ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಓವರ್ ಟು ಅಮೇರಿಕಾ….

ravifeb2908.jpgನೌ ಓವರ್ ಟು ಅಮೇರಿಕಾ…. ರವಿ ಕೃಷ್ಣ ರೆಡ್ಡಿ ಇಲ್ಲಿ ಅನೇಕರಂತೆ ‘ಟೆಕಿ’ , ಆದರೆ ಅನೇಕರಿಗಿಂತ ಭಿನ್ನವಾಗಿ, ಅಥವಾ ಭಾರತದಲ್ಲಿರುವವರಿಗಿಂತ ಒಂದು ಗುಲಗಂಜಿ ತೂಕ ಹೆಚ್ಚೇ ಭಾರತದ ಬಗ್ಗೆ ಯೋಚನೆ ಮಾಡುವವರು. ಸುಮ್ಮನೆ ಭಾಷಣ ನೀಡುವವರ ಮಧ್ಯೆ ತುಂಬಾ ತುಂಬಾ ಭಿನ್ನ ವ್ಯಕ್ತಿ. ಅಮೆರಿಕಾದಲ್ಲಿದ್ದುಕೊಂಡೇ  ‘ವಿಕ್ರಾಂತ ಕರ್ನಾಟಕ’ ಪತ್ರಿಕೆಗೆ ಹೆಗಲು ಕೊಟ್ಟವರು. ಆ ಪತ್ರಿಕೆಗೆ ಅಂಕಣ ಬರೆದವರು. ಈಗ ಅದೇ ಅಂಕಣವನ್ನು ಬ್ಲಾಗ್ ಆಗಿ ಪರಿವರ್ತಿಸಿದ್ದಾರೆ.

 ‘ಅಮೆರಿಕಾದಿಂದ ರವಿ’ ಬ್ಲಾಗ್ ನ ಹೆಸರು. ಅವರು ಪ್ರತೀ ವಾರ ಕೈಗೆತ್ತಿಕೊಳ್ಳುವ ವಿಷಯಗಳೇ ಅವರ ಕಾಳಜಿ, ಕಳಕಳಿಯ ಬಗ್ಗೆ ಮಾತನಾಡುತ್ತದೆ. ಈ ಬ್ಲಾಗ್ ನ ಇನ್ನೊಂದು ವೈಶಿಷ್ಟ್ಯವೆಂದರೆ ಅವರ ಎಲ್ಲಾ ಬರಹಗಳ ವೀಡಿಯೊ ಪ್ರಸ್ತುತಿಯೂ ಇದೆ. ರವಿ ಅವರು ತಾವೇ ಆ ಲೇಖನವನ್ನು ವಾಚಿಸಿದ್ದಾರೆ. ಓದುವುದು ಬೇಡ ಎನ್ನುವುದಾದರೆ ಕೇಳಬಹುದು.

ವಿಸಿಟ್ ಮಾಡಿ. ಪಾಸ್ ಪೋರ್ಟ್ ಅಗತ್ಯವಿಲ್ಲ. ಚೆನ್ನಾಗಿದ್ದರೆ ಅವರಿಗೆ ಮೈಲ್ ಮಾಡಿ: ravikreddy@gmail.com

ರವಿ ಅವರು ಬರೆದ ‘ಸ್ವಾಮಿ, ಮಹಮ್ಮದ್ ಹಾಗೂ ಟ್ಯಾಬ್ಲಾಯ್ಡ್ ದಿನಪತ್ರಿಕೆಗಳು’ ಅಂಕಣ ಲೇಖನದಿಂದ ಆಯ್ದ ಭಾಗ ಇಲ್ಲಿದೆ. ಅವರ ಬರವಣಿಗೆ ರುಚಿ ನೀಡಲು-

ಕಳೆದ ಮೂರು ವರ್ಷಗಳಿಂದ ಆತ್ಮೀಯ ಸ್ನೇಹಿತರಲ್ಲೊಬ್ಬರಾಗಿದ್ದ, ಕನ್ನಡ, ಕರ್ನಾಟಕದ ಸ್ಥಿತಿಗತಿಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿದ್ದ, ತಂತ್ರಜ್ಞಾನ ಕ್ಷೇತ್ರದಲ್ಲಿ ಪೇಟೆಂಟ್‌ಗಳನ್ನೂ ಗಳಿಸಿ ನಮ್ಮ ನಡುವೆಯ ಮೇಧಾವಿ ಎನಿಸಿದ್ದ ಆಪ್ತ ಸ್ನೇಹಿತ ಸ್ವಾಮಿ ಇದೇ ತಿಂಗಳು ಭಾರತಕ್ಕೆ ಹಿಂದಿರುಗುತ್ತಿದ್ದಾರೆ.

ಜನಾರ್ಧನ ಸ್ವಾಮಿ ನನ್ನ ಹಾಗೆಯೆ ಹಳ್ಳಿಯಿಂದ ಬಂದವರು. ದಾವಣಗೆರೆಯ ಹತ್ತಿರದ ಹಳ್ಳಿ ಅವರದು. ಹತ್ತನೆ ತರಗತಿಯ ತನಕ ಓದಿದ್ದೆಲ್ಲ ಹಳ್ಳಿಯಲ್ಲಿಯೆ. ದಾವಣಗೆರೆಯ BDT ಯಲ್ಲಿ B.E. ಮಾಡಿ, ಬೆಂಗಳೂರಿನ IISc ಯಲ್ಲಿ MTech ಮಾಡಿ, ಸುಮಾರು ಹತ್ತು ವರ್ಷಗಳ ಹಿಂದೆ ಅಮೇರಿಕಕ್ಕೆ ಬಂದು Sun Microsystems ನಲ್ಲಿ cutting-edge technology ಯ ಮೇಲೆ ಇಲ್ಲಿಯ ತನಕ ಕೆಲಸ ಮಾಡುತ್ತಿದ್ದವರು. ನಾಲ್ಕೈದು ವರ್ಷಗಳ ಹಿಂದೆ ಚಿಪ್ ಡಿಸೈನ್‌ನಲ್ಲಿ ಪೇಟೆಂಟ್ ಸಹ ಪಡೆದಿದ್ದಾರೆ. ಇಂತಹ ಸ್ವಾಮಿ ಕನ್ನಡ ಮೀಡಿಯಮ್ SSLC ಯಲ್ಲಿ ಪಾಸಾಗಿದ್ದು ಮಾತ್ರ ಸೆಕೆಂಡ್ ಕ್ಲಾಸ್‌ನಲ್ಲಿ ಎಂದರೆ ಯಾರಿಗೇ ಆಗಲಿ ಆಶ್ಚರ್ಯವಾಗದೇ ಇರದು! ಇನ್ನೂ ಆಶ್ಚರ್ಯವೆಂದರೆ, ಆ ಹಳ್ಳಿಯ ಶಾಲೆಯಲ್ಲಿ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದ ಇವರೇ ಟಾಪ್ ಸ್ಕೋರರ್!

ಇಲ್ಲಿನ ಸಿಲಿಕಾನ್ ಕಾಣಿವೆಯಲ್ಲಿ ಸ್ವಾಮಿಯವರ ತರಹವೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಧಾವಿಗಳಾಗಿರುವ ಅನೇಕ ಭಾರತೀಯರಿದ್ದಾರೆ. ಅದೇನೂ ಅಂತಹ ದೊಡ್ಡ ವಿಷಯವಲ್ಲ. ಆದರೆ ಸ್ವಾಮಿಯಂತಹ ಒಬ್ಬ ಉತ್ತಮ ವ್ಯಂಗಚಿತ್ರಕಾರ, ಅಷ್ಟೇ ಉತ್ತಮ ಕಂಪ್ಯೂಟರ್ ಗ್ರಾಫಿಕ್ಸ್ ಡಿಸೈನರ್, ರೈತರಿಗೆ ಯಾವ ಯಾವ ಸಾಧನ-ಸಲಕರಣೆ ಮಾಡಿದರೆ ಅವರ ದೈನಂದಿನ ಜೀವನ ಉತ್ತಮಗೊಳ್ಳುತ್ತದೆ, ಅವರ ಪ್ರೊಡಕ್ಟಿವಿಟಿ ಹೆಚ್ಚುತ್ತದೆ ಎಂದು ಆಲೋಚಿಸುವ ಕನ್ನಡ ಇಂಜಿನಿಯರ್ ವಿರಳಾತಿ ವಿರಳ. ದಾವಣಗೆರೆಯಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾಗಲೆ ಅಲ್ಲಿನ ಸ್ಥಳೀಯ ಕನ್ನಡ ಪತ್ರಿಕೆಗಳಿಗೆ ಸ್ವಾಮಿ ಕಾರ್ಟೂನ್ ಬರೆಯುತ್ತಿದ್ದರು. ಅದೇ ಸಮಯದಲ್ಲಿ “Electronics For You” ಯಂತಹ ಟೆಕ್ನಾಲಜಿ ಸಂಬಂಧಿತ ಮ್ಯಾಗಜ಼ೈನ್‌ಗಳಿಗೂ ಇಂಗ್ಲಿಷ್‌ನಲ್ಲಿ ಕಾರ್ಟೂನ್ ಬರೆಯುತ್ತಿದ್ದರು. ಅವರೇ ಹೇಳುವ ಪ್ರಕಾರ, ಒಮ್ಮೊಮ್ಮೆ ಅವರ ಇಂಜಿನಿಯರಿಂಗ್ ಕಾಲೇಜಿನ ಲೆಕ್ಚರರ್‌ಗಳು ಗಳಿಸುತ್ತಿದ್ದಕ್ಕಿಂತ ಹೆಚ್ಚಿನ ದುಡ್ಡು ಈ ಕಾರ್ಟೂನ್ ಬರೆಯುವುದರಿಂದಲೆ ಇವರಿಗೆ ಬರುತ್ತಿತ್ತಂತೆ. ಈ ಮಧ್ಯೆ ಅವರ ವ್ಯಂಗ್ಯಚಿತ್ರ ಬರವಣಿಗೆ ಕಮ್ಮಿಯಾಗಿದೆಯಾದರೂ, ಪೂರ್ಣವಾಗಿ ನಿಂತಿಲ್ಲ. ಅವರ ವೆಬ್‌ಸೈಟ್ www.jswamy.com ನಲ್ಲಿ ಅವರ ನೂರಾರು ಕನ್ನಡ ಮತ್ತು ಇಂಗ್ಲಿಷ್ ಕಾರ್ಟೂನ್‌ಗಳಿವೆ.

janardhanaswamy1.jpgಈ ಸ್ವಾಮಿಯ ಜೊತೆಗೂಡಿ ಒಂದು ವರ್ಷಪೂರ್ತಿ ಕೆಲಸ ಮಾಡಿದ ಹೆಮ್ಮೆ ನನ್ನದು. ಅಮೇರಿಕಾದಲ್ಲಿಯ ದೊಡ್ಡ ಕನ್ನಡ ಕೂಟಗಳಲ್ಲಿ ಒಂದಾದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟಕ್ಕೆ 2005 ರಲ್ಲಿ ನಾನು ಅಧ್ಯಕ್ಷನಾಗಿದ್ದೆ. ಸ್ವಾಮಿ ಉಪಾಧ್ಯಕ್ಷರಾಗಿದ್ದರು. ಅದರ ಜೊತೆಗೆ ಸಂಘದ ಆ ವರ್ಷದ ಸಾಹಿತ್ಯಕ ಸಂಚಿಕೆಯ ಮುಖ್ಯಸಂಪಾದಕರೂ ಅವರೆ. ಅವರ ಸಂಪಾದಕತ್ವದ ಸಮಿತಿಯಲ್ಲಿ ನಾನು ಉಪಸಂಪಾದಕ. ಆ ಸಮಯದಲ್ಲಿ ನಾನು ಅವರಿಂದ ಕಲಿತದ್ದು ಅಪಾರ. ಇಲ್ಲಿಯ ಕನ್ನಡದ ಕೆಲಸಕ್ಕೆ ಅನೇಕ ಹಗಲು-ರಾತ್ರಿಗಳನ್ನು ಅವರು ಕಂಪ್ಯೂಟರ್ ಮುಂದೆ ಕಳೆದಿದ್ದಾರೆ. ಅದೇ ರೀತಿ, ಅಕ್ಕ ವಿಶ್ವಕನ್ನಡ ಸಮ್ಮೇಳನದ ಬಹುಪಾಲು ಸ್ಮರಣ ಸಂಚಿಕೆಗಳ ಮುಖಪುಟ ವಿನ್ಯಾಸವೂ ಸ್ವಾಮಿಯವರದೆ.

ಎಮ್ಮೆ ಮೇಯಿಸುತ್ತ ಹಳ್ಳಿಯಲ್ಲಿ ಬೆಳೆದ ಸ್ವಾಮಿಯವರು ಕಳೆದ ವರ್ಷ ಬೆಂಗಳೂರಿಗೆ ಬಂದಿದ್ದಾಗ ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ ಎಂಬ ವಿಷಯಕ್ಕೆ ಯಡಿಯೂರಪ್ಪನವರ ಜೊತೆಯೆಲ್ಲ ಮಾತನಾಡಿದರು. ಆದರೆ ಶಕ್ತಿರಾಜಕಾರಣದಲ್ಲಿ ಮುಳುಗಿ ಹೋದ ನಮ್ಮ ಸ್ವಾರ್ಥಿ ರಾಜಕಾರಣಿಗಳಿಗೆ ಇವರ ಭಾಷೆ ಅರ್ಥವಾಗುತ್ತದೆಯೆ ಎನ್ನುವ ಸಂಶಯ ನನ್ನದು. ಊರಿನಿಂದ ಇಷ್ಟು ದಿನ ದೂರವಿದ್ದ ಸ್ವಾಮಿ ಅಲ್ಲಿ ಏನೇನು ಮಾಡಬಹುದು ಎನ್ನುವ ಥಿಯರಿ ಪ್ರಪಂಚದಲ್ಲಿ ಮುಳುಗಿ ಬಿಟ್ಟಿದ್ದರು. ಈಗ ಅವರ ಥಿಯರಿಗಳನ್ನೆಲ್ಲ ಪ್ರಾಕ್ಟಿಕಲ್ಸ್‌ಗೆ ಪರಿವರ್ತಿಸುವ ಸಮಯ ಬಂದಿದೆ. ಅವರ ಪ್ರಾಕ್ಟಿಕಲ್ಸ್ ಯಶಸ್ವಿಯಾಗಲಿ ಎಂದು ಹಾರೈಸೋಣ. ಯಾಕೆಂದರೆ, ಅವರ ಸಾಧನೆಯಲ್ಲಿ ಸಮಾಜದ ಹಿತವೂ ಇರುತ್ತದೆ ಎನ್ನುವ ನಂಬಿಕೆ ನನ್ನದು.

ಭಾರತದ ಕಾರ್ಟೂನಿಸ್ಟ್‌ಗಳಲ್ಲಿ ಸ್ವಾಮಿಯವರಿಗೆ ಅತಿ ಹೆಚ್ಚು ಇಷ್ಟವಾದವರು ಆರ್.ಕೆ. ಲಕ್ಷಣ್ ಎಂದು ಹೇಳಲು ಅಷ್ಟೇನೂ ಊಹಿಸಬೇಕಿಲ್ಲ. ಕನ್ನಡದ ಕಾರ್ಟೂನಿಸ್ಟ್‌ಗಳಲ್ಲಿ ಅವರಿಗೆ ಹೆಚ್ಚು ಇಷ್ಟವಾದವರು ಪ್ರಜಾವಾಣಿಯ ಪಿ. ಮಹಮ್ಮದ್. ಸ್ವಾಮಿಯವರಿಗೇ ಏನು, ಬಹುಶಃ ಇವತ್ತು ಕರ್ನಾಟಕದ ಪ್ರಜ್ಞಾವಂತರ ಮೆಚ್ಚಿನ ಕಾರ್ಟೂನಿಸ್ಟ್ ಪಿ.ಮಹಮ್ಮದ್ದೆ. ಪತ್ರಿಕೆಯ ಕೆಲಸದಲ್ಲಿ ತೊಡಗಿಕೊಂಡಾಗಿನಿಂದ ‘ಮಹಮ್ಮದ್‌ರ ಇವತ್ತಿನ ಕಾರ್ಟೂನ್ ನೋಡಿದಿರ?’ ಎಂದು ಅನೇಕರು ಅನೇಕ ಸಲ ನನಗೆ ಕೇಳಿದ್ದಾರೆ, ಅನೇಕ ಸಲ ನಾನೆ ಇತರರನ್ನು ಕೇಳಿದ್ದೇನೆ. ಪ್ರಸ್ತುತ ವಿಷಯಗಳ ಬಗ್ಗೆ ಅಷ್ಟು ಪರಿಣಾಮಕಾರಿಯಾಗಿ, ಕಲಾತ್ಮಕತೆಯಿಂದ, ಜನಪರವಾಗಿ ಬರೆಯುವ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಇವತ್ತು ಕರ್ನಾಟಕದಲ್ಲಿಲ್ಲ. ಆ ವಿಷಯಕ್ಕೆ ಬಂದರೆ, ಸ್ಟಾರ್ ವ್ಯಾಲ್ಯೂ ಇರುವ ಮೊದಲ ಕನ್ನಡ ವ್ಯಂಗ್ಯಚಿತ್ರಕಾರ ಪಿ. ಮಹಮ್ಮದ್.

mahamud-copy.gifಪಿ. ಮಹಮ್ಮದ್ ಪ್ರಜಾವಾಣಿ ಬಿಟ್ಟು ಕನ್ನಡದ ಇನ್ಯಾವ ಪತ್ರಿಕೆಗೆ ಬರೆದಿದ್ದರೂ ನನಗೆ ಅವರ ಬಗ್ಗೆ ಇಷ್ಟು ಹೆಮ್ಮೆ ಅನ್ನಿಸುತ್ತಿರಲಿಲ್ಲ ಎನ್ನಿಸುತ್ತದೆ. ಬೇರೆ ಇನ್ಯಾವ ಪತ್ರಿಕೆಗೆ ಅವರು ಬರೆದರೂ ಆ ಪತ್ರಿಕೆಗಳ ಧ್ಯೇಯಧೋರಣೆಗಳೆ ಬೇರೆ ಇರುವುದರಿಂದ ಅವರು ಇಷ್ಟು ಮುಕ್ತವಾಗಿ, ಪರಿಣಾಮಕಾರಿಯಾಗಿ ಬರೆಯಲೂ ಸಾಧ್ಯವಿಲ್ಲ ಎನ್ನಿಸುತ್ತದೆ.

‍ಲೇಖಕರು avadhi

7 March, 2008

1 Comment

  1. Thejegowda

    Hi Ravi/Swamy,

    I really impressed abt u r artical. really u r
    doing woderfull job.

    U have that courage, bravery and emotions…

    I wish u all the best fr u journey…

    Thej

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading