ಕೆ ಟಿ ಶಿವಪ್ರಸಾದ್ ಬಗ್ಗೆ ಎಂ ಎಸ್ ಪ್ರಕಾಶ್‌ಬಾಬು ಬರೆದ ಲೇಖನವನ್ನು ಸುವರ್ಣ ಅವರು ಕಳಿಸಿದ್ದಾರೆ. ಲೇಖನ ನಿಮ್ಮ ಓದಿಗಾಗಿ
***
ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರ ಕುರಿತು ಒಂದಿಷ್ಟು
ಲೇಖಕರು : ಕಲಾವಿದ ಎಂ ಎಸ್ ಪ್ರಕಾಶಬಾಬು, ಬೆಂಗಳೂರು

ಎಪ್ಪತ್ತರ ದಶಕದಲ್ಲಿ ಈ ನೆಲದಲ್ಲಿ ನಡೆದ ಸಾಂಸ್ಕೃತಿಕ ಚಳವಳಿಗಳ ಬಗ್ಗೆ ಮಾತನಾಡುವವರನ್ನು ಕಂಡರೆ ನನಗೆ ಅಸೂಯೆ ! ಅದೊಂದು ರೋಮಾಂಚನ ತರುವ ಹೋರಾಟದ ಕಾಲ. ಎಪ್ಪತ್ತರ ದಶಕದ ಮಧ್ಯದಲ್ಲಿ ಆರಂಭವಾಗಿ ಎಂಭತ್ತರ ದಶಕದ ಅಂತ್ಯದವರೆಗೆ ಈ ಸಾಂಸ್ಕೃತಿಕ ಹೋರಾಟ ತನ್ನ ತೆಕ್ಕೆಗೆ ಎಲ್ಲಾ ಕ್ಷೇತ್ರಗಳನ್ನು ತೆಗೆದುಕೊಂಡಿತ್ತು. ಹೊಸ ಅಲೆಯ ಸಿನಿಮಾಗಳು ಪ್ರೇಕ್ಷಕರಿಗೆ ಷಾಕ್ ನೀಡಿ ಸಿನಿಮಾ ಅಭಿವ್ಯಕ್ತಿಯ ಹೊಸ ಸಾಧ್ಯತೆಗಳನ್ನು ತೋರಿದ್ದವು. ಬಂಡಾಯ ಸಾಹಿತ್ಯ ಜನ್ಮ ತಾಳ ಅಕ್ಷರ ಲೋಕಕ್ಕೆ ಅಪರಿಚಿತವಾದ ವರ್ಗದಿಂದ ಬಂದ ಪೀಳಿಗೆಗೆ ಕಲಿಕೆಯ ಮತ್ತು ಅಭಿವ್ಯಕ್ತಿಯ ಹೊಸ ಮಾರ್ಗಗಳನ್ನು ತೋರಿದ್ದವು. ಸಮುದಾಯದಂಥ ಹತ್ತಾರು ನಾಟಕ ಸಂಸ್ಥೆಗಳು ಕಲೆಯನ್ನು ಜನಪರಗೊಳಿಸುವಲ್ಲಿ ಪ್ರಯತ್ನಶೀಲವಾಗಿದ್ದವು. ಸಾಮಾಜಿಕ ನ್ಯಾಯಕ್ಕಾಗಿ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಮತ್ತು ರೈತ ಚಳುವಳಿಗಳು ದಮನಕ್ಕೊಳಗಾದ ಜನರಲ್ಲಿ ಸ್ವಾಭಿಮಾನ ಮತ್ತು ಹೋರಾಟದ ಕೆಚ್ಚನ್ನು ಮೂಡಿಸಿದ್ದವು. ಹೀಗೆ ಹೋರಾಟದ ಬಿಸಿ ಎಲ್ಲೆಡೆ ಹಬ್ಬಿತ್ತು. ಇಂಥ ಹೋರಾಟದ ಮುಂಚೂಣಿಯಲ್ಲಿದ್ದ ಸಾಹಿತಿ , ಕಲಾವಿದರು ಒಂದು ನಿರ್ದಿಷ್ಟ ಮಾಧ್ಯಮಕ್ಕೆ ಜೋತು ಬೀಳುತ್ತಿರಲಿಲ್ಲ. ಸಾಮಾಜಿಕ ಕಳಕಳಿಗಾಗಿ ಯಾರು ಯಾವುದೇ ಮಾಧ್ಯಮದಲ್ಲಾದರೂ ದುಡಿಯಬಹುದೆಂದು ಅವರು ಸಾಬೀತು ಪಡಿಸಿದ್ದರು.
ಈ ಸಾಂಸ್ಕೃತಿಕ ಚಳುವಳಿಯಿಂದ ಹುಟ್ಟಿದ ಎಲ್ಲಾ ಕೃತಿಗಳೂ ಶ್ರೇಷ್ಠವಾದದ್ದೆಂದು ನಾನೇನು ಹೇಳುತ್ತಿಲ್ಲ. ಆದರೆ ಜನರಲ್ಲಿ ಸಾಂಸ್ಕೃತಿಕ ಪ್ರಜ್ಜೆ ಮೂಡಿಸುವುದರಲ್ಲಿ ಇದುವಹಿಸಿದ ಪಾತ್ರ ಬಹುಮುಖ್ಯವಾದದ್ದು. ಇಷ್ಟೆಲ್ಲಾ ಹೋರಾಟದ ಹುಮ್ಮಸ್ಸಿನಿಂದಿದ್ದ, ಯಾವುದೇ ಕಲಸವನ್ನಾದರೂ ಮಾಡಿ ಮುಗಿಸುವ ಸಾಂಘಿಕ ಮನೋಭಾವದಿಂದಿದ್ದ ಈ ಸಾಹಿತಿಗಳೂ , ಕಲಾವಿದರೂ ತೊಂಬತ್ತರ ದಶಕದಲ್ಲಿ ಎಲ್ಲಿ ಮಾಯಾವಾದರು ? ಇವರ ಈ ಹೋರಾಟ ಬರೀ ಒಂದು ದಶಕಕ್ಕೆ ಮಾತ್ರ ಸೀಮಿತವಾಗಿದ್ದಿತೆ ? ಅಥವಾ ಅವರೆಲ್ಲಾ ತಮ್ಮ ತಮ್ಮ ಚಳವಳಿಗಳಿಂದ ನಿವೃತ್ತರಾದರೆ ? ಈಗ ಈ ಚಳವಳಿಗ ಅವಶ್ಯಕತೆ ಇಲ್ಲವೆ ? ಪ್ರಸ್ತುತ ಈ ರೀತಿಯ ಹೋರಾಟಕ್ಕೆ ಅರ್ಥವೇ ಇಲ್ಲವೇ ? ಅಥವಾ ಅದು ಅರ್ಥ ಕಳೆದುಕೊಂಡುಬಿಟ್ಟಿದೆಯೇ ?
ಎಪ್ಪತ್ತರ ದಶಕದ ಸಾಂಸ್ಕೃತಿಕ ಚಳವಳಿಗಳ ಬಗ್ಗೆ ಸಾಕಷ್ಟು ಕೇಳಿ ತಿಳಿದುಕೊಂಡಿರುವ ನನಗೆ ಈ ರೀತಿಯ ನೂರಾರು ಪ್ರಶ್ನೆಗಳು ಉದ್ಭವಿಸುವುದು ಸಹಜವಾದರೂ ಯಾವುದೇ ಒಂದು ಚಳವಳಿಗೆ ಹತ್ತರಿಂದ ಹದಿನೈದು ವರ್ಷವಷ್ಟೆ ಆಯಸ್ಸು ಎಂಬ ಡಿ.ಆರ್.ನಾಗರಾಜ್ ರವರ ಮಾತಲ್ಲೂ ಸತ್ಯವಿರಬಹುದು. ಕೆ,ಟಿ ಶಿವಪ್ರಸಾದ್ ಎಪ್ಪತ್ತರ ದಶಕದ ರಾಜಕೀಯ , ಸಾಮಾಜಿಕ , ಸಾಂಸ್ಕೃತಿಕ ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಹಾಗಾಗಿ ಅವರ ಕೃತಿಗಳಲ್ಲಿ ಈ ನೆಲದ ಸತ್ಯವನ್ನು ಕಾಣಬಹುದು.
ಸಾಹಿತ್ಯದ ನವ್ಯ ಚಳವಳಿಗೆ ಹೋಲಿಸಿದರೆ ಚಿತ್ರಕಲೆಯಲ್ಲಿ ನವ್ಯದ ಪರಿಕಲ್ಪನೆಯೇ ಇರಲಿಲ್ಲವೇನೋ ಅಥವಾ ಅದನ್ನು ತಪ್ಪಾಗಿ ಅರ್ಥೈಸಿದ್ದರೆಂದು ಕಾಣುತ್ತದೆ. ಕೆ.ಟಿ.ಶಿವಪ್ರಸಾದ್ ರ ಬಗ್ಗೆ ಬರೆಯುವಾಗ ಅನಿವಾರ್ಯವಾಗಿ ಮತ್ತೆ ಮತ್ತೆ ಕನ್ನಡ ಸಾಹಿತ್ಯಕ್ಕೆ ಮರಳಬೇಕಾಗುತ್ತದೆ. ಆ ಸಂಬಂಧ ಅವರ ಕೃತಿಗಳನ್ನು ನೋಡುವಾಗ ಬಹುಮುಖ್ಯವಾಗುತ್ತದೆ.

ಕನ್ನಡ ಸಾಹಿತ್ಯವನ್ನು ನಾವು ಹೇಗೆ ನವೋದಯ , ನವ್ಯ ಮತ್ತು ನವ್ಯೋತ್ತರ ಎಂದು ಮೂರು ಭಾಗಗಳಾಗಿ ಸಾಹಿತ್ಯಿಕ ಬೆಳವಣಿಗೆಗಳನ್ನು ಅಧ್ಯಯನ ಮಾಡುವ ರೀತಿಯಲ್ಲಿ ಕನ್ನಡ ಕಲಾ ಇತಿಹಾಸವನ್ನು ವಿಭಜಿಸಲಾಗದು. ಕನ್ನಡದಲ್ಲಿ ಆ ರೀತಿಯ ಸಮಗ್ರ ಕಲಾ ಅಧ್ಯಯನ ನಡೆಯಲೇ ಇಲ್ಲವೇನೋ ಸಾಹಿತ್ಯದಲ್ಲಾದಂತೆ ಪಾಶ್ಚಿಮಾತ್ಯದ ಪ್ರಭಾವಕ್ಕೊಳಗಾದರೂ ಕನ್ನಡತನವನ್ನು ತಮ್ಮ ಕೃತಿಗಳಲ್ಲಿ ಉಳಿಸಿಕೊಂಡಂಥಾ ಕಲಾವಿದರ ಉದಾಹರಣೆಗಳು ತುಂಬಾ ವಿರಳ. ಆ ನಿಟ್ಟಿನಲ್ಲಿ ಶಿವಪ್ರಸಾದರ ಕೃತಿಗಳು ತುಂಬಾ ಮಹತ್ವದಾದವುಗಳು.
ಕನ್ನಡ ಕಲಾ ಇತಿಹಾಸದಲ್ಲೇ ನವ್ಯ ಸಾಹಿತ್ಯದಲ್ಲಿದ್ದಂತೆ ರಾಜಕೀಯ , ಸಾಮಾಜಿಕ, ಸಾಂಸ್ಕೃತಿಕ ಕಾಳಜಿಗಳನ್ನಿಟ್ಟುಕೊಂಡು ತಮ್ಮ ಕಲಾಕೃತಿಗಳಲ್ಲಿ ಅದನ್ನು ದುಡಿಸಿಕೊಂಡ ಇಬ್ಬರು ಕಲಾವಿದರೆಂದರೆ ಆರ್ . ಎಸ್ . ನಾಯ್ಡು ಮತ್ತು ಕೆ.ಟಿ.ಶಿವಪ್ರಸಾದ್ ಮಾತ್ರ. ಈ ಮಾತನ್ನು ಒಮ್ಮೆ ಪ್ರೆಸ್ ಕ್ಲಬ್ ನಲ್ಲಿ ವಿಸ್ಕಿ ಹೀರುತ್ತಾ ನಲ್ಲಿಯಲ್ಲಿ ನೀರು ಬಂತು ಖ್ಯಾತಿಯ ಶಂಕ್ರಪ್ಪ ಹೇಳಿದ್ದರು. ಹಾಗೇ ಇಬ್ಬರೂ ಕೂಡ ಸಮಾಜವಾದಿ ಹೋರಾಟಗಳಲ್ಲಿ ಭಾಗಿಯಾಗಿ ಜೈಲುವಾಸ ಅನುಭವಿಸಿರುವವರು ಆದರೆ ದುರದೃಷ್ಟವಶಾತ್ ಆರ್ .ಎಸ್ . ನಾಯ್ಡು ರವರ ಕೃತಿಗಳು ನೋಡಲು ಸಿಗುವುದು ಅಪರೂಪ.
ಚಳವಳಿಗಳಲ್ಲಿ ಗುರುತಿಸಿಕೊಂಡ ಸಾಹಿತಿಗಳ ಅಥವಾ ಕಲಾವಿದರ ಕೃತಿಗಳನ್ನು ಮೌಲ್ಯಮಾಪನ ಮಾಡುವ ವಿಮರ್ಶಕರು ಹಾದಿ ತಪ್ಪುವುದೇ ಹೆಚ್ಚು ಇಲ್ಲಾ ಕಲಾವಿದರೇ ಆ ಹಾದಿ ಹಿಡಿಯುವ ಅಪಾಯವೂ ಉಂಟು. ಉದಾಹರಣೆಗೆ ಶಿವಪ್ರಸಾದರ ಕೃತಿಗಳನ್ನು ಸೋಸಿಯಲ್ ರಿಯಾಲಿಸಂ ಎಂಬ ಹಣೆಪಟ್ಟಿಯಿಂದ ಮಿತಿಗೊಳಿಸುವುದು ನಮ್ಮ ಕಲಾವಿಮರ್ಶಕರ ವೈಚಾರಿಕ ಬೌದ್ಧಕ ಮಿತಿಗಳನ್ನು ತೋರಿಸುತ್ತದೆ.
ಒಂದು ಸೈದ್ಧಾಂತಿಕ ಪ್ರಭಾವಕ್ಕೊಳಗಾದ ಯಾವುದೇ ಕಲಾವಿದನಿಗಾದರೂ ಈ ರೀತಿಯ ಹಣೆಪಟ್ಟಿಗಳಿಂದ ಬಿಡಿಸಿಕೊಳ್ಳಲು ಸೆಣಸಾಡಬೇಕಾಗುತ್ತದೆ. ಸಾಹಿತ್ಯ ಬರೀ ಘೋಷಣೆಯಾಗದೆ ಪೇಂಟಿಂಗ್ ಬ್ಯಾನರ್ ಆಗದೇ ಉಳಿಯುವಂತಹ ಕ್ರಿಯೆ ಇಲ್ಲಿ ಬಹುಮುಖ್ಯ. ಕಲೆ ನೆಲಕ್ಕೆ ಊರಿಕೊಂಡು ಆಕಾಶದೆತ್ತರಕ್ಕೆ ಬೆಳೆಯುವ ಸಹಜಕ್ರಿಯೆಯಾಗಬೇಕು. ನೆರುಡಾನ ಕಾವ್ಯದಂತೆ ಈ ಎಲ್ಲಾ ಗುಣಗಳು ಕೆ.ಟಿ.ಶಿವಪ್ರಸಾದರ ಕೃತಿಗಳಲ್ಲಿ ಇರುವುದರಿಂದ ಇವರು ಯಾವುದೇ ರಾಜಕೀಯ , ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಗಳಲ್ಲಿದ್ದರೂ ಇವರ ಕೃತಿಗಳು ಬರೀಯ ಘೋಷಣೆಗಳಾಗದೇ ಕಲಾವಂತಿಕೆಯಿಂದ ತಮ್ಮ ಮೂಲ ಆಸ್ತಿತ್ವವನ್ನು ಉಳಿಸಿಕೊಂಡಿವೆ.
ಪ್ರಸ್ತುತ ಕನ್ನಡ ಕಲಾವಲಯದಲ್ಲಿ ಕೆ.ಟಿ.ಶಿವಪ್ರಸಾದರು ಮುಖ್ಯವಾಗುವುದು ಅವರ ಕೃತಿಗಳಲ್ಲಿನ ಸಾಂದ್ರತೆಯಿಂದ. ತಮ್ಮ ಸಮಕಾಲೀನ ಕಲಾವಿದರಂತೆ ಶೈಲಿಗೆ ಅಥವಾ ಮೈವಳಿಕೆಗೆ ಸೀಮಿತವಾಗದೇ ತಮ್ಮ ಚಿಂತನೆಗಳಿಮದ ಸುತ್ತಮುತ್ತ ಆಗುತ್ತಿರುವ ಜಾಗತಿಕ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅಭಿವ್ಯಕ್ತಿಸುವ ಮೂಲಕ ಅವರು ಬೇರೊಂದು ನೆಲೆಯಲ್ಲಿ ನಿಲ್ಲುತ್ತಾರೆ. ನಾನು ಇಲ್ಲಿ ಬಳಸಿರುವ ಕನ್ನಡ ಕಲಾವಲಯ ಎಂಬ ಶಬ್ಧ ಕೆಲವು ಕಲಾವಿದರಿಗೆ ವಿಮರ್ಶಕರಿಗೆ ಮುಜುಗರ ಎನ್ನಿಸಬಹುದು. ಅಥವಾ ಕನ್ನಡ ಕಲಾ ವಲಯ ಎಂಬ ಎಲ್ಲಾದರೂ ಇದೆಯೇ ಎಂಬ ಪ್ರಶ್ನೆಯೂ ಏಳಬಹುದು. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ ಬಂಗಾಳ ಕಲೆ, ರಾಜಸ್ಥಾನ ಕಲೆ , ಕೇರಳ ಕಲೆ ಎಂದಿರಬೇಕಾದರೆ ಕನ್ನಡ ಕಲೆ ಏಕಿರಬಾರದು ? ಕನ್ನಡದಿಂದಲೇ ವಿಶ್ವವಾಗಬೇಕು ಎನ್ನುವ ಬೇಂದ್ರೆಯವರ ಮಾತಿನಲ್ಲಿ ಸತ್ಯವಿದೆ. ಇಂದಿನ ಈ ಜಾಗತೀಕರಣದ ಸಂದರ್ಭದಲ್ಲಿ ಈ ರೀತಿಯ ತಮ್ಮ ತನವನ್ನು ಉಳಿಸಿಕೊಳ್ಳುವುದೇ ಒಂದು ರೀತಿಯ ಪೋಲಿಟಿಕಲ್ ಆಕ್ಟ್ ಹೀಗೆ ಕನ್ನಡತನವನ್ನು ಕಲಾ ಪ್ರಪಂಚದಲ್ಲಿ ಕಾಣುವುದು ಶಿವಪ್ರಸಾದರೊಬ್ಬರಲ್ಲಿಯೇ ಎಂದು ನನ್ನ ಭಾವನೆ. ಆ ಬಗ್ಗೆ ಮುಂದೆ ವಿಸ್ತಾರವಾಗಿ ಹೇಳಬಹುದು.
ಶಿವಪ್ರಸಾದ್ ರವರ ಕನ್ನಡತನ ಅಲ್ಲಿನ ಜನ , ಸಂಸ್ಕೃತಿ , ಕಲೆಯ ಪ್ರತಿಮೆಗಳಲ್ಲಿ ಒಡ ಮೂಡಿಸಿದೆಯೇ ಹೊರತು ಅಗ್ಗದ ಶೈಲಿಯಿಂದಲ್ಲಿ ತಮ್ಮ ಕಲೆಯ ಬಲವನ್ನು ಅಭಿವ್ಯಕ್ತಿಸಲು ಅವರು ಶೈಲಿಯೊಂದರಲ್ಲಿ ಸೆಟಲ್ ಆಗಬೇಕಿಲ್ಲ. ಆ ಶೈಲಿಯಲ್ಲೂ ಜಗತ್ತಿನ ಶ್ರೇಷ್ಠ ಕಲಾವಿದರ ಕೃತಿಗಳನ್ನು ಕನ್ನಡದ ನೆಲಕ್ಕೆ ಒಗ್ಗಿಸುವ ಜಾಣ ನಕಲಿಗೂ ಇಳಿಯಬೇಕಿಲ್ಲ. ಮೇಲ್ವರ್ಗದ ಜನರೊಡನೆ ಗುರುತಿಸಿಕೊಂಡು ಉಳಿಯಬೇಕಾದ ತಂತ್ರವೂ ಬೇಕಿಲ್ಲ. ಮೇಲ್ವರ್ಗದಿಂದಲೇ ಬಂದ ಶಿವಪ್ರಸಾದರು ವಿಶೇಷವಾಗಿ ಉಳಿಯುವುದು ಅವರ ರಾಜಕೀಯ ಸಾಮಾಜಿಕ ನಿಲುವುಗಳಿಂದ ಅವರು ಎಷ್ಟೋ ಬಾರಿ ತಮ್ಮ ಕೃತಿ ರಚನೆಯನ್ನು ಬದಿಗಿಟ್ಟು ಜನಪದ ಹೋರಾಟಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ತಮ್ಮ ಸುತ್ತ ಮುತ್ತಲಿನ ಹಳ್ಳಿಗರೊಂದಿಗೆ ಬೆರೆತು, ಒಂದಾಗಿ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅದರ ಅನುಭವವನ್ನು ಕೃತಿಗಳಲ್ಲಿ ಅಭಿವ್ಯಕ್ತಿಸುವುದು ವಿಶಿಷ್ಟವಾದುದು. ಲ್ಯಾಟಿನ್ ಅಮೇರಿಕಾದ ಸಾಹಿತ್ಯ ಗ್ರ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ಼್ ನಲ್ಲಿ ಈ ರೀತಿಯ ಹೋಲಿಕೆಗಳನ್ನು ಕಾಣಬಹುದು.ಮ್ಯಾಜಿಕಲ್ ರಿಯಾಲಿಸಂ ಎಂದೇ ಖ್ಯಾತಿಯಾದ ಇವನ ಕೃತಿಗಳಲ್ಲಿ ನಮ್ಮ ತೇಜಸ್ವಿಯವರಲ್ಲಿ ಕಾಣುವ ದಿವ್ಯ ಜೀವನ ದರ್ಶನವಿದೆ. ತಮ್ಮ ನೆಲದ ಸಾರವನ್ನು ಹೀರಿದ ಸಾಂಸ್ಕೃತಿಕ ಸತ್ಯವಿದೆ. ಹೀಗಾಗಿಯೇ ತೇಜಸ್ವಿಯವರ ಆಪ್ತರಾದ ಶಿವಪ್ರಸಾದರಲ್ಲೂ ಈ ಅಂಶಗಳು ಅಡಕವಾಗಿರಬೇಕು. ಅದಕ್ಕಾಗಿಯೇ ಈ ಮೂವರ ಕೃತಿಗಳಲ್ಲಿ ಜೀವನ ಶೈಲಿಯಲ್ಲಿ ಸಾಮ್ಯತೆ ಸಾಧ್ಯವಾಗಿರಬಹುದು. ಇವರ ಚಿಂತನೆಗಳಲ್ಲಿ ಸೈದ್ದಾಂತಿಕ ನಿಲುವುಗಳಲ್ಲಿ ಸಾಕಷ್ಟು ದ್ವಂದ್ವಗಳು , ಗೊಂದಲಗಳು ಇವೆ ಮತ್ತಯ ತನ್ನನ್ನು ತಾನು ನಿರಂತರವಾಗಿ ಸಂಘರ್ಷಗಳಲ್ಲಿ ತೊಡಗಿಸಿಕೊಳ್ಳುವ ಯಾವನೇ ನಿಷ್ಠಾವಂತ , ಪ್ರಾಮಾಣಿಕ ಸಾಹಿತಿ ಅಥವಾ ಕಲಾವಿದರಲ್ಲಿ ಇವು ಸಹಜ.
ಎಂ.ಎಸ್.ಸತ್ಕುರವರ ಕಹ ಕಹಾಸೇ ಗುಸರ್ ಗಾಯಾ ಎಂಬ ಚಲನಚಿತ್ರವನ್ನು ನಾನು ತುಂಬಾ ವರ್ಷಗಳ ಹಿಂದೆ ನೋಡಿದ್ದೆ. ಶಿವಪ್ರಸಾದರ ಪರಿಚಯವಾದ ನಂತರ ಈ ಚಿತ್ರವನ್ನು ಮನಸ್ಸಿನ ಪಟಲದ ಮೇಲೆ ಆಗಾಗ್ಗೆ ಸುಳಿಯುತ್ತಿರುತ್ತದೆ. ದೊಡ್ಡ ಉದ್ದಿಮೆದಾರನ ಮಗನಾದ ಚಿತ್ರದ ನಾಯಕ ಕ್ರಾಂತಿಯ ಹುಚ್ಚಿಗೆ ಬಿದ್ದು ಹೋರಾಟದ ಹಾದಿಯನ್ನು ಹಿಡಿಯುತ್ತಾನೆ. ಅಂತ್ಯದಲ್ಲಿ ಆತ ಹೋರಾಟಕ್ಕೆ ವಿರಾಮ ನೀಡಿ ತಾನು ವಿರೋಧಿಸಿದ ವ್ಯವಸ್ಥೆಗೆ ಯಜಮಾನನಾಗುವ ವ್ಯಂಗ್ಯವಿದೆ. ಹುಸಿಕ್ರಾಂತಿಕಾರಿಗಳ ಮನೋಭಾವನೆಗೆ ಈ ಚಿತ್ರ ಕನ್ನಡಿ ಹಿಡಿದಿದೆ.
ನಾನು ಇಲ್ಲಿ ಶಿವಪ್ರಸಾದರನ್ನೂ ಚಿತ್ರದ ನಾಯಕನೊಂದಿಗೆ ಸಮೀಕರಿಸಲು ಹೊರಟಿಲ್ಲ. ಈ ಚಿತ್ರದ ಪ್ರಸ್ತಾಪಕ್ಕೆ ಕಾರಣ ಒಂದು ಆರೋಗ್ಯವಂತ ಸಮಾಜದಲ್ಲಿ ಸಾಹಿತಿ / ಕಲಾವಿದರ ಜವಾಬ್ದಾರಿ ಸಾಕಷ್ಟಿರುತ್ತದೆ. ನಿಜವಾದ ಆತ್ಮಸಾಕ್ಷಿಯುಳ್ಳ ಜವಾಬ್ದಾರಿಯುಳ್ಳ ಕಲಾವಿದನು ಮೇಲಿಂದ ಮೇಲೆ ತನ್ನನ್ನು ತಾನು ಸೈಪರೀಕ್ಷೆಗೆ ಸ್ವ ವಿಮಶರ್ೆಗೆ ಒಡ್ಡಿಕೊಳ್ಳುತ್ತಿರಬೇಕು ಆದ್ದರಿಂದಲೇ ಶಿವಪ್ರಸಾದ್ ರವರು ಬದುಕಿನುದ್ದಕ್ಕೂ ಹೋರಾಟದ ಹಾದಿಯಲ್ಲೇ ಸಾಗಿ ಬಂದಿದ್ದಾರೆ. ಕೃತಿ ಮತ್ತು ಜೀವನ ಶೈಲಿ ಬೇರೆ ಬೇರೆಯಲ್ಲ ಅವರ ವಿವಾಹ-ವಿಚ್ಛೇದನೆಗಳೂ ಕೂಡ ಸಾಕಷ್ಟು ಜನರ ಕುತೂಹಲವನ್ನು ಕೆರಳಿಸಿದ್ದೂ ಉಂಟು. ಆ ನಿಟ್ಟಿನಲ್ಲಿ ಕೆಲವೊಮ್ಮೆ ಅವರ ಕೃತಿಗಳು ನಿಗೂಢವಾಗಿಯೂ ಕಾಣುತ್ತವೆ. ಹಂತಹಂತವಾಗಿ ಅವರ ಕೃತಿಗಳಲ್ಲಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಒಂದು ಮಾತ್ರ ಸ್ಪಷ್ಟ. ರೈತ ಪರ ಹೋರಾಟ ದಲಿತರ ಬಗೆಗಿನ ಕಾಳಜಿ ವೈಚಾರಿಕ ಚಿಂತನೆ ಇವುಗಳೆಲ್ಲದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅದನ್ನು ತಮ್ಮ ಕೃತಿಗಳಲ್ಲೂ ಅಭಿವ್ಯಕ್ತಿಸಿದ ಕೃತಿಗಳು ತಲುಪುವುದಾದರೂ ಯಾರನ್ನ ಅಥವಾ ಎಲ್ಲಿಗೆ ಇದು ಮೂಲಭೂತವಾದ ಪ್ರಶ್ನೆ ಇದನ್ನು ಪ್ರಜಾವಂತರೆಂದೆನಿಸಿಕೊಂಡಿರುವ ಸಾಹಿತಿಗಳು ಕಲಾವಿದರು ಗಂಭಿರವಾಗಿ ತೆಗೆದುಕೊಳ್ಳುವುದು ಎಂದಿಗಿಂತಲೂ ಇದು ಅನಿವಾರ್ಯವಾಗಿದೆ ಎಂದು ನನ್ನ ಭಾವನೆ.





Prakash
this is a meaningful analysis of shivaprasads art, he created his art which contains kannada elements, ‘kannadava kannadisutirabeku’ as said by Bendre Thanks- D.V.Prahlad
Very meaningful write up .thank you Prakash sir