ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ವೇದಿಕೆ’ ಕಾರ್ಯಕ್ರಮದಡಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಇದರಲ್ಲಿ ಯುವ ವಿದ್ವಾಂಸರಾದ ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ ಇವರು ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನೀಡಿದರು. ಪಂಪನ ಪಾತ್ರ ಚಿತ್ರಣದ ಸೂಕ್ಷ್ಮತೆ, ಕರ್ಣನ ಪಾತ್ರಕ್ಕೆ ಜೀವ ತುಂಬುವ ವಿಶಿಷ್ಟ ಗುಣ ಇವುಗಳನ್ನು ಮಾತಾಡಿದ ಡಾ. ಜಾಜಿ ಅವರು ಪಂಪನ ಕಾವ್ಯವು ಕಾವ್ಯಶೈಲಿಯಲ್ಲಿ ಶಿಷ್ಟವಾಗಿದ್ದರೂ ಕತನಕ್ರಮದಲ್ಲಿ ದೇಸಿಯಾಗಿದೆ ಎಂದು ಹೇಳಿದರು. ಪಂಪನ ಕಾವ್ಯದ ಕರ್ಣನಿಗೆ ಸಂಬಂಧಿಸಿದ ಕೆಲವು ಪದ್ಯಗಳನ್ನು ಎತ್ತಿ ಹೇಳಿದ ಅವರು ಕರ್ಣನನ್ನು ವಿಶೇಷವಾಗಿ ಚಿತ್ರಿಸುವ ಪಂಪನ ಈ ಗುಣವು ಜೈನ ಧರ್ಮದ ಗುಣವೆ ಆಗಿದೆ ಎಂದು ವಿವರಿಸಿದರು. ಪಂಪನ ಕಾವ್ಯ, ಪಂಪನ ಕರ್ಣ, ಕರ್ಣನ ಪಾತ್ರವು ಹಾದು ಬರುವ ದಾರಿ, ಎದುರಿಸುವ ಸಂದರ್ಭಗಳು ಇಂದಿನ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿಯೂ ಕಾಣಬಹುದು ಎಂದು ಹೇಳಿದರು.
ಹಿರಿಯ ವಿದ್ವಾಂಸರಾದ ಡಾ. ಶರಭೇಂದ್ರಯ್ಯ ಬಿ.ಎಂ. ಅವರು ಪ್ರತಿಕ್ರಿಯೆ ನೀಡಿ ಸಂಸ್ಕೃತದ ಮೂಲ ಮಹಾಭಾರತ, ಪಂಪನ ವಿಕ್ರಮಾರ್ಜುನ ವಿಜಯ ಮತ್ತು ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಇವುಗಳಲ್ಲಿ ಚಿತ್ರಿತಗೊಂಡ ಕರ್ಣನ ಪಾತ್ರವನ್ನು ತುಲನಿಕವಾಗಿ ಹೋಲಿಸಿ ಮಾತಾಡಿದರು. ಕರ್ಣನ ಬದುಕಿನಲ್ಲಿ ಹಂತಹಂತವಾಗಿ ಬೆಳೆಯುವ ಪರಿಯನ್ನು ಚಿತ್ರಿಸಿದರು. ಇನ್ನೊಬ್ಬ ಹಿರಿಯ ವಿದ್ವಾಂಸರಾದ ಡಾ. ಸಿ.ಬಿ. ಚಿಲ್ಕಾರಾಗಿ ಅವರು ಪ್ರತಿಕ್ರಿಯೆ ನೀಡಿ ಪಂಪನ ಕಾವ್ಯವು ಹೆಚ್ಚು ಜನಪದಕ್ಕೆ ಹತ್ತಿರವಾಗಿದ್ದು ಸಾಮಾನ್ಯರ ಬದುಕಿನ ಹತ್ತಿರಕ್ಕೆ ಬರುತ್ತದೆ ಮತ್ತು ಮಾನವೀಯ ಸಂಬಂಧಗಳನ್ನು ಒಳಗೊಂಡಿದೆ ಎಂದು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರಾದ ಶ್ರೀ ಮಹಾಂತೇಶ ಮಸ್ಕಿ ಅವರು ಹಳಗನ್ನಡ ಕಾವ್ಯವು ಮೌಲ್ಯಗಳನ್ನು ಬಿತ್ತರಿಸುವ ಮತ್ತು ಆ ಮೂಲಕ ಪ್ರಸ್ತುತ ಕಾಲಕ್ಕೆ ಸಾಮಾನ್ಯೀಕರಿಸುವುದು ಸಾಧ್ಯ ಎಂದು ಹೇಳಿದರು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಚಿದಾನಂದ ಸಾಲಿ ಅವರು ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಾತಾಡಿ ಮಸ್ಕಿಯು ಸಾಂಸ್ಕೃತಿಕ ನೆಲೆಯಾಗಿದ್ದು ಇಂತಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕ್ರಮ ನಡೆಸುವುದು ಹೆಚ್ಚು ಅರ್ಥಪೂರ್ಣ ಎಂದು ಹೇಳಿದರು. ಅಕಾಡೆಮಿಯ ಕಡೆಯಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವ ಯೋಚನೆ ಇದೆ ಎಂದು ಹೇಳಿದರು.
ಬಂಡಾರ ಪ್ರಕಾಶನದ ಪ್ರಕಾಶಕರಾದ ಶ್ರೀ ಪರಶುರಾಮ ಕೋಡಗುಂಟಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಕಾರ್ಯಕ್ರಮವು ಒಳ್ಳೆಯ ಉಪನ್ಯಾಸ, ತುಂಬಿದ ಸಭೆ ಮತ್ತು ಸುಸೂತ್ರವಾದ ಆಯೋಜನೆಯಿಂದ ಯಶಸ್ವಿಗೊಂಡಿತು.
ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಡಾ. ದೇವೇಂದ್ರಪ್ಪ ಜಾಜಿ ಅವರು ಪಂಪಬಾರತದಲ್ಲಿ ಕರ್ಣನಾ ಪಾತ್ರಚಿತ್ರಣ ಎಂಬ ವಿಶಯದ ಕುರಿತು ವಿಶೇಶ ಪನ್ಯಾಸ ನೀಡಿದರು. ಡಾ. ಶರಭೇಂದ್ರಯ್ಯ ಬಿ.ಎಂ. ಅವರು ಪ್ರತಿಕ್ರಿಯೆ ನೀಡಿದರು, ಶ್ರೀ ಮಹಂತೇಶ್ ಮಸ್ಕಿ ಅದ್ಯಕ್ಷತೆ ವಹಿಸಿದ್ದರು.






0 Comments