ನೂರುಲ್ಲಾ ತ್ಯಾಮಗೊಂಡ್ಲು
***
ಒಡೆದುಹೋದ ಗೋಡೆಯ
ಪಿಸು ದನಿ ಕೇಳು
ತನ್ನ ನೆರಳಿನಿಂದ ದಹನವಾದ
ಕತೆಯೊಂದು ಹೇಳುತಿದೆ
ದೇವರಿಗೆ ಗೋಡೆಯೂ ಬೇಕಿತ್ತೆ ?
ಪುಡಿಯಾದ ಹೆಂಟೆ ಆರ್ತಿಸಿತು
ದೇವರಿಗೆ ಗೋಡೆಯೋ
ಗೋಡೆಗೆ ದೇವರೋ
ವಿಭ್ರಮೆಗಳ ರವವೊಂದು ನರ್ತಿಸಿತು
ಹುಡುಕುವವರು ದೇವರನ್ನು
ಹುಟ್ಟು ಹಾಕುತಿದ್ದಾರೆ
ಕಲ್ಲು ಮಣ್ಣುಗಳ ಗುಡಿಯೊಳಗೆ
ಕೂನೆಗೂ ದಾಹತೀರಿಲ್ಲ ಭಕ್ತನಿಗೆ
ರಕ್ತ ಮಾಂಸಗಳ ಒಳಗೂ
ಮೈ ಕೈಗಳನು ಚೆಲ್ಲಾಡಿದ್ದಾನೆ
ಗೋಡೆ ಕಟ್ಟುವವರು
ಕಟ್ಟುತ್ತಲೇ ಇದ್ದಾರೆ
ಸಮಾಧಿಗಳ ಮೇಲೆ ದೇವರನ್ನು ಬಚ್ಚಿಡಲು
ಕೆಡಹುವ ರಾಕ್ಷಸ ಮತ್ತೆ ಮತ್ತೆ
ಗಹಗಹಿಸುತ್ತಲೇ ಇದ್ದಾನೆ
0 ಪ್ರತಿಕ್ರಿಯೆಗಳು