ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನೆಮ್ಮದಿಯ ಕಡಲ ತಡಿಯ ಕದಡಿ……' – ಶ್ರೀದೇವಿ ಕೆರೆಮನೆ

ಶ್ರೀದೇವಿ ಕೆರೆಮನೆ

ಮಾರ್ಚ 23 ವಿಶ್ವ ಪವನವಿಜ್ಞಾನ ದಿನ. ಪರಿಸರವನ್ನು ಉಳಿಸಲೇ ಬೇಕಾದ ಅನಿವಾರ್ಯತೆಯಲ್ಲಿರುವ ಇಂದಿನ ಸಂದರ್ಭದಲ್ಲಿ ಆಚರಿಸಲೇ ಬೇಕಾದ ದಿನ. ದಿನದಿಂದ ದಿನಕ್ಕೆ ವಾಯುಮಾಲಿನ್ಯದಲ್ಲಿ ನಲುಗುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ಆಚರಿಸಲೇ ಬೇಕಾದ ದಿನ. ಅದರ ಹಿಂದಿನ ದಿನ ಅಂದರೆ ಮಾರ್ಚ 22ರಂದು ವಿಶ್ವ ಜಲದಿನ, ಹಾಗೂ ಅದಕ್ಕೂ ಹಿಂದಿನ ದಿನ ವಿಶ್ವ ಅರಣ್ಯ ದಿನ. ಹೀಗಿರುವಾಗ ಅಂತಹ ಪರಿಸರ ಕಾಳಜಿ ಇರಬೇಕಾದ ದಿನದಲ್ಲೇ ನಾವು ಪರಿಸರ ಹಾಳಾಗಲಿ, ನಾವು ಸುಖವಾಗಿರೋಣ ಎಂದು ಹೊರಟು ಬಿಟ್ಟಿದ್ದೇವೆ. ತಾತ್ಕಾಲಿಕ ಸುಖದ ಕನವರಿಕೆಯಲ್ಲಿ ದೀರ್ಘಕಾಲದ ನೆಮ್ಮದಿಯನ್ನು ಕಾಲಿಂದ ಒದೆಯುತ್ತಿದ್ದೇವೆ. ಯಾವುದೋ ಸಲ್ಲದ ಸಂಗದಲ್ಲಿ ಸಂಸಾರವನ್ನು ಬಲಿಕೊಟ್ಟ ಹಾಗೆ…….
ಉತ್ತರಕನ್ನಡಕ್ಕೆ ಬುದ್ಧಿವಂತರ ನಾಡು ಎಂಬ ಹೆಗ್ಗಳಿಕೆ ಇದೆ. ಬಹುತೇಕ ಪಶ್ಚಿಮ ಕರಾವಳಿಯವರಿಗೇ ಆ ಹೆಮ್ಮೆಯಿದೆ. ಅದರಲ್ಲಿಯೂ ಪರಿಸರದ ವಿಷಯ ಬಂದಾಗ ಪರಿಸರಕ್ಕೆ ಧಕ್ಕೆಯಾಗುವಂತಹ ಯಾವ ವಿಷಯವನ್ನೂ ಒಪ್ಪಿಕೊಳ್ಳುವುದಿಲ್ಲ ಎಂಬ ಮಾತಿದೆ. ಹೀಗಾಗಿಯೇ ಅಭಿವೃದ್ಧಿಗೆ ವಿರೋಧಿಗಳು ಎಂಬ ಹಣೆಪಟ್ಟಿಯನ್ನೂ ಹಚ್ಚಿಕೊಂಡಾಗಿದೆ. ಹೀಗೆ ಪರಿಸರದ ಬಗ್ಗೆ ‘ಉಗ್ರ ಕಾಳಜಿ’ಯನ್ನಿಟ್ಟುಕೊಂಡ ಬುದ್ಧಿವಂತರು ಈಗ ಅದೆಲ್ಲವನ್ನು ಬಿಟ್ಟು ತೀರಾ ನಿಷ್ಕಾಳಜಿ ತೋರಿಸುತ್ತಿರುವ ಬಗೆ ಆಶ್ಚರ್ಯ ಹುಟ್ಟಿಸುತ್ತಿದೆ.
ಉತ್ತರಕನ್ನಡದ ಅಘನಾಶಿನಿ ತುಂಬಾ ವಿಶಿಷ್ಟವಾದ ನದಿ. ಇಡೀ ಉತ್ತರಕನ್ನಡದ ಎಲ್ಲ ಸುಂದರ ನದಿಗಳು, ಶಾಂತವಾದ ಪ್ರದೇಶಗಳು ಅಭಿವೃದ್ಧಿಯ ಹೆಸರಿನಲ್ಲಿ ದಿಕ್ಕೆಟ್ಟು ಹೋಗಿರುವಾಗ ತನ್ನ ಅನನ್ಯತೆಯನ್ನು ಇನ್ನೂ ಉಳಿಸಿಕೊಂಡು ಬಂದಿದೆ. ಹಾಗೆ ನೋಡಿದರೆ ಇಡೀ ಉತ್ತರಕನ್ನಡವೇ ವಿವಿಧ ಯೋಜನೆಗಳ ಭಾರದಿಂದ ದಿಕ್ಕೆಟ್ಟು ಕುಳಿತಿದೆ. ತನ್ನ ಧಾರಣೆಯ ಶಕ್ತಿಯನ್ನೂ ಮೀರಿ ವಿವಿಧ ಯೋಜನೆಗಳನ್ನು ತನ್ನ ಮಡಿಲಲ್ಲಿ ಹೇರಿಕೊಂಡು ಕಂಗಾಲಾಗಿದೆ. ಎಲ್ಲಾ ಯೋಜನೆಗಳನ್ನೂ ತಂದು ತುಂಬುವ ಭರದಲ್ಲಿ ಜಿಲ್ಲೆಯ ಧಾರಣಾ ಶಕ್ತಿಯ ಬಗ್ಗೆ ಹಾಗೂ ಅನಾನುಕೂಲತೆಯ ಬಗ್ಗೆ ಸರಕಾರ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಅಭಿವೃದ್ಧಿ ಬೇಕು ನಿಜ. ಆದರೆ ಅದು ಅಲ್ಲಿನ ಜನರ ಬದುಕಿಗೆ ಹೊಂದಿಕೆಯಾಗಬೇಕು. ಅಲ್ಲಿನ ಜನರ ಬದುಕನ್ನು ಛಿದ್ರವಾಗಿಸ ಬಾರದೆಂಬ ಕನಿಷ್ಟ ಪ್ರಜ್ಞೆಯೊಂದಿಗೆ ಯೋಜನೆಯ ಅನುಷ್ಟಾನ ಆಗಬೇಕು. ಆದರೆ ಸರಕಾರ ಇದನ್ನೆಲ್ಲ ಗಮನಿಸುವುದಿಲ್ಲ. ಯೊಜನೆಯ ಅನುಷ್ಟಾನ ಆಗುವುದೇ ಮುಖ್ಯ. ಅಲ್ಲಿನ ಜನ, ಅಲ್ಲಿನ ಪರಿಸರ ಯಾವುದೂ ಅದರ ಮುಖ್ಯ ಕಾಳಜಿಯಲ್ಲ. ಹಾಗೆಂದೇ ಇಂದಿಗೂ ಕೈಗಾ ನಿರಾಶ್ರಿತರು ಪರಿಹಾರಕ್ಕಾಗಿ ಒದ್ದಾಡುತ್ತಿದಾರೆ.
ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆ ಹೊತ್ತ ಸೀಬರ್ಡ ನಿರಾಶ್ರಿತರು ಇಂದಿಗೂ ಅತಂತ್ರರಾಗಿದ್ದಾರೆ, ಕದ್ರಾ-ಕೊಡಸಳ್ಳಿ ನಿರಾಶ್ರಿತರಿರಬಹುದು, ಗೇರುಸೊಪ್ಪಾ, ಜೋಗಾದಲ್ಲಿನ ನಿರಾಶ್ರಿತರಿರಬಹುದು, ಎಲ್ಲರೂ ನೀರ ಮೇಲಿನ ಹೆಜ್ಜೆಗುರುತನ್ನು ಲೆಕ್ಕ ಹಾಕುತ್ತಿದ್ದಾರೆ. ಹೀಗಿರುವಾಗ ಅದೆಷ್ಟೋ ವರ್ಷಗಳ ಹಿಂದೆ ಆಕ್ರಮಿಸಿಕೊಂಡ ಜಾಗವೊಂದು 1800 ಎಕರೆಗಳಷ್ಟು ಖಾಲಿ ಬಿದ್ದಿರುವಾಗ ಅದನ್ನು ಹೇಗಾದರೂ ಬಳಸಿಕೊಂಡು ಲಾಭ ಪಡೆಯಬೇಕೆಂದು ಸರಕಾರ ಉದ್ದೇಶಿರುವುದು ತಪ್ಪೇನೂ ಅಲ್ಲ. ನಿಜ ಹೇಳಬೇಕೆಂದರೆ ಇಲ್ಲಿಯವರೆಗೆ ಅದು ಹಾಗೆ ಬೇನಾಮಿಯಾಗಿ ಬಿದ್ದಿರಲು ಬಿಟ್ಟಿದ್ದೇ ತಪ್ಪು. ಆದರೆ ಅದನ್ನು ಜನರಿಂದ, ರೈತರಿಂದ ಕಿತ್ತುಕೊಂಡ ರೀತಿ ಮಾತ್ರ ಅಮಾನುಷ. ಅಲ್ಲಿನ ಪ್ರತಿ ರೈತನಿಗೂ ಐದು ಎಕರೆ ಭೂಮಿ ನೀಡುವುದಾಗಿ ಹಾಗೂ ಅದಕ್ಕೆ ತಕ್ಕ ಪರಿಹಾರ ನೀಡುವುದಾಗಿ ಸರಕಾರ ನೀಡಿದ ಭರವಸೆ ಇನ್ನೂ ಈಡೇರಿಲ್ಲ. ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಪರಿಶಿಷ್ಟ ಜನಾಂಗದಲ್ಲೂ ಅತೀ ಹಿಂದುಳಿದಂತಹ ಹಳ್ಳೇರ ಜನಾಂಗವನ್ನು ಅಲ್ಲಿಂದ ಎತ್ತಂಗಡಿ ಮಾಡಿ ಬೇರೆ ಕಡೆ ಪುನರ್ವಸತಿ ಕಲ್ಪಿಸಿಕೊಡುವುದಾಗಿ ಮಾಡಿದ ವಾಗ್ಧಾನ ಈಗ ಸಂಪೂರ್ಣ ಮರೆತೆ ಹೋಗಿದೆ. ಏನೂ ಉಪಯೋಗವಿಲ್ಲದ ಭೂಮಿ ಎಂಬ ಹನೆ ಪಟ್ಟಿ ಕಟ್ಟಿ ಆಗ ಅದಕ್ಕೆ ಅತೀ ಕಡಿಮೆಯಾಗಿ ಘೋಷಿಸಿದ್ದ ಪರಿಹಾರ ಸುಮಾರು ಮವತ್ತೈದು-ನಲವತ್ತು ವರ್ಷಗಳಾದರೂ ಕೈಗೆ ಸಿಕ್ಕಿಲ್ಲ. ಆದರೆ ಹಿರೇಗುತ್ತಿ-ತೊಕರ್ೆಯ ಗಜನಿ ಎಂದರೆ ಅದು ಅಪರೂಪದ ಕಪ್ಪು ಭತ್ತ ಕಗ್ಗಕ್ಕೆ ಹೆಸರುವಾಸಿ. ಅದ್ಭುತ ರುಚಿಯ ಈ ಅಕ್ಕಿಯನ್ನು ಹಿಂದೆ ಎಲ್ಲರೂ ಕೇಳಿ ಕೇಳಿ ಪಡೆಯುತ್ತಿದ್ದರಂತೆ. ಅದೆಲ್ಲ ನಾನು ಹುಟ್ಟುವುದಕ್ಕೂ ಮುಂಚಿನ ಮಾತು.

ಈಗ ಆ ಅಪರೂಪದ ಕಗ್ಗ ಎಂಬ ಭತ್ತದ ತಳಿ ವಿನಾಶದ ಅಂಚಲ್ಲಿದೆ. ನಾನು ಹುಟ್ಟುವಷ್ಟರಲ್ಲಿ ನಮ್ಮೆಲ್ಲ ಗಜನಿಭೂಮಿಯು ಕಾಸ್ಟಿಕ್ ಸೋಡಾ ತಯಾರಿಕೆಯ ನೆಪದಲ್ಲಿ ಸರಕಾರದ ವಶವಾಗಿತ್ತು ಮತ್ತದೇ ಮಾಮೂಲಿ-ಸರಿಯಾದ ಪರಿಹಾರ ನೀಡದೆ. ಪರಿಹಾರವನ್ನಾದರೂ ಕೊಡಿ, ಇಲ್ಲವೇ ನಮ್ಮ ಭೂಮಿಯನ್ನಾದರೂ ನಮಗೆ ಹಿಂದಿರುಗಿಸಿ ಎಂದು ಗಜನಿ ಭೂಮಿ ಹಿತರಕ್ಷಣಾ ಸಮೀತಿಯಿಂದ ಹೋರಾಡುತ್ತಲೇ ಯಾವುದೇ ಪರಿಹಾರ ಕಾಣದೇ ತೀರಿಕೊಂಡ ಚಿಕ್ಕಪ್ಪ ಉದಯ ಕೆರೆಮನೆ ಈ ಸಂದರ್ಭದಲ್ಲಿ ಪದೇ ಪದೇ ನೆನಪಾಗುತ್ತಿದ್ದಾರೆ.
ಈಗ ಮತ್ತೆ ಕೆಲವು ವರ್ಷಗಳಿಂದ ಗಜನಿಭೂಮಿಯ ಪ್ರಸ್ಥಾಪ ತಲೆ ಎತ್ತಿ ನಿಂತಿದೆ. ಉಷ್ಣವಿದ್ಯುತ್ ಸ್ಥಾವರ, ಅನಿಲ ವಿದ್ಯುತ್ ಸ್ಥಾವರದ ಹೆಸರಿನಲ್ಲಿ ಅಲ್ಲೇನಾದರೂ ಮಣ್ಣಾಂಗಟ್ಟಿಯನ್ನು ಸ್ಥಾಪಿಸಿ ಆ ಹಾಳುಬಿದ್ದ ಭೂಮಿಯನ್ನು ಉಪಯೋಗಕ್ಕೊಳಪಡಿಸಲೇ ಬೇಕಾದ ಅನಿವಾರ್ಯತೆಯನ್ನು ಎದುರಿಸುತ್ತಿದೆ. ಆದರೆ ಹಾರು ಬೂದಿಯ ಕಾಟಕ್ಕೆ ಹಾಗೂ ಉಳಿದೆಲ್ಲ ಪರಿಸರ ನಾಶಕ್ಕೆ ಎಚ್ಚೆತ್ತುಕೊಂಡ ಜನತೆ ಹೋರಾಟದ ಮೂಲಕ ಅದನ್ನು ಸಾರಾಸಗಾಟಾಗಿ ದೂರೀಕರಿಸುವಲ್ಲಿ ಯಶಸ್ವಿಯಾಗಿತ್ತು. ಆದರೀಗ ಮತ್ತೆ ತದಡಿಯಲ್ಲಿ ವಾಣಿಜ್ಯ ಬಂದರು ಎಂಬ ಭೂತ ತಲೆಎತ್ತಿ ನಿಂತಿದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗರಿಗೆ ವಾಣಿಜ್ಯ ಬಂದರು ಎನ್ನುವ ಮಾಯಾಂಗನೆ ಒಂದು ಭ್ರಾಮುಕ ಜಗತ್ತನ್ನು ಅವರೆದುರು ತೆರೆದಿಟ್ಟಿದ್ದಾಳೆ. ಮೇಲ್ನೋಟಕ್ಕೆ ಯಾವ ಪರಿಸರ ನಾಶವೂ ಇಲ್ಲಿ ಕಾಣುತ್ತಿಲ್ಲವಾದ್ದರಿಂದ ಎಚ್ಚರಿಸಲು ಬಂದ ಪರಿಸರ ಪ್ರೀಯರನ್ನು ಪರಿಸರದ ಹೆಸರಲ್ಲಿ ಅಭಿವೃದ್ಧಿಯನ್ನು ಬೇಡವೆನ್ನುತ್ತಾರೆ ಎಂಬ ಮಿಥ್ಯಾನಂಬಿಕೆಯಲ್ಲಿ ಉಗಿದು ಕಳಿಸುವಷ್ಟರ ಮಟ್ಟಿಗೆ ಧ್ರಾಷ್ಟ್ಯವನ್ನೂ ಅದು ನೀಡಿದೆ. ಆದರೆ ತಾತ್ಕಾಲಿಕ ಸುಖವನ್ನು ನೀಡುವ ಭರವಸೆಯಲ್ಲಿ ದೀರ್ಘಕಾಲದ ನಾಶಕ್ಕೆ ನಾಂದಿ ಹಾಡುವ ಬೀದಿ ಮಾರಿಯನ್ನು ಮನೆಯೊಳಗೆ ತಂದಿಟ್ಟುಕೊಳ್ಳುತ್ತಿರುವ ಸಣ್ಣ ಮುನ್ಸೂಚನೆಯೂ ಇವರಿಗೆ ಸಿಕ್ಕದಿರುವುದು ಮತ್ತು ಸಿಕ್ಕ ಮುನ್ಸೂಚನೆಯನ್ನು, ವಿವೇಚನೆಗೆ ಒಳಪಡಿಸದೇ ಸಾರಾಸಗಾಟಾಗಿ ತಳ್ಳಿ ಹಾಕುತ್ತಿರುವುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ.
ಯೋಜನೆಯೇ ಹೇಳುವಂತೆ ದಿನಕ್ಕೆ ಕನಿಷ್ಟ ನಾಲ್ಕು ಸಾವಿರ ವಾಹನಗಳು ಬಂದರಿಗೆ ಬರುತ್ತದಂತೆ, ಬರುವ ಮತ್ತು ಹೋಗುವ ಎಂದರೂ ಕನಿಷ್ಟ ಎಂಟು ಸಾವಿರಗಳಷ್ಟು ವಾಹನ ದಟ್ಟಣೆಯನ್ನು ಇಲ್ಲಿನ ಸೂಕ್ಷ್ಮ ಪಶ್ಚಿಮಘಟ್ಟ ತಡೆದುಕೊಳ್ಳಬಹುದೇ? ನಮ್ಮ ಹೆದ್ದಾರಿಗಳಿಗೆ ಹಾಗೂ ಹೆದ್ದಾರಿಯ ಅಕ್ಕಪಕ್ಕದ ಚಿಕ್ಕ ಪುಟ್ಟ ಹಳ್ಳಿಗಳಿಗೆ ಅದನ್ನು ತಡೆದುಕೊಳ್ಳುವ ಶಕ್ತಿ ಇದೆಯೇ? ತುಂಬಾ ಶುದ್ಧವಾದ ಪಾಪನಾಶಿನಿ ತನ್ನ ಸಾಗರ ಸಂಗಮದಲ್ಲಿ ವಿಶಿಷ್ಟವಾದ ಕಾಂಡ್ಲಾವನವನ್ನು ತನ್ನ ಮಡಿಲೊಳಗೆ ಇಟ್ಟುಕೊಂಡಿದೆ. ಯಥೇಶ್ಚವಾದ ಕಾಂಡ್ಲಾವನ ಹೊಂದಿರುವುದರಿಂದ ಇದು ಅಸಂಖ್ಯಾತ ಸಾಗರ ಜೀವಿಗಳ, ಅದರಲ್ಲೂ ಬಲು ಅಪರೂಪದ ಹಲವಾರು ಪ್ರಬೇಧಗಳಿಗೆ ತವರುಮನೆಯಾಗಿದೆ. ಇಡೀ ಅಘನಾಶಿನ ಕೊಳ್ಳವೇ ವಿಶಿಷ್ಟ ಪ್ರಾಣಿ ಸಂಕುಲಗಳ ಆಗರ. ವಾಣಿಜ್ಯ ಬಂದರಿನ ನಿಮರ್ಾಣದಿಂದ ಅಲ್ಲಿ ಶೇಖರವಾಗುವ ಕಲ್ಲಿದ್ದಲು ಹಾಗು ಅದಿರಿನಿಂದಾಗಿ ಹಾಗೂ ಬಂದರಿಗೆ ಬರುವ ದೊಡ್ಡ ದೊಡ್ಡ ಹಡಗುಗಳಿಂದಾಗಿ ಪರಿಸರದ ಸೂಕ್ಷ್ಮತೆ ಕದಡಿಹೋಗುತ್ತದೆ. ಮೂಲತಃ ಶಾಂತಿ ಬಯಸುವ ಕೆಲವು ಜೀವಿಗಳು ಅಲ್ಲಿಂದ ವಲಸೆ ಹೋಗಬಹುದು ಅಥವಾ ಆ ಪ್ರಬೇಧಕ್ಕೆ ಪ್ರಬೇಧವೇ ನಾಶ ಆಗಬಹುದು. ಭಾರಿ ಹಡಗುಗಳಿಂದ ಆಗುವ ತೈಲಸೋರಿಕೆಯಿಂದಾಗಿ ಅಘನಾಶಿನಿ ಕೊಳ್ಳಪ್ರದೇಶದ ಈ ಅಪರೂಪದ ಕಾಡುಪ್ರಾಣಿಗಳ ಮತ್ತು ಜಲಚರಗಳ ಬದುಕಿನಲ್ಲಿ ಅತ್ಯಂತ ಕೆಟ್ಟ ಪ್ರಭಾವಬೀರಿ ಆ ಸಂಕುಲಗಳು ನಾಶವಾಗುವ ಭೀತಿ ಎದುರಿಸುತ್ತಿದೆ.
ಇತ್ತೀಚಿನ ಅಂತರಾಷ್ಟ್ರೀಯ ಸಮೀಕ್ಷೆಯ ಪ್ರಕಾರ ಅತೀ ಹೆಚ್ಚು ಸಾಗರ ಮಾಲಿನ್ಯವಾಗುತ್ತಿರುವುದು ಏಶ್ಯಾದಲ್ಲಿ. ಅದರಲ್ಲೂ ಭಾರತದ ಕರಾವಳಿ ಪ್ರದೇಶ ಅತೀ ಹೆಚ್ಚು ಸಾಗರಮಾಲಿನ್ಯವನ್ನು ಹೊಂದಿದೆ. ಅರಬ್ಬೀ ಸಮುದ್ರ ತೀರವು ಜಗತ್ತಿನಲ್ಲಿ ಅತೀವೇಗವಾಗಿ ಮಾಲಿನ್ಯ ಹೊಂದುತ್ತಿರುವ ತೀರ ಎಂದು ಘೋಷಿಸಲ್ಪಟ್ಟಿದೆ. ಇದು ಹೀಗೇ ಮುಂದುವರಿದರೆ ಅರಬ್ಬೀ ಸಮುದ್ರ ತೀರದ ಒಳ ಪ್ರದೇಶಗಳು ಭೀಕರ ಬರಗಾಲ ಎದುರಿಸುವ ದಿನಗಳು ದೂರವಿಲ್ಲ ಎಂದು ಆ ಸಮೀಕ್ಷೆ ಹೇಳಿದೆ. ಅದರಲ್ಲೂ ಕನರ್ಾಟಕದ ಈ ತೀರಗಳು ಮಾಲಿನ್ಯವಾಗುತ್ತಿರುವ ವೇಗವನ್ನು ಗಮನಿಸಿದರೆ ಇನ್ನು ಕೆಲವೇ ವರ್ಷಗಳಲ್ಲಿ ಮಲೆನಾಡು ಬರದ ಪ್ರದೇಶವಾಗಿ, ಈಗಾಗಲೇ ಹನಿ ನಿರಿಗಾಗಿ ಪರಿತಪಿಸುತ್ತಿರುವ ಬಿಸಿಲನಾಡುಗಳು ಮರಳುಗಾಡಾಗುವ ದಿನಗಳು ದೂರವಿಲ್ಲ ಎನ್ನಿಸುತ್ತಿದೆ. ಈಗಾಗಲೇ ಉಷ್ಣವಿದ್ಯುತ್ ಸ್ಥಾವರದ ಸಮೀಕ್ಷೆಗೆಂದು ಬಂದಿದ್ದ ಕೇಂದ್ರದ ಸಮೀತಿ ಈ ಅಳಿವೆಯನ್ನು ಅತೀ ಸೂಕ್ಷ್ಮವಾದ ಜೈವಿಕ ಪರಿಸರ ಎಂದು ಘೋಷಿಸಿ ಆ ಜೈವಿಕ ಪರಿಸರಕ್ಕೆ ಧಕ್ಕೆಯಾಗುವ ಯಾವುದೇ ಯೋಜನೆಗಳನ್ನು ಅಲ್ಲಿ ಹೇರಬಾರದೆಂದು ಸರಕಾರಕ್ಕೆ ವರದಿ ನೀಡಿದೆ. ಹೀಗಿರುವಾಗ ಆ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುವ ಕೆಲಸ ಸರಕಾರಿ ಮಟ್ಟದಲ್ಲೇ ಆಗಬೇಕಾಗಿರುವುದು ಅಪೇಕ್ಷಣೀಯ.
ಅದೆಲ್ಲವೂ ಆಗುವ ಮೊದಲೆ ಎಚ್ಚೆತ್ತ್ತುಕೊಳ್ಳುವ ಅನಿವಾರ್ಯತೆ ಈಗ ನಮ್ಮೆದುರಿಗಿದೆ. ಹಾಗೆಂದು ಇಲ್ಲಿನ ಭೂಮಿ ಮತ್ತೆ ಯಥಾಪ್ರಕಾರ ಪಾಳುಭೂಮಿಯಾಗಿಯೇ ಬಿದ್ದರಲಿ ಎನ್ನುವುದು ನನ್ನ ಅಭಿಮತವಲ್ಲ. ನಮ್ಮ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಜಿಲ್ಲೆ. ಹೀಗಾಗಿ ಪ್ರವಾಸೋದ್ಯಮಕ್ಕೆ ಸಂಬಂಧ ಪಟ್ಟ ಯೊಜನೆಗಳನ್ನು ಇಲ್ಲಿ ಅನುಷ್ಟಾನಗೊಳಿಸಬಹುದು. 2007ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ಜಿಲ್ಲೆಗೆ ಆಗಸಿಸಿದಾಗ ಆಶ್ರಯ ಫೌಂಡೇಶನ್ನ ರಾಜೀವ ಗಾಂವಕರ ಇದರ ಅಭಿವೃದ್ದೀಯ ಕುರಿಮು ಮಾಡಬಹುದಾದ ಕೆಲಸಗಳ ಮಾಹಿತಿಯನ್ನು ಮನವಿಯೊಂದಿಗೆ ಅರ್ಪಿಸಿದ್ದರು. ಒಂದುವೇಳೆ ಆ ಯೋಜನೆಗಳು ಅನುಷ್ಟಾನಕ್ಕೆ ಬಂದಲ್ಲಿ ಸ್ಥಳಿಯರ ನಿರುದ್ಯೋಗ ಸಮಸ್ಯೆಗೊಂದು ಪರಿಹಾರ ದೊರಕುವುದರಲ್ಲಿ ಸಂಶಯವಿಲ್ಲ. ರಾಷ್ಟ್ರೀಯ ಮೀನುಗಾರಿಕಾ ಸಂಶೋಧನಾ ಕೇಂದ್ರ, ಹಾಗೂ ಅಧ್ಯಯನ ಕೇಂದ್ರದ ಜೊತೆಗೆ ಉನ್ನತ ಮಟ್ಟದ ಮೀನುಗಾರಿಕಾ ಬಂದರು, ಅದರ ಜೊತೆ ಜೊತೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತಹ ಕ್ರೂಸ್ ಸಹಿತವಾದ ಪ್ರವಾಸೋದ್ಯಮ ಬಂದರು ಇಲ್ಲಿನ ಮುಖ್ಯ ಆಧ್ಯತೆಯಾಗಿರಬೇಕು. ಇದರ ಜೊತೆ ವಿದೇಶಗಳಲ್ಲಿ ಬಹಳಷ್ಟು ದುಬಾರಿಯಾಗಿರುವ, ಭಾರತದಲ್ಲಿ ಅದರ ಕಾಲು ಭಾಗದ ಖರ್ಚಿನಲ್ಲಿ ಮುಗಿದು ಹೋಗುವ ವೈದ್ಯಕೀಯ ಚಿಕಿತ್ಸೆಗಳಿಗೆಂದು ಬರುವವರಿಗಾಗಿ ವೈದ್ಯಕೀಯ ಪ್ರವಾಸೋದ್ಯಮದ ಬೆಳವಣಿಗೆಯಿಂದಾಗಿ, ಬಾಡಿಗೆ ವಾಹನಗಳು, ಹೊಟೆಲ್ಗಳು, ಹೋಂಸ್ಟೇಗಳು ಹಾಗೂ ಇನ್ನಿತರ ಅವಲಂಭಿತ ಮತ್ತು ಸಹಕಾರಿ ಉದ್ಯಮಗಳು ಬೆಳೆದು ಜನರ ನಿರುದ್ಯೋಗ ಸಮಸ್ಯೆ ತನ್ನಿಂದ ತಾನೆ ನಿವಾರಣೆ ಆಗುತ್ತಿತ್ತು ಎಂಬುದನ್ನು ಅವರು ಅದರಲ್ಲಿ ಪ್ರಸ್ಥಾಪಿಸಿದ್ದರು. ಆದರೆ ಇದೆಲ್ಲಕ್ಕಿಂತ ಮೊದಲು ಗಜನಿಭೂಮಿಯನ್ನು ಬಲಾತ್ಕಾರವಾಗಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಿ, ಅಲ್ಲಿನ ಅತೀ ಹಿಂದುಳಿದ ಜನಾಂಗಕ್ಕೊಂದು ವ್ಯವಸ್ಥಿತ ಪುನರ್ವಸತಿ ಕೇಂದ್ರ ನಿರ್ಮಾಣವಾಗಲಿ. ಎಂಬುದನ್ನು ಒತ್ತಿ ಹೇಳಿದ್ದರು.
ಆದರೆ ನಿರುದ್ಯೋಗ ಸಮಸ್ಯೆಯಿಂದ ಬಸವಳಿದು ಬೆಂಡಾಗಿರುವ ಯುವಜನತೆಗೆ ಈಗ ತಮ್ಮ ಅಸ್ಮಿತೆಯ ಚಿಂತೆ ಕಾಡುತ್ತಿದೆ. ಬೆಲೆಗಳೆಲ್ಲ ಗಗನಕ್ಕೆ ಏರುತ್ತಿರುವ ಈ ಸಂದರ್ಭದಲ್ಲಿ ದೈನಂದಿನ ಜೀವನ ನಿರ್ವಹಣೆಯೆ ಕಷ್ಟವಾಗಿರುವಾಗ ಪರಿಸರ ರಕ್ಷಣೆ ಎಂದು ಕುಳಿತರೆ ತಮ್ಮನ್ನೇ ನಂಬಿರುವ ಹೆಂಡತಿ ಮಕ್ಕಳು, ತಂದೆ-ತಾಯಿಯರ ಹೊಟ್ಟೆಗೇನು ಮಾಡುವುದು ಎಂಬ ಚಿಂತೆಯಲ್ಲಿ ಅವರಿದ್ದಾರೆ.ಹೀಗಾಗಿ ‘ಉದ್ಯೊಗ ದೊರಕುವ ಯಾವುದಾದರೂ ಸರಿ’ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಹೀಗಾಗಿಯೇ ಮೇಲ್ನೋಟಕ್ಕೆ ನಿರುಪದ್ರವಿಯಾಗಿರುವ ವಾಣಿಜ್ಯ ಬಂದರಿನ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದಾರೆ. ತದಡಿಗೆ ಬಂದರು ಬರಲಿ. ಆದರೆ ಅದು ಕೇವಲ ಮೀನುಗಾರಿಕಾ ಬಂದರಾಗಿರಲಿ. ಮತ್ಸ್ಯೋದ್ಯಮಕ್ಕೆ ಸಂಬಂಧಿಸಿದ್ದಾಗಿರಲಿ. ಈಗಾಗಲೆ ವಾಣಿಜ್ಯ ಬಂದರಿನ ಹೆಸರಿನಲ್ಲಿ ಬೇಲೆಕೇರಿಯನ್ನು ಹಾಗೂ ಅತೀ ಸುಂದರ ನಿಸರ್ಗವನ್ನು ಹೊಂದಿರುವ ಕಾರವಾರವನ್ನು ಕೆಮ್ಮಣ್ಣಿನಿಂದ ತುಂಬಿಯಾಗಿದೆ. ಮತ್ತೆ ಅದಕ್ಕೆ ತದಡಿ ಎಂಬ ಹೆಸರನ್ನೂ ಸೇರಿಸುವ ಅಗತ್ಯ ಇದೆಯೇ? ಒಮ್ಮೆ ಮಾರಿಯನ್ನು ಮನೆಯೊಳಗೆ ಬಿಟ್ಟು ಕೊಂಡಾದ ಮೇಲೆ ಇಡೀ ಮನೆಯನ್ನೇ ಅದರ ಸುಪರ್ದಿಗೆ ಬಿಡುವುದರ ಹೊರತಾಗಿ ಮತ್ಯಾವ ಭೂತೋಚ್ಛಾಟನೆಯ ಮಾರ್ಗವೂ ಇಲ್ಲ ಎಂಬುದು ನೆನಪಿನಲ್ಲಿದ್ದರೆ ಸಾಕು.
(ಮಾಹಿತಿ-ರಾಜೀವ ಗಾಂವಕರ ಹಿರೇಗುತ್ತಿ )
 

‍ಲೇಖಕರು G

16 May, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading