ಜಯಶ್ರೀ ಕಾಸರವಳ್ಳಿ
ಯಾವುದೇ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುವಾಗ, ಆಯೋಜಕರ ಉದ್ದೇಶ ಮತ್ತು ನಿರೀಕ್ಷೆಗಳೇನೇ ಇರಲಿ, ಪರಸ್ಪರ ಕೊಟ್ಟು ಕೊಳ್ಳುವಿಕೆಯ ಸಾಹಿತ್ಯಿಕ ವಿನಿಮಯದಲ್ಲಿ ಬರಹಗಾರರಿಗೆ ಒಂದಷ್ಟು ಉಪಯೋಗವಾಗುವುದಂತೂ ನಿಜ. ಹಲವು ಬೌಗೋಳಿಕ ವೈವಿಧ್ಯತೆಯುಳ್ಳ, ಭಾರತೀಯ ವಿಭಿನ್ನ ಪ್ರಾದೇಶಿಕ ಭಾಷಾ ಸಂಸ್ಕೃತಿಯಲ್ಲಿ, ತನ್ನ ಸೀಮಿತ ವಲಯದಲ್ಲಷ್ಟೇ ಪ್ರಚಲಿತದಲ್ಲಿರುವ ಅಲ್ಲಿನ ನೆಲದ ಅತ್ತುತ್ತಮ ಸಾಹಿತ್ಯಕ್ಕೆ, ತನ್ನ ಗಡಿ ಮೀರಿ, ಪರಧಿಯಾಚೆ ಪಸರಿಸುವುದಕ್ಕೆ, ಹಲವು ಭಾಷಾ ಸಾಹಿತಿಗಳನ್ನು ಒಂದು ಕಡೆ ಒಗ್ಗೂಡಿಸುವುದರ ಮೂಲಕವೇ, ಪ್ರತಿ ಸಾಹಿತಿಗೂ ಅವಶ್ಯವಿರುವ ಸೀಮೋಲಂಘನೆಯ ಮಾರ್ಗವನ್ನು ಒದಗಿಸುವುದಲ್ಲದೇ, ಒಂದು ಹೊಸ ಬುನಾದಿಯನ್ನೂ ನಿರ್ಮಿಸಿಕೊಡುತ್ತದೆ.
ಕೇರಳದ ಚೆಂಗನೂರಿನಲ್ಲಿ ನಡೆದ ಮೂರು ದಿನಗಳ South India Writer’s Ensemble, ಹಲವು ಬರಹಗಾರರಿಗೆ ಆ ರೀತಿಯಲ್ಲಿ ನಿರ್ಮಾಣಗೊಂಡ ಒಂದು ವೇದಿಕೆಯೇ ಸರಿ. ಪ್ರಾದೇಶಿಕ ಭಾರತದ ವಿಭಿನ್ನ ಭಾಷಾ ಸಂಸ್ಕೃತಿ, ಸದ್ಯದ ಭಾರತದ ಸನ್ನಿವೇಶ, ಪ್ರಸ್ತುತ ಸಾಹಿತ್ಯಿಕ ಸ್ಥಿತಿ, ಜ್ವಲಂತ ಸಮಸ್ಯೆಗಳು, ಬರಹಗಾರನ ಸವಾಲುಗಳು, ಬರಹಗಾರನ ಇತಿಮಿತಿ, ಗದ್ದಲದ ಪ್ರಪಂಚದಲ್ಲಿ ಬರಹಗಾರನ ಅಸ್ಮಿತೆ, ನಶಿಸಿಹೋಗುತ್ತಿರುವ ಕಲ್ಪನಾ ಲೋಕದಲ್ಲಿ ಕ್ಷೀಣಿಸುತ್ತಿರುವ ಸೃಜನಶೀಲತೆ, ಮುಕ್ತ ಅಭಿವ್ಯಕ್ತಿಯಲ್ಲಿ ಸೊರಗುತ್ತಿರುವ ಉನ್ನತ ಸಾಹಿತ್ಯ, ವಿಮಶರ್ೆಯ ಮಾನದಂಡನೆಯ ಪುನರ್ಪರಿಶೀಲನೆಯ ಅವಶ್ಯಕತೆ, ಸಾಹಿತ್ಯದ ಒಳ-ಹೊರಗಿನ ಅಭಿವ್ಯಕ್ತಿ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯಹರಣ, ನಿರರ್ಥಕತೆಯಿಂದ ಅರ್ಥಪೂರ್ಣದೆಡೆಗಿನ ಕಾವ್ಯಯಾನ, ಜಾಗತಿಕ ಮಾರುಕಟ್ಟೆಯ ಹೊಸ ಸವಾಲುಗಳಲ್ಲಿ ನಲುಗುತ್ತಿರುವ ಕಲಾಪ್ರಪಂಚ, ಇಂತಹ ಅನೇಕ ಪ್ರಸ್ತುತ ವಿಷಯಗಳ ಮೇಲೆ ಹಲವು Panel Discussions ಮತ್ತು ಚರ್ಚೆಗಳು ನಡೆದವು.

ಮೂರು ವರುಷದಿಂದ ಇಂತಹ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ‘Pampa’ (people for performing arts and more..) ಅವರು ಈ ವರುಷ ವಿಶೇಷವಾಗಿ ಚರ್ಚೆಗೆ ಆಯ್ದುಕೊಂಡ ವಿಷಯ, ‘North – Eastern Literature’ – ಅಸ್ಸಾಂ, ತ್ರಿಪುರಾ, ಮೇಘಾಲಯಾ, ಮಣಿಪುರ್, ಮಿಜೋರಾಮ್, ನಾಗಾಲ್ಯಾಂಡ್ ರಾಜ್ಯಗಳು, ಭಾರತದ ಮುಖ್ಯ ವಾಹಿನಿಯಿಂದ ದೂರವಿರುವ ಈ ಈಶ್ಯಾನ್ಯ ಪ್ರದೇಶಗಳಲ್ಲಿನ ಸಮೃದ್ಧ ಸಾಹಿತ್ಯದ ಕಿರು ಪರಿಚಯ, ಅಲ್ಲಿನ ಕಲೆ, ಸಂಸ್ಕೃತಿ, ಗಡಿ ಭಾಗದ ಬೌಗೋಳಿಕ ಸಮಸ್ಯೆ, ಭಯೋತ್ವಾದಕರ ಹಾವಳಿಗಳೆಂದು ಹತ್ತು ಹಲವು ವಿಷಯಗಳು ಮುಂಚೂಣಿಗೆ ಬಂದು, ಚರ್ಚೆಗೆ ಗ್ರಾಸವಾದದ್ದು ವಿಶೇಷ. ‘ನಾನು ಮಲಾಲಾ’ ಪುಸ್ತಕದಲ್ಲಿ ಚರ್ಚಿತವಾದಂತಹ ಅದೆಷ್ಟೋ ಸಂಗತಿಗಳಂತಹದ್ದೇ ನಮ್ಮ ದೇಶದ ಗಡಿ ಭಾಗಗಳಲ್ಲೂ ಸಂಭವಿಸುತ್ತಿದ್ದು, ಅದರ ಕಾಲು ಭಾಗದ ವಿವರ ಕೂಡ ಭಾರತದ ಮತ್ತುಳಿದ ಪ್ರಾಂತ್ಯದವರಿಗೆ ತಲುಪಲಾಗದ ವಿಷಾದವೂ ಅಲ್ಲಿತ್ತು. ಅವರೆಲ್ಲರ ಹೋರಾಟದ ನೋವು ಒಂದು ಪ್ರತ್ಯೇಕ ಕೂಗಾಗಿ ಹಾಗೇ ದೂರದಲ್ಲಿ ಉಳಿದು ಕ್ಷೀಣಿಸಿಬಿಡಬಹುದಾದ ಅಪಾಯ ಹುಟ್ಟಿಸುವ ವಾಸ್ತವದ ಅರಿವೂ ಆ ಚರ್ಚೆಯಲ್ಲಿ ಮೊಳಗಿತು.
ಜೊತೆಗೆ ದಕ್ಷಿಣ ಭಾರತದಿಂದ ಮಲೆಯಾಳಂ, ಕನ್ನಡ, ತಮಿಳು, ತೆಲುಗು ಸಾಹಿತಿಗಳೊಂದಿಗೂ, ಹಿಂದಿ, ಮರಾಠಿ ಭಾಷಾ ಸಾಹಿತಿಗಳೊಡನೆಯೂ ಒಂದಷ್ಟು ಓಡಾಟ, ಒಡನಾಟ, ಪರಸ್ಪರರೊಡನೆ ಹಲವಾರು ವಿಷಯಗಳ ಚರ್ಚೆ, ವಿನಿಯೋಗಗಳೂ ಇದ್ದವು. ಕಾವ್ಯಾತ್ಮಕ ಗುಣಗಳನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ಕಾವ್ಯ ರಚನೆಗಳೂ, ಕತೆ ಕಟ್ಟುವಿಕೆಯ ಕಲೆಗಾರಿಕೆಯಲ್ಲಿ ಸೂಕ್ಮ ಒಳ ನೇಯ್ಕೆಗಳೂ, ಸೂಚ್ಯ ಧ್ವನಿಗಳೂ ನಶಿಶಿ, ವಾಚ್ಯವಾಗುತ್ತಿರುವ ಕತಾ ಹಂದರಗಳ ಬಗ್ಗೆಯೂ ನಮ್ಮ ನಮ್ಮಲ್ಲಿ ಮುಕ್ತ ಸಂವಾದಗಳಿದ್ದವು. ಬಹಳ ಹುರುಪಿನಿಂದ ಓಡಿಯಾಡುತ್ತಿದ್ದ ಆಧುನಿಕೋತ್ತರ ಭಾರತದ ಎಳೇ ಇಂಗ್ಲೀಷ್ ಬರಹಗಾರರ ಗುಂಪೂ ಅಲ್ಲಿತ್ತು. ಕಾರ್ಯಕ್ರಮದ ನಂತರ ಮತ್ತೊಮ್ಮೆ ಪ್ರತ್ಯೇಕವಾಗಿ ಅಲ್ಲಿಗೆ ಆಗಮಿಸಿದ್ದ ಈಶಾನ್ಯ ಪ್ರದೇಶದ ಬರಹಗಾರನನ್ನು ಭೇಟಿ ಮಾಡಲಾಗದ್ದು ಮಾತ್ರ ಒಂದು ದೊಡ್ಡ ಬೇಜಾರು. ಒಂದಿಬ್ಬರನ್ನು ಬಿಟ್ಟರೆ ಅವರು ನನ್ನ ಪೋಟೋಗಳಿಗೂ ಸಿಗಲಿಲ್ಲ.
ಪ್ರತೀ ಆಹ್ವಾನಿತರಿಗೂ ಉಳಿದುಕೊಳ್ಳಲಿಕ್ಕಾಗಿ ಏರ್ಪಡಿಸಿದ್ದ ಸುಸಜ್ಜಿತ ಆರ್ಯವೇದ ಶಾಲಾ ಕೊಠಡಿಗಳದ್ದವಲ್ಲದೇ, ವೈಯಕ್ತಿಕವಾಗಿ ಪ್ರತಿಯೊಬ್ಬರನ್ನೂ ಮುತುರ್ವಜಿ ವಹಿಸಿ ವಿಶೇಷ ಕಾಳಜಿಯಿಂದ ವಿಚಾರಿಸಿಕೊಳ್ಳುತ್ತಿದ್ದರು. ರುಚಿಕಟ್ಟಾದ ಸ್ವಾಧಿಷ್ಟ ಕೇರಳದ ತರಹಾವಾರಿ ಊಟ-ಉಪಚಾರಗಳೂ, ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳೂ ಸಮ್ಮೇಳನದಲ್ಲಿ ಸದಾ ನೆನಪಿನಲ್ಲಿ ಉಳಿಯುವಂತಹ ವಿಷಯ. ಸ್ವಯಂ ಕಾರ್ಯಕರ್ತೆ ತುಳಸಿ ವೇಣುಗೋಪಾಲ್ ಮತ್ತು ಸಂಚಾಲಕಿ ಹಾ.ಮ.ಕನಕ ಹೆಜ್ಜೆ ಹೆಜ್ಜೆಗೂ ಅಷ್ಟೆಲ್ಲಾ ಜವಾಬ್ದಾರಿಗಳ ನಡುವೆಯೂ ನಮ್ಮನ್ನು ವಿಚಾರಿಸಿಕೊಳ್ಳುತ್ತಿದ್ದದ್ದು ಹೃದಯಸ್ವರ್ಶಿಯಾಗಿತ್ತು.
ಹಾ.ಮ.ಕನಕ ಮತ್ತು ಅವರ ಪತಿ ಸಚಿವ ಪಿ.ಸಿ. ವಿಷ್ಣುನಾಥ್ ಅವರಿಗೆ ನನ್ನ ಅಭಿನಂದನೆಗಳು. ಇಂತಹ ಇನ್ನೂ ಅನೇಕ ಮೌಲ್ಯಾಧಾರಿತ ಕಾರ್ಯಕ್ರಮಗಳು ಅವರಿಂದ ನಡೆಯುವಂತಾಗಲಿ ಎಂದು ಆಶಿಸೋಣ.. :
ಪಂಪಾ ತೀರದಲ್ಲಿ ತೆಗೆದ ಕೆಲವು ಚಿತ್ರಗಳು






ಅತ್ಯುತ್ತಮ ಪ್ರಯತ್ನ ಹಾಗೂ ಸುಲಲಿತ ಬರಹ ಜಯಶ್ರೀ ಮೇಡಂ. ನಮಗೆ ಪರಿಚಯಿಸಿದ್ದಕ್ಕೆ ವಂದನೆಗಳು. ಹಿಂದೊಮ್ಮೆ ಕೌನ ಬನೇಗಾ ಕರೋಡಪತಿ ಯಲ್ಲಿ ಈಶಾನ್ಯದ ಅಭ್ಯರ್ಥಿ ಹೇಳಿದ ಮಾತು,’ ಜಾನತೇ ಸಬ್ , ಮಾನತೇ ಕಿತನೇ’ ನಮ್ಮನ್ನೆಲ್ಲಾ ಅಲ್ಲಾಡಿಸಿತ್ತಲ್ಲವೇ? ಎಂದೋ ಆಗಬೇಕಾದ ಕೆಲಸವನ್ನು ಸಾರ್ಥಕವಾಗಿ ಶ್ರಮವಹಿಸಿ ಮಾಡುತ್ತಿರುವ ಹಾ ಮ ಕನಕ, ಹಾಗು ಪಿ ಸಿ ವಿಶ್ವನಾಧ ಅವರಿಗೂ ಅಭಿನಂದನೆಗಳು. ಹೀಗೆ ನಿರಂತರ ಮುಂದುವರೆಯಲಿ…
Interesting write up and lovely pics!