ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೋವುಗಳೇ ನಿಮಗೆ ಬಣ್ಣವಿಡಲೇ?

-ಜಯಶ್ರೀ ದೇಶಪಾಂಡೆ

ದಾರಿ ಸಾಗುತ್ತ…

ನನ್ನ ನೋವುಗಳ ಕತೆಯಾಗಿಸಲೇ…
ಬಚ್ಚಿಟ್ಟು ಮರೆತ,
ಕರೆಗೆ ಓಗೊಡದ ಮಾತು
ಬಿಚ್ಚಿ ಹರಡಿದರೆ?

ನನ್ನ ನೋವುಗಳ ಕವನವಾಗಿಸಲೇ…
ಕಳೆದ ಕ್ಷಣಗಳ ಕತೆವ್ಯಥೆ
ಬಯಲಾಗಿ ನಕ್ಕರೆ?

ನನ್ನ ನೋವುಗಳ ಚಿತ್ರವಾಗಿಸಲೇ,
ಗೆರೆಗಳ ಆಟ
ನನ್ನ ಬೆರಳ
ಮಾತು ಮೀರಿದರೆ?

ನನ್ನ ನೋವುಗಳ ಅವರಿವರ
ನೋವಿಗೆ ಹೋಲಿಸಲೇ,
ಆ ಕೌದಿ ಈ ಹಚ್ಚಡ
ಒಂದೇ ಆದೀತೇ?

ನನಗೆ ನೋವಿಲ್ಲ
ಅಂದುಕೊಳ್ಳಲೇ..
ಭ್ರಮೆಯ ಬ್ರಹ್ಮಾಂಡದ
ಹಿಡಿಮುಷ್ಠಿ ಮುಗುಳ್ನಕ್ಕರೆ?

ನನ್ನ ನೋವಿನ
ಆವರಣ ಕಳಚಲೇ…
ಎದೆಯಾಳದಲ್ಲೆಲ್ಲೊ
ಅಡಗಿವೆಯಲ್ಲ,
ಕೆರಳಿಬಿಡವೇ ಅವು?

ಏಹ್! ಸಂದಿಗ್ಧಕ್ಕೆ ಸಂದುಹೋಗಲೆ?
ಸರಿಬೆಸಗಳ ಕೂರೆ
ಮೆದುಳ ಮುಪ್ಪರಿಯದೇ?

ಆದುದರಿಂದ…
‘ನೋವುಗಳೇ
ನಿಮಗೆ ಬಣ್ಣವಿಡಲೇ?
ಚೆಂದವಾಗಿಸಲೇ?’
ಅನುನಯಿಸಿದೆ…
ಪುಸಲಾಯಿಸಿದೆ
ಅಂಗಲಾಚಿದೆ!
ನಕ್ಕುಬಿಟ್ಟವು..

‘ನೋವೆಂದರೇನೆಂದು
ಗೊತ್ತೇ ನಿನಗೆ?’
ತಬ್ಬಿಬ್ಬಾದೆ!
ಹೇಗೆ ಹೇಳಲಿ ಅವಕ್ಕೆ,
“ಹಾಂ, ನನಗೆ ಗೊತ್ತಿಲ್ಲ?
ನನ್ನುಸಿರೇ ನಿಮ್ಮ ಮನೆ…”
ನಿಮಗಿದು ಗೊತ್ತೇ!?

‍ಲೇಖಕರು Admin

31 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading