನೆನಪಾಗುತ್ತದೆ. ಅವರ ಅರ್ಪಣಾ ಭಾವ ಮನಸ್ಸನ್ನು ತುಂಬುತ್ತದೆ.

ಕಥೆಯಲ್ಲಿ ಬರುವ ಇನ್ನೊಂದು ಮಹತ್ತರ ದೃಶ್ಯ, ಡಂಕನ್ ದೊರೆಯ ಕೊಲೆಗೆ ಮೊದಲು ಆಗುವ ಅದ್ಧೂರಿ ಔತಣದ್ದು. ಇದನ್ನು ನಮ್ಮ ಅಳವಡಿಕೆಯಲ್ಲಿ ಮಾಧವ ಹಾಗೂ ಸುಗಂಧಿ ಮಾಡಿ ಬಡಿಸುವ ಏಡಿಯ ಬಿಸಿ ಬಿಸಿ ಸಾರಿನ ಊಟ ಹಾಗೂ ಕಳ್ಳಿನದ್ದೇ (ಸ್ಥಳೀಯ ಹೆಂಡ) ಸಮಾರಾಧನೆ ಎಂದು ನಿಶ್ಚಯಿಸಿಕೊಂಡಿದ್ದೆವು.

ದಿನವೂ ಮಲ್ಪೆಯ ಮಾರುಕಟ್ಟೆಯಲ್ಲಿ ಏಡಿ ಮಾರಾಟಕ್ಕಿರುವುದು ನೋಡಿದ್ದೆವು. ಹೀಗಾಗಿ ಏಡಿಯನ್ನು ತಂದು ಚಿತ್ರೀಕರಣದ ಸ್ಥಳಕ್ಕೆ ಸಮೀಪದಲ್ಲೇ ಇದ್ದ ರಂಜಿತ್ ಮನೆಯಲ್ಲಿ ಅಡುಗೆ ಮಾಡಿಸಿಕೊಳ್ಳುವುದಾಗಿ ಮಾತನಾಡಿಕೊಂಡಿದ್ದೆವು. ಆದರೆ ನಮ್ಮ ದುರಾದೃಷ್ಟಕ್ಕೆ ಚಿತ್ರೀಕರಣ ನಿಗದಿಯಾದ ದಿನದಂದು ಸಮುದ್ರವೇಕೋ ಮುನಿಸಿಕೊಂಡು ಮೀನುಗಾರಿಕೆ ಚೆನ್ನಾಗಿ ಆಗಿರಲಿಲ್ಲ. ಅಂದು ಮಾರುಕಟ್ಟೆಯಲ್ಲಿ ನಮಗೆ ಏಡಿಗಳು ಸಿಗಲೇ ಇಲ್ಲ!

ಮಲ್ಪೆ, ಉಡುಪಿಯಲ್ಲಿ ಹೋಟೆಲುಗಳನ್ನು ಜಾಲಾಡಿದ ಮೇಲೆ ಒಂದು ಕಡೆ ಭರ್ಜರಿ ಏಡಿ ಸಿಕ್ಕಿತು. ಆದರೆ ತೀರಾ ದುಬಾರಿ. ಆದರೇನು ಮಾಡುವುದು? ಚಿತ್ರೀಕರಣ ನಿಲ್ಲಿಸಲಾಗುವುದಿಲ್ಲ ಎಂದು ದುಬಾರಿ ಕ್ರಯ ಕೊಟ್ಟೆ ಕೊಂಡುಕೊಂಡೆವು. ಅಬ್ಬಾ ಬಚಾವ್ ಎಂದುಕೊಂಡು ಚಿತ್ರೀಕರಣ ಆರಂಭಿಸಿದೆವು. ಆದರೆ ನಮ್ಮ ಕಷ್ಟ ಅಲ್ಲಿಗೆ ಮುಗಿದಿರಲಿಲ್ಲ. ಚಿತ್ರೀಕರಣ ಇನ್ನೇನು ಆರಂಭಿಸಬೇಕು ಎನ್ನುವಷ್ಟರಲ್ಲಿ, ಭೀಕರವಾಗಿ ಮಿಂಚಲಾರಂಭಿಸಿತು.

ನಮ್ಮ ಲೈಟಿಂಗ್ ತಂಡಕ್ಕೆ, ಜನರೇಟರ್ ಬಗ್ಗೆ ಹೆದರಿಕೆ ಆರಂಭವಾಯಿತು. ಅಂದು ಚಿತ್ರೀಕರಣ ಮಾಡುವುದು, ತಂಡಕ್ಕೆ ಅಪಾಯಕಾರಿಯಾಗುವ ಸಾಧ್ಯತೆಯಿತ್ತು. ಹೀಗಾಗಿ, ನಮ್ಮ ಚಿತ್ರೀಕರಣವನ್ನು ಮುಂದಿನ ದಿನಕ್ಕೆ ನೂಕಬೇಕಾಯಿತು. ಆದರೆ, ಭಾರೀ ಕ್ರಯಕೊಟ್ಟ ಏಡಿ ಕಳೆದುಕೊಳ್ಳಲು ನಾವ್ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ಅದನ್ನು ಫ್ರಿಡ್ಜ್‍ನಲ್ಲಿ ಇಟ್ಟು ಮರುದಿನಕ್ಕೆ ಕಾಯ್ದಿರಿಸಿದೆವು.

ಮರುದಿನ ನಟರು ನೀರು ಮಿಶ್ರಮಾಡಿದ ಮಜ್ಜಿಗೆಯನ್ನು ಕಳಿಯೆಂದು ಕುಡಿದು ಮತ್ತೇರಿಸಿಕೊಂಡರು. ಹಳಸಿದ ಏಡಿಯ ಸಾರನ್ನು ಪರಮಾನ್ನವೆಂದೂ ತಿಂದು, ಅದ್ಭುತವೆಂದು ತಲೆಯಾಡಿಸಿದರು, ನಟಿಸಿದರು. ಕ್ಯಾಮರಾ ಆಫ್ ಆಗುತ್ತಿದ್ದಂತೆ ಎಲ್ಲವನ್ನೂ ಉಗಿದು, ಎಲ್ಲರೂ “ಕ್ರಯಕೊಟ್ಟು ಕೊಂಡರೂ, ಹೊಟ್ಟೆ ಸೇರಲಿಲ್ಲವಲ್ಲಾ” ಎಂದು ನಗುತ್ತಲೇ ಮರುಗಿದೆವು.

 

 

। ಇನ್ನು ಉಳಿದದ್ದು ನಾಳೆಗೆ ।

ಹಾಗೆಯೇ, ಅಮೆಜಾನ್ ಪ್ರೈಮ್ ನಲ್ಲಿ ಪಡ್ಡಾಯಿ ಸಿನಿಮಾ ಇದೆ.

Link to audience in UK:
https://amzn.to/2MtHFw5

Link to audience in USA:
https://amzn.to/2MtHukp

Link to audience in India:
https://bit.ly/2KLzUzB

‍ಲೇಖಕರು avadhi

October 10, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಗ್ರಾಮೀಣ ಮಹಿಳೆಯ ಗಟ್ಟಿ ಕಥನ- ಕೋಳಿ ಎಸ್ರು

ಗ್ರಾಮೀಣ ಮಹಿಳೆಯ ಗಟ್ಟಿ ಕಥನ- ಕೋಳಿ ಎಸ್ರು

ಮ ಶ್ರೀ ಮುರಳಿ ಕೃಷ್ಣ ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆಹಾರದ ಸುತ್ತ ಕ್ಷುದ್ರ ರಾಜಕೀಯವನ್ನು ಸೃಷ್ಟಿಸಿರುವುದು ನಮಗೆ ತಿಳಿದ ಸಂಗತಿಯೇ...

೧ ಪ್ರತಿಕ್ರಿಯೆ

  1. Kumar vantamure

    ಚಿತ್ರಿಕರಣದ ವಿವರಣೆ ಓದುತ್ತ ನಾವು ಚಿತ್ತಿಕರಣದಲ್ಲಿ ಭಾಗಿ ಯಾದ ಅನುಭವವಾಗುತ್ತಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This