ನನ್ನ ದಲಿತ ಕೇರಿ
-ದೇವರಾಜ್ ಹುಣಸಿಕಟ್ಟಿ
ನನ್ನ ಕೇರಿಯ
ಮುದಿ ಕಣ್ಣುಗಳಲ್ಲಿ
ಪಾಪಾಸು ಕಳ್ಳಿಯ ಹಾಲು
ಜಿನುಗುವಂತೆ…
ನೋವುಗಳು ಸೋರುತ್ತಿರುವಾಗ…
ಬಿಲ್ ಬೋರ್ಡ್ ನಂತೆ
ಮೀಸಲಿಟ್ಟ ಹಕ್ಕುಗಳು…
ಏನೋ ಕೊಡುತ್ತೇವೆಂದು..
ಏನೇನೊ ಕಿತ್ತು ಕೊಳ್ಳುತ್ತಿರುವಾಗ…
ಆ ಜನರ ಸೌಧದ ಜಡ
ಇಟ್ಟಿಗೆ ಕಿಟಕಿ ಬಾಗಿಲುಗಳೆಲ್ಲ
ಮುಸು ಮುಸು ನಗುತ್ತಿರುವಾಗ…..
ನನ್ನ ಕೇರಿಯ ಬತ್ತಿದೆದೆಯಿಂದ
ಹಾಲು ಚಿಮ್ಮವುದ್ಯಾವಾಗ…?
ಏಸು ದುರುಳರ
ನಂಬಿ…
ಕತ್ತು ಹಿಸಿಕಿ ಕೊಂಡಿದೆ
ಏಸು ಜನರು ಉಣಿಸಿದ
ವಿಷವ ನಗುತ್ತ ಗುಟುಕಿಸಿದೆ..
ಪಾಚಿ ಗಟ್ಟಿದ ಗಂಟಲೇ..
ಅಂಟು ವಾಳದ ಬಟ್ಟಲೇ….
ಓ ನನ್ನ ಕೇರಿಯೇ..
ನಿನ್ನ ಜಡ ಗಟ್ಟಿದ
ತಲೆಗೆ ಎಣ್ಣೆ ಕಾಣುವುದ್ಯಾವಾಗ..
ಬಾಚಿ ಬೈತಿಲೆ ತೆಗೆಯುವುದ್ಯಾವಾಗ….?
ಕೇರಿಯ ಹೊಸ್ತಿಲಲ್ಲೇ
ಮಾರಿಗೌತಣ ನೀಡಿದ
ಕೋಣದ ಹೆಬ್ಬಾಗಿಲೆ…
ತನ್ನವರ ತಲೆಗಳ ಬಲಿ ಕೊಡಲೆಂದೆ ಮಸೆದ..
ಆ ಕೊಡಲಿ ಮಚ್ಚು ಕಂದಲ್ಲಿಯೇ…
ಮೆದುಳು ಕಳೆದುಕೊಂಡ
ನನ್ನ ಪ್ರಿಯ ಕೇರಿಯೆ
ನಿನ್ನ ಆತ್ಮದ ತುಣುಕಿಗೆ ಜೀವಬರುವುದು ಯಾವಾಗ..?
ಓ
ನನ್ನ ಕೇರಿಯೇ
ನನ್ನಾತ್ಮದಾ ತುಣಿಕೆ..
ಬಿಚ್ಹೋಲೆ ಮಡದಿಯೇ..
ಬಣ್ಣಗೇಡಿ ಚೆಲುವೆಯೇ….
ನಿನ್ನ ಭ್ರಮೆಯ ಬಿಡುಗಡೆ ಯಾವಾಗ?






0 Comments