ಪಾಲಹಳ್ಳಿ ವಿಶ್ವನಾಥ್
ಕೆ.ಜಿ.ಎಫ್ ಗಣಿಗಳಲ್ಲಿ ನಾವು 1980ರ ದಶಕದಲ್ಲಿ ಭೌತವಿಜ್ನಾನದಲ್ಲಿ ಒಂದು ದೊಡ್ಡ ಪ್ರಯೋಗವನ್ನು ಶುರುಮಾಡಿ ಸುಮಾರು 10 ವರ್ಷಗಳು ನಡೆಸಿದವು. ಉಪಕರಣಗಳು ಬಹಳ ಸಂಕೀರ್ಣವಾಗಿದ್ದರಿಂದ ಪ್ರಾರಂಭವೂ ಸುಮಾರು ಸಮಯ ತೆಗೆದುಕೊಂಡಿತು. ನಾನು ಮುಂಬಯಿಯಿಂದ ಎರಡು ತಿಂಗಳಿಗೊಮ್ಮೆ ಬಂದುಹೋಗುತ್ತಿದ್ದೆ. ಈಗ ನಾನು ಹೇಳಬಯಸುವುದು ಅದರ ಮೊದಲ ಕೆಲವು ತಿಂಗಳುಗಳಲ್ಲಿ ನಡೆದ ಪ್ರಸಂಗ.
ನಾವು ಅಲ್ಲಿಯ ಕೆಲಸ ಕಾರ್ಯಗಳನ್ನು ಯಾವ ಪೂಜೆ, ಪುನಸ್ಕಾರಗಳಿಲ್ಲದೆ ಶುರು ಮಾಡಿದ್ದೆವು. ಅದು ಅಲ್ಲಿಯ ಸ್ಥಳೀಯ ಕೆಲಸಗಾರರಿಗೆ ಬಹಳ ಅಸಮಾಧಾನವನ್ನು ಉಂಟು ಮಾಡಿತ್ತು. ಕೆಲಸ ಸರಿಯಾಗಿ ಆಗದಿರಬಹುದು ಎಂದು ಬೇರೆ ಬೇರೆ ರೀತಿಗಳಲ್ಲಿ ಎಚ್ಚರಿಕೆ ಕೊಡುತ್ತಿದ್ದರು. ಅವರುಗಳಲ್ಲಿ ಸ್ವಲ್ಪ ನಾಯಕ ಗುಣಭಾವವಿದ್ದ ಕೆಂಪಯ್ಯನಿಗೆ ನನ್ನ ಜೊತೆ ಸ್ವಲ್ಪ ಸಲಿಗೆ.
“ಸಾರ್, ನೀವು ತಪ್ಪು ಮಾಡ್ತಾ ಇದ್ದೀರಿ! ದೇವರಿಗೆ ಇಷ್ಟ ಆಗೋದಿಲ್ಲಾ ಸಾರ್. “
“ಏನು ತಪ್ಪು?”
“ಇಷ್ಟು ದೊಡ್ಡ ಪ್ರಯೋಗ, ದೊಡ್ಡ ಯಂತ್ರಗಳು ಎಲ್ಲಾ ಇವೆ”
“ಹೌದು, ಅದಕ್ಕೆ?”
“ಭಾಭಾರವರು ಬಂದು ರಿಬ್ಬನ್ ಕೂಡ ಕತ್ತರಿಸಿದರಲ್ಲ ಸಾರ್”
“ಅಲ್ಲಪ್ಪ ಭಾಭಾ ಹೋಗಿ ಬಹಳ ವರ್ಷಗಳು ಆಗೋಯತಲ್ಲ”
“ಸರಿ, ಸಾರ್, ನನಗೆ ಅವರ ಹೆಸರು ಗೊತ್ತಿಲ್ಲ. ಅಂತೂ ಬಂದವರು ದೊಡ್ಡವರು ತಾನೆ?”
“ಹೌದು”
“ಇಂತಹ ದೊಡ್ಡ ಕೆಲಸಗಳು ತೊಂದರೆಯಿಲ್ಲದೆ ನಡೀಬೇಕಾದರೆ ಶುರುಮಾಡೋವಾಗ ಏನಾದರೂ ಬಲಿ ಕೊಡಬೇಕು, ಸಾರ್”
“ಯಾವ ಯುಗದಲ್ಲಿ ಇದ್ದೀಯಯ್ಯಾ ನೀನು ?”
“ನಿಮಗೆ ನಂಬಿಕೆ ಇಲ್ಲ ಸಾರ್, ಆದರೆ ನಮಗೆ ನಂಬಿಕೆ ಇದೆ… ಒಂದು ಕುರಿ ಬಲಿಕೊಡಬೇಕು ಸಾರ್”
“ಕುರೀನಾ?”
“ಹೌದು ಸಾರ್, ದೊಡ್ಡ ಕೆಲಸಕ್ಕೆ ದೊಡ್ಡ ಪ್ರಾಣಿ. ಚಿಕ್ಕ ಎಕ್ಸ..ಎಕ್ಸ”
“ಸರಿ, ಎಕ್ಸಪೆರಿಮೆಂಟ್“
“ಅ ತರಹ ಇದ್ದಿದ್ದರೆ ಒಂದೆರಡು ಕೋಳಿ ಸಾಕಾಗ್ತಾ ಇತ್ತು”
“ಇದೆಲ್ಲ ತಪ್ಪು ಕಣಯ್ಯ. ಹೋಗಯ್ಯ”
“ನಿಮಗೆ ಅರ್ಥ ಆಗೋಲ್ಲ ಸಾರ್”
“ಏನಾದರೂ ಮಾಡ್ಕೊಳ್ಳಿ”
“ಕುರೀಗೆ ಹಣ?”
“ಆಫೀಸಿಂದ ಅದೆಲ್ಲಾ ಮಾಡೋಕೆ ಅಗೊಲ್ಲ. ಸಾಕು, ಕೆಂಪಯ್ಯ. ಈ ವಿಷಯ ಮತ್ತೆ ಮಾತು ಬೇಡ. “
ಮುಂಬಯಿಗೆ ವಾಪಸ್ಸು ಹೋದಾಗ ಅಗಾಗ ಸುದ್ದಿ ಬರ್ತಾ ಇತ್ತು. ಇದ್ದಕ್ಕಿದ್ದಹಾಗೆ ಕರೆಂಟು ಹೋಗೋದು, ಜನ ಸರಿಯಗಿ ಕೆಲಸಕ್ಕೆ ಬರದೆ ಹೋಗೋದು ಎಲ್ಲಾ ಆಯಿತು. “ಇಲ್ಲೀನವರು ಹೇಳ್ತಾ ಇರೋದು ‘ದೇವರಿಗೆ ಇಷ್ಟ ಆಗ್ತಾ ಇಲ್ಲವಂತೆ” ಎಂದು ನಮ್ಮ ಸ್ಥಳೀಯ ಪ್ರಭಾರಿ ಬರೆದಿದ್ದರು
——————————————————————–

ಮುಂಬಯಿಯಿಂದ ಕೆ.ಜಿ.ಎಫ್ ಗೆ ವಾಪಸ್ಸು ಬಂದಿದ್ದೆ. ಹಾಗೇ ಒಂದು ದಿನ ಬೆಳಿಗ್ಗೆ ಎದ್ದಾಗ ನಮ್ಮ ಪುಟ್ಟ ಕ್ಯಾಂಪಸ್ ನಲ್ಲಿ ಏನೋ ಗುಸು ಗುಸು, ನಗು. ಕೆಂಪಯ್ಯನ್ನ ಕರೆದು ಕೇಳಿದೆ
‘ಸಾರ್, ನೀಲಮೇಘಮ್ ಗೆ ಕನಸು ಬಿತ್ತಂತೆ. ಅದರಲ್ಲಿ ಜಯಲಲಿತ ಮೇಡಮ್ ಬಂದಿದ್ದರಂತೆ “
“ಅದರಲ್ಲಿ ಏನು ವಿಶೇಷ? “ ಎಂದು ಕೇಳಿದೆ.
——————————————–
ನೀಲಮೇಘಮ್ ಹೆಸರಿಗೆ ತಕ್ಕ ಬಣ್ಣ ಹೊಂದಿದ್ದ ತೆಳ್ಳನೆಯ ಮನುಷ್ಯ. ಅವನ ಮೂಲ ತಮಿಳುನಾಡು. ಅಲ್ಲಿಂದ ಬಂದವರಿಗೆ ಈ ಶುದ್ಧ ಸಂಸ್ಕೃತ ಹೆಸರು ಅಪರೂಪವೆ. ನಮ್ಮ ಜಪಾನೀ ಸಹೋದ್ಯೋಗಿ ಅರ್ಥ ಕೇಳಿದಾಗ ‘ಬ್ಲೂ ಕ್ಲೌಡ್ ‘ ಎಂದು ಹೇಳಿದ್ದ. ಇರಲಿ, ನಮ್ಮಲ್ಲಿದ್ದ ಮೂರು ವಾಹನ ಚಾಲಕರಲ್ಲಿ ಅವನೂ ಒಬ್ಬ. ತಿಂಗಳಿಗೆ ಎರಡು ವಾರ ರಾತ್ರಿ ಕೆಲಸ. ಉಳಿದ ಸಮಯ ಡೇ ಡ್ಯೂಟಿ : ಆ ದಿನಗಳಲ್ಲಿ ಅವನು ಕೆಲಸ ಮುಗಿಸಿ ಸಂಜೆ 6 ಗಂಟೆಗೆ ಎರಡು ಕಿಮೀ ದೂರದ ರಾಬರ್ಟ್ ಸನ್ ಪೇಟೆಗೆ ಹೋಗಿ ರಾತ್ರಿ ವಾಪಸ್ಸು ಬರುತ್ತಿದ್ದ. ಹೋಗುವಾಗ ಬಾಯಿಗೆ ಬೀಗ ಹಾಕಿಕೊಂಡಿರುತ್ತಿದ್ದ ನೀಲಮೇಘಮ್ ವಾಪಸ್ಸು ಬರುವಾಗ ವಾಚಾ ಳಿಯಾಗಿ ಪರಿವರ್ತನೆಗೊಳ್ಳುತ್ತಿದ್ದ. ನಮ್ಮ ಕೆಲಸಗಾರರುಗಳ ಮೇಲೆಲ್ಲ ರಾಬರ್ಟ ಸನ್ ಪೇಟೆಗೆ ಸಂಜೆ ಹೋದರೆ ಇದೇ ಪ್ರಭಾವ ಇರುತ್ತಿತ್ತು . ಆದರೆ ನೀಲಮೇಘಮ್ ಮೆಲೆ ಈ ಪ್ರಭಾವ ಎಲ್ಲರಿಗಿಂತ ಹೆಚ್ಚು ಇರುತ್ತಿತ್ತು. ಅವನು ತೆಳ್ಳನೆಯ ವ್ಯಕ್ತಿ ಎಂದು ಮೊದಲೆ ಹೇಳಿದೆವಲ್ಲವೇ ! ಸಾಮಾನ್ಯ ವ್ಯಕ್ತಿಗಳಿಗೆ ಆ ಪ್ರಭಾವ ಶುರು ಆಗಲು ಅರ್ಧ ಮುಕ್ಕಾಲು ಗಂಟೆ ತೆಗೆದುಕೊಳ್ಳುತ್ತಿತ್ತು . ಆದರೆ ಇವನ ಮೇಲೆ ಪೇಟೆಯ ಪ್ರಭಾವ ಕೆಲವೇ ಕ್ಷಣಗಳಲ್ಲಿ ಶುರುವಾಗುತ್ತಿತ್ತು. ಇದಲ್ಲದೆ ಈತನಲ್ಲಿ ಮತ್ತೊಂದು ವಿಶೇಷವಿದ್ದಿತು. ಪೇಟೆಯ ಪ್ರಭಾವ ಹೆಚ್ಚಾದಾಗ ಅವನ ಭಾಷೆ ಬದಲಾಗುತ್ತಿತ್ತು. ಉತ್ತರದಲ್ಲಿ ಎಲ್ಲೋ ಒಂದು ವರ್ಷ ಇದ್ದನಂತೆ. ಅದರಿಂದಲೋ ಏನೋ ಹಿಂದಿಯಲ್ಲಿ ಮಾತಾಡಲು ಶುರುಮಾಡುತ್ತಿದ್ದ.ಅದರಲ್ಲೂ ಕೆಲವು ಬೈಗಳು ಪದಗಳನ್ನು ಚೆನ್ನಾಗಿ ತಿಳಿದಿದ್ದ.
ಈ ಎಲ್ಲ ಗುಣಗಳುಳ್ಳ ನೀಲಮೇಘಮ್ ತನ್ನ ಬಿಡುವು ವೇಳೆಯಲ್ಲಿ ಅಲ್ಲದೆ ಬಿಡುವಿಲ್ಲದ ವೇಳೆಯಲ್ಲಿಯೂ ತಮಿಳುನಾಡಿನ ರಾಜಕೀಯದಲ್ಲಿ ಮುಳುಗಿರುತ್ತಿದ್ದ. ಡೈಲಿ ಡೇ ಡ್ಯೂಟಿಯಲ್ಲಿ ಇದ್ದಾಗ ಅವನು ಡಿ.ಎಮ್.ಕೆ ಪಕ್ಷದ ಕಟ್ಟಾ ಅಭಿಮಾನಿ. ಆದರೆ ರಾತ್ರಿಯಾಗುತ್ತ ಪೇಟೆಯ ಪ್ರಭಾವ ಶುರುವಾಗುತ್ತಾ ನಿಧಾನವಾಗಿ ಪಕ್ಷಾಂತರ ಮಾಡುತ್ತಿದ್ದ. ಶುದ್ಧವಲ್ಲದ ಹಿಂದಿಯಲ್ಲಿ ಕರುಣಾನಿಧಿ ಮತ್ತು ಅವರ ಸಂಸಾರದ ಎಲ್ಲ ಸದಸ್ಯರಿಗೂ ತನಗೆ ಬರುವ ಎಲ್ಲ ಬೈಗುಳನ್ನೂ ಬಳಸಿಕೊಳ್ಳುತ್ತಿದ್ದ. ಮತ್ತು ಎಮ್.ಜಿ.ಅರ್. ಗಿಂತ ಸಮರ್ಥ ನಾಯಕ ಇಲ್ಲವೆ ಇಲ್ಲ ಎಂದು ಸಾರುತ್ತಿದ್ದ. ಹೀಗೆ ಸಂಜೆ ಕಳೆದನಂತರ ನೀಲಮೇಘಮ್ ನಿಧಾನವಾಗಿ ರಾತ್ರಿಯ ಕನಸುಗಳಿಗೆ ಜಾರುತ್ತಿದ್ದ. ಆ ಕನಸುಗಳಲ್ಲಿ ರಾಜಕೀಯ ಮತ್ತು ಸಿನೆಮಾ ರಂಗಗಳ ವಿವಿಧ ಬಂದುಹೋಗುವುದು ಸಾಮಾನ್ಯವಾಗಿತ್ತು. ತಮಿಳುನಾಡಿನ ಜೀವನದಲ್ಲಿ ಈ ಎರಡು ಕ್ಷೇತ್ರಗಳಿಗೂ ಗಾಢ ಸಂಬಂದ ಇದ್ದೇ ಇದ್ದಿತಲ್ಲವೆ? ಹಳೆಯ ತಾರೆಯರಾದ ಸಾವಿತ್ರಿ, ಭಾನುಮತಿಯರಲ್ಲದೆ ಅವನದೆ ವಯಸ್ಸಿನ ಜಯಲಲಿತ, ಸರೋಜಾದೇವಿ ಯರೆಲ್ಲಾ ಅವನ ಕನಸುಗಳಿಗೆ ಭೇಟಿ ಕೊಡುತ್ತಿದ್ದರು
—————————————————————————–

“ಅದೇನು ಮಹಾ ವಿಶೇಷ ಕೆಂಪಯ್ಯ? ಅವರೂರಲ್ಲೇನಾದರೂ ಚುನಾವಣೆಯಂತಾ?”
“ಇಲ್ಲ, ಸಾರ್ ! ಇದು ರಾಜಕೀಯದ ವಿಷಯ ಅಲ್ಲ . ಕನಸಿನಲ್ಲಿ ಜಯಲಲಿತ ಮೇಡಮ್ ನಾಗಿನಿ ಡಾನ್ಸ್ ಮಾಡ್ತಾ ಇದ್ದರಂತೆ. ಹಾಗೇ ಹತ್ತಿರ ಬಂದು ನೀಲಮೇಘಮ್ ಕಿವಿಯಲ್ಲಿ ಏನೋ ಹೇಳಿದರಂತೆ ! “
“ಆಯಿತು, ಏನಂತೆ ?”
“ಸಾಹೇಬರಿಗೆ ಕುರೀನ ಬಲಿ ಕೊಡೋಕೆ ಹೇಳು “
“ಅಂತೂ ಚಿತ್ರರಂಗದವರಿಗೂ ವಿಜ್ಞಾನದಲ್ಲಿ ಅಸಕ್ತಿ ಬಂದಿರುವುದು ಸಂತೋಷ! ತಿರುಗ ನೀವೆಲ್ಲಾ ಶುರುಮಾಡಿಕೊಂಡರಾ? ಹೋಗಿ, ಕೆಲಸ ನೋಡಿ. “
ಒಂದು ವಾರ ಆಯಿತು. ಮತ್ತೆ ಕ್ಯಾಂಪಸ್ ನಲ್ಲಿ ಬೆಳಿಗ್ಗೆ ಗಲಾಟೆ. ಹೊರಗೆ ಹೋದರೆ ಅಲ್ಲೇ ಎಲ್ಲೋ ಇದ್ದ ನೀಲಮೇಘಮ್ ಬಂದು ನನ್ನ ಕಾಲಿಗೆ ಬಿದ್ದ.
“ಏಳಿ, ನೀವು ನನಗಿಂತ ದೊಡ್ಡವರು”
ಸಾರ್ ನಿನ್ನೆ ರಾತ್ರಿ ಕನಸು.. ಭಯ ಆಗ್ತಾ ಇದೆ !”
“ಯಾರು ಬಂದಿದ್ದರು? ಮತ್ತೆ ಜಯಲಲಿತ?”
“ಇಲ್ಲ ಸಾರ್, ನೀವು ನಂಬೋಲ್ಲ !’
“ಹೇಳಿ, ಪರವಾಯಿಲ್ಲ”
“ಹೇಮಮಾಲಿನಿ ಮೇಡಮ್ !
ಇದ್ದಕ್ಕಿದ್ದಹಾಗೆ ಹೇಮಮಾಲಿನಿ ಮೇಡಮ್ ಎಲ್ಲಿಂದ ಅವತರಿಸಿದರು? ಮೂಲ ತಮಿಳುನಾಡಿನವರಾಗಿದ್ದು ಈಗ ಇಡೀ ಭಾರತದಲ್ಲಿ ಖ್ಯಾತಿ ಗಳಿಸಿದ್ದಾರೆಂದು ನೀಲಮೇಘಮ್ ಗೆ ಹೆಮ್ಮೆ ಇದ್ದಿರಬಹುದು. ಅದಲ್ಲದೆ ಎರಡು ವಾರಗಳ ಹಿಂದೆ ಊರಲ್ಲಿ ಮತ್ತೆ ‘ಶೋಲೆ’ ಸಿನೆಮಾ ಬಂದು ಹೋಗಿತ್ತು. ನಮ್ಮದು ಅಖಿಲ ಭಾರತ ಸಂಸ್ಥೆಯಾಗಿದ್ದರಿಂದ ದೇಶದ ವಿವಿದ ಭಾಗಗಳಿಂದ ವಿಜ್ಞಾನಿಗಳು ಮತ್ತು ಇಂಜನಿಯರುಗಳಿರುತ್ತಿದ್ದರು. ಉತ್ತರದವರೂ ಕೆಲವರು ಇದ್ದರು. ಅವರ ಮೇಲೆ ಹೆಚ್ಚು ಪ್ರಭಾವ ಬೀರಲು ಈ ತಂತ್ರವೋ? ಹೇಮಮಾಲಿನಿ ಹೇಳಿದರು ಅಂದರೆ ಅವರೂ ಅವನಿಗೆ ಬೆಂಬಲ ಕೊಡಬಹುದಲ್ಲವೆ?
“ಮೇಡಮ್ ಟಾಂಗಾನಲ್ಲಿ ಬಂದಿದ್ದರಾ? “
“ಟಾಂಗಾ ಇತ್ತು ಸಾರ್. ಸಾರ್, ಸಾರ್. ಹೆದರಿಕೆ ಆಗುತ್ತೆ ಸಾರ್”
“ಏಕೆ ನೀಲಮೇಘಮ್?”
“ಅದು ಹೇಮಮಾಲಿನಿ ಮೇಡಮ್ ಅಲ್ಲ. “
“ಮತ್ತೆ?”
“ಅವರ ದೆವ್ವ!”
“ ಅವರು ಸತ್ತಿಲ್ಲ ನೀಲಮೇಘಮ್”
“ಅದೆಲ್ಲಾ ಗೊತ್ತಿಲ್ಲ ಸಾರ್, ಮೊಕ ಎಲ್ಲಾ ರಕ್ತ, ನಮ್ಮ ಮಾರಮ್ಮ ದೇವರ ತರಹ ಇದ್ದರು ಹೇಮಾಜಿ ! “
“ನಿಮ್ಮ ಹತ್ತಿರ ಬಂದು ಏನಾದರೂ ಹೇಳಿ ಹೋದರಾ? ನಿಮ್ಮ ಕಿವೀಲಿ?”
“ಇಲ್ಲ ಸಾರ್, ಜೋರಾಗಿ ಕುರಿ ಕೋಳಿ ಬಲಿ ! ಕುರಿ ಕೋಳಿ ಬಲಿ 1 ಕುರಿ ಕೋಳಿ ಬಲಿ ! ಅಂತ ಕೂಗ್ತಾ ಹೊರಟುಹೋದರು.“
“ಯಾವ ಭಾಷೇಲಿ ಕೂಗ್ತಾ ಇದ್ದರು?”
“ಏನು ಸಾರ್ ಕೇಳ್ತೀರ ! ಶೋಲೆ ಹಿಂದೀಲಲ್ವಾ? ಸಾರ್, ಹೆದರಿಕೆ ಆಯಿತು. ಟಾಂಗಾ ಜೋರಾಗಿ ಓಡ್ತಾ ಇದೆ. ಆದರೆ ಕುದುರೇನೂ ಇಲ್ಲ, ಡ್ರೈವರ್ರೂ ಇಲ್ಲ! ಎದ್ದು ಬಿಟ್ಟೆ. ಮಧ್ಯರಾತ್ರಿಯಿಂದ ನಿದ್ದೇನೆ ಇಲ್ಲ! ಏನಾದರೂ ಮಾಡಿ ಸಾರ್. “
ಸರಿ, ಜಯಲಲಿತಾ ಮೇಡಮ್ ಆಯಿತು, ಈಗ ಹೇಮಮಾಲಿನಿಯವರೂ ವಿಜ್ಞಾನದಲ್ಲಿ ಆಸಕ್ತಿ ತೊಗೋತಾ ಇರೋದು ಸಂತೋಷ ಅಂತ ಹಾಸ್ಯ ಮಾಡಿದೆ. ಅದಕ್ಕೆ ನಮ್ಮಲ್ಲಿ ಕೆಲವರು ‘ನಮಗೆ ನಂಬಿಕೆ ಇಲ್ಲಾಂತ ಬೇರೆಯವರ ನಂಬಿಕೇನ ಹೀನಾಯ ಮಾಡಬಾರದು’ ಅಂತ ಹೇಳಿದರು. ಕೆಂಪಯ್ಯ, ನೀಲಮೇಘಮ್ ಎಲ್ಲಾ ಸುಮ್ಮನಾದರು ಅಂತ ಕಾಣಿಸುತ್ತೆ. ನಾನು ಮುಂಬಯಿಗೆ ವಾಪಸ್ಸು ಹೋದೆ.
ಕ್ಯಾಂಪಸ್ನಲ್ಲಿ ಎರಡು ಮೂರು ತಿಂಗಳಿಗೊಮ್ಮೆ ಎಲ್ಲ ಒಟ್ಟಿಗೆ ಸೇರಿ ಒಂದು ಭಾನುವಾರ ದೊಡ್ಡ ಭೋಜನ ಇಟ್ಟುಕೊಳ್ಳುವುದು ಅಭ್ಯಾಸ.. ಎಲ್ಲರಿಗೂ ಶಾಖಾಹಾರೀ ಆಹಾರ, ತಿನ್ನೋರಿಗೆ ಮಾಂಸಾಹಾರಿ ಆಹಾರ- ಚಿಕನ್, ಮಟನ್ ಎಲ್ಲಾ! ಚೆನ್ನಾಗಿ ಆಯಿತು ಅಂತ ಯಾರೋ ಫೋನ್ ಮಾಡಿದ್ದರು. ಆ ತಿಂಗಳು ನಮ್ಮ ಸ್ಥಳೀಯ ಪ್ರಭಾರಿ ಕಳಿಸಿದ್ದ ಲೆಕ್ಕ ನೋಡ್ತಾ ಇದ್ದೆ. ಲೈಟ್ ಬಲ್ಬು ಇತ್ಯಾದಿ ಖರ್ಚು ಹೆಚ್ಚೇ ಇತ್ತು!! ಈ ‘ಬಡಾ ಖಾನಾ’ ಆದ ಮೇಲೆ ನೀಲಮೇಘಮ್ ಕನಸುಗಳಲ್ಲಿ ತಮಿಳುನಾಡಿನ ಅಭಿನೇತ್ರಿಯರು ಪಾತ್ರ ವಹಿಸುತ್ತಿದ್ದರೂ ಹೇಮಮಾಲಿನಿ ಮೇಡಮ್ ಆಗಲಿ ಅವರ ದೆವ್ವವಾಗಲಿ ಮತ್ತೆ ಬರಲಿಲ್ಲ ! ನಮ್ಮ ಎಕ್ಸಪೆರಿಮೆಂಟೂ ವಿಘ್ನವಿಲ್ಲದೆ ಮುಂದೆಹೋಯಿತು!
ಈ ಬರಹ ಈ ಮುನ್ನ ‘ಅಪರಂಜಿ’ಯಲ್ಲಿ ಪ್ರಕಟವಾಗಿತ್ತು






0 Comments